ಹಿಂದ್ ಸ್ವರಾಜ್ : ಗಾಂಧಿ ಎಂಬ ಮಹಾ ಕನಸುಗಾರನ ಅಪೂರ್ವ ಕನಸು
ಕಿಶನ್ ಪಟ್ನಾಯಕ್ ಅವರು ವಿಶ್ಲೇಷಣಾತ್ಮಕವಾಗಿ ನಿರೂಪಿಸುವ ಗಾಂಧಿ -ನೆಹರೂ ಅವರ ನಡುವೆ ನಿರ್ಣಾಯಕ ಸನ್ನಿವೇಶದಲ್ಲಿ ನಡೆದ ಅಪೂರ್ಣ ಪತ್ರ ಸಂವಾದ ಇದು . ಗಾಂಧಿ ಗೋಡ್ಸೆಯ ಕೈಯಲ್ಲಿ ಹತ್ಯೆಯಾಗುವ ಮುನ್ನವೇ ಜಗತ್ತು ಗಾಂಧಿಯ ವಾರಸುದಾರರೆಂದೇ ಭಾವಿಸಿದ್ದ ನೆಹರೂ ಅವರೆ ಗಾಂಧಿಯನ್ನು ತಾತ್ವಿಕವಾಗಿ ನಿರ್ಲಕ್ಷಿಸಿದ್ದರು ಎಂಬುದನ್ನು ಇದು ದಾಖಲಿಸುತ್ತದೆ .

ಡಾ.ಕೆ.ಪಿ.ನಟರಾಜ್
ಕುವೆಂಪು ಅವರ ಮಹಾಕಾವ್ಯ 'ಶ್ರೀ ರಾಮಾಯಣ ದರ್ಶನಂ' ನಲ್ಲಿ 'ಕುಣಿದಳುರಿಯ ಉರ್ವಶಿ'ಎಂಬ ಸಂಚಿಕೆಯಲ್ಲಿ ಸ್ಥಳೀಯತಾ ತತ್ವದ ನಿರೂಪಣೆಯೊಂದು ಎದುರಾಗುತ್ತದೆ .ಸೀತಾರಾಮಲಕ್ಷ್ಮಣರು ವನವಾಸದಲ್ಲಿ ಕಾಡಿನ ಗರ್ಭದಲ್ಲಿ ಪರ್ಣಕುಟಿಯೊಂದರಲ್ಲಿ ವಾಸವಿದ್ದಾಗ ಅವರಿಗೆ ಅ ಪರ್ಣಕುಟಿಯ ಮುಂದೆ ಎದ್ದು ನಿಂತಿದ್ದ ಕಲ್ಲೊಂದು ತಪಸ್ವಿಯಂತೆ ಭಾಸವಾಗುತ್ತದೆ ಅದನ್ನು ಅವರು ' ಕಲ್ ದವಸಿ' ಎಂದು ಕರೆಯುತ್ತಾರೆ .. 'ಕಲ್ ತಪಸ್ವಿ' ಎಂಬುದು ಅದರ ಅರ್ಥ.
ಈ ಕಾವ್ಯ ನಿಜಾರ್ಥದಲ್ಲಿ ಮಾನವ ಕಥನವನ್ನು ಒಡಲುಗೊಂಡ 'ಮಹಾಕಾವ್ಯ'ವಾದರೂ ಇದು ಪ್ರಾಕೃತ ಕಥನದ ಆಡುಂಬೊಲ ಕೂಡಾ. ಇಲ್ಲಿನ ಚರಾಚರಗಳೊಂದಿಗೆ ರಾಮಾದಿಗಳು ಸಾಧಿಸುವ ಸಾಮರಸ್ಯ, ಸಖ್ಯ ಗಮನಾರ್ಹ. ಈ ಕಾಡು, ಚರಿತ್ರೆಯ ಆದಿಮ ದಿನಗಳ ಅಥವಾ ಚರಿತ್ರ ಪೂರ್ವ ಯುಗಗಳ ದುರ್ದಮ್ಯ ಕಾಡೆಂಬ ಅಂಶ ಮಖ್ಯ. ಈ ಕಾಡಿನ ಸಂಸರ್ಗದ ಕಥನವೂ ಕಾವ್ಯದ ಕಥಾಭಾಗವಾಗುವುದು ಸಹಜ ವಿದ್ಯಮಾನವಾಗಿದೆ. ಅಲ್ಲಿನ ಒಮದು ಉದ್ಧರಿಸಲ್ಪಟ್ಟ ಭಾಗ ವನ್ನೊಮ್ಮೆ ನೋಡೋಣ
"ಮೊದ ಮೊದಲ್ ಪರಕೀಯಮಪರಿಚಿತಮಾಗಿರ್ದ ಗಿರಿವನಂ ಪರಿಚಯದಿನಾತ್ಮೀಯ ಭಾವಮಂ
ತಳೆದುದು ಸಲಿಗೆವೆತ್ತು : ಅಂದು ಕಲ್ಲಾಗಿರ್ದ್ದ ಕಲ್ಲೀಗಳಾದುದಯ್ ನೆನಹಿಗೆ ನಿಕೇತನಂ
ಹಿಂದೆ ಬರಿ ಮರವಾದುದಿಂದವರ ಬಾಳ್ಗೊಂದು ಸಂಕೇತವಾಯ್ತು. ಬಂದಂದು ಆ ಕಾಡಿನೊಳ್ ಬರಿ ಬಳ್ಳಿಯಾಗಿರ್ದುದಿಂದು ತಮ್ಮೆಲೆವನೆಯ ಮುಂದಣಂಗಣದಂಚಿನಲ್ಲಿ ತಮ್ಮೆರ್ದೆ ಬಾಳ್ಗೆ
ನಿತ್ಯಸಾಕ್ಷಿಗೆ ನಿಂದದೊಂದು ಕೇತನವಾಯ್ತು.
ಅಪ್ರಮುಖ ವಸ್ತುಗಳ್ಗಲ್ಪತ್ವಮಳಿದುದಯ್
ಅನುಭವದ ಘನಮಹಿಮೆಯಿಂ. ಭಾವ ಪರಿವೇಷಮಂ ಪಡೆದು, ಜಡವೇಷಮಂ ಪಿಂಗಿದಾವೇಶದಿಂ ಪ್ರಾಣಮಯವಾಗಿ ಮೇಣರ್ಥಮಯವಾಗಿ ಕೇಳ್
ಸ್ಮೃತಿಕೋಶವಾದುದಯ್ ಆ ಒಂದೊಂದು ವಸ್ತುವು ತೊರೆದಚಿದ್ಭಾವಮಂ." ( ಶ್ರೀ ರಾಮಾಯಣ ದರ್ಶನಂ,ಪುಟ : 147)
ಮೊದಮೊದಲು ಪರಕೀಯವೂ ಅಪರಿಚಿತವೂ ಆಗಿದ್ದ ಗಿರಿವನಗಳು ಕಾಲಕಳೆದಂತೆ ಪರಿಚಯದಿಂದ ,ಆತ್ಮೀಯವಾಗತೊಡಗಿದ ನಿರೂಪಣೆ ಇಲ್ಲಿದೆ .. ಕಲ್ಲಾಗಿದ್ದದ್ದು ನೆನಪಿನ ನೆಲೆಯಾಗುವುದನ್ನು , ಬರಿದೆ ಮರವಾಗಿ ನಿಂತಿದ್ದು ಬಾಳಿನ ಸಂಕೇತವಾಗುವ ,ತಮ್ಮ ಪರ್ಣ ಕುಟೀರದ ಎದುರು ಹಬ್ಬಿದ್ದ ಬಳ್ಳಿ ಯೊಂದು ಸೀತಾರಾಮಾದಿಗಳ ಎದೆಬಾಳಿನ ಧ್ವಜವಾಗುವ , ಅಪ್ರಮುಖವಾದ ವಸ್ತುಗಳ ಅಲ್ಪತ್ವವಳಿಯುವ ,ಜಡವು ಸಪ್ರಾಣಿಸುವ ಅಚಿತ್ ಭಾವವನ್ನು ತೊರೆದು ನೆನಪಿನ ಭಂಡಾರವಾಗುವ ವಿದ್ಯಮಾನವನ್ನು ಕುವೆಂಪು ಇಲ್ಲಿ ಇಡುತ್ತಾರೆ
ಇಲ್ಲಿ ನಿರೂಪಿಸಲ್ಪಡುತ್ತಿರುವ ತತ್ವದೃಷ್ಟಿ, ಸ್ಥಳೀಯತಾ ಸಂಸರ್ಗವನ್ನು ಅದರ ಪರಾಕಾಷ್ಠೆಯ ಆನುಭಾವಿಕ ಸ್ವೀಕರಣೆಯ ಫಲದಿಂದ ರೂಪುಗೊಂಡದ್ದಾಗಿದೆ.
ದರ್ಶನಂ'ನ ಉಲ್ಲೇಖ 'ಚಿತ್ರಕೂಟ'ದ ಪರ್ಣಶಾಲೆಯನ್ನು ಸುತ್ತುವರೆದು ಪ್ರಾಕೃತ ಪರಿಸರವೆಲ್ಲ ಮಾನವ ಸಂಸರ್ಗದ ಆತ್ಮೀಯ ವಲಯಕ್ಕೆ ಸೇರುವ ಪ್ರಕ್ರಿಯೆ ಮೊದಲಾಗಿರುವುದನ್ನು ಮಂಡಿಸುತ್ತದೆ. ಪರಕೀಯವೆಂದು ಭಾಸವಾಗುವ ಪರಿಸರವು ನಿತ್ಯ ಸಂಸರ್ಗದಿಂದ ಆತ್ಮೀಯವಾಗುತ್ತಲೇ , ಐತಿಹ್ಯವಾಗುವ , ಪುರಾಣವಾಗುವ ಪರಿಯೊಂದು ಇಲ್ಲಿ ಮೊದಲಾಗುವ ನಿರೂಪಣೆ ಪಡೆದಿದೆ. ಅಲ್ಲಿಗೆ ಬಂದಾಗ ಸುಮ್ಮನೆ ಬಿದ್ದ ಕಲ್ಲಾಗಿದ್ದ ಕಲ್ಲೊಂದು ನೆನಪಿನ ನಿಕೇತನವಾಗುವ, ಬರಿದೆ ನಿಂತ ಮರವೊಂದು ಬಾಳಿನ ಸಂಕೇತವಾಗುವ, ಬರಿ ಬಳ್ಳಿಯಾಗಿ ಕಂಡಿದ್ದೊಂದು ಹೃಜ್ಜೀವನಕ್ಕೆ ಸಾಕ್ಷಿಯಾಗಿ ನಿಂತ ಧ್ವಜವಾಗುವ, ಅಪ್ರಮುಖ ವಸ್ತುಗಳ ಅಲ್ಪತ್ವವಳಿಯುತ್ತಾ ಘನವೆನಿಸುತ್ತ, ಪ್ರಾಣಮಯವಾಗಿ, ಅರ್ಥಮಯವಾಗಿ ತಮ್ಮ 'ಅಚಿದ್ಭಾವ'ವನ್ನು ಅಳಿಸುತ್ತಾ ಸ್ಮೃತಿಕೋಶವಾದದ್ದನ್ನು ಪರಮಾನಸಯಾನಿ ಕಾವ್ಯ ತನ್ನ ಅಧಿಕೃತ ನೋಟದಿಂದ ಕಂಡರಿಸುತ್ತದೆ.
ಈ ನೋಟ ಡಾ. ಲೋಹಿಯಾ ಅವರ ಕಲಾ, ಆಧ್ಯಾತ್ಮಿಕ ಸಮ್ಮಿಳಿತ ಭಾರತೀಯ ಜೀವನ ಮೀಮಾಂಸೆಗೆ ಸಂವಾದಿಯಾಗಿ ನಿಲ್ಲುತ್ತದೆ. ರಾಮ, ಸೀತೆ, ಲಕ್ಷ್ಮಣಾದಿಗಳ ಭಾರತೀಯ ಸಂಸ್ಕೃತಿಯ ಅನಾದಿಯೆಂಬಂತಹ ಜೀವನ ವಿನ್ಯಾಸಕ್ಕೆ ಈ ನಿರೂಪಣೆ ಮೂರ್ತವಾದ ಆಧಾರವನ್ನೂ ಒದಗಿಸುತ್ತಿದೆ.
ನೆಲೆನಿಂತ ಸ್ಥಳವೆಲ್ಲವೂ ಆತ್ಮೀಯ ಪರಿಸರವಾಗಿ, ಐತಿಹ್ಯವಾಗಿ, ಪುರಾಣವಾಗಿ, ಮಾನವ ಸ್ವೀಕೃತ ಅನುಬಂಧವಾಗಿ ಬೆಸೆಯುವ ಭಾರತೀಯ ಜೀವನಮೀಮಾಂಸೆಯನ್ನು ಡಾ. ಲೋಹಿಯಾ ತಮ್ಮ ಪ್ರಖ್ಯಾತ ಬರಹ 'ರಾಮ, ಕೃಷ್ಣ, ಶಿವ' ದಲ್ಲಿ ಮಂಡಿಸುತ್ತಾರೆ.
"ಇವೊತ್ತಿಗೂ ಇಂಡಿಯಾದ ಬೆಟ್ಟಗುಡ್ಡಗಳೆಲ್ಲ ದೇವಾನುದೇವತೆಗಳ ನಿವಾಸಗಳೇ ಆಗಿದ್ದಾವೆ. ಈ ದೇವ ವರ್ಗ ಒಮ್ಮೊಮ್ಮೆ ಮನುಷ್ಯಗಾತ್ರದಲ್ಲಿ ಅವತರಿಸಿ ಇಲ್ಲಿನ ಬಯಲುಗಳಲ್ಲಿ ಬದುಕಿದ್ದೂ ಉಂಟು. ಕ್ರಿಶ್ಚಿಯಾನಿಟಿ ಮತ್ತು ಇಸ್ಲಾಂ - ಈ ಮೊದಲಾದ ಮರುಭೂಮಿಯ ವಿಷಯಾತೀತ ದರ್ಶನಗಳು ಎಲ್ಲಕ್ಕೂ ಆಚೆ, ಎಲ್ಲಕ್ಕೂ ಮೇಲೆ ಇರುವ ಏಕೈಕವೊಂದನ್ನು ಬಿಟ್ಟು ಉಳಿದೆಲ್ಲ ದೇವರುಗಳನ್ನು ನಾಶಪಡಿಸಿಬಿಟ್ಟಿವೆ ಮತ್ತು ಅವರ ಬೆಟ್ಟಗುಡ್ಡಗಳೂ ಬಯಲುಗಳೂ ನದಿಗಳೂ ಪುರಾಣದ ಅಲಂಕರಣಗಳಿಲ್ಲದೆ ನಗ್ನವಾಗಿ ಉಳಿದಿವೆ . ಇಂಡಿಯಾದಲ್ಲಿ ಅರಣ್ಯಗಳ ಬಗ್ಗೆಯಾಗಲಿ, ಗಿಡಮರಗಳ ಮೇಲೆ, ಬೆಟ್ಟಗಳ ಮೇಲೆ, ನೀರಿನ ಮೇಲೆ ನೆಲದ ಮೇಲೆ ಸವಿಗರೆದು ನಾಚಿಕೆಯ ನವಿರೇಳಿಸುತ್ತ ತುದಿಯಿಲ್ಲದ ಆಟದಲ್ಲಿ ತೊಡಗಿದಂಥ ಚಂದ್ರನ ಬಗ್ಗೆಯಾಗಲೀ ಬೆಳೆದಿರುವ ನೈಸರ್ಗಿಕ ವಿಶ್ವಾಸ ದೇವರುಗಳನ್ನೂ ಅವರ ಮಾನವೀಯ ಕಥೆಗಳನ್ನೂ ಜೀವಂತವಾಗಿಟ್ಟಿದೆ''
ಹೀಗೆ ಇಲ್ಲಿ ಪರ್ಣಕುಟಿಯ ಮುಂದೆ ಎದ್ದು ನಿಂತ ಕಲ್ಲೊಂದು ಇದ್ದಕ್ಕಿದ್ದಂತೆ 'ಕಲ್ದವಸಿ 'ಯಾಗುವ ವಿದ್ಯಮಾನವನ್ನು ನೋಡುತ್ತೇವೆ. ಸೀತೆಗೆ 'ಕಲ್ಗದೇನೋ ಆಕೃತಿ' ಬಂದಂತೆ ಕಂಡು, ರಾಮನೂ ಸಮಾನ ಕೌತುಕಕ್ಕೊಳಗಾಗಿ ಆ ಕಲ್ಲನ್ನು 'ಕಲ್ದವಸಿ' ಎಂದು ಕರೆಯತೊಡಗುತ್ತಾರೆ
ಒಮ್ಮೆ ಸಂಜೆಯ ಮಬ್ಬುಗತ್ತಲಲ್ಲಿ ರಾಮ ಸೀತೆಯರಿಗೆ ಸೌದೆಯ ಹೊರೆಯಿಳುಕಿ ಕಲ್ಲನೆತ್ತಿಯಲ್ಲಿ ಕೂತು ವಿಶ್ರಮಿಸುತ್ತಿದ್ದ ಲಕ್ಷ್ಮಣನನ್ನು ಕಂಡು ಎದೆಗರಗಿ, ನಿಡುಸುಯ್ದ ರಾಮ ಸೀತೆಯರು ಕಲ್ಲೆಡೆಗೆ ನಡೆದಾಗ ಪಡೆವ ಮಹನ್ನೋಟ ಕಲ್ದವಸಿಗೆ ಬೇರೊಂದು 'ಪ್ರತಿಮಾ' ಜೀವಪ್ರದಾನ ಮಾಡುವುದು ಮತ್ತೊಂದು ಮಹತ್ವದ ವಿಕಾಸವಾಗಿ ಕಾಣುತ್ತದೆ. “ಆ ಸಂಜೆಯಿಂದಾ ಬಂಡೆ, ಕಲ್ದವಸಿ, ಊರ್ಮಿಳೆಗೆ ಮೇಣವಳ ಸಂಯಮಕೆ ಪಡಿಮೆಯಾದುದು, ಮತ್ತೆ ಗುರುವಾದುದೆಚ್ಚರಿಕೆಯಾದುದೈ ಸತಿಗೆ ಮೇಣ್ ಪತಿಗೆ" ಎಂಬ ಸಾಲುಗಳಲ್ಲಿದು ದಾಖಲಾಗುತ್ತದೆ.
ಬಿದ್ದ ಕಲ್ಲು, ಎದ್ದ ಬೆಟ್ಟ, ನಿಂತ ಮರ, ಹೀಗೆ ಮಾನುಷ ಸಂಸರ್ಗದಲ್ಲಿರುವ ಸಮಸ್ತ ಚರಾಚರವೆಲ್ಲ ಮಾನವ ಬದುಕಿನ ಭಾಗವಾಗುವ ; ಸಂಸ್ಕಾರ ಕಮ್ಮಟವಾಗುವ, ಲೀಲೆಯ ಬಯಲಾಗುವ, ಪುರಾಣವಾಗುವ ಪರಿಯೊಂದು 'ಶ್ರೀ ರಾಮಾಯಣ ದರ್ಶನಂ' ಕಾವ್ಯದ ಕಥಾವರಣವಾಗಿ ಕಥಿಸಲ್ಪಡುತ್ತದೆ. ಇದುವೇ ತನ್ನ ಅನುಭಾವವೆಂಬ ನಿಲುವಿನಲ್ಲಿ ಮಹಾತ್ಮಾ ಗಾಂಧಿಯವರ ಕುರಿತಾಗಿ ಬರೆಯಹೊರಟಾಗ ಇಲ್ಲಿ ನಾನೇ ಕೆ 'ಕಲ್ದವಸಿ'ಯ ಪ್ರಸ್ತಾಪ ಮಾಡುತ್ತಿದ್ದೇನೆ ? ಕಾರಣವಿಷ್ಟೇ : ಗಾಂಧಿ ಹೀಗೆ ಸ್ಥಳೀಯ ದಲ್ಲಿ ನೆಲೆಗೊಳ್ಳುವ ಮನುಷ್ಯ ಹೇಗೆ ಚರಾರಚರಗಳ ಜೊತೆಗೆ ಸಾಮೀಪ್ಯವನ್ನು ಸಾಧಿಸುತ್ತಾನೆ , ಅನಕಂಪಪೂರ್ಣ ಸೌಹಾರ್ದ ಯುತ ಸಂಬಂಧದಲ್ಲಿ ಕರಗಿಹೋಗುತ್ತಾನೆ ಮತ್ತು ಆ ನಡುವಿನಿಂದಲೇ ವೈಯಕ್ತಿಕವಾದೊಂದು ದರ್ಮವನ್ನು , ಲೋಕದೃಷ್ಟಿಯನ್ನು , ಕಲಾ ಸೃಷ್ಟಿಯ ಧೀಮಂತಿಕೆಯನ್ನು ಪಡೆಯುತ್ತಾನೆ ಎಂಬುದನ್ನು ಹೇಳಲು ಇಲ್ಲಿ ಕಲ್ದವಸಿಯ ರೂಪಕವನ್ನು ತರುತ್ತಿದ್ದೇನೆ .

ಗಾಂಧಿ , ಮನುಷ್ಯ ತಾನು ಹುಟ್ಟಿದ ಗ್ರಾಮ ನೆಲೆಯಲ್ಲೇ ನೆಲೆಸಿ ತನ್ನ ಉದ್ಧಾರವನ್ನು ಕನಸಬೇಕೆಂದು ನನಸು ಮಾಡಿಕೊಳ್ಳಲು ಶ್ರಮಿಸಬೇಕೆಂದು ಆಶಿಸುತ್ತಾರೆ. ಇದೊಂದು ಮಹತ್ವದ ಪ್ರತಿಪಾದನೆಯಾಗುವ ವಿದ್ಯಮಾನ ಭಾರತದ ಸ್ವಾತಂತ್ರ್ಯ ಸನ್ನಿಹಿತವಾಗುವ ವರ್ಷಗಳಲ್ಪಿ ನಡೆಯುತ್ತದೆ . ಗಾಂಧಿ ತಮ್ಮ ವಾರಸು ದಾರರೆಂದು ಜನಜನಿತವಾಗುತ್ತಿದ್ದ ನೆಹರೂ ಅವರಿಗೆ ಪತ್ರ ಬರೆಯುತ್ತಾರೆ .. ಅದರಲ್ಲಿ ,ಭಾರತ ಸ್ವಾತಂತ್ರ್ಯಾನಂತರ ಇಡಬೇಕಾದ ಹೆಜ್ಜೆಗಳ ಕುರಿತು ಇರುತ್ತದೆ
ಸಮಾಜವಾದಿ ಹೋರಾಟಗಾರ ಕಿಷನ್ ಪಟ್ನಾಯಕ್ ಅವರು ನಿರೂಪಿಸಿದ ಮತ್ತು ವಿಶ್ಲೇಷಿಸಿದ ಗಾಂದಿ - ನೆಹರೂ ಪತ್ರ ಸಂವಾದದ ಸಾರವನ್ನು ಇಲ್ಲಿ ನೀಡಬಯಸುತ್ತೇನೆ..
1947 ರ ಸ್ವಾತಂತ್ರ್ಯ ಬರುವ ಮುನ್ನಿನ ವರ್ಷಗಳಲ್ಲಿ ಭಾರತದ ಸಂಕೇತ ಎಂದು ಲೋಹಿಯಾ ಅವರು ಗೌರವದಿಂದ ಕರೆಯುತ್ತಿದ್ದ ಮಹಾ ಕನಸುಗಾರ ಮಹಾತ್ಮಾ ಗಾಂಧಿಯವರ ಮತ್ತು ಗಾಂಧಿಯವರ ವಾರಸುದಾರರೆಂದೇ ಭಾವಿಸಲಾಗುತ್ತಿದ್ದ ನೆಹರೂ ಅವರ ನಡುವೆ ನಡೆದ ಪತ್ರ ಸಂವಾದವು ಭಾರತ ಸ್ವಾತಂತ್ರ್ಯಾನಂತರ ಯಾವ ದಾರಿಯಲ್ಲಿ ಮುನ್ನಡೆಯ ಬೇಕು ಎಂಬುದನ್ನು ಕುರಿತಾಗಿತ್ತು . ಮಹಾತ್ಮಾ ಗಾಂಧಿಯವರು , ಭಾರತ ಪಶ್ಚಿಮ ದ ಆಧುನಿಕ ನಾಗರಿಕತೆಯ ಹಾದಿಯನ್ನು ತುಳಿಯಬಾರದು , ಬದಲಿಗೆ ತಾವು' ಹಿಂದ್ ಸ್ವರಾಜ್ 'ನಲ್ಲಿ ಕನಸಿದ ' ಗ್ರಾಮ ಭಾರತ' ದ ಕಡೆಗೆ ಎಂಬುದು ಗಾಂಧಿಯವರ ವಾದವಾದರೆ ನೆಹರು ಅವರು ಅದನ್ನು ಕೇಳಿಸಿಕೊಳ್ಳುವ ಸ್ಥಿತಿ ಯಲ್ಲಿರಲಿಲ್ಲ.. ಹಿಂದ್ ಸ್ವರಾಜ್ ಅನ್ನು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ನ ಕಾರ್ಯಕಾರಿ ಸಮಿತಿಯಲ್ಲಿ ಚರ್ಚಿಸಲು ಗಾಂಧಿ ಮನವಿ ಮಾಡಿದರೆ ನೆಹರೂ ಅದನ್ನು ತಣ್ಣಗೆ ನಿರ್ಲಕ್ಷಿಸುತ್ತಾರೆ. ನಂತರ ಸ್ವಾತಂತ್ರ್ಯ , ದೇಶ ವಿಭಜನೆ , ನರಮೇಧ ,ಹಿಂಸೆ , ಗಾಂಧಿ ಹತ್ಯೆ ಎಲ್ಲವೂ ನಡೆದುಹೋಗುತ್ತದೆ .ಬಾರತ ಪಶ್ಚಿಮದ ಹಾದಿಗಾರನಾಗಿ ಮುನ್ನ ಡೆಯುತ್ತದೆ .. ಇವತ್ತಿನ ಸ್ಮಾರ್ಟ್ ಸಿಟಿಗಳ , ಬೆಂಗಳೂರಿನಂತಹ ಮಹಾ ನಗರಗಳ ಸೃಷ್ಟಿಯ ಹಿಂದಿನ ಚಾರಿತ್ರಿಕ ನಿರ್ಧಾರ , ಅಂದೇ , ನೆಹರೂ ಅವರು ಗಾಂಧಿಯ ಕನಸನ್ನು ತಿರಸ್ಕರಿಸಿ ತನ್ನ ಪಶ್ಚಿಮೀಕರಣದ ಹಾದಿಯಲ್ಲಿ ಸಾಗಿದ ಆ ದಿನದಂದೇ ಬಹು ಹಿಂದೆಯೇ ನಡೆದುಹೋಗಿದೆ.
ಇದನ್ನು ಗಾಂಧೀಜಿಯವರ 'ಹಿಂದ್ ಸ್ವರಾಜ್' ಕಂಡರಿಸುತ್ತದೆ. 'ಆಧುನಿಕ ನಾಗರಿಕತೆ '' ಎಂಬುದು ಮನುಷ್ಯನನ್ನು ಪಾಪದ ಪಿಂಡವಾಗಿ ಕಟ್ಟುತ್ತದೆ ಎಂಬುದು ಗಾಂಧೀಜಿ ಗ್ರಹಿಕೆಯ ಸಾರ ತಾತ್ವಿಕತೆಯಾಗಿದೆ. ತಲಾ ತಲಾಂತರದಿಂದಲೂ ಪ್ರಕೃತಿಯ ಒಡನಾಡಿಯಾದ ಮನುಷ್ಯನನ್ನು ಅನ್ಯಾಯದ ತುಡಿತವುಳ್ಳ, ರೋಗಪೀಡಿತನಾದ ಅಲೆಮಾರಿಯನ್ನಾಗಿ, ಸ್ಥಳಪಲ್ಲಟಗೊಳಿಸಿತು ಎನ್ನುವುದು ಗಾಂಧೀಜಿಯ ಆಗ್ರಹಪೂರ್ವಕ ಆಕ್ಷೇಪವಾಗಿತ್ತು. 'ದೇವರು ಮನುಷ್ಯನನ್ನು ಎರಡು ಕಾಲುಗಳ ಜೀವಿಯನ್ನಾಗಿ ಸೃಷ್ಟಿಸಿ, ಆತನ ಬದುಕಿಗೆ ಒಂದು ಎಲ್ಲೆಕಟ್ಟನ್ನು ವಿಧಿಸಿದ್ದಾನೆ. ತನ್ನೆರಡು ಕಾಲುಗಳನ್ನು ಬಳಸಿ ಭೌಗೋಳಿಕವಾಗಿ ಎಷ್ಟು ದೂರ ಕ್ರಮಿಸಿ ತನ್ನ ತಂಗುನೆಲೆಗೆ ಬರಬಲ್ಲನೋ , ಇರಬಲ್ಲನೋ ಆ ಸ್ಥಳೀಯ ಭೂ ಪರಿಸರ ಆತನ ಬದುಕಿನ ಲೌಕಿಕ, ಆಧ್ಯಾತ್ಮಿಕ ಸಮಸ್ತದ ರಂಗಸ್ಥಳವೆನ್ನುವುದು ಭಗವಂತನ ಆಶಯವಾಗಿದ್ದು. ಮನುಷ್ಯ ಹದ್ದುಮೀರಿದ್ದಾನೆ' ಎನ್ನುವುದು 'ಹಿಂದ್ ಸ್ವರಾಜ್' ನ ಗ್ರಹಿಕೆಯಾಗಿದೆ ,ಕೇಂದ್ರ ದರ್ಶನವಾಗಿದೆ. ಗಾಂಧೀಜಿ 'ನಾಗರಿಕ ಮನುಷ್ಯನ ವಿರುದ್ಧ ಎತ್ತಿದ ಗಂಭೀರ ಆಕ್ಷೇಪ ಇದು.
ಹಿಂದ್ ಸ್ವರಾಜ್: ಗ್ರಾಮ ಭಾರತಕ್ಕೆ ಬೆನ್ನು ತಿರುಗಿಸಿದ ಭಾರತ
1945 ರ ಕಾಲಘಟ್ಟದ ಭಾರತದಲ್ಲಿ ನೆಹರೂ ಅವರು ಮಹಾತ್ಮ ಗಾಂಧಿಯವರ ವಾರಸುದಾರರೆಂಬ ಅಭಿಪ್ರಾಯ ಆಳವಾಗಿ ಮತ್ತು ದೃಢವಾಗಿ ಹಾಗೂ ವ್ಯಾಪಕವಾಗಿ ಬೇರುಬಿಡುತ್ತಿದ್ದ ಕಾಲದಲ್ಲಿ ನೆಹರೂ ತಾತ್ವಿಕವಾಗಿ ತಮ್ಮ ವಾರಸುದಾರರೆ ? ಎಂಬ ಪ್ರಶ್ನೆಗಳು ಗಾಂಧಿಗೆ ಉಂಟಾದದ್ದನ್ನೂ ಮತ್ತು ಪರಿಸ್ಥಿತಿ ಹೀಗಿದ್ದಾಗ ಈ ಬಗ್ಗೆ ಗಾಂಧಿಯವರು ಸ್ಪಷ್ಟೀಕರಿಸಿಕೊಳ್ಳುವ ಅಗತ್ಯವನ್ನು ಮನಗಾಣುತ್ತಾರೆ. ಯಾಕೆಂದರೆ ಆಗಷ್ಟೆ ಎರಡನೇ ಮಹಾಯುದ್ಧ ಮುಗಿದು , ಸದ್ಯೋ ಭವಿಷ್ಯದ ಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕುವ ಸೂಚನೆಗಳು ಸ್ಪುಟವಾಗಿ ಕಾಣುತ್ತಿದ್ದ ದಿನಗಳಾಗಿದ್ದವು. ಗಾಂಧಿ , ಬಾರತವನ್ನು ಗ್ರಾಮ ಸ್ವರಾಜ್ಯವಾಗಿ , ಗ್ರಾಮ ಭಾರತವಾಗಿ ಕಟ್ಟುವ ಮಹದಾಕಾಂಕ್ಷೆಯನ್ನು ಹೊಂದಿದ್ದರು ಅ ಬಗ್ಗೆ ತಮ್ಮ ವಾರಸುದಾರನ ಜೊತೆಗೆ ಒಪ್ಪಿಸುವ ಹೊಣೆ ಹೊರುವ ತುರ್ತಿನಲ್ಲಿ ಚಡಪಡಿಸುತ್ತಿದ್ದರು . ಪತ್ರಗಳ ಮೂಲಕ ನಡೆದ ಈ ಐತಿಹಾಸಿಕ ಸಂವಾದವು ವಿಫಲ. ವಿಷಾದಕರವಾಗಿ ಕೊನೆಗಾಣುತ್ತದೆ .
ನೆಹರೂ ಅವರು ಗಾಂಧಿಯವರ ಕನಸಿನ ಜೊತೆ ನಿಲ್ಲುವುದಿಲ್ಲ . ನೆಹರೂ ಪಶ್ಚಿಮದತ್ತ ಮೊಗಮಾಡಿರುತ್ತಾರೆ . ಅಂದೇ ಬಾರತ ತಾನು ಒಪ್ಪಿಕೊಂಡ. ವಿಕೇಂದ್ರೀಕೃತ ಅಥವಾ ಗ್ರಾಮ ಭಾರತದ ಕನಸಿಗೆ ತಿಲಾಂಜಲಿಯಿತ್ತಿತು ಎಂದೇ ಲೆಕ್ಕಿಸಬಹುದಾಗಿದೆ.
"ಗಾಂಧೀಜಿ ಒಂದು ವಿಶಿಷ್ಟ ವಿಷಯದೊಂದಿಗೆ ಚರ್ಚೆಯನ್ನು ಆರಂಭಿಸುತ್ತಾರೆ. ಅದೇನೆಂದರೆ ಭಾರತದ ಆರ್ಥಿಕ ಅಭಿವೃದ್ಧಿಗೆ ಏನು ಬುನಾದಿಯಾಗಬೇಕು ಎನ್ನುವುದು. ಅವರು ಹೀಗೆ ಬರೆಯುತ್ತಾರೆ, "ನನ್ನ ಸ್ಪಷ್ಟ ಅಭಿಪ್ರಾಯವೇನೆಂದರೆ ಭಾರತ ನಿಜವಾದ ಸ್ವಾತಂತ್ರ್ಯ ಪಡೆಯಬೇಕಿದ್ದರೆ, ತನ್ಮೂಲಕ ಜಗತ್ತಿಗೂ ಸ್ವಾತಂತ್ರ್ಯ ಸಿಗಬೇಕಾದರೆ, ಜನರು ನಗರಗಳಲ್ಲಲ್ಲ ಹಳ್ಳಿಗಳಲ್ಲಿ, ಮಹಲುಗಳಲ್ಲಲ್ಲ ಗುಡಿಸಲುಗಳಲ್ಲಿ ವಾಸವಾಗಬೇಕು ಎನ್ನುವುದನ್ನು ತಕ್ಷಣ ಮನಗಾಣಬೇಕು. ಆದರೆ ನಮ್ಮ ಹಳ್ಳಿಗಳ ಬದುಕು ಈಗ ಹೇಗಿದೆಯೊ ಅದೇ ರೀತಿ ಬದುಕಿನ ಕುರಿತು ನಾನು ಚಿಂತಿಸುತ್ತಿದ್ದೇನೆ ಎಂದು ಭಾವಿಸಬೇಡಿರಿ. ನನ್ನ ಕನಸಿನ ಹಳ್ಳಿ ಇನ್ನೂ ನನ್ನ ಕಲ್ಪನಾ ಜಗತ್ತಿನಲ್ಲಿದೆ (ನನ್ನ ಮನಸ್ಸಿನಲ್ಲೇ ಇದೆ). ನನ್ನ ಆದರ್ಶ ಹಳ್ಳಿಯಲ್ಲಿ ಬುದ್ದಿವಂತ ಹಾಗೂ ಪ್ರಜ್ಞಾವಂತ ಜನರಿರುತ್ತಾರೆ. ಅವರು ಪಶುಗಳಂತೆ ಕೊಳಚೆ ಹಾಗೂ ಕತ್ತಲಲ್ಲಿ ಇರಲಾರರು. ಹಳ್ಳಿಯ ಸ್ತ್ರೀಪುರುಷರು ಸ್ವತಂತ್ರರಾಗಿರುತ್ತಾರೆ. ಅವರು ಜಗತ್ತಿನಲ್ಲಿ ತಲೆ ಎತ್ತಿ ನಿಲ್ಲಬಲ್ಲರು (ಯಾರೆದುರೂ ಮಾನಗೇಡಿಯಾಗಿ ತಲೆ ತಗ್ಗಿಸಲಾರರು), ಪ್ಲೇಗ್, ಕಾಲರಾ, ಮೈಲಿ ಬೇನೆಯಂಥ ಮಹಾಮಾರಿಗಳು ಇರಲಾರವು. ಯಾರೂ ಕೆಲಸವಿಲ್ಲದೆ ಕೂತಿರಲಾರರು. ಯಾರೂ ವಿಲಾಸದ ಗಲೀಜಿನಲ್ಲಿ ಮುಳುಗಿರಲಾರರು. ಪ್ರತಿಯೊಬ್ಬ ವ್ಯಕ್ತಿ ತನ್ನ ಪಾಲಿನ ದೈಹಿಕ ಶ್ರಮ ಮಾಡಬೇಕು. ನಾನು ವಿಸ್ತ್ರತವಾಗಿ ಒಂದು ವಿಶಾಲ ಚಿತ್ರವನ್ನು ಕಲ್ಪಿಸಬಯಸುತ್ತಿಲ್ಲ. ರೈಲು, ಅಂಚೆ ಹಾಗೂ ತಂತಿ ಕಚೇರಿಗಳ ವಿಷಯವನ್ನು ಗಮನದಲ್ಲಿರಿಸಿಕೊಳ್ಳುವುದು ಅಥವಾ ಯೋಚಿಸುವುದು ಸಾಧ್ಯವಿದೆ. ನನಗೆ ಮೂಲ ಸೌಕರ್ಯಗಳನ್ನು ಒದಗಿಸುವುದು ಮುಖ್ಯವಾಗಿದೆ. ಉಳಿದಂತೆಲ್ಲ ನಕ್ಷೆಯಲ್ಲಿ ವ್ಯವಸ್ಥೆ ಮಾಡಬಹುದು. ಒಂದು ವೇಳೆ ಮೂಲಸೌಕರ್ಯಗಳನ್ನು ಗ್ರಹಿಸದೆ ಹೋದರೆ ಉಳಿದದ್ದೆಲ್ಲ ಗಾಳಿಗೋಪುರವಾಗಿ ಬಿಡುತ್ತದೆ.
ನೆಹರೂ ಸವಾಲನ್ನು ಸ್ವೀಕರಿಸಿದ್ದರೆ, ಚರ್ಚೆ ಅಥವಾ ವಾಗ್ವಾದಕ್ಕೆ ತಯಾರಾಗುತ್ತಿದ್ದರೆ ಈ ಪತ್ರವ್ಯವಹಾರ ಇತಿಹಾಸದಲ್ಲಿ ತಾತ್ವಿಕ ಚರ್ಚೆ ಅಥವಾ ವಾಗ್ವಾದಕ್ಕೆ ಒಂದು ಕ್ಲಾಸಿಕ್ ಪುರಾವೆಯಾಗಿ ಅಜರಾಮರವಾಗಬಹುದಿತ್ತು.
"ನಾನು ವಿವರವಾಗಿ ಉತ್ತರಿಸಲೆತ್ನಿಸುತ್ತೇನೆ. ಇದರಲ್ಲಿ ವಿಳಂಬವಾದರೆ ನೀವು ಕ್ಷಮಿಸಬೇಕು. ಏಕೆಂದರೆ ನನಗೆ ಎಳ್ಳಷ್ಟೂ ಬಿಡುವಿಲ್ಲ, ಎಷ್ಟೋ ಕೆಲಸಗಳಲ್ಲಿ ತೊಡಗಿಕೊಂಡಿದ್ದೇನೆ. ನಿಜ ನಾವು ಹೀಗೇ ಇನ್ಫಾರ್ಮಲ್ ಆಗಿ ಮಾತಾಡುತ್ತಿರುವುದೇ ಒಳ್ಳೆಯದಿತ್ತು. ಆದರೆ ಅದನ್ನು ಹೇಗೆ ಹಾಗೂ ಯಾವಾಗ ಫಿಟ್ ಮಾಡಲಾಗುವುದೊ ತಿಳಿಯದಾಗಿದೆ. ನಾನು ಪ್ರಯತ್ನಿಸುತ್ತೇನೆ...."
-'ಹಿಂದ್ ಸ್ವರಾಜ್' ಓದಿ ತುಂಬ ದಿನಗಳಾದವು. ಅದರ ಒಂದು ಅಸ್ಪಷ್ಟ ಚಿತ್ರ ಮನಸ್ಸಿನಲ್ಲಿ ಉಳಿದಿದೆ. ಆದರೆ ಇಪ್ಪತ್ತು ವರ್ಷ ಅಥವಾ ಅದಕ್ಕೂ ಹಿಂದೆ ನಾನದನ್ನು ಓದಿದಾಗ ಅದು ಅತ್ಯಂತ ಅವಾಸ್ತವಿಕ ಎನಿಸಿತ್ತು. ಅಂದಿನಿಂದ ನಿಮ್ಮ ಲೇಖನಗಳು ಹಾಗೂ ಭಾಷಣಗಳಲ್ಲಿ ಅದು ನಿಮ್ಮ ಹಳೆಯ ವಿಚಾರಧಾರೆಗಳಿಗಿಂತ ಮುಂದುವರಿದಿದೆ ಎನಿಸಿತು. ಜೊತೆಗೆ ನೀವು ಆಧುನಿಕ ಪ್ರವೃತ್ತಿಗಳ ವಿಷಯದಲ್ಲಿ ಗುಣಗ್ರಾಹಿಯಾಗಿದ್ದೀರಿ ಎಂದೂ ಅನ್ನಿಸಿತು. ಆದ್ದರಿಂದ ನಿಮ್ಮ ತಲೆಯಲ್ಲಿ ಹಳೆಯ ಚಿತ್ರವೇ ಮನೆ ಮಾಡಿದೆ ಎಂದು ನಮಗೆ (ಕಾರ್ಯಕಾರಿ ಸಮಿತಿಯ ಸಭೆ) ಹೇಳಿದಾಗ ನನಗೆ ತುಂಬ ಆಶ್ಚರ್ಯ ವಾಗಿತ್ತು.
"ಒಂದು ಹಳ್ಳಿ ಸತ್ಯ ಹಾಗೂ ಅಹಿಂಸೆಯ ಮೂರ್ತರೂಪ ಯಾಕೆ ಆಗಬೇಕೋ ನನಗೆ ತಿಳಿಯದಾಗಿದೆ. ಸಾಮಾನ್ಯವಾಗಿ ಒಂದು ಹಳ್ಳಿ ಬೌದ್ಧಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಹಿಂದುಳಿದ ಸ್ಥಿತಿಯಲ್ಲಿರುತ್ತದೆ. ಹಿಂದುಳಿದ ಪರಿಸರದಲ್ಲಿ ಅಭಿವೃದ್ಧಿ ಸಾಧ್ಯವಾಗಲಾರದು. ಸಂಕೀರ್ಣ ಮನೋಧರ್ಮದ ಜನರು ಮಿಥ್ಯಾವಾದಿ ಹಾಗೂ ಹಿಂಸಾಪ್ರವೃತ್ತಿಯವರಾಗಿರುವ ಸಾಧ್ಯತೆ ಇರುತ್ತದೆ.
"ಕೋಟ್ಯಂತರ ಜನರಿಗಾಗಿ ಮಹಲುಗಳ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆದರೆ ಕೋಟಿಗಟ್ಟಲೆ ಜನ ಸುಖಕರವಾದ ಹಾಗೂ ಅಪ್‌ಟುಡೇಟ್ ಮನೆಗಳಲ್ಲಿ ಯಾಕೆ ಇರಬಾರದು ? ಇಂಥ ಮನೆಗಳಿಂದಾಗಿ ಅವರು ಸುಸಂಸ್ಕೃತ ಬದುಕನ್ನು ಬದುಕಬಹುದು."
ನೆಹರೂ ,ಮುಂದುವರೆದು , ಗಾಂಧೀಜಿಗಾಗಲೀ ಕಾಂಗ್ರೆಸ್ಸಿಗಾಗಲೀ ಸ್ವತಂತ್ರ ಭಾರತದ ನೀತಿ ನಿರ್ಧಾರದ ಹಕ್ಕಿಲ್ಲವೆಂದು ತಮ್ಮ ಉತ್ತರದಲ್ಲಿ ಸೂಚಿಸುತ್ತಾರೆ.
ಸ್ವತಂತ್ರ ಭಾರತದ ಶಾಸಕರಾಗುವವರೇ ಅದನ್ನು ನಿರ್ಧರಿಸಬಲ್ಲರು. "ಬರಿ ಹೆಚ್ಚಿನ ಅಸ್ಪಷ್ಟತೆ ಹಾಗೂ ಭ್ರಮೆಯನ್ನು ಹುಟ್ಟುಹಾಕಬಲ್ಲ ಈ ತರಹದ ವಿಷಯಗಳ ಕುರಿತ ವಾದ ವಿವಾದಗಳಲ್ಲಿ ಸಿಲುಕಿಕೊಂಡು ಕಾಂಗ್ರೆಸ್ಸಿನಂಥ ಸಂಘಟನೆಗೆ ಹಾಗೂ ನಮಗೆ ನಷ್ಟ ಉಂಟು ಮಾಡಬಾರದೆಂದು ನಾನು ಬಯಸುತ್ತೇನೆ.
ಇದರಿಂದ ಕಾಂಗ್ರೆಸ್ ಹಾಗೂ ಜನತೆಯ ನಡುವೆ ಕಂದಕವೇರ್ಪಡಬಹುದು ಹಾಗೂ ಅಡೆತಡೆಗಳೂ ಎದುರಾಗಬಹುದು. ಅಷ್ಟಕ್ಕೂ ಈ ಪ್ರಶ್ನೆ ಹಾಗೂ ಇನ್ನಿತರ ಪ್ರಶ್ನೆಗಳನ್ನು ಸ್ವತಂತ್ರ ಬಾರತದ ಪ್ರತಿನಿಧಿಗಳೇ ಇತ್ಯರ್ಥ ಮಾಡಬೇಕು."
ಈ ಪತ್ರ ಸಂವಾದವನ್ನು ವಿಮರ್ಶಿಸುವ ಕಿಷನ್ ಪಟ್ನಾಯಕ್ ಅವರು ನೆಹರು ಅವರ ಉತ್ತರ , ಅದರ ಭಾಷೆ ಭಂಗಿಗಳನ್ನು ನೋಡಿ '' ತಳಮಳಗೊಂಡು '' ಹೀಗಿದ್ದರು ವೀರ ಜವಹರಲಾಲ್ '' ಎಂದು ದಿಗ್ಬ್ರಾಂತಿಯಿಂದ ಬರೆಯುತ್ತಾರೆ
ಜಗತ್ತಿನಾದ್ಯಂತ ಸ್ವಾತಂತ್ರ್ಯ ಹಾಗೂ ವಿಮೋಚನೆಗಾಗಿ ಹೋರಾಡುವ ಸಂಘಟನೆಗಳು ಹಾಗೂ ವ್ಯಕ್ತಿಗಳು ಭವಿಷ್ಯದ ನೀತಿಗಳನ್ನು ನಿರ್ಧರಿಸುತ್ತಾರೆ. ಕ್ರಾಂತಿಯ ನಂತರ ಯಾರ ಕೈಗೆ ಅಧಿಕಾರ ಬರುವದೋ ಅವರು ಕ್ರಾಂತಿ ಯೋಧರು ಹಾಗೂ ಹುತಾತ್ಮರು ರೂಪಿಸಿದ ಮೂಲಭೂತ ನೀತಿಗಳನ್ನು ಅನುಸರಿಸುತ್ತಾರೆ.
ಶೀಘ್ರವಾದ ರಾಜಕೀಯ ಪರಿವರ್ತನೆಗಳು ಹಾಗೂ ಕೋಮುವಾದದ ತಾಂಡವ, ಗಾಂಧೀಜಿ ತಮಗೆ ' ಪಾಠ ಮಾಡುವ ' ಅವಕಾಶವೇ ನೀಡದಂತೆ ನೆಹರೂಗೆ ಒಂದು ಸೂಕ್ತ ನೆಪವಾದವು ('ಗಾಂಧಿ ನೆಹರೂ ಸಂವಾದ' ಲೇಖನದ ಆಯ್ದ ಭಾಗಗಳು ಕಿಷನ್ ಪಟ್ನಾಯಕ್ ,ನವೆಂಬರ್, ೧೯೮೯ , ಪ್ರತಿಚಿಂತನೆ , ಪುಟ :125-131)
ಕಿಶನ್ ಪಟ್ನಾಯಕ್ ಅವರು ವಿಶ್ಲೇಷಣಾತ್ಮಕವಾಗಿ ನಿರೂಪಿಸುವ ಗಾಂಧಿ -ನೆಹರೂ ಅವರ ನಡುವೆ ನಿರ್ಣಾಯಕ ಸನ್ನಿವೇಶದಲ್ಲಿ ನಡೆದ ಅಪೂರ್ಣ ಪತ್ರ ಸಂವಾದ ಇದು . ಗಾಂಧಿ ಗೋಡ್ಸೆಯ ಕೈಯಲ್ಲಿ ಹತ್ಯೆಯಾಗುವ ಮುನ್ನವೇ ಜಗತ್ತು ಗಾಂಧಿಯ ವಾರಸುದಾರರೆಂದೇ ಭಾವಿಸಿದ್ದ ನೆಹರೂ ಅವರೆ ಗಾಂಧಿಯನ್ನು ತಾತ್ವಿಕವಾಗಿ ನಿರ್ಲಕ್ಷಿಸಿದ್ದರು ಎಂಬುದನ್ನು ಇದು ದಾಖಲಿಸುತ್ತದೆ .
ಗಾಂಧಿ ಹತ್ಯೆಯ ಪೂರ್ವದಲ್ಲೇ ಭಾರತದ ವಿಭಜನೆಯ ನಿರ್ಣಾಯಕ ಘಟನೆಗಳ ಪ್ರಸ್ತಾವಗಳನ್ನು ಗಾಂಧಿಯ ಗಮನಕ್ಕೆ ತರದೆ ವಂಚಿಸಿದ ಪಟೇಲ್ - ನೆಹರೂ ಪರಿವಾರ ಭಾರತ ,ಭವಿಷ್ಯದಲ್ಲಿ ಜಗತ್ತು ನಡೆದ ಪಶ್ಚಿಮ ದ ಆಧುನಿಕ ನಾಗರಿಕತೆಯ ಹಾದಿಯಲ್ಲಿ ಸಾಗದೆ ಗ್ರಾಮಭಾರತದ ಪುನರ್ರಚನೆಯಲ್ಲಿ ತೊಡಗುವ ಮಹಾಕನಸನ್ನು ತಿರಸ್ಕರಿಸಿ ವಂಚಿಸಿದ ಇತಿಹಾಸವನ್ನು ಕಿಷನ್ ಪಟ್ನಾಯಕ್ ಅವರು ಇಲ್ಲಿ ಮುಂದಿಡುತ್ತಾರೆ .
ಪಶ್ಚಿಮದ ನಾಗರಿಕತೆಯ ಕನಸುಗಾರ ನೆಹರೂ ಅವರ ಕನಸಿನ ಭಾರತಕ್ಕೆ ಅಂಬೇಡ್ಕರ್ ಅವರ ನಗರೀಕರಣದ ಪ್ರತಿಪಾದನೆಯೂ ಸೇರಿಕೊಂಡು ನಿತ್ಯ ವಲಸೆಯ ಭಾರತ ಕಳೆದ ಮುಕ್ಕಾಲು ಶತಮಾನಗಳಲ್ಲಿ ಭಾರತವನ್ನು ನಿತ್ಯ ತಳಮಳದ ಸುಡುಗಾಡನ್ನಾಗಿ ಕಟ್ಟಿ ನಿಲ್ಲಿಸಿದೆ . ಭಾರತದ ದೇಶ ಭಾಷೆಗಳು , ಶಿಲ್ಪಾದಿ ಕೌಶಲಗಳು ,ಕೆರೆ ಕಟ್ಟೆ ಬೆಟ್ಟ ಬಯಲು ಅರಣ್ಯ ನದಿ ಸಸ್ಯ ಜೀವಾದಿ ಸಂಕುಲಗಳು ಎಲ್ಲವನ್ನೂ ಒಳಗೊಂಡ ಸ್ಥಳೀಯತೆ ಎಂಬುದು ನಿತ್ಯ ಆಕ್ರಮಣಕ್ಕೆ ಒಳಗಾಗುವ ಭಾರತಕ್ಕೆ ನಾವು ಅಸಹಾಯಕವಾಗಿ ಸಾಕ್ಷಿಯಾಗಲು ಈ ಚಾರಿತ್ರಿಕ ತೀರ್ಮಾನವೇ ಕಾರಣವಾಯಿತು .
bevarahani1