ರಸಗೊಬ್ಬರ ಬೆಲೆ ಏರಿಸಿ ರೈತರಿಂದ ರೂ.3600 ಕೋಟಿ ಸುಲಿಗೆ

ರಸಗೊಬ್ಬರ ಬೆಲೆ ಏರಿಸಿ ರೈತರಿಂದ ರೂ.3600 ಕೋಟಿ ಸುಲಿಗೆ, bevarahani-bengaluru-congress-press-meet-seddaramiah-DK-shivakumar-and-others

ರಸಗೊಬ್ಬರ ಬೆಲೆ ಏರಿಸಿ ರೈತರಿಂದ ರೂ.3600 ಕೋಟಿ ಸುಲಿಗೆ

ರಸಗೊಬ್ಬರ ಬೆಲೆ ಏರಿಸಿ ರೈತರಿಂದ ರೂ.3600 ಕೋಟಿ ಸುಲಿಗೆ

ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರು ಕೆಪಿಸಿಸಿ ಕಚೇರಿಯಲ್ಲಿಂದು ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಈ ಇಬ್ಬರೂ ಕಾಂಗ್ರೆಸ್ ನಾಯಕರು ಜೀವನಾವಶ್ಯಕ ಪದಾರ್ಥಗಳ ತೀವ್ರ ಬೆಲೆ ಏರಿಕೆಯನ್ನು ಖಂಡಿಸಿದರು, ಜೊತೆಗೆ ಈ ವಿರುದ್ಧ ಕಾಂಗ್ರೆಸ್ ಹೋರಾಡುವುದಾಗಿ ತಿಳಿಸಿದರು.

ಕೇಂದ್ರ ಸರ್ಕಾರ ರಸಗೊಬ್ಬರ ಬೆಲೆಯನ್ನು ಎದ್ವಾತದ್ವಾ ಏರಿಕೆ ಮಾಡಿದೆ. ಯುಗಾದಿ ಸಿಹಿ - ಕಹಿಗಳ ಹಬ್ಬ, ಆದರೆ ಕೇಂದ್ರ ಸರ್ಕಾರ ಜನರಿಗೆ ಬರೀ ಕಹಿಯನ್ನು ನೀಡಿದೆ. ಒಂದು ಚೀಲ ಗೊಬ್ಬರದ ಮೇಲೆ ರೂ. 150 ಏರಿಕೆಯಾಗಿದೆ. ಇದರಿಂದ ಒಂದು ಚೀಲ ಗೊಬ್ಬರದ ಬೆಲೆ ಈಗ ರೂ. 1,350 ಆಗಿದೆ. ದೇಶದ ರೈತರು ವರ್ಷದಲ್ಲಿ 1 ಕೋಟಿ 20 ಲಕ್ಷ ಟನ್ ಗೊಬ್ಬರ ಬಳಕೆ ಮಾಡುತ್ತಾರೆ. ಕೇಂದ್ರ ಸರ್ಕಾರ ರೂ. 3,600 ಕೋಟಿಯನ್ನು ರೈತರಿಂದ ಹೆಚ್ಚುವರಿ ಹಣ ಸುಲಿಗೆ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು 2022 ಕ್ಕೆ ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದಿದ್ದರು, ಅದನ್ನು ಮಾಡುವ ಬದಲು ರೈತರ ರಕ್ತ ಕುಡಿಯಲು ಆರಂಭ ಮಾಡಿದ್ದಾರೆ. ಕೃಷಿಗೆ ಬಳಕೆಯಾಗುವ ಕೀಟನಾಶಕಗಳ ಮೇಲೆ 18%, ಕೃಷಿ ಯಂತ್ರೋಪಕರಣಗಳ ಮೇಲೆ 12%, ರಸಗೊಬ್ಬರದ ಮೇಲೆ 5% ಜಿಎಸ್‌ಟಿ ವಿಧಿಸಲಾಗುತ್ತಿದೆ. ಈ ರೀತಿ ರೈತರಿಂದ ಸುಲಿಗೆ ಮಾಡಿ ಅವರ ಬದುಕನ್ನು ಕಸಿಯಲಾಗುತ್ತಿದೆ.

ಕಳೆದ ಬಾರಿ ರಾಗಿ ಬೆಳೆಗೆ ಉತ್ತಮ ಬೆಲೆ ಬಂದಿದ್ದರಿಂದ ಈ ಬಾರಿ ರಾಜ್ಯದ ರೈತರು 15 ಲಕ್ಷ ಮೆಟ್ರಿಕ್ ಟನ್ ರಾಗಿ ಬೆಳೆದಿದ್ದಾರೆ. ಇದರಲ್ಲಿ ಕನಿಷ್ಠ ಅರ್ಧದಷ್ಟನ್ನಾದರೂ ಖರೀದಿ ಮಾಡಿ ಎಂದು ಸರ್ಕಾರವನ್ನು ಒತ್ತಾಯ ಮಾಡುತ್ತಿದ್ದಾರೆ. ಆದರೆ ಸರ್ಕಾರ ಕೇವಲ 2.1 ಮೆಟ್ರಿಕ್ ಲಕ್ಷ ಟನ್ ರಾಗಿಯನ್ನು ಕನಿಷ್ಠ ಬೆಂಬಲ ಬೆಲೆಯಡಿ ಕೊಳ್ಳಲು ನಿಗದಿ ಮಾಡಿ, ಈ ವರೆಗೆ 1.9 ಲಕ್ಷ ಮೆಟ್ರಿಕ್ ಟನ್ ಖರೀದಿ ಮಾಡಿದೆ. ಕನಿಷ್ಠ ಬೆಂಬಲ ಬೆಲೆಯಡಿ ಖರೀದಿಸುವ ರಾಗಿಗೂ, ಮಾರುಕಟ್ಟೆ ಬೆಲೆಗೂ ಸುಮಾರು 1,500 ರೂಪಾಯಿ ವ್ಯತ್ಯಾಸವಿದೆ. ರಾಗಿಯ ಎಂ.ಎಸ್.ಪಿ ಬೆಲೆ ರೂ. 3,377. ಮಾರುಕಟ್ಟೆ ಬೆಲೆ 1,700 - 1,800 ರೂಪಾಯಿ ಇದೆ. ರೈತರ ಬಗ್ಗೆ ದೊಡ್ಡ ದೊಡ್ಡ ಭಾಷಣ ಮಾಡುವ ಮೋದಿಯವರು ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ.

ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಗೆ ಸರ್ಕಾರ ನೀಡುವ ಕಾರಣವೆಂದರೆ 'ಪೆಟ್ರೋಲ್ ಮಾರಾಟ ಮಾಡುವ ಸ್ವಾಯತ್ತ ಸಂಸ್ಥೆಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲಬೆಲೆ ಏರಿಳಿತಗಳಿಗೆ ಅನುಗುಣವಾಗಿ ಬೆಲೆ ಏರಿಕೆ ಮಾಡುತ್ತಿವೆ' ಎಂಬುದು. ಕಳೆದ ಎಂಟು ವರ್ಷದಲ್ಲಿ ಕಚ್ಚಾತೈಲ ಬೆಲೆ ಪ್ರತೀ ಬ್ಯಾರೆಲ್ ಗೆ ಸರಾಸರಿ 60 ಡಾಲರ್ ಇತ್ತು. ಈಗ 108.25 ಡಾಲರ್ ಆಗಿದೆ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ನಿಯಂತ್ರಣ ಮಾಡುವುದು ಸ್ವಾಯತ್ತ ಸಂಸ್ಥೆಗಳಾಗಿದ್ದರೆ ಕಳೆದ ವರ್ಷ ನವೆಂಬರ್ ನಿಂದ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಬರುವವರೆಗೆ ಅಂದರೆ ಮಾರ್ಚ್ ಹದಿನೈದರ ವರೆಗೆ ಏಕೆ ದರ ಏರಿಕೆಯಾಗಿರಲಿಲ್ಲ? ಪೆಟ್ರೋಲ್ ಬೆಲೆ ನಿಯಂತ್ರಣ ಯಾರ ಕೈಲಿದೆ ಹಾಗಾದ್ರೆ? ಕಳೆದ ಹತ್ತು ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ 7 ರೂಪಾಯಿ 20 ಪೈಸೆ, ಮನೆ ಬಳಕೆ ಗ್ಯಾಸ್ ಬೆಲೆ ರೂ. 50, ವಾಣಿಜ್ಯ ಬಳಕೆಯ ಗ್ಯಾಸ್ ಬೆಲೆ ರೂ. 250 ಜಾಸ್ತಿಯಾಗಿದೆ.

2014 ರ ಮೇ ನಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುವಾಗ ಕಚ್ಚಾ ತೈಲ ಬೆಲೆ ಬ್ಯಾರಲ್ ವೊಂದಕ್ಕೆ 108 ಡಾಲರ್ ಇತ್ತು, ಡೀಸೆಲ್ ಮೇಲೆ ಹೆಚ್ಚುವರಿ ಅಬಕಾರಿ ಸುಂಕ 3 ರೂಪಾಯಿ 46 ಪೈಸೆ, ಪೆಟ್ರೋಲ್ ಮೇಲೆ 9 ರೂಪಾಯಿ 20 ಪೈಸೆ ಇತ್ತು. ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಪೆಟ್ರೋಲ್ ಮೇಲೆ ಲೀಟರ್ ಒಂದಕ್ಕೆ 18 ರೂಪಾಯಿ 70 ಪೈಸೆ, ಡೀಸೆಲ್ ಮೇಲೆ 18 ರೂಪಾಯಿ 34 ಪೈಸೆ ಹೆಚ್ಚುವರಿ ಅಬಕಾರಿ ಸುಂಕ ಏರಿಕೆ ಮಾಡಿದ್ದಾರೆ. ಡೀಸೆಲ್ ಮೇಲೆ ಹೆಚ್ಚುವರಿ ಅಬಕಾರಿ ಸುಂಕ 531%, ಪೆಟ್ರೋಲ್ ಮೇಲೆ 203% ಏರಿಕೆ ಮಾಡಲಾಗಿದೆ. ಇದು ನರೇಂದ್ರ ಮೋದಿ ಅವರ ಸಾಧನೆನ? ಕಾರ್ಪೊರೇಟ್ ತೆರಿಗೆ 35% ಇಂದ 23% ಗೆ ಇಳಿಕೆ ಆಗಿದೆ. ಸಾಮಾನ್ಯ ಜನರ ಮೇಲೆ ತೆರಿಗೆ ಬರೆ ಹಾಕಲಾಗಿದೆ.

ಕೇವಲ ಹೆಚ್ಚುವರಿ ಅಬಕಾರಿ ಸುಂಕವೊಂದನ್ನೇ ಏರಿಕೆ ಮಾಡಿದ್ದರಿಂದ ಕೇಂದ್ರ ಸರ್ಕಾರಕ್ಕೆ ಕಳೆದ ಎಂಟು ವರ್ಷಗಳಲ್ಲಿ 26 ಲಕ್ಷ ಕೋಟಿ ರೂಪಾಯಿ ಆದಾಯ ಬಂದಿದೆ. ಹಿಂದಿನ ಸರ್ಕಾರಗಳು ಸಾಲ ಮಾಡಿದ್ದವು ಅದನ್ನು ತೀರಿಸಲು ಪೆಟ್ರೋಲ್ ಬೆಲೆ ಹೆಚ್ಚು ಮಾಡಬೇಕಾಯ್ತು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳುತ್ತಾರೆ. ವಾಜಪೇಯಿ ಅವರ ಸರ್ಕಾರವೂ ಸೇರಿದಂತೆ ಹಿಂದಿನ ಸರ್ಕಾರಗಳು ಒಟ್ಟು 2 ಲಕ್ಷದ 20 ಸಾವಿರ ಕೋಟಿ ಬಾಂಡ್ ಗಳ ಮೇಲೆ ಸಾಲ ಮಾಡಿದ್ದವು, ಅದರಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ತೀರಿಸಿರುವ ಸಾಲ ರೂ. 3,500 ಕೋಟಿ. ಇದನ್ನು ತೋರಿಸಿ ಜನರಿಂದ ಕೇಂದ್ರ ಸರ್ಕಾರ 26 ಲಕ್ಷ ಕೋಟಿ ರೂಪಾಯಿ ವಸೂಲಿ ಮಾಡಿದೆ.

https://bevarahani.com/bevarahani-tumakuru-siddaganga-mutt-rahul-gandhi

ಗ್ಯಾಸ್ ಬೆಲೆ 2014 ರಲ್ಲಿ ಮನಮೋಹನ್ ಸಿಂಗ್ ಅವರ ಸರ್ಕಾರ ಇದ್ದಾಗ ರೂ. 414 ಇತ್ತು, ಈಗದು ಸುಮಾರು 1,000 ರೂಪಾಯಿ ಆಗಿದೆ. ಯು.ಪಿ.ಎ ಸರ್ಕಾರ ಗ್ಯಾಸ್ ಮೇಲೆ 50% ಸಬ್ಸಿಡಿ ನೀಡುತ್ತಿತ್ತು, ಮೋದಿ ಅವರು 2020 ರಿಂದ ಸಬ್ಸಿಡಿ ನೀಡುವುದನ್ನು ನಿಲ್ಲಿಸಿದ್ದರಿಂದ ಗ್ಯಾಸ್ ಬೆಲೆ ಹೀಗೆ ಏರಿಕೆಯಾಗಿರುವುದು.

ಜನೌಷಧಗಳ ಬೆಲೆಯನ್ನು 10% ಏರಿಕೆ ಮಾಡಲಾಗಿದೆ. ಅಡುಗೆ ಎಣ್ಣೆ ಬೆಲೆ 220 ರೂಪಾಯಿ ಆಗಿದೆ, ಕಬ್ಬಿಣ ಟನ್ ಗೆ 90,000 ರೂಪಾಯಿ ಆಗಿದೆ. ಈ ರೀತಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುವುದರಿಂದ ಹಣದುಬ್ಬರ ಏರಿಕೆಯಾಗಿ ಜನಸಾಮಾನ್ಯರ ಬದುಕು ದುಸ್ತರವಾಗುತ್ತದೆ.

ಮಾರ್ಚ್ 22, 2014 ರಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಕಚ್ಚಾ ತೈಲ ಬೆಲೆ 108 ಡಾಲರ್ ಇತ್ತು ಆಗ ಡೀಸೆಲ್ ಬೆಲೆ 55 ರೂಪಾಯಿ 49 ಪೈಸೆ, ಪೆಟ್ರೋಲ್ ಬೆಲೆ 71 ರೂಪಾಯಿ 41 ಪೈಸೆ ಇತ್ತು. ಈಗ ಪೆಟ್ರೋಲ್ ಬೆಲೆ ರೂ. 108, ಡೀಸೆಲ್ ಬೆಲೆ ರೂ. 97 ಆಗಿದೆ. ಜನ ಈ ಅನಗತ್ಯ ಹೊರೆ ಹೊರಬೇಕ? ಡೀಸೆಲ್ ಮೇಲೆ ಕೇಂದ್ರ ಸರ್ಕಾರ 21 ರೂಪಾಯಿ, ರಾಜ್ಯ ಸರ್ಕಾರ 10 ರೂಪಾಯಿ ತೆರಿಗೆ ವಸೂಲಿ ಮಾಡುತ್ತೆ. ಒಟ್ಟು ಪ್ರತೀ ಲೀಟರ್ ಡೀಸೆಲ್ ಗೆ 32 ರೂಪಾಯಿ, ಪೆಟ್ರೋಲ್ ಮೇಲೆ 47 ರೂಪಾಯಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೆರಿಗೆ ವಸೂಲಿ ಮಾಡುತ್ತಿವೆ. ಅಬಕಾರಿ ಸುಂಕ ಏರಿಕೆ ಮಾಡಿದ್ದರಿಂದಾದ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಕಾರಣ ಎಂದು ಹೇಳಿದ್ರೆ ಹೇಗೆ?

ಬೆಲೆಯೇರಿಕೆ ಬಗ್ಗೆ ಮೊನ್ನೆ ಸಾಂಕೇತಿಕವಾಗಿ ಪ್ರತಿಭಟನೆ ಮಾಡಿದ್ದೇವೆ, ಬೆಲೆಯೇರಿಕೆಯನ್ನು ಕಾಂಗ್ರೆಸ್ ಪಕ್ಷ ಗಂಭೀರವಾಗಿ ಪರಿಗಣಿಸಿ, ಜನರ ಪರವಾಗಿ ಹೋರಾಟವನ್ನು ಮಾಡುತ್ತದೆ. ಸರ್ಕಾರ ತನ್ನ ಈ ಎಲ್ಲಾ ವೈಫಲ್ಯಗಳನ್ನು ಮುಚ್ಚಿ ಹಾಕಲು ಹಿಜಾಬ್, ಜಾತ್ರೆಗಳಲ್ಲಿ ಮುಸ್ಲಿಂ ವರ್ತಕರಿಗೆ ವ್ಯಾಪಾರ ಮಾಡದಂತೆ ನಿರ್ಬಂಧ, ಕಾಶ್ಮೀರಿ ಫೈಲ್ಸ್, ಹಲಾಲ್, ಗೋಹತ್ಯೆ, ಮತಾಂತರ ನಿಷೇಧ ಮುಂತಾದವುಗಳ ಬಗ್ಗೆ ಮಾತ್ರ ಮಾತನಾಡುತ್ತದೆ. ಸಮಾಜದ ಸಾಮರಸ್ಯ ಹಾಳು ಮಾಡುತ್ತಿರುವ ಬಿಜೆಪಿಯವರಿಗೆ ಮನುಷ್ಯತ್ವ ಇದೆಯಾ?

ನಿರುದ್ಯೋಗ, ರೈತರ ಸಮಸ್ಯೆ, ಮಹಿಳೆಯರ ಸಮಸ್ಯೆಗಳ ಬಗ್ಗೆ ಇಂದು ಚರ್ಚೆಯಾಗಬೇಕು. ಕೇಂದ್ರ ಸರ್ಕಾರ ಎಪಿಎಂ‌ಸಿ ಕಾಯ್ದೆ ವಾಪಾಸು ಪಡೆದುಕೊಂಡರೂ ರಾಜ್ಯದಲ್ಲಿ ಏಕೆ ವಾಪಾಸು ಪಡೆದಿಲ್ಲ? ರಾಜ್ಯದ ಎಪಿಎಂಸಿ ಗಳು ಮುಳುಗಿ ಹೋಗ್ತಿವೆ. ವರ್ಷಕ್ಕೆ ರೂ. 600 ಕೋಟಿ ಆದಾಯ ಬರುತ್ತಿತ್ತು, ಕಳೆದ ವರ್ಷ ಈ ಆದಾಯ ರೂ. 200 ಕೋಟಿಗೆ ಬಂದು ನಿಂತಿದೆ, ಈ ವರ್ಷ ನೂರು ಕೋಟಿ ರೂಪಾಯಿ ಆದಾಯ ಬಂದಿದೆ. ಹೀಗಾದರೆ ಎಪಿಎಂಸಿ ಗಳ ಕತೆ ಏನು? ಖಾಸಗಿಯವರು ಎಷ್ಟು ಬೇಕಾದರೂ ಕೃಷಿ ಉತ್ಪನ್ನಗಳನ್ನು ದಾಸ್ತಾನು ಮಾಡಿ ಬೆಲೆ ಏರುವಂತೆ ಮಾಡುತ್ತಿದ್ದಾರೆ. ಅವರ ಮೇಲೆ ರೇಡ್ ಮಾಡಲು ಆಗಲ್ಲ.

ದೇಶದ ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳಲ್ಲಿ ನೋಟು ರದ್ದತಿ, ಜಿಎಸ್‌ಟಿ ಜಾರಿ ಮೊದಲು 11 ಕೋಟಿ ಉದ್ಯೋಗಗಳು ಇದ್ದವು, ಈಗದು 2.5 ಕೋಟಿಗೆ ಇಳಿದಿದೆ. ನಮ್ಮಲ್ಲೂ ಹಬ್ಬಗಳಲ್ಲಿ ಕುರಿ ಕಡಿದಾಗ ರಕ್ತ ಹೊರ ಹೋಗಲು ಬಿಡಲ್ವ? ಹಲಾಲ್ ಸಾವಿರಾರು ವರ್ಷಗಳಿಂದ ನಡೆದು ಬಂದ ಪದ್ಧತಿ, ಅವರ ಪದ್ಧತಿ ಅವರು ಅನುಸರಿಸಲಿ, ನಮ್ಮ ಪದ್ಧತಿ ನಾವು ಅನುಸರಿಸೋಣ. ಮನುಷ್ಯನ ಬದುಕಿಗೆ, ಜೀವನ ನಿರ್ವಹಣೆಗೆ ಸಂಬಂಧವಿಲ್ಲದ ವಿಷಯಗಳನ್ನು ಎತ್ತಿ ಸಮಾಜದ ಸಾಮರಸ್ಯ ಹಾಳು ಮಾಡುತ್ತಿದ್ದಾರೆ. ಇದರಿಂದ ಶಾಂತಿ, ಸುವ್ಯವಸ್ಥೆಗೆ ಧಕ್ಕೆಯಾಗಿ ರಾಜ್ಯದ ಅಭಿವೃದ್ಧಿ ಕುಂಠಿತವಾಗುತ್ತದೆ. ಇದನ್ನು ಸದನದಲ್ಲೂ ಪ್ರಸ್ತಾಪ ಮಾಡಿದ್ದೇನೆ.

ಅಬಕಾರಿ ಸುಂಕ ಏರಿಕೆ ಮಾಡಿದ್ದರಿಂದ ಕೇಂದ್ರ ಸರ್ಕಾರಕ್ಕೆ ರೂ. 26 ಲಕ್ಷ ಕೋಟಿ ಆದಾಯ ಬಂದಿದೆ. ಕೇವಲ 2 ಲಕ್ಷದ 20 ಸಾವಿರ ಕೋಟಿ ತೈಲ್ ಬಾಂಡ್ ಸಾಲವನ್ನು ತೋರಿಸಿ ಜನರನ್ನು ಯಾಮಾರಿಸುತ್ತಿದ್ದಾರೆ. ನಾನು ಹೇಳಿರುವ ಲೆಕ್ಕ ಸುಳ್ಳಾಗಿದ್ದರೆ ಬಿಜೆಪಿಯವರು ಲೆಕ್ಕ ಕೊಡಲಿ.

ನನ್ನ ಪ್ರಕಾರ ರಾಜ್ಯ ಸರ್ಕಾರ ಕೊರೊನಾ ನಿರ್ವಹಣೆಗೆ ಖರ್ಚು ಮಾಡಿರುವುದು ರೂ. 8,300 ಕೋಟಿ, ಮುಖ್ಯಮಂತ್ರಿಗಳು ನಾವು ರೂ. 15,000 ಕೋಟಿ ಖರ್ಚು ಮಾಡಿದ್ದೇವೆ ಎನ್ನುತ್ತಿದ್ದಾರೆ. ಸರಿ ಅವರ ಮಾತನ್ನೇ ನಂಬೋಣ, ಕೇರಳ ಎರಡು ವರ್ಷಗಳಲ್ಲಿ ಕೊರೊನಾ ನಿರ್ವಹಣೆಗೆ ರೂ. 40,000 ಕೋಟಿ ಖರ್ಚು ಮಾಡಿದ್ದಾರೆ, ತಮಿಳುನಾಡಿನವರು ರೂ. 30,000 ಕೋಟಿ ಖರ್ಚು ಮಾಡಿದ್ದಾರೆ. ಆ ರಾಜ್ಯಗಳೆಲ್ಲಾ ಹಾಳಾಗಿ ಹೋಗಿವೆಯಾ? ಕೇರಳದ ಬಜೆಟ್ ಗಾತ್ರ ನಮಗಿಂತ ಚಿಕ್ಕದು. ಇವೆಲ್ಲ ಆಧಾರ ರಹಿತ ಹೇಳಿಕೆಗಳು, ಕಳೆದ ವರ್ಷ ರಾಜ್ಯದ ಬಜೆಟ್ 2.42 ಲಕ್ಷ ಕೋಟಿ ರೂಪಾಯಿ, ಈ ಸಾಲಿನ ಬಜೆಟ್ ಗಾತ್ರ ರೂ. 2.65 ಕೋಟಿ. ಇದರಲ್ಲಿ ರೂ. 15,000 ಕೋಟಿ ಹೋದರೆ ಎಷ್ಟು ಉಳಿಯುತ್ತೆ? ಈ ಹಣದಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆ. ಇವರ ಯೋಗ್ಯತೆಗೆ ಒಂದು ಮನೆ ಕಟ್ಟಿಕೊಡೋಕೆ ಆಗಿಲ್ಲ, ರಸ್ತೆ ಗುಂಡಿ ಮುಚ್ಚೋಕೆ ಆಗಿಲ್ಲ. ನಾಚಿಕೆಯಾಗಬೇಕು ಈ ಸರ್ಕಾರಕ್ಕೆ.