ಸಾವರ್ಕರ್ ಎಂಬ ಹುಸಿ ಸತ್ಯ-ಮಿಥ್ಯೆಗಳ ಹುತ್ತವ ಒಡೆಯುತ್ತ..,

ಹೀಗೆ ಇಂಥ ಸಾವರ್ಕರ್ ಅವರನ್ನು ವೈಭವೀಕರಿಸಿಕೊಂಡೇ 2002ರಿಂದ ಬಿಜೆಪಿ ಗುಜರಾತಿನಿಂದ ದಿಲ್ಲಿವರೆಗೆ ಬಂದು ತಳವೂರಿಕೊಂಡಿದೆ. ಎಲ್ಲ ಬಗೆಯ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ನ್ಯಾಯಾಲಯಗಳೂ ಸೇರಿ ಎಲ್ಲ ಬಗೆಯ ತನಿಖಾ ಸಂಸ್ಥೆಗಳ ದುರ್ಬಳಕೆ ಹಾಗೂ ಚುನಾವಣಾ ಅಕ್ರಮಗಳ ಮೂಲಕ ಅಘೋಷಿತ ತುರ್ತು ಪರಿಸ್ಥಿತಿ ಜಾರಿಗೆ ತರಲಾಗಿದೆ ಎಂದು ಆತಂಕ ವ್ಯಕ್ತಪಡಿಸಿರುವ ಲೇಖಕ ಅರುಣ್ ಶೌರಿ, ಕಟ್ಟ ಕಡೆಯದಾಗಿ ಮಾಡಿಕೊಂಡಿರುವ ಮನವಿ ಏನೆಂದರೆ “ ಹಿಂದೂ ಧರ್ಮವನ್ನು ಹಿಂದುತ್ವದಿಂದ ರಕ್ಷಿಸಿ”

ಸಾವರ್ಕರ್ ಎಂಬ ಹುಸಿ ಸತ್ಯ-ಮಿಥ್ಯೆಗಳ ಹುತ್ತವ ಒಡೆಯುತ್ತ..,

 ಅರುಣ್ ಶೌರಿ ಎಂಬ ವಿಗ್ರಹ ಭಂಜಕನ ಹೊಸ ಸಾಹಸ!

ಒಂದು ಗಳಿಗೆ

ಕುಚ್ಚಂಗಿ ಪ್ರಸನ್ನ

     “ಹಿಂದೂ ಧರ್ಮದ ಮೂಲತತ್ವವೆಂದರೆ ಅಂತರಂಗದ ಹುಡುಕಾಟ. ಇದಕ್ಕೆ ವ್ಯತಿರಿಕ್ತವಾಗಿ ಹಿಂದುತ್ವವು ಅಧಿಕಾರವನ್ನು (STATE)  ವಶಪಡಿಸಿಕೊಳ್ಳುವ, ಪ್ರಾಬಲ್ಯ ಸಾಧಿಸುವ, ಉಳಿಸಿಕೊಳ್ಳುವ, ತಿರುಚುವ ಮತ್ತು ತಿರುಗಿಸುವ ಯೋಜನೆಯಾಗಿದೆ.

  ಅಂತರಂಗದ ನೇರ ಹುಡುಕಾಟಕ್ಕಾಗಿ, ಸತ್ಯದ ಅನುಸರಣೆ, ನಮ್ರತೆ, ಸೇವೆ, ಸಾಮಾನ್ಯವಾಗಿ ನೈತಿಕ ನಡವಳಿಕೆಗಳ ಹೊರತಾಗಿ ಬೇರೆ ಏನೂ ಇಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಹಿಂದುತ್ವವು ನಾವು ರಾಜ್ಯವನ್ನು ವಶಪಡಿಸಿಕೊಳ್ಳುತ್ತೇವೆ ಮತ್ತು ಪ್ರಾಬಲ್ಯ ಸಾಧಿಸುತ್ತೇವೆ, ನಾವು ಸಮಾಜವನ್ನು ಎಲ್ಲಾ ವಿಧಾನಗಳಿಂದ ಅಧೀನಗೊಳಿಸುತ್ತೇವೆ - ಸುಳ್ಳು ಮತ್ತು ಬಲ, ಬೆದರಿಕೆ ಮತ್ತು ಕ್ರೌರ್ಯ, ವಂಚನೆ ಮತ್ತು ಲಂಚ ಮತ್ತು ಒಂದು ಪದದಲ್ಲಿ ಹೇಳುವುದಾದಲ್ಲಿ ನಾಯಕನಾದವನು ಮತ್ತು ಆ ಕ್ಷಣದ ನಾಯಕನಾದವನು ಬಯಸುವ ಎಲ್ಲವನ್ನೂ ಸಾಧನವಾಗಿ ಬಳಸುತ್ತೇವೆ ಎನ್ನುತ್ತದೆ ಹಿಂದುತ್ವ.

   ಹಿಂದೂ ಧರ್ಮದಲ್ಲಿ, ಎಲ್ಲಾ ಆಚರಣೆಗಳು- ಪೂಜೆ, ಧ್ಯಾನಗಳು ಅಂತರಂಗದ ನೇರ ಹುಡುಕಾಟಕ್ಕೆ ಸಹಾಯಕವಾಗಿವೆ. ಹಿಂದುತ್ವವು ಇವುಗಳನ್ನು ವಿರೂಪಗೊಳಿಸುತ್ತದೆ, ಅಧಿಕಾರದಲ್ಲಿ ಪ್ರಾಬಲ್ಯ ಸಾಧಿಸಲು ಮತ್ತು ನಿಯಂತ್ರಿಸಲು, ಸಮಾಜವನ್ನು ಗುರುತಿಸಲು ಮತ್ತು ವಿಭಜಿಸಲು ಸಾಧನಗಳನ್ನು ಮಾಡುತ್ತದೆ. …,

   ಆದ್ದರಿಂದ, ಹಿಂದುತ್ವವು ಹಿಂದೂ ಧರ್ಮವನ್ನು ಪ್ರಭುತ್ವ ಮತ್ತು ಅದರ ಉದ್ದೇಶಗಳ ಅನ್ವೇಷಣೆಯಲ್ಲಿ ಒಂದು ಆಯುಧವನ್ನಾಗಿ ಹಾಗೂ ಸಾಧನವಾಗಿ ರೂಪಿಸುತ್ತದೆ - ಯೇಸುವಿನ ಕ್ರಿಶ್ಚಿಯನ್ ಧರ್ಮಕ್ಕೆ ಏನಾಯಿತು ಎಂಬುದನ್ನು ನೋಡಿ, ಸೂಫಿಗಳ ಇಸ್ಲಾಂಗೆ ಏನಾಯಿತು ಎಂಬುದನ್ನು ನೋಡಿ. ಆದ್ದರಿಂದ, ನನ್ನ ಮನವಿ: “ “ಹಿಂದೂ ಧರ್ಮವನ್ನು ಹಿಂದುತ್ವದಿಂದ ರಕ್ಷಿಸಿ” – ಅರುಣ್ ಶೌರಿ

     ಮೇಲಿನ ವಾಕ್ಯಗಳು, ಕಳೆದ ತಿಂಗಳ ಕಡೇ ದಿನ ಮಾರುಕಟ್ಟೆಗೆ ಬಂದ ಅರುಣ್ ಶೌರಿ ಅವರ “ ದ ನ್ಯೂ ಐಕಾನ್- ಸಾವರ್ಕರ್ ಅಂಡ್ ದ ಫ್ಯಾಕ್ಟ್ಸ್ “ಕೃತಿ ( THE NEW ICON – SAVARKAR AND THE FACTS)ಎಂಬ 560 ಪುಟಗಳ ಹೊಸ ಇಂಗ್ಲಿಷ್ ಪುಸ್ತಕದ ಕಡೇ ಪುಟದಲ್ಲಿನ ಕಟ್ಟ ಕಡೆಯ ಪ್ಯಾರಾದ ಒರಟು ಅನುವಾದ.

    ಪಂಜಾಬ್‌ನ ಜಲಂಧರ್‌ನಲ್ಲಿ 1941ರ ನವೆಂಬರ್ 2ರಂದು ಜನಿಸಿದ ಅರುಣ್ ಶೌರಿ ಅವರಿಗೀಗ 84ರ ಇಳಿ ಹರೆಯ. ಇವರ ತಂದೆ ಪದ್ಮ ಭೂಷಣ ಹಾಗೂ ಪದ್ಮ ವಿಭೂಷಣ ಹರಿದೇವ್ ಶೌರಿ (1911-2005) ಐಎಎಸ್ ಅಧಿಕಾರಿ, ಜೊತೆಗೆ ಗ್ರಾಹಕ ಪರ ಹೋರಾಟಗಾರ.

      ದಿಲ್ಲಿಯ ಸೇಂಟ್ ಸ್ಟೀಫನ್ ಕಾಲೇಜಿನಲ್ಲಿ ಎಕನಾಮಿಕ್ಸ್ ನಲ್ಲಿ ಪದವಿ ಪಡೆದ ಅರುಣ್ ಶೌರಿ 1966ರಲ್ಲಿ ಇದೇ ಅರ್ಥ ಶಾಸ್ತ್ರದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪಡೆದರು. ಪಿಹೆಚ್.ಡಿ ಪಡೆದ ಮರು ವರ್ಷವೇ ಎಕನಾಮಿಸ್ಟ್ ಆಗಿ ವಿಶ್ವ ಬ್ಯಾಂಕ್ ಸೇರಿ ವಾಷಿಂಗ್‌ಟನ್ ಪೋಸ್ಟ್ ನಲ್ಲಿ ಹತ್ತು ವರ್ಷ ಕೆಲಸ ಮಾಡಿದರು. ಹಾಗೂ ಸಮಸಮವಾಗಿಯೇ 1972-74ರಲ್ಲಿ ಭಾರತದ ಯೋಜನಾ ಆಯೋಗದ ಸಲಹೆಗಾರರಾಗಿದ್ದವರು. ಅಲ್ಲಿ ಲೇಖನಗಳನ್ನು ಬರೆಯುತ್ತ ಬರವಣಿಗೆಯನ್ನು ರೂಡಿಸಿಕೊಂಡ ಶೌರಿ 1975ರಲ್ಲಿ ಅಂದಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರು ಹೇರಿದ ತುರ್ತು ಪರಿಸ್ಥಿತಿಯ ಅವಧಿಯಲ್ಲಿ ನಾಗರಿಕ ಹಕ್ಕುಗಳ ದಮನ ಕುರಿತಂತೆ ಇಂಡಿಯನ್ ಎಕ್ಸ್‌ ಪ್ರೆಸ್‌ ದಿನಪತ್ರಿಕೆಯಲ್ಲಿ ಟೀಕಾ ಲೇಖನಗಳನ್ನು ಬರೆಯತೊಡಗಿದರು. ಕಡೆಗೆ ಎಕ್ಸ್‌ ಪ್ರೆಸ್‌ ದಿನಪತ್ರಿಕೆಯ ಮಾಲಿಕ ರಾಮನಾಥ ಗೊಯೆಂಕಾ ಅರುಣ್ ಶೌರಿ ಅವರನ್ನು 1979ರ ಜನವರಿಯಲ್ಲಿ ಇಂಡಿಯನ್ ಎಕ್ಸ್‌ ಪ್ರೆಸ್‌ ನ ಎಕ್ಸಿಕ್ಯುಟಿವ್ ಎಡಿಟರ್ ಅಂತ ನೇಮಿಸಿ ಸರಿ ಅನ್ನಿಸಿದ್ದನ್ನೆಲ್ಲ ಬರೆಯುವ ಮುಕ್ತ ಸ್ವಾತಂತ್ರ‍್ಯ ನೀಡಿದರು.

    ಗಾಂಧೀ ವಿಚಾರ ಧಾರೆಯಿಂದ ಪ್ರಭಾವಿತರಾದ ಅರುಣ್ ಶೌರಿ ಪತ್ರಿಕಾ ಸ್ವಾತಂತ್ರ‍್ಯ ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಡುವ ದಿಟ್ಟ ,ನಿರ್ಭೀತ , ಬುದ್ದಿವಂತ ಎಂದು ಗುರುತಾದರು. ಇಂತ ಪತ್ರಿಕಾ ವೃತ್ತಿಗಾಗಿಯೇ 1982ರಲ್ಲಿ ಮ್ಯಾಗಸೇಸೆ ಹಾಗೂ ಇಂಟರ್ ನ್ಯಾಶನಲ್ ಎಡಿಟರ್ ಪ್ರಶಸ್ತಿಗಳನ್ನು ಪಡೆದರು. ತಂದೆಯಂತೆಯೇ ಅರುಣ್ ಶೌರಿ ಕೂಡಾ ಪದ್ಮ ಭೂಷಣ ಪ್ರಶಸ್ತಿ ಪಡೆದಿದ್ದಾರೆ.

    ಇಂದಿರಾ ಗಾಂಧಿ ಅವರ ಸರ್ವಾಧಿಕಾರಿ ಧೋರಣೆ ವಿರುದ್ಧ ಬರೆಯುತ್ತಲೇ ಬಿಜೆಪಿಗೆ ಹತ್ತಿರವಾದ ಅರುಣ್ ಶೌರಿ ಅಟಲ ಬಿಹಾರಿ ವಾಜಪೇಯಿ ಅವರ ಮಂತ್ರಿ ಮಂಡಲದಲ್ಲಿ ಸಂಪರ್ಕ ಹಾಗು ಮಾಹಿತಿ ತಂತ್ರಜ್ಞಾನ ಖಾತೆಗಳ ಮಂತ್ರಿಯೂ ಆದರು. ಜೊತೆಗೆ ಇವರು ಇಂಡಿಯಾದ ಮೊಟ್ಟ ಮೊದಲ ಬಂಡವಾಳ ಹಿಂತೆಗೆತ ಖಾತೆಯ ಮಂತ್ರಿಯೂ ಹೌದು. ಶೌರಿ ಅವರನ್ನು 1998-2004 ಹಾಗೂ 2004-2010ರ ಅವಧಿಗೆ ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಬಿಜೆಪಿ ಆಯ್ಕೆ ಮಾಡಿತ್ತು.

     1990-2000ರ ದಶಕದಲ್ಲಿ ಆರ್‌ಎಸ್ಎಸ್ ಕಾರ್ಯಕರ್ತರಲ್ಲದೇ ಹೋದರೂ ಹಿಂದೂ ರಾಷ್ಟ್ರೀಯವಾದಿ ಬುದ್ದಿಜೀವಿ ಎನಿಸಿಕೊಂಡು ಎಡ ಪಂಥೀಯ ಸಿದ್ಧಾಂತಗಳನ್ನು ಹೀಗೆಳೆಯುತ್ತ ಇಸ್ಲಾಂ ಹಾಗೂ ಕ್ರೈಸ್ತ ಧರ್ಮಗಳ ಕುರಿತ ವಿವಾದಾತ್ಮಕ ಕೃತಿಗಳನ್ನು ಶೌರಿ ಬರೆದರು. ವಾಜಪೇಯಿ ಹಾಗೂ ಲಾಲ್ ಕೃಷ್ಣ ಆಡ್ವಾಣಿ ಅವರ ಕಣ್ಮಣಿಯಾಗಿದ್ದ ಅರುಣ್ ಶೌರಿ, ಇಂಡಿಯಾಕ್ಕೆ ಸ್ವಾತಂತ್ರ‍್ಯ ಬಂದ 50 ವರ್ಷಗಳ ನೆನಪಿಗೆ ಎಂಬಂತೆ ಬಾಬಾ ಸಾಹೇಬ ಭಾರತ ರತ್ನ ಭೀಮರಾವ್ ರಾಮರಾವ್ ಅಂಬೇಡ್ಕರ್ ಅವರನ್ನು ಕುರಿತು ಬರೆದ ಇಂಗ್ಲಿಷ್ (Worshipping False Gods: Ambedkar, and the Facts which have been erased )    ( ಹುಸಿ ದೇವರುಗಳ ಆರಾಧನೆ- ಅಂಬೇಡ್ಕರ್ ಮತ್ತು ಅಳಿಸಲಾದ ಸತ್ಯಗಳು) ಆ ಕಾಲಕ್ಕೆ ಸಾಕಷ್ಟು ವಿವಾದ ಸೃಷ್ಟಿಸಿತು ಹಾಗೂ ತುಸು ವಿರೋಧವನ್ನೂ ಎದುರಿಸಿತು. ಕಾಂಗ್ರೆಸ್‌ನ ಕೆಲ ಸಂಸದರು ಆ ಕೃತಿಯನ್ನು ದಿಲ್ಲಿಯಲ್ಲಿ ಸಾರ್ವಜನಿಕವಾಗಿ ಸುಟ್ಟರು.

    ಈ ಕೃತಿಯಲ್ಲಿ ಅರುಣ್ ಶೌರಿ ಅಂಬೇಡ್ಕರ್ ಅವರ ಕುರಿತಂತೆ ಜನಪ್ರಿಯವಾಗಿದ್ದ ಎರಡು ಅಂಶಗಳನ್ನು ಒಂದು ಅಂಬೇಡ್ಕರ್ ಗಾಂಧಿ ಮತ್ತು ನೆಹರೂ ಅವರಂತೆ ಸ್ವಾತಂತ್ರ‍್ಯ ಹೋರಾಟಗಾರರಾಗಿದ್ದರು ಎಂಬ ಹಾಗೂ ಅಂಬೇಡ್ಕರ್ ಅವರೊಬ್ಬರೇ ಸಂವಿಧಾನ ರಚಿಸಿದವರಲ್ಲ ಎಂಬ ಅವರ ಅಭಿಮಾನಿಗಳ ನಂಬಿಕೆ ಹುಸಿ ಎಂದು ನಿರೂಪಿಸುವ ಪ್ರಯತ್ನ ಮಾಡಿದರು.

   ಈಗ ಇದೀಗ ಇದೇ ಅರುಣ್ ಶೌರಿ, ಯಾವ ಹಿಂದುತ್ವದ ಉಗ್ರ ಪ್ರತಿಪಾದಕ ಹಾಗೂ 1923ರಲ್ಲಿ ಹಿಂದೂ ಧರ್ಮದ ಎದುರು ಹಿಂದುತ್ವ ಎಂಬ ಪದವನ್ನು ಮೊಟ್ಟ ಮೊದಲು ಬಳಸಿ ಧರ್ಮವನ್ನು ರಾಜಕೀಯ ಅಧಿಕಾರ ಗಳಿಸುವ ಸಾಧನವನ್ನಾಗಿ ಹರಿತಗೊಳಿಸಿದರೋ , ಮತ್ತು ಇದೇ ವ್ಯಕ್ತಿಯ ವಿಚಾರಗಳನ್ನೇ ಬಂಡವಾಳ ಮಾಡಿಕೊಂಡು ಕಳೆದ ಮೂರು ಚುನಾವಣೆಗಳನ್ನು ಗೆದ್ದು ಹನ್ನೊಂದು ವರ್ಷಗಳಿಂದ ದೇಶವನ್ನು ಆಳುತ್ತಿರುವ ಬಿಜೆಪಿ ನಾಯಕರ ಮನೆ ದೇವರು ಎನಿಸಿಕೊಂಡಿದ್ದಾರೋ ಅದೇ ವಿನಾಯಕ ದಾಮೋದರ ಸಾವರ್ಕರ್ ಕುರಿತಾದ ಸತ್ಯಾಂಶಗಳನ್ನು “ ದ ನ್ಯೂ ಐಕಾನ್- ಸಾವರ್ಕರ್ ಅಂಡ್ ದ ಫ್ಯಾಕ್ಟ್ಸ್ “ ಕೃತಿಯಲ್ಲಿ ದೇಶದ ಮುಂದಿಟ್ಟಿದ್ದಾರೆ.

    ಖುದ್ದು ಸಾವರ್ಕರ್ ಅವರೇ ರಚಿಸಿದ ಕೃತಿಗಳಲ್ಲಿನ ಅಂಶಗಳು ಸೇರಿ ಸುಮಾರು 600ಕ್ಕೂ ಹೆಚ್ಚು ಸುಸಂಬದ್ಧ ಉದ್ಧೃತ ಭಾಗಗಳನ್ನು ಹಾಗೂ ಹೇಳಿಕೆಗಳನ್ನು ಉಲ್ಲೇಖಿಸಿ ವಿವರಿಸುವ ಮೂಲಕ ಇದನ್ನೊಂದು ಕೇವಲ ಪುಸ್ತಕವಾಗಿಯೂ ಅಲ್ಲದೇ ಒಂದು ಸಂಶೋಧನಾ ಕೃತಿ ಎಂಬಂತೆಯೂ ರೂಪಿಸಿ ಸಾವರ್ಕರ್ ಕುರಿತ ಜನಪ್ರಿಯ ಘಟನೆ ಹಾಗೂ ಹೇಳಿಕೆಗಳು ಮಿಥ್ಯೆ ಎಂದು ನಿರೂಪಿಸಿದ್ದಾರೆ ಎಂದು ವಿವರಿಸಲಾಗುತ್ತಿದೆ.

    ಮಹಾತ್ಮ ಗಾಂಧಿ ಹತ್ಯೆ ಸಂಚಿನ ಆಪಾದಿತರಾಗಿ ಸಾಕ್ಷಿಗಳ ಕೊರತೆಯಿಂದ ಬಚಾವಾದ ಸಾವರ್ಕರ್ ಕುರಿತ ಈ ಹೊಸ ಪುಸ್ತಕವನ್ನು ಗಾಂಧಿ ಅವರನ್ನು ಗುಂಡಿಟ್ಟು ಕೊಂದ ಜನವರಿ 30ರಂದೇ ಬಿಡುಗಡೆ ಮಾಡಲು ದಿನ ನಿಗದಿಯಾಗಿತ್ತಾದರೂ, ಈ ಪುಸ್ತಕ ಬಿಡುಗಡೆಯನ್ನು ಒಂದು ದಿನ ಮುಂದಕ್ಕೆ ಹೋಗುವಂತೆ ಮಾಡಲಾಯಿತು. ಆದರೆ ಈ ಕೃತಿ ಬಿಡುಗಡೆಗೆ ಮುನ್ನಾ ದಿನಗಳಿಂದಲೇ ಹೆಚ್ಚು ಪ್ರಚಾರಕ್ಕೆ ಬಂದಿದೆ. ಬಹುಪಾಲು ಎಲ್ಲ ಸ್ವತಂತ್ರ ಮಾಧ್ಯಮಗಳು ಹಾಗೂ ಯೂ ಟ್ಯೂಬ್ ಚಾನೆಲ್ಗಳು ಈ ಕೃತಿ ಕುರಿತು ಲೇಖಕ ಅರುಣ್ ಶೌರಿ ಅವರೊಂದಿಗೆ ಮಾತನಾಡಿವೆ. ದೇಶ ಭಕ್ತ ಆಕಾಶ್ ಬ್ಯಾನರ್ಜಿಯಂತೂ ಇಡೀ ಪುಸ್ತಕವನ್ನು ಖುದ್ದು ಓದಿರುವುದಾಗಿ ಹೇಳಿ, ಪುಟ ಪುಟಗಳಿಗೆ ಬಣ್ಣ ಬಣ್ಣದ ಫ್ಲಾಗ್‌ಗಳನ್ನು ಸಿಕ್ಕಿಸಿ ಲೇಖಕರಿಗೆ ತೋರಿಸುತ್ತಾ ಚರ್ಚೆ ನಡೆಸಿದ್ದು ಗಮನ ಸೆಳೆಯಿತು.

      ಮೊಟ್ಟ ಮೊದಲಿಗೇ ಮಹಾತ್ಮ ಗಾಂಧಿ ಹತ್ಯೆ ಮಾಡಿದ ನಾಥೂರಾಂ ಗೋಡ್ಸೆಯ ಅಪರಾಧಕ್ಕೂ ತನಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂಬುದನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡುವಲ್ಲಿ ಸಾವರ್ಕರ್ ಯಶಸ್ವಿಯಾಗಿ ಜೈಲು ಶಿಕ್ಷೆಯಿಂದ ತಪ್ಪಿಸಿಕೊಂಡರೂ ಅವರು ಅವತ್ತು ನೀಡಿದ ಹೇಳಿಕೆ ಹೇಗೆ ಸುಳ್ಳಿನ ಸರಮಾಲೆಯಾಗಿತ್ತು ಎಂಬುದನ್ನು ಈ ಕೃತಿಯಲ್ಲಿ ಅರುಣ್ ಶೌರಿ ಆಧಾರ ಸಹಿತ ಸಾಬೀತು ಪಡಿಸಿದ್ದಾರೆ ಎಂದು ವಿಮರ್ಶಕರು ಹೇಳುತ್ತಿದ್ದಾರೆ. ಈ ವಿಚಾರದಲ್ಲಿ ಅರುಣ್ ಶೌರಿ ಪೂರ್ವಗ್ರಹ ಪೀಡಿತ ಲೇಖಕ ಎಂದು ಹೇಳುವಂತಿಲ್ಲ. ಇತರ ಪ್ರಗತಿಪರ ಲೇಖಕರಂತೆ, ಸಾಮಾಜಿಕ ಕಾರ್ಯಕರ್ತರಂತೆ ಅರುಣ್ ಶೌರಿ ಜೀವನದ ಆರಂಭಿದಿಂದ ಇಂದಿನವರೆಗೂ ಆರ್‌ಎಸ್‌ಎಸ್ ಹಾಗೂ ಬಿಜೆಪಿಯನ್ನು ಟೀಕೆ ಮಾಡುತ್ತಲೇ ಬಂದವರಲ್ಲ. ಬದಲಿಗೆ ಅದೇ ಆರ್‌ಎಸ್‌ಎಸ್ ಕೃತ್ಯಗಳನ್ನು ಸಮರ್ಥಿಸುತ್ತ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿ ಇದ್ದು ಬಂದವರು.

    ಏಕೆಂದರೆ ಈ ಶೌರಿ ಇದೇ ಕೃತಿಯಲ್ಲಿ ಹೇಗೆ ಸಾವರ್ಕರ್ ಹಿಂದೂ ಸಮಾಜದ ಅಸ್ಪೃಶ್ಯತೆಯ ವಿರುದ್ದ ಹೋರಾಡಿದರು, ಅಸ್ಪೃಶ್ಯ ಜಾತಿಗಳಲ್ಲೇ ಇರುವ ಮೇಲು ಕೀಳು ನಡೆಗಳನ್ನು ಕಟುವಾಗಿ ಟೀಕಿಸಿದರು. ಅಂಡಮಾನ್ ಜೈಲಿನಲ್ಲಿ ಬಂದಿಯಾಗಿ ದಶಕ ಕಳೆದು ಹೊರಬರುವ ತನಕ ಹಿಂದೂ ಮುಸ್ಲಿಂ ಐಕ್ಯತೆ ಕಾಪಾಡುವಂತೆ ಅದೆಷ್ಟರ ಮಟ್ಟಿಗೆ ಪ್ರತಿಪಾದಿಸುತ್ತಿದ್ದರು ಎಂಬುದನ್ನು ನಿರೂಪಿಸಿದ್ದಾರೆ.

    ಇವತ್ತು ಗೋವು ಬಿಜೆಪಿಯ ಪ್ರಮುಖ ಸಂಕೇತಗಳಲ್ಲಿ ಒಂದು. ಗೋಹತ್ಯೆ , ಗೋ ಭಕ್ಷಣೆ ವಿರೋಧ ಹಾಗೂ ಗೋ ರಕ್ಷಣೆ ಆರ್‌ಎಸ್‌ಎಸ್ ಹಾಗೂ ಅದರ ಅಂಗ ಸಂಸ್ಥೆಗಳ ಪ್ರಮುಖ ಆಯುಧವಾಗಿರುವಾಗ, ಅಂದು ಸಾವರ್ಕರ್ ದನಗಳು ಇತರ ಕುರಿ, ಮೇಕೆ, ಕುದುರೆಗಳಂತೆಯೇ ಮನುಷ್ಯರ ಬಳಕೆಗೆ ಇರುವ ಒಂದು ಪ್ರಾಣಿ, ಗೋವನ್ನು ಹಾಲು, ಸಗಣಿ ಹಾಗೂ ಮಾಂಸಕ್ಕಾಗಿ ಬಳಸುವುದರಲ್ಲಿ ತಪ್ಪೇನಿಲ್ಲ ಎಂದು ಪ್ರತಿಪಾದಿಸಿದ್ದರು ಎಂದೂ ಅರುಣ್ ಶೌರಿ ದಾಖಲಿಸುತ್ತಾರೆ. ಹೀಗೆ ಹೇಳುವ ಮೂಲಕ ಇಂದಿನ ಬಿಜೆಪಿ ಗೋವನ್ನು ಓಟು ತರುವ ಬಂಡವಾಳವಾಗಿ ಬಳಸಿಕೊಳ್ಳುತ್ತಿರುವುದನ್ನು ಟೀಕಿಸುತ್ತಾರೆ.

    ಸಾವರ್ಕರ್ ಅವರನ್ನು ಮೇಲೆತ್ತುವ ಹಾಗೂ ಮಹಾತ್ಮ ಗಾಂಧಿಯ ಮಹತ್ವ ಮತ್ತು ಪ್ರಭಾವವನ್ನು ತಗ್ಗಿಸುವ ಉದ್ದೇಶದಿಂದ ಆರ್‌ಎಸ್‌ಎಸ್ ಸಂಘ ಪರಿವಾರವು ಸಾವರ್ಕರ್ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರಷ್ಟೇ ಅಪ್ರತಿಮ ದೇಶ ಭಕ್ತ ಅಂತ ಪದೇ ಪದೇ ಹೇಳುತ್ತ ಅದನ್ನೇ ನಿಜವೆಂದು ನಂಬಿಸಲು ಹೆಣಗುತ್ತಿದೆಯೋ ಅವರ ಇಡೀ ದುಸ್ಸಾಹಸವನ್ನು ಪ್ರವಾಹದಲ್ಲಿ ಕೊಚ್ಚಿ ಹೋಗುವಂತೆ ಅರುಣ್ ಶೌರಿ ಈ ಕೃತಿಯಲ್ಲಿ ಮಾಡಿದ್ದಾರೆ. 1911ರಿಂದ 1921ರ 10 ವರ್ಷಗಳ ಕಾಲ ದೂರದ ಅಂಡಮಾನ್ ಜೈಲಿನಲ್ಲಿ ಬಂದಿಯಾಗಿ ಚಿತ್ರ ಹಿಂಸೆ ಅನುಭವಿಸಿದ ಸಾವರ್ಕರ್ ಜೈಲಿನಿಂದ ಹೇಗಾದರೂ ಸರಿ ಹೊರಬರಬೇಕು ಮತ್ತು ಹಾಗೆ ಹೊರ ಬಂದ ಬಳಿಕ ಈ ಮೊದಲಿನಂತೆ ಬ್ರಿಟಿಷರ ವಿರುದ್ಧ ಹೋರಾಡಬೇಕು ಎಂಬ ಕ್ರಾಂತಿಕಾರಿ ಉದ್ದೇಶದಿಂದಲೇ ಅವರಿಗೆ ಮನಸ್ಸಿಲ್ಲದೇ ಇದ್ದರೂ ಬ್ರಿಟಿಷರಿಗೆ ಒಂದಲ್ಲ ಎರಡಲ್ಲ ಒಂಬತ್ತು ಸಲ ಕ್ಷಮಾದಾನ ಪತ್ರವನ್ನು ಬರೆದರು ಎಂಬ ಅವರ ಇವತ್ತಿನ ಅಧಿಕಾರದಾಹಿ ಭಕ್ತರ ಘೋಷಣೆಗಳು, ಪ್ರತಿಪಾದನೆಗಳು ನಿಜಕ್ಕೂ ಹುಸಿ ಎಂಬುದನ್ನು ಅರುಣ್ ಶೌರಿ ಮನವರಿಕೆ ಮಾಡಿಕೊಟ್ಟಿದ್ದಾರೆ.

     ಸಾವರ್ಕರ್ ಅಂಡಮಾನ್ ಜೈಲಿನಿಂದ ಹೊರ ಬಂದು ಅವರೂರು ಮಹಾರಾಷ್ಟ್ರದ ರತ್ನಗಿರಿಯಲ್ಲಿ ನೆಲೆಸಿದ ಮೇಲೂ ಉಳಿದ ಅವರ ಸಶಕ್ತ ಜೀವಿತಾವಧಿಯಲ್ಲಿ ಸ್ವಾತಂತ್ರ‍್ಯಕ್ಕಾಗಿ ಹೋರಾಟ ಮಾಡಲಿಲ್ಲ, ಅಲ್ಲದೇ ಬ್ರಿಟಿಷರ ದಾಸನಂತೆಯೇ ನಡೆದುಕೊಂಡರು ಎಂಬುದನ್ನು ಅರುಣ್ ಶೌರಿ ಉಲ್ಲೇಖಗಳ ಸಮೇತ ದಾಖಲಿಸಿದ್ದಾರೆಂದೂ ಹೇಳಲಾಗಿದೆ.

    ಒಂದು ಹಂತದಲ್ಲಿ ಇಂಡಿಯಾ ವಿಭಜನೆಗೆ ನೇರ ಕಾರಣರು ಎಂದು ಇತಿಹಾಸದಲ್ಲಿ ದಾಖಲಾಗಿರುವ ಪಾಕಿಸ್ತಾನದ ಮೊದಲ ಅಧ್ಯಕ್ಷ ಮಹಮದ್ ಆಲಿ ಜಿನ್ನಾಗಿಂತ, ದ್ವಿ ರಾಷ್ಟ್ರ ಸಿದ್ದಾಂತ ಮಂಡಿಸಿದ ಸಾವರ್ಕರ್ ಕೂಡಾ ಭಾರತದ ವಿಭಜನೆಗೆ ಹೆಚ್ಚಿನ ಪ್ರಮಾಣದಲ್ಲಿ ಇಂಬು ನೀಡಿದರು ಎಂಬುದನ್ನೂ ಈ ಕೃತಿ ಬೆಳಕಿಗೆ ತಂದಿದೆ ಎನ್ನಲಾಗಿದೆ.

    ಅಂಡಮಾನ್ ಜೈಲಿನಿಂದ ಕ್ಷಮಾ ಭಿಕ್ಷೆ ಬೇಡಿ ಹೊರಬರುವಂತೆ ಸ್ವತಃ ಮಹಾತ್ಮ ಗಾಂಧಿ ಅವರೇ ಸಾವರ್ಕರ್ ಅವರಿಗೆ ಸೂಚಿಸಿದರು ಎಂಬ ಮತ್ತೊಂದು ಹುಸಿ ಪ್ರಚಾರವನ್ನು ಭಕ್ತರು ಮಾಡುತ್ತಿದ್ದಾರೆ, ಸಾವರ್ಕರ್ ಅವರು ತಮ್ಮನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಕ್ಷಮಾ ಮನವಿ ಪತ್ರವನ್ನು ಜೈಲು ಅಧಿಕಾರಿಗೆ ಸಲ್ಲಿಸಿದ್ದು 1913ರ ನವೆಂಬರ್ 14ರಂದು, ಆದರೆ ಮಹಾತ್ಮ ಗಾಂಧಿ ದಕ್ಷಿಣ ಆಫ್ರಿಕಾದಿಂದ ಇಂಡಿಯಾ ದೇಶಕ್ಕೆ ಹಿಂದಿರುಗಿದ್ದು 1915ರ ಜನವರಿ ತಿಂಗಳಲ್ಲಿ . ಇಂಥ ವಾಸ್ತವಾಂಶವನ್ನು ಅರುಣ್ ಶೌರಿ ಈ ಕೃತಿಯಲ್ಲಿ ಬಯಲಿಗೆಳೆದಿದ್ದಾರೆಂದು ಹೇಳಲಾಗಿದೆ.

   ಹಡಗಿನಿಂದ ಸಮುದ್ರಕ್ಕೆ ಹಾರಿ ಕಿಲೋಮೀಟರ್ ಗಟ್ಟಲೆ ಈಜಿ ದಡ ಸೇರಿದರು ಎಂಬ ದಂತ ಕತೆಯೂ ಹುಸಿ ಎಂಬುದನ್ನು ದಾಖಲೆ ಆಧರಿಸಿ ಶೌರಿ ದಾಖಲಿಸಿದ್ದಾರೆ. ಬಂದಿ ಸಾವರ್ಕರ್ ಅವರಿದ್ದ ಹಡಗು ಲಂಗರು ಹಾಕಿತ್ತು. ಹಡಗು ನಿಂತ ಸ್ಥಳದಿಂದ ಬಂದರು ಕಟ್ಟೆ ಕೇವಲ 10-12 ಅಡಿ ಸಮೀಪದಲ್ಲಿತ್ತು ಎಂದು ಘಟನೆ ನಡೆದ ಸ್ಥಳದಲ್ಲಿದ್ದ ಪೊಲೀಸರು ದಾಖಲಿಸಿದ್ದಾರಂತೆ.

   ಸಾವರ್ಕರ್ 1857ರ ಸಿಪಾಯಿ ದಂಗೆಯಲ್ಲಿ ಹಿಂದೂ ಮುಸ್ಲಿಮರ ಒಗ್ಗಟ್ಟನ್ನು ಮೆಚ್ಚಿ ಕೃತಿ ರಚಿಸುವ ಸಾವರ್ಕರ್ ಅಂಡಮಾನ್ ಜೈಲಿನಿಂದ ಹೊರಬಂದ ನಂತರ ಮುಸ್ಲಿಮರನ್ನು ತೀವ್ರವಾಗಿ ದ್ವೇಷಿಸಿದ್ದನ್ನೇ ಬಂಡವಾಳ ಮಾಡಿಕೊಂಡು ಅಧಿಕಾರ ಹಿಡಿಯುವ ಸಾಧನವಾಗಿ ಬಳಸಿಕೊಂಡಿರುವುದನ್ನೂ ಹಾಗೂ ಗೋವು ಆರಾಧಿಸುವ ಪ್ರಾಣಿ ಅಲ್ಲ, ಗೋವು ಪವಿತ್ರವಲ್ಲ, ಮನುಷ್ಯನ ಬಳಕೆಗಿರುವ ಇತರ ಎಲ್ಲ ಪ್ರಾಣಿಗಳಂತೆ ಸಾಧಾರಣ ಜಾನುವಾರು ಎಂಬ ಅವರ ನಿಲುವನ್ನು ಜಾಣ ಮರೆವಿನಂತೆ ನಿರ್ವಹಿಸುತ್ತ ಗೋವನ್ನೇ ಮುಂದಿಟ್ಟುಕೊಂಡು ಮುಸ್ಲಿಂ ದ್ವೇಷಕ್ಕೆ ಆಧಾರ ಮಾಡಿಕೊಂಡಿರುವ ಆ ಮೂಲಕ ಚುನಾವಣೆಗಳನ್ನು ಗೆಲ್ಲುತ್ತಿರುವ ಇವತ್ತಿನ ಆರ್‌ಎಸ್‌ಎಸ್ ಹಾಗೂ ಬಿಜೆಪಿ ಮತ್ತಿತರ ಪರಿವಾರ ಸಂಘಟನೆಗಳಿಗೆ ಅರುಣ್ ಶೌರಿ ಅವರ ಹೊಸ ಪುಸ್ತಕ ತೊಂದರೆ ಕೊಡುವುದರಲ್ಲಿ ಅನುಮಾನವೇ ಇಲ್ಲ . ಈ ನಿಟ್ಟಿನಲ್ಲಿ ಸ್ಥಾಪಿತ ಹುಸಿ ಸತ್ಯಗಳನ್ನು ಒಡೆಯುವ ವಿಗ್ರಹ ಭಂಜಕ ಅರುಣ್ ಶೌರಿ ಅವರ ಈ ಹೊಸ ಕೃತಿ ಯಶಸ್ಸು ಕಾಣಲಿದೆ ಎನ್ನಬಹುದು.

    ಮಹಾತ್ಮ ಗಾಂಧಿಯವರನ್ನು ನಡೆದಾಡುವ ಪ್ಲೇಗ್ ( ಮಾರಣಾಂತಿಕ ಸಾಂಕ್ರಾಮಿಕ ಅಂಟು ರೋಗ) ಎಂದು ಬಣ್ಣಿಸಿದ ವಿ.ಡಿ. ಸಾವರ್ಕರ್ ಮಹಾಯುದ್ದದಲ್ಲಿ ಬ್ರಿಟಿಷರ ಪರ ನಿಲ್ಲುತ್ತಾರೆ. ಅಂತಿಮವಾಗಿ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ತಮ್ಮವರಾರೂ ಭಾಗವಹಿಸಬಾರದೆಂದು ಹೇಳುತ್ತ, ಬ್ರಿಟಿಷರು ಈ ದೇಶದಿಂದ ಹೋಗಿ ಬಿಟ್ಟರೆ ಇಲ್ಲಿ ಜನಗಳ ನಡುವೆ ಭಾರೀ ಹಿಂಸಾಚಾರ ನಡೆದುಬಿಡುತ್ತದೆ( ಸಿವಿಲ್ ವಾರ್) ಆದ್ದರಿಂದ ನೀವು ಇಲ್ಲೇ ಈ ದೇಶದಲ್ಲೇ ಇರಿ ಎಂಬುದಾಗಿ ಸಾವರ್ಕರ್ ಮನವಿ ಮಾಡಿಕೊಂಡ ಸಂಗತಿಗಳನ್ನೆಲ್ಲ ಮಂಡಿಸುವ ಮೂಲಕ ಅರುಣ್ ಶೌರಿ ಪ್ರಸ್ತುತ ಸಾವರ್ಕರ್ ಅವರನ್ನು ಮಹಾತ್ಮ ಗಾಂಧಿ ಅವರನ್ನು ಮರೆಸಿ ಅವರ ಸ್ಥಾನದಲ್ಲಿ ಮರುಸ್ಥಾಪಿಸ ಹೊರಟಿರುವ ಸಂಘ ಪರಿವಾರದ ಪ್ರಯತ್ನವನ್ನು ಅಲ್ಲಗೆಳೆದಿದ್ದಾರೆಂಬುದು ಲೇಖಕರ ಮಾತುಗಳಿಂದಲೇ ತಿಳಿದು ಬರುತ್ತದೆ.

   ಫ್ಯಾಸಿಸ್ಟರಾದ ಇಟಲಿಯ ಸರ್ವಾಧಿಕಾರಿ ಮುಸಲೊನಿ ಹಾಗೂ ಜರ್ಮನಿಯ ನರ ಹಂತಕ ಅಡಾಲ್ಫ್ ಹಿಟ್ಲರ್ ಅವರ ಆರಾಧಕರಾಗಿದ್ದ ಸಾವರ್ಕರ್ ಪ್ರಜಾಪ್ರಭುತ್ವದ ವಿರೋಧಿಯಾಗಿದ್ದರು ಹಾಗೂ ಏಕ ವ್ಯಕ್ತಿ ಸರ್ಕಾರದ ಪರವಾಗಿದ್ದರು. ತಮ್ಮ 80ನೇ ವರ್ಷದಲ್ಲಿ ಭಾರತದ ಇತಿಹಾಸ ಕುರಿತು ರಚಿಸಿದ ಪುಸ್ತಕದಲ್ಲಿ ಸಾವರ್ಕರ್ ಇಸ್ಲಾಂ ಮತ್ತು ಕ್ರಿಶ್ಚಿಯಾನಿಟಿಗಳು ಈ ನೆಲದಲ್ಲಿ ಎಂದಿಗೂ ಸಹಿಷ್ಣು ಧರ್ಮಗಳಾಗಿರಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸುತ್ತಾರೆ. ಮುಸ್ಲಿಮರ ಪರವಾಗಿದ್ದ ಎನ್ನುವ ಕಾರಣಕ್ಕೆ ಶಿವಾಜಿಯನ್ನೂ ಈ ಕೃತಿಯಲ್ಲಿ ಸಾವರ್ಕರ್ ಕಟುವಾಗಿ ಟೀಕಿಸುತ್ತಾರೆ. ಹೀಗೆ ಮುಸ್ಲಿಮರನ್ನು ಮತಾಂಧರೆಂದು ಬಣ್ಣಿಸುತ್ತಲೇ ಪಾಕಿಸ್ತಾನದ ಹಸಿರು ಬಣ್ಣದ ಮತಾಂಧ ಸರ್ಕಾರಗಳಂತೆಯೇ ಬಹು ಸಂಸ್ಕೃತಿಯ, ಬಹುಜನರ ನೆಲೆಯಾದ ಇಂಡಿಯಾದಲ್ಲಿ ಕೇಸರಿ ಬಣ್ಣದ ಮತಾಂಧ ಸರ್ಕಾರ ಬರಬೇಕು ಎಂದು ಆಶಿಸುತ್ತಾರೆ. ಈ ಮೂಲಕ ಹಿಂಸೆಯನ್ನು ಪ್ರತಿಪಾದಿಸುತ್ತಾರೆ.

   ಹೀಗೆ ಇಂಥ ಸಾವರ್ಕರ್ ಅವರನ್ನು ವೈಭವೀಕರಿಸಿಕೊಂಡೇ 2002ರಿಂದ ಬಿಜೆಪಿ ಗುಜರಾತಿನಿಂದ ದಿಲ್ಲಿವರೆಗೆ ಬಂದು ತಳವೂರಿಕೊಂಡಿದೆ. ಎಲ್ಲ ಬಗೆಯ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ನ್ಯಾಯಾಲಯಗಳೂ ಸೇರಿ ಎಲ್ಲ ಬಗೆಯ ತನಿಖಾ ಸಂಸ್ಥೆಗಳ ದುರ್ಬಳಕೆ ಹಾಗೂ ಚುನಾವಣಾ ಅಕ್ರಮಗಳ ಮೂಲಕ ಅಘೋಷಿತ ತುರ್ತು ಪರಿಸ್ಥಿತಿ ಜಾರಿಗೆ ತರಲಾಗಿದೆ ಎಂದು ಆತಂಕ ವ್ಯಕ್ತಪಡಿಸಿರುವ ಲೇಖಕ ಅರುಣ್ ಶೌರಿ, ಕಟ್ಟ ಕಡೆಯದಾಗಿ ಮಾಡಿಕೊಂಡಿರುವ ಮನವಿ ಏನೆಂದರೆ “ ಹಿಂದೂ ಧರ್ಮವನ್ನು ಹಿಂದುತ್ವದಿಂದ ರಕ್ಷಿಸಿ”

 *****

     ಅರುಣ್ ಶೌರಿ ಅವರ ಜೀವನ ಕುರಿತ ಅವರು ಎಂದೂ ಎಲ್ಲೂ ಅನುಕಂಪ ಗಿಟ್ಟಿಸುವ ಸಲುವಾಗಿ ಹೇಳಿಕೊಂಡಿಲ್ಲದ ಸಂಗತಿಯನ್ನು ಇಲ್ಲಿ ಹೇಳಲೇಬೇಕು ಅನಿಸುತ್ತಿದೆ.

    ಅರುಣ್ ಶೌರಿ ಅವರಿಗೀಗ 84 ವರ್ಷ , ಅವರ ಪತ್ನಿ ಅನಿತಾ ಪಾರ್ಕಿನ್ ಸನ್ ಖಾಯಿಲೆಯಿಂದ ಬಳಲುತ್ತಿದ್ದಾರೆ. ಅವರ ಒಬ್ಬನೇ ಮಗ ಆದಿತ್ಯನಿಗೆ ಜನಿಸುವಾಗಲೇ ಮೆದುಳು ನರ ದೌರ್ಬಲ್ಯ. ಆತ ನಮ್ಮ ನಿಮ್ಮಂತೆ ನಡೆದಾಡುವುದಿಲ್ಲ. ವೀಲ್ ಚೇರ್ ಆಶ್ರಿತ, ಆತನ ಬಲಗಾಲು ಮತ್ತು ಬಲಗೈ ಚಲಿಸುವುದಿಲ್ಲ. ಎಡಗಣ್ಣಿಂದ ವಾರೆಯಾಗಿ ತುಸು ನೋಡಬಲ್ಲ. ಆತ ಅಕ್ಕಪಕ್ಕದ ಮೂರು ಮನೆಗಳಿಗೆ ಕೇಳುವಷ್ಟು ಗಟ್ಟಿಯಾಗಿ ನಗುತ್ತಾನೆ. ಆದರೆ ತನ್ನ ನಗು ಅಷ್ಟು ದೊಡ್ಡ ದನಿಯಲ್ಲಿದೆ ಎಂಬುದು ಆತನಿಗೆ ಅರಿವಾಗುವುದಿಲ್ಲ. ಇಂತಾ ಮಗನ ಜೊತೆ ಅರುಣ್ ಶೌರಿ 40 ವರ್ಷಗಳಿಂದ ಜೀವನ ಸಾಗಿಸುತ್ತಿದ್ದಾರೆ. ಮಗನಿಗೆ ಮದುವೆ ಮಾಡಲು ಹೆಣ್ಣು ಹುಡುಕುವ, ಆನಂತರ ಜನಿಸಬಹುದಾದ ಮೊಮ್ಮಗುವಿಗೆ ತೊಟ್ಟಿಲು ತರುವ ಹಂಬಲ ಅರುಣ್ ಶೌರಿ ಅವರಿಗಿಲ್ಲವಾದರೂ, 140 ಕೋಟಿ ದಾಟಿರುವ ಇಂಡಿಯಾದ ಜನತೆಯ ನೆಮ್ಮದಿಗಾಗಿ “ ಹಿಂದೂ ಧರ್ಮವನ್ನು ಹಿಂದುತ್ವದಿಂದ ರಕ್ಷಿಸಿ” ಎಂದು ಮನವಿ ಮಾಡಿಕೊಳ್ಳುವ ಅನಿವಾರ್ಯತೆ ಒದಗಿ ಬಂದಿದೆ.