ʼಪೆಟ್ರೋಲ್‌ ಗೆ 20% ಎಥೆನಾಲ್ ಬೆರಕೆʼ ಒಳಿತೋ –ಕೆಡುಕೋ ?!

ಜನರ ಆತಂಕ, ಸರ್ಕಾರದ ಆಶಯ ಮತ್ತು ಉತ್ತರಿಸಬೇಕಾದ ಪ್ರಶ್ನೆಗಳು

ʼಪೆಟ್ರೋಲ್‌ ಗೆ 20% ಎಥೆನಾಲ್ ಬೆರಕೆʼ ಒಳಿತೋ –ಕೆಡುಕೋ ?!

ವರ‍್ತಮಾನ 


ಕರಣಂ ರಮೇಶ್



``ನನ್ನ ವಾಹನಕ್ಕೆ ಏನಾದರೂ ಆಗಿಬಿಟ್ಟರೆ?’’


``ನೀವು ಹತ್ತು ವರ್ಷಗಳ ಹಿಂದೆ ಖರೀದಿಸಿದ ಕಾರು ಇಂದಿಗೂ ಉತ್ತಮ ಸ್ಥಿತಿಯಲ್ಲಿದೆ. ಆದರೆ ಪೆಟ್ರೋಲ್ ಬಂಕ್‌ಗೆ ಹೋದಾಗ ಸಿಗುವ ಇಂಧನ ನಿಮ್ಮ ಕಾರಿಗೆ ವಿನ್ಯಾಸಗೊಳಿಸಿದ್ದು ಅಲ್ಲ.. ಅದರಿಂದ ಹಾನಿಯಾದೀತು ಎಂದು ನಿಮಗೆ ಗೊತ್ತಾದರೆ..? ನಿಮ್ಮ ಈ ರೀತಿಯ ಆತಂಕ ಸಹಜ. ಇದೇ ಪ್ರಶ್ನೆ ಇಂದು ಕೋಟ್ಯಂತರ ವಾಹನ ಮಾಲೀಕರ ಮನಸಿನಲ್ಲಿ ಮೂಡುತ್ತಿದೆ.’’


ಇಂದು ದೇಶದ ಕೋಟ್ಯಂತರ ಬೈಕ್, ಕಾರು ಮತ್ತು ಸ್ಕೂಟರ್ ಮಾಲೀಕರ ಮನಸ್ಸಿನ ಗೊಂದಲದಲ್ಲಿ ಇದೂ ಒಂದು.


ಒಬ್ಬ ಮಧ್ಯಮವರ್ಗದ ವ್ಯಕ್ತಿ ಅಥವಾ ರೈತ ಅಥವಾ ಉದ್ಯೋಗಿ ಒಂದು ವಾಹನ ಖರೀದಿಸುವಾಗ ಅದು ಕೇವಲ ಯಂತ್ರವನ್ನು ಖರೀದಿಸುವುದಿಲ್ಲ. ಹತ್ತಾರು ವರ್ಷಗಳ ಉಳಿತಾಯ, ಸಾಲ, ಕುಟುಂಬದ ಕನಸು ಮತ್ತು ದಿನನಿತ್ಯದ ಬದುಕಿನ ಅವಿಭಾಜ್ಯ ಭಾಗವನ್ನು ಖರೀದಿಸುತ್ತಾನೆ. ಅಂತಹ ಸಂದರ್ಭದಲ್ಲಿ ಇಂಧನದಲ್ಲಿ ಆಗುವ ಯಾವುದೇ ಮೂಲಭೂತ ಬದಲಾವಣೆ ಸಹಜವಾಗಿಯೇ ಅವನಲ್ಲಿ ಆತಂಕ ಹುಟ್ಟಿಸುತ್ತದೆ.


ಈ ಆತಂಕವನ್ನು ``ಅಭಿವೃದ್ಧಿ ವಿರೋಧ’’ ಎಂದು ನೋಡುವುದು ಸರಿಯಲ್ಲ. ಅದೇ ರೀತಿ, ಯಾವುದೇ ಹೊಸ ನೀತಿಯನ್ನು ಕೇವಲ ಭಯದ ದೃಷ್ಟಿಯಿಂದ ನೋಡುವುದೂ ಸಮಂಜಸವಲ್ಲ. ಪ್ರಶ್ನೆ ಒಂದೇ - ಸಾಮಾನ್ಯ ನಾಗರಿಕನ ಅನುಮಾನಗಳಿಗೆ ಸಮರ್ಪಕ ಮತ್ತು ವೈಜ್ಞಾನಿಕ ಉತ್ತರ ಸಿಕ್ಕಿದೆಯೇ?


ಸರ್ಕಾರದ ಉದ್ದೇಶ ಏನು?


ಸರ್ಕಾರ ಮತ್ತು ನೀತಿ ರೂಪಿಸುವ ಸಂಸ್ಥೆಗಳು ಇ20ಗೆ ಹಲವು ಕಾರಣಗಳನ್ನು ನೀಡಿವೆ:


ಕಚ್ಚಾ ತೈಲ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು. ವಿದೇಶಿ ವಿನಿಮಯದ ವೆಚ್ಚವನ್ನು ತಗ್ಗಿಸುವುದು. ಕಬ್ಬು ಮತ್ತು ಮುಸುಕಿನ ಜೋಳ ಬೆಳೆಯುವ ರೈತರಿಗೆ ಎಥೆನಾಲ್ ಉತ್ಪಾದನೆಗೆ ಅಗತ್ಯವಿರುವ ಹೊಸ ಮಾರುಕಟ್ಟೆ ಕಲ್ಪಿಸುವುದು. ಜೈವಿಕ ಇಂಧನ ಬಳಕೆಯನ್ನು ಉತ್ತೇಜಿಸುವುದು. ಪರಿಸರದ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ದೀರ್ಘಕಾಲೀನ ಪ್ರಯತ್ನವಾಗಿದೆ.


ಆತಂಕಗಳು ಏಕೆ?


ಇ20 ಜಾರಿಗೆ ಬಂದ ನಂತರ ವಾಹನ ಬಳಕೆದಾರರ ನಡುವೆ ಹಲವು ಪ್ರಶ್ನೆಗಳು ಕೇಳಿಬರುತ್ತಿವೆ. ಕೆಲವರು ತಮ್ಮ ವಾಹನದಲ್ಲಿ ಯಾವುದೇ ಸಮಸ್ಯೆಯಾಗಿಲ್ಲ ಎಂದು ಹೇಳುತ್ತಾರೆ. ಇನ್ನೂ ಕೆಲವರು ಮೈಲೇಜ್ ಕಡಿಮೆಯಾಗಿದೆ, ವಾಹನದ ಕಾರ್ಯಕ್ಷಮತೆ ಬದಲಾಗಿದೆ ಅಥವಾ ನಿರ್ವಹಣಾ ವೆಚ್ಚ ಹೆಚ್ಚಾಗಿದೆ ಎಂಬ ಅನುಭವವನ್ನು ಹಂಚಿಕೊಳ್ಳುತ್ತಾರೆ.


ನಮ್ಮ ರಾಷ್ಟ್ರದಲ್ಲಿ ಕಾರು ಅಥವಾ ದ್ವಿಚಕ್ರ ವಾಹನವನ್ನು ಕನಿಷ್ಟ 10 ರಿಂದ 15 ವರ್ಷಗಳ ಕಾಲ ಬಳಸುವುದು ಸಾಮಾನ್ಯ. ಈ ವಾಹನಗಳು ಇ20 ಇಂಧನಕ್ಕೆ ಪೂರಕವಾಗಿ ತಯಾರಾಗಿಲ್ಲ ಎಂಬುದು ಗಮನಾರ್ಹ. ಈಗ ಇ20 ಇಂಧನ ಬಳಕೆಯಿಂದ ವಾಹನದ ಇಂಜಿನ್‌ನಲ್ಲಿ ಮತ್ತು ಪೆಟ್ರೋಲ್ ಟ್ಯಾಂಕ್ ಮತ್ತು ಇಂಜಿನ್ ಸಂಪರ್ಕಕ್ಕೆ ಬಳಸಲಾದ ರಬ್ಬರ್ ಸೀಲ್ ಮತ್ತು ಪೈಪುಗಳಲ್ಲಿ ಸಮಸ್ಯೆ ಉಂಟಾಗಬಹುದು. ಇಂಧನ ಟ್ಯಾಂಕ್ ತುಕ್ಕು ಹಿಡಿಯಬಹುದು. ಇಂಧನ ಪಂಪ್ ಮತ್ತು ಇಂಜೆಕ್ಟರ್‌ಗಳ ಮೇಲೆ ಅಧಿಕ ಒತ್ತಡ ಬಿದ್ದು ಹಾಳಾಗಬಹುದು.


ಜನರು ಕೇಳುತ್ತಿರುವ ಪ್ರಶ್ನೆಗಳು :


ಸಾಮಾನ್ಯ ವಾಹನ ಮಾಲೀಕರ ಮನಸ್ಸಿನಲ್ಲಿ ಇಂದು ಕೆಲವು ಪ್ರಶ್ನೆಗಳು ಸಹಜವಾಗಿ ಮೂಡುತ್ತಿವೆ. ನನ್ನ ವಾಹನ ಇ20ಗೆ ಸಂಪೂರ್ಣವಾಗಿ ಹೊಂದಾಣಿಕೆಯಾಗಿದೆಯೇ? ಅದು ಇಲ್ಲದಿದ್ದರೆ ನನಗೆ ಯಾವ ಮಾಹಿತಿ ಅಥವಾ ಮಾರ್ಗದರ್ಶನ ನೀಡಲಾಗಿದೆ? ಇ20 ಬಳಕೆಯಿಂದ ತಾಂತ್ರಿಕ ಸಮಸ್ಯೆ ಉಂಟಾದರೆ ಅದರ ಹೊಣೆಗಾರಿಕೆ ಯಾರದು? ಸಾರ್ವಜನಿಕರ ಅನುಭವಗಳ ಬಗ್ಗೆ ಸ್ವತಂತ್ರ ಅಧ್ಯಯನಗಳನ್ನು ನಡೆಸಲಾಗಿದೆಯೇ? ಜನರ ದೂರುಗಳನ್ನು ದಾಖಲಿಸಿ ವಿಶ್ಲೇಷಿಸುವ ವ್ಯವಸ್ಥೆ ಇದೆಯೇ?


ಈ ಪ್ರಶ್ನೆಗಳು ಅಭಿವೃದ್ಧಿಯನ್ನು ವಿರೋಧಿಸುವುದಲ್ಲ; ಅಭಿವೃದ್ಧಿಯ ಜೊತೆಗೆ ಜವಾಬ್ದಾರಿಯನ್ನೂ ನಿರೀಕ್ಷಿಸುವ ನಾಗರಿಕನ ಪ್ರಶ್ನೆಗಳು.


ಆದರೆ, ಪ್ರಸ್ತುತ ವಾಹನ ಮಾಲೀಕರಾದ ಜನಸಾಮಾನ್ಯರ ಪ್ರಶ್ನೆ, ಆತಂಕಗಳಿಗೆ ವಾಹನ ತಯಾರಕ ಸಂಸ್ಥೆಗಳ ಮುಖ್ಯಸ್ಥರು ಸಮಜಾಯಿಷಿ ನೀಡುವ ಕೆಲಸ ಮಾಡಿದ್ದಾರೆಯೇ ಹೊರತು ಸರ್ಕಾರದಿಂದ ಅಧಿಕೃತ ಸಮಜಾಯಿಷಿ ದೊರೆತಿಲ್ಲ ಎಂಬುದು ಗಮನಾರ್ಹ.


ವಾಹನಗಳು ಏನು ಹೇಳುತ್ತವೆ?


ಎಥೆನಾಲ್ ಮತ್ತು ಪೆಟ್ರೋಲ್ ಒಂದೇ ರೀತಿಯ ಇಂಧನಗಳಲ್ಲ. ಎಥೆನಾಲ್‌ಗೆ ಕೆಲವು ವಿಶೇಷ ಗುಣಲಕ್ಷಣಗಳಿವೆ. ಮೊದಲನೆಯದಾಗಿ, ಎಥೆನಾಲ್‌ನ ಶಕ್ತಿಮೌಲ್ಯ ಪೆಟ್ರೋಲ್‌ಗಿಂತ ಕಡಿಮೆ. ಅಂದರೆ ಒಂದೇ ಪ್ರಮಾಣದ ಇಂಧನದಲ್ಲಿ ದೊರೆಯುವ ಶಕ್ತಿ ಸ್ವಲ್ಪ ಕಡಿಮೆ ಇರಬಹುದು.

ಇದರಿಂದ ಕೆಲವು ವಾಹನಗಳಲ್ಲಿ ಇಂಧನ ಕ್ಷಮತೆಯಲ್ಲಿ ಸ್ವಲ್ಪ ವ್ಯತ್ಯಾಸ ಕಾಣಿಸಬಹುದು.


ಎರಡನೆಯದಾಗಿ, ಎಥೆನಾಲ್ ನೀರನ್ನು ಹೆಚ್ಚು ಆಕರ್ಷಿಸುವ ಗುಣ ಹೊಂದಿದೆ. ಅದಕ್ಕಾಗಿ ಇಂಧನ ಸಂಗ್ರಹಣೆ ಮತ್ತು ಗುಣಮಟ್ಟ ನಿಯಂತ್ರಣ ಅತ್ಯಂತ ಮಹತ್ವ ಪಡೆಯುತ್ತದೆ.


ಮೂರನೆಯದಾಗಿ, ಹೆಚ್ಚಿನ ಪ್ರಮಾಣದ ಎಥೆನಾಲ್ ಬಳಕೆಯನ್ನು ಗಮನದಲ್ಲಿಟ್ಟುಕೊಂಡು ವಾಹನದ ಇಂಧನ ವ್ಯವಸ್ಥೆಯ ರಬ್ಬರ್, ಪ್ಲಾಸ್ಟಿಕ್ ಮತ್ತು ಕೆಲವು ಲೋಹದ ಭಾಗಗಳನ್ನು ಮರು ವಿನ್ಯಾಸಗೊಳಿಸಬೇಕಾಗುತ್ತದೆ. ಇದೇ ಕಾರಣಕ್ಕೆ ಹೊಸ ತಲೆಮಾರಿನ ಇ20-ಹೊಂದಾಣಿಕೆಯ ವಾಹನಗಳಲ್ಲಿ ಕೆಲವು ತಾಂತ್ರಿಕ ಬದಲಾವಣೆಗಳನ್ನು ವಾಹನ ತಯಾರಕರು ಮಾಡುತ್ತಿದ್ದಾರೆ. 2023ರ ನಂತರ ತಯಾರಾದ ವಾಹನಗಳಲ್ಲಿ ಈ ಬದಲಾವಣೆಗಳನ್ನು ಅಳವಡಿಸಲಾಗಿದೆ ಎಂಬುದು ವಾಹನ ತಯಾರಕರ ಮಾತುಗಳಾಗಿವೆ.


ಇನ್ನು ಮೈಲೇಜ್ ಬಗ್ಗೆ ಚರ್ಚೆ ನಡೆಸುವುದಾದಲ್ಲಿ, ಇ20 ಕುರಿತು ಹೆಚ್ಚು ಕೇಳಿಬರುವ ಪ್ರಶ್ನೆ ಮೈಲೇಜ್‌ನಲ್ಲಿ ಗಣನೀಯ ಪ್ರಮಾಣದ ಕುಸಿತ ಉಂಟಾಗುತ್ತದೆ ಎಂಬುದು ಸಾರ್ವಜನಿಕರಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿರುವ ಅಭಿಪ್ರಾಯಗಳಾಗಿವೆ.


ತಾಂತ್ರಿಕ ಅಧ್ಯಯನಗಳು ಸಾಮಾನ್ಯವಾಗಿ ಎಥೆನಾಲ್‌ನ ಶಕ್ತಿಮೌಲ್ಯ ಕಡಿಮೆ ಇರುವುದರಿಂದ ಕೆಲವು ವಾಹನಗಳಲ್ಲಿ ಇಂಧನ ದಕ್ಷತೆಯಲ್ಲಿ ಸ್ವಲ್ಪ ಮಟ್ಟಿನ ಇಳಿಕೆ ಕಾಣಬಹುದು ಎಂದು ಸೂಚಿಸುತ್ತವೆ. ಆದರೆ ಅದು ಪ್ರತಿಯೊಂದು ವಾಹನದಲ್ಲೂ ಒಂದೇ ಪ್ರಮಾಣದಲ್ಲಿ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ.


ವಾಹನದ ಎಂಜಿನ್ ವಿನ್ಯಾಸ, ಅದರ ಇಂಧನ ನಿರ್ವಹಣಾ ವ್ಯವಸ್ಥೆ, ಚಾಲನಾ ವಿಧಾನ, ರಸ್ತೆ ಪರಿಸ್ಥಿತಿ ಮತ್ತು ವಾಹನದ ನಿರ್ವಹಣೆ - ಇವೆಲ್ಲವೂ ಮೈಲೇಜ್ ಮೇಲೆ ಪರಿಣಾಮ ಬೀರುತ್ತವೆ.


ಆದ್ದರಿಂದ ``ಇ20 ಬಂದರೆ ಎಲ್ಲ ವಾಹನಗಳ ಮೈಲೇಜ್ ಕುಸಿಯುತ್ತದೆ’’ ಎಂಬ ಹೇಳಿಕೆಯೂ ಸರಿಯಲ್ಲ. ಅದೇ ರೀತಿ ``ಯಾವುದೇ ವ್ಯತ್ಯಾಸವೇ ಆಗುವುದಿಲ್ಲ’’ ಎಂಬ ಮಾತೂ ಸರಿಯಲ್ಲ. ಇದು ಹೊಸ ವಾಹನಗಳ ಬಗೆಗಿನ ಅಭಿಪ್ರಾಯ ಭೇದವಾದರೆ, ಹಳೆಯ ವಾಹನಗಳ ಪ್ರಶ್ನೆ ಎದುರಾಗುತ್ತದೆ. ಅಷ್ಟೇ ಅಲ್ಲದೆ ಅದು ಮಹತ್ವದ್ದೂ ಆಗುತ್ತದೆ. ಹಾಗಾಗಿ ಇದು ಬಹುಶಃ ಅತ್ಯಂತ ಮಹತ್ವದ ವಿಷಯ.


2023ರ ನಂತರದ ವರ್ಷಗಳಲ್ಲಿ ಬಿಡುಗಡೆಯಾದ ಅನೇಕ ವಾಹನಗಳನ್ನು ಇ20 ಬಳಕೆಗೆ ಹೊಂದುವಂತೆ ತಯಾರಿಸಲಾಗಿದೆ ಎಂದು ಕಂಪನಿಗಳು ತಿಳಿಸಿವೆ. ಆದರೆ ಹಲವು ವರ್ಷಗಳ ಹಿಂದೆ ಖರೀದಿಸಿದ ವಾಹನಗಳ ವಿಷಯದಲ್ಲಿ ಪ್ರತಿಯೊಂದು ಮಾದರಿಗೂ ಒಂದೇ ಉತ್ತರ ಇರುವುದಿಲ್ಲ.


ದೇಶದ ವಿವಿಧ ಭಾಗಗಳಿಂದ, ಅದರಲ್ಲೂ ವಿಶೇಷವಾಗಿ ಸಾಮಾಜಿಕ ಜಾಲತಾಣಗಳಲ್ಲಿ ವಾಹನ ಬಳಕೆದಾರರು ತಮ್ಮ ಅನುಭವಗಳನ್ನು ವ್ಯಾಪಕವಾಗಿ ದೂರುಗಳ ರೀತಿಯಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಕೆಲವು ದೂರುಗಳು ನಿಜವಾದ ತಾಂತ್ರಿಕ ಸಮಸ್ಯೆಗಳಾಗಿರಬಹುದು; ಕೆಲವು ಬೇರೆ ಕಾರಣಗಳಿಂದ ಉಂಟಾಗಿರಬಹುದು.


ಆದ್ದರಿಂದ ಎರಡು ಅತಿರೇಕದ ನಿಲುವುಗಳನ್ನು ತಪ್ಪಿಸಬೇಕು. ಒಂದು. ಎಲ್ಲಾ ಸಮಸ್ಯೆಗಳಿಗೂ ಇ20ನೇ ಕಾರಣ ಎಂದು ಹೇಳುವುದು. ಇನ್ನೊಂದು, ಎಲ್ಲಾ ದೂರುಗಳನ್ನು ವದಂತಿ ಎಂದು ತಳ್ಳಿಹಾಕುವುದು. ಇವೆರಡರ ನಡುವೆ ವೈಜ್ಞಾನಿಕ ಪರಿಶೀಲನೆಯೇ ಸರಿಯಾದ ಮಾರ್ಗ.


ವಿವಿಧ ವಯಸ್ಸಿನ ವಾಹನಗಳ ಮೇಲೆ ದೀರ್ಘಾವಧಿಯ ಅಧ್ಯಯನಗಳ ಫಲಿತಾಂಶಗಳನ್ನು ಸಾರ್ವಜನಿಕಗೊಳಿಸುವುದು. ಇ20 ಬಳಕೆಯ ಅನುಭವಗಳ ಕುರಿತು ಸ್ವತಂತ್ರ ತಜ್ಞರ ವಿಶ್ಲೇಷಣೆಗೆ ಅವಕಾಶ ನೀಡುವುದು. ವಾಹನ ಮಾಲೀಕರ ದೂರುಗಳನ್ನು ಸಂಗ್ರಹಿಸಿ ವೈಜ್ಞಾನಿಕವಾಗಿ ಪರಿಶೀಲಿಸುವ ರಾಷ್ಟ್ರೀಯ ವ್ಯವಸ್ಥೆ ರೂಪಿಸುವುದು. ``ಯಾವ ವಾಹನಗಳಿಗೆ ಇ20 ಸೂಕ್ತ? ಯಾವ ವಾಹನಗಳಲ್ಲಿ ಎಚ್ಚರಿಕೆ ಅಗತ್ಯ?’’ ಎಂಬ ಮಾಹಿತಿಯನ್ನು ಸರಳ ಭಾಷೆಯಲ್ಲಿ ಜನರಿಗೆ ತಲುಪಿಸುವುದನ್ನು ಸರ್ಕಾರ ಮತ್ತು ವಾಹನ ತಯಾರಕರು ಜನರಿಗೆ ಮಾಹಿತಿ ನೀಡುವ ಕೆಲಸ ಮಾಡಬೇಕಿದೆ.


ಇದರಿಂದ ಸಾರ್ವಜನಿಕರ ಅನುಮಾನ ಮತ್ತು ಪ್ರಶ್ನೆಗಳಿಗೆ ಉತ್ತರ ನೀಡಿದಂತಾಗುತ್ತದೆ. ಮತ್ತು ಪ್ರಶ್ನೆಗಳಿಗೆ ಸಾಕ್ಷ್ಯಾಧಾರಗಳೊಂದಿಗೆ ಉತ್ತರ ಹುಡುಕಿದಂತಾಗುತ್ತದೆ. ಇ20 ಕುರಿತ ಚರ್ಚೆಯೂ ಇದೇ ದಾರಿಯಲ್ಲಿ ಸಾಗಿದಾಗ ಮಾತ್ರ ಸಾರ್ವಜನಿಕರ ವಿಶ್ವಾಸ ಹೆಚ್ಚುತ್ತದೆ.


ಇನ್ನು ಎಥೆನಾಲ್ 20 ಅನುಷ್ಟಾನದಲ್ಲಿ ಸರ್ಕಾರದ ಜವಾಬ್ದಾರಿ, ಗ್ರಾಹಕರ ಹಕ್ಕುಗಳು ಮತ್ತು ಉತ್ತರಿಸಬೇಕಾದ ಪ್ರಶ್ನೆಗಳು ಹಲವಾರಿವೆ.


ಭಾರತದಂತಹ ದೊಡ್ಡ ದೇಶದಲ್ಲಿ ಯಾವುದೇ ಸಾರ್ವಜನಿಕ ನೀತಿಯನ್ನು ಜಾರಿಗೆ ತರುವಾಗ ಅದರ ಯಶಸ್ಸು ಕೇವಲ ಉತ್ತಮ ಉದ್ದೇಶಗಳಿಂದ ನಿರ್ಧಾರವಾಗುವುದಿಲ್ಲ. ಸಾರ್ವಜನಿಕರ ವಿಶ್ವಾಸ, ಪಾರದರ್ಶಕತೆ ಮತ್ತು ಜವಾಬ್ದಾರಿಯುತ ಅನುಷ್ಠಾನ ಅದರ ನಿಜವಾದ ಯಶಸ್ಸಿನ ಮಾನದಂಡಗಳಾಗಿವೆ. ಇ20 ಪೆಟ್ರೋಲ್ ವಿಷಯದಲ್ಲಿಯೂ ಇದೇ ಅನ್ವಯಿಸುತ್ತದೆ.


ರಾಷ್ಟ್ರೀಯ ಹಿತ ಮತ್ತು ನಾಗರಿಕರ ಹಿತ ಎರಡೂ ಒಂದೇ. ಕಚ್ಚಾ ತೈಲ ಆಮದು ಕಡಿಮೆಯಾಗಬೇಕು. ರೈತರಿಗೆ ಹೊಸ ಮಾರುಕಟ್ಟೆ ಸಿಗಬೇಕು. ಪರಿಸರದ ಮೇಲೆ ಆಗುತ್ತಿರುವ ಒತ್ತಡ ತಗ್ಗಬೇಕು. ಈ ಗುರಿಗಳನ್ನು ಯಾರೂ ವಿರೋಧಿಸುವುದಿಲ್ಲ.


ಆದರೆ, ತಮ್ಮ ಜೀವನದ ಉಳಿತಾಯದಿಂದ ಬೈಕ್, ಸ್ಕೂಟರ್ ಅಥವಾ ಕಾರು ಖರೀದಿಸಿರುವ ಸಾಮಾನ್ಯ ನಾಗರಿಕನ ಹಿತಾಸಕ್ತಿಯೂ ಅಷ್ಟೇ ಮುಖ್ಯ. ರಾಷ್ಟ್ರೀಯ ಹಿತ ಮತ್ತು ನಾಗರಿಕರ ಹಿತ ಪರಸ್ಪರ ವಿರುದ್ಧವಾಗಿರಬಾರದು; ಎರಡೂ ಪರಸ್ಪರ ಪೂರಕವಾಗಿರಬೇಕು.


ಈ ಹಿನ್ನೆಲೆಯಲ್ಲೇ ಇಂದು ದೇಶದಾದ್ಯಂತ ವಾಹನ ಬಳಕೆದಾರರು ಕೆಲವು ಮೂಲಭೂತ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ನನ್ನ ವಾಹನ ಇ20ಗೆ ಅಧಿಕೃತವಾಗಿ ಹೊಂದಾಣಿಕೆಯಿದೆಯೇ? ಹೊಂದಾಣಿಕೆ ಇಲ್ಲದಿದ್ದರೆ ಪರ್ಯಾಯ ವ್ಯವಸ್ಥೆ ಏನು? ಒಂದು ವೇಳೆ ಇ20 ಬಳಕೆಯೊಂದಿಗೆ ಸಂಬಂಧಿತ ತಾಂತ್ರಿಕ ಸಮಸ್ಯೆ ಉಂಟಾದರೆ ಹೊಣೆಗಾರಿಕೆ ಯಾರದು? ಗ್ರಾಹಕರಿಗೆ ಪರಿಹಾರ ಅಥವಾ ದೂರು ನಿವಾರಣೆಯ ವ್ಯವಸ್ಥೆ ಇದೆಯೇ? ಸಾರ್ವಜನಿಕರ ಅನುಭವಗಳನ್ನು ಸಂಗ್ರಹಿಸಿ ಸ್ವತಂತ್ರವಾಗಿ ವಿಶ್ಲೇಷಿಸುವ ವ್ಯವಸ್ಥೆ ರೂಪಿಸಲಾಗಿದೆಯೇ? ಈ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡುವುದು ಸರ್ಕಾರ, ತೈಲ ಕಂಪನಿಗಳು ಮತ್ತು ವಾಹನ ತಯಾರಕರ ಜಂಟಿ ಜವಾಬ್ದಾರಿಯಾಗಿದೆ.


ಈ ನಿಟ್ಟಿನಲ್ಲಿ ವಾಹನ ತಯಾರಕರ ಪಾತ್ರವೂ ಮಹತ್ವದ್ದಾಗಿದೆ. ವಾಹನ ಕಂಪನಿಗಳು ತಮ್ಮ ಗ್ರಾಹಕರಿಗೆ ಈ ಕೆಲವು ಮಾಹಿತಿಗಳನ್ನು ಸ್ಪಷ್ಟವಾಗಿ ತಿಳಿಸಬೇಕು: ಯಾವ ವರ್ಷದಿಂದ ತಯಾರಾದ ವಾಹನಗಳು ಇ20ಗೆ ಹೊಂದಾಣಿಕೆಯಾಗಿವೆ? ಹಳೆಯ ವಾಹನಗಳ ಬಗ್ಗೆ ಅವರ ಅಧಿಕೃತ ಸಲಹೆ ಏನು? ನಿರ್ವಹಣೆಯಲ್ಲಿ ಯಾವುದೇ ವಿಶೇಷ ಬದಲಾವಣೆ ಅಗತ್ಯವಿದೆಯೇ? ಈ ಮಾಹಿತಿ ಪ್ರತಿಯೊಬ್ಬ ವಾಹನ ಮಾಲೀಕರಿಗೂ ಸುಲಭವಾಗಿ ಲಭ್ಯವಾಗಬೇಕು.


ಸರ್ಕಾರ ಮತ್ತು ವಾಹನ ತಯಾರಕ ಸಂಸ್ಥೆಗಳ ಜವಾಬ್ದಾರಿಯಷ್ಟೇ ತೈಲ ಕಂಪನಿಗಳ ಪಾತ್ರವೂ ಮಹತ್ವದ್ದಾಗಿದೆ. ದೇಶದ ಹಲವು ಕಡೆಗಳಲ್ಲಿ ಕಲಬೆರಕೆ ಇಂಧನ ದೊರೆಯುತ್ತಿರುವ ಹಿನ್ನೆಲೆಯಲ್ಲಿ ನಾಗರಿಕರಲ್ಲಿ ಸಹಜ ಪ್ರಶ್ನೆಗಳು ಮೂಡುತ್ತವೆ. ಇ20 ಇಂಧನದ ಗುಣಮಟ್ಟ ಎಲ್ಲೆಡೆ ಒಂದೇ ಮಟ್ಟದಲ್ಲಿ ಕಾಪಾಡಲಾಗುತ್ತಿದೆಯೇ? ಗ್ರಾಹಕರಿಗೆ ಸರಿಯಾದ ಮಾಹಿತಿ ನೀಡಲಾಗುತ್ತಿದೆಯೇ? ಇಂಧನ ಗುಣಮಟ್ಟದ ಬಗ್ಗೆ ಅನುಮಾನ ಇದ್ದರೆ ಪರಿಶೀಲನೆಗೆ ವ್ಯವಸ್ಥೆ ಇದೆಯೇ? ಇಂತಹ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರಗಳು ಸಾರ್ವಜನಿಕ ವಿಶ್ವಾಸವನ್ನು ಬಲಪಡಿಸುತ್ತವೆ.


ಇನ್ನು ಸರ್ಕಾರ ಮಾಡಬಹುದಾದ ಕೆಲವು ಕ್ರಮಗಳನ್ನು ಕೈಗೊಳ್ಳಲೇಬೇಕಾಗುತ್ತದೆ. ಜನರಲ್ಲಿ ಮೂಡಿರುವ ಆತಂಕವನ್ನು ಕಡಿಮೆ ಮಾಡಲು ಸರ್ಕಾರ ಈ ಕ್ರಮಗಳನ್ನು ಪರಿಗಣಿಸಬಹುದು: ವಿವಿಧ ವಯಸ್ಸಿನ ವಾಹನಗಳ ಮೇಲೆ ದೀರ್ಘಾವಧಿಯ ಸ್ವತಂತ್ರ ಅಧ್ಯಯನಗಳನ್ನು ಸಾರ್ವಜನಿಕವಾಗಿ ಪ್ರಕಟಿಸುವುದು. ಇ20 ಕುರಿತು ಸಾಮಾನ್ಯ ಜನರಿಗೆ ಅರ್ಥವಾಗುವ ಮಾಹಿತಿ ಪುಸ್ತಕ ಅಥವಾ ಡಿಜಿಟಲ್ ಮಾರ್ಗದರ್ಶಿ ಬಿಡುಗಡೆ ಮಾಡುವುದು. ವಾಹನ ಸಂಬಂಧಿತ ದೂರುಗಳಿಗಾಗಿ ರಾಷ್ಟ್ರೀಯ ಮಟ್ಟದ ತಾಂತ್ರಿಕ ಸಹಾಯವಾಣಿ ಮತ್ತು ಪರಿಶೀಲನಾ ವ್ಯವಸ್ಥೆ ರೂಪಿಸುವುದು. ವಾಹನ ತಯಾರಕರು, ತೈಲ ಕಂಪನಿಗಳು ಮತ್ತು ಗ್ರಾಹಕರ ಸಂಘಟನೆಗಳೊಂದಿಗೆ ನಿರಂತರ ಸಂವಾದ ನಡೆಸುವುದನ್ನು ಸರ್ಕಾರ ಮಾಡಲೇಬೇಕಿದೆ.


ಭಾರತವು ಪರ್ಯಾಯ ಇಂಧನಗಳತ್ತ ಸಾಗುವುದು ಕಾಲದ ಅಗತ್ಯವಾಗಿರಬಹುದು. ಆದರೆ ಯಾವುದೇ ರಾಷ್ಟ್ರೀಯ ನೀತಿ ಯಶಸ್ವಿಯಾಗಬೇಕಾದರೆ ಅದು ವೈಜ್ಞಾನಿಕ ಸಾಕ್ಷ್ಯ, ಸಾರ್ವಜನಿಕ ವಿಶ್ವಾಸ ಮತ್ತು ಪಾರದರ್ಶಕತೆಯ ಮೇಲೆ ನಿಂತಿರಬೇಕು.


ಪರಿಸರದ ಹಿತ, ರೈತರ ಹಿತ, ದೇಶದ ಆರ್ಥಿಕ ಹಿತ ಮತ್ತು ಸಾಮಾನ್ಯ ನಾಗರಿಕರ ಹಿತ, ಈ ನಾಲ್ಕರ ನಡುವೆ ಸಮತೋಲನ ಸಾಧಿಸಿದಾಗ ಮಾತ್ರ ಇ20ರಂತಹ ಮಹತ್ವದ ನೀತಿಗಳು ದೀರ್ಘಕಾಲದ ಯಶಸ್ಸು ಕಾಣಲಿವೆ.


ಭಾರತವು ಪರ್ಯಾಯ ಇಂಧನಗಳತ್ತ ಸಾಗುತ್ತಿರುವುದು ಕೇವಲ ಇಂದಿನ ಅಗತ್ಯವಲ್ಲ; ಭವಿಷ್ಯದ ಇಂಧನ ಭದ್ರತೆಯ ದೃಷ್ಟಿಯಿಂದಲೂ ಮಹತ್ವದ ಹೆಜ್ಜೆಯಾಗಿದೆ. ಆದರೆ ಯಾವುದೇ ಪರಿವರ್ತನೆ ಯಶಸ್ವಿಯಾಗಬೇಕಾದರೆ ಅದು ಸಾರ್ವಜನಿಕ ವಿಶ್ವಾಸದೊಂದಿಗೆ ಸಾಗಬೇಕು. ಇದೇ ಇ20 ಕುರಿತ ಚರ್ಚೆಯ ಕೇಂದ್ರಬಿಂದುವಾಗಿದೆ.


ಇ20 ಕುರಿತು ಪ್ರಸ್ತುತ ದೇಶಾದ್ಯಂತ ನಡೆಯುತ್ತಿರುವ ಚರ್ಚೆಯನ್ನು ``ಪರ’’ ಅಥವಾ ``ವಿರೋಧ’’ ಎಂಬ ಎರಡು ತುದಿಗಳಲ್ಲಿ ಸೀಮಿತಗೊಳಿಸುವ ಅಗತ್ಯವಿಲ್ಲ. ಭಾರತಕ್ಕೆ ಪರಿಸರ ಸಂರಕ್ಷಣೆ ಬೇಕು. ರೈತರಿಗೆ ಉತ್ತಮ ಆದಾಯ ಬೇಕು. ದೇಶಕ್ಕೆ ಇಂಧನ ಭದ್ರತೆ ಬೇಕು. ಆದರೆ ಈ ಮೂರು ಗುರಿಗಳ ಜೊತೆಗೆ ಸಾಮಾನ್ಯ ನಾಗರಿಕರ ವಿಶ್ವಾಸವೂ ಅಷ್ಟೇ ಮುಖ್ಯ.


ಜನರು ಅಭಿವೃದ್ಧಿಯನ್ನು ವಿರೋಧಿಸುತ್ತಿಲ್ಲ. ಆದರೆ ಅಭಿವೃದ್ಧಿಯ ಪ್ರತಿಯೊಂದು ಹೆಜ್ಜೆಯೂ ವೈಜ್ಞಾನಿಕ ಸಾಕ್ಷ್ಯ, ಪಾರದರ್ಶಕತೆ ಮತ್ತು ಗ್ರಾಹಕರ ಹಕ್ಕುಗಳನ್ನು ಗೌರವಿಸುವ ರೀತಿಯಲ್ಲಿ ಇರಬೇಕೆಂದು ಮಾತ್ರ ಬಯಸುತ್ತಿದ್ದಾರೆ.


ದೇಶವು ಪರೀಕ್ಷಾ ಪ್ರಯೋಗಾಲಯವಲ್ಲ. ಅದು ಕೋಟ್ಯಂತರ ನಾಗರಿಕರ ಕನಸುಗಳು, ಪರಿಶ್ರಮ ಮತ್ತು ವಿಶ್ವಾಸದ ಮೇಲೆ ನಿರ್ಮಿತ ರಾಷ್ಟç. ಆದ್ದರಿಂದ ಯಾವುದೇ ಹೊಸ ನೀತಿಯ ಯಶಸ್ಸು ಅದರ ಘೋಷಣೆಯಲ್ಲಿ ಅಲ್ಲ; ಜನರ ಮನಸ್ಸಿನಲ್ಲಿ ಮೂಡುವ ವಿಶ್ವಾಸದಲ್ಲಿದೆ.


ಎಥೆನಾಲ್ ಎಂದರೇನು?


ಎಥೆನಾಲ್ ಒಂದು ಜೈವಿಕ ಇಂಧನ.. ಕಬ್ಬು, ಕಾಕಂಬಿ (ಒoಟಚಿsses), ಮುಗ್ಗಿದ ಅಕ್ಕಿ, ಜೋಳ, ಮೆಕ್ಕೆಜೋಳ ಮುಂತಾದ ಕೃಷಿ ಮೂಲದ ಉತ್ಪನ್ನಗಳಿಂದ ಇದನ್ನು ತಯಾರಿಸಬಹುದು. ಪೆಟ್ರೋಲ್‌ಗೆ ಎಥೆನಾಲ್ ಅನ್ನು ನಿರ್ದಿಷ್ಟ ಪ್ರಮಾಣದಲ್ಲಿ ಮಿಶ್ರಣ ಮಾಡುವ ಮೂಲಕ ಪೆಟ್ರೋಲಿಯಂ ಮೇಲಿನ ಅವಲಂಬನೆ ಕಡಿಮೆ ಮಾಡುವುದು ಮತ್ತು ದೇಶೀಯ ಕೃಷಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿಸುವುದು ಇದರ ಉದ್ದೇಶ.


ಭಾರತದಲ್ಲಿ ಎಥೆನಾಲ್ ಮಿಶ್ರಣ ಹೊಸ ವಿಚಾರವಲ್ಲ. ಆರಂಭದಲ್ಲಿ ಸುಮಾರು 1.5% ಮಿಶ್ರಣವಿದ್ದರೆ, ನಂತರ ಅದು ಇ10 (10%)ಕ್ಕೆ ಏರಿತು. ಬಳಿಕ ಸರ್ಕಾರ ಮೂಲತಃ 2030ರೊಳಗೆ ಸಾಧಿಸಲು ಉದ್ದೇಶಿಸಿದ್ದ ಇ20 (20%) ಗುರಿಯನ್ನು ಮುಂಚಿತವಾಗಿ 2025ರ ವೇಳೆಗೆ ಜಾರಿಗೊಳಿಸುವ ದಿಕ್ಕಿನಲ್ಲಿ ಕ್ರಮ ಕೈಗೊಂಡಿದ್ದರೂ 2023ರಿಂದಲೂ ಈ ಪ್ರಯೋಗ ಶುರುವಾಯಿತು ಎಂಬ ಮಾತುಗಳಿವೆ. ಇದು ಭಾರತದ ಪರ್ಯಾಯ ಇಂಧನ ನೀತಿಯಲ್ಲಿ ಒಂದು ಮಹತ್ವದ ಹೆಜ್ಜೆ.

ಬ್ರೆಜಿಲ್ ಮತ್ತು ಅಮೆರಿಕದದಿಂದ ಭಾರತ ಕಲಿಯಬೇಕಾದುದೇನು?


ಬ್ರೆಜಿಲ್‌ನಲ್ಲಿ ಹಲವು ದಶಕಗಳಿಂದ ಎಥೆನಾಲ್ ಮಿಶ್ರಿತ ಇಂಧನ ಬಳಕೆಯಲ್ಲಿದೆ. ಅಲ್ಲಿನ ವಾಹನ ಉದ್ಯಮ, ಇಂಧನ ಸರಬರಾಜು ವ್ಯವಸ್ಥೆ ಮತ್ತು ಕೃಷಿ ನೀತಿಗಳು ಪರಸ್ಪರ ಹೊಂದಾಣಿಕೆಯಲ್ಲಿ ಬೆಳೆಯುತ್ತ ಬಂದಿವೆ. ಅನೇಕ ವಾಹನಗಳು ಹೆಚ್ಚಿನ ಎಥೆನಾಲ್ ಮಿಶ್ರಣಕ್ಕೆ ಅನುಗುಣವಾಗಿ ವಿನ್ಯಾಸಗೊಳಿಸಲ್ಪಟ್ಟಿವೆ.


ಅಮೆರಿಕದಲ್ಲಿಯೂ ಎಥೆನಾಲ್ ಮಿಶ್ರಿತ ಇಂಧನ ವ್ಯಾಪಕವಾಗಿ ಬಳಕೆಯಲ್ಲಿದೆ. ಆದರೆ ವಿವಿಧ ಮಿಶ್ರಣಗಳಿಗೆ ವಾಹನ ತಯಾರಕರ ಮಾರ್ಗಸೂಚಿಗಳು, ಇಂಧನ ಗುಣಮಟ್ಟದ ನಿಯಂತ್ರಣ ಮತ್ತು ಗ್ರಾಹಕರಿಗೆ ಮಾಹಿತಿ ನೀಡುವ ವ್ಯವಸ್ಥೆಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ.


ಭಾರತದ ಪರಿಸ್ಥಿತಿ ವಿಭಿನ್ನವಾಗಿದೆ. ಇಲ್ಲಿ ಹೊಸ ವಾಹನಗಳ ಜೊತೆಗೆ ಹಲವು ವರ್ಷಗಳಿಂದ ಬಳಕೆಯಲ್ಲಿರುವ ಕೋಟ್ಯಂತರ ವಾಹನಗಳೂ ರಸ್ತೆಯಲ್ಲಿವೆ. ಆದ್ದರಿಂದ ಭಾರತದ ನೀತಿಯು ತನ್ನದೇ ಆದ ಸವಾಲುಗಳನ್ನು ಎದುರಿಸಬೇಕಾಗಿದೆ.


ಇ20 ಮತ್ತು ಎಲೆಕ್ಟ್ರಿಕ್ ವಾಹನಗಳು : 


ಪರಿವರ್ತನೆಯ ಎರಡು ಹಂತಗಳು


ಒಂದು ಕಡೆ ಸರ್ಕಾರ ಇ20 ಬಳಕೆಯನ್ನು ಉತ್ತೇಜಿಸುತ್ತಿದೆ. ಮತ್ತೊಂದು ಕಡೆ ಎಲೆಕ್ಟ್ರಿಕ್ ವಾಹನಗಳಿಗೆ ಪ್ರೋತ್ಸಾಹ ನೀಡುತ್ತಿದೆ.ಇದು ಪರಸ್ಪರ ವಿರೋಧಾಭಾಸವೆಂದು ಕಾಣಬಹುದಾದರೂ, ನೀತಿ ದೃಷ್ಟಿಯಿಂದ ಎರಡನ್ನೂ ವಿಭಿನ್ನ ಕಾಲಾವಧಿಯ ಪರಿಹಾರಗಳಾಗಿ ನೋಡಲಾಗುತ್ತದೆ.

ಎಲೆಕ್ಟ್ರಿಕ್ ವಾಹನಗಳತ್ತ ಸಂಪೂರ್ಣ ಪರಿವರ್ತನೆಗೆ ಇನ್ನೂ ಸಮಯ ಬೇಕಾಗಿರುವುದರಿಂದ, ಆ ಮಧ್ಯಂತರದಲ್ಲಿ ದ್ರವ ಇಂಧನದ ಬಳಕೆಯನ್ನು ಹೆಚ್ಚು ಪರಿಸರ ಸ್ನೇಹಿಯಾಗಿ ಮಾಡುವ ಪ್ರಯತ್ನವೇ ಇ20 ಎಂಬುದು ಸರ್ಕಾರದ ನಿಲುವು.


ಆದರೆ ಜನರ ಪ್ರಶ್ನೆ ಸರಳವಾಗಿದೆ:

ದೀರ್ಘಾವಧಿಯಲ್ಲಿ ವಿದ್ಯುತ್ ವಾಹನಗಳತ್ತ ದೇಶ ಸಾಗಲಿದ್ದರೆ, ಈಗಿನ ವಾಹನಗಳ ಮಾಲೀಕರ ಹಿತಾಸಕ್ತಿಯನ್ನು ಹೇಗೆ ರಕ್ಷಿಸಲಾಗುತ್ತದೆ ಎಂಬುದಕ್ಕೆ ಉತ್ತರ ದೊರೆಯುವುದು ಕಷ್ಟ ಎನಿಸುತ್ತದೆ.


ಎಥೆನಾಲ್ ಮತ್ತು ನೀರು


ಎಥೆನಾಲ್‌ಗೆ ನೀರನ್ನು ಆಕರ್ಷಿಸುವ ಸ್ವಭಾವವಿದೆ. ಇದರಿಂದ ಇಂಧನದ ಗುಣಮಟ್ಟ, ಸಂಗ್ರಹಣೆ ಮತ್ತು ವಿತರಣಾ ವ್ಯವಸ್ಥೆಯಲ್ಲಿ ವ್ಯತ್ಯಾಸವಾಗಿ ಇಂಜಿನ್ ಕೆಡುವ ಅಪಾಯವಿದೆ ಎಂಬ ಆರೋಪ ಕೇಳಿಬರುತ್ತಿದೆ. ಆದರೆ ಕೇವಲ ಈ ಗುಣವಿರುವುದರಿಂದಲೇ ಪ್ರತಿಯೊಂದು ವಾಹನದಲ್ಲೂ ಎಂಜಿನ್ ಹಾನಿಯಾಗುತ್ತದೆ ಎಂದು ಹೇಳಲು ಸಾಕ್ಷ್ಯಾಧಾರವಿಲ್ಲ.


ಈ ವಿಷಯಗಳ ಬಗ್ಗೆ ಗಂಭೀರ ಚಿಂತನೆ ಮತ್ತು ಸರ್ಕಾರದ ಸ್ಪಷ್ಟ ಮಾರ್ಗಸೂಚಿಯ ಅಗತ್ಯವಿದೆ. ಈ ವಿಷಯಗಳಲ್ಲಿ ಹೆಚ್ಚು ಪಾರದರ್ಶಕತೆ ಜನರ ವಿಶ್ವಾಸವನ್ನು ಹೆಚ್ಚಿಸುತ್ತದೆ.