ನದಿ ಪುನಃಶ್ಚೇತನದ ಸಂಕಲ್ಪವನ್ನು ಉದ್ದೀಪಿಸಿದ ಕಾರ್ಯಾಗಾರ

  ಹೀಗೆ ಜಯಮಂಗಲಿ ಕಾರ್ಯಾಗಾರ ನೀರಿನ ಆಸಕ್ತರನ್ನು ಒಂದೆಡೆ ಸೇರಿಸಿ ಅವರಲ್ಲಿ ನದಿ ಪ್ರೀತಿಯನ್ನು ಹುಟ್ಟುಹಾಕಿದೆ. ಮಾಡಬೇಕಾದ ಕೆಲಸಗಳು ಬೆಟ್ಟದಷ್ಟಿವೆ. ಇನ್ನಷ್ಟು ಕೈಗಳು ಜೊತೆಯಾಗಿ ದೀರ್ಘಕಾಲಿಕ ಯೋಜನೆಗಳನ್ನು ರೂಪಿಸಬೇಕು.  

ನದಿ ಪುನಃಶ್ಚೇತನದ ಸಂಕಲ್ಪವನ್ನು ಉದ್ದೀಪಿಸಿದ ಕಾರ್ಯಾಗಾರ

 

ಮಲ್ಲಿಕಾರ್ಜುನ ಹೊಸಪಾಳ್ಯ

 

     ಕಳೆದ ಶನಿವಾರ-16.5.2026 ರಂದು ತುಮಕೂರು ವಿವಿಯಲ್ಲಿ ಇಡೀ ದಿನ ಜಯಮಂಗಲಿಯದೇ ಮಾತು. ನದಿಯ ಕುರಿತು ಹಾಡು, ವಿಡಿಯೋ, ಪುಸ್ತಕ ಬಿಡುಗಡೆ, ಸಂವಾದ, ಚರ್ಚೆಗಳ ಕಲರವ. ಸಂಜೆ 6 ಗಂಟೆ ದಾಟಿದರೂ ಕುಗ್ಗದ ಭಾಗವಹಿಸಿದವರ ಆಸಕ್ತಿ. ರೈತರು, ಹೆಣ್ಣು ಮಕ್ಕಳು, ಯುವಕರು, ನದಿ ಪಾತ್ರದ ಆಸಕ್ತರು, ವಿದ್ಯಾರ್ಥಿಗಳು. ಜಲ ತಜ್ಞರು, ವಿವಿಧ ಇಲಾಖೆಗಳ ಅಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಅಂದಿನ ಸಭೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದು ವಿಶೇಷ.

     ದಿಕ್ಸೂಚಿ ಮಾತುಗಳನ್ನಾಡಲು ಶಿರಸಿಯಿಂದ ಬಂದಿದ್ದ ಪರಿಸರ ಮತ್ತು ಜಲ ಕಾರ್ಯಕರ್ತ ಶಿವಾನಂದ ಕಳವೆ ಬೆಳಿಗ್ಗೆಯೇ ದೇವರಾಯನ ದುರ್ಗಕ್ಕೆ ಹೋಗಿ ನದಿ ಮೂಲವನ್ನು ನೋಡಿಕೊಂಡು ಬಂದರು. ತುಮಕೂರು ಜಿಲ್ಲೆಯಲ್ಲೇ ಇದ್ದು ನದಿಮೂಲವನ್ನು ನೋಡದ ಎಷ್ಟೋ ಜನರಿಗೆ ಇದು ಮಾದರಿ ನಡೆಯಾಯಿತು.

     ಮಧುಗಿರಿಯ ನದಿಪಾತ್ರದ ರೈತರು ತಂದಿದ್ದ ಜಯಮಂಗಲಿ ನದಿಯ ಚಿಲುಮೆ ನೀರನ್ನು ಅರಳಿ ಗಿಡಕ್ಕೆ ಹಾಕುವ ಮೂಲಕ ಉದ್ಘಾಟನೆ ನೆರವೇರಿತು. ಜೊತೆಗೆ ಭಾಗವಹಿಸಿದವರು ಚಿಲುಮೆ ನೀರನ್ನು  ರುಚಿ ನೋಡಿದರು.

     ನದಿಯ ದಡದಲ್ಲೇ ವಾಸವಿರುವ ಅಕ್ಕಿರಾಂಪುರದ ಶಕುಂತಲಮ್ಮ ಮತ್ತು ಆಕೆಯ ಮಗ ಅರ್ಜುನ್‌ ವೇದಿಕೆಯಲ್ಲಿ ಮಾತನಾಡಿ “ನದಿಯು ನಮ್ಮ ಕುಟುಂಬದ ಸದಸ್ಯರಲ್ಲಿ ಒಬ್ಬರಂತೆ, ನಮ್ಮ ಮನೆ ಹತ್ತಿರ ಒಂದು ಕಾಳು ಮರಳು ತೆಗೆಯಲು ಬಿಟ್ಟಿಲ್ಲ, ಎಲ್ಲಾ ಕಡೆಯೂ ಅದೇ ರೀತಿ ಕಾಪಾಡಬೇಕು” ಎಂದಿದ್ದು ಎಲ್ಲರ ಗಮನಸೆಳೆಯಿತು.

    ಆಂಧ್ರಪ್ರದೇಶದಿಂದ ಬಂದಿದ್ದ ರಾಮಕುಮಾರ್‌, ಶ್ರೀನಿವಾಸುಲು, ವೆಂಕಟರಾಮರೆಡ್ಡಿ ಮುಂತಾದವರು ಜಯಮಂಗಲಿ ಹಾಗೂ ಉತ್ತರ ಪಿನಾಕಿನಿ ಜಲಾನಯನದ ಅಂಕಿ-ಅಂಶಗಳು, ದೇಶದ ಇತರೆಡೆ ನಡೆಯುತ್ತಿರುವ ನದಿ ಪುನರುಜ್ಜೀವನ ಕಾರ್ಯಗಳನ್ನು ಎಳೆ-ಎಳೆಯಾಗಿ ಬಿಡಿಸಿಟ್ಟರು. ಸರ್ಕಾರಕ್ಕೆ ಒತ್ತಡ ತರುವ ನಿಟ್ಟಿನಲ್ಲಿ ಏನು ಮಾಡಬೇಕೆಂಬುದನ್ನು ಅವರು ವಿವರಿಸಿದರು. ಅಲ್ಲದೆ ಮುಂದಿನ ಸಭೆಯನ್ನು ಜಯಮಂಗಲಿ-ಉತ್ತರ ಪಿನಾಕಿನಿ ಸೇರುವ ಸಂಗಮೇಶ್ವರದಲ್ಲೇ ಮಾಡಿ ಎಂದು ಆಗ್ರಹಿಸಿದರು.  ಸಭೆಯಲ್ಲಿ ನೆರೆದವರೂ ಸಹ ಇದಕ್ಕೆ ಸಮ್ಮತಿ ಸೂಚಿಸಿದ್ದು ವಿಶೇಷ.

    ದೊಡ್ಡಬಳ್ಳಾಪುರದಿಂದ ಬಂದಿದ್ದ ಯುವಕ ಚಿದಾನಂದ್‌ “ಜಯಮಂಗಲಿಯ ಉಪನದಿಯಾದ ಗರುಡಾಚಲ ಮತ್ತೆ ತುಂಬಿ ಹರಿಯುವುದನ್ನು ನೋಡಲು ಕಾತರನಾಗಿದ್ದೇನೆ” ಎಂದರಲ್ಲದೆ ಗರುಡಾಚಲ ನದಿಯ ಅಧ್ಯಯನ ಕೈಗೊಳ್ಳುವುದಾಗಿ ತಿಳಿಸಿದರು.

      ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳಾದ ಆನಂದ್‌, ಭಾಸ್ಕರ್‌, ಸುರೇಶ್‌, ಶ್ರೀನಿವಾಸಮೂರ್ತಿ, ನರಸಿಂಹಮೂರ್ತಿ ಅವರು ಮುಂದಿನ ಐದು ವರ್ಷಗಳಲ್ಲಿ ನದಿಯ ವಿವಿಧ ಭಾಗಗಳಲ್ಲಿ ಜನರ ಅರಿವು, ನದಿ ಜಲಾನಯನ ಪ್ರದೇಶದಲ್ಲಿ ನೀರಿಂಗಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಮುಂದೆಬಂದರು. ಹಾಲಪ್ಪ ಪ್ರತಿಷ್ಟಾನದ ದಿಲೀಪ್‌ ನದಿ ಪಾತ್ರದ ಶಾಲಾ-ಕಾಲೇಜುಗಳು ಹಾಗೂ ಸಮುದಾಯಕ್ಕೆ ವರ್ಷವಿಡೀ ಅರಿವಿನ ಕಾರ್ಯಕ್ರಮಗಳನ್ನು ಆಯೋಜಿಸುವುದಾಗಿ ಭರವಸೆ ನೀಡಿದರು.

    ನದಿಯಲ್ಲಿ ಮರಳು ಲೂಟಿ ತಡೆಯಬೇಕು, ದೇವರಾಯನದುರ್ಗ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ, ಕೃಷಿ ಒತ್ತುವರಿ ನಿಲ್ಲಬೇಕು, ನದಿ ಜಲಾನಯನ ಪ್ರದೇಶದಲ್ಲಿ ನೀರಿಂಗಿಸುವ ಕಾರ್ಯಕ್ರಮ ರೂಪಿಸಬೇಕು ಮುಂತಾದ 15 ನಿರ್ಣಯಗಳನ್ನು ಸಭೆಯು ಅಂಗೀಕರಿಸಿತು. ತುಮಕೂರು ವಿವಿ ಮೂಲಕ ಇದನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು.

     ತುಮಕೂರು ವಿಶ್ವವಿದ್ಯಾನಿಲಯದ ಡಾ. ಪರಶುರಾಮ್‌ ಹಾಗೂ ಡಾ. ಮುನಿರಾಜು ಅವರು ಇದು ಕೇವಲ ಒಂದು ದಿನದ ಕಾರ್ಯಕ್ರಮಕ್ಕೆ ಸೀಮಿತವಾಗಬಾರದು ಎಂದು ಆರಂಭದಿಂದಲೇ ಹೇಳುತ್ತಿದ್ದರು. ಅದಕ್ಕೆ ಪೂರಕವಾಗಿ ಕಾರ್ಯಾಗಾರ ಮುಗಿದ ಒಂದು ವಾರಕ್ಕೇ ವಿವಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕಾಲೇಜುಗಳಿಗೆ ತಮ್ಮ-ತಮ್ಮ ಎನ್.ಎಸ್.ಎಸ್‌ ಯೋಜನೆಯಲ್ಲಿ ಜಯಮಂಗಲಿ ನದಿ ಪುನರುಜ್ಜೀವನದ ಬಗ್ಗೆ ಚಟುವಟಿಕೆಗಳನ್ನು ರೂಪಿಸುವಂತೆ ಸೂಚನೆಗಳನ್ನು ನೀಡಿದ್ದಾರೆ. ಆರ್ಡರ್‌ ಸಂಸ್ಥೆಯ ಜಿ.ವಿ.ರಘು ಏನು ಮಾಡಬಹುದು ಎಂಬ ರೂಪುರೇಶೆಗಳನ್ನು ಸಭೆಯಲ್ಲಿ ಮಂಡಿಸಿದ್ದು ಕಾಲೇಜುಗಳೂ ಸಹ ಉತ್ಸಾಹದಿಂದ ಮುಂದೆ ಬಂದಿವೆ.

    ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಸಂವಾದ ಸಂಸ್ಥೆಯ ಜನಾರ್ಧನ ಕೆಸರಗದ್ದೆ ಜಯಮಂಗಲಿ ನದಿ ಪಾತ್ರದ ಕಾಲೇಜುಗಳಲ್ಲಿ ವಿಶೇಷ ಸಂವಾದಗಳನ್ನು ಏರ್ಪಡಿಸಿ ಅಲ್ಲಿ ಆಸಕ್ತಿ ತೋರಿಸುವ 20-30 ಯುವಕರಿಗೆ ನದಿ ಪುನರುಜ್ಜೀವನದ ಬಗ್ಗೆ ಒಂದು ವಾರದ ವಿಶೇಷ ತರಬೇತಿ ಹಮ್ಮಿಕೊಳ್ಳುವ ಯೋಜನೆ ರೂಪಿಸುತ್ತಿದ್ದಾರೆ. ಇದೊಂದು ಧನಾತ್ಮಕ ಬೆಳವಣಿಗೆ. ಜೊತೆಗೆ ಅವರ ತಂಡವು ಅರ್ಕಾವತಿ ನದಿ ಪುನಃಶ್ಚೇತನದ ಬಗ್ಗೆ ಮತ್ತೆ ತೊಡಗಿಸಿಕೊಳ್ಳು ಜಯಮಂಗಲಿ ಕಾರ್ಯಾಗಾರ ಹುರುಪು ನೀಡಿದೆ ಎನ್ನುತ್ತಾರೆ. ಜೊತೆಗೆ ಬೆಂಗಳೂರಿನ ವಿಠಲ್‌ ಅವರು ಕನಕಪುರದ ಬಳಿ ಕೊಳಚೆ ಗುಂಡಿಯಾಗಿರುವ ಅರ್ಕಾವತಿ ನದಿಯ ಬಗ್ಗೆ ಕಾರ್ಯಕ್ರಮಗಳನ್ನು ರೂಪಿಸಲು ಸಿದ್ಧತೆ ನಡೆಸಿದ್ದಾರೆ.

    ಮುಖ್ಯವಾಗಿ ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಮತ್ತು ಹಿರಿಯ ವಿಜ್ಞಾನಿ ಡಾ. ಲೋಗಾನಂದನ್‌ ನದಿ ಜಲಾನಯನ ಪ್ರದೇಶದಲ್ಲಿ ಅಂತರ್ಜಲ ಹೆಚ್ಚಿಸುವ ಯೋಜನೆಗಳನ್ನು ರೂಪಿಸಲು ಕಾರ್ಯೋನ್ಮುಖರಾಗಿದ್ದಾರೆ. 

    ಅಲ್ಲದೆ, ತಮ್ಮ ಬಾಲ್ಯವನ್ನು ನದಿ ತೀರದ ಹೊಳವನಹಳ್ಳಿಯಲ್ಲಿ ಕಳೆದು ಪ್ರಸ್ತುತ ಬೆಂಗಳೂರಿನಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸುವ ಹಿರಿಯರಾದ ಹೆಚ್.‌ ಆರ್‌, ಶ್ರೀಷ ಅವರು ತಮ್ಮ ಬಾಲ್ಯದಲ್ಲಿ ಹಲವು ವರ್ಷ ನದಿ ಉಕ್ಕಿ ಹರಿದಿದ್ದು, ವಾರಗಟ್ಟಲೆ ನದಿ ದಾಟಿ ಆಚೆ ಊರಿಗೆ ಹೋಗಲು ಸಾಧ್ಯವಾಗದಿದ್ದುದು, ನದಿ ನೀರಿನಿಂದ ಬೆಳೆಯುತ್ತಿದ್ದ ದೊರೆ ಭತ್ತ, ಕೊಯಿಮತ್ತೂರು ಸಣ್ಣ, ಕಬ್ಬು ಮುಂತಾದ ಹಲವು ನೆನಪುಗಳನ್ನು ಲೇಖಕರೊಂದಿಗೆ ಹಂಚಿಕೊಂಡಿದ್ದು ವಿಶೇಷ. ನದಿಯ ಬಗ್ಗೆ ಏನಾದರೂ ಮಾಡಬೇಕೆಂದು ಅವರ ಹಂಬಲ.

    ತೋವಿನಕೆರೆಯ ಪದ್ಮರಾಜು ಸುವರ್ಣಮುಖಿ ನದಿ ಕುರಿತಾಗಿ ಸಿದ್ಧರಬೆಟ್ಟ ಹಾಗೂ ಅಕ್ಕಿರಾಂಪುರದಲ್ಲಿ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ.

     ಹೀಗೆ ಜಯಮಂಗಲಿ ಕಾರ್ಯಾಗಾರ ನೀರಿನ ಆಸಕ್ತರನ್ನು ಒಂದೆಡೆ ಸೇರಿಸಿ ಅವರಲ್ಲಿ ನದಿ ಪ್ರೀತಿಯನ್ನು ಹುಟ್ಟುಹಾಕಿದೆ. ಮಾಡಬೇಕಾದ ಕೆಲಸಗಳು ಬೆಟ್ಟದಷ್ಟಿವೆ. ಇನ್ನಷ್ಟು ಕೈಗಳು ಜೊತೆಯಾಗಿ ದೀರ್ಘಕಾಲಿಕ ಯೋಜನೆಗಳನ್ನು ರೂಪಿಸಬೇಕು.