ಅಂತ್ಯ ಕಾಣದು ಅಂತ್ಯಜರ ಹೋರಾಟ ಎನ್ನುವ “ಹೋಮ್‌ಬೌಂಡ್” ನೇತ್ರಾವತಿ.ಕೆ.ಬಿ

“ಹೋಮ್‌ಬೌಂಡ್” ನಿರ್ದೇಶಕ : ನೀರಜ್ ಘಾಯ್ವಾನ್ ಪ್ರಮುಖ ನಟರು: ಇಶಾನ್ ಖಟ್ಟರ್ ಮತ್ತು ವಿಶಾಲ್ ಜೇಠ್ವಾ ,ಜಾಹ್ನವಿ ಕಪೂರ್, ಹರ್ಷಿಕಾ ಪಾರ್ಮರ್, ಶಾಲಿನಿ ವತ್ಸ, ದಧಿ ಆರ್ ಪಾಂಡೆ, ಪಂಕಜ್ ದುಬೆ, ಸುದೀಪ್ ಸಕ್ಷೇನಾ ಇತರರು

ಅಂತ್ಯ ಕಾಣದು ಅಂತ್ಯಜರ ಹೋರಾಟ ಎನ್ನುವ “ಹೋಮ್‌ಬೌಂಡ್”                                                                                                                       ನೇತ್ರಾವತಿ.ಕೆ.ಬಿ

ಕೆ.ಬಿ.ನೇತ್ರಾವತಿ

     ಇತ್ತೀಚೆಗೆ ಬಿಡುಗಡೆಯಾದ ಹಿಂದಿ ಸಿನಿಮಾ ʼಹೋಮ್ ಬೌಂಡ್ʼ. ಕೆಲಸದ ಒತ್ತಡ ಮತ್ತು ಮಗಳ ಪರೀಕ್ಷಾ ಸಮಯದಿಂದ ಬಹಳ ತಡವಾಗಿ ನೆಟ್ ಫ್ಲಿಕ್ಸ್ ನಲ್ಲಿ ನೋಡಿದೆ. ಒಂದೇ ಬಾರಿಗೆ ವಾಹ್ ಎಷ್ಟು ಅದ್ಭುತವಾಗಿ ನಮ್ಮ ಭಾರತದ ಇಂದಿನ ಸಮಾಜದ ಒಳ ಪಿಡುಗುಗಳನ್ನು ನಾಜೂಕಾಗಿ ತೋರಿಸಿದ್ದಾರೆ ಅನ್ನಿಸಿತು. ಕೊನೆವರೆಗೂ ಕುತೂಹಲದಿಂದ ನೋಡಿದೆ. ಇಶಾನ್ ಖಟ್ಟರ್ ಮತ್ತು ವಿಶಾಲ್ ಜೇಠ್ವಾ ಆ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಜಾಹ್ನವಿ ಕಪೂರ್ ಗ್ಲಾಮರ್ ಬಿಟ್ಟು ಸಣ್ಣ ಪಾತ್ರವಾದರೂ ಇಷ್ಟವಾಗುವಂತೆ ನಟಿಸಿದ್ದಾರೆ.


    ಉತ್ತರ ಭಾರತದ ಒಂದು ಹಳ್ಳಿಯಲ್ಲಿ ಅನ್ಯೋನ್ಯವಾಗಿರುವ ಒಂದು ದಲಿತ ಮತ್ತು ಮುಸ್ಲಿಂ ಕುಟುಂಬ ಸಹಜವಾಗೇ ಆ ದಲಿತ ಮತ್ತು ಮುಸ್ಲಿಂ ಕುಟುಂಬದ ಇಬ್ಬರು ಹುಡುಗರು ಚಿಕ್ಕಂದಿನಿಂದಲೇ ಸ್ನೇಹಿತರು. ಅವರ ಜಾತಿ ಮತ್ತು ಧರ್ಮದಿಂದಾಗಿ ಅವರನ್ನು ಸಮಾಜ ಹೇಗೆ ನಡೆಸಿಕೊಳ್ಳುತ್ತದೆ (ನಡೆಸಿಕೊಳ್ಳುತ್ತಿದೆ) ಅದರೊಂದಿಗೆ ಅವರ ಹೋರಾಟ, ಅದರ ಜೊತೆಗೆ ಕೊರೋನಾ ಕೂಡ ಅವರ ಜೀವನ ಹೋರಾಟವನ್ನು ಹೇಗೆ ಕೊನೆಗೊಳಿಸುತ್ತದೆ ಎಂಬುದು ಕಥೆ ಜೀವಾಳ.


    ದಕ್ಷಿಣ ಭಾರತದಲ್ಲಿ ಬಸವಣ್ಣ, ಅಲ್ಲಮ, ಸರ್ವಜ್ಞ, ಅಕ್ಕಮಹಾದೇವಿ ಸೇರಿ ನೂರಾರು ಶರಣರು, ಮಹಾತ್ಮ ಗಾಂಧಿ, ಬಾಬಾ ಸಾಹೇಬ್ ಅಂಬೇಡ್ಕರ್,ಕುವೆಂಪು, ಪೆರಿಯಾರ್, ನಾರಾಯಣಗುರು, ಹೀಗೆ ಎಷ್ಟೋ ಮಹಾಪುರುಷರ ತತ್ವಗಳನ್ನು ಅಳವಡಿಸಿಕೊಂಡ ಕಾರಣ ಸಾಮಾಜಿಕವಾಗಿ ಉತ್ತರ ಭಾರತದಷ್ಟು ಸಂಕಷ್ಟದಲ್ಲಿ ದಕ್ಷಿಣ ಭಾರತ ಇಲ್ಲ. ಆದರೆ ಇತ್ತೀಚೆಗೆ ಆ ಮಹಾಪುರುಷರ ತಂದ ಒಳ್ಳೆ ಬದಲಾವಣೆಗಳೆಲ್ಲ ಆವಿಯಾಗುತ್ತಿರುವುದನ್ನು ಕಾಣುತ್ತಿದ್ದೇವೆ.


    ನಮ್ಮ ಅಜ್ಜಿ ಹೇಳುತ್ತಿದ್ದರು. ನಮಗೆ ಒಂದೂರಿಂದ ಒಂದೂರಿಗೆ ವರ್ಗವಾದಾಗ ಯಾರೂ ಮನೆ ಕೊಡುತ್ತಿರಲಿಲ್ಲ ಅದಕ್ಕೆ ನಾವು ಮುಸ್ಲಿಮರ ಕೇರಿಯಲ್ಲಿ ಮನೆ ಮಾಡಿಕೊಳ್ಳುತ್ತಿದ್ದೆವು ಅಂತ. ಇದು ಅಂದಿನ ವಾಸ್ತವ, ಈಗಲೂ ಅಂತಹ ಹೆಚ್ಚಿನ ಬದಲಾವಣೆ ಸಮಾಜದಲ್ಲಿ ಕಾಣದು.ರೂಪಗಳು ಬೇರೆ ಅಷ್ಟೆ. ಅದನ್ನೇ ಈ ಸಿನಿಮಾದಲ್ಲಿ ಕೂಡ ಹೇಳಲಾಗಿದೆ. 


     ಹಳ್ಳಿ ಕಡೆ ಈಗಲೂ ದಲಿತ ಮಹಿಳೆ ಮಕ್ಕಳಿಗೆ ಬಿಸಿಯೂಟ ಸ್ಕೀಂ ನಲ್ಲಿ ಅಡುಗೆ ಮಾಡಿದರೆ ಅದು ಸರ್ಕಾರಿ ಶಾಲೆ ಯಾಗಿದ್ದರೂ ಕೂಡ ನಮ್ಮ ಮಕ್ಕಳು ಒಬ್ಬ ದಲಿತ ಮಹಿಳೆ ಮಾಡಿದ ಅಡುಗೆ ತಿನ್ನಬೇಕೆ ನೀವು ಆಕೆಯಿಂದ ಅಡಿಗೆ ಮಾಡಿಸಕೂಡದು ಎಂದು ರಾದ್ದಾಂತ ಮಾಡುವ ಜನ, ಅದನ್ನೇ ಇಲ್ಲೂ ತೋರಿಸಲಾಗಿದೆ. ಕಾನೂನಿನ ಬಗ್ಗೆ ಹೇಳ ಹೊರಟ ಒಬ್ಬಾತನನ್ನ ಗುಂಪು ಬೆದರಿಸಿ ಬಾಯಿ ಮುಚ್ಚಿಸಲಾಗುತ್ತದೆ. 


     ಹಾಗೇ ಮುಸ್ಲಿಮರೆಂದರೆ ಯಾವಾಗಲೂ ಒಂದು ಅನುಮಾನ ಅಸಡ್ಡೆಯಿಂದ ನೋಡುವ ಭಾರತದ ಇಂದಿನ ಸೂಕ್ಷ್ಮತೆಯನ್ನು ಚೆನ್ನಾಗಿ ತೋರಿಸಲಾಗಿದೆ. ಮುಸ್ಲಿಮರು ಸದಾ ತಮ್ಮ ದೇಶಭಕ್ತಿಯನ್ನು ಓರೆ ಹಚ್ಚಿ ತೋರಿಸಬೇಕು ಎಂಬುದು. “ಒಬ್ಬ ಮೇಲ್ಜಾತಿ ಅಧಿಕಾರಿ ನೀನು ನೀರು ತರಬೇಡ ನನಗೆ ,ತಿಂಡಿ ನನ್ನ ಟೇಬಲ್ ಗೆ ಇಡಬೇಡ, ನಮ್ಮ ಕೆಲಸ ನಾವೇ ಮಾಡಿಕೊಂಡರೆ ಒಳ್ಳೆಯದು” ಎಂದು ನಯವಾಗಿ ನಗುತ್ತಲೇ ತಿರಸ್ಕರಿಸುವ ಆತನ ಮಾತಿನ ಒಳಾರ್ಥ ಅರ್ಥವಾದರೂ ಮುಸ್ಲಿಂ ಹುಡುಗ ಅಸಹಾಯಕನಾಗಿ ಸರಿ ಸರ್ ಎಂದು ಹೇಳುವುದು. ಪದೇ ಪದೇ ಅವನನ್ನು ಬೇಕೆಂತಲೇ ಕೆಣಕುವುದು. ತಪ್ಪು ಮಾಡಲೀ ಎಂದೇ ಹಾಗೆ ನಡೆದುಕೊಳ್ಳುವುದು. ಭಾರತ ಪಾಕಿಸ್ತಾನ ಕ್ರಿಕೆಟ್ ಮ್ಯಾಚ್ ನ ಸಂದರ್ಭ ಅತ್ಯದ್ಭುತವಾಗಿ ಮೂಡಿ ಬಂದಿದೆ. ಹಾಗೇ ಆ ಹುಡುಗನ ಅಪ್ಪನಿಗೆ ಶಸ್ತ್ರ ಚಿಕಿತ್ಸೆಗೆಂದು ಲೋನ್ ಪಡೆಯಲು ಅಪಾಯಿಂಟ್ಮೆಂಟ್ ಲೆಟರ್ ಕೇಳಿದಾಗ ಬೇಕೆಂತಲೇ ಆತನ ಆಧಾರ್ ಜೊತೆಗೆ ಅಪ್ಪ ಅಮ್ಮನ ಆಧಾರ್ ಕೂಡ ಕೇಳಿ ಆತ ಮುಖ ಚಿಕ್ಕದು ಮಾಡಿಕೊಂಡಾಗ ಯಾಕೆ ಏನಾದ್ರು ತೊಂದರೆ ಮಾಡಿಕೊಂಡಿದ್ದಾರಾ ಅಂತ ಹಂಗಿಸುವುದು. ಇದೆಲ್ಲ ಇಂದಿನ ಭಾರತದ ನೋಟ. 


      ಅದೇ ರೀತಿ ದಲಿತ ಹುಡುಗ ಪೊಲೀಸ್ ಭರ್ತಿಗೆ ಅಪ್ಲಿಕೇಶನ್ ಭರ್ತಿ ಮಾಡುವಾಗ ಜನರಲ್ ಎಂದು ಬರೆಯುತ್ತಾನೆ. ಮುಸ್ಲಿಂ ಸ್ನೇಹಿತ ಯಾಕೆ ಹಾಗೆ ಮಾಡುತ್ತೀಯಾ ನಿನ್ನ ಹಕ್ಕು ಅದು ಅದರಿಂದ ಕೆಲಸ ಪಡೆ ಎಂದಾಗ ದಲಿತ ಹುಡುಗ ಹೇಳುತ್ತಾನೆ, ಕೆಲಸ ಸಿಕ್ಕ ನಂತರ ಕೂಡ ಮೇಲ್ಜಾತಿ ಅಧಿಕಾರಿಗಳು ನನ್ನಿಂದ ಕಸ ಗುಡಿಸುವ ಕೆಲಸ ಮಾಡಿಸಬಾರದು ಅದಕ್ಕಾಗಿ ಎನ್ನುತ್ತಾನೆ (ಒಳಾರ್ಥ ಕಸ ಗುಡಿಸುವುದರ ಜೊತೆಗೆ ಅಲ್ಲಿನ ಟಾಯ್ಲೆಟ್ ಇತ್ಯಾದಿ ತೊಳೆಸುವುದು ಅನ್ನುವುದು). ಅದೇ ರೀತಿ ಆತನನ್ನ ಪ್ರೀತಿಸುವ ಕಥಾನಾಯಕಿಯನ್ನ ಮೊದಲು ನಾವು ವಿದ್ಯಾವಂತರಾಗಿ ಇದನ್ನೆಲ್ಲ ಮೆಟ್ಟಿ ನಿಲ್ಲಬೇಕು ಎನ್ನುವುದು ಅಂಬೇಡ್ಕರರ ವಿದ್ಯಾವಂತರಾಗಿ ಅನ್ನುವ ಘೋಷಣೆ ಯನ್ನು (ಶಿಕ್ಷಣ, ಸಂಘಟನೆ, ಹೋರಾಟ -"-"Educate, Organize,Agitate) ಮುನ್ನೆಲೆಗೆ ತರುತ್ತದೆ. ಕಥಾನಾಯಕಿ ಬುದ್ಧಿಸ್ಟ್ ಎಂದು ತೋರಿಸುವ ಅಕ್ಕನ ಮದುವೆ ಅಂದರೆ ದಲಿತರು ಬೌದ್ಧರಾಗಿ ಪರಿವರ್ತಿತರಾದರೂ ಅವರ ಬಗ್ಗೆ ಸಮಾಜದಲ್ಲಿ ಏನೂ ಬದಲಾವಣೆ ಆಗಿಲ್ಲ, ಅದೇ ಜಾತೀಯತೆ ಅವರನ್ನು ಕಾಡುತ್ತದೆ ಅನ್ನುವುದನ್ನು ಸೂಕ್ಮ್ಮವಾಗಿ ಅವಳ ಮಾತಿನಲ್ಲಿ ತೋರಿಸಲಾಗಿದೆ.


     ಕಚೇರಿ ಕೆಲಸದಲ್ಲಿ ದಲಿತರಿಗಾಗಲೀ ಮುಸ್ಲಿಮರಿಗಾಗಲೀ ಸದಾ ಕಿರಿ ಮಾಡುವ ಕಿರುಕುಳ ಕೊಡುವ ಈ ಮೇಲ್ಜಾತಿ ಜನರಿಂದ ಬೇಸತ್ತು ಫ್ಯಾಕ್ಟರಿ ಕೆಲಸಕ್ಕೆ ಸೇರುವ ಈ ಇಬ್ಬರೂ ಹುಡುಗರು ಇದು ಏನು ತೋರಿಸುತ್ತದೆ? ಕೂಲಿಕಾರರಾಗಿ ನಿಮ್ಮನ್ನು ನೋಡಲು ಬಯಸುವ ಈ ಜನ ನಿಮ್ಮನ್ನು ಸರಿಸಮಾನರಾಗಿ ಕಚೇರಿಗಳಲ್ಲಿ ನೋಡಲು ಇಷ್ಟ ಪಡುವುದಿಲ್ಲ ಎನ್ನುವುದು. 


     ಅದೇ ರೀತಿ ಏನೂ ಮುಂದಾಲೋಚನೆ ಇಲ್ಲದೆ ಯಾವ ತಯಾರಿಯೂ ಇಲ್ಲದೆ ಕೊರೊನಾ ಸಮಯದಲ್ಲಿ ಮಾಡಿದ ಲಾಕ್ ಡೌನ್ ಹೇಗೆ ಜೀವನಗಳನ್ನು ಅಳಿಸಿಹಾಕಿತು ಎಂಬುದನ್ನು ಕೂಡ ಸೂಕ್ಷ್ಮವಾಗಿ ತೋರಿಸಲಾಗಿದೆ.


     ಪೊಲೀಸ್ ಕೆಲಸದ ಆರ್ಡರ್ ಬಂದಾಗ (ಅಷ್ಟು ಹೊತ್ತಿಗೆ ದಲಿತ ಹುಡುಗ ಸತ್ತು ಹೋಗಿರುತ್ತಾನೆ) ದಲಿತ ಹುಡುಗ ʼಜನರಲ್ʼ ಕೆಟಗರಿ ಎಂದು ಬರೆದಿದ್ದರಿಂದ ಯಾವ ಶಿಫಾರಸೂ ಇಲ್ಲದೆ ಕೆಲಸ ಸಿಕ್ಕಿತೆ ಅಥವಾ ಕೊರೋನಾದಿಂದ ಅದೆಲ್ಲ ಇಲ್ಲದೆ ಕೆಲಸ ಸಿಕ್ಕಿತೆ ಎಂಬುದು ನಿಮ್ಮ ಊಹೆಗೆ ಬಿಟ್ಟದ್ದು. ಅದೇ ರೀತಿ ದಲಿತ ಯುವಕ ಸತ್ತದ್ದು ಕೊರಾನಾ ದಿಂದಲಾ ಅಥವಾ ಛಳಿಗೆ ಜ್ವರ ತಲೆಗೆ ಏರಿ ಸತ್ತದ್ದೇ ಎನ್ನುವುದು ಕೂಡ ನಿಮ್ಮ ಊಹೆಗೆ ಬಿಟ್ಟದ್ದು. ಹಳ್ಳಿ ಜನರೆಲ್ಲಾ ಸೇರಿ ದಹನ ಮಾಡುವುದರಿಂದ ಕೊರೋನಾದಿಂದ ಅಂತ ಭಾವಿಸಬಹುದು.


     ಕೊನೆಯದಾಗಿ ಸ್ನೇಹಿತನನ್ನ ಕಳೆದುಕೊಂಡ ಆತನ ಓದಬೇಕು ಎನ್ನುವ ಕನಸು ನನಸು ಮಾಡಲು ಕಾಲೇಜು ಸೇರುವ ಮುಸ್ಲಿಂ ಯುವಕ ನದಿ ದಂಡೆಯಲ್ಲಿ ಕುಳಿತು ಉದಾಸೀನನಾಗಿದ್ದಾಗ ಆತನ ಸ್ನೇಹಿತ ಕೂಡುತ್ತಿದ್ದ ಕಲ್ಲಿನ ಮೇಲೆ ಬಂದು ಕೂರುವ ಬಿಳಿ ಪಾರಿವಾಳ ಮುಂದಿನ ಭವಿಷ್ಯದ ಆಶಾಕಿರಣವಾಗಿ....... ಕಾಣುತ್ತದೆ. ಅಲ್ಲಿಗೆ ಸಿನಿಮಾ ಮುಗಿದರೂ ಅಂತ್ಯವಾಗಲಿಲ್ಲ ಎಂಬುದು ನಿಜ. ಹೋರಾಟ ನಿರಂತರ.



ಯಾರು ಈ ನೀರಜ್ ಘಾಯ್ವಾನ್

    1980ರಲ್ಲಿ ಹೈದರಾಬಾದ್ನಲ್ಲಿ ದಲಿತ ಮರಾಠಿ ಕುಟುಂಬದಲ್ಲಿ ಹುಟ್ಟಿದ ನೀರಜ್ ಘಾಯ್ವಾನ್ ಹಿಂದಿ ಸಿನಿಮಾಗಳ ನರ‍್ದೇಶಕ, ಓದಿದ್ದು ಇಂಜಿನಿಯರಿಂಗ್ ಆದರೂ ಒಲಿದದ್ದು ಸಿನಿಮಾ ರಂಗ. ಅನುರಾಗ ಕಶ್ಯಪ್ ಅವರೊಂದಿಗೆ 2012ರಲ್ಲಿ ಗ್ಯಾಂಗ್ಸ್ ಆಫ್ ವಾಸೇಪರ‍್ಗೆ ನಂತರ ಅಗ್ಲಿ ಸಿನಿಮಾಗಳಿಗೆ ಸಹಾಯಕನಾಗಿ ಕೆಲಸ ಮಾಡಿ ಅನುಭವ ಪಡೆದುಕೊಂಡ ನೀರಜ್, 2015ರಲ್ಲಿ ನಿರ‍್ದೇಶಿಸಿದ ಮಸಾನ್ ಕ್ಯಾನೇ ಸಿನಿಮಾ ಉತ್ಸವದಲ್ಲಿ ಎರಡು ಪ್ರಶಸ್ತಿ ಗಳಿಸುವ ಜೊತೆಗೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.


    2017ರಲ್ಲಿ ನೀರಜ್ ನಿರ‍್ಮಿಸಿದ ಜ್ಯೂಸ್ ಅತ್ಯುತ್ತಮ ಕಿರುಚಿತ್ರ ಎಂಬ ಫಿಲಂ ಫೇರ್ ಪ್ರಶಸ್ತಿ ಗಳಿಸಿತು. ಹೋಮ್ ಬೌಂಡ್ ಇವರ ಎರಡನೇ ಸಿನಿಮಾ. ಹೋಮ್ಬೌಂಡ್ ಆಸ್ಕರ್ ಅವರ‍್ಡ್ಗಾಗಿ ಸ್ರ‍್ಧೆಗಳಿದಿರುವ ಭಾರತದ ಅಧಿಕೃತ ಸಿನಿಮಾ. ಜಾತಿ ಪದ್ಧತಿ ಮತ್ತು ಅಸ್ಪೃಶ್ಯತೆಯ ಅನುಭವಗಳನ್ನು ದಾಖಲಿಸಿರುವ ಸಮಕಾಲೀನ ಸಿನಿಮಾ ಆಗಿರುವುದರಿಂದ ಈ ಕುರಿತು ಹೆಚ್ಚಿನ ಕುತೂಹಲವಿದೆ.