"ಭಗವಂತನ ದಿಕ್ಕನ್ನೇ ಬದಲಿಸಿದ ಪರಮ ಹರಿಭಕ್ತ ಕನಕದಾಸರು" 

ಕನಕದಾಸರ ಬಗ್ಗೆ ಲೇಖನ

"ಭಗವಂತನ ದಿಕ್ಕನ್ನೇ ಬದಲಿಸಿದ ಪರಮ ಹರಿಭಕ್ತ ಕನಕದಾಸರು" 

"ಭಗವಂತನ ದಿಕ್ಕನ್ನೇ ಬದಲಿಸಿದ ಪರಮ ಹರಿಭಕ್ತ ಕನಕದಾಸರು" 

- ಬಿ.ಆರ್.ರವೀಂದ್ರ (ರಾಣಾ) 

   ನಾವು ಕವಿಗಳಾಗಿ, ಸಾಹಿತ್ಯಕಾರರಾಗಿ, ದಾರ್ಶನಿಕರಾಗಿ, ಸಾಹಿತ್ಯ ಸೇವೆಯನ್ನು ಮಾಡಿದ ಹಲವು ಮಹಾನ್ ವ್ಯಕ್ತಿಗಳನ್ನು, ಸಂತರನ್ನು ಕಂಡಿರುತ್ತೇವೆ. ಆದರೆ ದೇವರ ಅಸ್ತಿತ್ವವನ್ನು ನಂಬುತ್ತಾ ಒಬ್ಬ ಶ್ರೇಷ್ಠ ಭಕ್ತರಾಗುವುದರ ಜೊತೆ ಜೊತೆಗೆ ಭಕ್ತಿ ಮಾರ್ಗದಲ್ಲಿ ಇದ್ದರೂ, ಆಸ್ತಿಕರ ಮೂಢನಂಬಿಕೆ, ಕಂದಾಚಾರಗಳನ್ನು, ಸಾಮಾಜಿಕ ಅಸಮಾನತೆಯನ್ನು, ಜಾತಿ ಪದ್ಧತಿಯನ್ನು ಕಟುವಾಗಿ ಟೀಕಿಸಿದವರು ಕನಕದಾಸರು. ಕೆಳವರ್ಗದ ಸಮುದಾಯದಿಂದ ಬಂದ ಕನಕದಾಸರು ಭಕ್ತಿ ಮಾರ್ಗದಲ್ಲಿ ಗಮ್ಯ ಸೇರಿದ ಹಾದಿ ತುಂಬಾ ಕಷ್ಟಕರ ಮತ್ತು ತ್ರಾಸದಾಯಕವಾಗಿತ್ತು, ಜಾತಿ ಪದ್ಧತಿ ಉತ್ತುಂಗದಲ್ಲಿದ್ದ ಸಮಯದಲ್ಲಿ ಒಬ್ಬ ಕೃಷ್ಣನ ಭಕ್ತರಾಗಿ ಆಧ್ಯಾತ್ಮಿಕ ಚಿಂತನೆಗಳನ್ನು ಜಗತ್ತಿಗೆ ಸಾರಿದವರು ಕನಕದಾಸರು. ಕನಕದಾಸರ ಶ್ರೇಷ್ಠತೆ ಎಂದರೆ ಆಗಿನ  ಆಧ್ಯಾತ್ಮಿಕ ಪೀಠಗಳಲ್ಲಿ, ಮಠಗಳಲ್ಲಿ ನೀ ಸಂಸ್ಕöÈತದ ಪಾರುಪತ್ಯ ನಡೆಯುತ್ತಿದ್ದಾಗ, ಕನ್ನಡ ಭಾಷೆಯಲ್ಲಿ ಸುಮಾರು 316 ಕ್ಕಿಂತಲೂ ಅಧಿಕ ಅದ್ಭುತವಾದ ಕೀರ್ತನೆಗಳನ್ನು ರಚನೆಮಾಡಿರುವುದಲ್ಲದೆ, "ಮೋಹನ ತರಂಗಿಣಿ" "ನಳ ಚರಿತ್ರೆ" "ಹರಿಭಕ್ತಿಸಾರ" ಮುಂತಾದ ಹಲವು ಗ್ರಂಥಗಳನ್ನು ಚಂದೊಬದ್ಧವಾಗಿ ರಚನೆ ಮಾಡಿದ ಕೀರ್ತಿ ಕನಕದಾಸರಿಗೆ ಸಲ್ಲುತ್ತದೆ. 

ನಾವು ಕನಕದಾಸರ ಕೀರ್ತನೆಗಳಲ್ಲಿನ ಸಮಾಜ ಸುಧಾರಣೆಯ ವಿಚಾರಗಳನ್ನು ಚರ್ಚಿಸುವ ಮುನ್ನ ಅವರ ಬಗ್ಗೆ ಕಿರುಪರಿಚಯ ಮಾಡಿಕೊಳ್ಳುವುದಾದರೆ. ಕನಕದಾಸರು ಹಾವೇರಿ ಜಿಲ್ಲೆಯ ಸಿಗ್ಗಾವಿ ತಾಲ್ಲೂಕಿನ ಬಾಡ ಗ್ರಾಮದಲ್ಲಿ ಜನಿಸಿದವರು. ಇವರ ಕಾಲಮಾನ ಕ್ರಿಸ್ತ ಶಕ 1508 ರಿಂದ 1606. ಇವರ ತಂದೆ ತಾಯಿ ಬೀರೇಗೌಡ ಮತ್ತು ಬೀಚಮ್ಮ ಇವರು ಕುರುಬ ಗೌಡ ಸಮುದಾಯಕ್ಕೆ ಸೇರಿದವರು. ಇವರ ತಂದೆ ತಾಯಿ ವೈಷ್ಣವ ಪಂಥದವರಾಗಿ ವಿಷ್ಣು ಭಕ್ತರಾಗಿದ್ದರು, ಅದರಲ್ಲಿಯೂ ಇವರ ತಂದೆ ವಿಜಯನಗರ ಸಾಮ್ರಾಜ್ಯದಲ್ಲಿ ಒಬ್ಬ ದಂಡನಾಯಕರಾಗಿದ್ದು  ಆಗ ವಿಜಯನಗರ ಸಾಮ್ರಾಜ್ಯದ ಅರಸರು ಹೇಗೆ ತಿರುಪತಿಯ ತಿಮ್ಮಪ್ಪನ ಭಕ್ತರೊ ಹಾಗೆಯೇ ಇವರು ಸಹ ತಿರುಪತಿಯ ತಿಮ್ಮಪ್ಪನ ಭಕ್ತರಾಗಿದ್ದರು. ಆದಕಾರಣ ತಿಮ್ಮಪ್ಪನ ಆಶೀರ್ವಾದದಿಂದ ಹುಟ್ಟಿದ ಮಗನಾದ ಕಾರಣ ಇವರಿಗೆ "ತಿಮ್ಮನಾಯಕ" ಎಂಬ ಹೆಸರಿಟ್ಟರು. ಅವರ ತಂದೆಯ ಮರಣದ ನಂತರ ತಾನು ದಂಡನಾಯಕನಾಗಿ ಅಧಿಕಾರ ನಿರ್ವಹಿಸಿದ ತಿಮ್ಮನಾಯಕ ಕಾರಣಾಂತರಗಳಿAದ ಯುದ್ಧದಲ್ಲಿ ಸೋತ ನಂತರ ಜೀವನದಲ್ಲಿ ವೈರಾಗ್ಯ ಹುಟ್ಟಿ ಹರಿಭಕ್ತರಾದರು. ಹರಿಭಕ್ತರಾದ ನಂತರ ತಿಮ್ಮಪ್ಪನಾಯಕನ ಹೆಸರನ್ನು ಅವರ ಗುರುಗಳಾದ ವ್ಯಾಸರಾಯರು ಕನಕದಾಸರೆಂದು ಬದಲಾಯಿಸಿದರು. ಕಾಗಿನೆಲೆಯ ಆದಿಕೇಶವನ ಪರಮ ಭಕ್ತರಾದ ಕನಕದಾಸರು ಅದೇ ಅಂಕಿತನಾಮದಲ್ಲಿ ತಮ್ಮ ಕೀರ್ತನೆಗಳನ್ನು ರಚಿಸಿದ್ದಾರೆ. 

ಕನಕದಾಸರದ್ದು "ಹಂಸಕ್ಷೀರ ನ್ಯಾಯ" ಕನಕದಾಸರು ಹಂಸ ಯಾವ ರೀತಿ ಹಾಲನ್ನು ನೀರಿನಿಂದ ಬೇರ್ಪಡಿಸುತ್ತದೊ ಅದೇ ರೀತಿ ಅವರು ಒಬ್ಬ ಆಸ್ತಿಕರಾಗಿ  ದೇವರನ್ನು ನಂಬುತ್ತಿದ್ದರು, ದೇವರ ಅಸ್ತಿತ್ವವನ್ನು ನಂಬುತ್ತಿದ್ದರು, ಆದರೆ ಮುಕ್ತಿ ಪಡೆಯುಲು ಸಮಾಜದಲ್ಲಿ ನೆಲೆಯೂರಿದ್ದ ಮೂಢನಂಬಿಕೆ ಕಂದಾಚಾರಗಳನ್ನು ತೀವ್ರವಾಗಿ ವಿರೋಧಿಸಿದ್ದರು, ಅದಕ್ಕಾಗಿಯೇ ಅವರು ತಮ್ಮ ಕೀರ್ತನೆಗಳಲ್ಲಿ ಹೇಳುತ್ತಾರೆ,

" ಜಪವ ಮಾಡಿದರೇನು ತಪವ ಮಾಡಿದರೇನು
ವಿಪರೀತ ಕಪಟಗುಣ ಕಲುಷವಿದ್ದವರು" 
"ತೀರ್ಥವನು ಪಿಡಿದವರೆಲ್ಲ ತಿರುನಾಮಧಾರಿಗಳೇ ಜನ್ಮ
ಸಾರ್ಥಕವಿಲ್ಲದವರೆಲ್ಲ ಭಾಗವತರೆ"

ಹೀಗೆ ಡಾಂಭಿಕ ಭಕ್ತಿಯನ್ನು ಟೀಕಿಸುವ ಕನಕದಾಸರು 12 ನೇ ಶತಮಾನದಲ್ಲಿ ಭಕ್ತಿ ಪಂಥವನ್ನು ಹುಟ್ಟು ಹಾಕಿ ಸಮಾಜದಲ್ಲಿ ನೆಲೆಯೂರಿದ್ದ ಮೂಢನಂಬಿಕೆ ಕಂದಾಚಾರಗಳನ್ನು ಬಸವಣ್ಣನವರು ಪ್ರತಿಭಟಿಸಿ ಕಲ್ಯಾಣ ಕ್ರಾಂತಿಗೆ ಕಾರಣರಾದರೋ ಹಾಗೆ ಕನಕದಾಸರು ದಾಸ ಪರಂಪರೆಯಲ್ಲಿ ಒಬ್ಬ ದಾರ್ಶನಿಕರಾಗಿ,   ಒಬ್ಬ ಚಿಂತರಾಗಿ, ಜೊತೆ ಜೊತೆಗೆ ಸಮಾಜದ ಪರಿವರ್ತಕರಾದವರು. ಅವರ ಕೀರ್ತನೆಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ಚಿಂತನೆಯುಕ್ತ ತತ್ವಗಳು ಸಾಕಷ್ಟು ಕಾಣಬಹುದು,

"ತಲ್ಲಣಿಸದಿರು ಕಂಡ್ಯ ತಾಳು ಮನವೇ
ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ"
"ಬೆಟ್ಟದಾ ತುದಿಯಲ್ಲಿ ಹುಟ್ಟಿದ ವೃಕ್ಷಕ್ಕೆ
ಕಟ್ಟೆಯನು ಕಟ್ಟಿ ನೀರೆರೆದವರು ಯಾರೋ
ಪುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾಗಿರಲು
ಗಟ್ಯಾಗಿ ಸಲಹುವನು ಇದಕೆ ಸಂಶಯವಿಲ್ಲ" 

ಕನಕದಾಸರು ಎಷ್ಟೇ ಶ್ರೇಷ್ಠ ಭಕ್ತರಾದರೂ ಸಹ ಕೆಳಸಮುದಾಯದಿಂದ ಬಂದವರೆAಬ ಕಾರಣಕ್ಕೆ ಆಧ್ಯಾತ್ಮಿಕ ಪೀಠಗಳಲ್ಲಿ ಸಮಾಜದಲ್ಲಿ ಮೇಲ್ವರ್ಗದವರಿಂದ ತಿರಸ್ಕಾರಕ್ಕೆ ಒಳಗಾದವರು, ಅವಮಾನಿತರಾದವರು, ಈ ಎಲ್ಲಾ ತಿರಸ್ಕಾರದ ಫಲ 
ಕಟ್ಟ ಕಡೆಗೆ  "ರಾಮಧ್ಯಾನ ಚರಿತೆ" ಎಂಬ ಕಾವ್ಯದ ರಚನೆ ಮಾಡಿದರು ಇಲ್ಲಿ ಮೇಲ್ವರ್ಗದವರ ಆಹಾರವಾದ "ಅಕ್ಕಿ" ಮತ್ತು ಕೆಳವರ್ಗದವರ ಆಹಾರವಾದ  "ರಾಗಿ" ನಡುವಿನ ವಾದ ವಿವಾದವನ್ನು ಸಮಾಜದಲ್ಲಿನ ಬಡವರ ಮತ್ತು ಶ್ರೀಮಂತರ ನಡುವಿನ ಅಸಮಾನತೆಯನ್ನು ವಿಡಂಬನೆ ಮಾಡಿದ್ದಾರೆ. 

ಕನಕದಾಸರು ವೈರಾಗ್ಯದಿಂದ ಶ್ರೇಷ್ಠ ದಾಸರಾಗಿ ವ್ಯಾಸರಾಯರಿಂದ ಪ್ರಶಂಸೆ ಪಡೆದರೂ ಉಡುಪಿಯ ಕುಷ್ಣನನ್ನು ನೋಡಲು ಹೋದಾಗ ದೇವಸ್ಥಾನದ ಪೊರೋಹಿತರು ದೇವಸ್ಥಾನದ ಒಳಗೆ ಪ್ರವೇಶ ನಿರಾಕರಿಸಿದಾಗ ಕನಕದಾಸರು ಆಲಯದ ಹೊರಗೆ ಕೇಶವನನ್ನು ಪ್ರಾರ್ಥಿಸಲಾಗಿ, ಈತನ ಭಕ್ತಿಗೆ ಮೆಚ್ಚಿದ ಕೃಷ್ಣ ಪೂರ್ವಾಭಿಮುಖವಾಗಿ ಇದ್ದ ಕೃಷ್ಣನ ವಿಗ್ರಹ ಪಶ್ಚಿಮಾಭಿಮುಖವಾಗಿ ತಿರುಗಿದ್ದಲ್ಲದೆ ಗೋಡೆ ಬಿರುಕು ಬಿಟ್ಟು ಕನಕದಾಸರಿಗೆ ದರ್ಶನ ನೀಡುತ್ತಾನೆ, ಉಡುಪಿಯಲ್ಲಿ ಕನಕದಾಸರಿಗೆ ದರ್ಶನ ನೀಡಿದ ಸ್ಥಳ ಈಗಲೂ ಕನಕನ ಕಿಂಡಿಯಾಗಿ ಪ್ರತೀತಿ ಪಡೆದು ಈಗಲೂ ದೇವರ ದರ್ಶನ ಕನಕನ ಕಿಂಡಿಯಿAದ ಪಡೆಯುವಂತಾಗಿದೆ. ಇಂತಹ ಭಗವಂತನ ದಿಕ್ಕನ್ನೇ ಬದಲಿಸಿದ ಕೀರ್ತಿ ಕನಕದಾಸರಿಗೆ ಸಲ್ಲುತ್ತದೆ.

ಹೀಗೆ ಭಕ್ತಿ ಪಂಥದಲ್ಲಿದ್ದರೂ, ಆಸ್ತಿಕರಾದರೂ ಸಹ ತಾವು ಕಂಡ, ಅನುಭವಿಸಿದ ಸಮಾಜದಲ್ಲಿನ ತಾರತಮ್ಯವನ್ನು ತಮ್ಮ ಕೀರ್ತನೆಗಳ ಮೂಲಕ ಕಟುವಾಗಿ ಟೀಕಿಸಿದವರು ಕನಕದಾಸರು.

 "ಕುಲ ಕುಲವೆಂದು ಬಡಿದಾಡದಿರಿ ನಿಮ್ಮ
ಕುಲದ ನೆಲೆಯನೇನಾದರೂ ಬಲ್ಲಿರಾ " 
"ಜಲವೇ ಸಕಲ ಕುಲಕ್ಕೆ ತಾಯಿಯಲ್ಲವೆ ಆ
ಜಲದ ಕುಲವನೇನಾದರೂ ಬಲ್ಲಿರಾ"

ಎಂದು ಪ್ರಶ್ನಿಸಿದ ಕನಕದಾಸರ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ. ಹಾಗೆಯೇ ನಾವು ಸೇರುವ ಸಂಗ ಹೇಗಿರಬೇಕು ಎಂದರೆ ಮೃಷ್ಟಾನ್ನ ಭೋಜನ, ಪಾಯಸ ಪರಮಾನ್ನ ಬಡಿಸುವ ದುಷ್ಟರ ಸಂಗಕ್ಕಿಂತ ಗಂಜಿ ಅಂಬಲಿ ಬಡಿಸುವ ಬಡವನಾದರೂ ಗುಣದಲ್ಲಿ ಸಜ್ಜನರ ಸಂಗ ಮಾಡಬೇಕು ಎಂದು ತಮ್ಮ ಕೀರ್ತನೆಗಳಲ್ಲಿ ಈ ರೀತಿ ಹೇಳಿದ್ದಾರೆ.
  
"ದುರ್ಜನರ ಮನೆಯ ಪಾಯಸಾನ್ನಕ್ಕಿಂತ
ಸಜ್ಜನರ ಮನೆಯ ರಬ್ಬಳಿಗೆ ಲೇಸು
ಹೆಜ್ಜೆಗೆ ಸಾವಿರ ಹೊನ್ನನಿತ್ತರೂ ಬೇಡ ಬಲು
ದುರ್ಜನರ ಸಂಗ ಬಲು ಭಂಗ ಹರಿಯೆ"  

ಹೀಗೆ ಜೀವನ್ಮುಖಿ ವಿಚಾರಧಾರೆಗಳನ್ನು ಸಾರಿದ ಕನಕದಾಸರು ಸಮಾಜಮುಖಿ ವಿಚಾರಗಳನ್ನು ಸಹ ಪ್ರಸ್ತುತ ಪಡಿಸಿದ್ದಾರೆ. 
" ಏನು ಇಲ್ಲದ ಎರಡು ದಿನದ ಸಂಸಾರ
ಜ್ಞಾನದಲಿ ದಾನ ಧರ್ಮವ ಮಾಡಿರಯ್ಯ"

ಕಳ್ಳತನವ ಮಾಡಿ ಒಡಲು ಹೊರೆಯಲು ಬೇಡ
ಕುಳ್ಳೀರ್ದ ಸಭೆಯೊಳಗೆ ಕುತ್ಸಿತವುಬೇಡ
ಒಳ್ಳೆಯ ನಾನೆಂದು ಬಲು ಹೆಮ್ಮೆ ಪಡಬೇಡ
ಬಾಳ್ವೆಸ್ಥಿರವೆಂದು ನೀ ನಂಬಿಕೆಡಬೇಡ"

ಹೀಗೆ ಸಮಾಜದಲ್ಲಿ ಜನ ಹೇಗಿದ್ದಾಗ ಮಾತ್ರ ಒಂದು ಸುಂದರ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಪ್ರತಿಪಾದಿಸಿದ ಕನಕದಾಸರು ನಮ್ಮ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ನೀಡಿದ ಕೊಡುಗೆ ಅಪಾರ, ಅವರ ತತ್ವ ಮತ್ತು ಚಿಂತನೆಗಳು ಸಾರ್ವಕಾಲಿಕವಾಗಿದ್ದು ಇಂದಿಗೂ ಪ್ರಸ್ತುತವಾಗಿವೆ.