ಹಳ್ಳಿ ಹೈದನ , ನೂರೆಂಟು ನೆನಪು - ಸಿ.ಚಿಕ್ಕಣ್ಣ (ವಿಶ್ರಾಂತ ಐಎಎಸ್ ಅಧಿಕಾರಿ)

ಹಳ್ಳಿ ಹೈದನ , ನೂರೆಂಟು ನೆನಪು, ಸಿ.ಚಿಕ್ಕಣ್ಣ, (ವಿಶ್ರಾಂತ ಐಎಎಸ್ ಅಧಿಕಾರಿ)

ಹಳ್ಳಿ ಹೈದನ ,  ನೂರೆಂಟು ನೆನಪು -  ಸಿ.ಚಿಕ್ಕಣ್ಣ (ವಿಶ್ರಾಂತ ಐಎಎಸ್ ಅಧಿಕಾರಿ)

 ಹಳ್ಳಿ ಹೈದನ 


ನೂರೆಂಟು ನೆನಪು

ಸಿ.ಚಿಕ್ಕಣ್ಣ


(ವಿಶ್ರಾಂತ ಐಎಎಸ್ ಅಧಿಕಾರಿ)


“ ವರ್ಷದಲ್ಲಿ 5 ರಿಂದ 6 ತಿಂಗಳು ಸಣ್ಣಗೆ ನೀರು ಹರಿಯುತ್ತಿರುವ ದೊಡ್ಡಹಳ್ಳ, ಅದಾದ ಮೇಲೆ ಉಬ್ಬುಕಾಲುವೆ. ನಂತರ ಚಂದ್ರಗಿರಿಗೆ ಸೇರಿದ ತೋಟತುಡಿಕೆಗಳು ಮತ್ತು ಚಂದ್ರಗಿರಿ ಊರಿಗೇ ಅಂಟಿಕೊAಡಿರುವ ಬೃಹದಾಕಾರದ ಚಂದ್ರಗಿರಿ ಬೆಟ್ಟ ಮತ್ತು ಅದರ ಮೇಲೆ ಸ್ಥಾಪನೆಯಾಗಿರುವ ಮಾರಮ್ಮನ ಗುಡಿ, ಈ ಬೆಟ್ಟವನ್ನು ನೋಡಿದಾಗಲೆಲ್ಲಾ ನನ್ನ ಮೈಮನ ಪುಳಕಗೊಳ್ಳುತ್ತಿತ್ತು. ಬೆಟ್ಟದ ತುದಿಯಲ್ಲಿನ ಬೋಳುಕಲ್ಲುಗಳ ಮೇಲೆ ಶ್ರಾವಣದ ಬೆಳಗಿನಲ್ಲಿ ಲಾಸ್ಯವಾಡುತ್ತಿದ್ದ ಮೋಡಗಳನ್ನು ಕಂಡು ಅನೇಕ ಬಾರಿ ಮೋಹಿತನಾಗುತ್ತಾ ಕುಳಿತುಬಿಡುತ್ತಿದ್ದೆ” 



“ಏ, ಇಲ್ಲಿ ಏನಿಲ್ಲ ಬನ್ರೋ, ದೆವ್ವನೂ ಇಲ್ಲ, ದಿಂಡರೂ ಇಲ್ಲ, ಸುಮ್ ಸುಮ್ಮೆ ಪುಕ್ಕಲು ಜನ ನಮ್ಮನ್ನೆಲ್ಲಾ ಹೆದರಿಸೋಕೆ ಈ ದೆವ್ವದ ಕತೆ ಕಟ್ಟಿದ್ದಾರೆ” ಎಂದು ಹೊರಗೆ ಬರುವಷ್ಟರಲ್ಲಿ ಊರಿನ ಜನರೆಲ್ಲಾ ಕಾತುರದಿಂದ ಹೊರಗೆ ಜಮಾಯಿಸಿದ್ದರು. “ಏ ಹುಡುಗರಾ, ನಿಮ್ಗೇನಾದ್ರೂ ಭಯ ಭಕ್ತಿ ಇದ್ಯಾ? ಒಳಗೆ ಏನಾರ ಆಗಿದ್ರೆ ನಿಮ್ಮ ಗತಿ ಏನು?” ಮುಂತಾಗಿ ಬೈದು ಇನ್ನೆಂದೂ ಈ ದೇವಸ್ಥಾನದೊಳಗೆ ಕಾಲಿಡಕೂಡದೆಂದು ಊರಿನ ದೊಡ್ಡಗೌಡರು ಆದೇಶ ನೀಡಿದರು.


ಹಳ್ಳಿ ಹೈದನ 
ನೂರೆಂಟು ನೆನಪು

ಸಿ.ಚಿಕ್ಕಣ್ಣ
(ವಿಶ್ರಾಂತ ಐಎಎಸ್ ಅಧಿಕಾರಿ)


(ಕಳೆದ ‘ಕಿನ್ನರಿ’ಯಿಂದ)


 ಬಡವನಹಳ್ಳಿಯನ್ನು ಬಿಟ್ಟು ಶಿರಾ ಮಾರ್ಗವಾಗಿ ಅರ್ಧ ಕಿಮೀ ಕ್ರಮಿಸಿದರೆ ಬಲಕ್ಕೆ ಹೊಸಕರೆ ರಸ್ತೆ ಬರುತ್ತದೆ. ಬಡವನಹಳ್ಳಿಯಿಂದ ಹೊಸಕರೆಗೆ 17 ಕಿ.ಮೀ. ದೂರ, ಈ ರಸ್ತೆ ತಿರುವಿನಲ್ಲಿ ಎಪಿಎಂಸಿ ಯಾರ್ಡ್, ಮುಂದಕ್ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಇನ್ನೂ ಸ್ವಲ್ಪ ದೂರ ಕ್ರಮಿಸಿದರೆ ನಮ್ಮೂರ ತಿಗಳ ಜನಾಂಗದವರ ಮನೆ, ತೋಟ-ತುಡಿಕೆಗಳು, ನಂತರ ಸ್ವಲ್ಪ ದೂರಕ್ಕೆ ನಾಗೇನಹಳ್ಳಿಗೆ ಸೇರಿದ ಗೊಲ್ಲರಹಟ್ಟಿ ಅದನ್ನು ದಾಟಿ ಮುಂದೆ ಸಾಗಿದರೆ ಸಿಗುವುದೇ ನಮ್ಮೂರು ತಿಪ್ಪನಹಳ್ಳಿ, ಬಡವನ ಹಳ್ಳಿಯಂತೆ ಇಲ್ಲಿಯೂ ಕುಂಚಿಟಿಗರ ಒಂದು ಬೆಡಗಾದ ಬಡವನವರೇ ಜಾಸ್ತಿ, ಬಡವನವರ ಮನೆದೇವರು ಶ್ರೀ ಚೌಡೇಲು ದೇವಿ, ಹೀಗಾಗಿ ಇಲ್ಲಿ ಹುಟ್ಟುವ ಗಂಡು ಮಕ್ಕಳಿಗೆ ತಿಪ್ಪಣ್ಣ, ಚೌಡಪ್ಪ, ತಿಪ್ಪೆಚೌಡಪ್ಪ ದೊಡ್ಡಚೌಡಪ್ಪ, ಸಣ್ಣಚೌಡಪ್ಪ ಎಂತಲೋ ಹೆಣ್ಣುಮಕ್ಕಳಿಗೆ ಚೌಡಮ್ಮ, ದೊಡ್ಡಚೌಡಮ್ಮ ಸಣ್ಣಚೌಡಮ್ಮ ಎಂತಲೋ ನಾಮಕರಣ ಮಾಡುವುದರ ಜೊತೆಗೆ, ಚಿಕ್ಕಣ್ಣ, ಸಣ್ಣಚಿಕ್ಕಣ್ಣ ದೊಡ್ಡಚಿಕ್ಕಣ್ಣ ಮುಂತಾಗಿ ಅಪ್ಪ ತಾತ ಮುತ್ತಾತಂದಿರ ಹೆಸರು ಇಡುತ್ತಿದ್ದುದು ಸರ್ವೇಸಾಮಾನ್ಯ. ಹೀಗಾಗಿ ನಮ್ಮ ಊರಿಗೆ ತಿಪ್ಪನಹಳ್ಳಿ ಎಂಬ ಹೆಸರು ಬಂದಿರಬೇಕು. ಅಥವಾ ಎಲ್ಲ ಊರುಗಳ ಇಕ್ಕೆಲಗಳಲ್ಲಿ ಎಲ್ಲೆಂದರಲ್ಲಿ ನೆಲೆಗೊಂಡು ನಾರುವ ತಿಪ್ಪೆಗಳು ಈ ಊರಿನಲ್ಲಿಯೂ ಹೇರಳವಾಗಿದ್ದುದರಿಂದ ಇದಕ್ಕೆ ತಿಪ್ಪೇನಹಳ್ಳಿ ಎಂದು ಅನ್ವರ್ಥವಾಗಿ ಬಂದಿರಬೇಕೆAದು ನನ್ನ ಸ್ನೇಹಿತರು ತಮಾಷೆಯಾಗಿ ವ್ಯಾಖ್ಯಾನ ಮಾಡಿದ್ದೂ ಉಂಟು. ತಿಪ್ಪ, ತಿಪ್ಪಣ್ಣ, ತಿಪ್ಪಯ್ಯ ಎಂಬ ವ್ಯಕ್ತಿ ಮೂಲದಿಂದ ಈ ಹೆಸರು ಬಂದಿರಬಹುದು. ಸಾಂಸ್ಕೃತಿಕ ನಾಯಕ ನಾಯಕನಹಟ್ಟಿ ತಿಪ್ಪೇಸ್ವಾಮಿಯ ಪ್ರಭಾವ ಇದ್ದಿರಲೂಬಹುದು. ಸ್ಥಳ ನಾಮದ ಚರ್ಚೆ, ಸಂಶೋಧನೆ ಆಗಬೇಕಿದೆ. 


    ನನ್ನ ಬಾಲ್ಯದ ತಿಪ್ಪನಹಳ್ಳಿ ನನಗೆ ತುಂಬಾ ಪರಿಚಿತವಾದ ಊರು. ನನ್ನೂರಿನ ಪೂರ್ವಕ್ಕೆ ಕಣ್ಣಾಯಿಸಿದರೆ ಭತ್ತದ ಗದ್ದೆಗಳೂ ತಿಗಳರ ಹೂವಿನ, ತರಕಾರಿ ತೋಟಗಳು, ಇನ್ನೂ ಮುಂದಕ್ಕೆ ನೋಡಿದರೆ ವರ್ಷದಲ್ಲಿ 5 ರಿಂದ 6 ತಿಂಗಳು ಸಣ್ಣಗೆ ನೀರು ಹರಿಯುತ್ತಿರುವ ದೊಡ್ಡಹಳ್ಳ, ಅದಾದ ಮೇಲೆ ಉಬ್ಬುಕಾಲುವೆ. ನಂತರ ಚಂದ್ರಗಿರಿಗೆ ಸೇರಿದ ತೋಟತುಡಿಕೆಗಳು ಮತ್ತು ಚಂದ್ರಗಿರಿ ಊರಿಗೇ ಅಂಟಿಕೊAಡಿರುವ ಬೃಹದಾಕಾರದ ಚಂದ್ರಗಿರಿ ಬೆಟ್ಟ ಮತ್ತು ಅದರ ಮೇಲೆ ಸ್ಥಾಪನೆಯಾಗಿರುವ ಮಾರಮ್ಮನ ಗುಡಿ, ಈ ಬೆಟ್ಟವನ್ನು ನೋಡಿದಾಗಲೆಲ್ಲಾ ನನ್ನ ಮೈಮನ ಪುಳಕಗೊಳ್ಳುತ್ತಿತ್ತು. ಬೆಟ್ಟದ ತುದಿಯಲ್ಲಿನ ಬೋಳುಕಲ್ಲುಗಳ ಮೇಲೆ ಶ್ರಾವಣದ ಬೆಳಗಿನಲ್ಲಿ ಲಾಸ್ಯವಾಡುತ್ತಿದ್ದ ಮೋಡಗಳನ್ನು ಕಂಡು ಅನೇಕ ಬಾರಿ ಮೋಹಿತನಾಗುತ್ತಾ ಕುಳಿತುಬಿಡುತ್ತಿದ್ದೆ. ಸ್ವಲ್ಪ ಹೊತ್ತಿಗೆ ಬೀಸುವ ಗಾಳಿಗೆ ಮೋಡಗಳು ಚದುರಿ ಬೋಳುಕಲ್ಲುಗಳು ಬೆತ್ತಲೆಯಾದಾಗ ನನ್ನ ಮನಸ್ಸು ಮುದುಡಿದ ಕ್ಷಣಗಳಿವೆ. 


    ನನ್ನೂರಿನ ಪಶ್ಚಿಮಕ್ಕೆ ಈರಣ್ಣನ ಕಟ್ಟೆ, ನಂತರ ವಿಶಾಲವಾದ ಕುರುಚಲು ಕಾಡು, ಆದರ ಮಧ್ಯೆ ಇರುವ ನರಿಗುಟ್ಟೆ, ಈ ಕುರುಚಲು ಕಾಡು ಸುಮಾರು 15 ರಿಂದ 20 ಕಿಮೀಗಳಷ್ಟು ಹರಡಿದ್ದು, ಇದರ ವಿಸ್ತಾರ ಸರಿಸುಮಾರು 25,000 ಎಕರೆಗಳಾಗ ಬಹುದೆಂದು ನಮ್ಮ ಹಳ್ಳಿಯವರ ಅಂದಾಜಿದೆ, ಶಿರಾ-ಮಧುಗಿರಿ ರಾಷ್ಟ್ರೀಯ ಹೆದ್ದಾರಿಯ ಎಡಬಲಗಳಲ್ಲೂ ಇದು ಸವಿಸ್ತಾರವಾಗಿ ಹರಡಿ ಅಲ್ಲಿಂದ ಪಶ್ಚಿಮಕ್ಕೆ ಕೂನ್ನಹಳ್ಳಿ, ಉತ್ತರಕ್ಕೆ ಬಸ್ಮಂಗಿ ಕಾವಲು ಸೇರಿ ಆಂಧ್ರ ಪ್ರದೇಶದ ಮಡಕಶಿರಾ ತಾಲ್ಲೂಕಿನ ಗಡಿಗೆ ಹೊಂದಿಕೊAಡು, ಸುಮಾರು 20 ಹಳ್ಳಿಗಳಿಗೆ ಸೌದೆ, ವ್ಯವಸಾಯ ಉಪಕರಣಗಳಿಗೆ ಬೇಕಾದ ಜಾಲಿ, ತೂಬರೆ, ಮತ್ತಿ, ಬೇವು, ಹಲಸು ಮುಂತಾದ ಗಿಡಮರಗಳನ್ನು ಇಲ್ಲಿ ನಾನು ಕಣ್ಣಾರೆ ಕಂಡಿದ್ದೇನೆ. ಶಾಲಾ ರಜಾ ದಿನಗಳಲ್ಲಿ ಮನೆಯ ದನಕರುಗಳನ್ನು, ಕುರಿಗಳನ್ನು ಮೇಯಿಸಲು ನಾನು ಈ ಕಾಡಿಗೆ ಬಂದು ಸ್ನೇಹಿತರೊಡನೆ ಸೇರಿ ಆಟಗಳನ್ನಾಡುವುದಲ್ಲದೆ ಮೊಲ, ಮುಳ್ಳುಹಂದಿ, ಕಾಡುಹಂದಿಗಳ ಬೇಟೆಯನ್ನು ಆಡಿದ ನೆನಪು ಈಗಲೂ ನಿಚ್ಚಳವಾಗಿ ನೆನಪಿದೆ. 


    ಬಾಲ್ಯದ ನನ್ನೂರಿನಲ್ಲಿ ಅಂದಾಜು 80 ರಿಂದ 90 ಕುಟುಂಬಗಳು ವಾಸವಾಗಿದ್ದು, ಮಣ್ಣಿನ ಗೋಡೆಗಳ ಮೇಲೆ ಮರದ ತೊಲೆ, ಜಂತೆ ಚಪ್ಪಡಿಗಳನ್ನೋ, ಸೌದೆ ಮಿಶ್ರಿತ ಮಣ್ಣಿನಿಂದಲೋ, ಸೂರಿಗೆ ಹೊದಿಸಿ ಕಟ್ಟಿದ ಮನೆಗಳೇ ಹೆಚ್ಚಾಗಿದ್ದವು. ಮನೆ ಎಷ್ಟೇ ಚಿಕ್ಕದಾದರೂ, ಒಂದೊAದು ಮನೆಯ ಒಳಗೆ ಒಂದು ಹಸು, ಎರಡು ಎತ್ತು, ಒಂದು ಎಮ್ಮೆ ಇದ್ದು, ಇವುಗಳನ್ನು ರಾತ್ರಿ ಸಮಯದಲ್ಲಿ ಒಳಗೆ ಕಟ್ಟಿಹಾಕಲು ಕೊಟ್ಟಿಗೆ, ಗೋಂದಿಗೆ ಸರ್ವೇಸಾಮಾನ್ಯವಾಗಿದ್ದವು. 


    ಅಂದಾಜು 500 ಜನಸಂಖ್ಯೆ ಇದ್ದ ನಮ್ಮೂರಲ್ಲಿ ಎಲ್ಲಾ ಜಾತಿಯ ಜನ ವಾಸಮಾಡುತ್ತಿದ್ದರು. ಒಂದು ಬ್ರಾಹ್ಮಣರ ಮನೆ, ಕುಂಚಿಟಿಗ ಒಕ್ಕಲಿಗರು, ನಾಯಕರು, ತಿಗಳರು, ಮಾದಿಗರು, ಹೊಲೆಯರ ಹತ್ತಾರು ಮನೆಗಳು, ಒಬ್ಬ ಕಮಾರನ ಮನೆ, ಇವರೆಲ್ಲರ ಮಧ್ಯೆ ಒಂದು ಮುಸ್ಲಿಮರ ಮನೆಯೂ ಇದ್ದು ಅವರ ಮಗ ಫಕೃದ್ದೀನ್ ನನ್ನ ಜೊತೆ ಬಡವನಹಳ್ಳಿ ಮಿಡಲ್ ಸ್ಕೂಲಿಗೆ ಬರುತ್ತಿದ್ದ. ನಾನೂ ಅವನೂ ಒಳ್ಳೆಯ ಸ್ನೇಹಿತರಾಗಿದ್ದೆವು. 


   ಊರಿನ ಗ್ರಾಮದೇವತೆ ಶ್ರೀ ಚೌಡೇಶ್ವರಿ ತಾಯಿ, ಈಕೆ ಕುಂಚ ಒಕ್ಕಲಿಗರ ಬಡವನೋರ ಕುಲದ ಮನೆ ದೇವರೂ ಸಹ ಆಗಿದ್ದರಿಂದ, ಪ್ರತೀ ಭಾನುವಾರ ಗುಡಿಬಾಗಿಲು ತೆಗೆದು, ಗುಡಿಸಿ ಸಾರಿಸಿ ಪೂಜೆ ಮಾಡುತ್ತಿದ್ದರು. ದೇವಸ್ಥಾನವನ್ನು ಮಣ್ಣಿನಲ್ಲಿ ಮಾಡಿದ್ದು, ಮಳೆಗಾಲದಲ್ಲಿ ನೀರು ತೊಟ್ಟಿಕ್ಕುತ್ತಿದ್ದರೂ ಭಕ್ತರು ಇದನ್ನು ಸರಿಮಾಡುವ ಕೆಲಸ ಮಾಡುತ್ತಿರಲಿಲ್ಲ. 1977-78ನೇ ಸಾಲಿನಲ್ಲಿ ನಾನು ಧಾರವಾಡದಲ್ಲಿ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕನಾಗಿದ್ದ ಕಾಲದಲ್ಲಿ ಊರಿನ ಮುಖಂಡರಾದ ಶ್ರೀ ಬನಪ್ಪನವರು, ಕರಿಯಣ್ಣ, ದೇವಸ್ಥಾನದ ಆಡಳಿತ ಮಂಡಳಿಯ ಸಹಕಾರದೊಂದಿಗೆ ಹಳೆಯ ದೇವಸ್ಥಾನವನ್ನು ಕೆಡವಿ ಗರ್ಭಗುಡಿ, ವಿಶಾಲವಾದ ಅಂಗಳ, ಹಜಾರವನ್ನೊಳಗೊಂಡ ಸುಂದರವಾದ ಕಲ್ಲಿನ ಕಟ್ಟಡವನ್ನು ಕಟ್ಟಿ, ನಂತರ ನಾನು 2001ರಲ್ಲಿ ಕಂದಾಯ ಇಲಾಖೆಯ ಕಾರ್ಯದರ್ಶಿಯಾಗಿದ್ದಾಗ ಮುಜರಾಯಿ ಇಲಾಖೆಯಿಂದ 1 ಲಕ್ಷ ರೂಪಾಯಿಗಳ ಅನುದಾನ ನೀಡಿ, ಅದರ ಜತೆಗೆ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ, ಗುಡಿಗೆ ಗೋಪುರ ಕಟ್ಟಿಸಿ, ಕಳಸ ಪ್ರತಿಷ್ಠಾಪನೆಯನ್ನು ಮಾಡಿಸಿದೆ. ಈ ಮೂಲಕ ನನ್ನ ಮನೆದೇವರ ಸೇವೆಯನ್ನು ಮಾಡಿದೆನೆಂಬ ಧನ್ಯತಾಭಾವ ನನಗಾಯಿತು. 


     ಊರಿನ ಮತ್ತೆರಡು ದೇವರ ಗುಡಿ ಎಂದರೆ ಶ್ರೀ ಗಣಪತಿ ದೇವಸ್ಥಾನ ಹಾಗೂ ಆಂಜನೇಯ ದೇವಸ್ಥಾನ. ಇವೆರಡು ದೇವರುಗಳನ್ನು ಅಕ್ಕಪಕ್ಕ ಪ್ರತಿಷ್ಠೆ ಮಾಡಿದ್ದರೂ ಸರಿಯಾದ ನಿರ್ವಹಣೆ ಇಲ್ಲದೆ. ದೇವಸ್ಥಾನ ನನ್ನ ಬಾಲ್ಯದಲ್ಲಿಯೇ ಅವಸಾನದ ಸ್ಥಿತಿಗೆ ಬಂದಿತ್ತು. ಇದರ ಕಲ್ಲಿನ ಬಂಡೆಯ ಸೂರು ರಾತ್ರಿ ಹೊತ್ತು ಭಜನೆ, ನಾಟಕದ ರಿಹರ್ಸಲ್, ಕೋಲಾಟ ಮುಂತಾದ ಗ್ರಾಮೀಣ ಕಲೆಗಳಿಗೆ ಆಶ್ರಯ ತಾಣವಾಗಿತ್ತು. ಇತ್ತೀಚೆಗೆ ಸರ್ಕಾರದ ಅನುದಾನ, ಭಕ್ತರ ದೇಣಿಗೆ ಪಡೆದು, ಎಲೆಕ್ಟಿçಕಲ್ ಕಂಟ್ರಾಕ್ಟರ್ ಶ್ರೀ ಚೌಡಪ್ಪನವರ ನೇತೃತ್ವದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆದಿದೆ. 


    ಇಲ್ಲಿ ಮತ್ತೊಂದು ಗುಡಿ ಇದೆ. ಅದೇ ಕಂಬದ ರಂಗನ ದೇವಸ್ಥಾನ. ಇದನ್ನು ಯಾರು ಕಟ್ಟಿಸಿದರು, ಇದರ ಒಕ್ಕಲು ಯಾರು ಎಂಬುದು ನಮ್ಮೂರಿನವರಿಗೆ ಯಾರಿಗೂ ಗೊತ್ತಿಲ್ಲ. ಇದರ ಬಾಗಿಲನ್ನು ತೆರೆದು ಒಳಗೆ ಹೋಗುವ ಧೈರ್ಯವನ್ನು ದೊಡ್ಡವರೇ ಮಾಡುತ್ತಿರಲಿಲ್ಲ. ಕೇಳಿದರೆ 'ಏ ಹುಡುಗರ, ಎಂದೂ ಆ ಗುಡಿ ಹತ್ತಿರ ಹೋಗೋದಾಗಲಿ, ಅದರ ಬಾಗಿಲು ತೆರೆದು ಒಳಗೆ ಹೋಗೋದಾಗಲೀ ಮಾಡಬೇಡೋ, ಅದರೊಳಗೆ ಒಂದು ಹೆಣ್ಣು ದೆವ್ವ ಐತೆ, ರಾತ್ರಿ ಹೊತ್ತು ಬಿಳಿ ಸೀರೆ ಉಟ್ಟುಕೊಂಡು ದೊಡ್ಡ ಹಳ್ಳದ ಕಡೆಗೆ ಹೋಗಿ ಅದರ ನೀರು ಕುಡಿದು ಬೆಳಗಿನ ಜಾವ ವಾಪಸ್ಸು ಬರ್ತಾಳೆ, ಅವಳು ಬರೋದನ್ನು ಯಾರಾದರೂ ನೋಡಿದರೆ ರಕ್ತ ಕಾರ್ಕೊಂಡು ಸಾಯೋದೇಯಾ ಅಂತ ನಮ್ಮನ್ನೆಲ್ಲಾ ಹೆದರಿಸುತ್ತಿದ್ದರು. ಬಡವನಹಳ್ಳಿ ಮಿಡಲ್ ಸ್ಕೂಲಿಗೆ ಹೋಗುತ್ತಿದ್ದ ನಾನೂ ಸೇರಿ ನಾಲೈದು ಹುಡುಗರು ಹೆದರಿಕೊಂಡAತೆ ನಟಿಸಿದರೂ, ಒಳಗೊಳಗೆ ಗುಡಿ ಒಳಗೆ ಇರುವ ರಹಸ್ಯವಾದರೂ ಏನು ಎಂದು ಶೋಧಿಸಿಯೇ ನೋಡಬೇಕೆಂಬ ಹಠ ನಮ್ಮಲ್ಲಿ ಉತ್ಕಟವಾಗುತ್ತಿತ್ತು. 


    ಶಾಲೆಗೆ ಹೋಗುವಾಗ ಬರುವಾಗ ನಮ್ಮಲ್ಲಿ ಚರ್ಚೆಗೆ ಬರುತ್ತಿದ್ದ ಮುಖ್ಯ ವಿಷಯವೇ ಕಂಬದ ರಾಯನ ಗುಡಿಯ ರಹಸ್ಯ ಶೋಧನೆ, ಹೀಗಾಗಿ ಒಂದು ಶನಿವಾರ ಮಧ್ಯಾಹ್ನ, ಶಾಲೆಯಿಂದ ಹಿಂದಿರುಗುವಾಗ ದಾರಿಯಲ್ಲಿದ್ದ ತೋಟಕ್ಕೆ ನುಗ್ಗಿ, ಅಲ್ಲಿ ಬಿದ್ದಿದ್ದ ಒಣಗಿದ ಅಡಿಕೆ ಸೋಗೆ, ತೆಂಗಿನ ಗರಿ ಇತ್ಯಾದಿಗಳನ್ನು ಸುತ್ತಿ ದೊಂಬಿ ಮಾಡಿಕೊಂಡು ಬಂದು ದೇವಸ್ಥಾನದ ಮುಂದೆ ಜೋಪಾನವಾಗಿಟ್ಟು, ಊಟವಾದ ಮೇಲೆ ಒಬ್ಬೊಬ್ಬರೇ ಮನೆಯವರ ಕಣ್ಣು ತಪ್ಪಿಸಿ ಗುಡಿ ಮುಂದೆ ಒಂದು ಸೇರಿದೆವು. ಮನೆಯಿಂದ ಕದ್ದು ತಂದಿದ್ದ ವೆಂಕಿಪಟ್ಟಣ ಗೀರಿ ಸುಡಿಗೆ ಹಚ್ಚಿಕೊಂಡು ಜೈ ವಿಶ್ವೇಶ್ವರ, ಜೈ ಚೌಡೇಶ್ವರಿ, ಜೈ ಮಾರುತಿರಾಯ ಎಂದು ಜೈಕಾರ ಹಾಕಿಕೊಂಡು ದೇವಸ್ಥಾನದ ಮರದ ಮುರಿದ ಬಾಗಿಲನ್ನು ತಳ್ಳಿಕೊಂಡು ಒಳಗೆ ನುಗ್ಗಿದೆವು. ನಾವು ನುಗ್ಗಿದಷ್ಟೇ ವೇಗವಾಗಿ ದೇವಸ್ಥಾನದ ಒಳಗೆ ಜಮಾಯಿಸಿದ್ದ ಬಾವಲಿಗಳು (ಃಚಿಣs) ಗುಂಪುಗುAಪಾಗಿ ಬಾಗಿಲಿನಿಂದ ತೂರಿ ಹೊರಗೆ ನುಗ್ಗಿದವು, ಮುಂದಕ್ಕೆ ಹೋದರೆ ಎರಡು ಮೂರು ಕಡೆ ಹೆಗ್ಗಣಗಳು ಸತ್ತು ಗಬ್ಬುನಾತ ಹೊಡೆಯುತ್ತಿತ್ತು. ಅದು ಬಿಟ್ಟರೆ ಎಲ್ಲವೂ ಸ್ಥಬ್ಧ, ನಿಶ್ಯಬ್ಧ, ಸುಡಿಗೆ ಬೆಳಕಿಂದ ಮೇಲೆ ಕಣ್ಣು ಹಾಯಿಸಿದರೆ ಒಳ್ಳೆಯ ಕಲ್ಲಿನಿಂದ ಮಾಡಿದ ಕಂಭಗಳು, ಮೇಲೆ ಕಲ್ಲು ಬಂಡೆಗಳನ್ನು ಹಾಸಿ ಮಾಡಿಸಿದ ಸೂರು, ಅದಕ್ಕೆ ನೇತುಹಾಕಿದ ನಾಲೈದು ಗಂಟೆಗಳು ಮನಸೆಳೆದವು, ಗರ್ಭಗುಡಿಯ ಬಾಗಿಲು ತಳ್ಳಿ ಒಳಗೆ ನೋಡಿದರೆ ವಿಷ್ಣು ಅವತಾರವನ್ನು ಹೋಲುವ ಕಲ್ಲುಕಂಭ, ಅದಕ್ಕೆ ಪೂಜೆ ಮಾಡಿ ಎಷ್ಟು ವರ್ಷಗಳಾಗಿದ್ದವೋ ಗೊತ್ತಿಲ್ಲ. 'ಏ, ಇಲ್ಲಿ ಏನಿಲ್ಲ ಬನ್ರೋ, ದೆವ್ವನೂ ಇಲ್ಲ, ದಿಂಡರೂ ಇಲ್ಲ, ಸುಮ್ ಸುಮ್ಮೆ ಪುಕ್ಕಲು ಜನ ನಮ್ಮನ್ನೆಲ್ಲಾ ಹೆದರಿಸೋಕೆ ಈ ದೆವ್ವದ ಕತೆ ಕಟ್ಟಿದ್ದಾರೆ' ಎಂದು ಹೊರಗೆ ಬರುವಷ್ಟರಲ್ಲಿ ಊರಿನ ಜನರೆಲ್ಲಾ ಕಾತುರದಿಂದ ಹೊರಗೆ ಜಮಾಯಿಸಿದ್ದರು. 'ಏ ಹುಡುಗರಾ, ನಿಮ್ಗೇನಾದ್ರೂ ಭಯ ಭಕ್ತಿ ಇದ್ಯಾ? ಒಳಗೆ ಏನಾರ ಆಗಿದ್ರೆ ನಿಮ್ಮ ಗತಿ ಏನು?' ಮುಂತಾಗಿ ಬೈದು ಇನ್ನೆಂದೂ ಈ ದೇವಸ್ಥಾನದೊಳಗೆ ಕಾಲಿಡಕೂಡದೆಂದು ಊರಿನ ದೊಡ್ಡಗೌಡರು ಆದೇಶ ನೀಡಿದರು. 


    ಅಂದಿನಿAದ ಇಂದಿನವರೆಗೂ ಈ ದೇವಸ್ಥಾನ ಅದೇ ಸ್ಥಿತಿಯಲ್ಲಿದೆ. ದೆವ್ವವಿಲ್ಲವೆಂದು ಖಾತ್ರಿಯಾದ ಮೇಲೆ ಊರಿನ ಜನರೂ ದೇವಸ್ಥಾನದ ಒಳಗೆ ಹೋಗಿ, ಅಲ್ಲಿ ಏನಿದೆ ಎಂದು ತಿಳಿಯುವ ಪ್ರಯತ್ನ ಮಾಡಿದ್ದಾರೆ. ನಾವು ಕೆಲವು ಶಾಲಾ ಹುಡುಗರು ಬಣ್ಣದ ಸೀಮೆಸುಣ್ಣವನ್ನು ಮುಖಕ್ಕೆ ಬಳಿದುಕೊಂಡು ದೇವಸ್ಥಾನದ ಮುಂಭಾಗದಲ್ಲಿ ನಾಟಕದ ಪ್ರಾಕ್ಟೀಸನ್ನು ಮಾಡಿ ಒಂದು ದಿನ ದೇವಿ ಮಹಾತ್ಮೆ ನಾಟಕದ ಕೆಲವು ತುಣುಕುಗಳನ್ನು ಆಡಿ ಊರಿನ ಜನರಿಗೆ ತೋರಿಸಿದ್ದೆವು. ಇವೆಲ್ಲ ಬಾಲ್ಯದ ಅನುಭವಗಳು ನನ್ನ ನೆನಪಿನ ಭಂಡಾರದಲ್ಲಿ ಸ್ಥಾಯಿಯಾಗಿವೆ. ಆಗಾಗ ನೆನಪಿಗೆ ಬಂದು ಮುದಗೊಳಿಸುತ್ತಿವೆ.


(ಮುಂದಿನ ‘ಕಿನ್ನರಿ’ಗೆ)


1 ತಿಪ್ಪನಹಳ್ಳಿಯಲ್ಲಿ ನಾವು ಕಟ್ಟಿಸಿದ ಚೌಡೇಶ್ವರಿ ದೇವಸ್ಥಾನ

2 ನಮ್ಮೂರಿನ ಪಾಳು ಬಿದ್ದ ಕಂಬದ ರಂಗಯ್ಯನ ದೇವಸ್ಥಾನ