ʼSIRʼ ನಲ್ಲಿ ಎಲ್ಲವೂ ಸರಿ ಇದೆಯೇ? ಕರ್ನಾಟಕದ ಪ್ರಶ್ನೆ

ಪ್ರಜಾಪ್ರಭುತ್ವದ ತಳಪಾಯವನ್ನೇ ಕೆಡವಿಹಾಕುತ್ತಿರುವ ಮತದಾರಪಟ್ಟಿ ಪರಿಷ್ಕರಣೆಯ ಪ್ರಕ್ರಿಯೆ

ʼSIRʼ ನಲ್ಲಿ ಎಲ್ಲವೂ ಸರಿ ಇದೆಯೇ? ಕರ್ನಾಟಕದ ಪ್ರಶ್ನೆ

 ವರ್ತಮಾನ

ನಾ ದಿವಾಕರ

 

     ಭಾರತೀಯ ಪ್ರಜಾತಂತ್ರ ಎಲ್ಲಿಂದ ಎಲ್ಲಿಗೆ ಬಂದು ತಲುಪಿದೆ ? ವಸಾಹತು ಆಳ್ವಿಕೆಯಲ್ಲಿ , 1947ರ ಹೊಸ್ತಿಲಲ್ಲೂ ಸಹ ಶೇಕಡಾ 13ರಷ್ಟು ಭಾರತೀಯರು ಮಾತ್ರ ಮತದಾನದ ಹಕ್ಕು ಹೊಂದಿದ್ದರು. ಸಂವಿಧಾನ ರಚನೆಯ ಸಂದರ್ಭದಲ್ಲಿ ಮತ್ತು 1950ರಲ್ಲಿ ಭಾರತವನ್ನು ಗಣತಂತ್ರ ಎಂದು ಘೋಷಿಸಿ ಸಂವಿಧಾನವನ್ನು ಅರ್ಪಿಸಿಕೊಂಡ ಸಂದರ್ಭದಲ್ಲಿ ಈ ಭಾರೀ ಪ್ರಮಾಣದ ವ್ಯತ್ಯಯವನ್ನು ಸರಿಪಡಿಸುವುದು  ಸ್ವತಂತ್ರ ಭಾರತದ ಪ್ರಥಮ ಆದ್ಯತೆಯಾಗಿತ್ತು. 1951-52ರ ಅವಧಿಯಲ್ಲಿ ನಡೆದ ಭಾರತದ ಮೊದಲ ಸಾರ್ವತ್ರಿಕ ಚುನಾವಣೆಯು ಆಧುನಿಕ ಇತಿಹಾಸದಲ್ಲಿ ಅತ್ಯಂತ ಪ್ರಮುಖವಾದ ಪ್ರಜಾಪ್ರಭುತ್ವೀಯ ಹೆಜ್ಜೆಯಾಗಿತ್ತು.  ಈ ಚುನಾವಣೆಗಳಲ್ಲಿ 21 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರಿಗೆ ಸಾರ್ವತ್ರಿಕ ವಯಸ್ಕ ಮತದಾನವನ್ನು   ( ಯೂನಿವರ್ಸಲ್‌ ಅಡಲ್ಟ್‌ ಫ್ರಾಂಚೈಸ್‌ ) ಅಳವಡಿಸುವ ಮೂಲಕ  ನವ ಭಾರತದ 17.32 ಕೋಟಿ ಪ್ರಜೆಗಳಿಗೆ ಮತದಾನದ ಹಕ್ಕನ್ನು ಕಲ್ಪಿಸಲಾಗಿತ್ತು. ಭಾರತ ಈ ಕಾರಣದಿಂದಾಗಿಯೇ ವಿಶ್ವದ ಅತಿದೊಡ್ಡ ಪ್ರಜಾತಂತ್ರ ರಾಷ್ಟ್ರವಾಗಿ ಗುರುತಿಸಿಕೊಂಡಿತ್ತು.

 

     ಡಾ. ಬಿ.ಆರ್.‌ ಅಂಬೇಡ್ಕರ್‌ ಅವರನ್ನೂ ಒಳಗೊಂಡಂತೆ, ಭಾರತೀಯ ಸಂವಿಧಾನದ ಅನುಷ್ಠಾನಕ್ಕೆ ಕಾರಣರಾದ ಸ್ವಾತಂತ್ರ್ಯಫೂರ್ವದ ಎಲ್ಲ ನಾಯಕರು ʼ ಎಲ್ಲರನ್ನೂ ಒಳಗೊಳ್ಳುವ ʼ  ಸಂಸದೀಯ ಪ್ರಜಾಪ್ರಭುತ್ವವನ್ನು ಅನುಮೋದಿಸಿದ್ದರು. ಇಲ್ಲಿ ಒಳಗೊಳ್ಳುವುದು ಎಂದರೆ ಕೇವಲ ಭೌಗೋಳಿಕ ಪ್ರದೇಶದಲ್ಲಿ ಬದುಕು ಸವೆಸುವ ಅವಕಾಶ ಮಾತ್ರ ಆಗಿರಲಿಲ್ಲ. ದೇಶದ ಪ್ರಜಾತಾಂತ್ರಿಕ ಆಳ್ವಿಕೆಯನ್ನು ಹಾಗೂ ಸಾರ್ವಭೌಮ ಅಸ್ತಿತ್ವವನ್ನು ಕಾಪಾಡಿಕೊಂಡು ಮುನ್ನಡೆಸುವ ಹಾದಿಯಲ್ಲಿ ತಮ್ಮ ಬೌದ್ಧಿಕ, ದೈಹಿಕ ಹಾಗೂ ಮಾನಸಿಕ ಶ್ರಮದ ವ್ಯಯ ಮಾಡಿ ದೇಶದ ಸಮೃದ್ಧಿ ಮತ್ತು ಏಳಿಗೆಗೆ ಕಾರಣವಾಗುವ ಪ್ರತಿಯೊಬ್ಬ ನಾಗರಿಕರನ್ನೂ ಒಳಗೊಳ್ಳುವುದಾಗಿತ್ತು. ಈ ನಾಗರಿಕರಲ್ಲಿ ಭಾರತೀಯತೆಯ ಅಸ್ಮಿತೆಯನ್ನು, ಹೆಮ್ಮೆಯನ್ನು ಸೃಷ್ಟಿಸುವ ಒಂದು ವಿಧಾನ ವಯಸ್ಕ ಮತದಾನ ಪದ್ಧತಿಯಾಗಿತ್ತು.

 

    ಆರಂಭದ ದಿನಗಳಿಂದಲೂ ಭಾರತದ ಯಾವುದೇ ಚುನಾವಣೆಗಳಲ್ಲಿ ಪ್ರತಿಶತ ಮತಚಲಾವಣೆ ಆಗಿಲ್ಲ. ಇದು ಪ್ರಜಾಪ್ರಭುತ್ವದ ಲಕ್ಷಣ ಮತ್ತು ಸೌಂದರ್ಯ. ನಾಗರಿಕರಿಗೆ ತಮ್ಮ ಮತ ಚಲಾಯಿಸುವ ಹಕ್ಕು ಇರುವಂತೆಯೇ, ಮತ ನೀಡುವಲ್ಲಿ ಆಯ್ಕೆಯ ಹಕ್ಕು ಸಹ ಇರುತ್ತದೆ. ಹಾಗಾಗಿ ʼ ಮತದಾರರು ʼ (ಓಟರ್ಸ್‌ )  ಎಂದರೆ ಚುನಾವಣಾ ಮತದಾರ ಪಟ್ಟಿಯಲ್ಲಿ ಇರುವವರೆಲ್ಲರನ್ನೂ ಒಳಗೊಂಡಂತಾಗುತ್ತದೆ. ಸಾಂವಿಧಾನಿಕ ದೃಷ್ಟಿಯಿಂದ ನೋಡಿದಾಗ, ಇದು ಪ್ರಜಾಪ್ರಭುತ್ವವನ್ನು ಬಲಪಡಿಸುವ ಒಂದು ಸಾಧನವಾಗಿ ಕಾಣುತ್ತದೆ. ಈ ವಿಶಾಲ ಕಲ್ಪನೆಯೇ ಭಾರತದ ಪ್ರಜಾತಂತ್ರವನ್ನು ಎಂಟು ದಶಕಗಳ ಕಾಲ ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ. 2047ರ ವಿಕಸಿತ ಭಾರತ ಈ ಅಮೂಲ್ಯ ಶ್ರಮವನ್ನು ವ್ಯರ್ಥಗೊಳಿಸಕೂಡದು.

 

ವಲಸೆ ಕಾರ್ಮಿಕರ ಅಕ್ರಮ-ಸಕ್ರಮ

 

     ಆದರೆ ಕೇಂದ್ರ ಸರ್ಕಾರ-ಚುನಾವಣಾ ಆಯೋಗ ಜಾರಿಗೊಳಿಸಿರುವ ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (‌ ಎಸ್‌ಐಆರ್) ಈ ಸಾಂವಿಧಾನಿಕ ಆಶಯದ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದೆ. ಮತದಾರರ ಪಟ್ಟಿಯಲ್ಲಿ ದಾಖಲೆಗಳ ಸಮೇತ ಇರಬಹುದಾದ ಅಕ್ರಮ ನಸುಳುಕೋರವ ವಲಸಿಗರನ್ನು ಗುರುತಿಸಿ ಹೊರಹಾಕುವ ಉದ್ದೇಶದಿಂದ ಈ ವಿಶೇಷ ಪರಿಷ್ಕರಣೆಯನ್ನು ಕೈಗೊಳ್ಳಲಾಗಿದೆ. ಇಂಥವರ ಸಂಖ್ಯೆ ಎಷ್ಟೇ ಇದ್ದರೂ, ಅವರ ತಾಯ್ನಾಡಿಗೆ ವಾಪಸ್‌ ಕಳಿಸುವುದರಲ್ಲಿ ತಪ್ಪೇನಿಲ್ಲ. ಆದರೆ ಈ ನುಸುಳುಕೋರರನ್ನು ಅಥವಾ ವಲಸಿಗರನ್ನು ಧಾರ್ಮಿಕ/ಮತೀಯ ದೃಷ್ಟಿಯಿಂದ ನೋಡದೆ, ನಾಗರಿಕ ದೃಷ್ಟಿಕೋನದಿಂದ ನೋಡಿ, ವ್ಯಕ್ತಿ ಘನತೆಯನ್ನು ಘಾಸಿಗೊಳಿಸದೆ ಅವರನ್ನು ಸ್ವದೇಶಕ್ಕೆ ರವಾನಿಸುವುದು ಪ್ರಜಾತಂತ್ರದ ಲಕ್ಷಣ.

 

     ಇತ್ತೀಚೆಗೆ ಕರ್ನಾಟಕ ಸರ್ಕಾರ 1,000 ಅಕ್ರಮ ವಲಸಿಗರನ್ನು ಗುರುತಿಸಿ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿದೆ. ಇವರೆಲ್ಲರೂ ನೂರಕ್ಕೆ ನೂರರಷ್ಟು ಶ್ರಮಿಕ ವರ್ಗಕ್ಕೆ ಸೇರಿರುತ್ತಾರೆ. ಸಾವಿರಾರು ಕಿಲೋಮೀಟರ್‌ ದೂರದಿಂದ ತಮ್ಮದಲ್ಲದ‌ ದೇಶಕ್ಕೆ‌ ಕೂಲಿಗಾಗಿ, ಬದುಕು ಕಟ್ಟಿಕೊಳ್ಳುವ ಸಲುವಾಗಿ ಬರುವ ಇಂತಹ ಕಾರ್ಮಿಕರು ಸ್ವಯಂಪ್ರೇರಿತರಾಗಿ ಬರುವ ಸಾಧ್ಯತೆಗಳು ಕನಿಷ್ಠ ಎನ್ನಬಹುದು. ಏಕೆಂದರೆ ಬಂಡವಾಳಶಾಹಿ ಮಾರುಕಟ್ಟೆ ವ್ಯವಸ್ಥೆಯಲ್ಲಿ ಬಂಡವಾಳಶಾಹಿ ಉದ್ಯಮಿಗಳು, ಗುತ್ತಿಗೆದಾರರು ಈ ಶ್ರಮಿಕರನ್ನು ಅಗ್ಗದ ಕೂಲಿಕಾರರಾಗಿ ಗುರುತಿಸಿ ಕರೆತಂದಿರುತ್ತಾರೆ ಈ ಜನಸಂಖ್ಯೆಯನ್ನು ಐಷಾರಾಮಿ ಬಡಾವಣೆಗಳಲ್ಲಿ  , ಗಗನ ಚುಂಬಿ ವಸತಿ ಸಮುಚ್ಛಯಗಳಲ್ಲಿ ಕಾಣಲಾಗುವುದಿಲ್ಲ.

 

     ಮೇಲ್ವರ್ಗಗಳ ಇಂತಹ ಸಿರಿವಂತ ಜಗತ್ತಿನಲ್ಲಿ ಕಟ್ಟಡಗಳು, ಮೂಲ ಸೌಕರ್ಯಗಳು , ರಸ್ತೆ-ಹೆದ್ದಾರಿಗಳು ಮತ್ತು ವಸತಿಗಳನ್ನು ನಿರ್ಮಿಸುವಲ್ಲಿ ಇವರ ಶ್ರಮ ಮತ್ತು ಬೆವರು ವ್ಯಯವಾಗಿರುತ್ತದೆ. ಈ ನಿರ್ಮಾಣಗಳನ್ನು ವಹಿಸಿಕೊಳ್ಳುವ ಬಂಡವಾಳಶಾಹಿಗಳಿಗೆ ವಲಸೆ ಕಾರ್ಮಿಕರು ಅಗ್ಗದ ಕೂಲಿಯ  ಸರಕುಗಳಾಗಿ ಕಾಣುತ್ತಾರೆ. ಕೆಲವೊಮ್ಮೆ ಕುಟುಂಬ ಸಮೇತರಾಗಿ ಬಂದು ಇಲ್ಲಿ ನೆಲೆಸುವ ಕಾರ್ಮಿಕರೂ ಇರುತ್ತಾರೆ. ಇನ್ನು ಕೆಲವರು ಸಂಸಾರಗಳನ್ನು ಬಿಟ್ಟು ದುಡಿಮೆಗಾಗಿ ಬಂದಿರುತ್ತಾರೆ. ಇಂತಹ ಲಕ್ಷಾಂತರ ಕಾರ್ಮಿಕರು, ದಾಖಲೆಗಳನ್ನು ಪಡೆದುಕೊಂಡು, ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗುವುದಿಲ್ಲ.

 

    ಹಲವು ವರ್ಷಗಳ ಹಿಂದೆ ಕರ್ನಾಟಕದಲ್ಲಿ ಅಸ್ಸಾಂನಿಂದ ಬಂದಿದ್ದ ಸಾವಿರಾರು ವಲಸೆ ಕಾರ್ಮಿಕರ ವಿರುದ್ಧ ಸಾರ್ವಜನಿಕ ಆಕ್ರೋಶ ತೀವ್ರವಾಗಿದ್ದುದನ್ನು ಇಲ್ಲಿ ಸ್ಮರಿಸಬಹುದು. ಭಾರತದಲ್ಲೇ ಇದಕ್ಕೆ ಸ್ಪಷ್ಟ ಉದಾಹರಣೆಯನ್ನು ಮಹಾರಾಷ್ಟ್ರದಲ್ಲಿ ಈಗಲೂ ಗುರುತಿಸಬಹುದು. ಇದು ಬಂಡವಾಳಶಾಹಿ ವ್ಯವಸ್ಥೆ ತನ್ನ ಬೆಳವಣಿಗೆಗಾಗಿ ಸೃಷ್ಟಿಸುವ ಒಂದು ವಿಷವೃತ್ತ. ಇದಕ್ಕೆ ಬಲಿಯಾಗುವುದು ಸ್ಥಳೀಯ-ವಲಸೆ ಶ್ರಮಿಕ ಸಮುದಾಯವೇ . ಹೊರದೇಶದವರಾಗಲೀ, ಹೊರರಾಜ್ಯದವರಾಗಲೀ ಇಂತಹ ಅಕ್ರಮ-ಸಕ್ರಮ ವಲಸಿಗರನ್ನು ಹೊರಹಾಕಲು ಬಯಸುವ (ರಾಜಕೀಯವಾಗಿ ದ್ವೇಷಿಸುವ) ಗಣ್ಯ-ಮೇಲ್ಪದರ ಸಮಾಜಗಳು ಅವರಿಂದ ನಿರ್ಮಿಸಲ್ಪಟ್ಟ ಕಟ್ಟಡಗಳನ್ನು, ಮನೆಗಳ ಒಳಾಂಗಣದ ಐಷಾರಾಮಿ ಸೌಕರ್ಯಗಳನ್ನು ಕೆಡವಿಹಾಕುವ ಆಲೋಚನೆಯನ್ನೇನೂ ಮಾಡುವುದಿಲ್ಲ. ಅಥವಾ ಈ ವಲಸಿಗರು ಹೊಲಿದ ಹೊಸ ವಿನ್ಯಾಸದ ಉಡುಪುಗಳನ್ನು ಸುಟ್ಟುಹಾಕುವುದೂ ಇಲ್ಲ. (ಸ್ವದೇಶ ಪ್ರೀತಿಯೂ ಸಹ ಸರಕೀಕರಣಕ್ಕೊಳಗಾಗಿರುವ ಸೂಚನೆ ಇದು)

 

     ಭಾರತೀಯ ಚುನಾವಣಾ ಆಯೋಗ ಜಾರಿಗೊಳಿಸಿರುವ ಎಸ್‌ಐಆರ್‌ ಪ್ರಕ್ರಿಯೆ, ಹೊರದೇಶಗಳಿಂದ ಅಕ್ರಮವಾಗಿ ಭಾರತಕ್ಕೆ ಬಂದು, ಇಲ್ಲಿನ ದಾಖಲೆಗಳನ್ನು ಪಡೆದು, ಮತದಾರರ ಪಟ್ಟಿಯಲ್ಲಿ ಜಾಗ ಗಳಿಸಿರುವ ಜನಸಂಖ್ಯೆಯನ್ನು ಹೊರಹಾಕುವ ಉದ್ದೇಶದಿಂದ ಕೂಡಿದೆ. ವಿಡಂಬನೆ ಎಂದರೆ ಈ ಪ್ರಕ್ರಿಯೆ ಆರಂಭವಾಗಿ, ಹಲವಾರು ರಾಜ್ಯಗಳಲ್ಲಿ ಪೂರ್ಣಗೊಂಡಿದ್ದರೂ ಈವರೆಗೆ ಎಷ್ಟು ಅಕ್ರಮ ವಿದೇಶಿ ವಲಸಿಗರನ್ನು ಗುರುತಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಬಿಹಾರ ಮತ್ತು ಪಶ್ಚಿಮ ಬಂಗಾಲದಲ್ಲೂ ಈ ಸಂಖ್ಯೆಯನ್ನು ಬಹಿರಂಗಪಡಿಸಿಲ್ಲ. ಕರ್ನಾಟಕದಲ್ಲಿ 20 ಲಕ್ಷಕ್ಕೂ ಹೆಚ್ಚು ಅಕ್ರಮ ನುಸುಳುಕೋರರು (ಘುಸ್‌ಭೈಟಿಯಾ) ಇದ್ದಾರೆ ಎಂದು ಹುಯಿಲೆಬ್ಬಿಸಿದ್ದ ಬಿಜೆಪಿ, ಕರಡು ಪಟ್ಟಿಯ ಪ್ರಕಟಣೆಯ ನಂತರ ಮೌನವಾಗಿದೆ. ಏಕೆಂದರೆ ಹಲವಾರು ಕ್ಷೇತ್ರಗಳಲ್ಲಿ ಹಿಂದೂಗಳೇ ಈ ಪಟ್ಟಿಯಿಂದ ಹೊರಗುಳಿದಿದ್ದಾರೆ.

 

ಅಳಿಸಲ್ಪಟ್ಟಿರುವ ಮತದಾರರು: (ದ ಹಿಂದೂ ವರದಿ : https://www.pressreader.com/india/the-hindu-mumbai-9wwd/20260826/281758456140513?srsltid=AfmBOopR9CLbaHBeWb7b-n8J-m3Ew1KDJbCcnLeNIRwc6KUltvZ5hq73 )

 

     ಕರ್ನಾಟಕದಲ್ಲಿ ಎಸ್‌ಐಆರ್‌ ಪ್ರಕ್ರಿಯೆಯ ಮೊದಲ ಹಂತ ಪೂರ್ತಿಯಾಗಿದ್ದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಇತರ ದೊಡ್ಡ ರಾಜ್ಯಗಳಿಗೆ ಹೋಲಿಸಿದರೆ ಅತಿ ಹೆಚ್ಚು ಮತದಾರರ ಹೆಸರುಗಳು ಅಳಿಸಿಹೋಗಿರುವುದಾಗಿ ವರದಿಯಾಗಿದೆ. 224 ವಿಧಾನಸಭಾ ಕ್ಷೇತ್ರಗಳಿರುವ ರಾಜ್ಯದಲ್ಲಿ 1.08 ಕೋಟಿ ಮತದಾರರು, ಶೇಕಡಾ 19.5ರಷ್ಟು, ಹೊರಗುಳಿದಿದ್ದಾರೆ. ( 5.13 ಕೋಟಿಯಿಂದ ಮತದಾರರ ಸಂಖ್ಯೆ 4.46 ಕೋಟಿಗೆ ಕುಸಿದಿದೆ). ಅಂದರೆ ಐವರಲ್ಲಿ ಒಬ್ಬರು ಮತವಂಚಿತ ವರ್ಗಕ್ಕೆ ಸೇರಿದ್ದಾರೆ. ಪಕ್ಕದ ತೆಲಂಗಾಣದಲ್ಲಿ ಶೇಕಡಾ 21.7ರಷ್ಟು ಮತದಾರರು ಹೊರಗುಳಿದಿದ್ದಾರೆ. ಪ್ರತಿಯೊಂದು ಮತದಾರರ ಪರಿಷ್ಕರಣೆಯಲ್ಲೂ ಒಟ್ಟು ಮತದಾರರಿಗೆ 18 ವರ್ಷ ಮೇಲ್ಪಟ್ಟವರ ಅನುಪಾತದ ಮಾಹಿತಿಯನ್ನು ಒದಗಿಸುವುದು ಕಡ್ಡಾಯವಾಗಿದ್ದರೂ, ಈವರೆಗಿನ ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಆಯೋಗ ಈ ಮಾಹಿತಿಯನ್ನು ಒದಗಿಸಿಲ್ಲ. ಈ ಮಾಹಿತಿಯನ್ನು ಒದಗಿಸಿದರೆ ಹೆಚ್ಚಿನ ಅಥವಾ ಕಡಿಮೆಯಾದ ನೋಂದಣಿಯ ಸಂಖ್ಯೆಯು ತಿಳಿಯುತ್ತದೆ.

 

     ಮತದಾನದ ಅರ್ಹತೆಯನ್ನು ಹೊಂದಿರಬಹುದಾದ ಸಂಭಾವ್ಯ ಸಂಖ್ಯೆಯ ದೃಷ್ಟಿಯಿಂದ ನೋಡಿದರೂ 67 ಲಕ್ಷ ಮತದಾರರು ಕಡಿಮೆಯಾಗಿರುವಂತೆ ತೋರುತ್ತದೆ. ಈ ಪೈಕಿ 44 ಲಕ್ಷ ಜನರಿಗೆ ಆಯೋಗವು ನೋಟಿಸ್ ಜಾರಿಮಾಡಿದೆ. ಬೆಂಗಳೂರಿನ ಬೊಮ್ಮನಹಳ್ಳಿ, ದಾಸರಹಳ್ಳಿ, ಬಿಟಿಎಂ ಬಡಾವಣೆ, ವಿಜಯನಗರ ಮತ್ತು ಸಿ.ವಿ. ರಾಮನ್‌ ಬಡಾವಣೆಗಳಲ್ಲಿ ಶೇಕಡಾ  50ಕ್ಕಿಂತಲೂ ಹೆಚ್ಚು ಮತದಾರರ ಹೆಸರು ಮರೆಯಾಗಿದೆ. ಬೇರಾವುದೇ ರಾಜ್ಯದಲ್ಲಿ ವಿಧಾನಸಭಾ ಕ್ಷೇತ್ರಗಳು ಈ ಪ್ರಮಾಣದ ಅಳಿಸುವಿಕೆಯನ್ನು ಕಂಡಿಲ್ಲ.  ಮರೆಯಾಗಿರುವ 1.08 ಕೋಟಿ ಮತದಾರರ ಪೈಕಿ ಶೇಕಡಾ 50ರಷ್ಟು 36 ವಿಧಾನಸಭಾ ಕ್ಷೇತ್ರಗಳಲ್ಲಿ ಗುರುತಿಸಲಾಗಿದೆ. ಇದರ ಪೈಕಿ 28 ಕ್ಷೇತ್ರಗಳು ಬೆಂಗಳೂರಿನಲ್ಲೇ ಇದೆ. ಅತಿಹೆಚ್ಚು ನಗರೀಕರಣಕ್ಕೊಳಗಾಗಿರುವ 29 ಜಿಲ್ಲೆಗಳಲ್ಲಿ ಶೇಕಡಾ 41.5ರಷ್ಟು ಮತದಾರರ ಹೆಸರುಗಳು ಮರೆಯಾಗಿವೆ. ಈ ಆಘಾತಕಾರಿ ಮಾಹಿತಿಗಳು ಎಸ್‌ಐಆರ್‌ ಪ್ರಕ್ರಿಯೆಯ ಪಾರದರ್ಶಕತೆಯನ್ನೇ ಅನುಮಾನಕ್ಕೀಡುಮಾಡಿದೆ. ಈ ವ್ಯತ್ಯಯಗಳಿಗೆ “ ಸ್ಥಳಾಂತರಗೊಂಡ-ಗೈರುಹಾಜರಾದ ” (Shifted & Absent)  ಎಂಬ ನಿಯಮವನ್ನು ಅನಿಯಂತ್ರಿತವಾಗಿ ಅಳವಡಿಸಿರುವುದೇ ಕಾರಣ ಎಂದು ಚುನಾವಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. (https://www.thehindu.com/data/deletions-in-recent-sirs-suggest-arbitrary-application-of-reasons/article71396158.ece )

 

ಅವಕಾಶವಂಚಿತರೇ ಮತವಂಚಿತರಾಗುವರೇ ?

 

     ಈ ಮಾಹಿತಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಮತದಾರರ ಪಟ್ಟಿಯಿಂದ ಹೊರಗುಳಿದವರ ಪೈಕಿ ಕರ್ನಾಟಕದಲ್ಲೇ ಬಹಳ ವರ್ಷಗಳಿಂದ ನೆಲೆಸಿರುವ ಹೊರರಾಜ್ಯಗಳ ವಲಸೆ ಕಾರ್ಮಿಕರು, ಆದಿವಾಸಿ-ಬುಡಕಟ್ಟು ಸಮುದಾಯಗಳ ಸದಸ್ಯರು ಮತ್ತು ಇವರ ಪೈಕಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಇರುವ ಶಂಕೆ ವ್ಯಕ್ತವಾಗುತ್ತಿದೆ. ಇದು ಅತಿಶಯವೇನಲ್ಲ. ಏಕೆಂದರೆ ಈ ಸಮುದಾಯಗಳಲ್ಲಿ ಚುನಾವಣಾ ಆಯೋಗ ಸೂಚಿಸಿರುವ ಸೂಕ್ತ ದಾಖಲೆಗಳನ್ನು ಒದಗಿಸಲು ಸಾಧ್ಯವಾಗದವರ ಸಂಖ್ಯೆ ಹೆಚ್ಚಿದೆ. ಚುನಾವಣಾ ಆಯೋಗ ನಮೂದಿಸಿರುವ ಅವಶ್ಯ ದಾಖಲೆಗಳಲ್ಲಿ ಹಲವು ಈ ಸಮುದಾಯಗಳ ಜನರಿಗೆ ದಕ್ಕುವುದೇ ಕಷ್ಟಕರವಾದ ಪರಿಸ್ಥಿತಿ ಇದೆ.

 

      ಒಂದು ವೇಳೆ ಈ ಜನರು ದಶಕಗಳಿಂದ ಕರ್ನಾಟಕದಲ್ಲೇ ನೆಲೆಸಿದ್ದು, ಇಲ್ಲಿನ ಆರ್ಥಿಕ ಬೆಳವಣಿಗೆಗೆ ತಮ್ಮ ಬೆವರಿನ ದುಡಿಮೆಯನ್ನು ವ್ಯಯಿಸಿದ್ದು, ನಾಡಿನ ಸಮಾಜ ಮತ್ತು ಸಂಸ್ಕೃತಿಯಲ್ಲಿ ಬೆರೆತು ವಾಸಿಸುತ್ತಿರುವವರಾದರೆ ಅವರನ್ನು ಕೇವಲ ದಾಖಲೆಗಳಿಲ್ಲ ಎಂಬ ಕಾರಣಕ್ಕೆ ಮತವಂಚಿತರನ್ನಾಗಿ ಮಾಡಲು ಸಾಧ್ಯವೇ ? ಬಹುಶಃ ಈ ಪ್ರಶ್ನೆ ಭಾರತದ ಬಹುತೇಕ ರಾಜ್ಯಗಳಲ್ಲಿ, ಮಣಿಪುರದಿಂದ ಕರ್ನಾಟಕದವರೆಗೂ ಧ್ವನಿಸುತ್ತದೆ. ಬುಡಕಟ್ಟು ಸಮುದಾಯಗಳು ಹೆಚ್ಚಿನ ಸಂಖ್ಯೆಯಲ್ಲಿರುವ ರಾಜ್ಯಗಳಲ್ಲಿ ಇದು ಜಟಿಲ ಸಿಕ್ಕುಗಳನ್ನು ಸೃಷ್ಟಿಸುತ್ತದೆ. ಈ ದೇಶದ ಮೂಲ ನಿವಾಸಿಗಳೆಂದೇ ಪರಿಗಣಿಸಲ್ಪಡುವ ಸಮುದಾಯಗಳು ಮತವಂಚಿತರಾಗುವುದು ಪ್ರಜಾಪ್ರಭುತ್ವವನ್ನೇ ಅಣಕಿಸಿದಂತಾಗುತ್ತದೆ.

 

     ಈ ಜನಸಮುದಾಯಗಳಲ್ಲೇ ಅತಿ ಹೆಚ್ಚಿನ ಪ್ರಮಾಣದ ಅವಕಾಶವಂಚಿತರೂ, ಅಂಚಿಗೆ ತಳ್ಳಲ್ಪಟ್ಟವರೂ, ಸಾಂವಿಧಾನಿಕ ಸೌಲಭ್ಯ ವಂಚಿತರೂ ಇರುವುದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ಇತ್ತೀಚೆಗೆ ಕರ್ನಾಟಕದ ಒಳಮೀಸಲಾತಿ ಹೋರಾಟದ ಸಂದರ್ಭದಲ್ಲೇ, ವಂಚಿತ ಅಲೆಮಾರಿ ಸಮುದಾಯಗಳು ತಮ್ಮ ಹಕ್ಕೊತ್ತಾಯಗಳಿಗಾಗಿ ಹೋರಾಟನಿರತರಾಗಿದ್ದಾರೆ. ಕೆಳಸ್ತರದ ಸಮಾಜಗಳಲ್ಲಿ ಆಧುನಿಕ ಸೌಲಭ್ಯ, ಸೌಕರ್ಯಗಳಿಂದ ಹೊರತಾಗಿರುವ ಲಕ್ಷಾಂತರ ಜನರು ಮತವಂಚಿತರಾಗುವ ಸಾಧ್ಯತೆಗಳಿವೆ. ಈ ನಾಡಿನ ಮಣ್ಣಿನಲ್ಲೇ ಬೆವರು ಸುರಿಸಿ ದುಡಿದು, ದೇಶದ ಅಭಿವೃದ್ಧಿ-ಸಮೃದ್ಧಿಗೆ ಕೊಡುಗೆ ಸಲ್ಲಿಸಿರುವ ಶ್ರಮಿಕರು, ಬಡ ಜನರು, ಮಹಿಳೆಯರು ಮತದಾನ ವ್ಯವಸ್ಥೆಯಲ್ಲಿ ಕಡೆಗಣಿಸಲ್ಪಡುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಶೋಭೆ ತರುವುದಿಲ್ಲ. ಈ ದೃಷ್ಟಿಯಿಂದ ನೋಡಿದಾಗ ಚುನಾವಣಾ ಆಯೋಗ, ಮತದಾರ ನೋಂದಣಿಗೆ/ಮರುನೋಂದಣಿಗೆ ಅಗತ್ಯವಾದ ದಾಖಲೆಗಳನ್ನು ಪುನರ್‌ ಪರಿಶೀಲಿಸುವುದು ಸೂಕ್ತ.

 

ಸಾಂವಿಧಾನಿಕ ಚೌಕಟ್ಟಿನಲ್ಲಿ ಎಸ್‌ಐಆರ್‌

 

    ಮೂಲತಃ ಭಾರತೀಯ ಚುನಾವಣಾ ಆಯೋಗ ಇಷ್ಟು ಅವಸರದಲ್ಲಿ ಎಸ್‌ಐಆರ್‌ ಪ್ರಕ್ರಿಯೆಗೆ ಚಾಲನೆ ನೀಡಿರುವುದರ ಔಚಿತ್ಯವೇ ಪ್ರಶ್ನಾರ್ಹವಾಗಿದೆ. ಸುಪ್ರೀಂಕೋರ್ಟ್‌ ಮಾನ್ಯತೆ ನೀಡಿರುವುದರಿಂದ ಪ್ರಶ್ನಿಸಲಾಗುವುದಿಲ್ಲ. ಆದರೆ ಅಕ್ರಮ ಬಾಂಗ್ಲಾ ವಲಸಿಗರನ್ನು ಗುರುತಿಸುವುದೇ ಉದ್ದೇಶವಾಗಿದ್ದಲ್ಲಿ, ಈವರೆಗಿನ ಕರಡು ಮತದಾರರ ಪಟ್ಟಿಯಲ್ಲಿ ಗುರುತಿಸಲ್ಪಟ್ಟ ಅಕ್ರಮ ವಲಸಿಗರ ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕಾಗುತ್ತದೆ. ಮತದಾರರ ಪರಿಷ್ಕರಣೆ ಒಂದು ಸಾಂವಿಧಾನಿಕ ಕ್ರಿಯೆಯಾಗಿದ್ದು, ಪಾರದರ್ಶಕವಾಗಿಯೂ, ನಿಷ್ಪಕ್ಷಪಾತವಾಗಿಯೂ ಇರಬೇಕಾಗುತ್ತದೆ. ದೇಶದ ನಾಗರಿಕರಿಗೆ ಅನುಕೂಲವಾಗುವಂತೆ ಇಡೀ ಪ್ರಕ್ರಿಯೆಯನ್ನು ಪ್ರಜಾಪ್ರಭುತ್ವೀಕರಣಗೊಳಿಸುವುದು ಎಲ್ಲ ರಾಜಕೀಯ ಪಕ್ಷಗಳ ಸಾಂವಿಧಾನಿಕ-ನೈತಿಕ ಕರ್ತವ್ಯ.

 

    ಸುಪ್ರೀಂಕೋರ್ಟ್‌ ಈ ಪ್ರಕ್ರಿಯೆಗೆ ಅಧಿಕೃತ ಮಾನ್ಯತೆ ನೀಡಿರುವುದರಿಂದ, ಎಸ್‌ಐಆರ್‌ ಪ್ರಕ್ರಿಯೆಯನ್ನು ವಿರೋಧಿಸುವುದಕ್ಕಾಗಿಯೇ ಸಾಕಷ್ಟು ಸಮಯ, ಹಣ, ಜನಬೆಂಬಲವನ್ನು ವ್ಯರ್ಥಮಾಡಿದ ನಾಗರಿಕ ಸಂಘಟನೆಗಳೂ ಸಹ , ಸ್ವಲ್ಪ ಮುಂದಾಲೋಚನೆಯಿಂದ ಎಸ್‌ಐಆರ್ ಪ್ರಕ್ರಿಯೆಯ ಪ್ರಜಾಪ್ರಭುತ್ವೀಕರಣಕ್ಕಾಗಿ ಹೋರಾಡಿದ್ದರೆ, ಬಹುಶಃ ಫಲಪ್ರದವಾಗುತ್ತಿತ್ತು. ಈಗಲೂ ಸಾಮಾಜಿಕ ಹೋರಾಟಗಳ ಗುರಿ ಇದೇ ಆಗಬೇಕಿದೆ. ಈವರೆಗೂ ಮತಚಲಾವಣೆ ಮಾಡಿರುವ ಮತ್ತು ಹೊಸದಾಗಿ ಸೇರ್ಪಡೆಯಾಗುವ ಪ್ರಜೆಗಳ ಮತದಾನದ ಹಕ್ಕಿಗೆ ಚ್ಯುತಿಯಾಗದ ರೀತಿಯಲ್ಲಿ ಮತದಾರರ ಪಟ್ಟಿ ಸಿದ್ಧವಾಗುವುದು ಸಾಂವಿಧಾನಿಕ ಕ್ರಮ.

 

ಈ ದಿಕ್ಕಿನಲ್ಲೇ ನಮ್ಮ ಪರ ವಿರೋಧ ಚರ್ಚೆಗಳು ಹೊಸ ಹಾದಿಯಲ್ಲಿ ಸಾಗುವುದು ಅಗತ್ಯ.

-೦-೦-೦-೦-