ಜಾತಿ ಆಧಾರಿತ ಹಿಂಸೆ, ಕೊಲೆಗಳು ನಿಲ್ಲಬೇಕು

ಜಾತಿ ಆಧಾರಿತ ಹಿಂಸೆ, ಕೊಲೆಗಳು ನಿಲ್ಲಬೇಕು

 

ವರ‍್ತಮಾನ

ಡಾ.ಆಶಾ ಬಗ್ಗನಡು


     ಕಳೆದ ಭಾನುವಾರ ಮಧುಗಿರಿ ತಾಲೂಕಿನ ಕಸಾಪುರದಲ್ಲಿ ಪರಿಶಿಷ್ಟ ಜಾತಿಗಳಲ್ಲಿ ಅಸ್ಫೃಶ್ಯರೆಂದು ಈ ಸಮಾಜ ಪರಿಗಣಿಸಿರುವ ಮಾದಿಕ ಸಮುದಾಯದ ಯುವಕ ಸಿಂಹಾದ್ರಿಯನ್ನು ಕೊಂದಿದ್ದಾನೆಂದು ಆರೋಪಿಸಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಯುವಕನನ್ನು ಬಂಧಿಸಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಕಾಳಜಿಯ ಬರಹವಿದು. 

    ಭಾರತದಲ್ಲಿ ಸಂವಿಧಾನ ಅಸ್ಪೃಶ್ಯತೆಯನ್ನು ರದ್ದುಪಡಿಸಿ ದಶಕಗಳೇ ಕಳೆದಿದ್ದರೂ, ಜಾತಿ ಆಧಾರಿತ ಅಧಿಕಾರ, ಅವಮಾನ, ಹಿಂಸೆ ಮತ್ತು ಸಾಮಾಜಿಕ ಅಧೀನತೆಗಳು ಇನ್ನೂ ಜೀವಂತವಾಗಿದೆ. ಕರ್ನಾಟಕದಲ್ಲಿ ವರ್ಷದಿಂದ ವರ್ಷಕ್ಕೆ ದಲಿತರ ಮೇಲಿನ ದೌರ್ಜನ್ಯ ಮತ್ತು ಹತ್ಯೆಗಳ ಪ್ರಕರಣಗಳು ಹೆಚ್ಚುತ್ತಿದ್ದು ಮೂರು ವರ್ಷಗಳಲ್ಲಿ 327 ದಲಿತರ ಹತ್ಯೆ, 620 ದಲಿತ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ಕಾನೂನುಗಳ ಅಸ್ತಿತ್ವಕ್ಕಿಂತಲೂ ಸಾಮಾಜಿಕ ನ್ಯಾಯದ ಅರಿವು ಮತ್ತು ಮಾನವೀಯ ಮನೋಭಾವದ ಬಲವರ್ಧನೆ ಎಷ್ಟು ಅಗತ್ಯ ಎಂಬ ಪ್ರಶ್ನೆಯನ್ನು ಎತ್ತುತ್ತಿವೆ. ದಲಿತನ ಜೀವವೂ ಉಳಿದ ಎಲ್ಲರ ಜೀವದಷ್ಟೇ ಅಮೂಲ್ಯ ಎಂಬ ಸರಳ ಸತ್ಯವನ್ನು ಸಮಾಜ ಇನ್ನೂ ಗಟ್ಟಿಯಾಗಿ ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ ಇದ್ದು ಜಾತಿಯ ಗುರುತು ಇನ್ನೂ ಒಬ್ಬನ ಬದುಕಿನ ಹಕ್ಕನ್ನೇ ನಿರ್ಧರಿಸುವ ಮಟ್ಟಕ್ಕೆ ಉಳಿದಿರುವುದು ಮಾತ್ರ ದುರಂತ.


     ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನಲ್ಲಿ ದಲಿತರ ಮೇಲೆ ನಡೆಯುತ್ತಿರುವ ಸರಣಿ ಹಿಂಸಾಚಾರದ ಘಟನೆಗಳು ಈ ಜಾತಿ ನೆಲೆಯ ಪ್ರಶ್ನೆಯನ್ನು ಮತ್ತಷ್ಟು ಗಂಭೀರಗೊಳಿಸಿವೆ. ತಾಲ್ಲೋಕಿನ ಐ.ಡಿ ಹಳ್ಳಿ, ಪೋಲೆನಹಳ್ಳಿಯ ಪ್ರಕರಣದ ಬಳಿಕ ಇತ್ತೀಚೆಗಷ್ಟೇ ಕಸಾಪುರದಲ್ಲಿ ಸಿಂಹಾದ್ರಿ ಎಂಬ 17 ವರ್ಷದ ಯುವಕನ ಸಾವಿನ ಪ್ರಕರಣವೂ ಜಾತಿ ನಿಂದನೆಯ ಆರೋಪದೊಂದಿಗೆ ದಾಖಲಾಗಿದೆ. ಇಂತಹ ಘಟನೆಗಳನ್ನು ಕೇವಲ ವೈಯಕ್ತಿಕ ದ್ವೇಷ, ಕ್ಷಣಿಕ ಗಲಾಟೆ ಎಂದು ಮುಗಿಸಿಬಿಡುವುದು ಸುಲಭ. ಆದರೆ ಒಂದೇ ಪ್ರದೇಶದಲ್ಲಿ ಅದು ಒಂದು ಜಾತಿಯನ್ನು ಗುರಿಯಾಗಿಸಿಕೊಂಡು ಹಿಂಸೆ ಪದೇ ಪದೇ ಮರುಕಳಿಸುತ್ತಿದ್ದರೆ, ಅದರ ಸಾಮಾಜಿಕ ಬೇರುಗಳನ್ನು ಪ್ರಶ್ನಿಸಲೇ ಬೇಕಾಗುತ್ತದೆ. ಜಾತಿ ಮೇಲು–ಕೀಳಿನ ಮನಸ್ಥಿತಿ ಇನ್ನೂ ಜೀವಂತವಾಗಿರುವಾಗ, ಕಾನೂನಿನ ಸಮಾನತೆ ಮಾತ್ರ ಸಮಾಜದ ಸಮಾನತೆಯನ್ನು ಖಾತರಿಪಡಿಸಬಲ್ಲದೇ? ಅಪರಾಧಿಗೆ ಶಿಕ್ಷೆ ನೀಡುವುದು ನ್ಯಾಯದ ಅಂತ್ಯವಲ್ಲ ಇಂತಹ ಹಿಂಸೆಗೆ ಅವಕಾಶ ಮಾಡಿಕೊಡುವ ಸಾಮಾಜಿಕ ಮನಸ್ಥಿತಿಯನ್ನು ಬದಲಿಸುವುದೇ ದೊಡ್ಡ ಸವಾಲು.

    ಮಧುಗಿರಿಯ ಸರಣಿ ಹತ್ಯೆಗಳ ಮಟ್ಟಿಗೆಇನ್ನೊಂದು ಸೂಕ್ಷ್ಮವಾದ ಪ್ರಶ್ನೆಯೂ ಎದುರಾಗುತ್ತದೆ. ಜಾತಿ ವ್ಯವಸ್ಥೆಯಿಂದ ಐತಿಹಾಸಿಕವಾಗಿ ಶೋಷಿತರೆಂದು ಗುರುತಿಸಲ್ಪಡುವ ಸಮುದಾಯಗಳೊಳಗೇ ತಾರತಮ್ಯ ಮತ್ತು ಹಿಂಸೆ ಏಕೆ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಜಾತಿ ವ್ಯವಸ್ಥೆಯ ಕ್ರೌರ್ಯವನ್ನು ಮೇಲಿನಿಂದ ಕೆಳಕ್ಕೆ ಹರಿಯುವ ಅಧಿಕಾರದ ರೂಪದಲ್ಲಿ ನೋಡುತ್ತೇವೆ. ಆದರೆ ಅದರ ಇನ್ನೊಂದು ಕರಾಳ ಮುಖವೆಂದರೆ, ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳ ಒಳಗಡೆಯೂ ಜಾತಿ ಶ್ರೇಷ್ಠತೆಯ ಮನೋಭಾವ ಬೇರುಬಿಡುವುದು. ಶತಮಾನಗಳ ಅವಮಾನವನ್ನು ಅನುಭವಿಸಿದ ಸಮುದಾಯವೇ ಮತ್ತೊಂದು ಸಮುದಾಯವನ್ನು ‘ಕೀಳು’ ಎಂದು ನೋಡುವ ಸ್ಥಿತಿ, ಜಾತಿ ವ್ಯವಸ್ಥೆಯ ವಿಚಿತ್ರ ಯಶಸ್ಸು ಕೂಡ ಹೌದು. ಅದು ಕೇವಲ ದಮನಿತರನ್ನು ದಮನಿಸುವುದಿಲ್ಲ. ದಮನಿತರೂ ಮತ್ತೊಬ್ಬರ ಮೇಲೆ ಮೇಲುಗೈ ಸಾಧಿಸುವಂತೆ ಮನಸ್ಸನ್ನು ತರಬೇತುಗೊಳಿಸುತ್ತದೆ.


    ವಿಚಿತ್ರವೆಂದರೆ, ಅಂಚಿಗೆ ತಳ್ಳಲ್ಪಟ್ಟವನೂ ಕೆಲವೊಮ್ಮೆ ಮತ್ತೊಬ್ಬ ಅಂಚಿನವನನ್ನು ತನಗಿಂತ ಕೆಳಗೆ ನಿಲ್ಲಿಸುತ್ತಾನೆ. ನಿನ್ನೆ ತನ್ನ ಮೇಲೆ ಬಿದ್ದ ಅವಮಾನದ ನೆರಳನ್ನೇ ಇಂದು ಇನ್ನೊಬ್ಬನ ಮೇಲೆ ಬೀರುತ್ತಾನೆ. ತನ್ನ ಗಾಯವನ್ನು ಗುಣಪಡಿಸಿಕೊಳ್ಳುವ ಬದಲು, ಅದೇ ಗಾಯವನ್ನು ಮತ್ತೊಬ್ಬನ ದೇಹದ ಮೇಲೆ ಗುರುತಾಗಿಸಿ ಬಿಡುತ್ತಾನೆ. ‘ನಾನು ಅವನಿಗಿಂತ ಮೇಲಿನವನು’ ಎಂಬ ಒಂದು ಸಣ್ಣ ಭ್ರಮೆ, ಶತಮಾನಗಳ ಕೀಳರಿಮೆಗೆ ಕ್ಷಣಿಕ ಪರಿಹಾರ ನೀಡಬಹುದು. ಆದರೆ ಆ ಕ್ಷಣಿಕ ಪರಿಹಾರವೇ ಮತ್ತೊಬ್ಬ ಮನುಷ್ಯನ ಅವಮಾನವಾಗಿ ರೂಪುಗೊಂಡಾಗ, ಮುಕ್ತಿಯ ದಾರಿ ಮತ್ತೆ ಕತ್ತಲೆಯಾಗುತ್ತದೆ. ಪರಿಣಾಮವಾಗಿ ಸಮಾನತೆಯ ಹೋರಾಟವೇ ಒಳಜಾತಿ ಭೇದಗಳ ಮುಂದೆ ಕುಸಿದುಬಿಡುವ ಅಪಾಯವಿರುತ್ತದೆ. ಶೋಷಣೆಯ ವ್ಯವಸ್ಥೆಯನ್ನು ಜೊತೆಯಾಗಿ ನಿಂತು ಪ್ರಶ್ನಿಸಬೇಕಾದವರು ಪರಸ್ಪರರ ವಿರುದ್ಧ ನಿಂತಾಗ, ಬದುಕಿನ ಹಕ್ಕು, ಸಮಾನ ಅವಕಾಶಗಳಿಗಾಗಿ ನಡೆಯಬೇಕಾದ ಹೋರಾಟವು ಪರಸ್ಪರದ ಆರೋಪ–ಪ್ರತ್ಯಾರೋಪಗಳಲ್ಲಿ ಸಿಲುಕಿ, ಅನ್ಯಾಯದ ಮೂಲ ರಚನೆ ಅಚಲವಾಗಿಯೇ ಉಳಿಯುತ್ತದೆ. ಅದರ ಲಾಭವನ್ನು ಬಹುಪಾಲು ಪಡೆಯುವುದು ಅಸಮಾನತೆಯನ್ನು ಉಳಿಸಿಕೊಂಡಿರುವ ವ್ಯವಸ್ಥೆ.


   ಆದ್ದರಿಂದ ಜಾತಿ ನಿರ್ಮೂಲನೆ ಎಂದರೆ ಮೇಲ್ಜಾತಿಯ ಪ್ರಾಬಲ್ಯವನ್ನು ಪ್ರಶ್ನಿಸುವುದಷ್ಟೇ ಅಲ್ಲ, ಅಂಚಿನೊಳಗೆ ಉಳಿದಿರುವ ಶ್ರೇಷ್ಠತೆಯ ಭ್ರಮೆಯನ್ನೂ ಧೈರ್ಯವಾಗಿ ಎದುರಿಸುವುದು. ಅಂಚಿನ ಸಮುದಾಯಗಳ ಮುಕ್ತಿಯ ನಿಜವಾದ ಅರ್ಥ, ಮತ್ತೊಬ್ಬರನ್ನು ಕೆಳಗಿಳಿಸಿ ತಾನು ಮೇಲೇರಿಕೊಳ್ಳುವುದಲ್ಲ ಎಲ್ಲರೂ ಸಮಾನವಾಗಿ ನಿಲ್ಲುವ ಸಾಮಾಜಿಕ ನೆಲೆಯನ್ನು ನಿರ್ಮಿಸುವುದಾಗಿದೆ. ತನ್ನ ಅವಮಾನದ ನೆನಪನ್ನು ಮತ್ತೊಬ್ಬನ ಅವಮಾನಕ್ಕೆ ಆಯುಧವಾಗಿಸದೆ, ತನ್ನ ನೋವಿನಿಂದ ಮತ್ತೊಬ್ಬನ ನೋವನ್ನು ಗುರುತಿಸುವುದರಲ್ಲಿದೆ.

    ಜಾತಿ ನೆಲೆಯ ದೌರ್ಜನ್ಯಗಳು ನಡೆಯಲು ಕೇವಲ ಸಾಮಾಜಿಕ ಮೇಲರಿಮೆ ಮಾತ್ರವೇ ಕಾರಣವಾಗುವುದಿಲ್ಲ. ಸಾಮಾಜಿಕ ಮೌನ ,ಆಡಳಿತದ ನಿರ್ಲಕ್ಷ್ಯ, ತನಿಖಾ ಸಂಸ್ಥೆಗಳು ವಿಳಂಬ ನೀತಿ, ಕಾನೂನು ಜಾರಿಯಲ್ಲಿನ ವೈಫಲ್ಯವೂ ಇದರಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ರಾಜ್ಯದಲ್ಲಿ ದತ್ತಾಂಶದ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ 10,573 ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ 1,598 ಪ್ರಕರಣಗಳು ಸುಳ್ಳು ಎಂದು ಕಂಡುಬಂದಿವೆ, 47 ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ ಮತ್ತು 1,050 ಪ್ರಕರಣಗಳು ಆರೋಪ ಮುಕ್ತಗೊಳಿಸುವಿಕೆ ಅಥವಾ ಬಿಡುಗಡೆಯೊಂದಿಗೆ ಅಂತ್ಯಗೊಂಡಿವೆ. 2025ರಲ್ಲಿ ರಾಜ್ಯಾದ್ಯಂತ 2,412 ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ನಗರವು ಅತಿ ಹೆಚ್ಚು ಅಂದರೆ 261 ಪ್ರಕರಣಗಳನ್ನು ಹೊಂದಿದ್ದು, ನಂತರದ ಸ್ಥಾನಗಳಲ್ಲಿ ತುಮಕೂರು (139), ಬೆಳಗಾವಿ (128) ಮತ್ತು ರಾಯಚೂರು (121) ಇವೆ. 2023ರಲ್ಲಿ ದಲಿತರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ 1,272 ಪ್ರಕರಣಗಳಲ್ಲಿ ವಿಚಾರಣೆ ನಡೆದಿಲ್ಲ. ಈ ಸಂಖ್ಯೆ 2024ರಲ್ಲಿ 1,396, 2025ರಲ್ಲಿ 1,645ಕ್ಕೆ ಏರಿದ್ದು, 2026ರಲ್ಲಿ ಇದುವರೆಗೆ 330 ಪ್ರಕರಣಗಳು ವಿಚಾರಣೆಗೆ ಬಾಕಿ ಉಳಿದಿವೆ.


      ಅಪರಾಧ ಸಂಭವಿಸುವ ಮೊದಲೇ ಮುನ್ನೆಚ್ಚರಿಕೆಯ ಕ್ರಮಗಳು ಕೂಡಾ ದೌರ್ಜನ್ಯಗಳು ಘಟಿಸದ ಹಾಗೆ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅಪಾಯದ ಗ್ರಾಮಗಳನ್ನು ಗುರುತಿಸಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳವುದು. ಎಲ್ಲಾ ಸಮುದಾಯಗಳ ಪ್ರತಿನಿಧಿಗಳು ಮತ್ತು ತಙ್ಞರನ್ನೊಳಗೊಂಡಂತೆ ಶಾಂತಿ ಸಮಿತಿಗಳನ್ನು ಪರಿಣಾಮಕಾರಿಯಾಗಿ ರೂಪಿಸುವುದು ಅಪರಾಧಗಳನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮಧುಗಿರಿ ಭಾಗದಲ್ಲಿ ಈ ಹಿಂದೆಯೂ ದಲಿತರ ಮೇಲಿನ ಹಲ್ಲೆ ಹಾಗೂ ಕೊಲೆ ಪ್ರಕರಣಗಳು ವರದಿಯಾಗಿದ್ದರೂ, ಇಂತಹ ಸೂಕ್ಷ್ಮ ಪ್ರದೇಶಗಳಲ್ಲಿ ದಲಿತರ ಸುರಕ್ಷತೆಗೆ ಶಾಶ್ವತ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ವಿಫಲವಾಗಿರುವುದು ಅಲ್ಲಿಯ ಸರಣಿ ಹತ್ಯೆಗಳಿಗೆ ಪ್ರಮುಖ ಕಾರಣವಾಗಿದ್ದು. ಸೂಕ್ಷ ಪ್ರದೇಶಗಳಲ್ಲಿ ನೆಡೆಯುವ ಸಾಮಾಜಿಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪೋಲಿಸ್ ಬಿಗಿ ಭದ್ರತೆಯ ಕೊರತೆ ಅಮಾಯಕ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿರುವುದು ವಿಪರ್ಯಾಸ.

    ದಲಿತರ ಮೇಲಿನ ದೌರ್ಜನ್ಯ ಮತ್ತು ಹತ್ಯೆಗಳನ್ನು ತಡೆಯುವಲ್ಲಿ ಮತ್ತು ಸಮಾನತೆಯ ಸಮಾಜವನ್ನು ನಿರ್ಮಿಸುವಲ್ಲಿ ನಾಗರಿಕ ಸಮಾಜದ ಪಾತ್ರ ಅತ್ಯಂತ ನಿರ್ಣಾಯಕವಾಗಿದೆ. ಕೇವಲ ಕಾನೂನುಗಳಿಂದ ಮಾತ್ರ ಇಂತಹ ಸಾಮಾಜಿಕ ಕಾರ‍್ಯಗಳನ್ನು ಸಂಪೂರ್ಣವಾಗಿ  ತೊಡೆದು ಹಾಕಲು ಸಾಧ್ಯವಿಲ್ಲ; ಧಾರ್ಮಿಕ ಸಂಸ್ಥೆಗಳು, ಜಾತಿ ಸಂಘಟನೆಗಳು, ತಮ್ಮ ಸಮುದಾಯದ ಆರೋಪಿಗಳನ್ನು ರಕ್ಷಿಸುವ ಬದಲು, ಕಾನೂನು ಪ್ರಕ್ರಿಯೆಗೆ ಸಹಕರಿಸಬೇಕು ಸಂತ್ರಸ್ತರ ಹಕ್ಕು ಮತ್ತು ನ್ಯಾಯದ ಪರ ನಿಲ್ಲಬೇಕು. ಸಮಾಜದ ಪ್ರತಿಯೊಬ್ಬ ನಾಗರಿಕನೂ ಜವಾಬ್ದಾರಿಯಿಂದ ವರ್ತಿಸಿದಾಗ ಮಾತ್ರ ಬದಲಾವಣೆ ಸಾಧ್ಯ ಕೇವಲ ಘಟನೆ ನಡೆದಾಗ ಆಕ್ರೋಶ ವ್ಯಕ್ತಪಡಿಸುವುದಕ್ಕಿಂತ, ದೀರ್ಘಕಾಲಿಕ ಸಾಮಾಜಿಕ ಬದಲಾವಣೆಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡುವುದು ಮುಖ್ಯ.