ವೇದಿಕೆಯ ಮೇಲೆ ಕೂರುವ ಹಿಂಸೆಯ ಸುತ್ತ....!

ಎಲ್ಲರಿಗೂ ನಮಸ್ಕಾರ" ಎಂಬ ನಿರೂಪಕನ ವಿನಯಾತಿವಿನಯದ ಒಕ್ಕಣೆಯೊಂದಿಗೆ ಆರಂಭವಾಗುವ ಕಾರ್ಯಕ್ರಮದಲ್ಲಿ ವೇದಿಕೆ ಮೇಲಿನ ಭಾಷಣಕಾರರು ಅಷ್ಟುದ್ದ ಕೊರೆದಿದ್ದನ್ನು ಮತ್ತೊಮ್ಮೆ ಅದಕ್ಕೆ ಸಿಂಗಾರ ಮಾಡಿ ವ್ಯಾಖ್ಯಾನ -ವಿವರಣೆಗಳನ್ನು ಕೊಟ್ಟು ಚೂಯಿಂಗ್ ತರಹ ಎಳೆದು ರಿಪೀಟ್ ಮಾಡಿ ಬೋರ್ ಹೊಡೆಸುವ ನಿರೂಪಕನೆಂಬ ಭಾಷಣಕಾರರ ಬಾಲಂಗೋಚಿ ... *****************************************

ವೇದಿಕೆಯ ಮೇಲೆ ಕೂರುವ ಹಿಂಸೆಯ ಸುತ್ತ....!


ವಿಚಾರ 

ಪ್ರಕಾಶ್ ಹಿರಿಯೂರು
ಸಾಮಾನ್ಯವಾಗಿ , ನನಗೆ ಯಾವುದೇ ಸಮಾರಂಭ ಅಥವಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು, ವೇದಿಕೆಯ ಮೇಲೆ ನನ್ನ ಅಗತ್ಯವಿಲ್ಲದಿದ್ದರೂ ಆಸೀನನಾಗೋದು, ಮೈಕುಗಳ ಮುಂದೆ ಹೂರಣವಿಲ್ಲದ ಒಣ ಭಾಷಣಗಳನ್ನು ಕುಟ್ಟೋದು, ಕ್ಯಾಮೆರಾಗಳ ಮುಂದೆ ಎಲ್ಲಾ ಕೋನಗಳಲ್ಲೂ ಕಾಣಿಸಿಕೊಳ್ಳುವುದು ಅಥವಾ ಮುಖ್ಯ ಅತಿಥಿಯಾಗಿ ರಾಜ ಗಾಂಭೀರ್ಯದ, ಬುದ್ದಿಜೀವಿಯ ಅಥವಾ ಚಿಂತಕನಂತೆ ಪೋಸು ಕೊಟ್ಟು ವಿರಾಜಮಾನವಾಗೋ ಈ ರೀತಿಯ ತೋರಿಕೆಯ ಸೀನ್‌ಗಳಿವೆಯಲ್ಲ......ಇವೆಲ್ಲವೂ ಮನಸಿಗೆ ಸ್ವಲ್ಪಮಟ್ಟಿಗೆ ಕಿರಿಕಿರಿಯೆನಿಸುವ ಐಟಂಗಳು ಅಥವಾ ಕಸಿವಿಸಿಯಾಗುವ ಸಂದಂರ್ಭಗಳು. ಹೀಗಾಗಿ ಕನಿಷ್ಟ ಅನಿವಾರ್ಯವಲ್ಲದ ಇಂತಹ ಕೆಲವು ವೇದಿಕೆ ಮೇಲಿನ ಸಂದಂರ್ಭಗಳನ್ನು ಅವಾಯ್ಡ್ ಮಾಡುತ್ತಲೇ ಬಂದಿದ್ದೇನೆ. 


ಯಾಕಪ್ಪಾ ಹೀಗೆ ಎಂದು ನನಗೆ ನಾನೇ ಸಾಕಷ್ಟು ಬಾರಿ ಅಂದು ಕೊಂಡಿದ್ದೇನಾದರೂ ಬಹುಶಃ ಈ ಮನೋಭಾವ ಚಿಕ್ಕಂದಿನಿAದಲೇ ಬಂದಿದ್ದಿರಬಹುದು. ಇದು ಒಮ್ಮೊಮ್ಮೆ ನನ್ನಲ್ಲಿದ್ದಿರಬಹುದಾದ ಕೀಳರಿಮೆಯ ಪ್ರಭಾವವೋ, ಸಭಾಕಂಪನದ ಆತಂಕವೋ , ಆತ್ಮವಿಶ್ವಾಸದ ಕೊರತೆಯೋ ಅಥವಾ ವೇದಿಕೆಯೆನ್ನುವುದು ಬುದ್ದಿವಂತರಿಗೆ, ಸಾಧಕರಿಗೆ, ಜ್ಞಾನಿಗಳಿಗೆ, ಸಿಕ್ಕಾಪಟ್ಟೆ ಓದಿಕೊಂಡಿರುವವರಿಗೆ ಅಥವಾ ಹಿರಿಯರಿಗೆ ಮಾತ್ರವೇ ಇರಬಹುದಾದ ಪವಿತ್ರ ಜಾಗವೇ ಹೊರತು ಅದು ನನ್ನಂಥ ಪ್ರತಿಭಾ ಶೂನ್ಯರಿಗಲ್ಲವೆಂಬ ಆಂತರ್ಯದ ಪ್ರಾಮಾಣಿಕ ಫೀಲಿಂಗೋ ಗೊತ್ತಿಲ್ಲಾರೀ....! ಅಂತೂ ಯಾವುದೋ ನೆಪ ಹೇಳಿ ಸಾಧ್ಯವಾದಷ್ಟು ಮಟ್ಟಿಗೆ ವೇದಿಕೆಯಲ್ಲಿ ಕೂರಬೇಕಾದ ಸಂಧರ್ಭವನ್ನು ತಪ್ಪಿಸಿಕೊಳ್ಳುತ್ತಲೇ ಬಂದಿದ್ದೇನೆ. 


ಇದು ಬಿಚ್ಚುಗತ್ತಿ ಭರಮಪ್ಪನಾಯಕನ ಸ್ವಚ್ಛ ನೆಲದವನ ಬಿಚ್ಚು ಮಾತುಗಳು.!


ಆದರೆ ನಾನು ಕಾರ್ಯಕ್ರಮಗಳನ್ನು ಅಟೆಂಡ್ ಮಾಡಿ ಎಂಜಾಯ್ ಮಾಡೋ ರೀತೀನೇ ಬೇರೆ ! ವೇದಿಕೆಯ ಬದಲು ಅದೇ ಕಾರ್ಯಕ್ರಮದ ಕೊನೇ ಸಾಲಿನಲ್ಲಿ ಕೆಲ ಸಮಾನ ಮನಸ್ಕರೊಂದಿಗೆ ಕೂತು ಕಾರ್ಯಕ್ರಮ ವೀಕ್ಷಿಸುವುದು, ಕಾಲೆಳೆಯುತ್ತಾ ಮಾತನಾಡುವುದು ನನ್ನ ಮನಸಿಗೆ ಹೆಚ್ಚಿನ ಖುಷಿ ಕೊಡಬಹುದಾದ ಅಂಶ. ಬಹುಶಃ ಈ ಕೊನೇ ಸಾಲು ಅನ್ನೋದು ನನಗೆ ಅತ್ಯಂತ ಪ್ರಿಯವಾದ ಜಾಗವಾದ್ದರಿಂದ ಹೀಗನ್ನಿಸಿರಬಹುದು.


ಅದರಲ್ಲೂ ಕಾರ್ಯಕ್ರಮದಲ್ಲಿ ಅಸನಗಳ ನಡುವಿನ ಸಾಲಿನಲ್ಲಿ ಸಿಕ್ಕಿಹಾಕಿಕೊಳ್ಳದೇ ಕುರ್ಚಿಗಳ ಕೊನೇಸಾಲಿನ ತುದಿಯಲ್ಲಿಯೆಲ್ಲಿಯಾದರೂ ಕೂತು, ಬೇಕೆನಿಸಿದಾಗ, ಬೋರೆನಿಸಿದಾಗ ಸ್ವತಂತ್ರವಾಗಿ ಅಲ್ಲಿಂದ ಥಟ್ಟನೇ ಕಳಚಿಕೊಳ್ಳುವುದನ್ನೇ ಮನಸ್ಸು ಆಶಿಸುವುದೂ ಸಹ ಬಾಲ್ಯದಿಂದ ಸ್ವಭಾವತಃ ಬಂದಿರಬಹುದಾದ ಅಂತರ್ಗತವಾದ ಬಳುವಳಿ. ಏನ್ ಮಾಡೋದು ಸ್ವಾಮಿ, ನಾವಿರೋದೇ ಹೀಗೆ !
ಅದಕ್ಕೆ ಸ್ವಲ್ಪಮಟ್ಟಿಗೆ ಕಾರಣವೂ ಇದೆಯೆನ್ನಿ.


ನನ್ನ ಪ್ರಾಥಮಿಕ ಶಾಲೆಯ ವ್ಯಾಸಂಗದಿಂದ ಹಿಡಿದು ಕಾಲೇಜು ಮುಗಿಸುವವವರೆಗೂ ನನಗೆ ಕೊನೇ ಬೆಂಚೇ ಖಾಯಂ ಆಗಿತ್ತು. ಮೊದಲ ಸಾಲಿನಲ್ಲಿ ಕೂರುವವರು ಸಿರ್ಫ್ ಬುದ್ದಿವಂತರು, ಹೋಮ್‌ವರ್ಕನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಬರುವ ವಿಧೇಯ ವಿದ್ಯಾರ್ಥಿಗಳು, ಶಾಲಾ ಕಾಲೇಜಿಗೆ ನಿಯಮಿತವಾಗಿ ಬರುವ ಶಿಸ್ತಿನ ಸಿಪಾಯಿಗಳು ಅಥವಾ ಮೇಷ್ಟ್ರಿಗೆ ಅತ್ಯಂತ ಪ್ರಿಯರಾದ ಜಾಣ ವಿದ್ಯಾರ್ಥಿಗಳು ಎಂಬಂತಹ ಅಲಿಖಿತ ಆದರೆ ಜಾರಿಯಲ್ಲಿದ್ದ ವಾತಾವರಣದಲ್ಲೇ ನಾವಿದ್ದಿದ್ದು- ಬೆಳೆದಿದ್ದು. ಮೇಲಾಗಿ ತಿಂಗಳಲ್ಲಿ ನಾಲ್ಕಾರು ದಿನ ಮಾತ್ರವೇ ಕ್ಲಾಸ್ ರೂಂ ಗಳಲ್ಲಿ ಬಂಧಿಯಾಗಿರುತ್ತಿದ್ದ ನಮಗೆ ಮೊದಲ ಸಾಲೆಂದರೆ ಅಲ್ಟಿಮೇಟ್ ಅಲರ್ಜಿ !


ಹೀಗಾಗಿ ತೀರಾ ಅಪ್ಪಟ ದಡ್ಡನಲ್ಲದಿದ್ದರೂ ಯಾರಿಗೂ ಕಾಣಿಸಿಕೊಳ್ಳದ ಸಾಧಾರಣ ವಿದ್ಯಾರ್ಥಿಯಾಗಿದ್ದ ನನಗೆ ಹಾಗೂ ನನ್ನ ಓರಗೆಯ ಕೆಲ ಸಹಪಾಠಿಗಳಿಗೆ ಈ ಮೊದಲ ಸಾಲು ಎಂದಿಗೂ ಆಗಿ ಬರಲಿಲ್ಲ. ಆದರೆ ಕೊನೇ ಬೆಂಚು ಮಾತ್ರ ನಮ್ಮನ್ನು ಕೈಬಿಡದೇ ಖಾಯಂ ಆಗಿ ಕೈಹಿಡಿದಿತ್ತು ಕಣ್ರೀ !


 ಕಾರ್ಯಕ್ರಮಗಳ ವೇದಿಕೆಗಳಲ್ಲಿ ವಿರಾಜಿಸದಿರಲು ಈ ಎಲ್ಲ ಕಿರಿಕ್ ಅವತಾರಗಳು ಒಂದು ಕಾರಣವಾದರೆ, ಅಲ್ಲಿ ನಡೆಯಬಹುದಾದ ತಥಾಕಥಿತ ಅಲಂಕಾರಿಕ ಅಪರಾವತಾರಗಳು ಎಲ್ಲೋ ಒಂದು ಕಡೆ ಮನಸಿಗೆ ಭಾರವೆನಿಸಿ, ಅಲ್ಲಿ ಕಾರ್ಯಕ್ರಮ ಮುಗಿಯುವವರೆಗೂ ಅನಿವಾರ್ಯವಾಗಿ ಕುಳಿತು ಪರದಾಡುವುದಕ್ಕಿಂತ ಎಲ್ಲೋ ಒಂದೆಡೆ ಸಮಾಧಾನವಾಗುವ ತನಕ ಇದ್ದು ಆನಂತರ ಬೋರ್ ಎನಿಸಿದಲ್ಲಿ ಸರಾಗವಾಗಿ ಎದ್ದು ಬರುವುದೇ ಸೊಗಸು ಎನಿಸಿಬಿಟ್ಟಿತ್ತು.


ನನ್ನ ಸನಿಹಕ್ಕೆ ಬಂದ ಬಹುತೇಕ ಕಾರ್ಯಕ್ರಮಗಳ ಚಿತ್ರಣ ಹೀಗಿತ್ತು ನೋಡಿ !


ಎಲ್ಲರಿಗೂ ನಮಸ್ಕಾರ" ಎಂಬ ನಿರೂಪಕನ ವಿನಯಾತಿವಿನಯದ ಒಕ್ಕಣೆಯೊಂದಿಗೆ ಆರಂಭವಾಗುವ ಕಾರ್ಯಕ್ರಮದಲ್ಲಿ ವೇದಿಕೆ ಮೇಲಿನ ಭಾಷಣಕಾರರು ಅಷ್ಟುದ್ದ ಕೊರೆದಿದ್ದನ್ನು ಮತ್ತೊಮ್ಮೆ ಅದಕ್ಕೆ ಸಿಂಗಾರ ಮಾಡಿ ವ್ಯಾಖ್ಯಾನ -ವಿವರಣೆಗಳನ್ನು ಕೊಟ್ಟು ಚೂಯಿಂಗ್ ತರಹ ಎಳೆದು ರಿಪೀಟ್ ಮಾಡಿ ಬೋರ್ ಹೊಡೆಸುವ ನಿರೂಪಕನೆಂಬ ಭಾಷಣಕಾರರ ಬಾಲಂಗೋಚಿ ...


 ಸ್ವಾಗತ ಕೋರುವ ನೆಪದಲ್ಲಿ ವೇದಿಕೆಯ ಮೇಲಿರುವ ಎಲ್ಲರನ್ನೂ " ಎಷ್ಟೇ ಕೆಲಸದ ಒತ್ತಡವಿದ್ದರೂ ( ಅಸಲಿಗೆ ಅವರಿಗೆ ಇದಕ್ಕಿಂತ ಬೇರಾವ ಕೆಲಸವೂ ಇರೋಲ್ಲ ) ಕಾರ್ಯಕ್ರಮಕ್ಕೆ ಬಂದಿರುವ ಶ್ರೀಯುತರನ್ನು ನಿಮ್ಮೆಲ್ಲರ ಪರವಾಗಿ ಆತ್ಮೀಯವಾಗಿ ಸ್ವಾಗತಿಸುತ್ತೇನೆ" ಎನ್ನುವ ಸವಕಲು ಪದಗಳ ಸವಾರಿ....
ವೇದಿಕೆಯಲ್ಲಿರುವ ಮುಖ್ಯ ಅತಿಥಿಗಳು ಹಾಗೂ ಮತ್ತಿತರರು ಮಾತನಾಡಬೇಕೆಂದು ಕೊಂಡಿದ್ದನ್ನೆಲ್ಲವನ್ನೂ ತಾನೇ ಸೇರಿಸಿ ಹೇಳುವ ಮೂಲಕ ಅವರಿಗೆ ಮಾತನಾಡಲು ಬೇರೇನೂ ಉಳಿಯದಂತೆ ಅರೆದು ಕೊರೆಯುವ ಪ್ರಾಸ್ತಾವಿಕ ಭಾಷಣವೆಂಬ ಸುದೀರ್ಘ ರಾಮಾಯಣ...., 


ಕಾರ್ಯಕ್ರಮದ ಉದ್ಘಾಟನೆಗಾಗಿ ದೀಪ ಬೆಳಗುವ ಸಮಯದಲ್ಲಿ ಬೆಂಕಿಪೊಟ್ಟಣಕ್ಕಾಗಿ ಹುಡುಕುವ ಫಜೀತಿ, ಅಥವಾ ಆ ಸಮಯದಲ್ಲಿ ಕ್ಯಾಮೆರಾಗಳಿಗಾಗಿ ಪೋಸು ಕೊಡಲಿಕ್ಕಾಗಿ, ಮಾರನೆಯ ದಿನಪತ್ರಿಕೆಗಳಲ್ಲಿ ಕಾಣಿಸಿಕೊಳ್ಳಲಿಕ್ಕಾಗಿ ನಾ ಮುಂದೆ ತಾ ಮುಂದೆ ಎಂದು ಮುಗಿ ಬೀಳುವ ಪ್ರಚಾರ ಪ್ರಿಯರು....,
 ಭಾಷಣಕಾರ ತಮ್ಮ ಆರಂಭದಲ್ಲಿ ವೇದಿಕೆಯ ಮೇಲಿರುವ ಎಲ್ಲ ಗಣ್ಯರೇ ಎನ್ನುವ ಬದಲು ಅಲ್ಲಿರುವ ಪ್ರತಿಯೊಬ್ಬರ ಹೆಸರನ್ನೂ " ಮಾನ್ಯ.......ನವರೇ, ......ನವರೇ..ಎನ್ನುತ್ತಾ ಇಪ್ಪತ್ತು ನಿಮಿಷ ಅದಕ್ಕಾಗಿಯೇ ವ್ಯಯಿಸುವುದು, ಆಗ ಯಾರದಾದರೂ ಹೆಸರು ಬಿಟ್ಟು ಹೋಗಿದ್ದಲ್ಲಿ ಅವರು ಮುಖ ಗಂಟಿಟ್ಟುಕೊಳ್ಳುವ ಕರುಣಾಜನಕ ಸೀನುಗಳು.....


ವೇದಿಕೆಯ ಮೇಲೆ ಮಾತನಾಡಲು ಮೈಕ್ ಸಿಕ್ಕರೆ ಸಾಕು, ಮೈಸೂರು ಪಾಕು ಸಿಕ್ಕಂತೆ ಅದನ್ನು ಬಿಡಲು ಮನಸಿಲ್ಲದ ಮೈಕಾಸುರರು, ಇವರೊಂದಿಗೆ ಮೈಕ್ ಮುಂದೆ ಅಬ್ಬರಿಸುವ ಅಗತ್ಯವಿಲ್ಲದಿದ್ದರೂ ಜೋರು ದನಿಯಲ್ಲಿ ಚಾವಣಿ ಕಿತ್ತು ಹೋಗುವಂತೆ ಆವೇಶಭರಿತರಾಗಿ ಉಲಿಯುವ ಅಸಂಬದ್ಧ ಪ್ರಲಾಪಿಗಳು.....,
 ಸನ್ಮಾನದ ಹೆಸರಲ್ಲಿ ಅವರಿಗೆ ಇವರು, ಇವರಿಗೆ ಅವರು ಚಾಮರ ಹಾಡುತ್ತಾ ಸನ್ಮಾನಿಸಿಕೊಳ್ಳುವ ಕಿರಿಕಿರಿಯೆನಿಸುವ ಪರಿ, ಅಧ್ಯಕ್ಷ ಭಾಷಣವೆಂಬ ಅಲಂಕಾರಿಕ ಪ್ರಕ್ರಿಯೆ ಹಾಗೂ ಕಾರ್ಯಕ್ರಮ ಮುಕ್ತಾಯ ಹಂತಕ್ಕೆ ಬಂದಾಗ ಸಭೆಯಲ್ಲಿರುವ ಖಾಲಿ ಕುರ್ಚಿಗಳಿಗಾಗಿ ವಂದನಾರ್ಪಣೆ ಹೇಳಿ ತನ್ನ ಜವಾಬ್ದಾರಿ ಕಳೆದುಕೊಳ್ಳುವ ತವಕದಲ್ಲಿರುವವನ ಮಾನಸಿಕ ತಲ್ಲಣ...


ಕಾರ್ಯಕ್ರಮ ಹೇಗಿರಬಾರದೆಂಬುದಕ್ಕೆ ಇವೆಲ್ಲವೂ ಸಣ್ಣಪುಟ್ಟ ಉದಾಹರಣೆಗಳು. ಅದರಲ್ಲೂ ರಾಜಕೀಯ ಕಾರ್ಯಕ್ರಮಗಳಲ್ಲಿ ಇವು ತೀರಾನೇ ಕಾಮನ್. ಯಾರೋ ಮಂತ್ರಿಯೋ , ಶಾಸಕರೋ, ಸಿನಿಮಾ ನಟರೋ ಬರುತ್ತಾರೆನ್ನುವಾಗ ಅವರ ಸುತ್ತಲೂ ನೂರಾರು ಜನ ಸೇರುವ ಕಾರ್ಯಕ್ರಮದಲ್ಲಿ ಅವರು ಹೀಗೆ ಬಂದು ಹಾಗೆ ಹೋದನಂತರದಲ್ಲಿ ಉಳಿಯುವುದು ಆರೇಳು ಜನ ಮಾತ್ರ ! 


ಕೆಲವೊಮ್ಮೆ ಕೇವಲ ಕಾರ್ಯಕ್ರಮದ ಸಂಘಟಕರೇ ಪ್ರೇಕ್ಷಕರಾಗಿ ಉಳಿಯಬೇಕಾದ ದೌರ್ಭಾಗ್ಯವನ್ನೂ ನೋಡಿದ್ದೇವೆ. ಅಲ್ಲದೇ ಯಾರದೋ ದುಡ್ಡಲ್ಲಿ ಎಲ್ಲಮ್ಮನ ಜಾತ್ರೆ ಆಚರಿಸುವ ಬಹುತೇಕ ಕಲಿಯುಗ ಜಾಣರೇ ಎಲ್ಲೆಡೆ ತುಂಬಿರುವಾಗ ಈ ಕಾರ್ಯಕ್ರಮಗಳೆಂಬ ಬಡಿವಾರದತ್ತ ಮನಸ್ಸು ಮಿಡಿಯುವುದೆಲ್ಲಿಂದ ಬಂತು ?
ಇವೂ ಒಂಥರಾ ನನ್ನ ಉದ್ದನೆಯ ಬರಹಗಳಂತೆ ಬೋರೋ ಬೋರು !!


ಮರೆಯುವ ಮುನ್ನ 


ಏನಪ್ಪಾ...ನಿನ್ನ ನೇರ‍್ರೇ ಹಿಂಗೆ ಎಂದ ಮಾತ್ರಕ್ಕೇ ಎಲ್ಲಾ ಕಾರ್ಯಕ್ರಮಗಳೂ ಹೀಗೇ ಇರುವುದುಂಟೇ ? ಎಷ್ಟೋ ಒಳ್ಳೆಯ ಸಮಾರಂಭಗಳು ನಡೆಯುತ್ತಿರುವುದು ಕಣ್ಣಿಗೆ ಬೀಳುತ್ತಿಲ್ಲವೇ...... ? ಎಂಬ ಅಸಹನೆ, ಡೌಟು ಪಕ್ಕಾ ನಿಮ್ಮಲ್ಲಿ ಕೆಲವರಿಗಾದರೂ ಮೂಡಿರಬಹುದು. ಅದು ನಿಜವೂ ಹೌದು.


ಆದರೆ ಬಹುಪಾಲು ವೇದಿಕೆ ಕಾರ್ಯಕ್ರಮಗಳ ಅದರಲ್ಲೂ ರಾಜಕೀಯ ಸಭೆಗಳ ತರಾವರಿಗಳನ್ನು ಕೇವಲ ನೆಗೆಟೀವ್ ಶೇಡ್ ನಲ್ಲಿ ಹೇಳಿದ್ದೇನಾದರೂ ಮುಕ್ಕಾಲು ಪಾಲು ನಾ ಕಂಡ ಕಾರ್ಯಕ್ರಮಗಳೆಲ್ಲವೂ " ಜಗಿದು ಸವಿ ಕಳೆದುಕೊಂಡ ಚೂಯಿಂಗ್ ಗಮ್ ನಂತಿರುವ ನನ್ನ ಉದ್ದನೆಯ ಬರಹಗಳಂತೆ" ಹೀಗೆಯೇ ನನ್ನ ಅನುಭವಕ್ಕೆ ಬಂದಿರುವುದು. 


ಆದರೆ ಈ ಮಧ್ಯೆ ಜೀವನವಿಡೀ ನೆನಪಿನಲ್ಲಿಟ್ಟು ಕೊಳ್ಳಬಹುದಾದ ಅಚ್ಚುಕಟ್ಟಾಗಿ ನಡೆದ ಅನೇಕ ಕಾರ್ಯಕ್ರಮಗಳೂ ಇವೆ. ಅಲ್ಲಿ ಸಮಯ ಪ್ರಜ್ಞೆ, ಕಾರ್ಯಕ್ರಮದ ಔಚಿತ್ಯ, ಶಿಸ್ತು, ಮುಂಜಾಗ್ರತೆ, ಸಹ್ಯವೆನಿಸುವ ಭಾಷಣ, ಅರ್ಹ ವ್ಯಕ್ತಿಗಳಷ್ಟೇ ವೇದಿಕೆಯ ಮೇಲಿರುವ ದೃಶ್ಯ, ಸರಳ ಸುಂದರ ನಿರೂಪಣೆ, ಬೋರ್ ಎನಿಸದ ಚುರುಕು ಮಾತುಗಳು...ಈ ತರಹದ ಅನೇಕ ಕಾರ್ಯಕ್ರಮಗಳನ್ನೂ ಸಹ ಹತ್ತಿರದಿಂದ ನೋಡಿದ್ದೇನೆಯಾದರೂ ಅಂತಹವುಗಳು ನನ್ನ ಅನುಭವಕ್ಕೆ ಬಂದಿದ್ದು ಕಡಿಮೆ.


ಫಂಕ್ಷನ್‌ನಲ್ಲಿ .....ವೇದಿಕೆಯ ಮೇಲೆ ಕೂತು ಬಂಧಿಯಾಗಿರಬೇಕಾದ ಅಲಂಕಾರಕ್ಕಿಂತ ಸಭಿಕರ ಸಾಲಿನ ಕೊನೆಯಲ್ಲೆಲ್ಲೋ ಕುಳಿತು ಸ್ವತಂತ್ರವಾಗಿ ಎಂಜಾಯ್ ಮಾಡುವ ಮಜಾನೇ ಬೇರೆ !!


( ಇದು.....ಕೇವಲ ನನಗೆ....ನನ್ನಂಥವರಿಗಾಗಿ ಮಾತ್ರ !)
ಪ್ರೀತಿಯಿಂದ.....
ಹಿರಿಯೂರು ಪ್ರಕಾಶ್.