ಚಿನ್ನದಂತ ನಾಡಿಗೆ ರನ್ನದಂತ ರಾಜ, ರನ್ನದಂತ ರಾಜನಿಗೆ...,

ನಮ್ಮ ರಾಜ್ಯದ ರಾಯಚೂರಿನ ಹಟ್ಟಿ ಚಿನ್ನದ ಗಣಿ ಹಾಗೂ ಪಕ್ಕದ ಆಂಧ್ರಪ್ರದೇಶದ ಕರ್ನೂಲಿನ ಜೊನ್ನಗಿರಿ ಯೋಜನೆ ಎರಡೂ ಸೇರಿ ಜೊತೆಗೆ ತಾಮ್ರ, ಪೆಲ್ಲಾಡಿಯಂ ಮೊದಲಾದ ಲೋಹಗಳ ರಾಸಾಯನಿಕ ಕ್ರಿಯೆಯಿಂದ ಉತ್ಪತ್ತಿ ಮಾಡುವ ಎಲ್ಲ ಸೇರಿ ಜಸ್ಟ್ ಒಂದರಿಂದ  ಎರಡು ಟನ್ ಮಾತ್ರ. ಅಚ್ಚರಿ ಅನ್ನಿಸಿತಾ,

ಚಿನ್ನದಂತ ನಾಡಿಗೆ ರನ್ನದಂತ ರಾಜ, ರನ್ನದಂತ ರಾಜನಿಗೆ...,

ಒಂದು ಗಳಿಗೆ

ಕುಚ್ಚಂಗಿ ಪ್ರಸನ್ನ

 

 

    ನನ್ನ ತೀರಾ ಕಷ್ಟದ ದಿನಗಳವು, ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಆಯಾಮವನ್ನು ಸೃಷ್ಟಿಸಿದ್ದ ʼಜನವಾಹಿನಿʼ ರಾಜ್ಯ ಮಟ್ಟದ ದಿನಪತ್ರಿಕೆಯ ಮೂರೂವರೆ ವರ್ಷದ ಉದ್ಯೋಗವನ್ನು ತೊರೆದು ವಿಧಾನ ಸೌಧದ ಸರ್ಕಾರಿ ನೌಕರಿಯ ಅನುಭವಕ್ಕೆ ತೆರೆದುಕೊಂಡಿದ್ದೆ . ಎರಡೂವರೆ ಸಾವಿರ ಇದ್ದ ಸಂಬಳ ಒಂದೂವರೆ ಸಾವಿರಕ್ಕಿಳಿದಿತ್ತು. ಕಡ್ಡಾಯ ಕಡಿತಗಳೆಲ್ಲ ಹೋಗಿ ಕೈಗೆ ಸಿಕ್ಕುತ್ತಿದ್ದುದು ಎಂಟುನೂರಾ ಚಿಲ್ಲರೆ ರೂಪಾಯಿಗಳಷ್ಟೇ. ಅಷ್ಟರಲ್ಲೇ ಎಲ್ಲ ನಿಭಾಯಿಸಲಾಗುತ್ತಿರಲಿಲ್ಲ. ಕಡತಗಳ ಹಿಂದೆ ಬಂದವರ ಮುಂದೆ ಕೈಯೊಡ್ಡುವುದು ನನ್ನ ಜಾಯಮಾನವಾಗಿರಲಿಲ್ಲ.

    ಸಂಬಳ ಪೂರಾ ತಿಂಗಳಿಗೆ ಎಟಕುತ್ತಿರಲಿಲ್ಲ , ಮನೆಯಿಂದಲೇ ಬುತ್ತಿ ತಂದು , ಮೆಜೆಸ್ಟಿಕ್ಕಿನಲ್ಲಿ ರೈಲಿಳಿದು ಸಿಟಿ ಬಸ್ಸಿಗೆ ಕಾಲಿಡದೇ ನಡೆದೇ ಬಂದರೂ ಅಂತ ಏನೂ ಉಳಿತಾಯವಾಗುತ್ತಿರಲಿಲ್ಲ. ಎರಡು ವರ್ಷದ ಪ್ರೊಬೇಶನರಿ ಮುಗಿದು ಕೆಲಸ ಖಾಯಂ ಆದ ಮೇಲಷ್ಟೇ ಬ್ಯಾಂಕಿನ ಸಾಲಕ್ಕೆ ಪ್ರಯತ್ನ ಪಡಬಹುದಿತ್ತು. ಸಚಿವಾಲಯದ ಸೊಸೈಟಿ ಅಂತ ಕರೆಯುವ ನೌಕರರ ಪತ್ತಿನ ಸಹಕಾರ ಸಂಘದಲ್ಲೂ ಅದೇ ಕಾನೂನು. ಸಾಲದಲ್ಲೇ ಹುಟ್ಟಿ ಸಾಯುವ ಜರ್ನಲಿಸ್ಟ್ ಗೆಳೆಯರ ಹತ್ರ ಸಾಲ ಕೇಳುವ ಪ್ರಶ್ನೆಯೇ ಇರಲಿಲ್ಲ. ವಿಧಾನ ಸೌಧದಲ್ಲಿ ಯಾರೂ ಹೇಳಿಕೊಳ್ಳುವಂತ ಪರಿಚಿತರೂ ಇರಲಿಲ್ಲ. ಫುಲ್ ಟೈಮ್ ಕಮ್ಯುನಿಸ್ಟ್ ಗೆಳೆಯರನ್ನು ಸಾಲ ಕೇಳುವ ಮೂರ್ಖತನ ಮಾಡುತ್ತಿರಲಿಲ್ಲ. ಸಮಾಜವಾದಿ ಗೆಳೆಯರನ್ನು ಭೇಟಿ ಮಾಡಲು ಹೋದರೆ ಇವನು ಬಂದಿರುವುದೇ ಸಾಲ ಕೇಳಲು ಅಂತ ಅವರೇ ಇರುವ ಇಲ್ಲದ ನೂರೆಂಟು ತಾಪತ್ರಯ ಹೇಳಿ ಟೀ ಕುಡಿಸಿ ಸಾಗಿಹಾಕಿಬಿಡುತ್ತಿದ್ದರು. ಹಂಗೂ ಹಿಂಗೂ ಐದಾರು ತಿಂಗಳುಗಳನ್ನು ತ್ಯಾಪೆ ಹಾಕಿ ಸಾಗಹಾಕುವ ಹೊತ್ತಿಗೆ ನಮ್ಮ ಬ್ಯಾಚಿನಲ್ಲೇ ಒಂದಿಬ್ಬರು ತಿಂಗಳ ಬಡ್ಡಿಗೆ ಅಂತ ಸಾಲ ಕೊಡ್ತಾರೆ ಅನ್ನುವುದು ಅರಿವಿಗೆ ಬಂತು. ಅವರ ಹತ್ರ ಹೋಗಿ ಬಂದೂ ಇವನಿಗೆ ಕಾಣದೇ ಅವನಿಗೆ ಇವನಿಗೆ ಕಾಣದೇ ಇಬ್ಬರನ್ನೂ ಒಪ್ಪಿಸಿಕೊಂಡು ಸಾಲ ಪಡೆಯುವಲ್ಲಿ ಯಶಸ್ವಿಯಾದೆ. ಅದರೆ ತಿಂಗಳು ತುಂಬುವ ಹೊತ್ತಿಗೆ ಬಡ್ಡಿ ಅಂತ ಕಟ್ಟಬೇಕಲ್ಲ . ಆಗಿನ್ನೂ ಸಂಬಳವನ್ನು ಸೆಕ್ಷನ್‌ಗಳಲ್ಲೇ ಕ್ಯಾಶ್ ಕೊಡುತ್ತಿದ್ದರು. ಈಗಿನಂತೆ ಅಕೌಂಟಿಗೆ ಜಮಾ ಆಗುತ್ತಿರಲಿಲ್ಲ. ಹಂಗಾಗಿ ಸಾಲ ಕೊಟ್ಟವರು ಸಂಬಳದ ದಿನವೇ ಸೆಕ್ಷನ್ ಬಾಗಿಲಲ್ಲಿ ಬಂದು ನಿಂತು ಬಿಡುತ್ತಿದ್ದರು. ಐದು ಸಾವಿರಕ್ಕೆ ಒಬ್ಬನ ಹತ್ರ ಐದು ಪರ್ಸೆಂಟ್ ತರಾ ಇನ್ನೂರಾಐವತ್ತಾದರೆ , ಇನ್ನೊಬ್ಬ ಧರ್ಮದ ಬಡ್ಡಿ ಅನ್ನೋ ಹಂಗೆ ಮೂರು ಪರ್ಸೆಂಟ್ ಲೆಕ್ಕದಲ್ಲಿ ನೂರಾ ಐವತ್ತು ರೂಪಾಯಿ ವಸೂಲು ಮಾಡುತ್ತಿದ್ದರು. ಐದು ಸಾವಿರ ಸಾಲಕ್ಕೆ ತಿಂಗಳಿಗೆ ಇನ್ನೂರಾ ಐವತ್ತು ಪಾವತಿ ಮಾಡುತ್ತ ಹೋದರೆ 20 ತಿಂಗಳಿಗೇ ಅವರ ಹಣ ಡಬಲ್ ಆಗಿಬಿಡುತ್ತದೆ. ಅದನ್ನೆಲ್ಲ ಮಾತಾಡಲು ಹೋದರೆ, ನಾವೇನು ಸಾಲ ತಗೋಳ್ಳಪ್ಪಾ ಅಂತ ನಿನ್ನನ್ನೇನು ಹುಡುಕಿಕೊಂಡು ಬಂದಿದ್ವಾ, ಅನ್ನೋ ಮಾತು ರಿಬೌಂಡ್ ಆಗಿಬಿಡುತ್ತಿದ್ದವು.

    ಒಂದಾರು ತಿಂಗಳು ಕಳೆಯುವ ಹೊತ್ತಿಗೆ ಅದ್ಯಾರು ಏನು ಹೇಳಿದರೋ, ಏನು ಕಿತಾಪತಿ ಮಾಡಿದರೋ ಗೊತ್ತಿಲ್ಲ , ಮೂರು ಪರ್ಸೆಂಟ್ ಬಡ್ಡಿಗೆ ಸಾಲ ಕೊಟ್ಟಿದ್ದವ ನನಗೆ ಅಸಲು ವಾಪಸ್ ಬೇಕು, ಈಗಲೇ ಬೇಕು, ಇವತ್ತೇ ಕೊಟ್ಟು ಬಿಡು ಅಂತ ಹಿಂದೆ ಬಿದ್ದುಬಿಟ್ಟ. ಏನು ಮಾಡಿದರೂ ಬಿಡಲಿಲ್ಲ. ಉಡದಂತೆ ಹಿಡಿದೇ ಬಿಟ್ಟ. ಕಡೆಗೆ ಗತಿ ಕಾಣದೇ ಇದ್ದ ಒಂಚೂರು ಚಿನ್ನದ ಒಡವೆಗಳನ್ನು ಹಿಡಿದು ತುಮಕೂರಿನ ಗುಂಚಿಚೌಕದಲ್ಲಿ ಗುರುತಿನ ಸೇಟು ಅಂಗಡಿ ಮುಂದೆ ನಿಲ್ಲಬೇಕಾಗಿ ಬಂತು. ಇವತ್ತಿಗೆ 23-24 ವರ್ಷದ ಹಿಂದಿನ ಮಾತಿದು. ಅವತ್ತು ಚಿನ್ನದ ರೇಟು ಪ್ರತಿ ಗ್ರಾಮಿಗೆ ಕೇವಲ 440 ರೂಪಾಯಿ ಮಾತ್ರ, ಅದೂ ಹೊಸ ಚಿನ್ನದ ಖರೀದಿ ದರ. ಅಡ ಇಡುವಾಗ, ಮಾರುವಾಗ ಬಿಳಿಚಿನ್ನ, ತಾಮ್ರ ಜಾಸ್ತಿ ಇದೆ, ವೇಸ್ಟೇಜ್, ತ್ಯಾಮಾನ ಅಂತೆಲ್ಲ ಕಳೆದು ಗ್ರಾಮಿಗೆ 330 ರೂಪಾಯಿ ದಾಟಲಿಲ್ಲ. ಆ ಬಡ್ಡಿ ಸಾಲ ಕೊಟ್ಟಿದ್ದ ಸಹೋದ್ಯೋಗಿಯ ಐದು ಸಾವಿರ ಕೂಡಿಸುವ ಹೊತ್ತಿಗೆ ಇದ್ದೆಲ್ಲ ಒಡವೆಗಳು ಕೈ ಬಿಟ್ಟವು.

     ಮೊನ್ನೆ ಬೆಂಗಳೂರಿನಲ್ಲಿ ಬದುಕುವ ಕಲೆ ಕಲಿತಿರುವ ಆರ್ಟ್ ಲಿವಿಂಗ್‌ನ ರವಿಶಂಕರ್ ಗುರೂಜಿ ಆಶ್ರಮಕ್ಕೆ ಬಂದು ಆರತಿ ಬೆಳಗಿ, ಕಾರ್ಯಕರ್ತರೆದುರು ಭಾಷಣ ಕುಟ್ಟಿದ ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಇನ್ನು ಚಿನ್ನ ಕೊಳ್ಳಬೇಡಿ ಅಂತ ಕರೆ ನೀಡಿ, ಮರುದಿನವೇ ಆಮದು ಚಿನ್ನದ ಮೇಲಿನ ಸುಂಕವನ್ನು ಆರರಿಂದ 15 ಪರ್ಸೆಂಟ್‌ಗೆ ಏಕದಮ್ ಏರಿಸಿದಾಗ ಇದೆಲ್ಲ ನೆನಪಿಗೆ ಬಂತು. 2013ರಲ್ಲಿ ಅಂದಿನ ಯುಪಿಎ ಕಾಂಗ್ರೆಸ್ ಸರ್ಕಾರದಲ್ಲಿ ಹಣಕಾಸು ಮಂತ್ರಿಯಾಗಿದ್ದ ಚಿದಂಬರಂ  ದೇಶದ ಜನತೆಗೆ ವಿದೇಶಿ ವಿನಿಮಯ ಉಳಿಸುವ ಸಲುವಾಗಿ ಒಂದು ವರ್ಷದ ಮಟ್ಟಿಗೆ ಚಿನ್ನ ಖರೀದಿ ಅವಾಯ್ಡ್ ಮಾಡಿ ಅಂತ ಮನವಿ ಮಾಡಿಕೊಂಡದ್ದೂ, ಚಿದಂಬರಂ  ಮಾತಿಗೆ ಪ್ರತಿಯಾಗಿ ಆಗ ಗುಜರಾತ್ ಸಿಎಂ ಆಗಿದ್ದುಕೊಂಡು ದಿಲ್ಲಿ ಗದ್ದುಗೆ ಮೇಲೆ ಹದ್ದಿನ ಕಣ್ಣಿಟ್ಟಿದ್ದ ಇದೇ ನರೇಂದ್ರ ಮೋದಿ, ಸಾರ್ವಜನಿಕ ಸಭೆಯಲ್ಲಿ “ ನೋಡಿ ತಾಯಂದಿರೇ ಕಾಂಗ್ರೆಸ್ ಸರ್ಕಾರ ನಿಮ್ಮ ಮಂಗಳ ಸೂತ್ರ ಕೀಳಲು ಕೈ ಹಾಕಿದೆ. ನಾವು ಬಡವರು, ಚೂರು ಪಾರು ಚಿನ್ನ ಖರೀದಿ ಮಾಡಬೇಡಿ ಅಂತ ಆ ಸರ್ಕಾರದ ಹಣಕಾಸು ಮಂತ್ರಿ ಚಿದಂಬರಂ  ಹೇಳ್ತಾ ಅವರೆ, ನಾನು ಟೀ ಮಾರುತ್ತಾ ಮಾರುತ್ತಾ ಇಲ್ಲಿವರೆಗೂ ಬಂದಿದ್ದೀನಿ. ಬೀಳುತ್ತಿರುವ ರೂಪಾಯಿ ಮೌಲ್ಯವನ್ನು ತಡೆಯುವ ಸಲುವಾಗಿ ನೀವು ಚಿನ್ನ ಖರೀದಿ ಮಾಡಬಾರದಂತೆ, ಇದೆಂಥಾ ಜನ ವಿರೋಧಿ ನೀತಿ ನೋಡಿ” ಅಂತ ಆಡಿದ ಮಾತುಗಳೂ ನೆನಪಿಗೆ ಬಂದವು.

     2014ರಲ್ಲಿ ಅಧಿಕಾರಕ್ಕೆ ಬಂದ ದಿನದಿಂದ ಇಲ್ಲಿವರೆಗೂ ಮೋದಿ ಅಡುತ್ತಿರುವ ಮಾತುಗಳೆಲ್ಲವೂ ಹಿಂಗೇ ವಿರೋಧಾಭಾಸಗಳಿಂದಲೇ ಕೂಡಿವೆ. ಇಂಡಿಯಾದ ಎಲ್ಲ ಮುಖ್ಯವಾಹಿನಿ ಇಂಗ್ಲಿಷ್ ಮತ್ತು ಹಿಂದಿ ಟಿವಿಗಳನ್ನು ಮಡಿಲಿಗೆ ಹಾಕಿಕೊಂಡಿರುವ ಒಂದೇ ಒಂದು ಕಾರಣವಾಗಿ, ಇವರ ಸರ್ಕಾರ ಉಳಿದುಕೊಂಡು ಬಂದಿದೆ ಅಷ್ಟೇ. ಯುಪಿಎ ಸರ್ಕಾರದ ವಿರುದ್ದ ಅಣ್ಣಾ ಹಜಾರೆ, ಕೇಜ್ರಿವಾಲ್‌ಗಳು ಮಾಡಿದ ಧರಣಿಯ ಸಂದರ್ಭದಲ್ಲಿ ವರ್ತಿಸಿದ ರೀತಿಯಲ್ಲೇನಾದೂ ಈ ಮಾಧ್ಯಮಗಳು ವರದಿ ಮಾಡತೊಡಗಿದರೆ ಕೇವಲ ಎಂಟತ್ತು ದಿನಗಳಲ್ಲಿ ಹಾಲಿ ಸರ್ಕಾರವನ್ನೇ ವಿಸರ್ಜನೆ ಮಾಡಬೇಕಾದ ಸನ್ನಿವೇಶ ಸೃಷ್ಟಿಯಾಗಿಬಿಡುತ್ತದೆ.

     ಚಿನ್ನವನ್ನು ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳ ಹೊರಟರೆ ಖರೀದಿಸುವ ಚಿನ್ನಕ್ಕೆ ಡಾಲರ್‌ನಲ್ಲಿ ಪಾವತಿ ಮಾಡಬೇಕಾಗಿ ಬಂದು ದೇಶ ನಷ್ಟಕ್ಕೆ ಸಿಕ್ಕಿಕೊಳ್ಳುತ್ತದೆ, ಸಹಜವಾಗೇ ಭಾರತದ ರೂಪಾಯಿ ಡಾಲರ್ ಎದುರು ಸೆಂಚುರಿ ಬಾರಿಸಿಬಿಡುತ್ತದೆ ಎಂಬುದು ಮೋದಿಯ ಆತಂಕ. ಹಂಗಾಗೇ ಏಕಾಏಕಿ ಚಿನ್ನದ ಆಮದಿನ ಮೇಲೆ ವಿಧಿಸುತ್ತಿದ್ದ 6% ಸುಂಕವನ್ನು 15 % ಗೆ ಹೆಚ್ಚಿಸಿದ್ದು. ಹೀಗೆ ಆಮದು ಸುಂಕದ ಪ್ರಮಾಣ ಹೆಚ್ಚಿಸಿಬಿಟ್ಟರೆ ಚಿನ್ನದ ಕಳ್ಳಸಾಗಣೆ ಪ್ರಮಾಣ ಹೆಚ್ಚುತ್ತದಲ್ಲ ಆಗೇನು ಮಾಡೀರಿ.

    ಈ ಗೋಲ್ಡ್ ಸ್ಮಗ್ಲಿಂಗ್ ತಡೆಯುವ ಸಲುವಾಗಿಯೇ ಹಿಂದಿನ ಸರ್ಕಾರಗಳು ಕೈಗೊಂಡ ಕ್ರಮಗಳೇನು ಎಂಬುದನ್ನು ತುಸು ಗಮನಿಸಿ. 2012ರಲ್ಲಿ ಇವತ್ತಿನಂತದ್ದೇ ವಿದೇಶಿ ವಿನಿಮಯದ ಬಿಕ್ಕಟ್ಟು ಸೃಷ್ಟಿಯಾದಾಗ ಯುಪಿಎ ಸರ್ಕಾರ ಚಿನ್ನದ ಆಮದು ಸುಂಕದ ಪ್ರಮಾಣವನ್ನು 2%ನಿಂದ 4%ಗೆ ಹೆಚ್ಚಿಸಿತು. ವರ್ಷ ತುಂಬುವುದರೊಳಗೆ ಈ ಆಮದು ಸುಂಕ 6% ಆಗಿಬಿಟ್ಟಿತು. 2013ರ ಹೊತ್ತಿಗೆ 10% ತಲುಪಿತು. ಜೊತೆಗೆ 80:20ರ ಆಮದು ರಫ್ತು ನೀತಿಯನ್ನು ನಿಭಾಯಿಸಲು ಆಮದುದಾರರು ಪ್ರತಿ ಶಿಪ್‌ಮೆಂಟ್‌ಗೆ 20% ರಫ್ತು ಮಾಡುವುದು ಅನಿವಾರ್ಯವಾಗಿ, ಚಿನ್ನದ ಆಮದು ಕುಸಿದು, ಸ್ಮಗ್ಲಿಂಗ್ ಪ್ರಮಾಣ ಹೆಚ್ಚಿತು. ಆಗ ವಿದೇಶಿ ವಿನಿಮಯದ ಕರೆಂಟ್ ಅಕೌಂಟ್ ಚೇತರಿಸಿಕೊಂಡಿತು.

     2014ರಲ್ಲಿ ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ, ಬಿಜೆಪಿ ನೇತೃತ್ವದ ಎನ್‌ಡಿಎ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗ 80:20 ಆಮದು ಪ್ರತಿ ರಫ್ತು ಯೋಜನೆಯನ್ನು ರದ್ದು ಮಾಡಲಾಯಿತು. ಆದರೆ ಚಿನ್ನದ ಮೇಲಿನ ಆಮದು ಸುಂಕ 10% ನಲ್ಲೇ ಉಳಿಯಿತು. ಎಂಟು ವರ್ಷಗಳ ನಂತರ 2022ರಲ್ಲಿ ಇದೇ ಕರೆಂಟ್ ಅಕೌಂಟ್ ಒತ್ತಡದ ಹೆಸರಲ್ಲಿ ಚಿನ್ನದ ಆಮದು ಸುಂಕವನ್ನು 15% ಗೆ ಹೆಚ್ಚಿಸಿದ್ದು ಇದೇ ಮೋದಿ ಸರ್ಕಾರ. 2024ರ ಜುಲೈನಲ್ಲಿ ಹಿಂದೆ ಯುಪಿಎ ಸರ್ಕಾರ ಮಾಡಿದ್ದ ಚಿನ್ನದ ಸ್ಮಗ್ಲಿಂಗ್ ಹೆಚ್ಚಳವನ್ನು ಉಲ್ಲೇಖಿಸಿ ಚಿನ್ನದ ಮೇಲಿನ ಆಮದು ಸುಂಕವನ್ನು 6%ಗೆ ಇಳಿಸಲಾಯಿತು. ಈಗ ಮೇ 2026ರಲ್ಲಿ ಮತ್ತೆ 15% ಗೆ ಹೆಚ್ಚಿಸಲಾಗಿದೆ. ಒಟ್ಟಾರೆ ಮೂರು ಸರ್ಕಾರಗಳು ನಾಲ್ಕು ಆವರ್ತನಗಳಲ್ಲಿ ಒಂದೇ ಕಾರಣವನ್ನು ಉಲ್ಲೇಖಿಸಿ ಚಿನ್ನದ ಆಮದು ಸುಂಕವನ್ನು ಪರಸ್ಪರ ವಿರುದ್ದ ದಿಕ್ಕಿಗೆ ಎಳೆದಾಡಿದವು ಎಂಬುದನ್ನು ಗಮನಿಸಿ.

     ಭಾರತ ಸರ್ಕಾರ ಚಿನ್ನವನ್ನು ಬಂಡವಾಳ ನಿಯಂತ್ರಣ ಸಾಧಿಸಲು ಆರ್ಥಿಕ ಆಸ್ತಿ ಎಂದು ಪರಿಗಣಿಸುವುದಿಲ್ಲವಾದರೂ ಅದು ಹಾಗೆ ವರ್ತಿಸುತ್ತದೆ. ದೇಶದ ಕುಟುಂಬಗಳ ಬಳಿ 25,000 ಟನ್ ಚಿನ್ನ ಆಭರಣ ಹಾಗೂ ಇನ್ನಿತರ ಸ್ವರೂಪದಲ್ಲಿ ಇದೆ ಎಂದು ಖಚಿತ ಅಂದಾಜು ಮಾಡಲಾಗಿದೆ. ಈ ಬೃಹತ್ ಮೊತ್ತದ ಚಿನ್ನವು ಸಂಪದ್ಭರಿತ ದೇಶಗಳಾದ ಅಮೆರಿಕಾ, ಜರ್ಮನಿ ಹಾಗೂ ಫ್ರಾನ್ಸ್ ಈ ಮೂರೂ ದೇಶಗಳು ಮೀಸಲಾಗಿ ಇರಿಸಿಕೊಂಡಿರುವ ಚಿನ್ನಕ್ಕಿಂತ ಹೆಚ್ಚಿನ ಪ್ರಮಾಣದ್ದು ಎನ್ನಬಹುದಾಗಿದೆ. ಹಂಗಾಗಿ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಕುಸಿಯುತ್ತ ಹೋದಂತೆಲ್ಲ ಚಿನ್ನದ ಆಮದು ಸುಂಕವನ್ನು ಹೆಚ್ಚಿಸಲಾಗುತ್ತದೆ, ಪರಿಣಾಮ ಚಿನ್ನ ಕಳ್ಳಸಾಗಣೆಗೆ ಉತ್ತೇಜನ ದೊರಕಿ ವಿದೇಶಿ ವಿನಿಮಯ ತಕ್ಕಡಿಯ ಪೇರು ಕಟ್ಟಿದಂತಾಗುತ್ತದೆ. ಹೀಗೆ ಎಲ್ಲ ಸರ್ಕಾರಗಳೂ ಚಿನ್ನದ ಆಮದು ಸುಂಕದ ಪ್ರಮಾಣವನ್ನು ಹೆಚ್ಚಿಸುವುದು ಇಳಿಸುವುದನ್ನು ಮಾಡುತ್ತಲೇ ಇರುತ್ತವಾದರೂ ಈ ಸರ್ಕಾರ ಕೇವಲ 2024-2026ರಲ್ಲಿ ಎರಡು ಸಲ ಆಮದು ಸುಂಕ ಹೆಚ್ಚಿಸಿರುವುದು ದೇಶದ ಆರ್ಥಿಕ ದುಸ್ಥಿತಿಯ ಕೈಗನ್ನಡಿ ಎನ್ನುವುದರಲ್ಲಿ ಸಂದೇಹವಿಲ್ಲ.

     ಚಿನ್ನದ ಆಮದಿನ ಮೇಲೆ ವಿಧಿಸುತ್ತಿದ್ದ 6% ಸುಂಕದಲ್ಲಿ 5% ಮೂಲ ಕಸ್ಟಂಸ್ ಡ್ಯೂಟಿ ಹಾಗೂ 1% ಕೃಷಿ ಸೆಸ್ ಸೇರಿತ್ತು, ಈಗ ಮೊನ್ನೆ ಅದನ್ನು 15%ಗೆ ಹೆಚ್ಚಿಸಿದ ಮೇಲೆ 10% ಕಸ್ಟಂಸ್ ಡ್ಯೂಟಿ ಹಾಗೂ 5% ಕೃಷಿ ಸೆಸ್ ಅನ್ನುಒಳಗೊಂಡಿದೆ. ಜೊತೆಗೆ 3% ಸಾಮಾನ್ಯ ಜಿಎಸ್‌ಟಿ ಬೇರೆ. ಹಿಂಗಾಗಿ ಪ್ರತಿ ಒಂದು ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಆಮದು ಮಾಡಿಕೊಳ್ಳಲು ಹೆಚ್ಚುವರಿಯಾಗಿ 9000 ರೂಪಾಯಿಗಳನ್ನು ಪಾವತಿ ಮಾಡಬೇಕಿದೆ. ಒಟ್ಟಾರೆ ಒಂದು ಗ್ರಾಂ ಚಿನ್ನದ ಧಾರಣೆ 1500 ರೂಪಾಯಿಗಳಷ್ಟು ಏರಿಕೆ ಕಂಡಿದೆ. ಕೆಜಿಯ ಲೆಕ್ಕದಲ್ಲಿ ಹೇಳುವುದಾದರೆ 24 ಕ್ಯಾರೆಟ್‌  ಚಿನ್ನ ಒಂದು ಕೆಜಿಗೆ 1.43 ಕೋಟಿ ರೂಗಳಿಂದ 1.62 ಕೋಟಿವರೆಗೆ ಆಗುತ್ತದೆ. ಇದರಲ್ಲಿ ನಗರದಿಂದ ನಗರ, ವರ್ತಕರ ಲಾಭಾಂಶ , ಆಭರಣ ತಯಾರಿಕಾ ವೆಚ್ಚ, ಸ್ಥಳೀಯ ಮಾರುಕಟ್ಟೆ ಏರಿಳಿತ, ಪೂರೈಕೆ- ಬೇಡಿಕೆ ತಾರತಮ್ಯ ಸೇರಿದರೆ ಈ ಮೊತ್ತ ಇನ್ನೂ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ.

   ಚಿನ್ನದ ಆಭರಣ ಮಾರಾಟಗಾರರು ಈ ಹೆಚ್ಚುವರಿ ಹೊರೆಯನ್ನು ಸಹಜವಾಗೇ ಗ್ರಾಹಕರ ಮೇಲೆ ಹೇರುತ್ತಾರೆ. ಇತ್ತ ಚಿನ್ನದ ಆಮದು ಸುಂಕದ ಪ್ರಮಾಣ ಹೆಚ್ಚಾಗಿದ್ದರಿಂದ ಚಿನ್ನದ ಕಳ್ಳಸಾಗಣೆ ಪ್ರಮಾಣ ಹೆಚ್ಚುತ್ತದೆ ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯ ಆತಂಕ ವ್ಯಕ್ತಪಡಿಸತೊಡಗುತ್ತದೆ.

ಚಿನ್ನದ ಆಮದು ಹೇಗೆ , ಎಷ್ಟು

    ಭಾರತಕ್ಕೆ ಪ್ರಮುಖವಾಗಿ ಮೂರು ದೇಶಗಳಿಂದ ಚಿನ್ನ ಆಮದು ಮಾಡಿಕೊಳ್ಳಲಾಗುತ್ತಿದೆ. ಭಾರತಕ್ಕೆ ಆಮದಾಗುವ ಒಟ್ಟು ಚಿನ್ನದಲ್ಲಿ 40% ಸ್ವಿಟ್ಜರ್‌ಲ್ಯಾಂಡ್‌ನಿಂದ , 16% ಯುಎಇಯಿಂದ (ಈಗ ಮೋದಿ ಅಲ್ಲಿಗೇ ಹೋಗಿರುವುದು ನೆನಪಿರಲಿ) ಹಾಗೂ ದಕ್ಷಿಣ ಆಫ್ರಿಕಾದಿಂದ 10% ಚಿನ್ನ ಆಮದಾಗುತ್ತದೆ.

    ಡ್ಯೂಟಿ ಫ್ರೀ ದೇಶದಿಂದ ಒಬ್ಬ ಅರ್ಹ ಪ್ರಯಾಣಿಕ ಒಂದು ಕೆಜಿ ಚಿನ್ನವನ್ನು ಖರೀದಿಸಿ ತರಬಹುದು. ಆಮದು ಲೈಸೆನ್ಸ್ ಹೊಂದಿರುವವರು ಒಂದು ಸಲಕ್ಕೆ 100 ಕೆಜಿ ಚಿನ್ನವನ್ನು ಆಮದು ಮಾಡಿಕೊಳ್ಳಬಹುದು.

   ಭಾರತವು 2023-24ನೇ ಸಾಲಿನಲ್ಲಿ 45.50 ಬಿಲಿಯನ್ ಡಾಲರ್ ತೆತ್ತು 795 ಟನ್ ಚಿನ್ನವನ್ನು ಆಮದು ಮಾಡಿಕೊಂಡಿದೆ. ನಂತರದ ಹಣಕಾಸು ಸಾಲಿನಲ್ಲಿ 58 ಬಿಲಿಯನ್ ಡಾಲರ್ ಪಾವತಿಸಿ 757 ಟನ್ ಚಿನ್ನ ಆಮದು ಮಾಡಿಕೊಂಡಿದೆ. ಬದಲಾದ ಭೂ ರಾಜಕೀಯ ಪರಿಸ್ಥಿತಿಯಲ್ಲಿ 2025-26ರಲ್ಲಿ ಮಾರ್ಚಿ ಅಂತ್ಯದವರೆಗೆ 72 ಬಿಲಿಯನ್ ಡಾಲರ್ ತೆತ್ತು 721 ಟನ್ ಚಿನ್ನವನ್ನು ಆಮದು ಮಾಡಿಕೊಳ್ಳಲಾಗಿದೆ.

    ಜೊತೆಗೆ ಡಬ್ಲ್ಯುಜಿಸಿ ಅಂದರೆ ಜಗತ್ತಿನ ಚಿನ್ನದ ಸಮಿತಿ ಪ್ರಕಾರ ಇಂಡಿಯಾ ದೇಶದೊಳಕ್ಕೆ ಅಕ್ರಮವಾಗಿ ಅಂದರೆ ಕಳ್ಳಸಾಗಣೆ ಮುಖಾಂತರ ಪ್ರತಿ ವರ್ಷ 150 ರಿಂದ 200 ಟನ್ ಚಿನ್ನ ಬಂದು ಸೇರುತ್ತಿದೆ. ಹೆಚ್ಚೂ ಕಮ್ಮಿ ಭಾರತ ಬಳಸುವ ಒಟ್ಟು ಚಿನ್ನದಲ್ಲಿ ಕಾಲು ಬಾಗ ಕಳ್ಳ ಮಾಲು ಗೊತ್ತಾ. ಈ 150-200 ಟನ್ ಚಿನ್ನಕ್ಕೆ ಯಾರೂ 15% ಆಮದು ಸುಂಕ ಪಾವತಿಸುವುದಿಲ್ಲ. 3% ಜಿ ಎಸ್ ಟಿ ಕೂಡಾ ಕೊಡಲ್ಲ. ಇದರ ಲೆಕ್ಕ ತೆಗೆದರೆ ಭಾರತದ ಖಜಾನೆಗೆ ಸುಮಾರು 55-60 ಕೋಟಿ ರೂ ನಷ್ಟವಾಗುತ್ತದೆ. ಚಿನ್ನವನ್ನು ಕಳ್ಳಸಾಗಣೆ ಮಾಡಿ ವರ್ಷ ಪೂರ್ತಿ ಜೈಲಿನಲ್ಲಿ ಇದ್ದು ಜಾಮೀನಿನ ಮೇಲೆ ಹೊರ ಬಂದ ಚಿನ್ನದ ಹುಡುಗಿ ರನ್ಯಾರಾವ್ ನೆನಪಿಗೆ ಬಂದಳಾ.

    ಅದು ಸರಿ ಹೀಗೆ ಟನ್ನುಗಟ್ಟಲೆ ಚಿನ್ನವನ್ನು ಆಮದು ಮಾಡಿಕೊಳ್ಳುವ ಚಿನ್ನದಂತಾ ದೇಶವಾಗಿರುವ ನಮ್ಮ ಭಾರತದಲ್ಲೇ ಪ್ರತಿ ವರ್ಷ ಉತ್ಪತ್ತಿಯಾಗುವ ಚಿನ್ನದ ಪ್ರಮಾಣ ಎಷ್ಟು ಗೊತ್ತಾ. ನಮ್ಮ ರಾಜ್ಯದ ರಾಯಚೂರಿನ ಹಟ್ಟಿ ಚಿನ್ನದ ಗಣಿ ಹಾಗೂ ಪಕ್ಕದ ಆಂಧ್ರಪ್ರದೇಶದ ಕರ್ನೂಲಿನ ಜೊನ್ನಗಿರಿ ಯೋಜನೆ ಎರಡೂ ಸೇರಿ ಜೊತೆಗೆ ತಾಮ್ರ, ಪೆಲ್ಲಾಡಿಯಂ ಮೊದಲಾದ ಲೋಹಗಳ ರಾಸಾಯನಿಕ ಕ್ರಿಯೆಯಿಂದ ಉತ್ಪತ್ತಿ ಮಾಡುವ ಎಲ್ಲ ಸೇರಿ ಜಸ್ಟ್ ಒಂದರಿಂದ  ಎರಡು ಟನ್ ಮಾತ್ರ. ಅಚ್ಚರಿ ಅನ್ನಿಸಿತಾ,

ಇಷ್ಟೆಲ್ಲ ತಿಳಿದುಕೊಂಡ ಮೇಲೂ ನಿಮ್ಮ ಮನದನ್ನೆಯರನ್ನ ಚಿನ್ನಾ ಅಂತ ಕರೆದು ನೀವು ಸುಮ್ಮನಾಗಿಬಿಡಬಹುದು. ಆದರೆ ಚಿನ್ನಾ ಅಂತ ಕರೆಸಿಕೊಳ್ಳುವ ಅವರು ಸುಮ್ಮನಿದ್ದಾರೆಯೇ. ಚಿನ್ನದ ಧಾರಣೆ ಹೆಚ್ಚುತ್ತ ಹೋದಂತೆ ಡಾಲರ್ ಎದುರು ರೂಪಾಯಿ ಸೆಂಚುರಿ ಬಾರಿಸುವುದು ಗ್ಯಾರಂಟಿ, ಇದು ಮೋದಿಯ ಗ್ಯಾರಂಟಿ!