ಸಾವಿರಾರು ಕೋಟಿ ರೂ. ದೇಣಿಗೆ ದಂಧೆಯ ಆರು ಅಬ್ಬೇಪಾರಿ ಪಕ್ಷಗಳು !?
ಬಿಬಿಸಿ ಯ ಈ ತನಿಖೆಯು ಒಂದು ಆಳವಾದ ಸತ್ಯವನ್ನು ಬಯಲಿಗೆಳೆದಿದೆ. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಒಂದು ಪ್ರಶ್ನೆ “ಈ ಹಣ ಎಲ್ಲಿಗೆ ಹೋಗುತ್ತದೆ?”. ಉತ್ತರ ಕೊಡಬೇಕಾದವರು ಎಂದಿನಂತೆ ಮೌನ ವ್ರತ ಕೈಗೊಂಡಿದ್ದಾರೆ.
ಒಂದು ಗಳಿಗೆ

ಕುಚ್ಚಂಗಿ ಪ್ರಸನ್ನ
ದೇಶ ಆಳುತ್ತಿರುವ ಬಿಜೆಪಿ ಚುನಾವಣಾ ಬಾಂಡ್‌ಗಳು, ಪಿಎಂ ಕೇರ್ ಫಂಡ್‌ಗಳ ಹೆಸರಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ದೋಚುತ್ತಿರುವ ಬೆನ್ನಲ್ಲೇ , ಯಾವ ಲೆಕ್ಕ ಬುಕ್ಕೂ ಇಲ್ಲದೇ ಕೇವಲ ಷಟರ್‌ಗಳಿಗೆ ತುಕ್ಕು ಹಿಡಿದ ಬೀಗಗಳಿರುವ ದೊಡ್ಡದೊಂದು ಬೋರ್ಡು ತಗುಲಿ ಹಾಕಿ ಸಾವಿರಾರು ಕೋಟಿ ದೇಣಿಗೆ ದಂಧೆ ಮಾಡುತ್ತಿರುವ ಅಬ್ಬೇಪಾರಿ ಪಕ್ಷಗಳತ್ತ ಒಮ್ಮೆ ನೋಡಿ.
2020ರಲ್ಲಿ ಕೋವಿಡ್ ಹರಡಿದ್ದಾಗ ಒಂದು ರಾಜಕೀಯ ಪಕ್ಷ ಜನ್ಮ ತಾಳುತ್ತದೆ. ಆರಂಭಿಕ ಎರಡು ವರ್ಷಗಳಲ್ಲಿ ಆ ಪಕ್ಷದ ಬ್ಯಾಂಕ್ ಖಾತೆಗೆ ಬಂದ ಒಟ್ಟು ದೇಣಿಗೆ ಕೇವಲ 20,000 ರೂಪಾಯಿ. ನಂತರ ಇದ್ದಕ್ಕಿದ್ದಂತೆ ಮೂರನೇ ವರ್ಷದಲ್ಲಿ ಒಂದು ಪವಾಡವೆಂಬಂತೆ ಆ ಪಕ್ಷಕ್ಕೆ ಏಕಾಏಕಿ ರೂ.216 ಕೋಟಿಯಷ್ಟು ಬೃಹತ್ ಮೊತ್ತದ ದೇಣಿಗೆ ಬಂದು ಬೀಳುತ್ತದೆ, ಮತ್ತು ನಾಲ್ಕನೇ ವರ್ಷದಲ್ಲಿ 620 ಕೋಟಿಯಷ್ಟು ಬೃಹತ್ ಮೊತ್ತದ ದೇಣಿಗೆ ವಿವಿಧ ಮೂಲಗಳಿಂದ ಆ ಹೊಸ ರಾಜಕೀಯ ಪಕ್ಷದ ಬ್ಯಾಂಕ್ ಖಾತೆಗೆ ಬಂದು ತಲುಪಿಬಿಡುತ್ತದೆ.

620 ಕೋಟಿ ರೂಪಾಯಿ ಅಂದರೆ ಈ ದೇಶದ ಅತ್ಯಂತ ಹಿರಿದಾದ ಅಂದರೆ 138 ವರ್ಷಗಳ ಹಿಂದೆ ಜನ್ಮ ತಾಳಿ ಈ ದೇಶವನ್ನು ಐದಾರು ದಶಕ ಆಳಿದ ಕಾಂಗ್ರೆಸ್ ಪಡೆದ ಒಟ್ಟು ದೇಣಿಗೆಯ ಡಬಲ್‌ಗಿಂತ ಹೆಚ್ಚು. 2023-24ರಲ್ಲಿ ಕಾಂಗ್ರೆಸ್ ಪಡೆದಿದ್ದ ದೇಣಿಗೆ 281 ಕೋಟಿ ಮಾತ್ರ.. ಈ ಹೊಸ ಪಕ್ಷ ಎಷ್ಟು ಚುನಾವಣೆಗಳನ್ನು ಎದುರಿಸಿತು, ಎಷ್ಟು ಅಭ್ಯರ್ಥಿಗಳನ್ನು ಕಣಕ್ಕಿಳಿಸಿತು ಅಂತ ಕೇಳಬೇಡಿ. ಕೇವಲ ಒಂದೇ ಒಂದು ಕ್ಷೇತ್ರದಲ್ಲಿ ಒಬ್ಬನೇ ಒಬ್ಬ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇ ಈ ಪಕ್ಷದ ಸಾಧನೆ.
ಈ ಆಮ್ ಜನಮತ್ ಪಾರ್ಟಿ ಬಿಹಾರದಲ್ಲಿ ಜನ್ಮ ತಾಳುತ್ತದೆ, ಈ ಎಜೆಪಿಯ ರಾಷ್ಟ್ರೀಯ ಅಧ್ಯಕ್ಷರ ಹೆಸರು ಅನಾಮಿಕಾ ಪಾಸ್ವಾನ್. ಪಾಟ್ನಾದ ಈ ಮಹಿಳೆ ಈಗ ಆ ಪಕ್ಷವನ್ನು ತೊರೆದು ಬಿಜೆಪಿ ಸೇರಿದ್ದಾಗಿದೆ. ಬಿಹಾರ ಬಿಜೆಪಿಯ ಉಪಾಧ್ಯಕ್ಷೆ ಕೂಡಾ. ಪಕ್ಷದ ಕಾರ್ಯಾಲಯ ಕೂಡಾ ಈಗ ಬಿಹಾರದಲ್ಲಿಲ್ಲ, ಬಿಹಾರದ ಪಾಟ್ನಾದಿಂದ ಗುಜರಾತಿನ ಅಹಮದಾಬಾದ್‌ಗೆ ಶಿಫ್ಟ್ ಆಗಿದೆ. ಗೌರವ್ ಮಿಶ್ರಾ ಎಂಬ ಅನಾಮಿಕ ಈಗ ಈ ರಾಜಕೀಯ ಪಕ್ಷದ ರಾಷ್ಟ್ರೀಯ ಅಧ್ಯಕ್ಷ .
ಇದು ಕಟ್ಟು ಕತೆಯಲ್ಲ, ಹೀಗೆ ಇಷ್ಟು ದೊಡ್ಡ ಮೊತ್ತದ ಚುನಾವಣಾ ದೇಣಿಗೆ ಪಡೆದ ಪಕ್ಷದ ಹೆಸರು "ಆಮ್ ಜನಮತ್ ಪಾರ್ಟಿ" ( ಎಜೆಪಿ) ಇಂಥ ಒಂದಲ್ಲ ಹತ್ತಾರು ಬೇನಾಮಿ ರಾಜಕೀಯ ಪಕ್ಷಗಳು ಈ ನೆಲದಲ್ಲಿ ಜೀವಂತವಾಗಿವೆ. ಚುನಾವಣಾ ದೇಣಿಗೆಗೆ ತೆರಿಗೆ ಇಲ್ಲ ಎನ್ನುವುದೇ ಈ ಬೃಹತ್ ದೇಣಿಗೆಯ ಒಳಗುಟ್ಟು.
ನಮ್ಮ ಆದಾಯ ತೆರಿಗೆ ಕಾಯಿದೆಯಲ್ಲಿ ಸೆಕ್ಷನ್ 80 ಜಿಜಿಸಿ ಎಂಬ ಒಂದು ಪುಟ್ಟ ಅವಕಾಶವಿದೆ. ಸಾಮಾನ್ಯ ನಾಗರಿಕರು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದಲ್ಲಿ ಅಂತ ಮೊತ್ತಕ್ಕೆ ವರಮಾನ ತೆರಿಗೆ ವಿನಾಯಿತಿ ನೀಡಲಾಗುತ್ತದೆ. ಆದರೆ ಇವತ್ತು ಇದು ಸರ್ಕಾರಿ ಮುದ್ರೆ ಹೊಂದಿರುವ, ದೇಶದ ಅತ್ಯಂತ ಸುರಕ್ಷಿತ ಮನಿ ಲಾಂಡರಿಂಗ್ ಯಂತ್ರ!

ಎಲ್ಲೋ ಫೇಸ್ ಬುಕ್‌ನಲ್ಲಿ ಕೇಜ್ರಿವಾಲರ ಆಮ್ ಆದ್ಮಿ ಪಾರ್ಟಿ ತರದ್ದೇ ಆಮ್ ಜನತಾ ಪಾರ್ಟಿ ಎಂಬ ಹೆಸರನ್ನುಕಂಡ ಬಿಬಿಸಿ ಪ್ರತಿನಿಧಿ ಈ ಪಕ್ಷದ ವೆಬ್ ಸೈಟ್ ಸರ್ಚ್ ಮಾಡಿ, ಈ ಪಕ್ಷಕ್ಕೆ ಬಂದಿರುವ ಚುನಾವಣಾ ಬಾಂಡ್‌ಗಳ ಮೊತ್ತವನ್ನು ಗಮನಿಸಿ ಗಾಬರಿಯಾಗಿ ತನಿಖೆಗೆ ಮುಂದಾಗುತ್ತಾರೆ. ಖುದ್ದು ಬಿಹಾರಕ್ಕೆ ಅಲ್ಲಿಂದ ಅಹಮದಾಬಾದ್‌ಗೂ ಧಾವಿಸುತ್ತಾರೆ. ಈ ಪಕ್ಷದ ಬೋರ್ಡ್ ತಗುಲಿಹಾಕಿದ ಅಂಗಡಿಯAತ ಕಟ್ಟಡದ ಷಟರ್ ಬಂದ್ ಆಗಿರುವುದನ್ನು ಕಾಣುತ್ತಾರೆ. ಎಜೆಪಿಯ ಖಜಾಂಚಿಗೆ ದೂರವಾಣಿ ಕರೆ ಮಾಡುತ್ತಾರೆ. ಈಗ ಆ ಪಕ್ಷ ಬಂದ್ ಆಗಿದೆ ಎನ್ನುತ್ತಾನೆ ಆತ, ಆದರೆ ಯುಪಿಐ ಆಪ್ ಮುಖಾಂತರ ಬಿಬಿಸಿ ಪ್ರತಿನಿಧಿ ಕಳಿಸಿದ ಹಣ ಮಾತ್ರ ಅವರ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ಇದು ಒರಿಜಿನಲ್ ಮ್ಯಾಜಿಕ್ಕು!?
ತನಿಖೆಯ ಪದರಗಳು ಬಿಚ್ಚಿಕೊಂಡಾಗ ತಿಳಿದುಬಂದದ್ದು ಏನೆಂದರೆ, ಇದು ಯಾವುದೇ ರಾಜಕೀಯ ಸಂಸ್ಥೆಯಲ್ಲ, ಬದಲಿಗೆ 5% ಕಮಿಷನ್ ಆಧಾರದ ಮೇಲೆ ಮಾರಾಟವಾಗುತ್ತಿದ್ದ ಒಂದು ದಂಧೆ.
• ಹಣ ಹಾಕಿ: ನಿಮ್ಮ ಬಳಿ ಒಂದು ಕೋಟಿ ಅನ್ ಅಕೌಂಟೆಡ್ ಹಣವಿದೆಯೇ? ಅದನ್ನು ಈ ಅನಾಮಧೇಯ ಪಕ್ಷಕ್ಕೆ ಚೆಕ್ ಮೂಲಕ "ದೇಣಿಗೆ"ಯಾಗಿ ನೀಡಿ.
• ವಿನಾಯಿತಿ ಪಡೆಯಿರಿ: ಸೆಕ್ಷನ್ 80ಜಿಜಿಸಿ ಅಡಿಯಲ್ಲಿ ನಿಮ್ಮ ಪೂರ್ಣ ಮೊತ್ತದ ಮೇಲೆ 100% ತೆರಿಗೆ ವಿನಾಯಿತಿ ಸಿಗುತ್ತದೆ— ಯಾವುದೇ ಗರಿಷ್ಠ ಮಿತಿ ಇಲ್ಲ, ಯಾವುದೇ ಪ್ರಶ್ನೆಗಳಿಲ್ಲ.
• ನಗದು ವಾಪಸ್ ಪಡೆಯಿರಿ: ಆ ಪಕ್ಷವು ನೀವು ಹಾಕಿದ ಹಣದಲ್ಲಿ ತನ್ನ 5% ಕಮಿಷನ್ ಮುರಿದುಕೊಂಡು ಉಳಿದ ರೂ. 95 ಲಕ್ಷವನ್ನು ನಿಮಗೆ ನಗದಾಗಿ ಹಿಂತಿರುಗಿಸುತ್ತದೆ.
ಫಲಿತಾಂಶ? ನಿಮ್ಮ ಕಪ್ಪು ಹಣ ಬಿಳಿಯಾಯಿತು, ಸರ್ಕಾರದ ತೆರಿಗೆ ಹಣ ಮುಳುಗಿಹೋಯಿತು, ಮತ್ತು ಕಾಗದದ ಮೇಲೆ ಒಂದು ಮುದ್ರೆ ಬಿತ್ತು: "ಪ್ರಜಾಪ್ರಭುತ್ವವನ್ನು ಬಲಪಡಿಸುವ ದೇಣಿಗೆ."
ಒಂದೇ ಗಲ್ಲಿ, ನಾಲ್ಕು ಕಚೇರಿಗಳು, ಎಲ್ಲಕ್ಕೂ ಬೀಗ
ಅಹಮದಾಬಾದಿನ ನರೋಡಾದ ಕಿರಿದಾದ ಗಲ್ಲಿಗಳಿಗೆ ಹೋಗಿ ನೋಡಿ. ಒಂದೇ ಕಿರಿದಾದ ಗಲ್ಲಿಯಲ್ಲಿ ಇಂತಹ ನಾಲ್ಕು ಹೆಸರಿಗಷ್ಟೇ ಇರುವ ರಾಜಕೀಯ ಪಕ್ಷಗಳ ಕಚೇರಿಗಳಿವೆ— ಮತ್ತು ನಾಲ್ಕೂ ಕಚೇರಿಗಳ ಶಟರ್ಗಳಿಗೆ ವರ್ಷಗಳಿಂದ ತುಕ್ಕು ಹಿಡಿದ ಬೀಗಗಳು ನೇತಾಡುತ್ತಿವೆ. ಯಾವುದೇ ಬಾವುಟವಿಲ್ಲ. ಕಾರ್ಯಕರ್ತರಿಲ್ಲ. ಯಾವುದೇ ಸಿದ್ಧಾಂತವಿಲ್ಲ. ಆದರೆ ಪಕ್ಷದ ಹೆಸರಿನಲ್ಲಿ ವೆಬ್ ಸೈಟ್, ದೇಣಿಗೆ ನೀಡಬಹುದಾದ ಬ್ಯಾಂಕ್ ಖಾತೆಗಳ ವಿವರ. ಇತ್ಯಾದಿಗಳು ಮಾತ್ರ ಆಕ್ಟೀವ್ ಆಗಿರುತ್ತವೆ.
ಅಸಲಿ ಪ್ರಶ್ನೆ: ಬಯಲಾಗಿದ್ದು ಯಾರದ್ದು?
ಇಂದು ದಾಳಿಗಳು ನಡೆಯುತ್ತಿವೆ. ಪತ್ರಿಕೆಗಳಲ್ಲಿ ಹೆಡ್ ಲೈನ್ಗಳು ಎದ್ದು ಕಾಣುತ್ತಿವೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋಗಳು ಹರಿದಾಡುತ್ತಿವೆ. ಚುನಾವಣಾ ಆಯೋಗವು ಕೆಲವು ಪಕ್ಷಗಳ ನೋಂದಣಿಗಳನ್ನು ರದ್ದುಗೊಳಿಸುತ್ತದೆ, ತನಿಖಾ ಸಂಸ್ಥೆಗಳು ಕೆಲವು ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡುತ್ತವೆ.
ಆದರೆ ಈ ಆಟ ಮುಗಿಯುತ್ತದೆಯೇ? ಖಂಡಿತ ಇಲ್ಲ. ಏಕೆಂದರೆ ಕಾನೂನಿನ ಆ ಒಂದು ಸಾಲಿನಲ್ಲಿರುವ ತೂತು ಮುಚ್ಚದಿರುವವರೆಗೂ, ಕೇವಲ ಪಾತ್ರಧಾರಿಗಳು ಬದಲಾಗುತ್ತಾರೆ ಹೊರತು ನಾಟಕವಲ್ಲ. ನಾಳೆ 'ಆಮ್ ಜನಮತ್ ಪಾರ್ಟಿ' ಜಾಗದಲ್ಲಿ ಇನ್ನೊಂದು ಹೆಸರಿರುತ್ತದೆ, ಇನ್ನೊಂದು ಗಲ್ಲಿಯಿರುತ್ತದೆ, ಇನ್ನೊಂದು ಬ್ಯಾಂಕ್ ಖಾತೆಯಿರುತ್ತದೆ— ಆದರೆ 80ಜಿಸಿಸಿಯ ಪೈಪ್ ಲೈನ್ ಹೀಗೆಯೇ ಹರಿಯುತ್ತಿರುತ್ತದೆ.
ಆಮ್ ಜನಮತ್ ಪಾರ್ಟಿ ತರದ್ದೇ ಕೋಟಿಗಟ್ಟಲೆ ದೇಣಿಗೆ ಸ್ವೀಕರಿಸಿರುವ , ಚುನಾವಣಾ ಆಯೋಗದಿಂದ ಮಾನ್ಯತೆ ಪಡೆಯದ ಭಾರತೀಯ ನ್ಯಾಶನಲ್ ಜನತಾ ದಳ, ಗರೀಬ್ ಕಲ್ಯಾಣ್ ಪಾರ್ಟಿ, ನ್ಯೂ ಇಂಡಿಯಾ ಯುನೈಟೆಡ್ ಪಾರ್ಟಿ, ಸತ್ಯವಾದಿ ರಕ್ಷಕ್ ಪಾರ್ಟಿ ಮತ್ತು ಸ್ವತಂತ್ರತಾ ಅಭಿವ್ಯಕ್ತಿ ಪಾರ್ಟಿ ಎಂಬ ಹೆಸರಿನ ನಾಮಕಾವಾಸ್ತೆ ರಾಜಕೀಯ ಪಕ್ಷಗಳು ಇದೇ ಗುಜರಾತಿನ ಇದೇ ಅಹಮದಾಬಾದಿನಲ್ಲಿರುವುದನ್ನು ಬಿಬಿಸಿ ಪತ್ತೆ ಹಚ್ಚಿದೆ. ಚುನಾವಣಾ ಆಯೋಗ ಪ್ರಕಟಿಸಿರುವ ಮಾಹಿತಿಯ ಪ್ರಕಾರವೇ ಈ ಆರೂ ಪಕ್ಷಗಳು 2023-24ರಲ್ಲಿ ಒಟ್ಟು 1700 ಕೋಟಿ ರೂ.ಗಳಷ್ಟು ಬೃಹತ್ ಮೊತ್ತವನ್ನು ದೇಣಿಗೆಯಾಗಿ ಪಡೆದಿವೆ. ಈ ಮೊತ್ತವು ಆಡಳಿತದಲ್ಲಿರುವ ಬಿಜೆಪಿಯನ್ನು ಬಿಟ್ಟು ಉಳಿದ ಕಾಂಗ್ರೆಸ್ , ಆಮ್ ಆದ್ಮಿ ಪಾರ್ಟಿ, ಬಹುಜನ ಸಮಾಜ ಪಾರ್ಟಿ, ಸಿಪಿಐ(ಎಂ) ಮತ್ತು ನ್ಯಾಶನಲ್ ಪೀಪಲ್ಸ್ ಪಾರ್ಟಿಗಳೆಲ್ಲವೂ ಸೇರಿ ಪಡೆದಿರುವ ಒಟ್ಟು ದೇಣಿಗೆ ರೂ.1480 ಕೋಟಿ ರೂಪಾಯಿಗಳಾದರೆ, ಬೋರ್ಡು ವೆಬ್ ಸೈಟುಗಳನ್ನು ಬಿಟ್ಟರೆ ಇನ್ನೆಲ್ಲೂ ಅಸ್ತಿತ್ವದಲ್ಲೇ ಇಲ್ಲದ ಮೇಲಿನ ಆರು ಪಾರ್ಟಿಗಳು ಪಡೆದಿರುವ ದೇಣಿಗೆ ರೂ.1700 ಕೋಟಿ ಎಂದರೆ ದಂಧೆಯ ಮಾದರಿಯನ್ನು ಅರ್ಥ ಮಾಡಿಕೊಳ್ಳಿ.
2024ರ ಏಪ್ರಿಲ್ –ಮೇನಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಇತರ ನಾಲ್ಕು ರಾಷ್ಟ್ರೀಯ ಪಕ್ಷಗಳು 893 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ, ಗುಜರಾತಿನಲ್ಲಿ ನೆಲೆಯಾಗಿರುವ ಈ ಆರು ಡೊನೇಶನ್ ಪಾರ್ಟಿಗಳು ಕೇವಲ 15 ಹುರಿಯಾಳುಗಳನ್ನು ಕಣಕ್ಕಿಳಿಸಿರುವ ಮಾಹಿತಿ ಇದೆ. ಈ ಆರು ಪಕ್ಷಗಳಲ್ಲಿ ನಾಲ್ಕು ಪಕ್ಷಗಳು ಗುಜರಾತಿನ ಅಹಮದಾಬಾದಿನ ನರೋಡಾ ಎಂಬ ಪ್ರದೇಶದಲ್ಲೇ ಇವೆ.
2025ರ ಆಗಸ್ಟ್ನಲ್ಲಿ ದೈನಿಕ್ ಭಾಸ್ಕರ್ ಪತ್ರಿಕೆಯು, ಗುಜರಾತಿನಲ್ಲಿ ಇಂಥ 10 ಅನಾಮಿಕ ಪಕ್ಷಗಳು 2019-20ರಿಂದ 2023-24ರವರೆಗೆ ಒಟ್ಟು ರೂ.4300 ಕೋಟಿಯಷ್ಟು ಬೃಹತ್ ಮೊತ್ತವನ್ನು ದೇಣಿಗೆಯಾಗಿ ಪಡೆದಿವೆ ಎಂದು ವರದಿ ಮಾಡಿತ್ತು. ಈ ಅವಧಿಯಲ್ಲಿ 2019 ಹಾಗೂ 2024ರ ಎರಡು ಲೋಕಸಭಾ ಚುನಾವಣೆಗಳು ಆಗಿಹೋಗಿವೆ ಅಲ್ಲದೇ 2022ರಲ್ಲಿ ಗುಜರಾತ್ ವಿಧಾನ ಸಭಾ ಚುನಾವಣೆಯೂ ನಡೆದಿದೆ. ಈ ಹತ್ತುಪಕ್ಷಗಳು ಮೇಲಿನ ಮೂರೂ ಚುನಾವಣೆಗಳಲ್ಲಿ ಕೇವಲ 43 ಉಮೇದುವಾರರನ್ನು ಮಾತ್ರವೇ ಬಿ ಫಾರಂ ಕೊಟ್ಟು ಕಣಕ್ಕಿಳಿಸಿದ್ದು ಸುಮಾರು ಒಟ್ಟು 54 ಸಾವಿರ ಓಟುಗಳಿಗೆ ತೃಪ್ತಿಯಾಗಿವೆ.
12 ವರ್ಷಗಳಿಂದ ದೇಶವನ್ನು ಆಳುತ್ತಿರುವ ಇಬ್ಬರು ಅಧಿಕೃತ ಮತ್ತು ಇಬ್ಬರು ಅನಧಿಕೃತ ವ್ಯಕ್ತಿಗಳು ಗುಜರಾತಿನವರೇ ಆಗಿರುವಾಗಿ, ದೇಣಿಗೆ ದಂಧೆ ಮಾಡಲೆಂದು ಹುಟ್ಟಿರುವ ರಾಜಕೀಯ ಪಕ್ಷಗಳೂ ಇದೇ ಗುಜರಾತಿನವೇ ಆಗಿರುವುದು ಆಕಸ್ಮಿಕವೇನೂ ಅಲ್ಲ .

ಬಿಬಿಸಿ ಯ ಈ ತನಿಖೆಯು ಒಂದು ಆಳವಾದ ಸತ್ಯವನ್ನು ಬಯಲಿಗೆಳೆದಿದೆ. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಒಂದು ಪ್ರಶ್ನೆ “ಈ ಹಣ ಎಲ್ಲಿಗೆ ಹೋಗುತ್ತದೆ?”. ಉತ್ತರ ಕೊಡಬೇಕಾದವರು ಎಂದಿನಂತೆ ಮೌನ ವ್ರತ ಕೈಗೊಂಡಿದ್ದಾರೆ.
bevarahani1