ಕೃಷಿಕರ ಹೊಲಗಳಲ್ಲಿ ಡ್ರೋನ್‌ ಗಳ ಕಲರವ

ಲೇಖಕರು- ಮಲ್ಲಿ ಕಾರ್ಜುನ ಹೊಸ ಪಾಳ್ಯ,   ವಿಜಯನಗರ ಕಾಲುವೆಗಳ ಆಧುನೀಕರಣ ಯೋಜನೆ ಕೃಷಿಯಲ್ಲಿ ಡ್ರೋನ್‌ ತಂತ್ರಜ್ಞಾನ ಅಳವಡಿಕೆ

ಕೃಷಿಕರ ಹೊಲಗಳಲ್ಲಿ ಡ್ರೋನ್‌ ಗಳ ಕಲರವ

 

  

   ಗಂಗಾವತಿ: “ಕೃಷಿಯಲ್ಲಿ ಯಾಂತ್ರೀಕರಣ ವೇಗವಾಗಿ ನಡೆಯುತ್ತಿದೆ. ಕೆಲವೇ ವರ್ಷಗಳ ಹಿಂದೆ ಅಪರೂಪವಾಗಿದ್ದ ಕಟಾವು ಯಂತ್ರಗಳು ಇಂದು ಸಾಮಾನ್ಯ ಎಂಬಂತಾಗಿವೆ.  ಅದೇ ರೀತಿ ಡ್ರೋನ್‌ ಗಳ ಬಳಕೆಯೂ ಸಹ ಇನ್ನು ಕೆಲವೇ ವರ್ಷಗಳಲ್ಲಿ ಎಲ್ಲಾ ಹಳ್ಳಿಗಳಲ್ಲಿಯೂ ಕಾಲಿಡಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ಈ ತಾಂತ್ರಿಕತೆಯನ್ನು ಪರಿಚಯಿಸುತ್ತಿದೆ, ಕಡಿಮೆ ಸಮಯ, ಕಡಿಮೆ ಶ್ರಮ ಹಾಗೂ ಕೂಲಿಕಾರರ ಕೊರತೆಗೆ ಇದು ಪರಿಹಾರವಾಗಲಿದೆ” ಎಂದು ರಾಷ್ಟ್ರೀಯ ಗೇರು ಸಂಶೋದನಾ ಕೇಂದ್ರ, ಪುತ್ತೂರು, ಇಲ್ಲಿನ ನಿರ್ದೇಶಕರಾದ ಡಾ. ಟಿ ಎನ್. ರವಿಪ್ರಸಾದ್‌ ಅಭಿಪ್ರಾಯಪಟ್ಟರು.

ಅವರು ಗಂಗಾವತಿ ತಾಲ್ಲೂಕು ಆನೆಗುಂದಿಯಲ್ಲಿ ಡ್ರೋನ್ ತಂತ್ರಜ್ಞಾನ ಬಳಕೆಯ ಪ್ರಾತ್ಯಕ್ಷಿಕೆಯನ್ನು ಪರಿಚಯಿಸುತ್ತಾ ಮಾತನಾಡುತ್ತಿದ್ದರು.

ವಿಜ್ನಾನಿ ಡಾ. ಮಂಜುನಾಥ್‌ ಅವರು ಕೃಷಿಯಲ್ಲಿ ಡ್ರೋನ್ ಬಳಕೆಯ ಮಹತ್ವ, ಸಾವಯವ ದ್ರಾವಣ, ಸೂಕ್ಷ್ಮ ಪೋಷಕಾಂಶಗಳು ಮತ್ತು ಕೃಷಿ ರಾಸಾಯನಿಕಗಳನ್ನು ಸಿಂಪಡಿಸುವ ವಿಧಾನ, ಹೇಗೆ ಇದು ರೈತರಿಗೆ ಅನುಕೂಲಕರವಾಗಿದೆ, ತಂತ್ರಜ್ಞಾನದ ಬಳಕೆ, ಉದ್ಯೋಗಾವಕಾಶಗಳ ಸೃಷ್ಟಿ ಇತ್ಯಾದಿಗಳ ಬಗ್ಗೆ ರೈತರಿಗೆ ಮತ್ತು ಮಹಿಳಾ ಸಮಿತಿ ಸದಸ್ಯರುಗಳಿಗೆ  ವಿಸ್ತಾರವಾಗಿ ತಿಳಿಸಿದರು.

ಆನೆಗುಂದಿಯ ರಮೇಶ್ ಅವರ ಜಮೀನಿನಲ್ಲಿ 12:30 ಕ್ಕೆ ಹಾಗೂ ಚಿಕ್ಕಜಂತ್ಕಲ್ ಮಂಜುನಾಥ್ ಅವರ ಜಮೀನಿನಲ್ಲಿ 3:30 ಕ್ಕೆ ಬಾಳೆ ಬೆಳೆಗೆ ಡ್ರೋನ್ ಮೂಲಕ ಸೂಕ್ಷ್ಮಾಣು ದ್ರಾವಣಗಳನ್ನು  ಸಿಂಪಡಿಸುವಿಕೆಯ ವಿಧಾನವನ್ನು ತಿಳಿಸಿಕೊಡಲಾಯಿತು. ರೈತರು ಡ್ರೋನ್‌ ಬೆಲೆ, ಸರ್ಕಾರದ ಸಹಾಯಧನ, ತರಬೇತಿ ದೊರೆಯುವ ಸ್ಥಳ, ವಿಮೆ, ಅನುಮತಿ ಪಡೆಯುವ ರೀತಿ ಇತ್ಯಾದಿ ಹಲವು ಪ್ರಶ್ನೆಗಳನ್ನು ಕೇಳುವ ಮೂಲಕ ತಮ್ಮ ಅನುಮಾನಗಳನ್ನು ಬಗೆ ಹರಿಸಿಕೊಂಡರು.

ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ಅನುದಾನಿತ ಕೇಂದ್ರ ವಲಯದ ಯೋಜನೆ, ಭಾರತ ಸರ್ಕಾರ, ನವ ದೆಹಲಿ, ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರ, ಪುತ್ತೂರು, ಇವರ ಸಹಕಾರದಲ್ಲಿ ಕರ್ನಾಟಕ ನೀರಾವರಿ ನಿಗಮ ನಿಗಮ ಮತ್ತು ತುಂಗಭದ್ರಾ ಕಾಡಾ, ಮುನಿರಾಬಾದ್ ಹಾಗೂ ಯೋಜನಾ ಸಹಾಯಕ ಸಮಾಲೋಚಕ ತಂಡ ಆಯೋಜಿಸಿದ್ದವು. 

ಆನೆಗುಂದಿ ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ಸುದರ್ಶನ ವರ್ಮ ಸ್ವಾಗತಿಸಿದರು.  ಗೇರು ಸಂಶೋಧನಾ ಕೇಂದ್ರದ ಡಾ.ಸಿದ್ದಣ್ಣ ಸವದಿ, ತಾಂತ್ರಿಕ ಅಧಿಕಾರಿ ಚಿದಾನಂದ್‌, ಗಂಗಾವತಿ ಕೃಷಿ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಬದ್ರಿಪ್ರಸಾದ್, ಆನೆಗುಂದಿ, ಸಂಗಾಪುರ ನೀರು ಬಳಕೆದಾರರ ಸಂಘಗಳ ಸದಸ್ಯರು, ರೈತರು, ಮಹಿಳಾ ಕೃಷಿಕರು, ಯೋಜನಾ ಸಮಾಲೋಚಕ ತಂಡದ ಸಿಬ್ಬಂದಿಗಳು ಹಾಗೂ ಕೃಷಿ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ವಿಜಯನಗರ ಕಾಲುವೆಗಳ ಆಧುನೀಕರಣ ಯೋಜನೆಯ ಭಾಗವಾಗಿ ಈ ತರಬೇತಿಯನ್ನು ಆಯೋಜಿಸಿದ್ದು, ಇದೇ ದಿನ ಚಿಕ್ಕಜಂತಕಲ್‌ ಗ್ರಾಮದ ಮಂಜುನಾಥ್‌ ಅವರ ತೋಟದಲ್ಲಿಯೂ ಸದರಿ ಪ್ರಾತ್ಯಕ್ಷಿಕೆ ನಡೆದಿದ್ದು ವಿಶೇಷ.

ವಿಜಯನಗರ ಕಾಲುವೆಗಳ ಆಧುನೀಕರಣ ಯೋಜನೆ

ಕೃಷಿಯಲ್ಲಿ ಡ್ರೋನ್‌ ತಂತ್ರಜ್ಞಾನ ಅಳವಡಿಕೆ

 

  ಭಾರತದ ಕೃಷಿರಂಗದಲ್ಲಿ ಡ್ರೋನ್‌ಗಳ ಬಳಕೆ ಹೊಸದು. ಇತರೆ ದೇಶಗಳಲ್ಲಿ ಈ ತಂತ್ರಜ್ನಾನವನ್ನು ಯಶಸ್ವಿಯಾಗಿ ಅಳವಡಿಸಿಕೊಳ್ಳಲಾಗಿದೆ. ಇದನ್ನು ಮನಗಂಡು ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ ( ICAR) ಸೆಪ್ಟೆಂಬರ್, 2021 ರಲ್ಲಿ ಕೃಷಿಯಲ್ಲಿ ಡ್ರೋನ್‌ಗಳ ಬಳಕೆಯ ಸಾಧ್ಯತೆಗಳ ಬಗ್ಗೆ ಸಂಶೋಧನೆಯನ್ನು ಕೈಗೊಂಡಿತು. ಇದರ ಫಲಶೃತಿಯಾಗಿ ಕೇಂದ್ರ ಸರ್ಕಾರವು ಬೆಳೆಗಳಿಗೆ ವಿವಿಧ ರೀತಿಯಲ್ಲಿ ಡ್ರೋನ್‌ ಬಳಸುವುದನ್ನು ಉತ್ತೇಜಿಸಲು ತೀರ್ಮಾನಿಸಿತು. 

ರಕ್ಷಣಾ ವಲಯ, ಸಿನಿಮಾ, ಫೋಟೋಗ್ರಫಿಯಲ್ಲಿ ಈಗಾಗಲೇ ವ್ಯಾಪಕವಾಗಿ ಬಳಕೆಯಲ್ಲಿರುವ ಡ್ರೋನ್‌ ತಾಂತ್ರಿಕತೆಯನ್ನು ಈಗ ಕೃಷಿಯಲ್ಲಿಯೂ ಯಶಸ್ವಿಯಾಗಿ ಬಳಸಲಾಗುತ್ತಿದೆ. ರೈತರಿಗೆ ಹೊಸದಾಗಿರುವ ಈ ಡ್ರೋನ್ ತಂತ್ರಜ್ಞಾನವನ್ನು ಪರಿಚಯಿಸಲು ತೀವ್ರ ಪ್ರಯತ್ನಗಳು ನಡೆಯುತ್ತಿವೆ. 

ಅವಕಾಶಗಳು: ಡ್ರೋನ್‌ ಬಳಸಿ ಭತ್ತ, ಕಬ್ಬು, ಬಾಳೆ, ರಾಗಿ, ಶೇಂಗಾ, ಮೆಣಸಿನಕಾಯಿ, ತರಕಾರಿಗಳು, ತೋಟದ ಬೆಳೆಗಳಿಗೆ ದ್ರವರೂಪಿ ಗೊಬ್ಬರಗಳು, ನ್ಯಾನೋ ಯೂರಿಯಾ, ಕೃಷಿ ರಾಸಾಯನಿಕಗಳು, ಬೆಳೆ ಪ್ರಚೋದಕಗಳು, ವೇಸ್ಟ್‌ ಡಿಕಂಪೋಸರ್‌, ಗೋಕೃಪಾಮೃತ, ಜೀವಾಮೃತ, ಜೈವಿಕ ಕೀಟ/ರೋಗ ನಾಶಕಗಳು ಮುಂತಾದ ಸಿಂಪರಣೆಗಳನ್ನು ಮಾಡಬಹುದು.

ಕೃಷಿ ಕಾರ್ಮಿಕರ ಸಮಸ್ಯೆ, ಕುಶಲ ಕೆಲಸಗಾರರ ಕೊರತೆ, ರಾಸಾಯನಿಕಗಳ ಸಿಂಪರಣೆ ಸಮಯದಲ್ಲಿ ಮಾನವರ ಆರೋಗ್ಯದ ಮೇಲಾಗುವ ದುಷ್ಪರಿಣಾಮ ಇತ್ಯಾದಿ ಸಮಸ್ಯೆಗಳಿಗೆ ಡ್ರೋನ್‌ ಮೂಲಕ ಪರಿಹಾರ ಕಂಡುಕೊಳ್ಳಬಹುದು.

ಟ್ರ್ಯಾಕ್ಟರ್ ಇತ್ಯಾದಿ ದೊಡ್ಡ ವಾಹನಗಳು ಹೋಗಲಾರದಂತಹ ಪ್ರದೇಶಗಳಿಗೆ - ಜಮೀನಿನ ಅಂಚು, ಬಫರ್ ವಲಯ ಅಥವಾ ನಿರ್ದಿಷ್ಟ ಪ್ರದೇಶಗಳಿಗೆ ಡ್ರೋನ್ ಸರಾಗವಾಗಿ ಹೋಗುತ್ತದೆ. ಕಡಿಮೆ ಅವಧಿ, ಹೆಚ್ಚು ದಕ್ಷತೆಯ ಸಿಂಪರಣೆ ಡ್ರೋನ್ ನಿಂದ ಸಾಧ್ಯ.

 

ಉಪಯೋಗ: ರೈತರಿಗೆ ಪಂಪ್ ಮೂಲಕ ಒಂದು ಎಕರೆ ಕ್ರಿಮಿನಾಶಕ ಸಿಂಪಡಣೆ ಮಾಡಲು ಕೆಲವು ಗಂಟೆಗಳು ಬೇಕು. ಆದರೆ ಡ್ರೋನ್ ಮೂಲಕ ಕೇವಲ 6 ನಿಮಿಷ ಸಾಕಾಗುತ್ತದೆ. ಒಂದು ಡ್ರೋನ್‌ ಯಂತ್ರದ ಮೂಲಕ ದಿನಕ್ಕೆ 20 ಎಕರೆ ಪ್ರದೇಶಕ್ಕೆ ಔಷಧಿ ಸಿಂಪಡಿಸಬಹುದು. ಇದರಿಂದ ಸಮಯ, ಶ್ರಮ ಉಳಿಯುತ್ತದೆ ಮತ್ತು ಔಷಧಿ ಪೋಲಾಗುವುದು ತಪ್ಪುತ್ತದೆ.

ಒಬ್ಬ ಡ್ರೋನ್‌ ಆಪರೇಟರ್‌ ಮತ್ತು ಒಬ್ಬ ಸಹಾಯಕ ಒಂದೇ ಕಡೆ ನಿಂತು ಕೆಲಸ ಮಾಡಬಹುದು. ಔಷಧ ಮತ್ತು ನೀರು ತುಂಬಿಕೊಂಡ ಪಂಪನ್ನು ಬೆನ್ನಿಗೆ ಹೊತ್ತು ದಿನಪೂರ್ತಿ ಓಡಾಡುವ ಅಥವಾ ಮರಗಳನ್ನು ಹತ್ತಿ ಇಳಿಯುವ ಶ್ರಮ ಇರುವುದಿಲ್ಲ.

ಬೆಳೆಗಳಿಗೆ ಕೀಟಗಳ ಮತ್ತು ರೋಗ ಬಾಧೆ ತಡೆಯಲು ಸೂಕ್ತ ಸಮಯದಲ್ಲಿ ಔಷಧಿ ಸಿಂಪಡಣೆ ಬಹಳ ಮುಖ್ಯ. ಆದರೆ ಕೆಲವೊಮ್ಮೆ ಕೂಲಿಗಾರರ ಸಮಸ್ಯೆ ಹಾಗೂ ಇತರ ಕಾರಣಗಳಿಂದ ಸರಿಯಾದ ಸಮಯಕ್ಕೆ ಔಷಧಿ ಸಿಂಪಡಣೆ ಮಾಡಲು ಆಗುವುದಿಲ್ಲ. ಇಂತಹ ಸಂದರ್ಭದಲ್ಲಿ ಡ್ರೋನ್ ಅನುಕೂಲವಾಗಲಿದೆ.  

ಈಗಾಗಲೇ ಯೂರಿಯಾ ದ್ರವರೂಪದಲ್ಲಿ ಬಂದಿದೆ. ಮುಂದಿನ ದಿನಗಳಲ್ಲಿ ಇನ್ನಿತರ ರಸಗೊಬ್ಬರಗಳು ಸಹ ದ್ರವರೂಪದಲ್ಲಿ ಬರಲಿದ್ದು, ಇವುಗಳನ್ನು ಸಿಂಪಡಿಸಲು ಡ್ರೋನ್ ತಂತ್ರಜ್ಜಾನ ಸಹಕಾರಿಯಾಗಲಿದೆ.

ಟ್ರ್ಯಾಕ್ಟರ್/ ಬ್ಯಾಟರಿ ಚಾಲಿತ/ ಎಂಜಿನ್ ಚಾಲಿತ ಯಂತ್ರಗಳ ಮೂಲಕ ಸಿಂಪರಣೆ ಮಾಡುವಾಗ ಎಷ್ಟು  ಹರಡುವಿಕೆ ಉಂಟಾಗುತ್ತದೋ ಅಷ್ಟೇ ಅಥವಾ ಅದಕ್ಕಿಂತ ಕಡಿಮೆ ಹರಡುವಿಕೆ ಡ್ರೋನ್ ಮೂಲಕ ಸಿಂಪರಣೆ ಮಾಡುವಾಗ ಆಗುತ್ತದೆ. ಡ್ರೋನ್ ಬೆಳೆ ಮೇಲೆ ಹತ್ತಿರವೇ ಹಾರಾಡುತ್ತದೆ ಹಾಗೂ ಡ್ರೋನ್ ನಲ್ಲಿರುವ ರೋಟಾರ್ ಗಳು ಸಿಂಪರಣಾ ದ್ರಾವಣವನ್ನು ಕೆಳಮುಖವಾಗಿ ತಳ್ಳುವುದರಿಂದ ಡ್ರಿಫ್ಟ್ ಕಡಿಮೆಯಾಗುತ್ತದೆ. ಜೊತೆಗೆ ಡ್ರೋನ್ ಮೂಲಕ ಸಿಂಪರಣೆ ಮಾಡುವಾಗ ಬಫರ್ ವಲಯವನ್ನು ರೂಪಿಸಿಕೊಂಡು ಸಿಂಪರಣೆ ಮಾಡುವುದರಿಂದ ಅಕ್ಕಪಕ್ಕದ ಬೆಳೆ ಹಾಗೂ ಜನವಸತಿ ಪ್ರದೇಶಗಳಿಗೆ ಯಾವುದೇ ತೊಂದರೆ ಇರುವುದಿಲ್ಲ.

 

ಉದ್ಯಮ ಮತ್ತು ಕೃಷಿ ವ್ಯವಹಾರಗಳಿಗೆ ಡ್ರೋನ್ ಹೊಸ ಅವಕಾಶವನ್ನು ತೆರೆಯುತ್ತದೆ. ಆಸಕ್ತ ಯುವಕರು ತರಬೇತಿ ಪಡೆದು ಡ್ರೋನ್ ಪೈಲಟ್ ಗಳಾಗಬಹುದು. ಡ್ರೋನ್ ಗಳನ್ನಿಟ್ಟುಕೊಂಡು ಜಾಬ್ ವರ್ಕ್ ಮಾಡಬಹುದು. ಬ್ಯಾಟರಿ ಮೂಲಕ ಕೆಲಸ ನಿರ್ವಹಿಸುವ ಈ ಡ್ರೋನ್‌ ಗಳು ದುಬಾರಿ. ಇದನ್ನು ಮನಗಂಡಿರುವ ಕೇಂದ್ರ ಸರ್ಕಾರ ಡ್ರೋನ್‌ ಗಳನ್ನು ಖರೀದಿಸಲು ಸಬ್ಸಿಡಿ ಒದಗಿಸುತ್ತಿದೆ.  

ವಿಜಯನಗರ ಕಾಲುವೆಗಳ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಡ್ರೋನ್‌ ಬಳಕೆಗೆ ವ್ಯಾಪಕ ಅವಕಾಶಗಳಿವೆ. ಭತ್ತ ಪ್ರಮುಖ ಬೆಳೆಯಾಗಿರುವ ಎಡದಂಡೆ ಭಾಗದಲ್ಲಂತೂ ಹೆಚ್ಚು ಉಪಯುಕ್ತ. ಬಾಳೆ ಹಾಗೂ ಕಬ್ಬಿಗೂ ಸಹ ಬಳಸಬಹುದು. ನೀರು ಬಳಕೆದಾರರ ಸಹಕಾರ ಸಂಘಗಳು ಮತ್ತು ಒಕ್ಕೂಟವು ಡ್ರೋನ್‌ ಯಂತ್ರಗಳನ್ನು ಖರೀದಿಸಿ ತಮ್ಮ ರೈತರಿಗೆ ಬಾಡಿಗೆಗೆ ನೀಡಬಹುದು. ಗ್ರಾಮದ ಕೆಲವು ಯುವಕ/ಯುವತಿಯರಿಗೆ ಉದ್ಯೋಗ ಕಲ್ಪಿಸಬಹುದು.

ಕೊನೆಯದಾಗಿ ಹೇಳಬೇಕೆಂದರೆ; ಕೆಲವೇ ವರ್ಷಗಳ ಹಿಂದೆ ಕಟಾವು ಯಂತ್ರಗಳು ಅಪರೂಪವಾಗಿದ್ದವು, ಆದರೆ ಇಂದು ಒಂದು ಎಕರೆ ಇರುವ ರೈತರೂ ಯಂತ್ರಗಳನ್ನೇ ಅವಲಂಬಿಸಿದ್ದಾರೆ. ಅಲ್ಲದೆ ಇಂದು ಪ್ರತಿಯೊಂದು ಸಾರ್ವಜನಿಕ ಸಮಾರಂಭ, ಮದುವೆ, ಶುಭಕಾರ್ಯಗಳಲ್ಲಿ ಡ್ರೋನ್‌ ಗಳ ಬಳಕೆ ಸಾಮಾನ್ಯವಾಗಿಬಿಟ್ಟಿದೆ. ಅದೇ ರೀತಿ ಕೃಷಿಯಲ್ಲಿಯೂ ಇವುಗಳ ಬಳಕೆ ವ್ಯಾಪಕವಾಗಲಿದೆ.  ಇದನ್ನು ಮನಗಂಡು ವಿಜಯನಗರ ಕಾಲುವೆಗಳ ಆಧುನೀಕರಣ ಯೋಜನೆಯಲ್ಲಿ ಡ್ರೋನ್‌ ಬಳಕೆಯ ಪ್ರಾತ್ಯಕ್ಷಿಕೆಯನ್ನು ಆಯೋಜಿಸಲಾಗಿದ್ದು ರೈತರು ಪ್ರಯೋಜನ ಪಡೆಯಬೇಕಾಗಿ ಮನವಿ.

ಹೆಚ್ಚಿನ ಮಾಹಿತಿಗೆ:

ಡಾ. ಮಂಜುನಾಥ್,ಕೆ.

ವಿಜ್ಞಾನಿ (ಕೃಷಿ ಯಂತ್ರಗಳು),

ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರ, ಪುತ್ತೂರು, ಮೊ: 95133 05955

ಇಮೈಲ್: [email protected]

 

ಕರ್ನಾಟಕ ನೀರಾವರಿ ನಿಗಮ ನಿ.

ಯೋಜನಾ ಅನುಷ್ಟಾನ ಕಛೇರಿ

ಮುನಿರಾಬಾದ್, ಕೊಪ್ಪಳ-೫೮೩೨೩೩

 

ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ

ತುಂಗಭದ್ರಾ ಯೋಜನೆ

ಮುನಿರಾಬಾದ್, ಕೊಪ್ಪಳ-೫೮೩೨೩೩

 

ಯೋಜನಾ ಸಹಾಯಕ ಸಮಾಲೋಚಕ ತಂಡ

ಇಜಿಐಎಸ್, ನಂ ೮೭, ಸೀತಾ ಕುಂಜ, ೫ನೇ ಅಡ್ಡರಸ್ತೆ, ಮೃತ್ಯುಂಜಯ ನಗರಹೊಸಪೇಟೆ-೫೮೩೨೦೧, ವಿಜಯನಗರ ಜಿಲ್ಲೆ