ಪರಂಪರೆಯ ಕೂಪದಲ್ಲೇ ಇರುವ ಪುರುಷ ಪ್ರಜ್ಞೆ ಪುರುಷ ಪ್ರಧಾನ ವ್ಯವಸ್ಥೆಯ ವಾರಸುದಾರರೇ ಅಧಿಕಾರ ಕೇಂದ್ರಗಳ ಉತ್ತರಾಧಿಕಾರಿಗಳಾದಾಗ !!!
ಪರಂಪರೆಯ ಕೂಪದಲ್ಲೇ ಇರುವ ಪುರುಷ ಪ್ರಜ್ಞೆ
ಪುರುಷ ಪ್ರಧಾನ ವ್ಯವಸ್ಥೆಯ ವಾರಸುದಾರರೇ ಅಧಿಕಾರ ಕೇಂದ್ರಗಳ ಉತ್ತರಾಧಿಕಾರಿಗಳಾದಾಗ !!!
ನಾ ದಿವಾಕರ
21ನೆಯ ಶತಮಾನದ ಮೂರನೆಯ ದಶಕ ಪ್ರವೇಶಿಸಿದರೂ ಭಾರತೀಯ ಸಮಾಜದಲ್ಲಿ ಇಂದಿಗೂ ತನ್ನ ಶತಮಾನಪೂರ್ವ ಪಳೆಯುಳಿಕೆಗಳನ್ನು ಯಥಾಸ್ಥಿತಿಯಲ್ಲಿರಿಸಿಕೊಂಡಿರುವ ಎರಡು ವಿದ್ಯಮಾನಗಳೆಂದರೆ ಜಾತಿ ಶ್ರೇಷ್ಠತೆ-ಅಸ್ಪöÈಶ್ಯತೆ ಮತ್ತು ಪುರುಷ ಪ್ರಧಾನ ಧೋರಣೆ. ಸಂವಿಧಾನಾತ್ಮಕವಾಗಿ ಅಸ್ಪöÈಶ್ಯತೆಯನ್ನು ನಿಷೇಧಿಸಲಾಗಿದೆಯಾದರೂ ನಮ್ಮ ಸಮಾಜದ ಗರ್ಭದಲ್ಲಿ ಶತಮಾನಗಳ ಹಿಂದೆ ಮೊಳಕೆಯೊಡೆದ ಅಸ್ಪöÈಶ್ಯತೆ ಮತ್ತು ಜಾತಿ ತರತಮಗಳ ಬೀಜಗಳು ಇಂದಿಗೂ ತಮ್ಮ ಜೀವಂತಿಕೆಯನ್ನು ಉಳಿಸಿಕೊಂಡುಬAದಿವೆ. ಹಾಗೆಯೇ ಸಮ ಸಮಾಜದ ಕನಸ ಹೊತ್ತು ರೂಪಿಸಲಾದ ಭಾರತದ ಸಂವಿಧಾನ ಮಹಿಳಾ ಸಮಾನತೆಗಾಗಿ ಏನೆಲ್ಲಾ ಕಾನೂನುಗಳನ್ನು ರಚಿಸಿದ್ದರೂ, ಪ್ರಾಚೀನ ಸಮಾಜದ ಪಿತೃಪ್ರಧಾನ ವ್ಯವಸ್ಥೆಯ ಬೇರುಗಳು ಇಂದಿಗೂ ಟಿಸಿಲುಗಳನ್ನು ರಕ್ಷಿಸುತ್ತಲೇ ಇವೆ. ಇದು ಆಧುನಿಕ ಭಾರತದ ದುರಂತವೂ ಹೌದು, ಪ್ರಜಾತಂತ್ರ ಭಾರತದ ದೌರ್ಬಲ್ಯವೂ ಹೌದು.
ಸಂವಿಧಾನ ಸಾರ್ವಭೌಮ ಪ್ರಜೆಗಳಿಗೆ ತಮ್ಮ ಇಚ್ಚೆಯಂತೆ ಯಾವುದೇ ಮತವನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ನೀಡಿದೆಯಾದರೂ, ಚುನಾಯಿತ ಶಾಸನ ಸಭೆಗಳಲ್ಲಿ ಸಂವಿಧಾನ ವಿಧಿ 25ಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದೆ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಲಾಗುತ್ತಿದೆ. ಜನಪ್ರತಿನಿಧಿಗಳು ಒಂದೆಡೆ ತಮ್ಮ ಊಳಿಗಮಾನ್ಯ ಪಾಳೆಗಾರಿಕೆಯ ಮನೋಭಾವವನ್ನು ಸಂವಿಧಾನದ ಚೌಕಟ್ಟಿನಲ್ಲೇ ಪ್ರದರ್ಶಿಸುತ್ತಿದ್ದರೆ, ಪಕ್ಷನಿಷ್ಠೆ, ಸ್ವಾಮಿನಿಷ್ಠೆಗೆ ಬಲಿಯಾಗಿರುವ ಜನರು ಕುಸಿಯುತ್ತಿರುವ ಸಂವಿಧಾನದ ತುಣುಕುಗಳನ್ನು ಆಯ್ದುಕೊಳ್ಳುವುದರಲ್ಲಿ ಮಗ್ನರಾಗಿದ್ದಾರೆ. ಈ ಜನರ ನಡುವಿನಿಂದಲೇ ತಮ್ಮ ಕರ್ತವ್ಯ ಪ್ರಜ್ಞೆಯನ್ನೂ ಮರೆತ ಜನಪ್ರತಿನಿಧಿಗಳು ಕೊಳೆತ ಸಂಪ್ರದಾಯಗಳನ್ನು ಮತ್ತು ಹಳಸಿದ ಧೋರಣೆಗಳನ್ನು ಅನುಸರಿಸುತ್ತಾ ತಮ್ಮ ಆಧಿಪತ್ಯವನ್ನು ಮೆರೆಯುತ್ತಿದ್ದಾರೆ.
ಈ ನಡುವೆಯೇ ಭಾರತ ವಿಶ್ವಗುರು ಆಗುವತ್ತ ಮುನ್ನಡೆಯುತ್ತಿದೆ. ಬಂಡವಾಳ, ಮಾರುಕಟ್ಟೆ, ತಂತ್ರಜ್ಞಾನ ಮತ್ತು ಸಮರಶೀಲತೆ ಇವಿಷ್ಟನ್ನೇ ಒಂದು ದೇಶದ ಆತ್ಮಬಲ ಎಂದು ಪರಿಗಣಿಸುವುದಾದರೆ ಭಾರತದ ಈ ಹೆಜ್ಜೆ ಅರ್ಥಪೂರ್ಣವಾಗಿ ಕಾಣುತ್ತದೆ. ಆದರೆ ಸ್ತಿçà ಸಮಾನತೆ ಮತ್ತು ಸಂವೇದನೆ, ಮನುಜ ಸೌಹಾರ್ದತೆ, ಮಾನವೀಯ ಮೌಲ್ಯಗಳು, ಜಾತಿವಿಹೀನ ಸಮ ಸಮಾಜ ಈ ಅಂಶಗಳತ್ತ ಕಣ್ಣಾಡಿಸಿದಾಗ ನಮ್ಮ ಸಾಮಾಜಿಕ-ಸಾಂಸ್ಕöÈತಿಕ ಅಸ್ತಿತ್ವ ಶತಮಾನಗಳಷ್ಟು ಹಿಂದಕ್ಕೆ ಚಲಿಸಿಬಿಡುತ್ತದೆ. ಮಹಿಳಾ ಸಮಾನತೆಗಾಗಿ ಹತ್ತಾರು ಶಾಸನಗಳನ್ನು ಜಾರಿಗೊಳಿಸಿ ಶಾಸನ ಸಭೆಗಳಲ್ಲೂ ಮಹಿಳೆಯರಿಗೆ ಸಮಾನ ಅಲ್ಲದಿದ್ದರೂ ಮೂರನೆ ಒಂದರಷ್ಟು ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ಸಾಗುತ್ತಿರುವ ಭಾರತದಲ್ಲಿ, ಈ ಶಾಸನಗಳನ್ನು ರೂಪಿಸುವವರೇ ಸ್ತ್ರೀ ಸಂವೇದನೆಯನ್ನು ಕಳೆದುಕೊಂಡಿರುವುದು ವಿಪರ್ಯಾಸ ಅಲ್ಲವೇ ?
ಜನಪ್ರತಿನಿಧಿಗಳ ಅಸೂಕ್ಷ್ಮತೆ
ಕರ್ನಾಟಕದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ``ಅತ್ಯಾಚಾರ ಅನಿವಾರ್ಯವಾದರೆ ಮಲಗಿ ಆನಂದಿಸಿ'' ಎಂಬ ತಮ್ಮ ಅಸಭ್ಯ-ಅಶ್ಲೀಲ-ಅಮಾನುಷ ಹೇಳಿಕೆಗಾಗಿ ಸಾರ್ವಜನಿಕವಾಗಿ ಕ್ಷಮೆ ಕೋರಿದ್ದಾರೆ. ವಿಧಾನಸಭೆಯ ಕಲಾಪದ ವೇಳೆ ಉದುರಿಸಿದ ಈ ಅಣಿಮುತ್ತುಗಳಿಂದ ವಿಕೃತ ಆನಂದ ಅನುಭವಿಸಿ ಮನಸಾರೆ ನಗುತ್ತಿದ್ದ ಸಭಾಧ್ಯಕ್ಷ ಕಾಗೇರಿಯವರಿಗೆ ಈ ಕ್ಷಮೆ ಕೋರುವ ವ್ಯವಧಾನವೂ ಇಲ್ಲವಾಗಿದೆ. ನಮ್ಮ ಚಲನ ಚಿತ್ರಗಳಲ್ಲಿ ಮನರಂಜನೆಯ ವಸ್ತುವಿನಂತೆ ತೋರಲಾಗುವ ಅತ್ಯಾಚಾರದ ದೃಶ್ಯಗಳು, ನಿರ್ಮಾಪಕರಿಗೆ ಬಂಡವಾಳವಾಗಿ, ನಟರ ಪಾಲಿಗೆ ದುಡಿಮೆಯ ಹಾದಿಯಾಗಿರುತ್ತದೆ. ಆದರೆ ಪರದೆಯ ಮೇಲೆ ಇದನ್ನು ನೋಡಿ ವಿಕೃತವಾಗಿ ಆನಂದಿಸುವ ಮನಸುಗಳಿಗೆ ಏನೆನ್ನಬೇಕು. ರಮೇಶ್ ಕುಮಾರ್-ಕಾಗೇರಿ ಪ್ರಸಂಗವನ್ನು ಹೀಗೆ ನೋಡಬಹುದೇನೋ !!!
ಮಾನ್ಯ ರಮೇಶ್ ಕುಮಾರ್ ತಾವಾಡಿದ ಮಾತುಗಳಿಗೆ ಕ್ಷಮೆ ಕೋರಿದ್ದಾರೆ. ಸಾಮಾನ್ಯವಾಗಿ ನಮ್ಮ ರಾಜಕೀಯ ನಾಯಕರುಗಳು ಇಂತಹ ಅಸಂವೇದನಾತ್ಮಕ ಹೇಳಿಕೆಗಳನ್ನು ``ಬಾಯಿ ತಪ್ಪಿ'' ಆಡುವುದೇ ವಾಡಿಕೆ. ಹಾಗಾಗಿ ಒಂದು ಕ್ಷಮೆ ಎಲ್ಲವನ್ನೂ ಮರೆ ಮಾಡಿಬಿಡುತ್ತದೆ. ``ನಾವು ಮಹಿಳೆಯರನ್ನು ಗೌರವಿಸುತ್ತೇವೆ'' ಎನ್ನುವ ಘೋಷಣೆಯೊಂದಿಗೆ ತಮ್ಮ ಸ್ತ್ರೀ ಸಂವೇದನೆಯನ್ನು ಸಾಬೀತಪಡಿಸಲು ಹೆಣಗಾಡುವುದನ್ನೂ ಗಮನಿಸುತ್ತಲೇ ಬಂದಿದ್ದೇವೆ. ಆದರೆ ಇದು ``ಪ್ರಜ್ಞೆ ತಪ್ಪಿ'' ಆಡಿದ ಮಾತು ಎಂದು ಸ್ತ್ರೀ ಸಂವೇದನೆಯುಳ್ಳ ಯಾರಿಗೇ ಆದರೂ ಅರ್ಥವಾಗುತ್ತದೆ. ಸಭಾಧ್ಯಕ್ಷರ ಆಸ್ವಾದಿತ ನಗೆ ಇದನ್ನು ನಿರೂಪಿಸುತ್ತದೆ. ಒಂದು ಶಾಸನ ಸಭೆಯ ಕಲಾಪದಲ್ಲೇ ಈ ಮಾತುಗಳನ್ನಾಡುವ ಪುರುಷ ನಾಲಿಗೆಗಳು ಖಾಸಗಿಯಾಗಿ ಏನೆಲ್ಲಾ ಮಾತನಾಡಬಹುದು ? ಪ್ರಜ್ಞೆ ಮೂಡುವುದು ಇಲ್ಲಿ. ಈ ಪುರುಷ ಪ್ರಧಾನ ಪ್ರಜ್ಞೆಯೇ ಅಂತಹ ಮಾತುಗಳನ್ನಾಡಿಸುತ್ತದೆ. ರಮೇಶ್ ಕುಮಾರ್ ಕ್ಷಮೆ ಕೋರಿರುವುದು ಅವರ ಹೇಳಿಕೆಗಷ್ಟೇ, ಮೂಲ ಪ್ರಜ್ಞೆ ಹೊಂದಿರುವುದಕ್ಕಲ್ಲ. ಇಲ್ಲಿ ರಮೇಶ್ ಕುಮಾರ್ ಅಥವಾ ಕಾಗೇರಿಯವರನ್ನು ರೂಪಕಗಳನ್ನಾಗಿ ನೋಡುವುದು ಉಚಿತ. ಏಕೆಂದರೆ ಭಾರತದ ಪುರುಷ ಪ್ರಧಾನ ಸಮಾಜದಲ್ಲಿ ಇದರ ಬೇರುಗಳು ಅಡಗಿವೆ.
ಹೆಣ್ಣನ್ನು ಭೋಗದ ವಸ್ತುವನ್ನಾಗಿ ನೋಡುವ ಪುರುಷ ಸಮಾಜದ ದೃಷ್ಟಿಯಲ್ಲಿ ತಾನೇ ನಿಯಂತ್ರಿಸುವ ಮಾರುಕಟ್ಟೆಗೆ ಹೆಣ್ಣು ಜಾಹೀರಾತು ವಸ್ತುವಾಗಿಬಿಡುತ್ತಾಳೆ. ದೃಶ್ಯ ಮಾಧ್ಯಮಗಳಲ್ಲಿ ಮನರಂಜನೆಯ ವಸ್ತುವಾಗಿಬಿಡುತ್ತಾಳೆ. ಖಾಸಗಿ ವಲಯದಲ್ಲಿ ಹಾಸ್ಯದ ಸರಕಾಗಿಬಿಡುತ್ತಾಳೆ. ಕಚೇರಿಗಳಲ್ಲಿ ಕೆಲಸ ಮಾಡಿರುವ ಯಾರಿಗೇ ಆದರೂ ಇದರ ಅನುಭವ ಆಗಿರಲೇಬೇಕು. ಸಕಲ ಗೌರವಕ್ಕೆ ಪಾತ್ರಳಾಗುವ ಒಬ್ಬ ಮಹಿಳಾ ಸಹೋದ್ಯೋಗಿ, ಪುರುಷ ಕೂಟದಲ್ಲಿ ಹಾಸ್ಯ, ವ್ಯಂಗ್ಯ, ಆಕರ್ಷಣೆ ಮತ್ತು ಚರ್ಚೆಯ ಪದಾರ್ಥದಂತಾಗಿಬಿಡುತ್ತಾಳೆ. ಇದೇ ಮನೋಭಾವವನ್ನೇ ಚಲನಚಿತ್ರಗಳಲ್ಲಿ ವೈಭವೀಕರಿಸಿ, ರಂಜನೀಯವಾಗಿ ತೋರಿಸಲಾಗುತ್ತದೆ. ಪುರುಷ ಸಮಾಜದಲ್ಲಿನ ಈ ನ್ಯೂನತೆಯನ್ನು ಒಪ್ಪಿಕೊಳ್ಳುವಷ್ಟಾದರೂ ಕ್ಷಮತೆ, ಪ್ರಾಮಾಣಿಕತೆ ನಮ್ಮೊಳಗಿದ್ದರೆ ಸಾಕು.
ರೇಪ್ ಪದಬಳಕೆಯ ಹಿಂದಿನ ಕ್ರೌರ್ಯ
ರಮೇಶ್ ಕುಮಾರ್ ಕ್ಷಮೆ ಕೋರಬೇಕಿರುವುದು ಇಂತಹ ಮನೋಭಾವವನ್ನು ಅಂತರ್ಗತಗೊಳಿಸಿಕೊಂಡಿರುವ ಪುರುಷಾಧಿಪತ್ಯದ ಅಹಮಿಕೆಗಾಗಿ. ಆದರೆ ಭಾರತದ ಸಂದರ್ಭದಲ್ಲಿ ರಮೇಶ್ ಕುಮಾರ್ ಏಕಾಂಗಿಯಲ್ಲ. ಪ್ರತಿಯೊಂದು ಸಾಮೂಹಿಕ ಅತ್ಯಾಚಾರ ನಡೆದಾಗಲೂ ಅತ್ಯಾಚಾರಕ್ಕೊಳಗಾದ ಮಹಿಳೆಯನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರವೃತ್ತಿಯನ್ನು ಇತ್ತೀಚಿನವರೆಗೂ ಕಂಡಿದ್ದೇವೆ. ``ಸಂತ್ರಸ್ತೆಯೇ ಅಪರಾಧಿಯಾಗುವ ಏಕೈಕ ಅಪರಾಧ ಎಂದರೆ ಅತ್ಯಾಚಾರ'' ಎಂದು ಫ್ರೆಡಾ ಆಡ್ಲರ್ ಹೇಳುತ್ತಾರೆ. ಸಾಂಪ್ರದಾಯಿಕ ಸಮಾಜದಲ್ಲಿ ಸಾಂಸ್ಕöÈತಿಕವಾಗಿಯೂ ಮಹಿಳೆಯ ಮೇಲಿನ ದೌರ್ಜನ್ಯಗಳನ್ನು ಅತ್ಯಾಚಾರಗಳನ್ನು ಸಮರ್ಥಿಸಿಕೊಳ್ಳುವ ಪ್ರವೃತ್ತಿಯನ್ನು ಕಾಣಬಹುದಲ್ಲವೇ ? ವಿಕ್ಟೋರಿಯಾ ಬಿಲ್ಲಿಂಗ್ಸ್ ಎಂಬ ಚಿಂತಕಿ ಹೇಳುವಂತೆ ``ಅತ್ಯಾಚಾರ ಎನ್ನುವುದು ಮಹಿಳೆಯನ್ನು ದಮನಿಸಲು ಸಾಂಸ್ಕöÈತಿಕವಾಗಿ ಪೋಷಿಸಲಾಗುವ ಒಂದು ಸಾಧನ. ಕಾನೂನಾತ್ಮಕವಾಗಿ ನಾವು ಖಂಡಿಸುತ್ತೇವೆ, ಕಾಲ್ಪನಿಕವಾಗಿ, ಪೌರಾಣಿಕ ನೆಲೆಯಲ್ಲಿ ರೋಮಾಂಚಕಾರಿಯಾಗಿ ಕಾಣುತ್ತಲೇ ಶಾಶ್ವತಗೊಳಿಸುತ್ತೇವೆ, ಖಾಸಗಿಯಾಗಿ ಅದನ್ನು ಅಲಕ್ಷಿಸಿ ಕ್ಷಮಾರ್ಹ ಮಾಡಿಬಿಡುತ್ತೇವೆ .''
ಮನುಜ ಸೂಕ್ಷಮತೆ ಮತ್ತು ಸ್ತ್ರೀ ಸಂವೇದನೆಯುಳ್ಳ ಮನಸುಗಳಿಗೆ ರೇಪ್ ಎನ್ನುವ ಪದ ಬಳಕೆಯ ಬಗ್ಗೆ ಕೊಂಚ ಜಾಗ್ರತೆ ಇರಬೇಕಲ್ಲವೇ ? ಪುರುಷ ವಿಕೃತಿಯನ್ನು ಮೆರೆಯಲು ಬಳಸಲಾಗುವ ಈ ಅಸ್ತçವನ್ನು ಖ್ಯಾತ ಸ್ತಿçÃವಾದಿ ಆಂಡ್ರಿಯಾ ಡ್ವಾರ್ಕಿನ್ ಕಟುವಾಗಿ ಹೀಗೆ ವ್ಯಾಖ್ಯಾನಿಸುತ್ತಾರೆ `` ಮಹಿಳೆಯ ಬಳಿ ಲಭ್ಯವಿರುವ ಲೈಂಗಿಕತೆಯನ್ನು ಪುರುಷ ಪಡೆಯಲಿಚ್ಚಿಸುತ್ತಾನೆ. ಅವನು ಅದನ್ನು ಕದಿಯುತ್ತಾನೆ (ಅತ್ಯಾಚಾರ), ಬಿಟ್ಟುಕೊಡುವಂತೆ ಒತ್ತಾಯಿಸುತ್ತಾನೆ (ಪ್ರಲೋಭನೆ), ಬಾಡಿಗೆಗೆ ಪಡೆಯುತ್ತಾನೆ (ವೇಶ್ಯಾವಾಟಿಕೆ), ದೀರ್ಘ ಕಾಲದ ಗುತ್ತಿಗೆ ನೀಡುತ್ತಾನೆ (ಅಮೆರಿಕದಲ್ಲಿ ವಿವಾಹ ಸಂಬಂಧ) ಮತ್ತು ಒಮ್ಮೆಲೆ ಸ್ವಂತ ಮಾಡಿಕೊಳ್ಳುತ್ತಾನೆ (ಇತರ ಸಮಾಜಗಳಲ್ಲಿನ ವಿವಾಹ ಸಂಬಂಧಗಳು). ''
ರೇಪ್ ಎನ್ನುವ ಪದ ಮನುಷ್ಯನ ವಿಕೃತಿಯನ್ನು ಬಿಂಬಿಸುವ ಒಂದು ಅಭಿವ್ಯಕ್ತಿಯಾಗಿ ರೂಪುಗೊಳ್ಳುವುದನ್ನು ಅನೇಕ ಸಂದರ್ಭಗಳಲ್ಲಿ ಕಾಣಬಹುದು. ಇತ್ತೀಚೆಗೆ ಮೈಸೂರಿನ ಒಂದು ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂದರ್ಭದಲ್ಲಿ ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ `` ವಿರೋಧ ಪಕ್ಷದವರು ನನ್ನನ್ನೇ ರೇಪ್ ಮಾಡುತ್ತಾರೆ '' ಎಂದು ಹೇಳಿದ್ದುದನ್ನು ಗಮನಿಸಬಹುದು. ಈ ಪದವೇ ಮಹಿಳೆಯರ ಪಾಲಿಗೆ ಕ್ರೌರ್ಯ, ದೌರ್ಜನ್ಯ, ಮಾನಸಿಕ ಹಿಂಸೆ, ಕಿರುಕುಳ ಮತ್ತು ಅಪಮಾನವನ್ನು ಬಿಂಬಿಸುವAತಹುದು. ಈ ಸೂಕ್ಷಮ ಪುರುಷ ಸಮಾಜಕ್ಕೆ ಇರಬೇಕಲ್ಲವೇ ? ಅತ್ಯಾಚಾರ ಅಥವಾ ರೇಪ್ ಎನ್ನುವುದು ಒಂದು ದೈಹಿಕ ಕ್ರಿಯೆ ಮಾತ್ರವಲ್ಲ, ಅದರ ಹಿಂದೆ ಮಹಿಳೆಯ ಅಸ್ತಿತ್ವವನ್ನೇ ಅಲ್ಲಗಳೆಯುವ ಅಥವಾ ಪ್ರಶ್ನಿಸುವ ಮನೋಭಾವವೂ ಇರುವುದನ್ನು ಗಮನಿಸಬೇಕು. ಅಮೆರಿಕದ ಸ್ತಿçÃವಾದಿ ಲೇಖಕಿ ಮರಿಲಿನ್ ಫ್ರೆಂಚ್ ಪುರುಷ ಸಮಾಜವನ್ನು ಹೀಗೆ ವ್ಯಾಖ್ಯಾನಿಸುತ್ತಾರೆ `` ಅವರು ಸಾರ್ವಜನಿಕ ಜೀವನದಲ್ಲಿ ಏನೇ ಆಗಿರಲಿ, ಪುರುಷರೊಡನೆ ಅವರ ಸಂಬಂಧ ಹೇಗೇ ಇರಲಿ, ಮಹಿಳೆಯರೊಡನೆ ಸಂಬಂಧದಲ್ಲಿ ಎಲ್ಲ ಪುರುಷರೂ ಅತ್ಯಾಚಾರಿಗಳು, ಅಷ್ಟೇ. ಅವರು ನಮ್ಮನ್ನು ಕಣ್ಣೋಟದ ಮೂಲಕ, ಕಾನೂನುಗಳ ಮೂಲಕ, ಸಂಹಿತೆಗಳ ಮೂಲಕ ನಮ್ಮ ಮೇಲೆ ಅತ್ಯಾಚಾರ ಎಸಗುತ್ತಿರುತ್ತಾರೆ ''
ನಾಯಕ ಶಿಖಾಮಣಿಗಳ ಅಣಿಮುತ್ತುಗಳು
ಮರಿಲಿನ್ ಫ್ರೆಂಚ್ ಅವರ ಈ ಹೇಳಿಕೆಯ ಹಿಂದಿರುವ ಆಕ್ರೋಶವನ್ನು ಅರ್ಥಮಾಡಿಕೊಳ್ಳಲು ಭಾರತದ ರಾಜಕೀಯ ನಾಯಕರ ವರ್ತನೆ, ಧೋರಣೆ ಮತ್ತು ಹೇಳಿಕೆಗಳನ್ನು ಗಮನಿಸಿದರೂ ಸಾಕು. ಮಹಿಳೆಯರು ಅತ್ಯಾಚಾರಕ್ಕೀಡಾಗುವ, ಚಿತ್ರಹಿಂಸೆಗೀಡಾಗುವ ಸುದ್ದಿ ಇಲ್ಲದ ಪತ್ರಿಕೆಯನ್ನು ಒಂದು ದಿನವೂ ನೋಡಲು ಸಾಧ್ಯವಿಲ್ಲದಂತಹ ಸಂದರ್ಭದಲ್ಲಿ ನಾವಿದ್ದೇವೆ. ಕಟ್ಟುನಿಟ್ಟಾದ ಕಾನೂನುಗಳು, ಕರಾಳ ಶಾಸನಗಳು, ದಂಡನೆಯ ಭೀತಿ ಇದಾವುದೂ ಮಹಿಳೆಗೆ ರಕ್ಷಣೆ ನೀಡುತ್ತಿಲ್ಲ ಏಕೆಂದರೆ ಈ ಕಾನೂನುಗಳನ್ನು ರೂಪಿಸುವವರಲ್ಲಿ, ಪಾಲಿಸುವವರಲ್ಲಿ ಮತ್ತು ಅನುಕರಿಸುವವರಲ್ಲಿ ಪುರುಷಾಧಿಪತ್ಯದ ಧೋರಣೆ ಸದಾ ಜಾಗೃತಾವಸ್ಥೆಯಲ್ಲೇ ಇರುತ್ತದೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸದನದಲ್ಲಿ ಆಡಿದ ಮಾತುಗಳು ಈ ಜಾಗೃತಾವಸ್ಥೆಯ ಅಭಿವ್ಯಕ್ತಿಯೇ ಆಗಿದೆ. ನಮ್ಮ ನಡುವಿನ ಜನಪ್ರತಿನಿಧಿಗಳ, ರಾಜಕೀಯ ನಾಯಕರ ಹೇಳಿಕೆಗಳನ್ನು ಗಮನಿಸಿದರೂ ಇದು ಸ್ಪಷ್ಟವಾಗುತ್ತದೆ.
2012ರ ನಿರ್ಭಯ ಪ್ರಕರಣದ ನಂತರ ದೇಶಾದ್ಯಂತ ಪ್ರತಿಭಟನೆಗಳು ಕಾವು ಪಡೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ರಾಷ್ಟçಪತಿ ಪ್ರಣಬ್ ಮುಖರ್ಜಿಯವರ ಪುತ್ರ ಅಭಿಜಿತ್ ಮುಖರ್ಜಿ ಪ್ರತಿಭಟನೆಯಲ್ಲಿದ್ದ ಮಹಿಳೆಯರನ್ನು ಕುರಿತು ``ಪ್ರತಿಭಟನೆಯಲ್ಲಿರುವ ಬಣ್ಣ ಬಳಿದುಕೊಂಡಿರುವ ಈ ಸುಂದರ ಮಹಿಳೆಯರು ವಿದ್ಯಾರ್ಥಿನಿಯರಲ್ಲ, ಈ ವಯಸ್ಸಿನ ಮಹಿಳೆಯರು ವಿದ್ಯಾರ್ಥಿನಿಯರಾಗಿರಲು ಸಾಧ್ಯವಿಲ್ಲ '' ಎಂದು ಹೇಳಿದ್ದರು. 2014ರಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣವೊಂದರಲ್ಲಿ ಮೂವರಿಗೆ ಗಲ್ಲು ಶಿಕ್ಷೆಯಾಗಿದ್ದನ್ನು ವಿರೋಧಿಸಿದ ಮುಲಾಯಂಸಿಂಗ್ ಯಾದವ್ `` ಹುಡುಗರು ಹುಡುಗರೇ, ತಪ್ಪು ಮಾಡುತ್ತಲೇ ಇರುತ್ತಾರೆ, ನಾಲ್ಕು ಜನ ಒಬ್ಬ ಮಹಿಳೆಯ ಮೇಲೆ ಅತ್ಯಾಚಾರ ಎಸಗಲು ಸಾಧ್ಯವೇ ಇಲ್ಲ '' ಎಂದು ಹೇಳುತ್ತಾರೆ. 2015ರಲ್ಲಿ ಕರ್ನಾಟಕದ ಗೃಹ ಸಚಿವರಾಗಿದ್ದ ಕೆ ಜೆ ಜಾರ್ಜ್, 22 ವರ್ಷದ ಯುವತಿಯ ಪ್ರಕರಣದ ಸಂದರ್ಭದಲ್ಲಿ `` ಇಬ್ಬರು ಅತ್ಯಾಚಾರ ಎಸಗಿದರೆ ಅದು ಸಾಮೂಹಿಕ ಅತ್ಯಾಚಾರ ಎನಿಸಿಕೊಳ್ಳುವುದಿಲ್ಲ'' ಎಂದು ಹೇಳುತ್ತಾರೆ.
2013ರಲ್ಲಿ ಅತ್ಯಾಚಾರದ ವಿರುದ್ಧ ದೇಶಾದ್ಯಂತ ಆಕ್ರೋಶದ ಕಿಡಿ ಹರಡುತ್ತಿದ್ದ ಸಂದರ್ಭದಲ್ಲಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ `` ಮಹಿಳೆಯರ ಮೇಲಿನ ಅತ್ಯಾಚಾರಗಳು ನಗರಗಳ ವಿದ್ಯಮಾನ ಇದು ಪಾಶ್ಚಿಮಾತ್ಯ ಪ್ರಭಾವದ ಫಲ, ಸಾಂಪ್ರದಾಯಿಕ ಮೌಲ್ಯಗಳನ್ನು ಉಳಿಸಿಕೊಂಡಿರುವ ಭಾರತದಲ್ಲಿ, ಅಂದರೆ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವುದಿಲ್ಲ '' ಎಂದು ಹೇಳಿದ್ದರು. 2014ರಲ್ಲಿ ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ಅಬು ಅಜ್ಮಿ `` ಅತ್ಯಾಚಾರ ಪ್ರಕರಣದಲ್ಲಿ ಮಹಿಳೆಯೂ ಶಿಕ್ಷೆಗೊಳಗಾಗಬೇಕು. ಭಾರತದಲ್ಲಿ ಅತ್ಯಾಚಾರಕ್ಕೆ ಮರಣದಂಡನೆ ವಿಧಿಸಲಾಗುತ್ತದೆ ಆದರೆ ವಿವಾಹೇತರ ಲೈಂಗಿಕ ಸಂಬಂಧಗಳಲ್ಲಿ ಮಹಿಳೆಯರಿಗೆ ಮರಣದಂಡನೆ ವಿಧಿಸುವುದಿಲ್ಲ '' ಎಂದು ಹೇಳಿದ್ದರು. 2013ರಲ್ಲಿ ಕೊಲ್ಕತ್ತಾದಲ್ಲಿ ಹೆಚ್ಚುತ್ತಿರುವ ಅತ್ಯಾಚಾರಗಳ ಬಗ್ಗೆ ಪ್ರತಿಕ್ರಯಿಸುತ್ತಾ ಮಮತಾ ಬ್ಯಾನರ್ಜಿ `` ಮೊದಲೆಲ್ಲಾ ಹುಡುಗ ಹುಡುಗಿ ಕೈಕೈ ಹಿಡಿದು ಹೋಗುತ್ತಿದ್ದರೆ ಪೋಷಕರು ನಿರ್ಬಂಧಿಸುತ್ತಿದ್ದರು, ಈಗ ಎಲ್ಲವೂ ಮುಕ್ತವಾಗಿದೆ. ಇದು ಮುಕ್ತ ಮಾರುಕಟ್ಟೆಯಂತಾಗಿದೆ ಮುಕ್ತ ಅವಕಾಶಗಳೂ ಇರುತ್ತವೆ '' ಎಂದು ಹೇಳಿದ್ದರು.
ನಿರ್ಭಯ ಪ್ರಕರಣದ ಸಂದರ್ಭದಲ್ಲಿ ಆಂಧ್ರಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ಬೋತ್ಸಾ ಸತ್ಯನಾರಾಯಣ `` ಭಾರತಕ್ಕೆ ಅರ್ಧರಾತ್ರಿಯಲ್ಲಿ ಸ್ವಾತಂತ್ರ÷್ಯ ಲಭಿಸಿದೆ ಎಂದ ಮಾತ್ರಕ್ಕೆ ಮಹಿಳೆಯರು ಕತ್ತಲಲ್ಲಿ ಓಡಾಡಬಾರದು. ಕೆಲವೇ ಪ್ರಯಾಣಿಕರಿರುವ ಬಸ್ಸುಗಳಲ್ಲಿ ಮಹಿಳೆ ಪ್ರಯಾಣ ಮಾಡಬಾರದು '' ಎಂದು ಹೇಳುವ ಮೂಲಕ ತಮ್ಮ ಕರಾಳ ಮನಸ್ಸನ್ನು ಹೊರಗೆಡಹಿದ್ದರು. ನಿರ್ಭಯ ಪ್ರಕರಣದ ಸಂದರ್ಭದಲ್ಲೇ ಹರಿಯಾಣದ ಖಾಪ್ ಪಂಚಾಯತ್ ಒಂದರಲ್ಲಿ ಮಹಿಳೆಯರ ವಿವಾಹಕ್ಕೆ 16 ವರ್ಷಗಳ ಮಿತಿ ನಿಗದಿಪಡಿಸಲು ನಿರ್ಣಯ ನೀಡಲಾಗಿತ್ತು ಇದರಿಂದ ಅತ್ಯಾಚಾರ ಪ್ರಕರಣಗಳು ಕಡಿಮೆಯಾಗುತ್ತವೆ ಎಂದು ಮಾಜಿ ಮುಖ್ಯಮಂತ್ರಿ ಓಮ್ ಪ್ರಕಾಶ್ ಚೌತಾಲಾ ಸಮರ್ಥಿಸಿಕೊಂಡಿದ್ದರು. ತೃಣಮೂಲ ಕಾಂಗ್ರೆಸ್ ನಾಯಕ ತಾಪಸ್ ಪಾಲ್ ತಮ್ಮ ವಿರೋಧಿಗಳಿಗೆ ಬೆದರಿಕೆ ಹಾಕುತ್ತಾ `` ವಿರೋಧ ಪಕ್ಷದವರ ಮಡದಿಯರು, ಸೋದರಿಯರು ಇಲ್ಲಿದ್ದರೆ ಕೇಳಿಸಿಕೊಳ್ಳಿ, ನಾನು ನಮ್ಮ ಹುಡುಗರನ್ನು ಕಳಿಸುತ್ತೇನೆ ಅವರು ಮಹಿಳೆಯರ ಮೇಲೆ ಅತ್ಯಾಚಾರ ಮಾಡುತ್ತಾರೆ '' ಎಂದು ಹೇಳಿದ ವಿಡಿಯೋ ಸಾಕಷ್ಟು ಸುದ್ದಿ ಮಾಡಿತ್ತು. 2014ರಲ್ಲಿ ಬದೌನ್ ಅತ್ಯಾಚಾರ ಪ್ರಕರಣಗಳ ಸಂದರ್ಭದಲ್ಲಿ ಉತ್ತರ ಪ್ರದೇಶದ ಗೃಹ ಸಚಿವ ಬಾಬುಲಾಲ್ ಗೌರ್ `` ಅತ್ಯಾಚಾರ ಒಂದು ಸಾಮಾಜಿಕ ಅಪರಾಧ ಇದಕ್ಕೆ ಪುರುಷರೂ ಕಾರಣ ಮಹಿಳೆಯರೂ ಕಾರಣ, ಕೆಲವೊಮ್ಮೆ ಇದು ಸರಿ ಎನಿಸುತ್ತದೆ ಕೆಲವೊಮ್ಮೆ ತಪುö್ಪ ಎನಿಸುತ್ತದೆ '' ಎಂದು ಹೇಳಿದ್ದರು.
2014ರ ಮಹಾರಾಷ್ಟç ವಿಧಾನಸಭಾ ಚುನಾವಣೆಗಳ ಮುನ್ನ ಎಂಎನ್‌ಎಸ್ ಅಭ್ಯರ್ಥಿ ಸುಧಾಕರ್ ಖಡೆ ಅತ್ಯಾಚಾರ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದರು. ಆತನಿಗೆ ಟಿಕೆಟ್ ನೀಡುವುದನ್ನು ವಿರೋಧಿಸಿದ ಎನ್ಸಿಪಿ ನಾಯಕ ಆರ್ ಆರ್ ಪಾಟೀಲ್ `` ಅವರು ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕನಾಗುವ ಬಯಕೆ ಹೊಂದಿದ್ದಲ್ಲಿ ಚುನಾವಣೆಯ ನಂತರ ಈ ಅಪರಾಧ ಎಸಗಬಹುದಿತ್ತು '' ಎಂದು ಹೇಳಿದ್ದರು. ಇದೇ ಪರಂಪರೆಯನ್ನು ಪ್ರತಿನಿಧಿಸುವ ಹರಿಯಾಣದ ಕಾಂಗ್ರೆಸ್ ನಾಯಕ ಧರ್ಮವೀರ್ ಗೋಯತ್ `` ಬಹುತೇಕ ಅತ್ಯಾಚಾರ ಪ್ರಕರಣಗಳು ಪರಸ್ಪರ ಒಪ್ಪಿಗೆಯಿಂದಲೇ ಸಂಭವಿಸಿರುತ್ತವೆ, ಶೇ 90ರಷ್ಟು ಸಂತ್ರಸ್ತೆಯರು ಪತಿಯನ್ನು ತೊರೆದು ಓಡಿಹೋದವರೇ ಆಗಿರುತ್ತಾರೆ '' ಎಂದು ಹೇಳಿ ಪಕ್ಷಕ್ಕೆ ಮುಜುಗರ ಉಂಟುಮಾಡಿದ್ದರು. ಹೀಗೆ ಮಹಿಳೆಯರು ಧರಿಸುವ ಉಡುಪು, ಆಕೆಯ ಕೇಶಾಲಂಕಾರ, ಸೌಂದರ್ಯವೃದ್ಧಿಯ ಸಾಧನಗಳು ಇವೆಲ್ಲವನ್ನೂ ಅತ್ಯಾಚಾರದ ಮೂಲ ಕಾರಣಗಳು ಎಂದು ಬಿಂಬಿಸುವ ನೂರಾರು ಹೇಳಿಕೆಗಳನ್ನು ಗುರುತಿಸಬಹುದು.
ಪರಂಪರೆಯ ಕೂಪದೊಳಗಿನ ಮಾಲಿನ್ಯ
ಈ ಎಲ್ಲ ಹೇಳಿಕೆಗಳ ಹಿಂದೆ ಪುರುಷ ಪ್ರಧಾನ ವ್ಯವಸ್ಥೆಯ ಊಳಿಗಮಾನ್ಯ ಧೋರಣೆ ಮತ್ತು ಪುರುಷಾಧಿಪತ್ಯದ ಅಹಮಿಕೆ ಜಾಗೃತವಾಗಿರುತ್ತದೆ. ಭಾರತೀಯ ಸಮಾಜ ಎಷ್ಟೇ ಆಧುನೀಕರಣಕ್ಕೊಳಗಾಗಿದ್ದರೂ, ಎಷ್ಟೇ ನಾಗರಿಕತೆಯನ್ನು ಮೈಗೂಡಿಸಿಕೊಂಡಿದ್ದರೂ, ಶತಮಾನಗಳಿಂದ ಸಮಾಜದ ಗರ್ಭದಲ್ಲೇ ಬೇರೂರಿರುವ ಜಾತಿ ಶ್ರೇಷ್ಠತೆ ಮತ್ತು ಪುರುಷಾಧಿಪತ್ಯದ ಅಹಮಿಕೆ ತನ್ನ ಮೂಲ ಸ್ವರೂಪವನ್ನು ಉಳಿಸಿಕೊಂಡಿದೆ. 1992ರ ಭವಾರಿ ದೇವಿ ಅತ್ಯಾಚಾರ ಪ್ರಕರಣದ ಸಂದರ್ಭದಲ್ಲಿ ವಿಚಾರಣಾ ನ್ಯಾಯಾಲಯದ ಅಂತಿಮ ತೀರ್ಪಿನಲ್ಲಿ `` ಮೇಲ್ಜಾತಿಯ ಪುರುಷರು ಕೆಳಜಾತಿಯ ಮಹಿಳೆಯ ಮೇಲೆ ಅತ್ಯಾಚಾರ ಎಸಗುವ ಮೂಲಕ ತಮ್ಮನ್ನು ಮಲಿನಗೊಳಿಸುವುದು ಸಾಧ್ಯವಿಲ್ಲ '' ಎಂದು ಹೇಳಿದ್ದುದೇ ಅಲ್ಲದೆ, 60-70 ವರ್ಷದ ಪುರುಷರು, ಗ್ರಾಮದ ಮುಖ್ಯಸ್ಥರು ಅತ್ಯಾಚಾರ ಎಸಗುವುದಿಲ್ಲ ಎಂದು ಹೇಳಲಾಗಿತ್ತು. ಭಾರತದ ಸಂದರ್ಭದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳಿಗೂ ಇಲ್ಲಿನ ಜಾತಿ ವ್ಯವಸ್ಥೆಯ ತಾರತಮ್ಯಗಳಿಗೂ ನೇರ ಸಂಬAಧವಿರುವುದನ್ನು ಇಂತಹ ತೀರ್ಪುಗಳು ಸೂಚಿಸುತ್ತವೆ.
ಮಾನ್ಯ ರಮೇಶ್ ಕುಮಾರ್ ಕ್ಷಮೆ ಕೋರಿರುವುದು ಅವರ ಅಸೂಕ್ಷ÷್ಮ ಹೇಳಿಕೆಗಾಗಿ, ಕಾಗೇರಿ ಕ್ಷಮೆ ಕೋರಲೂ ಮುಂದಾಗದೆ ತಮ್ಮ ನಗುವನ್ನು ಸಮರ್ಥಿಸಿಕೊಂಡಿರುವುದು ಪುರುಷಾಧಿಪತ್ಯದ ಸಂಕೇತ. ಇದು ಒಂದು ಕ್ಷಮೆ, ಒಂದು ದಂಡಸAಹಿತೆ ಅಥವಾ ಒಂದೆರಡು ಗಲ್ಲು ಶಿಕ್ಷೆಗಳಿಂದ ಹೋಗಲಾಡಿಸಬಹುದಾದ ಕಾಯಿಲೆ ಅಲ್ಲ. ಅಸ್ಪöÈಶ್ಯತೆಯಂತೆಯೇ ಪುರುಷಾಧಿಪತ್ಯದ ಕ್ಯಾನ್ಸರ್ ರೋಗ ಭಾರತದ ಸಾಂಪ್ರದಾಯಿಕ ಸಮಾಜದ ಗರ್ಭದಲ್ಲೇ ಬೇರುಬಿಟ್ಟಿದೆ. ಸ್ತಿçà ಸಂವೇದನೆ ಬೆಳೆಸಿಕೊಳ್ಳಲು ಇರಬಹುದಾದ ಮಾರ್ಗಗಳನ್ನು, ಸಾಧ್ಯತೆಗಳನ್ನು ಮಾರುಕಟ್ಟೆ ಆರ್ಥಿಕತೆ ಕೊಲ್ಲುತ್ತಲೇ ಇರುತ್ತದೆ. ಏಕೆಂದರೆ ಬಂಡವಾಳಕ್ಕೂ ಪುರುಷಾಧಿಪತ್ಯಕ್ಕೂ ಅವಿನಾಭಾವ ಸಂಬAಧ ಇರುತ್ತದೆ. ವ್ಯವಸ್ಥೆಯಲ್ಲಿ ಬೇರುಬಿಟ್ಟಿರುವ ಊಳಿಗಮಾನ್ಯ ಧೋರಣೆ ಇದನ್ನು ಪೋಷಿಸುತ್ತಲೇ ಇರುತ್ತದೆ.
ಸಮಾಜದಲ್ಲಿ ಸ್ತಿçà ಸಂವೇದನೆಯನ್ನು ಬೆಳೆಸುವ ಪ್ರಯತ್ನಗಳು ಪ್ರಾಥಮಿಕ ಹಂತದ ಶಾಲಾ ಶಿಕ್ಷಣದಿಂದಲೇ ಆರಂಭವಾಗಬೇಕಿದೆ. ಮಾನವೀಯ, ನೈತಿಕ ಮೌಲ್ಯಗಳನ್ನಷ್ಟೇ ಅಲ್ಲದೆ, ಸಾಂವಿಧಾನಿಕ ಮೌಲ್ಯಗಳನ್ನೂ ಕಳೆದುಕೊಂಡು ಬೆತ್ತಲಾಗಿರುವ ನಮ್ಮ ಆಳುವವರ್ಗಗಳ ಜನಪ್ರತಿನಿಧಿಗಳಿಂದ ಏನನ್ನೂ ನಿರೀಕ್ಷಿಸಲಾಗುವುದಿಲ್ಲ. ಇದು ಒಂದು ಸಂವೇದನಾಶೀಲ ಸಾಮಾಜಿಕ ಅಭಿಯಾನವಾದಾಗ ಮಾತ್ರ ಭಾರತದ ಮಹಿಳೆಗೆ ನೆಮ್ಮದಿಯ ನಿಟ್ಟುಸಿರು ಸಾಧ್ಯ.
-0-0-0-0-