ಕವಿ-ಕೃತಿ ಪರಿಚಯ ಗುರುಪ್ರಸಾದ್ ಕಂಟಲಗೆರೆ ಸಂಘಮಿತ್ರೆ ಕೇಳುತ್ತಿದ್ದಾಳೆ ‘ ಬೆನ್ನಿಗೆಲ್ಲಿಯ ಕಣ್ಣು’
ಕವಿ-ಕೃತಿ ಪರಿಚಯ ಗುರುಪ್ರಸಾದ್ ಕಂಟಲಗೆರೆ ಸಂಘಮಿತ್ರೆ ಕೇಳುತ್ತಿದ್ದಾಳೆ ‘ ಬೆನ್ನಿಗೆಲ್ಲಿಯ ಕಣ್ಣು’
ಕವಿ-ಕೃತಿ ಪರಿಚಯ
ಗುರುಪ್ರಸಾದ್ ಕಂಟಲಗೆರೆ
ಸಂಘಮಿತ್ರೆ ಕೇಳುತ್ತಿದ್ದಾಳೆ
‘ ಬೆನ್ನಿಗೆಲ್ಲಿಯ ಕಣ್ಣು’
ನಮ್ಮೆಲ್ಲರ ನಿರೀಕ್ಷೆಯಂತೆ ನೆಚ್ಚಿನ ಸಂಘಮಿತ್ರೆಯ ಮೊದಲ ಕವನ ಸಂಕಲನ ಸಹೃದಯಿಗಳ ಕೈ ಸೇರಿದೆ. ಸಂಘಮಿತ್ರೆ ತನ್ನ ಕವನಗಳನ್ನು ಆಗಾಗ್ಗೆ ಫೇಸ್ ಬುಕ್‍ನಲ್ಲಿ ಹಂಚಿಕೊಳ್ಳುತ್ತಿದ್ದುದರಿಂದ ಹಲವರಂತೆ ನಾನೂ ಕೂಡ ಆಸಕ್ತಿಯಿಂದ ಓದಿ ಕೆಲವು ಕಡೆ ಬೆರಗುಗೊಂಡಿದ್ದೆ. ಈಗ ಇಡೀ ಸಂಕಲನ ಕೈಗೆ ಸಿಕ್ಕಿದೆ.
ಈ ಸಂಕಲನದಲ್ಲಿ ಎಲ್ಲಾ ಹೊಸಬರ ಸಂಕಲನದಲ್ಲಿದ್ದಂತೆಯೆ ನವಿರು ಪ್ರೇಮ ಭಾವದ ಹಲವು ಕವಿತೆಗಳಿವೆ. ಅಂತೆಯೇ ತಾನು ನಂಬಿದ ಆರ‍್ಶ, ತನ್ನ ಸೈದ್ದಾಂತಿಕತೆ ಸಮಕಾಲೀನ ಸಮಾಜದ ಆಗುಹೋಗುಗಳಿಗೆ ತನ್ನ ಸ್ಪಂದನ ಏನು ಎಂಬ ಸಾಮಾಜಿಕ ನಿಲುವಿನ ಕವಿತೆಗಳು ಸೇರಿವೆ. ಇವೆರಡು ಎಲ್ಲಾ ಕವಿಗಳಲ್ಲಿರಬೇಕಾದ ಮೂಲ ದಾತುವೇ ಆಗಿದೆ.
ಆದರೆ ಸಂಘಮಿತ್ರೆಯ ಕವಿತೆಗಳಲ್ಲಿ ಕಾಣಸಿಗುವ ಮತ್ತೊಂದು ದಾತು ಅಂದರೆ ಕನ್ನಡ ಸಾಹಿತ್ಯ ಲೋಕದಲ್ಲಿ ಯಾವತ್ತಿಗೂ ಉಳಿಯುವಂತ ಕವಿತೆಗಳನ್ನು ಮತ್ತು ಒಂದು ಅಚ್ಚರಿದಾಯಕವಾದ ಬದುಕಿನ ಮಾದರಿಯನ್ನು ಬಿಟ್ಟುಹೋದ ಕವಿಯೊಬ್ಬರ ಬಗೆಗೆ ಆತನ ಮಗಳ ನೋಟಕ್ರಮವನ್ನು ನೋಡುವ ಅರಿಯುವ ಹೊಕ್ಕುವ ಕುತೂಹಲಕರವಾದ ಅಭಿವ್ಯಕ್ತಿಯೊಂದಿದೆ.
ಹೀಗೆ ಕವಿತೆಯೊಂದನ್ನು ಇಂಥದ್ದೇ ಏಕ ಪಾತಳಿಗಿಟ್ಟು ನೋಡಬೇಕು ಎಂಬ ಕ್ರಮವೇ ಸರಿಯಾದುದಲ್ಲವಾದರೂ ಸಂಘಮಿತ್ರೆಯ ಸಂಕಲನದ ಶರ‍್ಷಿಕೆಯಾದ "ಬೆನ್ನಿಗೆಲ್ಲಿಯ ಕಣ್ಣು" ಎಂಬುದೇ ಹಿಂದಣ ಹೆಜ್ಜೆಯನರಿತ ಯಾವುದೇ ಓದುಗನನ್ನು ತಾನು ಈ ಸಂಕಲನವನ್ನು ಗ್ರಹಿಸಬೇಕಾದ ದಾರಿಯನ್ನು ಹಾಕಿಕೊಡುತ್ತದೆ. ಯಾಕೆಂದರೆ ಅಪ್ಪನ ಪ್ರಸಿದ್ದ ಕೃತಿಯ ಶೀರ್ಷಿಕೆ
"ಚಿತ್ರದ ಬೆನ್ನು".
ಈ ಸಂಕಲನದಲ್ಲಿ ಒಟ್ಟು ನಲವತ್ತೆಂಟು ಕವಿತೆಗಳಿದ್ದು, ಇದರಲ್ಲಿ ಮೊದಲ ಮೂವತ್ತು ಕವಿತೆಗಳು ಸಂಘಮಿತ್ರೆಯವಾದರೆ ನಂತರದ ಹದಿನೆಂಟು ಕವಿತೆಗಳು ತನ್ನ ಒಲವಿನ ಗೆಳೆಯ ರಾಜೇಶ್ ಹೆಬ್ಬಾರ್ ಬರೆದವಾಗಿವೆ. ಈ ಸಂಕಲನದ ಪ್ರಥಮ ವಿಶೇಷವೇ ಇದಾಗಿದೆ. ಇಬ್ಬರು ಜೋಡಿ ಕವಿಗಳು ಒಂದೇ ಸಂಕಲನದಲ್ಲಿ ಐಕ್ಯಗೊಂಡಿರುವುದು ಬದುಕಿನ ಹೊಸ ಮಾದರಿಗೆ ಸಾಕ್ಷಿಯಾಗಿದೆ.
ಸಂಘಮಿತ್ರೆಯ ಪ್ರತಿಯೊಂದು ಕವಿತೆಯಲ್ಲೂ ಒಂದುಕಡೆ ಸ್ವಾತಂತ್ರ‍್ಯದ ಹಂಬಲ ಕಾಣಿಸಿದರೆ ಮತ್ತೊಂದು ಕಡೆ ಅದು ಬಂಧನದ ಖುಷಿಗೂ ಹಾತೊರೆದಂತಿದೆ. ಅದು ಸಂಬಂಧದ ಬೇರೆ ಬೇರೆ ಸಂರ‍್ಭಗಳಲ್ಲಿ ಪ್ರತ್ಯೇಕವಾಗಿ ಮಿಡಿಯುವಂತದ್ದಾಗಿದೆ.
ಮಾನ್ಯತೆ ಯಾರಿಗೆ ಕವಿತೆಯಲ್ಲಿ "ಕೈಗಳು ಇದ್ದವೆಂಬ ಕುರುಹುಗಳು ಇರದಂತಾಗಿದೆ" ಎನ್ನುತ್ತಲೆ "ಕೂದಲಿಗೆ ಮಾತ್ರ ಗಾಳಿಯಲಿ ತೇಲುವ, ಹಾರುವ, ಉಲಿಯುವ ಸ್ವಾತಂತ್ರ‍್ಯ " ಎನ್ನುವ ಬಗೆಯಲ್ಲಿರುವುದನ್ನ ಕಾಣಬಹುದಾಗಿದೆ.
ಒಡಲುರಿ ಕವಿತೆಯಲ್ಲಿ "ಹೌದು ನಾವಿಬ್ಬರು ಜೊತೆಯಿದ್ದೇವೆ, ಮಳೆ ಹನಿ ತಾಗಿ ಘಮಿಸುವಂತೆ" ಎಂಬುದರಲ್ಲಿ ಬಂಧನದ ಸುಖವನ್ನು ಕಾಣುವ ಕವಯತ್ರಿ ಕಾಣಸಿಗುತ್ತಾರೆ.
"ಸೂರಿಲ್ಲದ ಹೊತ್ತಲ್ಲಿ" "ಎದೆ ಬಡಿತ" ಬುದ್ದನೊಂದಿಗೆ ನಡೆಸುವ ಸಂವಾದ, ಸಿಕ್ಕ ಅನ್ನ ಮುಂತಾದ ಕವಿತೆಗಳಲ್ಲಿ ಕವಿಯತ್ರಿಯ ಸಾಮಾಜಿಕ ನಡೆನುಡಿಗಳನ್ನು ಅರಿಯಲು ಸಾಧ್ಯವಾಗುತ್ತದೆ.
ಆದರೆ ಕವಿ ಬೆರಗು ಮೂಡಿಸುವುದು ಮೇಲಿನ ಎರಡೂ ಬಗೆಯ ಕವಿತೆಗಳಲ್ಲಿನ ಅಭಿವ್ಯಕ್ತಿಗಿಂತ ಅಪ್ಪನನ್ನು ಎದುರುಗೊಳ್ಳುವ ಬಗೆಗಳಲ್ಲಿ. ಇದು ನಮ್ಮೆಲ್ಲರ ಪರ‍್ವಗ್ರಹಿತ ಮನಸ್ಥಿತಿಯಿಂದಲೂ ಹೆಚ್ಚು ಸೆಳೆದುಕೊಳ್ಳುವ ಭಾಗವೇ ಆಗಿದೆ.
ಅಡಿಪಾಯವಿಲ್ಲದ ಆಸನ ಕವಿತೆಯಲ್ಲಿ
"ಅಷ್ಟಕ್ಕೂ ನೀನು
ತಲುಪಿರುವ ಕೇರಿಯಾದರೂ ಯಾವುದು?
ಬಹುಶಃ ನಿನ್ನಪ್ಪ ನೆಟ್ಟ ಹೊಂಗೆ ಮರವಿದ್ದ ನೆಲವೆ?
ಮರದ ನೆರಳು
ನಿನ್ನಪ್ಪನ ನೆರಳು ಎರಡೂ ಇದೀಗ ಅಸ್ಪಷ್ಟ!"
ಹೀಗೊಂದು ಪ್ರವೇಶಿಕೆ ಒದಗಿಸುವ ಮಗಳು ಇಂಥಹ ಅನೇಕ ಸಂರ‍್ಭಗಳನ್ನು ನಮ್ಮ ಮುಂದೆ ಸೃಷ್ಟಿಸಿ "ಇಂತಿ ನಿನ್ನ ಸೋತ ಅಪ್ಪ” ಎನ್ನುತ್ತಾರೆ.
ಒಡೆದ ಕನ್ನಡಿ ಕವಿತೆಯಲ್ಲಿ
"ಆಕೆ ಹುಟ್ಟಿದಾಗ
ತಲೆ ನೇವರಿಸಲು ತನ್ನಪ್ಪನಿರಲಿಲ್ಲ
ತಾಯಿಗೊ ಉಟ್ಟ ಸೆರಗ ನೆರಿಗೆಯದೇ ಚಿಂತೆ,
ಸಿಟ್ಟು ಕೇಡುಗಳೆರಡು ಇವಳ ಶ್ರೀಮಂತಿಕೆ"
ಎನ್ನುವ ಮೂಲಕ ಇನ್ನೊಂದು ಮಗ್ಗುಲು ಕಾಣಿಸುತ್ತಾರೆ.
ಶರ‍್ಷಿಕೆ ಕವನದಲ್ಲಿ
"ಅಪ್ಪನಿಷ್ಟನೊ ಅವ್ವಳೊ
ಎಂದು ಕೇಳುವವರ ಮಾತು ಮುಗಿಯುವ
ಹೊತ್ತಿಗೆ ಅಪ್ಪ ಸತ್ತ ಸುದ್ದಿ"
ಎಂದು ಬರೆದು ಎದೆಭಾರಗೊಳಿಸುತ್ತಾರೆ.
ಹೀಗೆ ಹಲವು ಬಗೆಗಳಲ್ಲಿ ಓದುಗನ ಹುಡುಕಾಟವನ್ನ ಸಂಕರ‍್ಣಗೊಳಿಸುವ ಕವಿ ,
"ಅವಳದು ಸುಕ್ಕು ಮೂಡಿದ ಮುಖವಾದರೂ
ಮನಸ್ಸು ಮಾತ್ರ ಸದಾ ನೀರಿನೊಳಗೆ ಆಡುವ ಮೀನಿನಂತೆ"ಎಂದು ಅಪ್ಪನ ರೂಪಕದ ದಾರಿಯೂ ನನ್ನಿಂದ ದೂರವೇನಲ್ಲ ಎಂದು ಸಾರಲು ಪ್ರಯತ್ನಿಸುತ್ತಾರೆ.
"ಈ ಮಂಜುಗಟ್ಟಿದ ಮಳೆಗೆ ಹೆದರಿ
ನನ್ನನ್ನು ಒಂಟಿಯಾಗಿ ಬಿಟ್ಟು ಎತ್ತಲೋ ಸಾಗಿದೆ ನನ್ನೀ ನೆರಳು" ಎಂಬಲ್ಲಿಯೂ ಅತಿ ಸೂಕ್ಷ್ಮವಾಗಿ ಕಾಣಿಸುತ್ತಾರೆ.
"ನನಗೂ ಊರ ಜಾತ್ರೆಯಲಿ
ನಿಮ್ಮಂತೆ ತೇರ ಎಳೆಯಬೇಕೆಂಬಾಸೆಯಾಗುತ್ತಿತ್ತು" ಎನ್ನುತ್ತಲೆ
"ಇರಲಿ ಬಿಡಿ ನೀವೂ ದೇವರಂತೆ
ಜೀವ ಕೊಡುವ, ಕಸಿದುಕೊಳ್ಳುವ
ಹಕ್ಕುದಾರರಾಗಿಬಿಟ್ಟಿದ್ದೀರಿ" ಎಂದು ಹೇಳಿ ಕರುಳಿಗೆ ಕತ್ತರಿ ಆಡಿಸಿಬಿಡುತ್ತಾರೆ.
ಹೀಗೆ ಸಂಘಮಿತ್ರೆ ತನ್ನ ಕವಿತೆಗಳಲ್ಲಿ ಹಲವು ಭಾವಗಳಿಗೆ ಕೈಯಾಕುತ್ತಾರೆ. ಆದರೆ ಇಲ್ಲಿ ಆಕ್ರೋಷದ ದನಿಗಿಂತ ಸಣ್ಣಗೆ ಜುಳುಗುಟ್ಟುವ ಜರಿಯಂತೆ ನಮ್ಮೊಳಗೆ ಸಂಚರಿಸುತ್ತಾರೆ. ಸಂಘಮಿತ್ರೆ ಬಿಡಿಸುವ ಚಿತ್ರಗಳಲ್ಲಿ ಇರುವ ಸಂಕರ‍್ಣತೆ ಕವಿತೆಗಳಲ್ಲಿ ಅಷ್ಟಾಗಿ ಕಾಣಸಿಗುವುದಿಲ್ಲ. ನೇರವಾಗಿ ರ‍್ಥವನ್ನು, ಅದರ ದನಿಯನ್ನು ಬಿಟ್ಟುಕೊಟ್ಟೆ ಸಾಗುತ್ತಾರೆ. ತನ್ನ ಮೊದಲ ಸಂಕಲನದಲ್ಲೇ ಗಮನ ಸೆಳೆದಿರುವ ಸಂಘಮಿತ್ರೆ ಇನ್ನೂ ಸಾಗಬೇಕಾದ, ಕೊಡಬೇಕಾದ, ಘಟ್ಟಿಗೊಳ್ಳಬೇಕಾದ ಹಲವು ಮಗ್ಗುಲುಗಳಿವೆ.
ರಾಜೇಶ್ ಹೆಬ್ಬಾರ್ ತನ್ನ ಹಿನ್ನೆಲೆಗಳನ್ನು, ತಿಳುವಳಿಕೆಗಳನ್ನು ಮೀರುವ ಹಂಬಲ ಇರುವ ಕವಿ ಅದರ ಸಾಕಷ್ಟು ಸಾಕ್ಷಿಗಳು ಇಲ್ಲಿವೆ. ಜಾತಿ, ರ‍್ಮ, ಸಂಪ್ರದಾಯಗಳನ್ನು ಮೀರುವ, ಪ್ರಶ್ನಿಸುವ ಸಮಕಾಲೀನ ಸಮಾಜವನ್ನು ಎದುರುಗೊಳ್ಳುವ ಇಲ್ಲಿನ ಕವಿತೆಗಳ ಕೇಂದ್ರ ಸಮಾಜ ಮತ್ತು ರಾಜಕರಣವೆ ಆಗಿದೆ.
ಹೀಗೆ ಒಂದಾಗಿರುವ ಕವಿ ಜೋಡಿಯ ಬದುಕು ಮತ್ತು ಬರವಣಿಗೆಯ ಪಯಣ ಇನ್ನು ಉನ್ನತಕ್ಕೇರಲಿ ಎಂದು ಆಶಿಸುತ್ತೇನೆ.
ಬೆನ್ನಿನ ಚಿತ್ರ
ಈಗ ನಿನ್ನದೇ ಸರದಿ
ನಿನ್ನವ್ವ- ನವಿಲು- ಹಿಮದ ಸರಪಳಿ
ಇವನ್ನೇ ಕೊರಳಿಗೆ ಹಾರವಾಗಿಸಿಕೊಂಡು
ನಿನ್ನ ಪಟದ ಪುಟದ ಪುಸ್ತಕವನ್ನೇ
ಪದೇ ಪದೇ ತಿರುವು ಹಾಕಿ
ಅಲಲ್ಲಿ ನಿನ್ನ ಬೆನ್ನಿನ ಚಿತ್ರವನ್ನೇ ಅಳಿಸಿ
ಅವರೆಸರಿನ ಹಚ್ಚೆಯ ಬಿಡಿಸುತ್ತಿದ್ದಾರೆ-
ನುಡಿಗಳಲಿ ಬಡಿಸುತ್ತಿದ್ದಾರೆ....