ʼಬೆವರ ಹನಿʼ-“ಬೆಳಗಿನ ನಿರೀಕ್ಷೆಯ ಸಾರ್ಥಕತೆ”
ತುಮಕೂರು ಜಿಲ್ಲೆಯ ಹೆಸರಾಂತ ದೈನಂದಿನ ಪತ್ರಿಕೆಯಾದ “ಬೆವರ ಹನಿ” ಬಗ್ಗೆ ವಿಶೇಷ ಲೇಖನ ಇಲ್ಲಿದೆ:-
ಓದುಗ ಮಹಾ ಪ್ರಭುವೇ,
ಪತ್ರಿಕೆಯನ್ನು ನಿಯಮಿತವಾಗಿ ಓದುವ ವಿಶ್ರಾಂತ ಅಧಿಕಾರಿಯೊಬ್ಬರು ʼ ಬೆವರ ಹನಿʼ ಪ್ರಾದೇಶಿಕ ದಿನಪತ್ರಿಕೆ ಕುರಿತು ನನ್ನ ವಾಟ್ಸಪ್‌ಗೆ ಬರೆದು ಕಳಿಸಿದ ಪುಟ್ಟ ಟಿಪ್ಪಣಿ ಮುಂದಿನಂತಿದೆ.
*****
ತುಮಕೂರು ಜಿಲ್ಲೆಯ ಓದುಗರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿರುವ “ಬೆವರ ಹನಿ” ದಿನ ಪತ್ರಿಕೆ, ಕೇವಲ ಸುದ್ದಿಗಳನ್ನು ಮಾತ್ರ ನೀಡುವ ಮಾಧ್ಯಮವಲ್ಲ — ಅದು ಒಂದು ಚಿಂತನೆ, ಒಂದು ಜಾಗೃತಿ, ಒಂದು ಬದುಕಿನ ಸ್ಪಂದನೆ.
ಪ್ರತಿ ದಿನ ಬೆಳಗಿನ ಜಾವ, ಸೂರ್ಯೋದಯದ ಮೊದಲ ಕಿರಣಗಳ ಜೊತೆಗೂಡಿ “ಬೆವರ ಹನಿ” ಪತ್ರಿಕೆಯ ನಿರೀಕ್ಷೆಯಲ್ಲಿ ಕಣ್ಣು ತೆರೆಸುವ ಓದುಗರ ಉತ್ಸಾಹವೇ ಅದರ ನಿಜವಾದ ಯಶಸ್ಸಿನ ಅಳತೆ.
ಸಾಮಾನ್ಯ ಸುದ್ದಿಗಳಾಚೆಗೆ ಹೋಗಿ, ಸಮಾಜದ ಅಡಿಗಲ್ಲುಗಳ ಕಥೆಗಳನ್ನು, ಪರಿಶ್ರಮಿಗಳ ಬದುಕಿನ ಹನಿಗಳನ್ನು, ಮತ್ತು ನೈಜ ಘಟನೆಗಳ ನುಡಿಮುತ್ತುಗಳನ್ನು ಓದುಗರಿಗೆ ತಲುಪಿಸುವಲ್ಲಿ ಈ ಪತ್ರಿಕೆಯ ಪಾತ್ರ ಅಪಾರ.
ಈ ಪತ್ರಿಕೆಯ ವಿಶೇಷತೆ ಎಂದರೆ — ಇದು ಜನರ ಹೃದಯದ ಸ್ಪಂದನೆಯನ್ನು ಅಕ್ಷರ ರೂಪದಲ್ಲಿ ಮೂಡಿಸುವುದು. ರೈತನ ಬೆವರು, ಕಾರ್ಮಿಕನ ಶ್ರಮ, ಸಾಮಾನ್ಯ ಜನರ ಕನಸುಗಳು — ಇವೆಲ್ಲವೂ “ಬೆವರ ಹನಿ”ಯ ಪುಟಗಳಲ್ಲಿ ಜೀವಂತವಾಗುತ್ತವೆ. ಇದರಿಂದಲೇ, ಪ್ರತಿದಿನದ ಬೆಳಗ್ಗೆ “ಬೆವರ ಹನಿ” ಓದುವುದು ಒಂದು ಅಭ್ಯಾಸವಲ್ಲ, ಅದು ಒಂದು ಅನಿವಾರ್ಯತೆ. ಇದು ಕೇವಲ ಮಾಹಿತಿ ನೀಡುವುದಲ್ಲ, ಮನಸ್ಸಿಗೆ ಸ್ಪೂರ್ತಿ ನೀಡುವ ಬೆಳಕಾಗಿದೆ.
ಒಟ್ಟಿನಲ್ಲಿ, “ಬೆವರ ಹನಿ” ದಿನ ಪತ್ರಿಕೆ, ತುಮಕೂರು ಜಿಲ್ಲೆಯ ಜನರ ಬದುಕಿನ ಜೊತೆ ಬೆಸೆದುಕೊಂಡಿರುವ ಒಂದು ಜೀವಂತ ಹಾದಿಯಾಗಿದೆ — ಪ್ರತಿಯೊಂದು ಹನಿಯಲ್ಲೂ ಒಂದು ಕಥೆ, ಪ್ರತಿಯೊಂದು ಪದದಲ್ಲೂ ಒಂದು ಸ್ಪಂದನೆ.
ತುಮಕೂರು ಜಿಲ್ಲೆಯ ಹೆಸರಾಂತ ದೈನಂದಿನ ಪತ್ರಿಕೆಯಾದ “ಬೆವರ ಹನಿ” ಬಗ್ಗೆ ವಿಶೇಷ ಲೇಖನ ಇಲ್ಲಿದೆ:-
*ಬೆಳಗಿನ ಬೆಳಕಿಗಿಂತ ಮುಂಚೆ ಬರುವ “ಬೆವರ ಹನಿ” — ಓದುಗರ ಮನಸೆಳೆಯುವ ಪತ್ರಿಕೆ ತುಮಕೂರು ಜಿಲ್ಲೆಯ ಓದುಗರ ಹೃದಯದಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿರುವ ದಿನ ಪತ್ರಿಕೆ “ಬೆವರ ಹನಿ” ಇಂದು ಕೇವಲ ಒಂದು ಪತ್ರಿಕೆ ಅಲ್ಲ, ಅದು ಒಂದು ಅಭ್ಯಾಸ, ಒಂದು ಆಸಕ್ತಿ, ಒಂದು ಬದುಕಿನ ಭಾಗವಾಗಿದೆ. ಬೆಳಗಿನ ಜಾವ ಮನೆ ಬಾಗಿಲ ಬಳಿ ಕುಳಿತು, “ಪತ್ರಿಕೆ ಯಾವಾಗ ಬರುತ್ತದೆ?” ಎಂದು ಕಾಯುವಷ್ಟು ಓದುಗರ ಮನಸ್ಸಿನಲ್ಲಿ ಈ ಪತ್ರಿಕೆ ತನ್ನದೇ ಆದ ಮಾಯೆ ಮೂಡಿಸಿದೆ.
“ಬೆವರ ಹನಿ” ತನ್ನ ಹೆಸರಿನಂತೆ, ಸಮಾಜದ ನಿಜವಾದ ಶ್ರಮ, ಬೆವರು ಮತ್ತು ಬದುಕಿನ ಕಥೆಗಳನ್ನು ನಿಷ್ಠೆಯಿಂದ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಈ ಪತ್ರಿಕೆ ಕೇವಲ ಸುದ್ದಿಗಳನ್ನು ನೀಡುವುದಲ್ಲ, ಅದು ಜನಜೀವನದ ಹೃದಯಸ್ಪರ್ಶಿ ಕ್ಷಣಗಳನ್ನು, ಪ್ರೇರಣಾದಾಯಕ ವ್ಯಕ್ತಿತ್ವಗಳನ್ನು, ಗ್ರಾಮೀಣ ಬದುಕಿನ ನೈಜ ಚಿತ್ರಣವನ್ನು ಓದುಗರ ಮುಂದೆ ಇಡುತ್ತದೆ.
ಪ್ರತಿ ಬೆಳಗ್ಗೆಯೂ “ಬೆವರ ಹನಿ” ಓದುವುದೇ ದಿನದ ಆರಂಭವಾಗಿರುವ ಅನೇಕ ಕುಟುಂಬಗಳು ತುಮಕೂರಿನಲ್ಲಿ ಇವೆ. ಕಾಫಿ ಕುಡಿಯುವ ಮೊದಲು ಪತ್ರಿಕೆ ಓದುವುದು, ಅದರಲ್ಲಿರುವ ವಿಶೇಷ ಲೇಖನಗಳನ್ನು ಚರ್ಚಿಸುವುದು—ಇವೆಲ್ಲವೂ ದಿನಚರಿಯ ಭಾಗವಾಗಿದೆ.ಇದರಲ್ಲಿರುವ ಲೇಖನಗಳು ಸರಳ ಭಾಷೆಯಲ್ಲಿ, ಆದರೆ ಗಾಢ ಅರ್ಥವನ್ನು ಹೊಂದಿದ್ದು, ಓದುಗರ ಮನಸ್ಸಿಗೆ ನೇರವಾಗಿ ತಲುಪುತ್ತವೆ.
ಇದೇ ಕಾರಣಕ್ಕೆ, “ಬೆವರ ಹನಿ” ಕೇವಲ ಒಂದು ದೈನಂದಿನ ಪತ್ರಿಕೆ ಅಲ್ಲ, ಅದು ಓದುಗರ ಮನಸ್ಸಿಗೆ ಹತ್ತಿರವಾದ ಸ್ನೇಹಿತ. ಇದು ಪ್ರತಿ ದಿನ ಹೊಸ ಚಿಂತನೆಗಳನ್ನು ಹುಟ್ಟಿಸುವ, ಸಮಾಜದ ಬಗ್ಗೆ ಅರಿವು ಮೂಡಿಸುವ, ಮತ್ತು ಓದುಗರನ್ನು ಚಿಂತನೆಗೆ ದೂಡುವ ಶಕ್ತಿಯಾಗಿದೆ.
ತುಮಕೂರು ಜಿಲ್ಲೆಯ ಜನರಿಗೆ “ಬೆವರ ಹನಿ” ಒಂದು ಪತ್ರಿಕೆ ಮಾತ್ರವಲ್ಲ, ಅದು ಬೆಳಗಿನ ಮೊದಲ ಕಿರಣದಂತಿದೆ—ಹೊಸ ದಿನದ ಪ್ರೇರಣೆ, ಹೊಸ ವಿಚಾರಗಳ ಹರಿವು.
-ನಾಗರತ್ನಯ್ಯ ವಜ್ಜನಕುರಿಕೆ.
******
ಪತ್ರಿಕಾ ವೃತ್ತಿಗೆ ಮರಳುವ ನಿರ್ಧಾರ ಕೈಗೊಂಡು ಇದೇ ಏಪ್ರಿಲ್ ತಿಂಗಳಿಗೆ ಒಂಬತ್ತು ವರ್ಷವಾಯಿತು. ವಿಧಾನಸೌಧದಲ್ಲಿ ಹದಿನಾರು ವರ್ಷದಿಂದ ಮಾಡುತ್ತಿದ್ದ ಉದ್ಯೋಗವನ್ನು 2017ರ ಜುಲೈ 30ರಂದು ತೊರೆದು ಹೊರಬಂದೆ. ಆಗಸ್ಟ್ ತಿಂಗಳ ಕೊನೆಯಲ್ಲಿ ʼ ಬೆವರ ಹನಿʼ ದಿನಪತ್ರಿಕೆಯ ಕೋಲಾರ ಆವೃತ್ತಿಯ ಸಂಪಾದಕನಾಗಿ ಪತ್ರಕರ್ತನ ಕೆಲಸ ಆರಂಭಿಸಿದೆ. ಚಿಕ್ಕಂದಿನಿಂದ ಓದಿ ಬೆಳೆದ ತುಮಕೂರಿನ ಮೋಹವೇ ಕಾರಣವಾಗಿ 2018ರ ಅಕ್ಟೋಬರ್ 14ರಂದು ʼ ಬೆವರ ಹನಿʼ ದಿನಪತ್ರಿಕೆಯ ತುಮಕೂರು ಆವೃತ್ತಿಯನ್ನು ಆರಂಭಿಸಿದೆ. ನಾಲ್ಕು ಪುಟಗಳ ಕಪ್ಪು ಬಿಳುಪಿನ ಎರಡು ಜಿಲ್ಲಾ ಆವೃತ್ತಿಗಳನ್ನು ಸ್ವಂತದ ವೆಬ್ ಆಫ್ ಸೆಟ್ ಮುದ್ರಣಾಲಯದಲ್ಲಿ ಮುದ್ರಿಸುತ್ತಿರುವಾಗಲೇ ಕೊರೊನಾ ವೈರಸ್ ಸೋಂಕನ್ನು ಹೊತ್ತು ತಂದ ಕೋವಿಡ್ 2019 ಎಲ್ಲರ ಬದುಕನ್ನು ಪಲ್ಲಟಗೊಳಿಸಿತು. ಸುಮಾರು ಎರಡು ವರ್ಷಕ್ಕೂ ಹೆಚ್ಚು ಅವಧಿಗೆ ವಾರದ ಏಳೂ ದಿನ ಯಾವ ವರಮಾನವೂ ಇಲ್ಲದೇ ಪತ್ರಿಕೆಯನ್ನು ಮುದ್ರಿಸಬೇಕಾಗಿ ಬಂತು . ಆದರೆ ಪತ್ರಿಕೆಯನ್ನು ನಿಲ್ಲಿಸಲಿಲ್ಲ.
2021ರ ಆರಂಭದಲ್ಲಿ ಸ್ವಂತದ ಬಣ್ಣದ ಮುದ್ರಣಯಂತ್ರವನ್ನು ತುಮಕೂರಿನಲ್ಲಿ ಸ್ಥಾಪಿಸಿದೆ, ಆ ಜುಲೈನಿಂದ ಇವತ್ತಿನವರೆಗೂ ʼ ನಿಮ್ಮ " ಬೆವರ ಹನಿ" ದಿನಪತ್ರಿಕೆ ಬಣ್ಣದಲ್ಲೇ ನಿಮ್ಮ ಕೈ ಸೇರುತ್ತಿದೆ. ಜಿಲ್ಲಾ ಮಟ್ಟದ ದಿನಪತ್ರಿಕೆ ಪ್ರಾದೇಶಿಕ ದಿನಪತ್ರಿಕೆಯಾಗಿ ಮೂರು ವರ್ಷಗಳಾದವು. ಸುದ್ದಿಯ ಗುಣಮಟ್ಟ, ಮುದ್ರಣದ ಗುಣಮಟ್ಟ ಹಾಗೂ ಮುದ್ರಣ ಕಾಗದದ ಗುಣಮಟ್ಟದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ಅಷ್ಟು ಮುದ್ದಾಗಿ, ಅಚ್ಚುಕಟ್ಟಾಗಿ ಪತ್ರಿಕೆಯನ್ನು ರೂಪಿಸುವ ದೊಡ್ಡ ತಂಡವೇ ನನ್ನೊಂದಿಗೆ ಇದೆ ಎನ್ನುವುದೇ ಸಂತಸದ ಸಂಗತಿ.
ʼ ಬೆವರ ಹನಿʼ ಪ್ರಾದೇಶಿಕ ದಿನಪತ್ರಿಕೆ ಕುರಿತ ಮೇಲಿನ ಮಾತುಗಳು ನನ್ನ 39 ವರ್ಷಗಳ ಪತ್ರಿಕಾ ವೃತ್ತಿಯ ಪರಿಶ್ರಮಕ್ಕೆ ಹಿಡಿದ ಕೈಗನ್ನಡಿ ಅಂತ ಭಾವಿಸುವುದರಲ್ಲಿ ತಪ್ಪಿಲ್ಲ ಅಂತ ಅಂದುಕೊಳ್ಳುವೆ. ಹಂಗಾಗಿಯೇ ನಾನು ಪತ್ರಿಕೆಯ ಕುರಿತು ಬರೆಯುವಾಗ ಓದುಗ ಮಹಾ ಪ್ರಭುವೇ ಅಂತ ಆರಂಭಿಸುವುದು.
ಮೊನ್ನೆ ಸೋಮವಾರ ಕೆಎನ್‌ಆರ್ ಬರ್ತ್‌ಡೇ, ಅವತ್ತು ಅವರಿಗಾಗಿ ನಾಲ್ಕು ಪುಟಗಳ ಸಂಪೂರ್ಣ ಬಣ್ಣದ ಪುರವಣಿಯೊಂದನ್ನು ಮುದ್ರಿಸಿ ವಿಶೇಷವಾಗಿ ಅವರು ಪ್ರತಿನಿಧಿಸುವ ಮಧುಗಿರಿ ವಿಧಾನ ಸಭಾ ಕ್ಷೇತ್ರದಲ್ಲಿ ಹೆಚ್ಚುವರಿಯಾಗಿ ಸಾವಿರಾರು ಪ್ರತಿಗಳನ್ನು ವಿತರಿಸಲು ವ್ಯವಸ್ಥೆ ಮಾಡಿದ್ದೆ. ಮಧುಗಿರಿಯ ನಮ್ಮ ಪ್ರತಿನಿಧಿ ಚಂದ್ರಕಾಂತ್ ಜೊತೆ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಲು ಹೋದಾಗ ಕೆಎನ್‌ಆರ್ ಹೇಳಿದ್ದು , " ಪೇಪರ್ ನಡೆಸೋದು ಕಷ್ಟ ಕಣ್ರೀ"
ನಿನ್ನೆ ಪ್ರವಾಸಿ ಮಂದಿರದಲ್ಲಿ ಭೇಟಿಯಾದ ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶಗೌಡರೂ ಇದೇ ಮಾತುಗಳನ್ನು ಆಡಿದರು. ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಅವರೂ ಸಿಕ್ಕಾಗೆಲ್ಲ " ಅದೆಂಗೆ ಪೇಪರ್ ನಡೆಸ್ತೀರೋ ನನಗಂತೂ ಅರ್ಥ ಆಗಲ್ಲ" ಅಂತ ಹೇಳುತ್ತಲೇ ಇರುತ್ತಾರೆ.
ನಾನು ಇದೇ ಊರಿನಲ್ಲಿ 1988ರ ಜನವರಿ ಅಂತ್ಯದಲ್ಲಿ ವಾರಪತ್ರಿಕೆಯಿಂದ ದಿನಪತ್ರಿಕೆಯಾಗಿ ಪ್ರಕಟಣೆ ಆರಂಭಿಸಿದ ಪತ್ರಿಕೆಯಲ್ಲಿ ಮೊದಲ ಎಂಟು ವರ್ಷ ಮುಖ್ಯ ವರದಿಗಾರನಾಗಿ , ಮ್ಯಾನೇಜರ್ ಆಗಿ, ಆ ಪತ್ರಿಕೆಯ ಸಂಪಾದಕರು ನನ್ನನ್ನು ಯಾರಿಗಾದರೂ ಪರಿಚಯ ಮಾಡಿಕೊಡುವಾಗ ಹೇಳುತ್ತಿದ್ದ " ನನ್ನ ಬಲಗೈ" ಆಗಿ, " ನಮ್ಮ ಪತ್ರಿಕೆಯ ಆಲ್ ಇನ್ ಆಲ್ " ಆಗಿ ಕೆಲಸ ಮಾಡಿದ ಅನುಭವ ಮತ್ತು ನಿಮ್ಮೆಲ್ಲರ ಬೆಂಬಲ ನನ್ನ ಕೈ ಹಿಡಿದಿದೆ. ನಿಮ್ಮ ಅಚ್ಚುಮೆಚ್ಚಿನ " ಬೆವರ ಹನಿ" ಪ್ರಾದೇಶಿಕ ದಿನಪತ್ರಿಕೆಯನ್ನು ಮುನ್ನಡೆಸುತ್ತಿದೆ.
ತ್ಯಾಂಕ್ಯೂ ವೆರಿ ಮಚ್ ಓದುಗ ಮಹಾ ಪ್ರಭುವೇ
- ಕುಚ್ಚಂಗಿ ಪ್ರಸನ್ನ
bevarahani1