ಕರ್ನಾಟಕದಲ್ಲೂ ದೇಸಿ ಗೋಧಿ ತಳಿಗಳ ವೈಭವ
ಎಲ್ಲೋ ದೂರದ ಪಂಜಾಬ್ ಅಥವಾ ಹೊರದೇಶದ ಗೋಧಿಯ ಚಪಾತಿ ಮಾಡಿ ತಿನ್ನುವುದರ ಬದಲು ನಮ್ಮದೇ ಜಮೀನಿನಲ್ಲಿ ಗೋಧಿ ಬೆಳೆಯೋಣ. ದೇಸಿ ತಳಿಗಳನ್ನೂ ಉಳಿಸೋಣ, ಬನ್ನಿ.
ಬೇಸಾಯ

ಮಲ್ಲಿಕಾರ್ಜುನ ಹೊಸಪಾಳ್ಯ
ನಗರಗಳ ಬಹುಪಾಲು ಮನೆಗಳಲ್ಲಿ ಗೋಧಿಯ ಚಪಾತಿಯೇ ದಿನನಿತ್ಯದ ಆಹಾರವಾಗಿದೆ. ಎಲ್ಲರ ಮನೆಗಳಲ್ಲೂ ಅದೇ ಬಣ್ಣದ, ಅದೇ ಆಕಾರದ ಗೋಧಿ ಚಪಾತಿ. ಆದರೆ, ಗೋಧಿಗಳಲ್ಲಿಯೂ ಹತ್ತಾರು ತಳಿಗಳಿವೆ. ಈ ವಿಷಯ ಬಹುತೇಕ ಬಳಕೆದಾರರಿಗೆ ಗೊತ್ತಿಲ್ಲ. ಅವರಿಗೆ ಗೊತ್ತಿರುವುದು ಅಂಗಡಿಯಲ್ಲಿ ಅಥವಾ ನ್ಯಾಯಬೆಲೆ ಅಂಗಡಿಯಲ್ಲಿ ದೊರೆಯುವ ಗೋಧಿ ಮಾತ್ರ.
ಪುರಾತತ್ವಶಾಸ್ತ್ರದ ಪ್ರಕಾರ, ಗೋಧಿಯನ್ನು ಸುಮಾರು ಹತ್ತು ಸಾವಿರ ವರ್ಷಗಳಿಂದ ಬೆಳೆಯಲಾಗುತ್ತಿದೆ. ಸುಮಾರು ಕ್ರಿ.ಪೂ. 9600 ರ ಸುಮಾರಿಗೆ ಈಗಿನ ಮಧ್ಯಪ್ರಾಚ್ಯ ಭಾಗಕ್ಕೆ ಸೇರಿದ (ಟರ್ಕಿ, ಇರಾಕ್, ಸಿರಿಯಾ ಹಾಗೂ ಲೆಬನಾನ್ ಒಳಗೊಂಡ) ಫಲವತ್ತಾದ ಪ್ರದೇಶದಲ್ಲಿ ಗೋಧಿ ಬೇಸಾಯ ಬೆಳೆಯಲು ಆರಂಭಿಸಲಾಯಿತು. ಆರಂಭದಲ್ಲಿ ಇದು ಕಾಡು ಹುಲ್ಲಿನ ಒಂದು ಪ್ರಭೇದವಾಗಿತ್ತು. ಮಾನವರು ಇದನ್ನು ತಿನ್ನಬಹುದು ಎಂದು ಗುರುತಿಸಿ, ಬೆಳೆಯಲು ಶುರುಮಾಡಿದರು.
ಮಧ್ಯಪ್ರಾಚ್ಯದಿಂದ ಗೋಧಿ ಕೃಷಿಯು ಯುರೋಪ್, ಉತ್ತರ ಆಫ್ರಿಕಾ ಮತ್ತು ಏಷ್ಯಾದ ಇತರ ಭಾಗಗಳಿಗೆ ಹರಡಿತು. ರೋಮನ್ ಸಾಮ್ರಾಜ್ಯದ ಕಾಲದಲ್ಲಿ ಗೋಧಿ ಯುರೋಪ್‌ನ ಪ್ರಮುಖ ಆಹಾರವಾಯಿತು. ರೋಮನ್ನರು ಇದನ್ನು ತಮ್ಮ ಸಾಮ್ರಾಜ್ಯದಾದ್ಯಂತ ಜನಪ್ರಿಯಗೊಳಿಸಿದರು. ಆಸ್ಟ್ರೇಲಿಯಾ, ಅಮೆರಿಕ ಮತ್ತು ಕೆನಡಾ ದೇಶಗಳಿಗೆ 18 ಮತ್ತು 19 ನೇ ಶತಮಾನದಲ್ಲಿ ವಸಾಹತುಶಾಹಿ ಹಾಗೂ ವಾಣಿಜ್ಯ ಚಟುವಟಿಕೆಗಳ ಮೂಲಕ ಗೋಧಿ ಕೃಷಿ ವಿಸ್ತಾರಗೊಂಡಿತು.
ಸಿಂಧೂ ನಾಗರಿಕತೆಯ ಕಾಲದಲ್ಲೇ (ಕ್ರಿ.ಪೂ. 9600 - 1900) ಭಾರತದ ಉಪಖಂಡದಲ್ಲಿ ಗೋಧಿ ಬಳಕೆಯಲ್ಲಿತ್ತು. ರಾಜಸ್ಥಾನ ಹಾಗೂ ವಾಯುವ್ಯ ಭಾರತದ ಭಾಗಗಳಲ್ಲಿ ಬೆಳೆಯುತ್ತಿದ್ದ 'ಪೈಗಂಬರಿ' ತಳಿಯು ಸಿಂಧೂ ನಾಗರಿಕತೆಯ ಕಾಲದಿಂದಲೂ ಬಳಕೆಯಲ್ಲಿರುವ ಅತ್ಯಂತ ಪುರಾತನ ಗೋಧಿಗಳಲ್ಲಿ ಒಂದಾಗಿದೆ.
ಭಾರತದಲ್ಲಿ ಕಾಲಕಾಲಕ್ಕೆ 'ಸದಕ' (ಎಮ್ಮರ್ ವೀಟ್), ಜವೆ ಗೋಧಿ, ಬನ್ಸಿ, ಬಿಜಿಗಾ ಹಾಗೂ ಅಮೃತ ಗೋಧಿಯಂತಹ ಸ್ಥಳೀಯ (ಜವಾರಿ) ತಳಿಗಳು ನೆಲೆಗೊಂಡವು. ಇವು ಭಾರತೀಯ ಮಣ್ಣು ಮತ್ತು ಹವಾಮಾನಕ್ಕೆ ತಕ್ಕಂತೆ ರೂಪುಗೊಂಡ ಪುರಾತನ ತಳಿಗಳಾಗಿವೆ.
1960 ರ ದಶಕದಲ್ಲಿ ಜಾಗತಿಕವಾಗಿ ಮತ್ತು ಭಾರತದಲ್ಲಿ ಆಹಾರ ಕೊರತೆಯನ್ನು ನೀಗಿಸಲು ಅಧಿಕ ಇಳುವರಿ ನೀಡುವ ಹೈಬ್ರಿಡ್ ಗೋಧಿ ತಳಿಗಳು ಹುಟ್ಟಿಕೊಂಡವು. ಇದು ಜಾಗತಿಕವಾಗಿ ಗೋಧಿ ಉತ್ಪಾದನೆಯನ್ನು ಬಹುಪಟ್ಟು ಹೆಚ್ಚಿಸಿತಾದರೂ, ಸ್ಥಳೀಯ ಮತ್ತು ಪೌಷ್ಟಿಕಾಂಶಭರಿತ ಜವಾರಿ ಗೋಧಿ ತಳಿಗಳು ಮೂಲೆಗುಂಪಾಗಲು ಕಾರಣವಾಯಿತು.
ಇತ್ತೀಚಿನ ವರ್ಷಗಳಲ್ಲಿ ಹೈಬ್ರಿಡ್ ಗೋಧಿಯಿಂದ ಆರೋಗ್ಯದ ಮೇಲಾಗುತ್ತಿರುವ ದುಷ್ಪರಿಣಾಮಗಳನ್ನು ಮನಗಂಡು, ಜನತೆ ಹಾಗೂ ಕೃಷಿಕರು ಮತ್ತೆ ಪುರಾತನ ಜವಾರಿ ಗೋಧಿ ತಳಿಗಳ (ಉದಾಹರಣೆಗೆ: ಪೈಗಂಬರಿ, ಕಪ್ಪು ಗೋಧಿ, ಜವೆ ಗೋಧಿ, ಸದಕ) ಕಡೆಗೆ ಒಲವು ತೋರುತ್ತಿದ್ದಾರೆ.
ಅಳಿವಿನಂಚಿನಲ್ಲಿರುವ ಜವಾರಿ ಗೋಧಿ ತಳಿಗಳನ್ನು ಜನಪ್ರಿಯಗೊಳಿಸಲು ಕರ್ನಾಟಕದಲ್ಲಿಯೂ ಪ್ರಯತ್ನಗಳು ನಡೆಯುತ್ತಿವೆ. ‘ಸಹಜ ಸಮೃದ್ಧ’ ಸಂಸ್ಥೆಯು ಉತ್ತರ ಕರ್ನಾಟಕದ ರೈತರ ಜೊತೆಗೂಡಿ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿವೆ. ದೇಶದ ನಾನಾ ಭಾಗಗಳ 36 ಬಗೆಯ ಜವಾರಿ ಗೋಧಿ ತಳಿಗಳನ್ನು ಸಂಗ್ರಹಿಸಿ ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಮಳಲಿ ಗ್ರಾಮದ ರೈತ ಚಂದ್ರಪ್ಪ ಹಾದಿಮನಿ ಅವರ ಹೊಲದಲ್ಲಿ ಕಳೆದ ವರ್ಷದ ಹಿಂಗಾರಿನಲ್ಲಿ (2025) ಬೆಳೆಸಲಾಗಿತ್ತು.
ದೇಶದ ವಿವಿಧ ಭಾಗಗಳಿಂದ ಸಂಗ್ರಹಿಸಿ ಬೆಳೆಸಿರುವ ಈ ಗೋಧಿ ತಳಿಗಳು ಒಂದಕ್ಕಿಂತೊಂದು ಭಿನ್ನವಾಗಿವೆ. ರಾಜಸ್ಥಾನ ಮೂಲದ 'ಪೈಗಂಬರಿ' ತಳಿಯು ಸಿಂಧೂ ನಾಗರಿಕತೆಯ ಕಾಲದಿಂದಲೂ ಬಳಕೆಯಲ್ಲಿದ್ದ ಸಣ್ಣ ಗುಂಡಗಿನ ಕಾಳಿನ ತಳಿಯಾಗಿದ್ದು, ಇದು ಕೃಷಿಗೆ ಒಗ್ಗಿಕೊಂಡ ಮೊದಲ ಪುರಾತನ ಗೋಧಿ ಎಂಬ ಹೆಗ್ಗಳಿಕೆ ಪಡೆದಿದೆ.
ಅಂತೆಯೇ, ಮಧ್ಯಪ್ರದೇಶದ ಸಪೂರವಾದ ‘ಮುಂಡಪಿಸಿ’ ತಳಿ ಮತ್ತು ಚಪಾತಿಯ ಗುಣಮಟ್ಟಕ್ಕೆ ಹೆಸರಾಗಿರುವ ‘ಸರಬತಿ’ ಗೋಧಿ, ಉತ್ತರ ಪ್ರದೇಶದ ಪ್ರಕಾಶ್ ಸಿಂಗ್ ರಘುವಂಶಿ ಎಂಬ ರೈತ ಅಭಿವೃದ್ಧಿಪಡಿಸಿ ರಾಷ್ಟ್ರಪತಿಗಳ ಪುರಸ್ಕಾರ ಪಡೆದ ಅಧಿಕ ಇಳುವರಿಯ ‘ಕುದ್ರತ್’ ತಳಿ ಗಮನ ಸೆಳೆದಿವೆ. ಇದರೊಂದಿಗೆ ವಿಶೇಷವಾದ ‘ಕಪ್ಪು ಕಾಳಿನ ಗೋಧಿ’ ಕೂಡ ಇದ್ದು, ಇದರ ಚಪಾತಿ ರಾಗಿ ರೊಟ್ಟಿಯ ಬಣ್ಣವನ್ನು ಹೋಲುತ್ತದೆ. ಸ್ಥಳೀಯವಾಗಿ ಉತ್ತರ ಕರ್ನಾಟಕದ ಬಿಳಿ ಮತ್ತು ಕೆಂಪು ಬನ್ಸಿ, ಅಮೃತ ಗೋಧಿ, ಸದಕ, ಜವೆ ಗೋಧಿ, ಕೆಂಪು ಗೋಧಿ ಹಾಗೂ ಬಿಜಿಗಾ ತಳಿಗಳೂ ಕೂಡ ಇಲ್ಲಿ ಬೆಳೆಯಲ್ಪಟ್ಟಿದ್ದವು.

ಗೋಧಿ ತಳಿಗಳನ್ನು ವೀಕ್ಷಿಸಿದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಅಖಿಲ ಭಾರತ ಗೋಧಿ ಸಂಶೋಧನಾ ವಿಭಾಗದ ಮುಖ್ಯ ವಿಜ್ಞಾನಿ ಡಾ. ಕುಮಾರ ಲಮಾಣಿ, "ಉತ್ತರ ಕರ್ನಾಟಕವು ಗೋಧಿಯ ವೈವಿಧ್ಯಕ್ಕೆ ಹೆಸರುವಾಸಿಯಾಗಿದೆ. ಕರಡಿಗುಡ್ಡ, ಸವದತ್ತಿಯ ಬಿಜಿಗಾ, ಗೋಕಾಕದ ಜವೆಗೋಧಿ, ಬಿಜಾಪುರದ ಬನ್ಸಿ ಮತ್ತು ಧಾರವಾಡದ ಅಮೃತ್ ಗೋಧಿ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯವಾಗಿವೆ. ಜಕಣಾಚಾರಿ ನಿರ್ಮಿಸಿದನೆಂದು ನಂಬಲಾದ ಅಣ್ಣೀಗೆರೆಯ ಅಮೃತೇಶ್ವರ ದೇವಾಲಯದ ಹೆಸರಿನ ‘ಅಮೃತ್ ಗೋಧಿ’ ಸ್ವಾತಂತ್ರ್ಯ ಪೂರ್ವದಲ್ಲೇ ಬಿಡುಗಡೆಯಾಗಿದ್ದರೂ ಇಂದಿಗೂ ರೈತರ ವಿಶ್ವಾಸ ಉಳಿಸಿಕೊಂಡಿದೆ. ರೈತರು ಇಂತಹ ಜವಾರಿ ತಳಿಗಳನ್ನು ಬೆಳೆದು ಸ್ಥಳೀಯ ಗ್ರಾಹಕರಿಗೆ ಒದಗಿಸಬೇಕು" ಎಂದು ಅಭಿಪ್ರಾಯಪಟ್ಟರು.
"ಜವಾರಿ ಗೋಧಿ ತಳಿಗಳು ವಾತಾವರಣ ಬದಲಾವಣೆಗೆ ತಕ್ಕಂತೆ ಹೊಂದಿಕೊಳ್ಳುವ ಹಾಗೂ ಬರ ನಿರೋಧಕ ಗುಣಗಳನ್ನು ಹೊಂದಿವೆ. ಪ್ರೋಟೀನ್ ಮತ್ತು ನಾರಿನಾಂಶದಿಂದ ಸಮೃದ್ಧವಾಗಿರುವ ಇವು ಔಷಧೀಯ ಗುಣಗಳನ್ನೂ ಹೊಂದಿದ್ದು, ಪೈಗಂಬರಿ, ಜವೆಗೋಧಿ ಹಾಗೂ ಕಪ್ಪು ಗೋಧಿಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ. ಸಾವಯವ ವಿಧಾನದಲ್ಲಿ ಗೋಧಿ ಬೆಳೆದು ರೈತರು ಉತ್ತಮ ಮಾರುಕಟ್ಟೆ ಕಂಡುಕೊಳ್ಳಬಹುದು" ಎಂಬುದು ಸಹಜ ಸಮೃದ್ಧ ಸಂಸ್ಥೆಯ ನಿರ್ದೇಶಕ ಜಿ. ಕೃಷ್ಣ ಪ್ರಸಾದ್ ಅನಿಸಿಕೆ.

ತುಮಕೂರು ಜಿಲ್ಲೆಯಲ್ಲಿಯೂ 1990ರ ದಶಕದವರೆಗೂ ಗೋಧಿಯನ್ನು ರೈತರು ಬೆಳೆಯುತ್ತಿದ್ದರು. ಮುಳ್ಳು ಗೋಧಿ, ಜವೆ ಗೋಧಿ ಹೆಸರಿನ ತಳಿಗಳಿದ್ದವು. ಬೇಸಿಗೆಯ ಬೆಳೆಯಾಗಿತ್ತು. ಜೇಡಿ ಹೊಲ ಅಥವಾ ಕಪ್ಪು ಮಣ್ಣಿನಲ್ಲಿ ಒಂದೆರಡು ತುಂಡುಗಳಿಗೆ ಹಾಕುತ್ತಿದ್ದರು. ಆದರೆ ಈಗ ಗೋಧಿ ಕೃಷಿ ಸಂಪೂರ್ಣ ಇಲ್ಲವಾಗಿದೆ.
ಎಲ್ಲೋ ದೂರದ ಪಂಜಾಬ್ ಅಥವಾ ಹೊರದೇಶದ ಗೋಧಿಯ ಚಪಾತಿ ಮಾಡಿ ತಿನ್ನುವುದರ ಬದಲು ನಮ್ಮದೇ ಜಮೀನಿನಲ್ಲಿ ಗೋಧಿ ಬೆಳೆಯೋಣ. ದೇಸಿ ತಳಿಗಳನ್ನೂ ಉಳಿಸೋಣ, ಬನ್ನಿ.
bevarahani1