ಸಾಧನಾ ಸಮಾವೇಶ ಮುಗಿಯಿತಲ್ಲ ಜನರ ಸಮಸ್ಯೆಗಳತ್ತ ಗಮನ ಹರಿಸಿ
ಜೊತೆಗೆ ಮತವಂಚಿತರ ಜನರ ಸಂಖ್ಯೆಯನ್ನು ಹೆಚ್ಚಿಸುವ ಎಸ್‌ಐಆರ್ ಪ್ರಕ್ರಿಯೆ ಜೂನ್ 20ರಿಂದ ಆರಂಭವಾಗಲಿದೆ. ಕೆಪಿಎಸ್ ಮಾಗ್ನೆಟ್ ಶಾಲೆಯ ಆಕ್ರಮಣಕ್ಕೆ ಸರ್ಕಾರಿ ಶಾಲೆಗಳು ಅವಸಾನದತ್ತ ಸಾಗುತ್ತಿವೆ. ಈ ಆತಂಕ, ತಳಮಳಗಳಿಗೆ ಸರ್ಕಾರದ ಹೇಗೆ ಸ್ಪಂದಿಸುತ್ತಿದೆ ? ಸಾಧನಾ ಸಮಾವೇಶದಲ್ಲಿ ಇದರ ಛಾಯೆಯೂ ಕಾಣದಿರುವುದು ವಿಷಾದಕರ.
ಸಂಪಾದಕೀಯ
ತುಮಕೂರಿನಲ್ಲಿ ಮಂಗಳವಾರ ಏರ್ಪಡಿಸಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ ಯಶಸ್ವಿಯಾಯಿತು ಎಂದು ಸಂಘಟಕರು ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ. ಯಾವುದೇ ಸರ್ಕಾರವಾಗಲಿ ತಾನು ಚುನಾವಣೆಯ ಸಂದರ್ಭದಲ್ಲಿ ಮತದಾರರಿಗೆ ನೀಡಿದ ಭರವಸೆಗಳನ್ನು ಈಡೇರಿಸುವುದು ಸಾಂವಿಧಾನಿಕ ಕರ್ತವ್ಯ ಮತ್ತು ನೈತಿಕ ಬಾಧ್ಯತೆಯಾಗುವುದೇ ಹೊರತು ʼಸಾಧನೆʼ ಎನಿಸಿಕೊಳ್ಳುವುದಿಲ್ಲ. ಹಾಗೆ ಭಾವಿಸಲೂ ಕೂಡದು. ʼ ಸಾಧನೆ ʼ ಎಂದರೆ ಈ ಭರವಸೆಗಳನ್ನು ಮೀರಿ, ಜನರ ನಿರೀಕ್ಷೆಗಳನ್ನೂ ದಾಟಿ ಕೈಗೊಂಡ ಆಡಳಿತ ನೀತಿಗಳನ್ನು ಪ್ರಾಮಾಣಿಕವಾಗಿ ಅನುಷ್ಟಾನಗೊಳಿಸುವುದು. ಬಹುಶಃ ಭಾರತದ ಯಾವುದೇ ರಾಜ್ಯದಲ್ಲೂ, ಹಾಗೂ ಕೇಂದ್ರದಲ್ಲೂ ಸಹ ಇದನ್ನು ಕಾಣುವುದು ಕಷ್ಟ.
ಇತ್ತೀಚಿನ ರಾಜಕೀಯ ಫ್ಯಾಷನ್ ಎಂದರೆ ಜನಕಲ್ಯಾಣ ಆರ್ಥಿಕತೆಯ ಗ್ಯಾರಂಟಿ ಯೋಜನೆಗಳು. ಗ್ಯಾರಂಟಿಯ ಭರವಸೆಗಳಿಲ್ಲದೆ ಯಾವ ಪಕ್ಷವೂ ಚುನಾವಣೆ ಗೆಲ್ಲಲಾಗುವುದಿಲ್ಲ ಎಂಬ ಸುಡು ವಾಸ್ತವವನ್ನು ಒಪ್ಪಲೇಬೇಕಿದೆ. ತಮಿಳುನಾಡು ಚುನಾವಣೆಗಳಲ್ಲಿ ವಿಜಯ್ ಶೂನ್ಯದಿಂದ ಉದ್ಭವಿಸಿ ಆಡಳಿತದ ಚುಕ್ಕಾಣಿ ಹಿಡಿದಿರುವುದು ಒಂದು ನಿದರ್ಶನ. ಸರ್ಕಾರಗಳ ಸಾಧನೆ ಎಂದರೂ ಈ ಗ್ಯಾರಂಟಿಗಳ ಪರಿಣಾಮಕಾರಿ ನಿರ್ವಹಣೆ ಮತ್ತು ವಿತರಣೆಯಷ್ಟೇ ಆಗಿರುತ್ತದೆ. ಮೋದಿ ಸರ್ಕಾರವೂ ಇದೇ ಮಾದರಿಯನ್ನು ಅನುಸರಿಸುತ್ತದೆ. ʼ ಬಡತನ/ದಾರಿದ್ರ‍್ಯ ನಿರ್ಮೂಲನೆ ʼ
ಯ ಕಲ್ಪನೆ ಈಗ ಇತಿಹಾಸದ ಪುಟ ಸೇರಿಬಿಟ್ಟಿದೆ. ಈಗೇನಿದ್ದರೂ ʼ ಬಡತನ/ದಾರಿದ್ರ‍್ಯ ನಿರ್ವಹಣೆಯೇʼ ಸ್ವೀಕೃತ ಮಾದರಿಯಾಗಿರುವುದರಿಂದ, ಈ ಯೋಜನೆಗಳ ಸಮರ್ಪಕ ನಿರ್ವಹಣೆಯೇ ʼ ಸಾಧನೆ ʼ ಎನಿಸಿಕೊಳ್ಳುತ್ತದೆ.
ಸಿದ್ದರಾಮಯ್ಯ ಸರ್ಕಾರದ ತುಮಕೂರು ಸಮಾವೇಶದಲ್ಲಿ ಕಂಡದ್ದೂ ಇಷ್ಟೇ. ಯೋಜನೆಗಳ ಮಹಾಪೂರ, ಭರವಸೆಗಳ ಜಲಪಾತ ಮುಂತಾದ ರೋಚಕ ಪದಗಳು ಜನಸಾಮಾನ್ಯರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಈ ಸಂಭ್ರಮಾಚರಣೆಯಲ್ಲಿ ರಾಜ್ಯದ ಜನತೆ, ವಿಶೇಷವಾಗಿ ಕಾಂಗ್ರೆಸ್ ಬೆಂಬಲಿಗರು, 2023ರ ನಿರೀಕ್ಷೆಗಳನ್ನೇ ಮರೆತುಬಿಡುತ್ತಾರೆ. ತಳಸಮಾಜದ ಭ್ರಮಾಧೀನ ಸಾಮಾನ್ಯ ಜನರು ತಾವು 2023ರಲ್ಲಿ ಕಂಡ ಕನಸುಗಳನ್ನೂ ಮರೆತುಬಿಡುತ್ತಾರೆ. ದಲಿತರ, ಮಹಿಳೆಯರ, ಕಾರ್ಮಿಕರ ಹಾಗೂ ಗ್ರಾಮೀಣ ದುಡಿಯುವ ವರ್ಗಗಳ ಬೆಂಬಲದೊಂದಿಗೆ ಆಯ್ಕೆಯಾದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಹೇಗೋ ಸರಿದೂಗಿಸುತ್ತಿದೆ. ಆದರೆ ಇದರಿಂದ ಸರ್ಕಾರದ ಮೇಲಿನ ಋಣಭಾರ ಎಷ್ಟು ಎನ್ನುವುದನ್ನು ಖಚಿತವಾಗಿ ಎಲ್ಲಿಯೂ ಹೇಳುತ್ತಿಲ್ಲ. ಶ್ವೇತಪತ್ರ ಉಪಯುಕ್ತವಾಗುವುದು ಇಂತಹ ಸನ್ನಿವೇಶಗಳಲ್ಲೇ.
ಅಬಾಧಿತ ಜನವಿರೋಧಿ ಕಾನೂನುಗಳು
ಅಲ್ಪ ಸಂಖ್ಯಾತರನ್ನು, ದಲಿತ ಸಮುದಾಯಗಳನ್ನು ಬಾಧಿಸುವ ಮತ್ತು ಸಂವಿಧಾನದ ಆಶಯಗಳನ್ನೇ ಧಿಕ್ಕರಿಸುವ, ಬಿಜೆಪಿ ಸರ್ಕಾರ ಜಾರಿಗೊಳಿಸಿದ ಮತಾಂತರ ನಿಷೇಧ ಕಾಯ್ದೆ ಮತ್ತು ಜಾನುವಾರು ಹತ್ಯೆ ನಿಷೇಧ ಕಾಯ್ದೆಗಳನ್ನು ಹಿಂಪಡೆಯುವ ಭರವಸೆಯನ್ನೇ ಕಾಂಗ್ರೆಸ್ ಸರ್ಕಾರ ಮರೆತುಹೋದಂತಿದೆ. ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಕರಾಳ ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರವೇ ಹಿಂಪಡೆದಿದ್ದರೂ, ರಾಜ್ಯದಲ್ಲಿ ಅದು ಇನ್ನೂ ಊರ್ಜಿತವಾಗಿದೆ. 2013ರಲ್ಲಿ ಜಾರಿಗೊಳಿಸಿದ ಭೂ ಸ್ವಾಧೀನ ಕಾಯ್ದೆ ಮತ್ತು ಅದರಲ್ಲಿನ ಕೆಲವು ನಿಯಮಗಳನ್ನು ಮಾರುಕಟ್ಟೆ ಪರವಾಗಿ ಸಡಿಲಗೊಳಿಸಿದ ಮತ್ತೊಂದು ರೈತವಿರೋಧಿ ಭೂ ಸ್ವಾಧೀನ ( ತಿದ್ದುಪಡಿ ಕಾಯ್ದೆ ) 2019 ಎರಡೂ ಸಹ ಇಂದಿಗೂ ಚಾಲ್ತಿಯಲ್ಲಿವೆ. ಈ ರೈತ ವಿರೋಧಿ ಕಾನೂನುಗಳ ಫಲವೇ ರಾಜ್ಯದ ವಿವಿಧೆಡೆ ಕೃಷಿ ಭೂಮಿಯ ಸ್ವಾಧೀನ ಅಡೆತಡೆಯಿಲ್ಲದೆ ಸಾಗುತ್ತಿದೆ.
ದೊಡ್ಡಬಳ್ಳಾಪುರ, ಆನೇಕಲ್, ದೇವನಹಳ್ಳಿ, ಮೈಸೂರು, ಬಿಡದಿ ಈ ಭಾಗಗಳಲ್ಲಿ ರೈತರ ಹೋರಾಟಗಳು ತೀವ್ರವಾಗುತ್ತಿದ್ದು, ರಾಜ್ಯ ಸರ್ಕಾರದ ಭೂ ಸ್ವಾಧೀನ ಮತ್ತು ಕಾರ್ಪೋರೇಟ್ ಶಕ್ತಿಗಳ ಭೂ ದಾಹ ಕೊಂಚ ಹಿನ್ನಡೆ ಎದುರಿಸುತ್ತಿವೆ. ಆದರೆ ಅಂತಿಮ ಗೆಲುವು ರೈತರ ಪರ ನಿರೀಕ್ಷಿಸಬಹುದೇ ? ಈ ಪ್ರಶ್ನೆಗೆ ಹೌದು ಎನ್ನಲಾಗುವುದಿಲ್ಲ. ಏಕೆಂದರೆ ಸರ್ಕಾರಗಳು ಅನುಸರಿಸುತ್ತಿರುವ ಕಾರ್ಪೋರೇಟ್ ಮಾರುಕಟ್ಟೆ ಆರ್ಥಿಕ ನೀತಿಗಳು ಸೂತ್ರ ನಿರ್ವಹಿಸುತ್ತವೆ. ಪರಿಸರ ವಿನಾಶ ಮತ್ತು ಕೃಷಿ ಭೂಮಿಯ ನಾಶ ವರ್ತಮಾನದ ಅಭಿವೃದ್ಧಿ ಮಾದರಿಯಲ್ಲಿ ಸಹಿಸಿಕೊಳ್ಳಬೇಕಾದ ಅನಿವಾರ್ಯ ಪ್ರಕ್ರಿಯೆಗಳು ಎಂದೇ ಸರ್ಕಾರಗಳು ವಾದಿಸುತ್ತವೆ. ಸಿದ್ದರಾಮಯ್ಯ ಸರ್ಕಾರವೂ ಇದಕ್ಕೆ ಹೊರತಾಗಿಲ್ಲ.
ಕರಾವಳಿಯ ಕೋಮು ಗಲಭೆಗಳನ್ನು ನಿಯಂತ್ರಿಸಿರುವುದು ಸರ್ಕಾರದ ಸಾಧನೆಯೇ ಸರಿ. ಆದರೆ ರಾಜ್ಯದಲ್ಲಿ ಅಪರಾಧಗಳ ಪ್ರಮಾಣ ಏರುತ್ತಲೇ ಇರುವುದು ಏನನ್ನು ಸೂಚಿಸುತ್ತದೆ ? 2025ರಲ್ಲಿ ರಾಜ್ಯದಲ್ಲಿ 1211 ಕೊಲೆಗಳು ನಡೆದಿವೆ, ಮೈಸೂರಿನಲ್ಲೇ 18 ಘಟನೆಗಳು ವರದಿಯಾಗಿವೆ. ಕರ್ನಾಟಕ ಮಹಿಳಾ ಆಯೋಗದ ವರದಿಯ ಅನುಸಾರ ರಾಜ್ಯದಲ್ಲಿ ಮಹಿಳಾ ದೌರ್ಜನ್ಯಗಳು 2024-25ರಲ್ಲಿ 2,907 ದಾಖಲಾಗಿದ್ದು, ಕಳೆದ ವರ್ಷ 2025-26ರಲ್ಲಿ 4,482 ಪ್ರಕರಣಗಳು ವರದಿಯಾಗಿವೆ. ಲೈಂಗಿಕ ದೌರ್ಜನ್ಯ ಮತ್ತು ಕೌಟುಂಬಿಕ ಕಿರುಕುಳಗಳು ಹೆಚ್ಚಾಗಿವೆ. ಎಸ್‌ಸಿ-ಎಸ್‌ಟಿಗಳ ಮೇಲೆ ದೌರ್ಜನ್ಯ ಪ್ರಕರಣಗಳು ಕಳೆದ ಐದು ವರ್ಷಗಳಲ್ಲಿ ಶೇಕಡಾ 37ರಷ್ಟು ಹೆಚ್ಚಾಗಿವೆ. ಪೋಕ್ಸೋ ಆರೋಪಿಗಳನ್ನೂ ಸಂಭ್ರಮದಿAದ ಮೆರವಣಿಗೆ ಮಾಡಲಾಗುತ್ತಿದೆ.
ಮತ್ತೊಂದೆಡೆ ಆಶಾ ಕಾರ್ಯಕರ್ತೆಯರು, ಅತಿಥಿ ಉಪನ್ಯಾಸಕರು ಮತ್ತು ಶಿಕ್ಷಕರು ಹೆಚ್ಚಿನ ವೇತನ ಮತ್ತು ಸೇವಾ ಭದ್ರತೆಗಾಗಿ ನಿರಂತರ ಹೋರಾಡುತ್ತಲೇ ಇದ್ದಾರೆ. ಹೊಸ ಕಾರ್ಮಿಕ ಸಂಹಿತೆಗಳು ರಾಜ್ಯದ ಶ್ರಮಿಕ ವರ್ಗದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ, ಮನರೇಗಾ) ಯೋಜನೆಯ ಸ್ಥಾನವನ್ನು ಆಕ್ರಮಿಸುವ ವಿಬಿ ಗ್ರಾಮ್ ಜಿ ಯೋಜನೆಯಿಂದ ಗ್ರಾಮೀಣ ಉದ್ಯೋಗಕ್ಕೆ ಎಷ್ಟು ಪೆಟ್ಟು ಬೀಳುತ್ತದೆ ಎಂಬ ಆತಂಕ ಸರ್ಕಾರವನ್ನು ಕಾಡಿರಲೇಬೇಕು.
ಜೊತೆಗೆ ಮತವಂಚಿತರ ಜನರ ಸಂಖ್ಯೆಯನ್ನು ಹೆಚ್ಚಿಸುವ ಎಸ್‌ಐಆರ್ ಪ್ರಕ್ರಿಯೆ ಜೂನ್ 20ರಿಂದ ಆರಂಭವಾಗಲಿದೆ. ಕೆಪಿಎಸ್ ಮಾಗ್ನೆಟ್ ಶಾಲೆಯ ಆಕ್ರಮಣಕ್ಕೆ ಸರ್ಕಾರಿ ಶಾಲೆಗಳು ಅವಸಾನದತ್ತ ಸಾಗುತ್ತಿವೆ. ಈ ಆತಂಕ, ತಳಮಳಗಳಿಗೆ ಸರ್ಕಾರದ ಹೇಗೆ ಸ್ಪಂದಿಸುತ್ತಿದೆ ? ಸಾಧನಾ ಸಮಾವೇಶದಲ್ಲಿ ಇದರ ಛಾಯೆಯೂ ಕಾಣದಿರುವುದು ವಿಷಾದಕರ.
ಒಳಮೀಸಲಾತಿಯ ವಿವಾದವನ್ನು ತಾತ್ಕಾಲಿಕವಾಗಿ ಪರಿಹರಿಸುವಲ್ಲಿ ಯಶಸ್ವಿಯಾಗಿರುವ ಕಾಂಗ್ರೆಸ್ ಸರ್ಕಾರ ದಲಿತ ಚಳುವಳಿಯಲ್ಲಿ ಪ್ರಬಲ ಫಲಾನುಭವಿ ವರ್ಗಗಳನ್ನು ಸಂತೈಸುವಲ್ಲಿ ಯಶಸ್ವಿಯಾಗಿದೆ. ಇದೇನೂ ಸಾಧನೆಯಲ್ಲ, ಸಮಯಸಾಧಕತನ ಅಷ್ಟೇ. ಏಕೆಂದರೆ ಈಗಲೂ ಅಲೆಮಾರಿ ಸಮುದಾಯಕ್ಕೆ ಸಲ್ಲಬೇಕಾದ ನ್ಯಾಯ ದೊರೆತಿಲ್ಲ. ಆದರೆ ಸಂಘಟನಾತ್ಮಕವಾಗಿ ದುರ್ಬಲವಾಗಿರುವ ಅಲೆಮಾರಿ ಸಮುದಾಯ ತನ್ನ ಹೋರಾಟವನ್ನು ಏಕಾಂಗಿಯಾಗಿ ಮುನ್ನಡೆಸಬೇಕಿದೆ.
ಕಾಂಗ್ರೆಸ್ ಸರ್ಕಾರ ಇನ್ನುಳಿದ ಎರಡು ವರ್ಷಗಳಲ್ಲಿ ʼನಾಯಕತ್ವದʼ ಕಸರತ್ತುಗಳನ್ನು ಬದಿಗಿಟ್ಟು ರಾಜ್ಯದ ಜನತೆಯನ್ನು ಕಾಡುತ್ತಿರುವ ಗಂಭೀರ ಸಮಸ್ಯೆಗಳ ಕಡೆ ಗಮನಹರಿಸಬೇಕಿದೆ. ರಾಜ್ಯದ ಮತದಾರರು 2023ರಲ್ಲಿ ಆಯ್ಕೆ ಮಾಡಿರುವುದು ಪ್ರಜಾಸತ್ತಾತ್ಮಕ ಆಳ್ವಿಕೆಯನ್ನೇ ಹೊರತು ನಿರ್ದಿಷ್ಟ ನಾಯಕರನ್ನಲ್ಲ, ಈ ಎಚ್ಚರ ಕಾಂಗ್ರೆಸ್ ನಾಯಕರಲ್ಲಿದ್ದರೆ ಸಾಕು.
-ಸಂಪಾದಕ
bevarahani1