ಭ್ರಷ್ಟಾಚಾರ - ವ್ಯವಸ್ಥೆಯ ಬೇರುಗಳಲ್ಲಿರುವ ವೈರಾಣು

“ ಪ್ರಜಾಪ್ರಭುತ್ವ ಎಂದರೆ ಅದೊಂದು ಜೀವನ ವಿಧಾನ, ಸಮಾನತೆಯ ಮಾರ್ಗ ” ಎಂದು ಡಾ. ಬಿ.ಆರ್.‌ ಅಂಬೇಡ್ಕರ್‌ ಹೇಳುತ್ತಾರೆ. ಜೀವನ ವಿಧಾನ ಯಾರದು ? ಸಮಾನತೆಯ ಮಾರ್ಗ ಯಾರಿಗಾಗಿ ? ಇವೆರಡನ್ನೂ ಅಂತರಿಕೀಕರಣಗೊಳಿಸಿಕೊಂಡು ಸಾಮಾಜಿಕವಾಗಿ ಅಂತರ್ಗತಗೊಳಿಸುವ  ಜವಾಬ್ದಾರಿ ಯಾರದು ?

ಭ್ರಷ್ಟಾಚಾರ - ವ್ಯವಸ್ಥೆಯ ಬೇರುಗಳಲ್ಲಿರುವ ವೈರಾಣು

ನಾ ದಿವಾಕರ

 

ಭಾರತದ ರಾಜಕೀಯ ವಲಯದಲ್ಲಿ ಹಾಗೂ ಸಾಮಾಜಿಕ ಜೀವನದಲ್ಲಿ ಅಧಿಕಾರ ದುರುಪಯೋಗ, ಹಣಕಾಸು ಭ್ರಷ್ಟಾಚಾರ, ಅತ್ಯಾಚಾರ ಮತ್ತಿತರ ರಾಜಕೀಯ ಅಪರಾಧಗಳನ್ನು ಕಳಂಕ ಎಂದು ವರ್ಗೀಕರಿಸುವ ಕಾಲವೂ ಒಂದಿತ್ತು. ಹೀಗೆ ಹೇಳಿದರೆ 21ನೆಯ ಶತಮಾನದ ಮಕ್ಕಳಿಗೆ ಅಚ್ಚರಿಯಾಗಬಹುದು. ಏಕೆಂದರೆ ರಾಜಕಾರಣಿಗಳು ದುಡ್ಡು ಮಾಡುವುದು ಸಹಜ ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿ ಪ್ರಚಲಿತವಾಗಿದೆ. 1970-80ರವರೆಗೂ ಚುನಾವಣೆಗಳಲ್ಲಿ ಅಭ್ಯರ್ಥಿಗಳು ಹಣ ಹಂಚುವುದನ್ನು ನಾಗರಿಕರು ಅಪರಾಧ ಎಂದೇ ಭಾವಿಸುತ್ತಿದ್ದರು. ಹಣ-ಹೆಂಡ-ಟಿವಿ-ಬಟ್ಟೆ ಇತ್ಯಾದಿ ಆಮಿಷಗಳು ಚುನಾವಣೆಯ ಅಕ್ರಮಗಳ ಭಾಗವಾಗಿದ್ದವು. ಆದರೆ ಭಾರತ ವಿಕಾಸದ ಹಾದಿಯಲ್ಲಿ ಸಾಗುತ್ತಿರುವಂತೆ ಇವೆಲ್ಲವೂ ಸಾಂಸ್ಥೀಕರಣಗೊಂಡು ಸಾರ್ವತ್ರಿಕ ಸಮ್ಮತಿ ಪಡೆದುಕೊಂಡಿವೆ.

 

ಭಾರತ ಡಿಜಿಟಲ್‌ ಯುಗದ ವಿಶ್ವಗುರು ಆಗುತ್ತಿರುವುದರಿಂದ ಈ ಅಕ್ರಮಗಳೆಲ್ಲವೂ ಡಿಜಿಟಲ್‌ ಆಗಿವೆ. ಮೂರು ದಶಕಗಳ ಹಿಂದೆ ಸರ್ಕಾರಗಳು ಅಕ್ರಮ ಆಸ್ತಿ ಅಥವಾ ಸಂಪತ್ತನ್ನು ಘೋಷಿಸಿದವರಿಗೆ ರಿಯಾಯಿತಿ ನೀಡುವ ಅಕ್ರಮ ಸಕ್ರಮ ಯೋಜನೆಗಳನ್ನೂ ಘೋಷಿಸಿದ್ದವು. ಈ ಭರವಸೆಯೊಂದಿಗೇ 2014ರಲ್ಲಿ ಮೋದಿ ಸರ್ಕಾರ ಸ್ವಿಸ್‌ ಬ್ಯಾಂಕುಗಳಲ್ಲಿರುವ ಎಲ್ಲ ಅಕ್ರಮ ಹಣವನ್ನೂ ಭಾರತಕ್ಕೆ ತಂದು ಜನಸಾಮಾನ್ಯರಿಗೆ ಹಂಚುವ ಭರವಸೆ ನೀಡಿತ್ತು. ಆದರೆ ಈಗ ಸ್ವಿಸ್‌ ಬ್ಯಾಂಕ್‌ ಶಾಖೆಗಳ ರೂಪಾಂತರವನ್ನು ರಾಜಕೀಯ ನಾಯಕರ ಮನೆಗಳಲ್ಲಿ, ಕಚೇರಿಗಳಲ್ಲಿ ಕಾಣುವಂತಾಗಿದೆ. ಭ್ರಷ್ಟ ಹಣ ಎಷ್ಟಿದೆ ಎನ್ನುವುದು ಸುದ್ದಿಯಾಗುತ್ತದೆಯೇ ಹೊರತು ಎಲ್ಲಿಂದ ಹರಿದುಬರುತ್ತದೆ ಎನ್ನುವುದಲ್ಲ.

 

ಹೊಸ ರಾಜಕೀಯ ಸಂಸ್ಕೃತಿಯಾಗಿ,,,,,,,,

 

ಏಕೆಂದರೆ ಈ ಅಕ್ರಮ ವ್ಯವಸ್ಥೆಯ ಒಂದು ಭಾಗವಾಗಿ ರಾಜಕೀಯ ಸಮ್ಮತಿ , ನಾಗರಿಕ ಸ್ವೀಕೃತಿ ಪಡೆದುಕೊಂಡಿದೆ. ಆಗಿಂದಾಗ್ಗೆ ಕೇಂದ್ರ ಸರ್ಕಾರ ಕೈಗೊಳ್ಳುವ ಇ.ಡಿ ದಾಳಿ (ಜಾರಿ ನಿರ್ದೇಶನಾಲಯ) ಜನಸಾಮಾನ್ಯರ ಮುಂದೆ ತೆರೆದಿಡುವ ಭ್ರಷ್ಟಾಚಾರದ ವಿರಾಟ್‌ ರೂಪ, ಅಕ್ರಮ ಆಸ್ತಿಯ ಚಿತ್ರಣ ಹಾಗೂ ಗುಪ್ತನಿಧಿಯ ಗಣಿಗಳು, ಭಾರತದ ರಾಜಕೀಯ ವ್ಯವಸ್ಥೆಯ ಕರಾಳ ಆಯಾಮವನ್ನು ಪರಿಚಯಿಸುತ್ತವೆ. ಈ ಅಕ್ರಮ ಸಂತಾನಗಳನ್ನು ಕಂಡು ತಳಸಮಾಜದ ದುಡಿಯುವ ಜನರು, ಶ್ರೀಸಾಮಾನ್ಯರು ಆಶ್ಚರ್ಯಚಕಿತರಾಗುತ್ತಾರೆ ಆದರೆ ರಾಜಕೀಯ ವಾತಾವರಣದಲ್ಲಿ ಇದು ಸಂಚಲನ ಮೂಡಿಸುವುದಿಲ್ಲ.

 

ಏಕೆಂದರೆ ಇ.ಡಿ. ಬಲೆಗೆ ಸಿಕ್ಕಿಬಿದ್ದ ರಾಜಕೀಯ ನಾಯಕರಿಗೆ ಲಜ್ಜೆ, ಮುಜುಗರ, ಇರುಸುಮುರುಸು ಏನೂ ಆಗುವುದಿಲ್ಲ. ಈ ಗುಣಲಕ್ಷಣಗಳೆಲ್ಲವೂ 20ನೆಯ ಶತಮಾನದಲ್ಲೇ ಅವಸಾನ ಹೊಂದಿವೆ. ಸಣ್ಣ ಆರೋಪವನ್ನೂ ಕಳಂಕ ಎಂದು ಭಾವಿಸುವ ಒಂದು ರಾಜಕೀಯ ಪರಂಪರೆಯನ್ನು ಭಾರತ ಎಂದೋ ಕಳೆದುಕೊಂಡಿದೆ. ಈಗ ರೂಪಾಂತರ ಹೊಂದಿದ್ದು ಅಪರಾಧವನ್ನೂ ಕಳಂಕಪ್ರಾಯವಾಗಿ ಕಾಣುವುದಿಲ್ಲ. ಇದನ್ನು ರಾಜಕೀಯ ವಲಯದಲ್ಲಿ ಎರಡು ರೀತಿಯಲ್ಲಿ ನಿಭಾಯಿಸಲಾಗುತ್ತದೆ. ಮೊದಲನೆಯದು ತಮ್ಮಂತೆಯೇ ಭ್ರಷ್ಟರಾಗಿರುವ ಇತರೆ ನಾಯಕರ ಕಡೆಗೆ ಬೊಟ್ಟು ಮಾಡುವ ಮೂಲಕ ದುಷ್ಟಬುದ್ಧಿಯನ್ನು ತುಲನಾತ್ಮಕವಾಗಿ ನೋಡಿ “ ನಾನು ಅವನಿಗಿಂತಲೂ ಲೇಸು ” ಎಂದು ಸಮಾಧಾನದಿಂದಿರುವುದು. ಅಕ್ರಮಗಳ ಗಣಿಯಲ್ಲಿ ಸಿಲುಕಿ ಜೈಲುವಾಸ ಅನುಭವಿಸಿದ ನಾಯಕರೂ ಸಹ, ಸಹಖೈದಿಗಳೊಂದಿಗೆ ಹೋಲಿಸಿಕೊಂಡು ನೆಮ್ಮದಿ ಪಡೆಯುತ್ತಾರೆ.

 

ಮತ್ತೊಂದು ವಿಧಾನವನ್ನು ಬಿಜೆಪಿ ಸಾಂಸ್ಥೀಕರಿಸಿದೆ. ಎಂತಹುದೇ ಅಪರಾಧ ಮಾಡಿದ್ದರೂ, ಅಕ್ರಮ ಮತ್ತು ಭ್ರಷ್ಟಾಚಾರದ ಪ್ರಮಾಣ ಹಿಮಾಲಯದಷ್ಟಿದ್ದರೂ,  ಮೂಲ ಪಕ್ಷದಿಂದ ಬಿಜೆಪಿಗೆ ಬೇಲಿ ಹಾರಿದರೆ, ಎಲ್ಲ ಆರೋಪಗಳೂ ಮರೆಯಾಗಿಬಿಡುತ್ತವೆ. ಈ ರಾಜಕೀಯ ʼವಾಷಿಂಗ್‌ ಮೆಷಿನ್‌ʼ ಅನೇಕರನ್ನು ಮುಖ್ಯಮಂತ್ರಿ ಗದ್ದುಗೆಯಲ್ಲಿ ಕೂರಿಸಿದೆ. ಇ.ಡಿ ಎಂಬ ಸಾಂವಿಧಾನಿಕ ಸಂಸ್ಥೆ ತನ್ನ ಬಲೆಗೆ ಸಿಲುಕಿದ ಭ್ರಷ್ಟರನ್ನು , ಈ ವಾಷಿಂಗ್‌ ಮೆಷಿನ್‌ ಒಳಗೆ ಹೋಗುವವರೆಗೂ ಹಿಂಬಾಲಿಸುತ್ತದೆ. ತದನಂತರ ಎಫ್‌ಐಆರ್-ತನಿಖೆ-ನ್ಯಾಯಾಲಯ-ವಿಚಾರಣೆ ಮತ್ತು ಖುಲಾಸೆಯ ಪ್ರಕ್ರಿಯೆಯಲ್ಲಿ ಕಳಂಕಪ್ರಾಯರೆಲ್ಲರೂ ಶುದ್ಧಹಸ್ತರಾಗಿ ಜನರ ಮುಂದೆ ನಿಲ್ಲುತ್ತಾರೆ. ಭ್ರಷ್ಟರ ಆತ್ಯಂತಿಕ ಆಶ್ರಯ ತಾಣವಾಗಿ (Last resort of the Corrupt) ಬಿಜೆಪಿ ಸ್ವತಃ ಗುರುತಿಸಿಕೊಂಡಿದೆ.

 

ಭ್ರಷ್ಟತೆಯ ವಿಕೇಂದ್ರೀಕರಣ

 

ಕರ್ನಾಟಕದ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿರುವ ಸತೀಶ್‌ ಜಾರಕಿಹೊಳಿ ವಿರುದ್ಧದ ಇ.ಡಿ ದಾಳಿಯನ್ನೂ ಈ ದೃಷ್ಟಿಯಿಂದಲೇ ನೋಡಬಹುದು. ಜಾರಕಿಹೊಳಿ ಅವರ ಮನೆ ಮತ್ತು ಕಚೇರಿಗಳ ಮೇಲಿನ ದಾಳಿಯಲ್ಲಿ 3.3 ಕೋಟಿ ರೂ ಭಾರತೀಯ ಕರೆನ್ಸಿ ನೋಟುಗಳು ಹಾಗೂ 15 ಲಕ್ಷ ಅನ್ಯ ದೇಶಗಳ ಕರೆನ್ಸಿ ನಗದು ವಶಪಡಿಸಿಕೊಳ್ಳಲಾಗಿದೆ ಎಮಧು ಇಡಿ ಪ್ರಕಟಣೆ ತಿಳಿಸಿದೆ. ಅವರು ವಿದೇಶಿ ಗಣಿ ಕಂಪನಿಗಳಲ್ಲಿ ಅಪಾರ ಮೊತ್ತದ ಹೂಡಿಕೆ ಮಾಡಿದ್ದಾರೆಂದು ವರದಿಯಾಗಿದೆ. ಲೋಕೋಪಯೋಗಿ ಇಲಾಖೆಯ ಸಚಿವರಾಗಿರುವ ಸತೀಶ್‌ ಜಾರಕಿಹೊಳಿ ಟೆಂಡರ್‌ ಪ್ರಕ್ರಿಯೆಯಲ್ಲಿ ಅರ್ಹತೆ ಇಲ್ಲದ ಕಂಪನಿಗೆ ಗುತ್ತಿಗೆ ನೀಡಿ ಅಪಾರ ಮೊತ್ತದ ಲಂಚ ಪಡೆದಿರುವುದಾಗಿ ಹೇಳಲಾಗುತ್ತಿದೆ. ಈ ಆರೋಪಗಳೆಲ್ಲವೂ ಸಾಕ್ಷ್ಯಾಧಾರಗಳ ಸಮೇತ ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಬೇಕಿದೆ. ಬಹುಶಃ ಜಾರಕಿಹೊಳಿ ಬಿಜೆಪಿಗೆ ಹಾರಿದರೆ ಎಲ್ಲ ಸಂಕಟಗಳಿಂದ ಪಾರಾಗಬಹುದು.

 

ಭ್ರಷ್ಟಾಚಾರ ಎನ್ನುವುದು ಕೇವಲ ಆಡಳಿತ ಲೋಪವಲ್ಲ ಅಥವಾ ವ್ಯಕ್ತಿಗತವಾಗಿ ಗುರುತಿಸಬಹುದಾದ ಅಕ್ರಮ ಮಾರ್ಗವೂ ಅಲ್ಲ. ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಇಲ್ಲದ ಯಾವುದೇ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಆಡಳಿತ ನಿರ್ವಹಣೆಯ ಅವಿಭಾಜ್ಯ ಅಂಗವಾಗಿ ರೂಪುಗೊಂಡಿರುತ್ತದೆ. ಏಕೆಂದರೆ ಬಂಡವಾಳಶಾಹಿ--ಮಾರುಕಟ್ಟೆ  ಆರ್ಥಿಕತೆಯಲ್ಲಿ ಅಂತಿಮವಾಗಿ ಹಣ ಸಂದಾಯವಾಗುವುದು ಔದ್ಯಮಿಕ ಏಜೆಂಟರಿಗೆ ಮತ್ತು ಆಡಳಿತದ ನಿರ್ವಾಹಕರಿಗೆ. ಲಂಚ ಕೊಡುವ ಉದ್ಯಮ ಮತ್ತು ಪಡೆಯುವ ಸಚಿವ-ಶಾಸಕ-ಸಂಸದ ಇವರೆಡರ ನಡುವೆ ಸೇತುವೆಯಾಗಿ ಸಚಿವಾಲಯಗಳು, ಇಲಾಖೆಗಳು ಕಾರ್ಯನಿರ್ವಹಿಸುತ್ತವೆ.

 

ಕಳೆದ ಶತಮಾನದಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತ  ಜನಪ್ರತಿನಿಧಿಗಳು  “ ಸಾರ್ವಜನಿಕರಿಗೆ ಹೇಗೆ ಮುಖ ತೋರಿಸುವುದು,,,,” ಎಂದು ಯೋಚಿಸುತ್ತಿದ್ದರು. ಈಗ ಡಿಜಿಟಲ್‌ ಪರದೆಗಳ ಮೇಲೆ ಯಾವುದೇ ಲಜ್ಜೆ ಇಲ್ಲದೆ ಮುಖ ತೋರಿಸುತ್ತಾರೆ, ಜೊತೆಗೆ ವಿರೋಧ ಪಕ್ಷದ ಒಂದು ಮುಖವನ್ನೂ ಜನರ ಮುಂದಿಟ್ಟು, ಇಬ್ಬರಲ್ಲಿ ಯಾರು ಹೆಚ್ಚು ಯಾರು ಕಡಿಮೆ ಎಂದು ನಿರ್ಧರಿಸುವ ವಿವೇಚನೆಯನ್ನು ಜನರಿಗೇ ಬಿಟ್ಟುಬಿಡುತ್ತಾರೆ. ಜೊತೆಗೆ ಇಡಿ ದಾಳಿ ರಾಜಕೀಯ ಉದ್ದೇಶದ್ದು ಎಂದು ಹೇಳುತ್ತ ದಾಳಿಗೆ ಒಳಗಾದವರ ಪರ ಸಾರ್ವಜನಿಕ ಪ್ರತಿಭಟನೆಗಳನ್ನೂ ನಡೆಸಲಾಗುತ್ತದೆ.

 

 

ಇತ್ತೀಚೆಗೆ 14 ರಾಜಕೀಯ ಪಕ್ಷಗಳು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ವರದಿಯ ಅನುಸಾರ, ಇ.ಡಿ ಮತ್ತು ಸಿಬಿಐ ದಾಳಿ ನಡೆಸಿರುವ ಪ್ರಕರಣಗಳ ಪೈಕಿ ಶೇಕಡಾ 95ರಷ್ಟು ವಿರೋಧ ಪಕ್ಷಗಳ ಅಥವಾ ಬಿಜೆಪಿಯೇತರ ಪಕ್ಷಗಳ ನಾಯಕರ ವಿರುದ್ದವೇ ಇದೆ. 2014ರ ಮುಂಚಿನ ಯುಪಿಎ ಆಳ್ವಿಕೆಯಲ್ಲಿ ಇದು ಶೇಕಡಾ 60ರಷ್ಟಿತ್ತು. ಅಂದರೆ ಭ್ರಷ್ಟರನ್ನು ವಿರೋಧಿಗಳಲ್ಲಿ ಮಾತ್ರ ಗುರುತಿಸುವ ಒಂದು ರಾಜಕೀಯ ಪರಂಪರೆಗೆ ನಾವು ಒಗ್ಗಿಹೋಗಿದ್ದು, ಕಳೆದ 12 ವರ್ಷಗಳಲ್ಲಿ ಬಿಜೆಪಿ ಇದಕ್ಕೊಂದು ವ್ಯವಸ್ಥಿತ ರೂಪ ನೀಡಿದೆ. ಯುಪಿಎ ಅವಧಿಯ ಭ್ರಷ್ಟರಲ್ಲಿ ಅನೇಕರು ಶುದ್ಧೀಕರಣಕ್ಕೊಳಗಾಗಿ                      ಎನ್‌ಡಿಎ ಅವಧಿಯಲ್ಲಿ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಆಗಿರುವುದು ಈ ರೂಪಾಂತರಗೊಂಡ ಭ್ರಷ್ಟ ವ್ಯವಸ್ಥೆಯ ದ್ಯೋತಕವಾಗಿದೆ.

 

ಅಪರಾಧ ಮತ್ತು ರಾಜಕೀಯ

 

ಪ್ರಜಾಪ್ರಭುತ್ವದ ಅಡಿಪಾಯವನ್ನು ಒಳಗಿನಿಂದಲೇ ಕೊರೆಯುವ ವೈರಾಣು ರೂಪದಲ್ಲಿ ಹಣಕಾಸು-ವ್ಯಾವಹಾರಿಕ ಭ್ರಷ್ಟಾಚಾರ ಭಾರತದ ಆಡಳಿತ ವ್ಯವಸ್ಥೆಯೊಳಗೆ ಸೇರಿಕೊಂಡಿದೆ. ಇದಕ್ಕೆ ಪೂರಕವಾಗಿರುವುದು ʼ ರಾಜಕೀಯ ಅಪರಾಧೀಕರಣದ ʼ ದುಷ್ಟ ವ್ಯವಸ್ಥೆ. ರಾಜಕೀಯವನ್ನು ಅಪರಾಧ ಮುಕ್ತಗೊಳಿಸಬೇಕು ಎಂಬ ಆಶಯ ದಟ್ಟವಾಗಿದ್ದ ಕಾಲವೂ ಒಂದಿತ್ತು. ಯಾವುದೇ ರೀತಿಯ ಅಪರಾಧದ ಆರೋಪ ಹೊತ್ತಿರುವ ವ್ಯಕ್ತಿಗಳನ್ನು ಸಾಂವಿಧಾನಿಕ ಚೌಕಟ್ಟಿನಿಂದ ಹೊರಗಿಡುವ ಈ ಔದಾತ್ಯ ಬಹುಶಃ ವಾಜಪೇಯಿ ಯುಗದೊಂದಿಗೇ ಅಂತ್ಯವಾಯಿತು. ಈಗ ಅಪರಾಧ ಮುಕ್ತ ಅಥವಾ ಭ್ರಷ್ಟಾಚಾರ ಮುಕ್ತ ರಾಜಕೀಯ ಯಾವ ಪಕ್ಷದ ಪ್ರಣಾಳಿಕೆಯಲ್ಲೂ ಕಾಣಲು ಸಾಧ್ಯವಿಲ್ಲ.

 

ಪ್ರಜಾಸತ್ತಾತ್ಮಕ ಸುಧಾರಣೆಗಳ ಸಂಸ್ಥೆ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಅಹವಾಲು ಭಾರತೀಯ ಪ್ರಜಾಪ್ರಭುತ್ವದ ಕರಾಳ ಚಿತ್ರಣವನ್ನು ನೀಡುತ್ತದೆ. ಇತ್ತೀಚಿನ ಸಮೀಕ್ಷೆಯ ಅನುಸಾರ 543 ಸಂಸದರ ಪೈಕಿ 251 ಸದಸ್ಯರು ಕ್ರಿಮಿನಲ್‌ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ. 170 ಸಂಸದರು ಕೊಲೆ, ಕೊಲೆ ಯತ್ನ ಇತ್ಯಾದಿ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ. ರಾಜ್ಯಸಭೆಯ 233 ಸಂಸದರ ಪೈಕಿ 75 ಸದಸ್ಯರು ಕ್ರಿಮಿನಲ್‌ ಪ್ರಕರಣ ಎದುರಿಸುತ್ತಿದ್ದಾರೆ. ರಾಜ್ಯಗಳಲ್ಲಿ ಒಟ್ಟು 4,111 ಚುನಾಯಿತ ಶಾಸಕರ ಪೈಕಿ 2,098 ಸದಸ್ಯರು ಕ್ರಿಮಿನಲ್‌ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಈ ಅಂಕಿಸಂಖ್ಯೆಯನ್ನು ಪಕ್ಷಗಳ ದೃಷ್ಟಿಯಿಂದ ನೋಡುವುದು ಅಸಂಗತ ಎನಿಸುತ್ತದೆ, ಏಕೆಂದರೆ ʼಪಕ್ಷಾಂತರʼ ಎಂಬ ಕಾಯಿಲೆ ಈಗ ಶುದ್ಧೀಕರಣದ ಸಾಧನವಾಗಿ ಪರಿವರ್ತನೆಯಾಗಿದೆ.

 

ಈ ಅಪರಾಧ ಪ್ರಕರಣಗಳನ್ನು ಶೀಘ್ರ ವಿಚಾರಣೆಗೊಳಪಡಿಸಿ, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವ ಸಲುವಾಗಿ ಸುಪ್ರೀಂ ಕೋರ್ಟ್‌ 2017ರಲ್ಲಿ ತ್ವರಿತ ಗತಿ ನ್ಯಾಯಾಲಯಗಳನ್ನು ಸ್ಥಾಪಿಸುವಂತೆ ಆದೇಶಿಸಿತ್ತು. 10 ರಾಜ್ಯಗಳಲ್ಲಿ, ಕೇಂದ್ರಾಡಳಿತ ಪ್ರದೇಶಗಳಲ್ಲಿ 12 ನ್ಯಾಯಾಲಯಗಳನ್ನು ಸ್ಥಾಪಿಸಲಾಯಿತು. ಈ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಲೇ ಇದ್ದರೂ, ʼ ತ್ವರಿತ ಗತಿ ʼ ಕಾಣಲಾಗುತ್ತಿಲ್ಲ.  ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗಿರುವ ಇತ್ತೀಚಿನ ವರದಿಯ ಅನುಸಾರ, ಹಾಲಿ/ಮಾಜಿ ಶಾಸಕರು/ಸಂಸದರ ವಿರುದ್ಧ ಇರುವ 4,075 ಪ್ರಕರಣಗಳು 2018ರಿಂದಲೂ ಬಾಕಿ ಉಳಿದಿವೆ. 2026ರಲ್ಲಿ ಈ ಸಂಖ್ಯೆ 4,266 ಆಗಿದೆ.  746 ಪ್ರಕರಣಗಳು ಹತ್ತು ವರ್ಷಕ್ಕೂ ಹಳೆಯದು, 1,092 ಪ್ರಕರಣಗಳು 5 ರಿಂದ 10 ವರ್ಷದ ಹಿಂದಿನದು.  (The Fast track courts that never got fast – https://frontline.thehindu.com/the-nation/mp-mla-criminal-cases-special-courts-trial-delays/article71465476.ece)

 

ಜಾರಿಹೋಗುತ್ತಿರುವ ಅಪರಾಧಗಳು

 

ಕಳೆದ 12 ವರ್ಷಗಳಲ್ಲಿ ಜಾರಿ ನಿರ್ದೇಶನಾಲಯ ಹೂಡಿರುವ 6,312 ಅಪರಾಧ ಪ್ರಕರಣಗಳ ಪೈಕಿ 120ರಲ್ಲಿ ಮಾತ್ರ ಶಿಕ್ಷೆ ವಿಧಿಸಲಾಗಿದೆ. ́ವಿಳಂಬಿತ ನ್ಯಾಯ ನ್ಯಾಯವೇ ಅಲ್ಲ́ ಎಂಬ ನಾಣ್ಣುಡಿ ಇದೆ. ಇದನ್ನು ಸಾಂಸ್ಥೀಕರಿಸುವ ವಿಧಾನವನ್ನು ಭಾರತದ ಅಧಿಕಾರ ರಾಜಕಾರಣ ಅನುಸರಿಸುತ್ತಿದೆ. ಈ ವಿಳಂಬಕ್ಕೆ ಅಥವಾ ತ್ವರಿತಗತಿಯಿಂದ ನಿಧಾನಗತಿಗೆ ಹೊರಳುವ ಕಾರ್ಯವೈಖರಿಗೆ ನ್ಯಾಯಾಂಗವನ್ನು ದೂಷಿಸಲಾಗುವುದಿಲ್ಲ. ಆರೋಪ ಎದುರಿಸುತ್ತಿರುವವರೆಲ್ಲರೂ, ನೂರಕ್ಕೆ ನೂರು ರಾಜಕೀಯ ಪ್ರತಿನಿಧಿಗಳೇ ಆಗಿರುವುದರಿಂದ, ಅಧಿಕಾರಾರೂಢ ಪಕ್ಷಗಳು ನಿರ್ಣಾಯಕ ಸ್ಥಾನದಲ್ಲಿರುತ್ತವೆ. ವಿಚಾರಣೆಯೇ ಇಲ್ಲದೆ ಪ್ರಕರಣಗಳನ್ನು ಇತ್ಯರ್ಥಮಾಡಿರುವ ಪ್ರಸಂಗಗಳೂ ಹೇರಳವಾಗಿವೆ. ಬಿಜೆಪಿ ಅನುಸರಿಸುತ್ತಿರುವ  ʼ ಆಪರೇಷನ್‌ ಕಮಲʼ ಈ ವ್ಯವಸ್ಥೆಗೆ ಅಧಿಕೃತ ಮೊಹರು ನೀಡುತ್ತಿದೆ.

 

ವ್ಯಕ್ತಿ-ಸಮಾಜದ ಸೂಕ್ಷ್ಮ ಅಂತರ

 

ಈ ವಿಷಮ ವಾತಾವರಣದಲ್ಲಿ ಮಾರ್ಕ್ಸ್‌ವಾದಿ ಪಿಣರಾಯಿ ವಿಜಯನ್‌ , ವಿಚಾರವಾದಿ ಸತೀಶ್‌ ಜಾರಕಿಹೊಳಿ ಮುಂತಾದವರ ನಿರಪರಾಧಿತ್ವವನ್ನು ಹೇಗೆ ಗುರುತಿಸುವುದು ? ಮೂಲ ಸಮಸ್ಯೆ ಇರುವುದು ಇಲ್ಲಿಯೇ. ಚುನಾವಣೆಗಳಲ್ಲಿ ಗೆಲ್ಲಲು ಹಣ ಬೇಕು. ಹಣ ಒದಗಿಸಲು ಔದ್ಯಮಿಕ ವಲಯ ಬೇಕು. ಔದ್ಯಮಿಕ ವಲಯವನ್ನು ಬೆಳೆಸಲು ಮಾರುಕಟ್ಟೆ ಬೇಕು. ಮಾರುಕಟ್ಟೆಗೆ ಲಾಭ ಒದಗಿಸಲು ಪೂರಕ ಆಡಳಿತ ನೀತಿಗಳು ಬೇಕು. ಈ ನೀತಿಗಳನ್ನು ನಿರೂಪಿಸಿ ಜಾರಿಗೊಳಿಸಲು ಜನಪ್ರತಿನಿಧಿಗಳು ಬೇಕು. ಜನಪ್ರತಿನಿಧಿಗಳಿಗೆ ಶಾಸನಸಭೆ ಪ್ರವೇಶಿಸಲು ಚುನಾವಣೆಗಳು ಬೇಕು. ಅಂದರೆ :

 “ ಚುನಾವಣೆ-ಹಣಕಾಸು-ಉದ್ಯಮ-ಮಾರುಕಟ್ಟೆ-ವ್ಯಾಪಾರ ವಹಿವಾಟು-ಆರ್ಥಿಕ ನೀತಿ-ಶಾಸನ ಸಭೆ-ಚುನಾವಣೆಗಳು ”  ಈ ವರ್ತುಲದ ಒಳಗೇ ಸಾಂಸ್ಥಿಕ ಭ್ರಷ್ಟಾಚಾರ ತನ್ನ ಬೇರುಗಳನ್ನು ಕಂಡುಕೊಳ್ಳುತ್ತದೆ. ಸಾರ್ವಭೌಮ ನಾಗರಿಕರ ಗಮನಕ್ಕೆ ಬರುವ ವ್ಯಕ್ತಿ-ಪಕ್ಷ-ಸಂಸ್ಥೆ-ಸಂಘಟನೆಗಳೆಲ್ಲವೂ ಈ ಬೇರುಗಳನ್ನೇ ಅವಲಂಬಿಸಿ ಬೆಳೆಯುವ ಸಾರ್ವಜನಿಕ ಪ್ರತಿನಿಧಿಗಳು.

 

ಶುದ್ಧೀಕರಣದ ನಾಗರಿಕ ಹೆಜ್ಜೆ

 

ಈ ವಿಷಬೇರುಗಳನ್ನು ಶುದ್ಧೀಕರಿಸುವ ʼ ವಾಷಿಂಗ್‌ ಮೆಷಿನ್‌ ʼ ತಯಾರಿಸಲು ರಾಜಕೀಯ ಪಕ್ಷಗಳು ಒಪ್ಪುವುದಿಲ್ಲ. ಅವುಗಳ ಅಸ್ತಿತ್ವ ಮತ್ತು ಭವಿಷ್ಯದ ಪ್ರಶ್ನೆ. ಈ ವಾಷಿಂಗ್‌ ಮೆಷಿನ್‌ ನಿಯಂತ್ರಿಸುವ ಶಕ್ತಿ ಇರುವುದು ನಾಗರಿಕರಲ್ಲಿ ಮತ್ತು ನಾಗರಿಕ ಸಮಾಜದ ಪ್ರಜ್ಞಾವಂತ ಸಮಾಜಗಳಲ್ಲಿ :

 “ ಭ್ರಷ್ಟರನ್ನು, ಅಪರಾಧಿಗಳನ್ನು, ಈ ಆರೋಪಗಳನ್ನು ಹೊತ್ತವರನ್ನು, ಮಾರುಕಟ್ಟೆಯ ಸಂಪರ್ಕ ಇರುವವರನ್ನು, ಔದ್ಯಮಿಕ ಸಂಬಂಧ ಇರುವವರನ್ನು, ಮಹಿಳಾ-ಲೈಂಗಿಕ ದೌರ್ಜನ್ಯದ ಆರೋಪಿಗಳನ್ನು, ನ್ಯಾಯಾಂಗದ ಕಟಕಟೆಯಲ್ಲಿರುವವರನ್ನು ಪಕ್ಷಗಳ ಸದಸ್ಯತ್ವದಿಂದ ಕನಿಷ್ಠ ಐದು-ಹತ್ತು ವರ್ಷಗಳವರೆಗಾದರೂ ಅಮಾನತ್ತಿನಲ್ಲಿರಿಸಲಾಗುತ್ತದೆ,  ಶಾಶ್ವತವಾಗಿ ನಿರ್ಬಂಧಿಸಲಾಗುತ್ತದೆ ”  ಎಂದು ಎದೆತಟ್ಟಿ ಹೇಳುವ ರಾಜಕೀಯ ಪಕ್ಷ ಒಂದಾದರೂ ಇದೆಯೇ ? ಈ ನಿಬಂಧನೆಗಳನ್ನು ಪಕ್ಷಗಳ ಸಂವಿಧಾನದಲ್ಲಿ ನಿರ್ಣಾಯಕವಾಗಿ ಅಳವಡಿಸುವ ಕ್ಷಮತೆ, ಸಂವಿಧಾನಬದ್ಧತೆ, ಪ್ರಾಮಾಣಿಕತೆ ಯಾವ ಪಕ್ಷಗಳಲ್ಲಾದರೂ ಇದೆಯೇ ? ಹಾಗೇನಾದರೂ ಇದ್ದಲ್ಲಿ ಅಂತಹ ಪಕ್ಷಗಳನ್ನು ಮಾತ್ರ ನಾವು ಆದರಿಸುತ್ತೇವೆ, ಅನುಕರಿಸುತ್ತೇವೆ, ಹಿಂಬಾಲಿಸುತ್ತೇವೆ, ಆಯ್ಕೆ ಮಾಡುತ್ತೇವೆ ಎಂದು ಪ್ರಮಾಣೀಕರಿಸುವ ಸಮಾಜ ನಮ್ಮ ನಡುವೆ    ಇದೆಯೇ ? “ ಪ್ರಜಾಪ್ರಭುತ್ವ ಎಂದರೆ ಅದೊಂದು ಜೀವನ ವಿಧಾನ, ಸಮಾನತೆಯ ಮಾರ್ಗ ” ಎಂದು ಡಾ. ಬಿ.ಆರ್.‌ ಅಂಬೇಡ್ಕರ್‌ ಹೇಳುತ್ತಾರೆ. ಜೀವನ ವಿಧಾನ ಯಾರದು ? ಸಮಾನತೆಯ ಮಾರ್ಗ ಯಾರಿಗಾಗಿ ? ಇವೆರಡನ್ನೂ ಅಂತರಿಕೀಕರಣಗೊಳಿಸಿಕೊಂಡು ಸಾಮಾಜಿಕವಾಗಿ ಅಂತರ್ಗತಗೊಳಿಸುವ  ಜವಾಬ್ದಾರಿ ಯಾರದು ?

 

   ಭ್ರಷ್ಟಾಚಾರ ಎಂಬ ವ್ಯವಸ್ಥೆಯ ವ್ಯಾಧಿಯನ್ನು ಶಾಶ್ವತವಾಗಿ ನಿವಾರಿಸಲು ಯೋಚಿಸುವ ವ್ಯಕ್ತಿ/ಸಮಾಜ ಈ ಪ್ರಶ್ನೆಗೆ ಉತ್ತರಿಸಬೇಕು. ಇದಕ್ಕೆ ಯಾವುದೇ ಸಿದ್ಧಾಂತದ ಅವಶ್ಯಕತೆ ಇಲ್ಲ. ಆರೋಗ್ಯಕರ ಸಮಾಜವನ್ನು ಕಟ್ಟುವ ಮನಸ್ಥಿತಿ, ಇಚ್ಛಾಶಕ್ತಿ ಇದ್ದರೆ ಸಾಕು. ಈ ಲಕ್ಷಣಗಳನ್ನು ಶತಮಾನದ ಮಕ್ಕಳಲ್ಲಾದರೂ ಬೆಳೆಸುವ ಪ್ರಯತ್ನಗಳನ್ನು ನಾವು ಮಾಡಲು ಸಾಧ್ಯವೇ ?

-೦-೦-೦-೦-೦-೦-