ಚೀನಾ ಆಕ್ರಮಣ ಮತ್ತು ನೆಹರೂ-ವಾಜಪೇಯಿ-ಹಳ್ಳಿ ಹೈದನ ನೂರೆಂಟು ನೆನಪು-ಸಿ-ಚಿಕ್ಕಣ್ಣ
ಚೀನಾ ಆಕ್ರಮಣ ಮತ್ತು ನೆಹರೂ-ವಾಜಪೇಯಿ
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಹಳ್ಳಿಯೊಂದರಲ್ಲಿ ಹುಟ್ಟಿ ಬೆಳೆದು, ಸರಕಾರಿ ಸೇವೆಗೆ ಸೇರಿ ಐಎಎಸ್‍ಅಧಿಕಾರಿಯಾಗಿ ಸೇವೆ ಸಲ್ಲಿಸಿ ವಿಶ್ರಾಂತ ಜೀವನ ನಡೆಸುತ್ತಿರುವ ಸಿ.ಚಿಕ್ಕಣ್ಣನವರ ಆತ್ಮಕಥೆ ‘ ಅಗ್ನಿ ಹಂಸ’ವನ್ನು ವಾರವಾರವೂ ಓದುತ್ತಿದ್ದೀರಿ, ಅವರ ಬಾಲ್ಯದ, ಯೌವ್ವನದ ನೆನಪುಗಳ ಜೊತೆ ಜೊತೆಗೇ ಆ ಕಾಲದ ಆಗುಹೋಗುಗಳನ್ನೂ ದಾಖಲಿಸುವ ಮೂಲಕ ಇತಿಹಾಸದ ವಾಸ್ತವ ಘಟನೆಗಳನ್ನು ದಾಖಲಿಸಿದ್ದಾರೆ ಚಿಕ್ಕಣ್ಣನವರು. ಅವರ ಬರವಣಿಗೆ ಕುರಿತ ನಿಮ್ಮ ಅನಿಸಿಕೆಗಳನ್ನು ಲೇಖನದ ಅಂತ್ಯದಲ್ಲಿರುವ ಲೇಖಕರ ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಿಳಿಸಬಹುದು ಅಥವಾ ಅವರಿಗೆ ಈ ಮೇಲ್ ಕೂಡಾ ಕಳಿಸಬಹುದು.
ಹಳ್ಳಿ ಹೈದನ ನೂರೆಂಟು ನೆನಪು- ಸಿ.ಚಿಕ್ಕಣ್ಣ-ಐಎಎಸ್ (ನಿ)
(ಹಿಂದಿನ ‘ಕಿನ್ನರಿ’ಯಿಂದ)
ಚೀನಾ ಆಕ್ರಮಣ ಮತ್ತು ನೆಹರೂ-ವಾಜಪೇಯಿ
ಈ ಮಧ್ಯೆ ದಂಡಿನದಿಬ್ಬದಲ್ಲಿ ಗುರುದೇವ ರೂರಲ್ ಹೈಸ್ಕೂಲ್ ಒಂದನ್ನು ಆರಂಭಿಸಿದ್ದರು. ಅದರಲ್ಲಿ ಆರ್ಟ್ಸ್ ಟೀಚರ್ ಆಗಿ ನಮ್ಮ ಚಿಕ್ಕಪ್ಪ ಟಿ. ಶಂಕರಪ್ಪನವರು ಸೇರಿದ್ದರು. ಅವರು ನಮ್ಮ ಎರಡನೇ ಚಿಕ್ಕಪ್ಪ, ದೊಡ್ಡಚಿಕ್ಕಪ್ಪನವರ ಮನೆಯಲ್ಲಿರುತ್ತಿದ್ದರು. ನಮ್ಮ ಅಜ್ಜಿ, ರಂಗಜ್ಜಿ ತಮ್ಮ 3 ಮಕ್ಕಳ ಮನೆಗಳಲ್ಲಿ ದಿನ ಬೆಳಗಾದರೆ ಮೊಸರು ಕಡೆಯುವುದು, ಬೆಣ್ಣೆ ಕಾಸುವುದು ಮುಂತಾದ ಕೆಲಸಗಳನ್ನು ಮಾಡಿಕೊಟ್ಟು 3 ಜನ ಸೊಸೆಯಂದಿರಿಗೂ ಅಚ್ಚುಮೆಚ್ಚಾಗಿದ್ದರು. ಸದಾ ಅಡಿಕೆ ಎಲೆ ಮೆಲ್ಲುತ್ತಾ ಅಂಗೈ ತುಂಬಾ ಹೊಗೆಸೊಪ್ಪನ್ನು ಅಡಿಕೆ-ಎಲೆ ಜತೆ ಕುಟ್ಟಾಣಿಗೆ ಸೇರಿಸಿ ಪುಡಿಮಾಡಿ ಆಗಿಯುವರು. ಎಷ್ಟು ಹೇಳಿದರೂ ಯಾರ ಮಾತನ್ನೂ ಕೇಳುತ್ತಿರಲಿಲ್ಲ. ಅವರಿಗೆ ಬಾಯಿ ಕ್ಯಾನ್ಸರ್ ಖಾಯಿಲೆ ಶುರು ಆಗಿತ್ತು. ತಮ್ಮ ಜಯಣ್ಣ ದಂಡಿನದಿಬ್ಬದಲ್ಲಿ ಪಿಯುಸಿ ಪರೀಕ್ಷೆ ಕಟ್ಟಿದ್ದ, ದೊಡ್ಡಚೌಡಯ್ಯ 8ನೇ ತರಗತಿಯಲ್ಲಿದ್ದ. ವ್ಯವಸಾಯವೆಲ್ಲ ನಮ್ಮ ತಂದೆಯವರದಾಗಿತ್ತು. ಅಕ್ಕ ಇಬ್ಬರು ಮಕ್ಕಳ ಜತೆ ಭಕ್ತರಹಳ್ಳಿಗೆ ಹಿಂದಿರುಗಿದ್ದರು. ಜೂನ್ ತಿಂಗಳಲ್ಲಿ ಟ್ರಂಕು ತೆಗೆದುಕೊಂಡು ಅಪ್ಪನ ಹತ್ತಿರ ಕೊಸರಾಡಿ ದುಡ್ಡು ಪಡೆದು ಬೆಂಗಳೂರು ಬಸ್ ಹತ್ತಿದೆ.
ಹಾಸ್ಟೆಲ್‌ನಲ್ಲಿ ವಾರ್ಡನ್ ಬದಲಾಗಿದ್ದರು. ಬಿಟಿಎನ್ ಅವರನ್ನು ಈ ವರ್ಷ ಮೈಸೂರು ವಿಶ್ವವಿದ್ಯಾನಿಲಯ ಆರಂಭಿಸಿದ್ದ ಎಂಕಾಂ ತರಗತಿಗಳ ವಿಭಾಗದ ಮುಖ್ಯಸ್ಥರನ್ನಾಗಿ ನೇಮಿಸಿ RC ಕಾಲೇಜಿನಿಂದ ವರ್ಗ ಮಾಡಿದ್ದರು. ಅವರ ಜಾಗದಲ್ಲಿ ಹಾಸ್ಟೆಲ್‌ನ 8ನೇ ರೂಂನಲ್ಲಿದ್ದುಕೊಂಡು ಬಿಕಾಂ ಮುಗಿಸಿದ್ದ ಎ.ಎಸ್. ರಾಮಪ್ಪ ಅವರು ವಾರ್ಡನ್ ಆಗಿದ್ದರು. ಅವರ ರೂಮ್‌ನಲ್ಲಿ ರಂಗಸ್ವಾಮಿ ಎನ್ನುವವರು Third B.Comಗೆ ಎಪಿಎಸ್ ಕಾಲೇಜಿನಲ್ಲಿದ್ದರು. ಪಟ್ಟನಾಯಕನಹಳ್ಳಿಯ ಹತ್ತಿರದ ಯಾದಲಡಕು ಗ್ರಾಮದವರು. ಅವರ ಮತ್ತೊಬ್ಬ ತಮ್ಮ ಆರ್.ಕೃಷ್ಣಯ್ಯ R.C. ಕಾಲೇಜಿಗೆ 1ನೇ ಬಿಕಾಂಗೆ ಸೇರಿ ನನ್ನ ರೂಂಮೇಟಾದರು. ಹೀಗಾಗಿ ಈ ವರ್ಷ ನಮ್ಮ ರೂಂನಲ್ಲಿ 4 ಜನ ಇದ್ದು ಹಾಸ್ಟೆಲ್‌ನಲ್ಲಿ ಒಟ್ಟು 30 ಜನ ಇದ್ದೆವು. ಮಾರಪ್ಪನ ಕಾಟದಿಂದಾಗಿ ನಾನು ಈ ವರ್ಷ ಪ್ರಿಫೆಕ್ಟ್ ಕೆಲಸ ಬೇಡ ಎಂದರೂ ಎಲ್ಲರ ಒತ್ತಾಯದಿಂದ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾದೆ.
*****
ಇಂಡೋ-ಚೀನಾ ಯುದ್ಧ
1962 ಜೂನ್ ತಿಂಗಳಲ್ಲಿ ಭಾರತಕ್ಕೆ ಚೀನಾ ಪ್ರಧಾನಿ ಚೌಎನ್‌ಲಾಮ್‌ಆಗಮಿಸಿದ್ದರು. ಅವರು ಬೆಂಗಳೂರಿಗೆ ಬಂದು, ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳೊಡನೆ ಸಭೆಗೆ ಬರುವಾಗ-ಹೋಗುವಾಗ, ನಮ್ಮ ಕಾಲೇಜಿನ ಹುಡುಗರು, ಮಹಾರಾಣಿ ಕಾಲೇಜಿನ ಹುಡುಗಿಯರು, Government Arts & Science ಕಾಲೇಜಿನ ಹುಡುಗರು ನಮ್ಮ ಕಾಲೇಜಿನ ಮುಂಭಾಗದ Tele phone Exchange ಮುಂದೆ ನಿಂತು ನಮ್ಮ ರಾಷ್ಟ್ರ ಧ್ವಜಗಳನ್ನು ಹಿಡಿದು ಅವರನ್ನು ಸ್ವಾಗತಿಸಿ, ನಂತರ ಬೀಳ್ಕೊಟ್ಟಿದ್ದೆವು. ಇದಾದ ಮೂರೇ ತಿಂಗಳಿಗೆ ಚೀನಾ ದೇಶವು ನಮ್ಮ ದೇಶದ ಮೇಲೆ ಯುದ್ಧವನ್ನು ಸಾರಿತ್ತು. ಭಾರತ ಭಾಗವಾದ ಅಕ್ಸಾಯಿಚಿನ್ ಭಾಗವನ್ನು ಆಕ್ರಮಿಸಿಕೊಂಡು ಅದು ತನಗೇ ಸೇರಬೇಕೆಂದು ಮೊಂಡುತನ ಮಾಡಿತ್ತು. ಯುದ್ಧಕಾಲದ ಮಾಹಿತಿಯನ್ನು ರೇಡಿಯೋದಲ್ಲಿ ಬಿತ್ತರಿಸುತ್ತಿದ್ದರು. ಮಾರ್ಕೆಟ್‌ನಲ್ಲಿ ಜಪಾನ್ ಮೇಕ್ ಪಾಕೆಟ್ ರೇಡಿಯೋ ತೆಗೆದುಕೊಂಡು, ಸದಾ ಅದನ್ನು ಕಿವಿಗೆ ತಗುಲಿ ಹಾಕಿಕೊಂಡು ಯುದ್ಧದ ಮಾಹಿತಿ, ಪ್ರಧಾನಿ ಜವಾಹರಲಾಲ್ ಅವರ ಭಾಷಣಗಳು, ರಕ್ಷಣಾ ಸಚಿವರಾದ ಕೃಷ್ಣಮೆನನ್ ಮೊದಲಾದವರ ಭಾಷಣ ಕೇಳುತ್ತಿದ್ದೆವು. ರಾತ್ರಿಹೊತ್ತು ಬಿನಾಕಾ ಗೀತಮಾಲಾ, ರೇಡಿಯೋ ಸಿಲೋನ್ ಮೂಲಕ ನನ್ನ ಅಭಿರುಚಿಯ ಹಿಂದಿ ಸಿನಿಮಾ ಹಾಡುಗಳನ್ನು ಕೇಳಿ ಆನಂದಿಸುತ್ತಿದ್ದೆ.
ನವೆಂಬರ್ ತಿಂಗಳಲ್ಲಿ ಪ್ರಧಾನಿ ಜವಾಹರಲಾಲ್‌ನೆಹರು ಅವರು ಬೆಂಗಳೂರಿನ ಸೆಂಟ್ರಲ್ ಕಾಲೇಜು, ಗೌಂಡ್‌ನಲ್ಲಿ ಭಾಷಣ ಮಾಡುತ್ತಾರೆಂದು ತಿಳಿದು ಮಧ್ಯಾಹ್ನ ಕಾಲೇಜಿಗೆ ರಜಾ ಕೊಟ್ಟರು, ನಮ್ಮ ತಂಡದ ಎಲ್ಲಾ ಹುಡುಗರು ಸೆಂಟ್ರಲ್‌ಕಾಲೇಜು ಗ್ರೌಂಡ್‌ಗೆ ಓಡಿದೆವು. ಅಷ್ಟು ಹೊತ್ತಿಗಾಗಲೇ ಜನ ಜಂಗುಳಿಯಾಗಿತ್ತು. ತಳ್ಳಿಕೊಂಡು ಮುಂದೆ ಹೋಗಿ ಎತ್ತರದ ಡಯಾಸ್ ಹತ್ತಿರ ನೆಲದ ಮೇಲೆ ಜಾಗ ಮಾಡಿಕೊಂಡು ಕುಳಿತೆವು, ನೆಹರೂ ಅವರನ್ನು ಹತ್ತಿರದಿಂದ ನೋಡಿ ಕಣ್ಣುಂಬಿಕೊಳ್ಳುವ ತವಕದಿಂದ.
ಸಂಜೆ ಸುಮಾರು 5-30ಕ್ಕೆ ಪಂಡಿತ್ ನೆಹರು ಅವರು ಡಯಾಸ್ ಮೇಲೆ ಬಂದ ಕೂಡಲೇ, ವಿದ್ಯುತ್‌ಸಂಚಾರವಾದಂತಾಗಿ, ಭಾರತ ಮಾತಾಕೀ ಜೈ ಎಂಬ ಘೋಷಣೆ ಮೊಳಗಿತು. ಪಕ್ಕದಲ್ಲಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಇದ್ದರು. ಇವರನ್ನು ಬಿಟ್ಟರೆ ಬೇರಾರಿಗೂ ಅವಕಾಶ ಇರಲಿಲ್ಲ. ನೆಹರು ಅವರು 15 ನಿಮಿಷಗಳ ಕಾಲ ಭಾಷಣ ಮಾಡಿದರು. ಚೈನಾ ದೇಶದ ಡೋಂಗಿತನವನ್ನು ಭಾರತದ ಸೈನಿಕರು ತಮ್ಮ ಪ್ರಾಣದ ಹಂಗು ತೊರೆದು ಹೇಗೆ ಹೋರಾಡುತ್ತಿದ್ದಾರೆ ಎಂದು ವಿವರಿಸಿದರು. ನೀವೆಲ್ಲ ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಬೇಕೆಂದು ಕರೆ ನೀಡಿದರು.
ಅದಾದ 15 ದಿನಗಳಲ್ಲಿ ಜನಸಂಘದ ವತಿಯಿಂದ ಅಟಲ್ ಬಿಹಾರಿ ವಾಜಪೇಯಿಯವರು ಬೆಂಗಳೂರಿಗೆ ಬಂದು ಈಗಿನ ಕಾವೇರಿ ಭವನದ ಮುಂದಿರುವ ವಿಶಾಲವಾದ ಮೈದಾನದಲ್ಲಿ (ಈಗ ಅಲ್ಲಿ 'ಜ್ಞಾನಜ್ಯೋತಿ' ಸಂಭಾಂಗಣವನ್ನು ಕಟ್ಟಲಾಗಿದೆ) ಭಾಷಣ ಮಾಡಿದರು. ಈ ಕಷ್ಟಕಾಲದಲ್ಲಿ ನಾವೆಲ್ಲರೂ ನೆಹರು ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡಬೇಕು, ಚೈನಾ ದೇಶವನ್ನು ಯುದ್ಧದಲ್ಲಿ ಸೋಲಿಸುವ ಪಣ ತೊಡಬೇಕೆಂದು ಕರೆಕೊಟ್ಟರು. ದೇಶದ ಹಿತಕ್ಕಾಗಿ ಆಳುವ ಪಕ್ಷಕ್ಕೆ ವಿರೋಧ ಪಕ್ಷದವರು ಹೇಗೆ ಸಹಕಾರಿಗಳಾಗಬೇಕೆಂಬುದನ್ನು ಮಾನ್ಯ ಅಟಲ್ ಬಿಹಾರಿ ವಾಜಪೇಯಿಯವರು ತೋರಿಸಿಕೊಟ್ಟರು.
( ಮುಂದಿನ ‘ಕಿನ್ನರಿ’ಗೆ)