ಚಿನ್ನ, ಬೆಳ್ಳಿ ದರಗಳ ನಾಗಾಲೋಟ: ಆರ್ಥಿಕ ಬಿಕ್ಕಟಿನ ಮುನ್ಸೂಚನೆ? ಎಸ್‌.ಆರ್‌.ವೆಂಕಟೇಶ್‌ ಪ್ರಸಾದ್

( ಲೇಖಕರು ಕನ್ನಡದ ಹಿರಿಯ ಪತ್ರಕರ್ತರು, ಶೇರು ಮಾರುಕಟ್ಟೆ ಹಾಗೂ ಹಣಕಾಸು ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿ ಹಾಗೂ ಪರಿಣಿತಿಯುಳ್ಳವರು)

ಚಿನ್ನ, ಬೆಳ್ಳಿ ದರಗಳ ನಾಗಾಲೋಟ:  ಆರ್ಥಿಕ ಬಿಕ್ಕಟಿನ ಮುನ್ಸೂಚನೆ?                                                                                                                   ಎಸ್‌.ಆರ್‌.ವೆಂಕಟೇಶ್‌ ಪ್ರಸಾದ್

'ಬೆವರ ಹನಿ’ ವಿಶೇಷ

ಎಸ್.ಆರ್.ವೆಂಕಟೇಶ ಪ್ರಸಾದ್

 

     ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ದರ ದಾಖಲೆ ಏರಿಕೆಯನ್ನು ಕಾಣುತ್ತಿದೆ. ದಿನದಿಂದ ದಿನಕ್ಕೆ ಏರಿಕೆಯ ನೂತನ ದಾಖಲೆಗಳು ನಿರ್ಮಾಣವಾಗುತ್ತಿವೆ. 2025ರ ಜನವರಿ ಒಂದರಂದು 10 ಗ್ರಾಂ ಚಿನ್ನದ ಧಾರಣೆ (24 ಕ್ಯಾರೆಟ್) 78,000 ರೂಪಾಯಿ ಇದ್ದದ್ದು,2026ರ ಜನವರಿ ಎರಡರಂದು 1,36,200 ರೂಪಾಯಿಗಳಿಗೆ ತಲುಪಿದೆ.ಕಳೆದ ಡಿಸೆಂಬರ್ ನಲ್ಲಿ 1,41,385 ರೂಪಾಯಿಗಳನ್ನು ತಲುಪಿ ಹೊಸ ದಾಖಲೆ ಬರೆದಿತ್ತು. ಅಂದರೆ, ಶೇಕಡ 77 ರಷ್ಟು ಏರಿಕೆ.2026 ರಲ್ಲೂ ಮತ್ತಷ್ಟು ನಾಗಾಲೋಟವನ್ನು ಅಂದಾಜಿಸಲಾಗಿದೆ.

 

       ಬೆಳ್ಳಿ ಧಾರಣೆ ಕೆ.ಜಿ.ಗೆ 2,42,000 ರೂಪಾಯಿಗೆ ತಲುಪಿದ್ದು, ಒಂದು ವರ್ಷದ ಅವಧಿಯಲ್ಲಿ ಶೇಕಡ 180 ರಷ್ಟು ಏರಿಕೆ ಕಂಡಿದೆ. 1979 ರಿಂದ ವಾರ್ಷಿಕ ಏರಿಕೆಯಲ್ಲೇ ಇದು ನೂತನ ದಾಖಲೆ.

  

       ಅಮೂಲ್ಯ ಲೋಹಗಳೆಂದು ಪರಿಗಣಿಸಲ್ಪಟ್ಟಿರುವ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿನ ಈ ಗಗನಮುಖಿ ಓಟ  ಕೇವಲ ಬೇಡಿಕೆಯ ಕಾರಣಕ್ಕಾಗಿ ಆದದ್ದಲ್ಲ; ಇದು, ಜಾಗತಿಕ ಮತ್ತು ದೇಶೀಯ ಆರ್ಥಿಕತೆಯಲ್ಲಿನ ಅಸ್ಥಿರತೆ ಮತ್ತು ಅನಿಶ್ಚಿತತೆಯ ಪ್ರತಿಬಿಂಬ.ಆರ್ಥಿಕ ಬಿಕ್ಕಟ್ಟಿನ ಮುನ್ಸೂಚನೆ ಎನ್ನುವುದು ತಜ್ಞರ ಅಭಿಪ್ರಾಯ.

 

      ಜೊತೆಗೆ,ಇದು ಕಾಗದದ ಕರೆನ್ಸಿಯ ಭವಿಷ್ಯ ಮತ್ತು ಭೌಗೋಳಿಕ ರಾಜಕೀಯ ಸ್ಥಿರತೆಯ ಬಗೆಗಿನ ಆಳವಾದ ಆತಂಕದ ಲಕ್ಷಣಗಳು.ಜಾಗತಿಕ ಅಶಾಂತಿಯ ಮಾಪಕ ಎನ್ನುತ್ತವೆ ಇತಿಹಾಸದ ಪುಟಗಳು. 

       

      ಭೂಕಂಪ ಮುನ್ಸೂಚಕ:  ಜಾಗತಿಕ ಆರ್ಥಿಕ ಅನಿಶ್ಚಿತತೆ, ಯುದ್ಧ,ಮಧ್ಯ ಪ್ರಾಚ್ಯ ಸಂಘರ್ಷದಂತಹ ರಾಜಕೀಯ ಉದ್ವಿಗ್ನತೆಗಳು,ಡಾಲರ್ ಅಪಮೌಲ್ಯ ,ಹಣದುಬ್ಬರ, ಷೇರು ಪೇಟೆಯಲ್ಲಿನ ಕುಸಿತ ಮತ್ತು ಆರ್ಥಿಕ ಆಘಾತಗಳಂತಹ  ಘಟಕಗಳು ನಡೆದಾಗಲೆಲ್ಲಾ ಚಿನ್ನದ ಬೆಲೆ ದುಬಾರಿಯಾಗಿದೆ.ಹೂಡಿಕೆದಾರರು ತಮ್ಮ ಹಣ ಸುರಕ್ಷಿತ ಮತ್ತು ಲಾಭ ತರುವುದನ್ನು ಬಯಸುವುದರಿಂದ ಚಿನ್ನ ಮತ್ತು ಬೆಳ್ಳಿಯ  ಮೇಲೆ ಹೂಡಿಕೆಗೆ ಮುಗಿಬೀಳುತ್ತಾರೆ.ಬೇಡಿಕೆ ರಾಕೆಟ್ ವೇಗ ಪಡೆದುಕೊಳ್ಳುತ್ತದೆ.ಬೆಲೆ ನಿಯಂತ್ರಣ ತಪ್ಪುತ್ತದೆ.

 

   ಅಂದರೆ,ಚಿನ್ನದ ಧಾರಣೆಯು ಸಾಮಾನ್ಯವಾಗಿ "ಭೂಕಂಪ ಮುನ್ಸೂಚಕ"ವಾಗಿ ಕಾರ್ಯ ನಿರ್ವಹಿಸುತ್ತದೆ.ಸಂಘರ್ಷಗಳು-ಆಘಾತಗಳಂತಹ ಪ್ರಮುಖ ಘಟನೆಗಳ ಸಮಯದಲ್ಲಿ ಸಂಭಾವ್ಯ ಆಘಾತಗಳ ವಿರುದ್ಧ ಪೂರ್ವಭಾವಿ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಬೆಲೆ ಏರುತ್ತದೆ.ಬಿಕ್ಕಟ್ಟು ಬಗೆಹರಿದಂತೆ ಸ್ಥಿರಗೊಳ್ಳುತ್ತದೆ.

 

      ದುಬಾರಿಯ ಹಾದಿ: ಅಮೆರಿಕನ್ ಡಾಲರ್ ನ್ನು ಚಿನ್ನದ ಬೆಲೆಗೆ, ಇತರ ಕರೆನ್ಸಿಗಳ ಮೌಲ್ಯವನ್ನು ಡಾಲರ್ ಗೆ ಜೋಡಿಸಿದ್ದ ವ್ಯವಸ್ಥೆ 'ಬ್ರೆಟನ್ ವುಡ್ಸ್‌' .1971ರಲ್ಲಿ ಇದನ್ನು ಕೈಬಿಟ್ಟ ನಂತರ ಹಣದುಬ್ಬರ ಎರಡಂಕಿಗೆ ಹೆಚ್ಚಿತು.1973 ರ ತೈಲ ಬಿಕ್ಕಟ್ಟು ಮತ್ತು ವಿಯಟ್ನಾಂನ ಮೇಲಿನ ಯುದ್ಧ ಅಮೆರಿಕದ ಆರ್ಥಿಕ ಪರಿಸ್ಥಿತಿಗೆ ದೊಡ್ಡ ಹೊಡೆತ ಕೊಟ್ಟಿತು.

 

     ದಶಕಗಳ ಕಾಲ 10 ಗ್ರಾಂ ಗೆ 185 ರೂಪಾಯಿ ಇದ್ದ ಚಿನ್ನದ ಧಾರಣೆ, 1980ರ ದಶಕದ ವೇಳೆಗೆ ಭಾರಿ ಏರಿಕೆ ಕಂಡು 1,300 ರೂಪಾಯಿಗಳಿಗೆ ದಾಪುಗಾಲಿಟ್ಟಿತು.1979-80 ರಲ್ಲಿನ ಇರಾನ್ ಕ್ರಾಂತಿ, ಆಫ್ಘಾನಿಸ್ಥಾನದ ಮೇಲೆ ರಷ್ಯಾದ ಆಕ್ರಮಣ,ಹಣದುಬ್ಬರ ಏರಿಕೆಯೂ ಕೈಜೋಡಿಸಿ   ಚಿನ್ನದ ಧಾರಣೆಯನ್ನು ಶೇಕಡ 440 ರಷ್ಟು ಏರಿಕೆ ಮಾಡಿಸಿತು.ಅಮೆರಿಕ ಡಾಲರ್ ಮೇಲಿನ ವಿಶ್ವಾಸ ಪೂರ್ಣ ಪ್ರಮಾಣದಲ್ಲಿ ಕುಗ್ಗಿಹೋಯಿತು.

 

             1990-91 ರಲ್ಲಿ ಕೊಲ್ಲಿ ಯುದ್ಧದ ಸಂದರ್ಭದಲ್ಲೂ ಚಿನ್ನದ ಬೆಲೆ ಏರಿಕೆ ಆಗಿತ್ತು.2008ರಲ್ಲಿ ಅಮೆರಿಕ ತೀವ್ರ ಆರ್ಥಿಕ ಹಿಂಜರಿತಕ್ಕೆ ಸಿಲುಕಿದ್ದರಿಂದ ಮತ್ತು 2010ರಲ್ಲಿನ ಯುರೋ ಸಮಸ್ಯೆಯಿಂದ ಹೂಡಿಕೆಗಾಗಿ ಚಿನ್ನದ ಬೇಡಿಕೆ ಹೆಚ್ಚಿತು. 10 ಗ್ರಾಂ ಗೆ 18,500 ರೂಪಾಯಿಗಳಿಗೆ ಏರಿಕೆ ಆಯಿತು.2020ರ ಕೋವಿಡ್-19 ತಂದ ಆರ್ಥಿಕ ಅನಿಶ್ಚತತೆ 10 ಗ್ರಾಂ ಚಿನ್ನದ ಧಾರಣೆ 48,000-50,000 ರೂಪಾಯಿಗಳಿಗೆ, 2024-25  ರಲ್ಲಿನ ವ್ಯಾಪಾರ ಒಪ್ಪಂದಗಳು ಉಂಟು ಮಾಡಿದ ಆತಂಕಕಾರಿ ಪರಿಸ್ಥಿತಿ, ಹಣದುಬ್ಬರ, ಚೀನಾ ಹಾಗೂ ದಕ್ಷಿಣ ಕೊರಿಯಾ ಭಾರೀ ಪ್ರಮಾಣದಲ್ಲಿ ಚಿನ್ನದ ಖರೀದಿಗೆ ಮುಂದಾಗಿದ್ದು ಹಾಗೂ ಜಾಗತಿಕ ಉದ್ವಿಗ್ನ ಪರಿಸ್ಥಿತಿ ಚಿನ್ನದ ದರಗಳಲ್ಲಿ ಹೆಚ್ಚಿನ ನೆಗೆತಕ್ಕೆ ಕಾರಣವಾದವು.

 

            

      ಡಾಲರ್ ಮೌಲ್ಯ ಮತ್ತು ಬಡ್ಡಿ ದರ: ಅಮೆರಿಕದ ಕೇಂದ್ರ ಬ್ಯಾಂಕ್ ಆಗಿರುವ ಫೆಡರಲ್ ರಿಸರ್ವ್ ಸಂಸ್ಥೆ, ಇತ್ತೀಚಿಗೆ ಸತತ ಮೂರನೇ ಬಾರಿಗೆ ಬಡ್ಡಿ ದರದಲ್ಲಿ 25 ಮೂಲಾಂಶಗಳಷ್ಟು ಇಳಿಸಿತು. ಬಡ್ಡಿ ದರಗಳು ಕಡಿಮೆ ಯಾದಾಗ ಡಾಲರ್ ಮೌಲ್ಯ ಕುಸಿಯುತ್ತದೆ.ಡಾಲರ್ ಸೂಚ್ಯಂಕ 100 ಇದ್ದದ್ದು 98ರ ಆಸುಪಾಸಿಗೆ ಜಾರಿತು. ಹೂಡಿಕೆದಾರರು ಸುರಕ್ಷಿತ ಹೂಡಿಕೆ ಬಯಸುವುದರಿಂದ ಡಾಲರ್ ಬದಲಿಗೆ ಚಿನ್ನದಲ್ಲಿ ಹೂಡಿಕೆ ಹೆಚ್ಚಿ ಬೆಲೆ ಏರಿಕೆ ಆಗುತ್ತಿದೆ.

 

      ಹಣದುಬ್ಬರದ ವಿರುದ್ಧ ರಕ್ಷಣೆ: ವಸ್ತುಗಳ  ಬೆಲೆ ದುಬಾರಿಯಾದಾಗ ಹಣದ ಮೌಲ್ಯ ಕಡಿಮೆಯಾಗುತ್ತದೆ. ಅಂತಹ ಸಮಯದಲ್ಲಿ ಚಿನ್ನವು ತನ್ನ ಮೌಲ್ಯವನ್ನು ಉಳಿಸಿಕೊಳ್ಳುವ ಏಕೈಕ ಆಸ್ತಿಯಾಗಿ ಕಾಣುವುದರಿಂದ ಜನರು ಹೆಚ್ಚು ಖರೀದಿಗೆ ಮುಗಿಬೀಳುತ್ತಾರೆ.

 

ಬೆಳ್ಳಿ:  ಬೆಳ್ಳಿಯ ಧಾರಣೆ ಏರಿಕೆಯ ವಿಚಾರಕ್ಕೆ ಬರುವುದಾದರೆ,ಬೆಳ್ಳಿಯೂ ಚಿನ್ನದಂತೆ  ಅಮೂಲ್ಯ ಲೋಹ. ಆಭರಣಗಳ ರೂಪಕ್ಕೆ ಸೀಮಿತವಾಗಿದ್ದ ಬೆಳ್ಳಿ ಈಗ ಹೂಡಿಕೆಯಲ್ಲೂ ಪ್ರಮುಖ ಸ್ಥಾನ ಪಡೆದುಕೊಂಡಿದೆ.ಸರಕು ಪೇಟೆ(ಕಮಾಡಿಟಿ ಮಾರುಕಟ್ಟೆ) ಮತ್ತು ಇಟಿಎಫ್(ವಿನಿಮಯ- ವಹಿವಾಟು ನಿಧಿ)ಗಳಲ್ಲಿ ಇತ್ತೀಚಿನ ದಿನಗಳಲ್ಲಿ  ದೊಡ್ಡ ಪ್ರಮಾಣದ ಹೂಡಿಕೆಯಾಗುತ್ತಿದೆ.   

 

         ತಂತ್ರಜ್ಞಾನ ಮುಂದುವರಿದಂತೆ  ಕೈಗಾರಿಕೆಗಳಿಂದಲೂ ಬಹು ಬೇಡಿಕೆ ಬೆಳ್ಳಿಗೆ.2016ರಲ್ಲಿ 31,000 ಮೆಟ್ರಿಕ್ ಟನ್ ಇದ್ದ ಬೇಡಿಕೆ 2024ರ ವೇಳೆಗೆ 36,000 ಮೆಟ್ರಿಕ್ ಟನ್ ಗೆ ಏರಿತು. ಬೇಡಿಕೆಯಷ್ಟು ಉತ್ಪಾದನೆ ಇಲ್ಲದೆ ಕೊರತೆಯಿಂದಾಗಿ  ದುಬಾರಿಯ ದಾರಿ ಹಿಡಿಯುತ್ತಿದೆ.

        ಚೀನಾ,ಬೆಳ್ಳಿಯ ರಫ್ತಿನಲ್ಲಿ ಮೆಕ್ಸಿಕೊ ನಂತರ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ. ಕೈಗಾರಿಕೆಗಳಿಂದ ಮತ್ತು ಹೂಡಿಕೆದಾರರಿಂದ ಬೇಡಿಕೆ ದುಪ್ಪಟ್ಟಾಗುತ್ತಿದಂತೆ ಚೀನಾ ರಫ್ತಿನ ಮೇಲೆ ನಿರ್ಬಂಧಗಳನ್ನು ವಿಧಿಸಿದೆ.ಇದು ಬರಲಿರುವ ದಿನಗಳಲ್ಲಿ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಲಿದೆ.

 

     ಹಾಗಾದರೆ, ಚಿನ್ನ ಮತ್ತು ಬೆಳ್ಳಿ ಧಾರಣೆಯಲ್ಲಿನ ದಾಖಲೆ ಪ್ರಮಾಣದ ಏರಿಕೆಯು ಆರ್ಥಿಕ ಬಿಕ್ಕಟ್ಟಿನ ಮುನ್ಸೂಚನೆಯೇ? ಹೌದು! ಜಾಗತಿಕ ಮಟ್ಟದಲ್ಲಿ ಚೀನಾ,ದಕ್ಷಿಣ ಕೊರಿಯಾ,ಭಾರತ ಸೇರಿದಂತೆ ಕೆಲ ದೇಶಗಳ ದೊಡ್ಡ ಬ್ಯಾಂಕುಗಳು ಮತ್ತು ಕೇಂದ್ರ ಬ್ಯಾಂಕುಗಳು (ಉದಾಹರಣೆಗೆ  ಭಾರತೀಯ ರಿಸರ್ವ್ ಬ್ಯಾಂಕ್) ಭಾರಿ ಪ್ರಮಾಣದಲ್ಲಿ ಚಿನ್ನವನ್ನು ಖರೀದಿಸಿ ಸಂಗ್ರಹಿಸುತ್ತಿವೆ. ಇದು ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿಯ ನಿರ್ವಹಣೆಗಾಗಿನ ತಯಾರಿಯಂತೆ ಕಾಣುತ್ತಿದೆ. ಹೂಡಿಕೆದಾರರಿಂದ ಹೆಚ್ಚುತ್ತಿರುವ ಭಾರೀ ಬೇಡಿಕೆಯೂ ಇದಕ್ಕೆ ಪುಷ್ಟಿ ನೀಡುತ್ತಿರುವಂತಿದೆ.

 

      ಮತ್ತೊಂದು ವಾದದ ಪ್ರಕಾರ,'ಇದು ಬೇಡಿಕೆ ಮತ್ತು ಪೂರೈಕೆಯ ನಡುವಿನ ವ್ಯತ್ಯಾಸದಿಂದ ಆಗುತ್ತಿರಬಹುದು.ಅಲ್ಲದೆ, ಅಮೂಲ್ಯ ಲೋಹಗಳ ಬೆಲೆ ಏರಿಕೆಯು ಆರ್ಥಿಕ ಬಿಕ್ಕಟ್ಟಿನ ನೇರ ಸೂಚನೆಯಲ್ಲ'. ಆದರೆ,ಈ ಬೆಳವಣಿಗೆ ಜಾಗತಿಕ ಮತ್ತು ದೇಶೀ ಆರ್ಥಿಕತೆಯಲ್ಲಿನ ಅಸ್ಥಿರತೆ ಮತ್ತು ಅನಿಶ್ಚಿತತೆಯ ಪ್ರತಿಬಿಂಬ ಎನ್ನುವುದನ್ನು ಎಲ್ಲರೂ ಒಪ್ಪುತ್ತಾರೆ.