ವಿದ್ಯಾಬುದ್ಧಿಯ ಚೌಕದಿಂದ ಬೀದಿ ಜಗಳದ ಅಂಗಳಕ್ಕೆ ಗಣದೈವವನ್ನು ಗಣ ವಿಭಜನೆಯ ಅಸ್ತ್ರವನ್ನಾಗಿ ಬಳಸುವ ರಾಜಕೀಯ

ಮೆರವಣಿಗೆಯ ನಡುವೆ ಕೇಳಿಬರುವ ಒಂದು ಕೋಮು ದ್ವೇಷದ ಮಾತು ಹತ್ತಾರು ಗುಡಿಸಲುಗಳನ್ನು ಸುಟ್ಟುಹಾಕಿಬಿಡುತ್ತದೆ. ಈ ಎರಡೂ ಬದಿಯ ಅಪರಾಧಿಗಳಿಗೆ ಸ್ವಬುದ್ಧಿ ಇರುವುದಿಲ್ಲ, ಪ್ರಚೋದಿತರಾಗಿರುತ್ತಾರೆ.  ಈ ಗಲಭೆಗಳಲ್ಲಿ ಏಟು ತಿನ್ನುವವರು, ಗಾಯಗೊಳ್ಳುವವರು, ಜೀವ ಕಳೆದುಕೊಳ್ಳುವವರು, ಮನೆಮಠ ಕಳೆದುಕೊಳ್ಳುವವರು , ಇವರೆಲ್ಲರೂ ಸಮಾಜದ ಹಿತವಲಯದಿಂದ (Comfort Zone) ಹೊರಗಿರುತ್ತಾರೆ. ಜಾತಿ ಶ್ರೇಣಿಯಲ್ಲಿ ಕೆಳಸ್ತರಕ್ಕೆ ಸೇರಿದವರಾಗಿರುತ್ತಾರೆ, ರಾಜಕೀಯದಲ್ಲಿ ಹಿಂಬಾಲಕ-ಕಾಲಾಳುಗಳು-ಕಾವಲು ಪಡೆಗಳಾಗಿರುತ್ತಾರೆ.

ವಿದ್ಯಾಬುದ್ಧಿಯ ಚೌಕದಿಂದ ಬೀದಿ ಜಗಳದ ಅಂಗಳಕ್ಕೆ                                                                                                                                              ಗಣದೈವವನ್ನು ಗಣ ವಿಭಜನೆಯ ಅಸ್ತ್ರವನ್ನಾಗಿ ಬಳಸುವ ರಾಜಕೀಯ

 ವರ್ತಮಾನ

 

ನಾ ದಿವಾಕರ

 

ನಮ್ಮ ಸಮಾಜಕ್ಕೆ ಏನಾಗಿದೆ ? ಈ ಪ್ರಶ್ನೆಗೂ ಮುನ್ನ ಕೇಳಬೇಕಿರುವುದು, ನಮ್ಮ ರಾಜಕೀಯ ಪಕ್ಷಗಳ ಬುದ್ಧಿಗೆ ಇನ್ನೆಂತಹ ಲಕ್ವ ಹೊಡೆದಿದೆ ? ದೈವತ್ವದ ಕಲ್ಪನೆ ಸೃಷ್ಟಿಯಾಗಿರುವುದೇ ಮನುಷ್ಯ ಸಮಾಜದ ಬಳಕೆಗಾಗಿ ಎನ್ನುವುದು ಚಾರಿತ್ರಿಕ ಸತ್ಯ. ತಮ್ಮ ಭಯ, ಆತಂಕ, ಅನಿಶ್ಚಿತತೆ, ಸಂಕಟ, ಸಂಕಷ್ಟ ಇವೆಲ್ಲವನ್ನೂ ನಿವಾರಿಸಿಕೊಳ್ಳಲು ದೇವರ ಮೊರೆ ಹೋಗುವ ಮನುಷ್ಯ ಸಮಾಜಕ್ಕೆ ಶತಮಾನಗಳ ಇತಿಹಾಸ ಇದೆ. ಈ ಚರಿತ್ರೆಯನ್ನು ಪ್ರತಿನಿಧಿಸುವ ಸಾಮಾಜಿಕ ವರ್ಗ ಭಾರತದಲ್ಲಿ ಇನ್ನೂ ಇದೆ, ಆದರೆ ಸಣ್ಣ ಪ್ರಮಾಣದಲ್ಲಿ , ಬಾಹ್ಯ ಜಗತ್ತಿಗೆ ಕಾಣದ ಹಾಗೆ ಗಣಪನನ್ನೂ ಸದ್ಬಳಕೆ ಮಾಡಿಕೊಳ್ಳುತ್ತಾ ಬದುಕು ಸವೆಸುತ್ತಿದೆ.

 

ಮತ್ತೊಂದು ಬದಿಯಲ್ಲಿ ಮೂಲ ದೈವ ಕಲ್ಪನೆಯನ್ನು ಬದಿಗೊತ್ತಿ, ತಮಗೆ ಬೇಕಾದ ರೀತಿಯಲ್ಲಿ ರೂಪಿಸಿಕೊಂಡ ದೈವತ್ವಗಳನ್ನು ವೈಯುಕ್ತಿಕ, ಸಾಂಸ್ಥಿಕ, ಸಾಂಘಿಕ ಉಪಯೋಗಕ್ಕಾಗಿ ಬಳಸಿಕೊಳ್ಳುವ ಸಾಮಾಜಿಕ-ಧಾರ್ಮಿಕ ವರ್ಗವೂ ನಮ್ಮ ನಡುವೆ ಇದೆ. ಈ ವರ್ಗಗಳನ್ನು ಹಿಂದೂ ಧಾರ್ಮಿಕ ಒಗ್ಗಟ್ಟಿನ ಹೆಸರಿನಲ್ಲಿ ಒಂದುಗೂಡಿಸಿದ್ದು ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಬಾಲಗಂಗಾಧರ ತಿಲಕ್‌ . ಬ್ರಿಟೀಷರನ್ನು ವಿರೋಧಿಸಲು ಬಳಸಲಾದ ಹಲವಾರು ಅಸ್ತ್ರಗಳಲ್ಲಿ ಇದೂ ಒಂದಾಗಿತ್ತು ಆದರೆ ಮತೀಯ ಐಕ್ಯತೆಯ ಗುರಿಯನ್ನೂ ಹೊಂದಿತ್ತು. ಈ ಪರಂಪರೆಗೆ ರಾಜಕೀಯ ರೂಪ ನೀಡಿದ್ದು ಸ್ವತಂತ್ರ ಭಾರತದ ಅಧಿಕಾರ ರಾಜಕಾರಣ ಮತ್ತು ಹಿಂದುತ್ವ.

 

ಚಾರಿತ್ರಿಕ ಗಣಪನ ಸಂಸ್ಥಾನ

 

ಈ ಸಮಕಾಲೀನ ಚರಿತ್ರೆ-ರಾಜಕೀಯ ಏನೇ ಇರಲಿ, 1970-80ರ ದಶಕದವರೆಗೂ ತಳಮಟ್ಟದ ಸಮಾಜದಲ್ಲಿ ಗಣಪ ಸಾಮಾನ್ಯ ಜನತೆಯ ಪಾಲಿಗೆ ʼ ಗಣನಾಯಕ ʼ ನೇ ಆಗಿದ್ದುದು ಸತ್ಯ. ತಿಲಕರು ಸ್ಥಾಪಿಸಿದ್ದ ಸಾರ್ವಜನಿಕ ಗಣಪನ ಪರಂಪರೆ ಮಹಾರಾಷ್ಟ್ರದಿಂದಾಚೆಗೆ ಹಬ್ಬಿರಲಿಲ್ಲ. ಊರಿಗೊಂದು ಗಣಪ, ಗಣಪತಿ ದೇವಸ್ಥಾನದ ಆಂಗಳದಲ್ಲೇ ಪೂಜಿಸಲ್ಪಡುತ್ತಿದ್ದ. ಭಕ್ತಿ ಇರುವವರು ಹೋಗುತ್ತಿದ್ದರು. ಉಳಿದಂತೆ ಆಸ್ತಿಕ ಸಮಾಜದಲ್ಲಿ ಗೌರಿ-ಗಣೇಶ ಹಬ್ಬ ಕೌಟುಂಬಿಕ ಸಂಭ್ರಮವಾಗಿ ಆಚರಿಸಲ್ಪಡುತ್ತಿತ್ತು. ವಿಸರ್ಜನೆಯ ದಿನ ಸಾಲು ಸಾಲು  ಗಣಪಗಳು ಮನೆಯಿಂದ ಹೊರಟು ಕೆರೆಯಂಗಳದಲ್ಲಿ ನೆರೆದು, ಸದ್ಭಾವನೆಯ ವಾತಾವರಣದ ನಡುವೆ, ಕೆರೆಯಲ್ಲಿ ಮುಳುಗಿ ಕರಗಿಹೋಗುತ್ತಿದ್ದವು.

 

ರಾಜಕೀಯ ಕೆರೆಯಲ್ಲಿ ಗಣಪ

 

ವಿಶೇಷವಾಗಿ ಗಣೇಶ ಅಥವಾ ಗಣಪ ಶ್ರೀಸಾಮಾನ್ಯರ ಸಾರ್ವಜನಿಕ ಬದುಕಿನಲ್ಲಿ ಪ್ರಕ್ಷುಬ್ಧತೆ ಸೃಷ್ಟಿಸುವ ಕಾಲ್ಪನಿಕ ದೇವರಾಗಿರಲಿಲ್ಲ. ಜಾತಿ ವ್ಯವಸ್ಥೆಯ ಕ್ರೌರ್ಯ ತಾರತಮ್ಯಗಳ ನಡುವೆಯೂ ಎಲ್ಲರನ್ನೊಂದಾಗಿಸುವ ಕಲ್ಪನೆಯಾಗಿದ್ದ. ಭಾರತದಲ್ಲಿ ಕೋಮು ರಾಜಕಾರಣ ಸಾಮಾಜಿಕ ಸ್ವರೂಪ ಪಡೆಯುವ ಮುನ್ನ ಮುಸ್ಲಿಂ-ಅಲ್ಪಸಂಖ್ಯಾತರೂ ಗೌರವದಿಂದ ಕಾಣುವ, ಭಾಗವಹಿಸುವ ಒಂದು ಸಾಮಾಜಿಕ ಅತೀತ ಕಲ್ಪನೆಯಾಗಿದ್ದ. 1960ರ ದಶಕದವರೆಗೂ ಸಾಮಾನ್ಯವಾಗಿ ಊರುಗಳಲ್ಲಿ ರಸ್ತೆಗಳು ರಸ್ತೆಗಳಾಗಿರುತ್ತಿದ್ದವು. ಅದಕ್ಲೊಂದು ಹೆಸರೂ ಇರುತ್ತಿತ್ತು. ಆದರೆ ʼ ಮಸೀದಿ ರಸ್ತೆ ದರ್ಗಾ ರಸ್ತೆ ʼ ಎಂಬ ವರ್ಗೀಕರಣ ಇರಲಿಲ್ಲ. ಮಸೀದಿಗಳ ಎದುರು, ಹಿಂದೆ, ಅಕ್ಕ ಪಕ್ಕದಲ್ಲೇ ಆಸ್ತಿಕರು ಗಣಪನನ್ನು ಪೂಜಿಸುತ್ತಿದ್ದರು. ಮುಸಲ್ಮಾನರು/ಕ್ರೈಸ್ತರು ಅದನ್ನು ಆಸ್ವಾದಿಸುತ್ತಿದ್ದರು.

 

1980ರ ಕೋಮು ರಾಜಕಾರಣ ಇವೆಲ್ಲವನ್ನೂ ರಾಜಕೀಯ ಅಧಿಕಾರ ಎಂಬ ವಿಶಾಲ ಕೆರೆಯಲ್ಲಿ ಒಂದೇ ಏಟಿಗೆ ಮುಳುಗಿಸಿಬಿಟ್ಟಿತು. ಗೋಡೆಗಳ ನಡುವೆ ಇದ್ದ ಗಣೇಶ ಬೀದಿಗೆ ಬರಲಾರಂಭಿಸಿದ ಮೇಲೆ, ಅವನ ಮೂರ್ತಿಯನ್ನು ಕಾಪಾಡುವ ತಾತ್ಕಾಲಿಕ ಬಟ್ಟೆಯ ಗೋಡೆಗಳು ಸೃಷ್ಟಿಯಾದವು . ಮೊದಲು  ಪೆಂಡಾಲ್‌ ಇದ್ದುದು ತದನಂತರ ಸುಂದರ ಶಾಮಿಯಾನಾ ಡೇರೆಗಳಾದವು. ಇದನ್ನು ರಕ್ಷಿಸುವ ಸಂಘಗಳು , ನಿರ್ವಹಣೆಗೆ ಹಣ ಸಂಗ್ರಹಣೆ ಮತ್ತು ಗಣಪ ಇರುವವರೆಗೂ ಸುತ್ತಲಿನ ಜನರನ್ನು ರಂಜಿಸುವ ಸಿನಿಮಾ (ಭಕ್ತಿ) ಹಾಡುಗಳು, ಸಾರ್ವಜನಿಕ ಗಣಪನಿಗೆ ಹೊಸ ವಾತಾವರಣವನ್ನು ಸೃಷ್ಟಿಸಿದವು. ಸಮಾಜದ ಒಂದು ವರ್ಗಕ್ಕೆ ವರಮಾನವನ್ನೂ ಸೃಷ್ಟಿಸಿದವು. ಹಸಿದವರಿಗೆ ಕಾಳು ನೀಡದವರೂ ಸಹ ಈ ಆಚರಣೆಗೆ ದೇಣಿಗೆ ನೀಡುವ ಮೂಲಕ ಕೃತಾರ್ಥರಾಗುವುದು ಭಕ್ತಿಯ ಹೊಸ ಮಾರುಕಟ್ಟೆ ಪರಂಪರೆಯಾಯಿತು.

 

1970ರ ದಶಕದ ಗಣೇಶ ವಿಸರ್ಜನೆಯನ್ನು ವರ್ತಮಾನದಲ್ಲಿಟ್ಟು ನೋಡಿದಾಗ, ಶತಮಾನಗಳ ಹಿಂದಿನ ಚಟುವಟಿಕೆಯಂತೆ ಕಾಣುತ್ತದೆ. ಅಬ್ಬರದ ಡಿಜೆ, ಮದ್ಯ-ವರ್ಧಿತ ಭಕ್ತ ವೃಂದದ ಕುಣಿತ, ಸಿನಿಮಾ ಹಾಡುಗಳ ಕಿವಿಗಡಚಿಕ್ಕುವ ಸದ್ದು ಮತ್ತು ಮೆರವಣಿಗೆಯನ್ನು ರೋಚಕಗೊಳಿಸುವ ಜೈಕಾರದ ಯುವ ದನಿ ಇವೆಲ್ಲವೂ ವರ್ತಮಾನದ ಆವುಟಗಳು. ಆಗ ಇದಾವುದೂ ಇರಲಿಲ್ಲ. ಮನೆಮನೆಯಿಂದ ಹಿರಿಯರು ಗಣಪನನ್ನು ತಟ್ಟೆಯಲ್ಲಿಟ್ಟುಕೊಂಡು (ಕೆಲವೊಮ್ಮೆ ಭಕ್ತಿಯಿಂದ ಗಂಟೆ ಬಾರಿಸುತ್ತಾ) ದೈವಸ್ತುತಿಯೊಂದಿಗೆ, ಹೆಚ್ಚು ಸದ್ದು ಮಾಡದೆ ಕೆರೆಯಂಗಳದವರೆಗೂ ಕೊಂಡೊಯ್ದು ತಮ್ಮ ಪೂಜಾ ವಿಧಿವಿಧಾನಗಳನ್ನು ಪೂರೈಸಿ, ಗಣೇಶ ವಿಸರ್ಜನೆ ಮುಗಿಸಿ ವಾಪಸ್ಸಾಗುತ್ತಿದ್ದುದು , ಒಂದು ಸುಂದರ ದೃಶ್ಯ.

 

ಮಾರುಕಟ್ಟೆಯ ವಿರೂಪಕ್ಕೆ ತುತ್ತಾಗಿ,,,

 

2000ದಲ್ಲಿ ಪ್ರವೇಶಿಸಿದ ನವ ಉದಾರವಾದಿ ಮಾರುಕಟ್ಟೆ ಮನುಷ್ಯ ಜೀವವನ್ನೂ ಸೇರಿದಂತೆ ಎಲ್ಲವನ್ನೂ ಸರಕೀಕರಣಗೊಳಿಸಿದ ಹಾಗೆ ಅಮೂರ್ತ ದೈವತ್ವವನ್ನೂ ಮೂರ್ತೀಕರಣಗೊಳಿಸಿ, ಧಾರ್ಮಿಕ ಆಚರಣೆಗಳನ್ನು ವೈಯುಕ್ತಿಕ ಅಥವಾ ಕೌಟುಂಬಿಕ ಶ್ರದ್ಧಾನಂಬಿಕೆಗಳ ಅಂಗಳದಿಂದ ಹೊರತಂದು, ಮಾರುಕಟ್ಟೆಯ ವಿಶಾಲ ಆವರಣದಲ್ಲಿ ನಿಲ್ಲಿಸಿಬಿಟ್ಟಿತು. ಗಣಪನ ನಾನಾ ರೂಪಗಳು ಮಾರುಕಟ್ಟೆ ಪ್ರವೇಶಿಸಿದ್ದು ಮನುಷ್ಯನ ಸೃಜನಶೀಲ ಕಲಾತ್ಮಕತೆಯ ದ್ಯೋತಕವಾದರೂ ಇದರ ಲಾಭ ಪಡೆದಿದ್ದು ಆರ್ಥಿಕ ಮಾರುಕಟ್ಟೆಯ ವಾರಸುದಾರರು. ಕಾರ್ಗಿಲ್‌  ಗಣೇಶ ಬಹುಶಃ ಈ ಪರಂಪರೆಗೆ ನಾಂದಿ ಹಾಡಿತ್ತು. ಯುದ್ಧೋನ್ಮಾದವನ್ನು ಸಾಮಾಜಿಕ ಧೃವೀಕರಣಕ್ಕೆ ಬಳಸುವ ಹಾಗೆಯೇ ಗಣಪನ ರೂಪಕ್ಕೂ ಬಳಸುವುದು ಸಾಮಾನ್ಯವಾಯಿತು. ಜನರ ಮೆಚ್ಚುಗೆ ಪಡೆಯಿತೋ ಇಲ್ಲವೋ, ನೈಜ ಭಕ್ತಾದಿಗಳ ವಿರೋಧವನ್ನಂತೂ ಎದುರಿಸಲಿಲ್ಲ.

 

ಈ ವಾತಾವರಣದ ಪೂರ್ಣ ಫಲಾನುಭವಿ ಎಂದರೆ ಬಿಜೆಪಿ ಮತ್ತು ಹಿಂದುತ್ವ ರಾಜಕಾರಣ. ಬೀದಿ ಬೀದಿಗಳಲ್ಲಿ ಗಣಪನನ್ನು ಸಂಭ್ರಮಿಸುವ ಯುವ ಸಮೂಹಗಳಿಗೆ ಪೋಷಕರಾಗಿ ಹೊರಹೊಮ್ಮಿದ್ದು ಸ್ಥಳೀಯ ರಾಜಕೀಯ ನಾಯಕರು, ಅವರ ಹಿಂಬಾಲಕರು ಮತ್ತು ಜಾತಿ ಸಂಘಟನೆಗಳು. ಈ ಹಂತದಲ್ಲೇ                  ʼಗಣದೈವʼ ಎಂದೇ ಪರಂಪರಾನುಗತವಾಗಿ ಗುರುತಿಸಲ್ಪಟ್ಟಿದ್ದ ಗಣೇಶ ತನ್ನ ಸಾರ್ವತ್ರಿಕ ಸ್ವರೂಪವನ್ನು ಕಳೆದುಕೊಂಡು ಕೋಮು ರಾಜಕೀಯ ಸ್ವರೂಪ ಪಡೆದುಕೊಂಡಿರುವುದು ವರ್ತಮಾನದ ಕಟು ಸತ್ಯ. ಹಾಗಾಗಿಯೇ ಸಣ್ಣ ಪುಟ್ಟ ಊರುಗಳಲ್ಲೂ, ನಗರಗಳಲ್ಲೂ ಸಹ ಗಣೇಶನ ವಿಸರ್ಜನೆಯ ಸಮಯದಲ್ಲಿ ಡಾಂಬರು-ಸಿಮೆಂಟ್ ರಸ್ತೆಗಳು ಮಸೀದಿ-ದರ್ಗಾ ರಸ್ತೆಗಳಾಗಿ ಕಾಣತೊಡಗಿವೆ.

 

ಮೆರವಣಿಗೆಯಲ್ಲಿ ದ್ವೇಷದ ಬೀಜ

ಈ ರಸ್ತೆಗಳಲ್ಲಿ ಗಣೇ಼ಶನ ಮೆರವಣಿಗೆ ಸಾಗುವಾಗ ಒಂದು ಬದಿಯಲ್ಲಿ ಮರೆಯಿಂದ ಕಲ್ಲೆಸೆಯುವ ಕಿಡಿಗೇಡಿಗಳಿದ್ದರೆ ಮತ್ತೊಂದು ಬದಿಯಲ್ಲಿ ರೊಚ್ಚೆಬ್ಬಿಸುವ ಭಾವಾತಿರೇಕದ ಘೋಷಣೆಗಳನ್ನು ಧ್ವನಿಸುವ ವಿಧ್ವಂಸಕರೂ ಇರುತ್ತಾರೆ.  ಒಬ್ಬ ಸಮಾಜಘಾತುಕನ ಒಂದು ಜಲ್ಲಿ ಕಲ್ಲು ನೂರು ಜೀವಗಳಿಗೆ ಹಾನಿ ಮಾಡುತ್ತದೆ. ಅಥವಾ ಮೆರವಣಿಗೆಯ ನಡುವೆ ಕೇಳಿಬರುವ ಒಂದು ಕೋಮು ದ್ವೇಷದ ಮಾತು ಹತ್ತಾರು ಗುಡಿಸಲುಗಳನ್ನು ಸುಟ್ಟುಹಾಕಿಬಿಡುತ್ತದೆ. ಈ ಎರಡೂ ಬದಿಯ ಅಪರಾಧಿಗಳಿಗೆ ಸ್ವಬುದ್ಧಿ ಇರುವುದಿಲ್ಲ, ಪ್ರಚೋದಿತರಾಗಿರುತ್ತಾರೆ.  ಈ ಗಲಭೆಗಳಲ್ಲಿ ಏಟು ತಿನ್ನುವವರು, ಗಾಯಗೊಳ್ಳುವವರು, ಜೀವ ಕಳೆದುಕೊಳ್ಳುವವರು, ಮನೆಮಠ ಕಳೆದುಕೊಳ್ಳುವವರು , ಇವರೆಲ್ಲರೂ ಸಮಾಜದ ಹಿತವಲಯದಿಂದ (Comfort Zone) ಹೊರಗಿರುತ್ತಾರೆ. ಜಾತಿ ಶ್ರೇಣಿಯಲ್ಲಿ ಕೆಳಸ್ತರಕ್ಕೆ ಸೇರಿದವರಾಗಿರುತ್ತಾರೆ, ರಾಜಕೀಯದಲ್ಲಿ ಹಿಂಬಾಲಕ-ಕಾಲಾಳುಗಳು-ಕಾವಲು ಪಡೆಗಳಾಗಿರುತ್ತಾರೆ.

 

ಕೋಮು ರಾಜಕಾರಣದ ಹೂರಣ ಇರುವುದು ಇಲ್ಲಿಯೇ. ಈ ವರ್ಷದ ಗಣಪ ಮೈಸೂರಿನಲ್ಲಿ ವಿಸರ್ಜನೆಗೆ ಮುಂಚಿತವಾಗಿಯೇ ವಿವಾದದ ಕೇಂದ್ರವಾಗಿದ್ದಾನೆ. ಹೊಲಸು ರಾಜಕೀಯ ಪರಿಭಾಷೆ ಈ ಗಣಪನ ಸುತ್ತಲೂ ಹರಡುತ್ತಿರುವ ಧೂಪ-ಗಂಧದ ಕಡ್ಡಿಯ ಪರಿಮಳವನ್ನೂ ಹಿಂದಿಕ್ಕುವಂತೆ ದುರ್ವಾಸನೆ ಬೀರುತ್ತಿದೆ.

 

ವಿಸರ್ಜನೆಗೂ ಮುನ್ನ ಕಹಿ ನೆರಳು

 

ಮೈಸೂರು ಸಮೀಪದ ಟಿ. ನರಸೀಪುರದಲ್ಲಿ ಗಣೇಶನ ಪ್ರತಿಷ್ಠಾಪನೆಗೂ ಮುನ್ನವೇ ವಿಸರ್ಜನೆಯ ಮೆರವಣಿಗೆಯ ಹಾದಿ ವಿವಾದಕ್ಕೀಡಾಗಿರುವುದು ನಮ್ಮ ಸಾಮಾಜಿಕ ಅವಿವೇಕಕ್ಕೆ ಹಿಡಿದ ಕೈಗನ್ನಡಿ. ಮತ್ತದೇ ಮಸೀದಿ, ಮತ್ತದೇ ರಸ್ತೆ ಮತ್ತು ಬೀದಿ ರಂಪಾಟ. ಟಿ ನರಸೀಪುರದ ಪೊಲೀಸ್‌ ಅಧಿಕಾರಿಯೊಬ್ಬರು ಗಣಪತಿ ಮೆರವಣಿಗೆಯ ವೇಳೆ ಮಸೀದಿಯ ಮುಂದೆ ಪಟಾಕಿ ಸಿಡಿಸಿಸಿದರೆ ಗ್ರಹಚಾರ ಬಿಡಿಸುತ್ತೇವೆ ಎಂದು ಹೇಳಿರುವುದು , ತಾವಿದ್ದ ಸ್ಥಳದಲ್ಲೇ  ಪ್ರಾರ್ಥಿಸುವ ಗಣೇಶನ ನೈಜ ಭಕ್ತರನ್ನೇನೂ ಘಾಸಿಗೊಳಿಸುವುದಿಲ್ಲ ಆದರೆ ಸ್ಥಳೀಯ ಬಿಜೆಪಿ ನಾಯಕರನ್ನು ಕೆರಳಿಸುತ್ತದೆ. ಒಬ್ಬ ವಿವೇಕಯುತ ಪೊಲೀಸ್‌ ಅಧಿಕಾರಿ ಹೀಗೆ ಮಾತನಾಡುವುದಿಲ್ಲ. ಸಹಜವಾಗಿ ʼ ಉಗ್ರ ಪ್ರತಿಭಟನೆ , ಸರ್ಕಾರದ ರಾಜೀನಾಮೆ, ಹಿಂದೂ ವಿರೋಧಿ ಧೋರಣೆಯ ಆರೋಪ ʼ ಇತ್ಯಾದಿಗಳು ಮುಖ್ಯ ಸುದ್ದಿಯಾಗಿವೆ. ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸ್ಪಷ್ಟೀಕರಣ ನೀಡಿದ್ದು, ನಿಗದಿತ ಮಾರ್ಗದಲ್ಲಿ ಮೆರವಣಿಗೆ ಸಾಗಲು ಯಾವುದೇ ನಿರ್ಬಂಧಗಳಿಲ್ಲ ಎಂದು ಹೇಳಿರುವುದು ಪರಿಸ್ಥಿತಿಯನ್ನು ಸುಧಾರಿಸಿದೆ.

 

ಗಣೇಶೋತ್ಸವಕ್ಕೆ ಡಿಜೆ (ಸಂಗೀತದ ಅಬ್ಬರದ ಪ್ರಸಾರ)  ನಿಷೇಧಿಸಿರುವುದನ್ನು ಮೈಸೂರಿನ ಪ್ರಜ್ಞೆ ಇರುವ ನಾಗರಿಕರು ಸ್ವಾಗತಿಸಿದ್ದಾರೆ.  ಈ ಡಿಜೆ ಎಂಬ ಆಧುನಿಕ ವಿದ್ಯುನ್ಮಾನ ಸಲಕರಣೆ ಗಣೇಶೋತ್ಸವ ಮಾತ್ರವೇ ಅಲ್ಲ ಎಲ್ಲ ಸಾರ್ವಜನಿಕ ಸಭೆಗಳಲ್ಲೂ ಕಾಣುವ ಶಬ್ದಮಾಲಿನ್ಯದ) ಹೊಸ ಅವತಾರ. ಹಿರಿಯ ನಾಗರಿಕರಿಗೆ, ವಿಶೇಷವಾಗಿ ಹೃದಯ ಸಂಬಂಧಿ ಕಾಯಿಲೆಗಳು ಇರುವವರಿಗೆ, ಶ್ರವಣ ದೋಷ ಇರುವವರಿಗೆ ಇದು ʼಅನಿವಾರ್ಯ ಶಿಕ್ಷೆ ʼಯಾಗಿ ಪರಿಣಮಿಸುತ್ತದೆ. ರಾಜಕೀಯ ಪಕ್ಷಗಳಿಗೆ ಇದು ಅಪ್ಯಾಯಮಾನವಾಗಿಯೇ ಕಾಣುತ್ತದೆ ಆದರೆ ಸಂದರ್ಭಾನುಸಾರವಾಗಿ ಅಪಥ್ಯವೂ, ಅತ್ಯವಶ್ಯವೂ ಆಗುತ್ತದೆ. ರಾಜಕೀಯ ಮಾಲಿನ್ಯದ ನಡುವೆ ಶಬ್ದ ಮಾಲಿನ್ಯ ಗಮನಕ್ಕೆ ಬರುವುದಿಲ್ಲ.

 

ಹೊಲಸು ರಾಜಕೀಯ ಪರಿಭಾಷೆ

 

ಈ ಎಲ್ಲ ʼ ಗಣೇಶನ ಗಲಾಟೆ ʼಯನ್ನು ಬದಿಗಿಟ್ಟು ನೋಡಿದಾಗ ಢಾಳಾಗಿ ಕಾಣುವುದು ನಮ್ಮ ರಾಜಕೀಯ ನಾಯಕರು ಬಳಸುವ ಭಾಷೆ ಮತ್ತು ಮಾತನಾಡುವ ಧಾಟಿ. ಮಾಜಿ ಸಂಸದ ಪ್ರತಾಪ್‌ ಸಿಂಹ ಟಿ ನರಸೀಪುರದ ಪೊಲೀಸ್‌ ಅಧಿಕಾರಿಯನ್ನು ವಿರೋಧಿಸುವ, ಅವರ ತಪ್ಪಿದ್ದರೆ ಖಂಡಿಸುವ ಹಕ್ಕು ಹೊಂದಿರುತ್ತಾರೆ. ಆದರೆ ʼ ಪೊಲೀಸ್‌ ಠಾಣೆಗೆ ನುಗ್ಗುತ್ತೇವೆ ʼ ಎಂದು ಹೇಳಿರುವುದು ಸರಿಯೇ ? ಇದು ಯುವ ಸಮಾಜಕ್ಕೆ ಯಾವ ಸಂದೇಶ ನೀಡುತ್ತದೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಶಾಸಕ ಪ್ರದೀಪ್‌ ಈಶ್ವರ್‌ ತಮ್ಮ ಎಕ್ಸ್‌ ಪೋಸ್ಟ್‌ನಲ್ಲಿ “ ತಾಕತ್ತಿದ್ದರೆ ಟ್ರೈ ಮಾಡು ಮಗಾ ” ಎಂದು ಹೇಳಿರುವುದು ರಾಜಕೀಯ ಭಾಷಾ ಮಾಲಿನ್ಯದ ಮತ್ತೊಂದು ರೂಪವಷ್ಟೆ. ಮೊದಲೆಲ್ಲಾ ರಾಜಕೀಯ ಮಾತುಗಳನ್ನು ಸಿನೆಮಾ ಸಂಭಾ಼ಷಣೆಗಳಲ್ಲಿ ಬಳಸಲಾಗುತ್ತಿತ್ತು. ಈಗ ಮಸಾಲಾ ಸಿನೆಮಾ ಸಂಭಾಷಣೆಗಳು, Catchwordಗಳು (ಗಮನ ಸೆಳೆಯುವ ಪದಗಳು) ರಾಜಕೀಯ ಪರಿಭಾಷೆಯಾಗಿದೆ.

 

ಇದು ಗಣೇಶನ ತಪ್ಪಲ್ಲ. ಅಥವಾ ಗಣಪನ ಸುತ್ತ ಪಾರಂಪರಿಕವಾಗಿ ಆವರಿಸಿರುವ ಶ್ರದ್ಧೆ ನಂಬಿಕೆ ಆಚರಣೆಗಳ ಅಪರಾಧವೂ ಅಲ್ಲ. ಗಣೇಶ ಎಂಬ ಕಲ್ಪನೆಗೆ ದೈವ ರೂಪ ನೀಡಿ, ಅದನ್ನು ಮೂರ್ತೀಕರಿಸಿ ಆಚರಣೆಗಳ ಸರಳುಗಳಲ್ಲಿ ಬಂಧಿಸಿಟ್ಟು, ರಾಜಕೀಯವಾಗಿ ಬಳಕೆಯ ದೈವವಾಗಿ ಮಾಡಿರುವ ನಮ್ಮ ಸಮಾಜ ಮತ್ತು ರಾಜಕಾರಣ ಸೃಷ್ಟಿಸಿರುವ ಒಂದು ವಿಷಮ  ವಾತಾವರಣ ಸಮಾಜವನ್ನು ದಿಕ್ಕುತಪ್ಪಿಸುತ್ತಿದೆ. ಟಿ ನರಸೀಪುರದಲ್ಲಿ ನಡೆದಿರುವ ಬೆಳವಣಿಗೆಗಳು ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಆತಂಕವನ್ನು ಮೂಡಿಸಿದೆ. ಗಣೇಶ ಸದಾ ಕಾಲಕ್ಕೂ ಮಾನವ ತಳಸ್ತರ ಸಮಾಜದ ಸೌಹಾರ್ದದ ಕೊಂಡಿಯಾಗಿಯೇ ಅಸ್ತಿತ್ವವನ್ನು ಕಾಪಾಡಿಕೊಂಡು ಬಂದಿದ್ದಾನೆ. ಮುಸ್ಲಿಂ ಸಮುದಾಯದಲ್ಲೂ ಕೆಲವೆಡೆ ಗಣೇಶನನ್ನು ಆರಾಧಿಸುವವರಿದ್ದಾರೆ.

 

ಸೌಹಾರ್ದತೆ ಕದಡುವ ರಾಜಕೀಯ

 

ಈ ಸೌಹಾರ್ದತೆ ಮತ್ತು ಸಮನ್ವಯವನ್ನು ಹಾಳುಗೆಡಹುವುದು ರಾಜಕೀಯ ಅಂಗಳದಲ್ಲಿ ಸ್ಥಾಪನೆಯಾಗಿರುವ ಗಣೇಶ ಮತ್ತು ಅವನ ಸುತ್ತಲಿನ ಆಡಂಭರಗಳು. ಜನಸಾಮಾನ್ಯರನ್ನು ಅವರಪಾಡಿಗೆ ಬಿಟ್ಟುಬಿಟ್ಟರೆ ಗಣೇಶ ಸದ್ದಿಲ್ಲದೆ ಬಂದು ಕೂತು ಮುಳುಗಿಬಿಡುತ್ತಾನೆ. ಆಗ ಕೆಲವರಾದರೂ ಭಕ್ತಿಯಿಂದ ನಮಿಸಿ ವಿದ್ಯೆ, ಸದ್ಬುದ್ಧಿ ಕೊಡಪ್ಪಾ ಎಂದು ಪ್ರಾರ್ಥಿಸುತ್ತಾರೆ. ದುರದೃಷ್ಟವಶಾತ್‌ ಈ ಪಾರಂಪರಿಕ ಭಕ್ತಿ ಕಲ್ಪನೆಯನ್ನು ತಮ್ಮ ಸ್ವಾರ್ಥ ರಾಜಕಾರಣಕ್ಕೆ ಬಳಸಿಕೊಳ್ಳುವ ಮೂಲಕ ಯುವ ಸಮುದಾಯದಲ್ಲಿ ಈ ರೀತಿ ಪ್ರಾರ್ಥನೆ ಸಲ್ಲಿಸಬೇಕು ಎನ್ನುವ ಮನಸ್ಥಿತಿಯನ್ನೂ ನಾಶಪಡಿಸಲಾಗಿದೆ ಈ ರಾಜಕೀಯ ನಾಯಕರನ್ನು ಹಾಗೂ ಅವರ ಭಾಷಾ ಬಳಕೆಯನ್ನು ನೋಡಿ ಯಾವ ಯುವ ಮನಸ್ಸು ಸದ್ಬುದ್ಧಿ (ಒಳ್ಳೆಯ ಬುದ್ಧಿ), ಸದ್ಭಾವನೆಗಾಗಿ ಪ್ರಾರ್ಥಿಸುತ್ತದೆ ?

 

ಕೊನೆ ಹನಿ: ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿಯ ವಿಚಾರದಲ್ಲಿ, ಖರೀದಿಸಲು ಬಂದಿದ್ದ ಕಿರಣ್‌ ಎಂಬ ವ್ಯಕ್ತಿಗೂ ಮಾರಾಟಗಾರರಿಗೂ ನಡೆದ ಮಾತಿನ ಚಕಮಕಿ ಘರ್ಷಣೆಯಲ್ಲಿ ಕೊನೆಗೊಂಡು, ವ್ಯಾಪಾರಸ್ಥರ ಥಳಿತಕ್ಕೆ ಒಳಗಾದ 34 ವರ್ಷದ ಕಿರಣ್‌ ಮೃತಪಟ್ಟಿರುವುದು ವರದಿಯಾಗಿದೆ  ದೈವ ಕಲ್ಪನೆಯ ಸರಕೀಕರಣ, ಬಂಡವಾಳಿಗರ ಲಾಭದಾಹ, ಭಕ್ತಿ ಹೆಸರಿನ ಅತ್ಯುನ್ಮಾದ ಮತ್ತು ಸಮಾಜಘಾತುಕ ಗುಂಪುಥಳಿತ ಮನಸ್ಥಿತಿ ಇವೆಲ್ಲವೂ 21ನೆ ಶತಮಾನದ ಹೊಸ ವಿರೂಪಗಳು.

 

೦-೦-೦-೦-