ಸಾಹಿತ್ಯ ! ಹಾಗೆಂದರೇನು ?

ಕವಿ, ವಿಮರ್ಶಕ ಡಾ.ಕೆ.ಪಿ.ನಟರಾಜ್‌ ಇತ್ತೀಚೆಗೆ ಮಧುಗಿರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಮಾಡಿದ ಭಾಷಣದ ಒಂದು ಸುಸಂಬದ್ಧ ಉದೃತ ಭಾಗದ ಎರಡನೇ ಹಾಗೂ ಅಂತಿಮ ಕಂತು ʼ ಕಿನ್ನರಿʼಯ ಓದುಗರಿಗಾಗಿ

ಸಾಹಿತ್ಯ ! ಹಾಗೆಂದರೇನು ?

 

ಹಿಂದಿನ ʼಕಿನ್ನರಿʼಯಿಂದ

 

    ಬುದ್ದಗುರುವಿನ ಕ್ರಿ.ಪೂ ದ ಯುಗವನ್ನೂ , ಹನ್ನೆರಡನೆಯ ಶತಮಾನದ  ವಚನ ಯುಗವನ್ನೂ ಬಿಟ್ಟು ಆಧುನಿಕ ಕಾಲಕ್ಕೆ ಪದಾರ್ಪಣ ಮಾಡಿದರೆ  ಇಲ್ಲಿಯೂ  ಕಳೆದ ಶತಮಾನದ ಮಧ್ಯ ಭಾಗದಲ್ಲಿ ಜರುಗಿದ ಇದೇ ಬಗೆಯ  ವಿದ್ಯಮಾನವೊಂದನ್ನು ಇಲ್ಲಿ ಪ್ರಸ್ತಾಪಿಸಬಯಸುತ್ತೇನೆ .. 

 

   ಈ  ಸಾಂಸ್ಕೃತಿಕ ವಿವಾದದ  ಕೇಂದ್ರದಲ್ಲಿರುವವರು   ನಾಡಿನ ಹಿರಿಯ ಕತೆಗಾರರಾದ ಮಾಸ್ತಿ ಮತ್ತು ಮಹಾಕವಿಗಳಾದ ಕುವೆಂಪು ..

 

   ಕುವೆಂಪು  ಅವರು  ಬರೆದ ನಾಟಕ 'ಶೂದ್ರ ತಪಸ್ವಿ ' ಕನ್ನಡದ ಸಾರಸ್ವತ ಲೋಕಕ್ಕೆ ಗೊತ್ತಿರುವ ಸಂಗತಿ . ಈ ನಾಟಕದಲ್ಲಿ  ಜಾತಿಯಿಂದ ಶೂದ್ರನಾದ ಶಂಬೂಕನೆಂಬ   ವಿದ್ಯಾದಾಹಿಯಾದ ತಪಸ್ವಿ ದಂಡಕಾರಣ್ಯದಲ್ಲಿ ತಪೋನಿರತನಾಗಿರುತ್ತಾನೆ. ಅ ಅರಣ್ಯ ಕ್ಕೆ ಹೂ ತರಲೆಂದು ಬಂದ ಬ್ರಾಹ್ಮಣ ಬಾಲಕನೊಬ್ಬ  ಹಾವು ಕಚ್ಚಿ ಸಾಯುತ್ತಾನೆ .

    ವರ್ಣಾಶ್ರಮವನ್ನು ಧಿಕ್ಕರಿಸಿ  ಜ್ಞಾನ ಕ್ಕೆ ಅನಧಿಕಾರಿಯಾದ ಶೂದ್ರನೊಬ್ಬ ಆ ಅರಣ್ಯದಲ್ಲಿ   ತಪೋನಿರತನಾಗಿರುವ  ಕಾರಣ ತನ್ನ ಮಗ ಸಾವನ್ನಪ್ಪಿದ ಎಂದು ಆ ಬ್ರಾಹ್ಮಣ  ಅಯೋಧ್ಯೆಯ ಚಕ್ರವರ್ತಿ  ರಾಮನ ಅರಮನೆಯ ಮುಂದೆ ಅಳುತ್ತ , ಗೋಳಿಡುತ್ತ  ದೂರನ್ನೊಯ್ಯುತ್ತಾನೆ.‌ ಇದನ್ನು ಕೇಳಿಕೊಂಡು ಕ್ರುದ್ಧನಾದ ರಾಮ ಪುಷ್ಪಕ ವಿಮಾನದಲ್ಲಿ  ಬ್ರಾಹ್ಮಣನನ್ನೂ ಕರೆದುಕೊಂಡು ದಕ್ಷಿಣಾರಣ್ಯವಾದ ದಂಡಕಾರಣ್ಯಕ್ಕೆ ಬರುತ್ತಾನೆ .ಅಲ್ಲಿ ತಪೋನಿರತನಾಗಿದ್ದ ಶಂಬೂಕನ  ಹತ್ತಿರ ಹೋಗಿ  ಅವನ ಜಾತಿಯ ಹಿನ್ನೆಲೆಯನ್ನು ಕೇಳುತ್ತಾನೆ . ಶಂಬೂಕನ ಬಾಯಿಂದ ಶೂದ್ರ ಎಂಬುದು ಹೊರಟ ತಕ್ಷಣವೇ ರಾಮನ ಖಡ್ಗ  ಶಂಬೂಕನ ತಲೆಯನ್ನು ತರಿದಿಕ್ಕುತ್ತದೆ..

 

    ಇದನ್ನು ಮೆಚ್ಚಿದ ಆಕಾಶದ ದೇವಗಣ " ಉಘೆ ಉಘೆ" ಎನ್ನುತ್ತ  ಪುಷ್ಪ ವೃಷ್ಟಿ ಮಾಡುತ್ತದೆ .ಇದು ರಾಮಾಯಣದಲ್ಲಿ ಉಲ್ಲೇಖಿಸಲ್ಪಟ್ಟಿರುವ ಕತೆ .

 

    ಇದನ್ನು ಓದಿದ ಕುವೆಂಪು ದಿಗ್ಬ್ರಾಂತಿಯಿಂದ ತತ್ತರಿಸುತ್ತಾರೆ .  ಶೂದ್ರ ರಚಿತ ರಾಮಾಯಣದಲ್ಲಿ ಶೂದ್ರ ಹತ್ಯೆ ಹೇಗೆ ಸಾಧ್ಯ?  ಎಂಬ   ತಳಮಳದಲ್ಲಿ ಅವರು ಈ ಪ್ರಶ್ನೆಯನ್ನೆತ್ತಿಕೊಂಡು  ಅವರ ಪ್ರಸಿದ್ದ ನಾಟಕ 'ಶೂದ್ರ ತಪಸ್ವಿ' ಯನ್ನು ಬರೆಯುತ್ತಾರೆ. 

 

    ಈ ನಾಟಕ , ಮೂಲದಲ್ಲಿದ್ದ  ಕ್ರೌರ್ಯ ಮತ್ತು  ವಿಕೃತಿಯನ್ನು ನಿವಾರಿಸಿ  ರಾಮನನ್ನು ಈ ಕೊಲೆಗಡುಕ ಕಾರ್ಯದಿಂದ ಹಿಂದೆ ಸರಿಯುವಂತೆಯೂ , ರಾಮನನ್ನು  ತಪ್ಪು ಒಪ್ಪುಗಳನ್ನು  ವಿವೇಚಿಸುವ ವಿವೇಕಿಯನ್ನಾಗಿಯೂ ,. ಜಾತ್ಯಂಧನಾದ ಬ್ರಾಹ್ಮಣನಿಗೆ  ತನ್ನ ತಪ್ಪು ಅರಿವಿಗೆ ಬರುವ ಸನ್ನಿವೇಶ ನಿರ್ಮಾಣದ ಮೂಲಕವೂ ಇಡೀ ಚಿತ್ರವನ್ನು . ಇಡೀ ಪ್ರತಿಮೆಯನ್ನು , ಇಡೀ ಪೂರ್ವಾಗ್ರವನ್ಜು ತಿದ್ದುತ್ತಾರೆ .

 

    ಅದರೆ ಈ ತಿದ್ದುವಿಕೆ  ಮಾಸ್ತಿಯವರಿಗೆ ಹಿಡಿಸುವುದಿಲ್ಲ ,  ಹಳೆಯ ಗೀರನ್ನು ಹೊಸದಾಗಿ ಬಣ್ಣದಿಂದ ತೆಗೆಯಲಾಗುವುದಿಲ್ಲ  ಎಂದು   ವಾದಕ್ಕಿಳಿಯುತ್ತಾರೆ . ಹಳೆಯ  ಚಿತ್ರಗಳನ್ನು ಮುಟ್ಟಬೇಡಿ , ಬದಲಾಗಿ ನಿಮ್ಮದೇ ಚಿತ್ರ ಗಳನ್ನು ಬರೆಯಿರಿ . ಎಂದು ಬೆದರಿಕೆಯ ದನಿಯಲ್ಲಿ  ಬರೆಯುತ್ತಾರೆ . ಬ್ರಾಹ್ಮಣನನ್ನು  ಅಪಮಾನ ಮಾಡಿದ್ದೀರಿ ಎಂದು ಅರೋಪಿಸುತ್ತಾರೆ . ರಾಮನನ್ನು ಮರೆಯಿಂದ ಬ್ರಹ್ಮಾಸ್ತ್ರ ಪ್ರಯೋಗಿಸುವ ಅಧೀರ ನಾಯಕನನ್ನಾಗಿ ಚಿತ್ರಿಸಿದ್ದೀರ ಎಂದು  ಆರೋಪಕ್ಕಿಳಿಯುತ್ತಾರೆ.. 

 

    ಕುವೆಂಪು ಅ ಎಲ್ಲ ಪ್ರಶ್ನೆ ಗಳಿಗೂ ಉತ್ತರಿಸುತ್ತಾರೆ.. ಎಲ್ಲರೂ ಲೋಕದ ಜ್ಞಾನಕ್ಕೆ ಅರ್ಹರು ಎಂಬ   ನಿತ್ಯ ಸತ್ಯಕ್ಕೂ  , ನಿಸರ್ಗದ ಸತ್ಯಕ್ಕೂ ಎರವಾಗುತ್ತಿದ್ದ  ರಾಮಮೂರ್ತಿಯನ್ನು ಕೊಲೆಗಡುಕತನದಿಂದ ಮುಕ್ತನನ್ನಾಗಿ ಮಾಡಿ , ನ್ಯಾಯಾನ್ಯಾಯ  ವಿವೇಕದ   ಕಾರುಣ್ಯ ಮೂರ್ತಿಯಾಗಿ  ಕಡೆದು   ಪೂಜ್ಯನನ್ನಾಗಿ ಮರುಸೃಷ್ಟಿಸಿದ್ದಾಗಿಯೂ ತಮ್ಮ ಉತ್ತರದಲ್ಲಿ ಪರಿಣಾಮಕಾರಿಯಾಗಿ ವಾದಿಸುತ್ತಾರೆ ..

 

    ಕಲೆ ಅಥವಾ ಸಾಹಿತ್ಯ ಅಂದರೆ  ಏನು ? ಸಾಹಿತ್ಯ ಕೃತಿಯೊಂದನ್ನು  ಓದುವುದು ಮತ್ತು ಗ್ರಹಿಸುವುದು ಹೇಗೆ ? ಎಂಬ ಬಗೆಗೆ   ಹಿರಿಯರಾದ ಮಾಸ್ತಿಯವರು ಕುವೆಂಪು ಅವರಿಂದ ಪಾಠಕೇಳಬೇಕಾಗಿ ಬಂದ   ಈ ಚಾರಿತ್ರಿಕ ವಾಗ್ವಾದವನ್ನು ಕನ್ನಡಿಗರೆಲ್ಲರೂ ಓದಿ ಚಿಂತಿಸಬೇಕಾದ ಅತ್ಯಗತ್ಯವಾದ  ಘಟನೆ ಎಂಬ ಕಾರಣದಿಂದ ನಾನಿದನ್ನು   ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ .. 

 

    ಕಾವ್ಯವೊಂದನ್ನು . ಕಲಾಕೃತಿಯೊಂದನ್ನು ಮಾಸ್ತಿಯವರಿಗೆ  ಸರಿಯಾದ ನೋಟದಿಂದ ಗ್ರಹಿಸಲಾಗಲಿಲ್ಲ ಅಂದರೆ ಜನಸಾಮಾನ್ಯರ ಪಾಡೇನು ಎನ್ನುವುದೇ ನನ್ನ ಆತಂಕದ ಪ್ರಶ್ನೆಯಾಗಿದೆ .. ಈ ಕಾರಣದಿಂದಲೆ  ಟಾಲ್‌ ಸ್ಟಾಯ್‌  ಅವರು  ಕಲೆಯನ್ನು ಕಲೆಯಲ್ಲದ್ದರಿಂದ ಬೇರ್ಪಡಿಸುವ ವಿವೇಕ ನಮ್ಮ ಪ್ರಜ್ಙೆಯಿಂದ ಜಾರಿದರೆ  ನಾವು ಲೋಕದಲ್ಲಿ ದುಃಖಿಗಳೂ ಅಸುಖಿಗಳೂ ಹಿಂಸಾ ಪೀಡಿತರೂ ಅಥವಾ ಹಿಂಸಾ ಪ್ರಚೋದಕರೂ  ಆಗಿಬಿಡುತ್ತೇವೆ ಎಂದು ಎಚ್ಚರಿಸಿದ್ದು .

 

      ಈ ವಾಗ್ವಾದದಲ್ಲಿ  ಕುವೆಂಪು ಅವರಿಗೆ ಮಾಸ್ತಿಯವರು ಪ್ರತ್ಯುತ್ತರಿಸಲು ಮುಂದಾಗದಿದ್ದರೂ ..ಕುವೆಂಪು ಅವರಿಗಂತೂ ಮೊದಲಿನಂತಿರಲು ಸಾಧ್ಯವಾಗದೆಹೋಗುತ್ತದೆ .ನಂತರ ಅವರು  ಸಾಹಿತ್ಯವನ್ನು  ನೋಡುವ ಬಗೆಯನ್ನು ಅನ್ವೇಶಿಸುತ್ತ  ಅವರದ್ದೇ ಆದ ಸಾಹಿತ್ಯ ಮೀಮಾಂಸೆಯನ್ನು ಸೃಷ್ಟಿಸುತ್ತಾರೆ . ಅದೀಗ ಆಧುನಿಕ  ಕನ್ನಡ ದ ಸಾಹಿತ್ಯ ಮೀಮಾಂಸೆಯಾಗಿ ಪ್ರಜಾಪ್ರಭುತ್ವ ಯುಗದ ಕೈದೀವಿಗೆಯಾಗಬಲ್ಲದು ಎಂಬ  ಅಭಿಪ್ರಾಯ ನನ್ನದು

 

     'ಪ್ರತಿಮಾ ಮತ್ತು ಪ್ರತಿಕೃತಿ ' ಎಂದು  ಕರೆಯಲಾಗುವ ಈ ಸಾಹಿತ್ಯ ಮೀಮಾಂಸೆಯ  ದೃಷ್ಟಿ , ಸಾಹಿತ್ಯವನ್ನು  ಪ್ರತಿಮಾ ಎಂದು ಪ್ರತಿಪಾದಿಸುತ್ತದೆ ಅಂದರೆ ಮನುಷ್ಯನ ಕಲ್ಪನೆಯಲ್ಲಿ ಉದಿಸಿದ್ದು  ಎಂದರ್ಥ .ಅಂದರೆ ಕವಿಯ ಕಲ್ಪನೆಯ ಕಾವ್ಯವಾಗಿ , ನಾಟಕಕಾರನ ನಾಟಕ ಕೃತಿಯಾಗಿ , ಕಾದಂಬರಿಕಾರನ ಕಲ್ಪನೆಯ ಕಾದಂಬರಿಯಾಗಿ ; ಶಿಲ್ಪಿಯ ಕೈಯಲ್ಲಿ ಕಡೆದ ಶಿಲ್ಪವಾಗಿ , ನರ್ತಿಸುವವನ ದೇಹದಲ್ಲರಳಿದ  ನೃತ್ಯವಾಗಿ , ಸಂಗೀತ ಕೃತಿಯಾಗಿ .., ಹೀಗೆ  ಅದು ಸೃಷ್ಟಿತ ಮೂರ್ತಿಯಾಗುತ್ತದೆ    ಅದೇ ಅಂತಿಮ ಕೃತಿಯೂ , ಅಂತಿಮ  ಸತ್ಯವೂ ಎಂದಲ್ಲ . ಸಾಹಿತ್ಯವನ್ನೂ ಒಳಗೊಂಡು ಎಲ್ಲ ಕಲೆಗಳೂ ಈ ಕಾರಣದಿಂದ ದೋಷಪೂರ್ಣ ಪ್ರತಿಮೆಯೂ ಆಗಿರಬಹುದು ಎಂಬ  ಸಂಶಯ-ವಾದ ಇದು 

 

     ಮಾಸ್ತಿಯವರು ನಂಬಿದ  , ಶೂದ್ರನೆಂಬ ಕಾರಣಕ್ಕೂ ,  ಶೂದ್ರ ಜ್ಞಾನಕ್ಕೆ ಅರ್ಹನಲ್ಲ ಎಂಬ ಮಿಥ್ಯಾವಾದಕ್ಕೂ ಬಲಿಯಾಗಿ ಮಾನವ ಹತ್ಯೆಗೂ ಮುಂದಾಗಬಲ್ಲ ರಾಮ ಮೂರ್ತಿಯೇ ಅಂತಿಮನಲ್ಲ .ಕುವೆಂಪು ಅವರ ಕೈಯಲ್ಲಿ ಅರಳಿದ ಕರುಣಾಳು ರಾಮನ ಕಲ್ಪನೆಗೂ ಇಲ್ಲಿ ಅವಕಾಶವಿದೆ ಎಂದು ಅರ್ಥ.. 

 

    ಇದು ಬುದ್ಧಗುರುವಿನಿಂದ. ತಟಹಾಯ್ದು ,  ಅಲ್ಲಮ ಬಸವಾದಿ ಪ್ರಮಥರನ್ನೂ ಹೊಕ್ಕು ಅದುನಿಕ ಯುಗದ ಕುವೆಂಪು ಅವರ ತನಕವೂ ಹರಿದುಬಂದ  ಲೋಕ ಕಾರುಣ್ಯ ದೃಷ್ಟಿ , ಅಂದರೆ ರಾಮಾಯಣ ಮಹಾಭಾರತಾದಿ ಮಹಾಕಾವ್ಯಗಳನ್ನೂ ಒಳಗೊಂಡು ಎಲ್ಲ ಸಾಹಿತ್ಯವೂ  ಕವಿ ಕಲ್ಪನಾ ಸೃಷ್ಟಿಗಳೆಂಬ ಮೂಲ ವಿವೇಕವು   ನಮ್ಮನ್ನು ಮುನ್ನಡೆಸದಿದ್ದರೆ  ನಾವು   ಮಾಸ್ತಿ ಯವರಂತೆಯೆ ಸಾಹಿತ್ಯವನ್ನು ತಪ್ಪಾಗಿ ಓದಿಕೊಳ್ಳುವ , ತಪ್ಪು ದಾರಿ ಹಿಡಿದು ಅನ್ಯಾಯದ ಕೃತ್ಯಗಳನ್ನು ಸಮರ್ಥಿಸುವ ಸಂಪ್ರದಾಯ ಜಡರೂ ಅಗಿಬಿಡುತ್ತೇವೆ..

 

    ಕುವೆಂಪು ಅವರು ತಮ್ಮ ಸಾಹಿತ್ಯ ಕುರಿತ ಈ ದಾರ್ಶನಿಕ ನಿರೂಪಣೆಯಲ್ಲಿ  ನಮ್ಮ ಸಮಾಜದ   ಸಾಹಿತ್ಯ ಪುರಾಣಗಳ ಕುರಿತ ಅಪಕಲ್ಪನೆಯ ನ್ನು ಸರಿಪಡಿಸುತ್ತ ,  ಸಾಹಿತ್ಯವನ್ನು  ವಾಸ್ತವದ  ಪ್ರತಿಕೃತಿ  ಎಂಬಂತೆ .. ಅಂದರೆ  ಇತಿಹಾಸದ ದಾಖಲೆಯಂತೆ  ವಾಸ್ತವದ ಪಡಿಯಚ್ಚಿನಂತೆ  ಸ್ಥಗಿತ ,ಯಥಾಸ್ಥಿತಿ ವಾದಿ ದೃಷ್ಟಿಯಿಂದ  ನೋಡುವ  ಅಪಾಯಕಾರಿ ಪರಿಪಾಠದಿಂದ ಮುಕ್ತಗೊಳಿಸುವ ಪ್ರಯತ್ನ ಮಾಡುತ್ತಾರೆ . 

 

     ಪ್ರಸ್ತುತ ಚರ್ಚೆಗೆ  ಬರುವುದಾದರೆ , ಪ್ರಾಚೀನ  ಭಾರತ ,ಕಲೆಯನ್ನು ಮಾನವ ಸೃಷ್ಟಿತ ಪ್ರತಿಮೆಯಂತೆ  , ವಿಗ್ರಹದಂತೆ , ಚಿತ್ರದಂತೆ  ಬಹುದೃಷ್ಟಿಯಲ್ಲಿ ನೋಡುವ ವಿವೇಕವನ್ನು  ಪಡೆದಿತ್ತು ಎನ್ನುವುದು  ನಮಗೆ   ಹೆಮ್ಮೆ ಮತ್ತು  ಸಮಾಧಾನ ತರಬಲ್ಲ  ಸಂಗತಿಯಾಗಿದೆ .. 

 

     ಉದಾಹರಣೆಗೆ ರಾಮಾಯಣದ ಅಸಂಖ್ಯಾತ ಆವೃತ್ತಿಗಳಾಗಿ ನಮ್ಮೆದುರು ಇರುವ ಕಲಾಕೃತಿಗಳು  ಭಾರತದ ನೆಲದಲ್ಲಿ  ಸೃಷ್ಟಿಯಾಗಿವೆ. ಕರ್ನಾಟಕದಲ್ಲೆ  ಅಂತಹ ಹಲವು ರಾಮಾಯಣಗಳನ್ನು ನೋಡಬಹುದಾಗಿದೆ : ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಅನ್ನೂ ಒಳಗೊಂಡು   ಅವರೆ  ತಮ್ಮ ಬಾಲ್ಯದಲ್ಲಿ  ಕೇಳುತ್ತಿದ್ದರೆಂದು  ದಾಖಲಿಸುವ ತೊರವೆ ರಾಮಾಯಣ .  ಪ್ರಖ್ಯಾತ ವಾಲ್ಮೀಕಿ ರಾಮಾಯಣ . ಹೆಳವನ ಕಟ್ಟೆ ಗಿರಿಯಮ್ಮನ ಪಟದ ರಾಮಾಯಣ , ಮುದ್ದಣನ ರಾಮಾಶ್ವಮೇಧ ಮತ್ತು ಶ್ರೀರಾಮ ಪಟ್ಟಾಭಿಷೇಕ ;  ನಾಗಚಂದ್ರನ 'ರಾಮ ಚಂದ್ರ ಚರಿತ ಪುರಾಣ ,' ಹೀಗೆ  ನೂರಾರು ರಾಮಾಯಣಗಳ ಸೃಷ್ಟಿಗೆ ಬಾರತದ ನೆಲ ತವರಾಗಿದೆ   ಹಿರಿಯ ಕಾಂಗ್ರೆಸ್  ನೇತಾರರಾದ ವೀರಪ್ಪ ಮೊಯ್ಲಿಯವರೂ  ʼಶ್ರೀ ರಾಮಾಯಣ ಮಹಾನ್ವೇಷಣಂ 'ಎಂಬ ಕೃತಿ ರಚಿಸಿದ್ದಾರೆ.

    ಈ ಬಗ್ಗೆ ಒಂದು ನಿಡಿದಾದ  ಮಹತ್ವದ ಅಧ್ಯಯನವನ್ನು  ಕನ್ನಡಿಗರೇ ಆದ ಪ್ರೊ. ಎ ಕೆ ರಾಮಾನುಜನ್ ಅವರು ''  "ಮುನ್ನೂರು ರಾಮಾಯಣಗಳು " ಪ್ರಕಟಿಸಿದ್ದರು .ಈ ಪ್ರಬಂಧದ ಇಂಗ್ಲಿಷ್ ಆವೃತ್ತಿಯಾದ  "Three hundred Ramayanas : five examples and three thoughts " ಅನ್ನು ದೆಹಲಿ ವಿಶ್ವ ವಿದ್ಯಾಲಯ  ೨೦೧೧ ರಲ್ಲಿ ತನ್ನ ಪಠ್ಯಕ್ರಮದಿಂದ ತೆಗೆದುಹಾಕಿತ್ತು .

 

   ಸೃಜನಶೀಲ ಸಾಹಿತ್ಯವನ್ನು ಗ್ರಹಿಸುವ ಬಗೆಯನ್ನು ತಿದ್ದುವಲ್ಲಿ‌ ನೆರವೀಯಬಹುದಾಗಿದ್ದ  ಈ  ದೀರ್ಘ ಪ್ರಬಂಧವನ್ನು ಪಠ್ಯಕ್ರಮದಿಂದ ತೆಗೆದುಹಾಕಿದ ಘಟನೆಯಲ್ಲಿ  ಸಾಹಿತ್ಯ ವನ್ನು  ಇತಿಹಾಸದಂತೆ ,   ಪ್ರತಿಕೃತಿಯಂತೆ ,  ಸಮಾಜ ತನ್ನ ತಲೆಗೆ ಹಾಕಿದ ಸ್ಥಗಿತ ದೃಷ್ಟಿಯಂತೆ   ತಪ್ಪಾಗಿ ಗ್ರಹಿಸುವ ಮನಸ್ಸು  ಕೆಲಸ ಮಾಡಿದ್ದು ಗೊತ್ತಾಗುತ್ತದೆ .ಮತ್ತು  ಕೃತ್ಯವನ್ನು ತನ್ನ ರಾಜಕೀಯ ಕಾರ್ಯಾಚರಣೆಯ  ವಿಸ್ತರಣೆಯ ಭಾಗವಾಗಿ ಮಾಡಿದ್ದು  ಗೊತ್ತಾಗುತ್ತದೆ 

 

    ಮುನ್ನೂರಕ್ಕೂ ಹೆಚ್ಚಿನ ರಾಮಾಯಣಗಳಲ್ಲಿ   ರಾಮ ಲಕ್ಷ್ಮಣ ಸೀತೆ ರಾವಣ ಪಾತ್ರಾದಿಗಳನ್ನೂ ಒಳಗೊಂಡು ಅವರೆಲ್ಲ ಜನ್ಮ ತಳೆದ ಸ್ಥಳಗಳೂ ಆಳಿದ  ಸಾಮ್ರಾಜ್ಯಗಳ ನೆಲೆಗಳೂ , ಅವರ  ಸ್ವಭಾವ ನಡೆ ನುಡಿಗಳೂ  ಅವರ ಕೃತ್ಯಾಕೃತ್ಯಗಳೂ  ಒಂದಕ್ಕೊಂದು ಹೋಲಿಸಲೇ ಆಗದಂತಿರುವ ವೈವಿಧ್ಯಮಯವಾದ ಪ್ರತಿಮಾ ಪರಂಪರೆಯಾಗಿರುವುದನ್ನು  ಸಹಿಸದ. ' ಸಿಂಗಲ್  ರಾಮಾಯಣ' ವಾದಿಗಳು ಈ ಪ್ರಬಂಧವನ್ನು  ಪಠ್ಯದಿಂದ ತೆಗೆದುಹಾಕಿ   ಈ ದೇಶದ  ಸಮಸ್ತ  ರಾಮಾಯಣಗಳ ಕರ್ತೃಗಳಾದ ಮಹಾಕವಿ ಗಳ  ನಿರೂಪಣೆಗಳ , ವಾಗ್ವಾದಗಳ , ಬಹುತ್ವದ ಮೇಲೆ ಬುಲ್ಡೋಜರ್ ಹೊಡೆದು ನಿವಾರಿಸುವ ಕೃತ್ಯವೆಸಗಿದ್ದಾರೆ  ಎಂದೇ ಹೇಳಬೇಕಾಗಿದೆ .. 

 

ಕೊನೆಯ ಮಾತುಗಳು : 

 

    ಈ ಮಾತುಗಳ ನಡುವೆ  ಹುದುಗಿಸಲಾಗಿರುವ   ಮರೆಮಾತು ಅರ್ಥವಾಗಿರಬಹುದು ಅಂದುಕೊಳ್ಳುತ್ತೇನೆ .  ಈ ಲೇಖನದ ಅರಂಭದಲ್ಲಿ ಟಾಲ್ ಸ್ಟಾಯ್ , ಕಲೆಯ ಅಪ ಓದು ಮತ್ತು ಅಪಗ್ರಹಿಕೆಯಿಂದ  ಲೋಕವು ದುಃಖವನ್ನು ಆಹ್ವಾನಿಸಿಕೊಳ್ಳುತ್ತದೆ ಮತ್ತು  ಕೊನೆಯಿಲ್ಲದ ದುಃಖಕ್ಕೆ ತನ್ನನ್ನೊಡ್ಡಿಕೊಳ್ಳುತ್ತದೆ ಎಂಬ ಮಾತಿಗೆ ಹಿಂತಿರುಗುವುದಾದರೆ : ಭಾರತ , ತಾನು ನೆಚ್ಚಿದ ಒಂದೇ ರಾಮಾಯಣವನ್ನು - ವಾಲ್ಮೀಕಿ ರಾಮಾಯಣ -  ( ಇಲ್ಲಿ ರಾಮಾಯಣದ ಹಲವು  ವಿಗ್ರಹ ,ಪ್ರತಿಮೆ ,ಕಲ್ಪನೆಗಳಿವೆ ಎಂಬ ಸತ್ಯವನ್ನು  ತೊರೆದು )  , ರಾಮಾಯಣ ಕವಿ ಕಲ್ಪಿತವೆಂಬುದನ್ನೇ ತನ್ನ ದೃಷ್ಟಿಯಿಂದ ಉಚ್ಚಾಟಿಸಿ , ಅದನ್ನು  ಇತಿಹಾಸವೆಂದು ನಂಬಿ ನೆಚ್ಚಿ , ಅದರಲ್ಲಿ ಬರುವ ರಾಮನೂ ಒಬ್ಬನೇ , ಅವನು ಜನಿಸಿದ್ದು ವಾಸ್ತವದಲ್ಲಿರುವ ಅಯೋಧ್ಯೆಯೆಂದು ಹಟಕ್ಕೆ ಬಿದ್ದು ಅಲ್ಲಿರುವ ಮಸೀದಿಯೊಂದನ್ನು ಧ್ವಂಸಗೊಳಿಸಿ ಹಿಂಸೆಯ  ಅಧ್ಯಾಯಗಳನ್ನು ಬರೆದುಕೊಂಡಿದ್ದು ಸಮಕಾಲೀನ ಚರಿತ್ರೆಯ ದ್ವೇಷ , ಅಸಹನೆ , ಸಂಶಯಗ್ರಸ್ತತೆ , ಸಮೂಹ ಹತ್ಯೆಯವರೆಗಿನ  ರಕ್ತಸಿಕ್ತ ಅಧ್ಯಾಯಗಳನ್ನು ನೋಡಿದರೆ ನಮಗೆ ಗೊತ್ತಾಗುತ್ತದೆ..

 

    ಹೀಗಾಗಿ  ಸಾಹಿತ್ಯ ಎಂಬ 'ಅಪಾಯಕಾರಿ ' ವಸ್ತುವಿನ ಸಮ್ಯಕ್ ಗ್ರಹಿಕೆಯು ಎಷ್ಟು ಅಗತ್ಯ  ಎಂಬುದನ್ನು ಸಾಹಿತ್ಯವನ್ನು ಕುರಿತ  ಈ   ಸಮ್ಮೇಳನದ ವೇದಿಕೆಯಲ್ಲಿ ಪ್ರಸ್ತಾಪಿಸುವುದು ಯುಕ್ತವೆಂದೂ , ನನ್ನ ಹೊಣೆಗಾರಿಕೆಯೆಂದೂ ನಾನು ಭಾವಿಸಿದ್ದೇನೆ