ಕೇಂದ್ರ ಬಜೆಟ್:ಹೊಸತೂ ಇಲ್ಲ,ರಾಜ್ಯದ ಹಿತವೂ ಇಲ್ಲ ಎಸ್.ಆರ್.ವೆಂಕಟೇಶ ಪ್ರಸಾದ್
ಬಜೆಟ್ ನಲ್ಲಿ ಘೋಷಿಸಿರುವ ಯೋಜನೆಗಳನ್ನು ಜಾರಿಗೆ ತರಬೇಕೆಂದರೆ ₹16.95 ಲಕ್ಷ ಕೋಟಿ ಸಾಲ ಮಾಡಬೇಕಾಗುತ್ತದೆ.ಆಗ, ಕೇಂದ್ರ ಸರ್ಕಾರದ ಸಾಲದ ಮೊತ್ತವು ₹214 ಲಕ್ಷ ಕೋಟಿಗೆ ಏರಿಕೆ ಆಗುತ್ತದೆ. ಸಾಲದ ಬಡ್ಡಿ ಪಾವತಿಗೆ ₹14.04 ಲಕ್ಷ ಕೋಟಿ ಅಥವಾ ಒಟ್ಟು ವೆಚ್ಚದ ಶೇಕಡ 20 ರಷ್ಟನ್ನು ಮೀಸಲಿಡಬೇಕಾಗುತ್ತದೆ.ಬಜೆಟ್ ನ ಘೋಷಣೆ ಎಂದರೆ ಅದು ಕೇವಲ ಸರ್ಕಾರದ ಮುಂದಿನ ಉದ್ದೇಶಗಳ ಮತ್ತು ಕಾರ್ಯತಂತ್ರಗಳ ಭರವಸೆ ಅಷ್ಟೇ.ಅವುಗಳ ಜಾರಿ ಕಡ್ಡಾಯವಲ್ಲ. ಬಜೆಟ್ ಘೋಷಣೆಗಳಲ್ಲಿ ಶೇಕಡ 30 ರಷ್ಟು ಈಡೇರಿದರೆ ಅದೇ ದೊಡ್ಡ ಸಾಧನೆ.
ಬಜೆಟ್ ವಿಶ್ಲೇಷಣೆ

ಎಸ್.ಆರ್.ವೆಂಕಟೇಶ ಪ್ರಸಾದ್
ಬೆಂಗಳೂರು:ರಾಜಕಾರಣಿಗಳ ಸ್ವಾರ್ಥ ಹೇಗಿರುತ್ತದೆ ಎಂದರೆ 'ರಾಜ್ಯದ ಹಿತ ರಕ್ಷಕರು ನಾವೇ, ಹಗಲು-ರಾತ್ರಿ ರಾಜ್ಯದ ಅಭಿವೃದ್ಧಿಗಾಗಿಯೇ ಶ್ರಮಿಸುತ್ತಿದ್ದೇವೆ' ಎಂದು ಮಾಧ್ಯಮಗಳ ಮುಂದೆ ಬಡಬಡಿಸುತ್ತಲೇ ಇರುತ್ತಾರೆ. ಕೇಂದ್ರದಲ್ಲಿ ಅವರ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದಾಗಲಂತೂ ರಾಜ್ಯಕ್ಕೆ ಎಂತಹುದೇ ಅನ್ಯಾಯವಾಗಲಿ ಅದರ ಸಮರ್ಥನೆಗೆ ಇಳಿದು ಬಿಡುತ್ತಾರೆ. ಕೇಂದ್ರ ಸರ್ಕಾರದಲ್ಲಿ ಯಾವುದೇ ಪಕ್ಷದ ಸರ್ಕಾರ ಅಧಿಕಾರದಲ್ಲಿರಲಿ ರಾಜ್ಯಕ್ಕೆ ಅನ್ಯಾಯ-ನಿರ್ಲಕ್ಷ್ಯ ಮುಂದುವರಿಯುತ್ತಲೇ ಇದೆ. ಈ ಬಾರಿಯಂತೂ ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ರಾಜ್ಯದ ಜನಜೀವನದ ಮೇಲೆ ನೇರವಾಗಿ ಪರಿಣಾಮ ಬೀರುವ ಯೋಜನೆಗಳೇ ಇಲ್ಲ. ರಾಜ್ಯದ ಹಕ್ಕೊತ್ತಾಯಗಳಿಗೆ ಸ್ಪಂದನೆಯೂ ಇಲ್ಲ.
ಜಾಗತಿಕ ಆರ್ಥಿಕ ಅಸ್ಥಿರತೆ,ಆರ್ಥಿಕ ಹಿಂಜರಿತದ ಭೀತಿ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬ್ಲಾಕ್ ಮೇಲ್ ತಂತ್ರಗಳ ನಡುವೆ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ 2026-27 ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ.ಸುಧಾರಣೆಗೆ ಒತ್ತು ಎಂದು ಹೇಳಿದರಾದರೂ ಘೋಷಿಸಲಾದ ಹೆಚ್ಚಿನ ಯೋಜನೆಗಳಿಗೆ ನಿರ್ದಿಷ್ಟ ಮೊತ್ತವನ್ನು ನಿಗದಿಪಡಿಸಿಲ್ಲ ಮತ್ತು ಯೋಜನೆಗಳ ಜಾರಿಯ ಬಗ್ಗೆ ವಿವರಗಳು ಇಲ್ಲ.
ತೆರಿಗೆ ಪಾಲು ಹಂಚಿಕೆ ಸೇರಿದಂತೆ ಒಟ್ಟು ಸಂಪನ್ಮೂಲ ಹಂಚಿಕೆಯಲ್ಲಿ ದಕ್ಷಿಣ ರಾಜ್ಯಗಳಿಗೆ ಕೇಂದ್ರ ಸರ್ಕಾರ ಮಾಡುತ್ತಿರುವ ಅನ್ಯಾಯದ ವಿರುದ್ಧ ದಕ್ಷಿಣದ ಬಿಜೆಪಿಯೇತರ ರಾಜ್ಯ ಸರ್ಕಾರಗಳು ವರ್ಷಗಳಿಂದ ನಡೆಸಿದ್ದ ಸಂಘರ್ಷಕ್ಕೆ ಈಗ ಅಲ್ಪ ಪ್ರಮಾಣದ ಜಯ ಸಿಕ್ಕಿದೆ.ದೇಶದಲ್ಲಿ ಅತಿ ಹೆಚ್ಚು ತೆರಿಗೆ ಸಂಗ್ರಹಿಸಿ ಕೊಡುವಲ್ಲಿ ಎರಡನೇ ಸ್ಥಾನದಲ್ಲಿ ಇರುವ ಕರ್ನಾಟಕಕ್ಕೆ ತೆರಿಗೆ ಪಾಲಿನ ಹಣದಲ್ಲಿ ಸ್ವಲ್ಪ ಸುಧಾರಣೆಯಾಗಿದೆ.
ಕರ್ನಾಟಕದಿಂದ ಕೇಂದ್ರಕ್ಕೆ ವರ್ಷಕ್ಕೆ ₹4.5 ಲಕ್ಷ ಕೋಟಿ ತೆರಿಗೆ ಹಣ ಹೋಗುತ್ತಿದೆ.15ನೇ ಹಣಕಾಸು ಆಯೋಗದ ಶಿಫಾರಸಿನ ಶೇಕಡ 3.64 ರ ಬದಲಿಗೆ 14ನೇ ಹಣಕಾಸು ಆಯೋಗ ನಿಗದಿಪಡಿಸಿದ್ದ ಶೇಕಡ 4.71 ರಷ್ಟಾದರೂ ಕೊಡಿ ಎನ್ನುವ ರಾಜ್ಯ ಸರ್ಕಾರದ ಮನವಿಗೆ ಆಯೋಗವು ಶೇಕಡ 4.13 ರಷ್ಟು ಪಾಲು ಕೊಟ್ಟಿದೆ. ದೇಶದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವ ಮಹಾರಾಷ್ಟ್ರಕ್ಕೆ ಶೇಕಡ 6.44 ರಷ್ಟು ಪಾಲು ದೊರೆತ್ತಿದ್ದರೆ;ಉತ್ತರ ಪ್ರದೇಶಕ್ಕೆ ಶೇಕಡ 17.61,ಬಿಹಾರಕ್ಕೆ ಶೇಕಡ 9.94 ಪಾಲು ನೀಡಿದೆ.ಇದನ್ನೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 'ಪಾಲು ಹಂಚಿಕೆಯಲ್ಲಿನ ತಾರತಮ್ಯ' ಎನ್ನುತ್ತಿರುವುದು.
ವಿಪತ್ತು ನಿರ್ವಹಣೆಗಾಗಿ ರಾಜ್ಯಕ್ಕೆ ಐದು ವರ್ಷಗಳ ಅವಧಿಗೆ ₹8,559 ಕೋಟಿ ಹಂಚಿಕೆ ಮಾಡಿ,ಇದರಲ್ಲಿ ರಾಜ್ಯದ ಪಾಲು ₹2,139 ಕೋಟಿ ನಿಗದಿ ಮಾಡಿದೆ.ಹೆಚ್ಚಿಸಿದ ತೆರಿಗೆ ಪಾಲನ್ನು ವಿಪತ್ತು ನಿರ್ವಹಣೆಗಾಗಿ ನಿಗದಿ ಪಡಿಸಿದ ಹಣದಲ್ಲಿ ಕೇಂದ್ರ ಸರ್ಕಾರ ಕಿತ್ತುಕೊಂಡಿದೆ.
ನೀರಾವರಿ ಯೋಜನೆ-ಉತ್ತರ ಇಲ್ಲ: ಭದ್ರಾ ಮೇಲ್ದಂಡೆ ಮತ್ತು ಕೃಷ್ಣ ಮೇಲ್ದಂಡೆ ಯೋಜನೆಗಳನ್ನು 'ರಾಷ್ಟ್ರೀಯ ಯೋಜನೆ'ಯನ್ನಾಗಿ ಘೋಷಿಸುವಂತೆ, ಭದ್ರಾ ಮೇಲ್ದಂಡೆ ಯೋಜನೆಗೆ 2023-24ರ ಬಜೆಟ್ ನಲ್ಲಿ ಘೋಷಿಸಿದ್ದ ₹5,300 ಕೋಟಿ ಬಿಡುಗಡೆ ಮಾಡುವಂತೆ ಮಾಡಿದ ಮನವಿಗೆ ಬಜೆಟ್ ನಲ್ಲಿ ಯಾವುದೇ ಉತ್ತರ ಇಲ್ಲ.ಕಳಸ-ಬಂಡೂರಿ ನಾಲಾ ತಿರುವು ಮತ್ತು ಮೇಕೆದಾಟು ಯೋಜನೆಗಳ ಪ್ರಸ್ತಾಪವೂ ಇಲ್ಲ. ಕೇಂದ್ರ ಸರ್ಕಾರದ ಈ ಧೋರಣೆಗೆ ಈ ಯೋಜನೆಗಳಿಂದ ಲಾಭ ಪಡೆಯಬಹುದಾದ ಜಿಲ್ಲೆಗಳ ಜನರ ಮೌನವೇ ಕಾರಣ ಎನ್ನಿಸುವುದಿಲ್ಲವೇ?
ರೈಲು-ನಿರಾಶಾದಾಯಕ:ಬಜೆಟ್ ನಲ್ಲಿ ಪ್ರಸ್ತಾಪಿಸಿರುವ ಬೆಂಗಳೂರು-ಚೆನ್ನೈ ,ಬೆಂಗಳೂರು-ಹೈದರಾಬಾದ್ ಅತಿ ವೇಗದ ರೈಲುಗಳಿಂದ ರಾಜ್ಯದ ಜನರಿಗೆ ಹೆಚ್ಚಿನ ಉಪಯೋಗ ಇಲ್ಲ.ಬದಲಿಗೆ ದೇಶದಲ್ಲಿ ಅತಿ ಕಡಿಮೆ ರೈಲು ಸಂಪರ್ಕ ಜಾಲ ಹೊಂದಿರುವ ಕರ್ನಾಟಕಕ್ಕೆ ಮುಖ್ಯವಾಗಿ ಬೇಕಿರುವುದು ರಾಜ್ಯದ ವ್ಯಾಪ್ತಿಯಲ್ಲಿ ಸಂಪರ್ಕ ಕಲ್ಪಿಸುವ ರೈಲ್ವೆ ಸಂಪರ್ಕ ಜಾಲ.ಅದರ ಭರವಸೆ ಬಜೆಟ್ ನಲ್ಲಿ ಇಲ್ಲ. ಬೆಂಗಳೂರಿನ ಉಪನಗರ ರೈಲು ಯೋಜನೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವ ಭರವಸೆ ಈಡೇರುವಂತೆ ಕಾಣುತ್ತಿಲ್ಲ.
ಕಲ್ಯಾಣ ಕಲ್ಯಾಣ: ಕಲ್ಯಾಣ ಕರ್ನಾಟಕದ ಬಹುತೇಕ ಭಾಗ ಹಿಂದುಳಿದಿದೆ.ಅದನ್ನು ಹೋಗಲಾಡಿಸಲು ಮತ್ತು ಉತ್ತಮ ಆರೋಗ್ಯ ಸೇವೆ ಒದಗಿಸಲು ರಾಯಚೂರಿನಲ್ಲಿ 'ಏಮ್ಸ್' ಸ್ಥಾಪನೆಗಾಗಿ ಪಕ್ಷಾತೀತವಾಗಿ ಹೋರಾಟಗಳು ನಡೆಯುತ್ತಿವೆ. ಈ ಬೇಡಿಕೆ ಸೇರಿದಂತೆ ಕಲ್ಯಾಣ ಕರ್ನಾಟಕದ ಎಲ್ಲಾ ಅಶೋತ್ತರಗಳ ಕಡೆಗೆ ಕಣ್ಣೆತ್ತಿ ನೋಡದೆ ಅನ್ಯಾಯದ ಸರಣಿ ಮುಂದುವರೆದಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ರಾಜ್ಯ ಸರ್ಕಾರ ನೀಡುವಷ್ಟೇ ಅನುದಾನದ ಬೇಡಿಕೆಗೂ ಕೇಂದ್ರದಿಂದ ಯಾವುದೇ ಸ್ಪಂದನೆ ದೊರೆತಿಲ್ಲ.
ದಾಖಲೆಯ ಬಂಡವಾಳ ವೆಚ್ಚ: ಬಜೆಟ್ ನಲ್ಲಿ ₹12.22 ಲಕ್ಷ ಕೋಟಿಯನ್ನು ಬಂಡವಾಳದ ವೆಚ್ಚಗಳಿಗಾಗಿ ಮೀಸಲಿಡಲಾಗಿದೆ. ಇದರಿಂದ ದೇಶದ ಬಂಡವಾಳ ವೆಚ್ಚವು ದಾಖಲೆಯ ಗರಿಷ್ಠ ಮಟ್ಟ ತಲುಪಲಿದೆ.ಈ ಮೂಲಕ ಮೂಲ ಸೌಕರ್ಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ.
ಸಾರಿಗೆ ಮತ್ತು ಸಂಪರ್ಕ ವಲಯಕ್ಕೆ ಹೆಚ್ಚಿನ ವೆಚ್ಚ ನಿಗದಿ ಮಾಡಲಾಗಿದೆ. ರಸ್ತೆ, ಹೆದ್ದಾರಿಗಳು ಮತ್ತು ದೂರಸಂಪರ್ಕ ವಲಯಗಳಿಗೆ ಆದ್ಯತೆ ಲಭಿಸಿದೆ.ದೇಶದ ರೈಲ್ವೆ ವಲಯಕ್ಕೂ ಹೆಚ್ಚಿನ ಬಂಡವಾಳ ನಿಗದಿ ಮಾಡಲಾಗಿದೆ. ಇವು ಪ್ರಮುಖ ನಗರಗಳ ಆಚೆಗೂ ಅಭಿವೃದ್ಧಿ ವಿಸ್ತರಿಸುವ ಗುರಿಯನ್ನು ಹೊಂದಿವೆ.
ಆದ್ಯತಾ ವಲಯ: ಕೈಗಾರಿಕೆಗಳ ಪುನಶ್ಚೇತನ ಮತ್ತು ಅಭಿವೃದ್ಧಿಗಾಗಿ ಏಳು ಪ್ರಮುಖ ವಲಯಗಳ ಘೋಷಣೆ ಮಾಡಿರುವುದು ಒಳ್ಳೆಯ ಬೆಳವಣಿಗೆ.ಉತ್ಪಾದನೆ ಮತ್ತು ಸ್ಪರ್ಧಾತ್ಮಕತೆ ಹೆಚ್ಚಿಸುವ ಮೂಲಕ ಆರ್ಥಿಕ ಬೆಳವಣಿಗೆಗೆ ವೇಗ ನೀಡಲು ಆಯಾ ಕ್ಷೇತ್ರಗಳನ್ನು ಆದ್ಯತೆಗಳನ್ನಾಗಿ ಪರಿಗಣಿಸಲಾಗಿದ್ದು, ಅವುಗಳಲ್ಲಿ ಬಯೋ ಫಾರ್ಮ, ಜವಳಿ ,ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ಯ ಯೋಜನೆ, ಎಲೆಕ್ಟ್ರಾನಿಕ್ ಉಪಕರಣಗಳ ಬಿಡಿ ಭಾಗಗಳ ಉತ್ಪಾದನೆ,ವಿರಳ ಖನಿಜಗಳ ಕಾರಿಡಾರ್ ಗಳ ಸ್ಥಾಪನೆ, ಸೆಮಿಕಂಡಕ್ಟರ್ ಗಳ ಮಿಷನ್ ಮತ್ತು ಬಂಡವಾಳ ಸರಕುಗಳ ಉತ್ಪಾದನೆಯಂತಹ ಏಳು ಪ್ರಮುಖ ವಲಯಗಳಿಗೆ ಆದ್ಯತೆಯನ್ನು ಘೋಷಿಸಲಾಗಿದೆ. ಭವಿಷ್ಯದಲ್ಲಿ ಅಭಿವೃದ್ಧಿಗೆ ಇದರಿಂದ ಉತ್ತೇಜನ ದೊರೆಯಲಿದೆ.
ಕೃಷಿ ಕಡೆಗಣನೆ: ದೇಶದ ಒಟ್ಟು ಆಂತರಿಕ ಉತ್ಪನ್ನ(ಜಿಡಿಪಿ)ಕ್ಕೆ ಕೃಷಿ ಕ್ಷೇತ್ರದ ಕೊಡುಗೆ ಶೇಕಡ 18ರಷ್ಟು. ಆದರೆ, ಅನುದಾನ ನೀಡಿರುವುದು ಕೇವಲ ಶೇಕಡ ಮೂರರಷ್ಟು. ಕೃಷಿ ಕ್ಷೇತ್ರಕ್ಕೆ ನಿಗದಿಪಡಿಸಿರುವ ₹1.63 ಲಕ್ಷ ಕೋಟಿ ಎಲ್ಲ ರೈತರ ಸಂಕಷ್ಟದ ನೆರವಿಗೆ ಬಾರದು.ಬಹುಸಂಖ್ಯಾತ ರೈತರ ಅವಗಣನೆ ಈ ಬಾರಿಯೂ ಮುಂದುವರಿದಿದೆ.
ಜಿಡಿಪಿ: 2026-27ನೇ ಸಾಲಿನಲ್ಲಿ ಭಾರತದ ಜಿಡಿಪಿ ಶೇಕಡ 7.4 ರಷ್ಟು ಬೆಳವಣಿಗೆ ಹೊಂದಲಿದೆ ಎಂದು ಬಜೆಟ್ ನಲ್ಲಿ ಹೇಳಲಾಗಿದೆಯಾದರೂ ತಲಾ ಜಿಡಿಪಿ ವಿಷಯದಲ್ಲಿ 194 ದೇಶಗಳಲ್ಲಿ ಭಾರತ 166 ನೇ ಸ್ಥಾನದಲ್ಲಿದೆ.ಭಾರತದ್ದು ವಿಶ್ವದ ನಾಲ್ಕನೇ ದೊಡ್ಡ ಆರ್ಥಿಕತೆ ಎಂದು ಹೇಳಿಕೊಂಡರೂ ಅದರಿಂದ ಜನಸಾಮಾನ್ಯರ ಬದುಕಿನ ಉನ್ನತೀಕರಣಕ್ಕೆ ಅನುಕೂಲವೇನೂ ಇಲ್ಲ. ಜಿಡಿಪಿ ಮಟ್ಟ ಹೆಚ್ಚುತ್ತಿದ್ದರೂ ಉದ್ಯೋಗಾವಕಾಶಗಳು ಸೃಷ್ಟಿಯಾಗುವುದರಲ್ಲಿನ ವೈಫಲ್ಯ ಬಜೆಟ್ ನಲ್ಲಿ ಅಂಕಿ- ಅಂಶಗಳಿಂದ ಗೊತ್ತಾಗುತ್ತದೆ.
ಆರೋಗ್ಯ-ನಿರ್ಲಕ್ಷ್ಯ: ಆರೋಗ್ಯ ಕ್ಷೇತ್ರಕ್ಕೆ ಒದಗಿಸಿರುವ ಬಜೆಟ್ ನ ಪ್ರಮಾಣವು ಜಾಗತಿಕ ಸರಾಸರಿ ಮಟ್ಟಕ್ಕಿಂತ ಅತಿ ಕಡಿಮೆ ಇದೆ. 2017ರ ಬಜೆಟ್ ನಲ್ಲಿ 2025 ರ ವೇಳೆಗೆ ಆರೋಗ್ಯ ಕ್ಷೇತ್ರಕ್ಕೆ ಜಿಡಿಪಿಯ ಶೇಕಡ 2.5 ರಷ್ಟು ವೆಚ್ಚ ಮಾಡಲಾಗುವುದು ಎಂದು ಘೋಷಿಸಲಾಗಿತ್ತು. ಆದರೆ, ಈ ಬಾರಿಯ ಏರಿಕೆ ನಂತರವೂ ಅದು ಜಿಡಿಪಿಯ ಶೇಕಡ 1.8 ರಷ್ಟಿದೆ. ಇದರಲ್ಲಿ ಶೇಕಡ 0.3 ರಿಂದ ಶೇಕಡ 0.4 ಹಣವನ್ನು ಕೇಂದ್ರ ಸರ್ಕಾರ ಭರಿಸಿದರೆ ಉಳಿದದ್ದನ್ನು ರಾಜ್ಯ ಸರ್ಕಾರಗಳು ಭರಿಸಬೇಕು.
'ಮನರೇಗಾ' ಯೋಜನೆಯನ್ನು ಹಾಳುಗೆಡವಿ ಯೋಜನೆಯಿಂದ ಮಹಾತ್ಮ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ ಎದ್ದಿರುವ ಪ್ರತಿರೋಧವನ್ನು ಮಣಿಸಲು ಖಾದಿ, ಕೈಮಗ್ಗ ಮತ್ತು ಕರಕುಶಲ ವಸ್ತು ತಯಾರಿಕೆಗೆ ಉತ್ತೇಜನ ನೀಡುವ ಯೋಜನೆ ಪ್ರಕಟಿಸಿ ಅದಕ್ಕೆ 'ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಯೋಜನೆ' ಎಂದು ಹೆಸರು ಇಡಲಾಗಿದೆ.
ಷೇರುಪೇಟೆ:ಷೇರುಪೇಟೆಯಲ್ಲಿ ಹೆಚ್ಚು ಅಪಾಯದ ಮತ್ತು ಊಹೆ ಆಧರಿಸಿದ ವಹಿವಾಟು ಆಗಿರುವ ಫ್ಯೂಚರ್ ಮತ್ತು ಆಪ್ಷನ್(ವಾಯಿದಾ)ವಹಿವಾಟಿನ ಮೇಲಿನ ಷೇರು ವಹಿವಾಟು ತೆರಿಗೆ(ಎಸ್ ಟಿಟಿ)ಯನ್ನು ಶೇಕಡ 0.05 ಕ್ಕೆ ಹೆಚ್ಚಿಸಿರುವುದಕ್ಕೆ ತೀವ್ರ ವಾಗಿ ಪ್ರತಿಕ್ರಿಯಿಸಿದ ಷೇರುಪೇಟೆಯ ಬಿ ಎಸ್ ಸಿ ಸೆನ್ಸೆಕ್ಸ್ ಒಂದು ಹಂತದಲ್ಲಿ 2,370 ಅಂಶಗಳಷ್ಟು ಕುಸಿದು ವಹಿವಾಟಿನ ಅಂತ್ಯಕ್ಕೆ 1,546 ಅಂಶಗಳಷ್ಟು ಇಳಿಕೆ ದಾಖಲಿಸಿತು. ಆರು ವರ್ಷಗಳ ಅವಧಿಯಲ್ಲಿ ಷೇರು ಪೇಟೆಯಲ್ಲಿ ಈ ಪ್ರಮಾಣದ ಕುಸಿತ ಇದೆ ಮೊದಲು.
ಸಣ್ಣ ಹೂಡಿಕೆದಾರರು ಸಾಮಾನ್ಯವಾಗಿ ವಾಯಿದಾ ವಹಿವಾಟಿನಲ್ಲಿ ಹೆಚ್ಚು ತೊಡಗಿಸಿಕೊಳ್ಳದಿರುವುದರಿಂದ ಎಸ್ ಟಿ ಟಿ ಏರಿಕೆಯ ಉದ್ದೇಶ ಈಡೇರುತ್ತದೆಯೇ ಇಲ್ಲವೆ ಭಾರತದ ಬಂಡವಾಳ ಮಾರುಕಟ್ಟೆಯ ಇತರ ಅಂಶಗಳ ಮೇಲೆ ಅದರ ಪರಿಣಾಮ ಉಂಟಾಗುತ್ತದೆಯೇ ಎಂಬುದನ್ನು ಬರಲಿರುವ ದಿನಗಳು ಹೇಳುತ್ತವೆ.
ಚುನಾವಣೆ ಘೋಷಣೆ ಇಲ್ಲ: ಚುನಾವಣೆ ಹತ್ತಿರ ಇರುವಾಗ ರಾಜ್ಯಗಳಿಗೆ ಜನಪ್ರಿಯ ಮತ್ತು ಭಾರಿ ಯೋಜನೆಗಳನ್ನು ಘೋಷಿಸುವುದು ಕೇಂದ್ರ ಸರ್ಕಾರಗಳ ಹಳೆಯ ತಂತ್ರ. ಆದರೆ, ಚುನಾವಣೆ ವೇಳಾಪಟ್ಟಿ ಪ್ರಕಟವಾಗುವ ಕೆಲ ದಿನಗಳ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರೇ ಯೋಜನೆಗಳನ್ನು ಘೋಷಿಸುವುದು ಬಿಜೆಪಿ ಕಾರ್ಯತಂತ್ರ. ಅದೇ ಈ ಬಾರಿಯೂ ಮುಂದುವರಿದಿದ್ದು, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಅಸ್ಸಾಂ ರಾಜ್ಯಗಳಿಗೆ ವಿಶೇಷವನ್ನೇನೂ ಕೇಂದ್ರ ಬಜೆಟ್ ನಲ್ಲಿ ಈ ಬಾರಿ ಘೋಷಿಸಿಲ್ಲ.
ಮತ್ತಷ್ಟು ಸಾಲ: ಬಜೆಟ್ ನಲ್ಲಿ ಘೋಷಿಸಿರುವ ಯೋಜನೆಗಳನ್ನು ಜಾರಿಗೆ ತರಬೇಕೆಂದರೆ ₹16.95 ಲಕ್ಷ ಕೋಟಿ ಸಾಲ ಮಾಡಬೇಕಾಗುತ್ತದೆ.ಆಗ, ಕೇಂದ್ರ ಸರ್ಕಾರದ ಸಾಲದ ಮೊತ್ತವು ₹214 ಲಕ್ಷ ಕೋಟಿಗೆ ಏರಿಕೆ ಆಗುತ್ತದೆ. ಸಾಲದ ಬಡ್ಡಿ ಪಾವತಿಗೆ ₹14.04 ಲಕ್ಷ ಕೋಟಿ ಅಥವಾ ಒಟ್ಟು ವೆಚ್ಚದ ಶೇಕಡ 20 ರಷ್ಟನ್ನು ಮೀಸಲಿಡಬೇಕಾಗುತ್ತದೆ. ಬಜೆಟ್ ನ ಘೋಷಣೆ ಎಂದರೆ ಅದು ಕೇವಲ ಸರ್ಕಾರದ ಮುಂದಿನ ಉದ್ದೇಶಗಳ ಮತ್ತು ಕಾರ್ಯತಂತ್ರಗಳ ಭರವಸೆ ಅಷ್ಟೇ.ಅವುಗಳ ಜಾರಿ ಕಡ್ಡಾಯವಲ್ಲ. ಬಜೆಟ್ ಘೋಷಣೆಗಳಲ್ಲಿ ಶೇಕಡ 30 ರಷ್ಟು ಈಡೇರಿದರೆ ಅದೇ ದೊಡ್ಡ ಸಾಧನೆ.
bevarahani1