ಮೋದಿಯ ಬಲಗೈ ಭಂಟ ಅಮಿತ್ ಶಾ ಮುಂದಿನ ಪ್ರಧಾನಿಯಂತೆ, ಇದು ನಿಜವೇ ?!

      ಈ ಹಿನ್ನೆಲೆಯಲ್ಲೇ ಕೇಜ್ರಿವಾಲ್ ಜೈಲಿನಿಂದ ಹೊರ ಬಂದ ಬಳಿಕ ಮಾಡುತ್ತಿರುವ ಚುನಾವಣಾ ಪ್ರಚಾರ ಭಾಷಣಗಳಲ್ಲಿ 75 ವಯೋಮಾನದ ಮಿತಿಯ ಕಾರಣವಾಗಿ ಚುನಾವಣಾ ಫಲಿತಾಂಶದ ಬಳಿಕ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗುವುದಿಲ್ಲ. ಮೋದಿ ಈಗ ಪ್ರಚಾರ ಮಾಡುತ್ತಿರುವುದೇ ಅಮಿತ್ ಶಾ ಅವರನ್ನು ಪ್ರಧಾನಿ ಮಾಡಲು ಎಂದು ಪದೇ ಪದೇ ಹೇಳುತ್ತಿರುವುದು

ಮೋದಿಯ ಬಲಗೈ ಭಂಟ ಅಮಿತ್ ಶಾ ಮುಂದಿನ ಪ್ರಧಾನಿಯಂತೆ, ಇದು ನಿಜವೇ ?!


ಒಂದು ಗಳಿಗೆ


ಕುಚ್ಚಂಗಿ ಪ್ರಸನ್ನ


      ಮೊದಲಿಗೇ ಒಂದು ಸ್ಪಷ್ಟೀಕರಣ ಕೊಟ್ಟುಬಿಡುತ್ತೇನೆ, ಮೇಲಿನ ಹೆಡ್ಡಿಂಗ್‌ನಲ್ಲಿರುವ “ ಇದು ನಿಜವೇ” ಎಂಬ ಪದದ ಪೇಟೆಂಟ್ ನನ್ನದಲ್ಲ, ಇವತ್ತು ರಾಜ್ಯ ಮಟ್ಟದ ದಿನಪತ್ರಿಕೆಯಾಗಿರುವ ʼವಿಜಯ ವಾಣಿʼಯ ಸಂಸ್ಥಾಪಕ ಸಂಪಾದಕ ದಿವಂಗತ ಹೆಚ್.ಆರ್.ಗುಂಡೂರಾವ್ ಅವರಂತೆಯೇ ಪುಟಾಣಿ ಗಾತ್ರದಲ್ಲಿದ್ದ ಈ ದಿನಪತ್ರಿಕೆಯಲ್ಲಿ ಮಹತ್ವದ ಘಟನೆಯೊಂದರಲ್ಲಿ ಯಾರಾದರೂ ಪ್ರತಿಷ್ಟಿತರ ಕೈವಾಡ ಇದ್ದಲ್ಲಿ ಅಂತ ಒಂದು ಘಟನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ, ʼ ಇದು ನಿಜವೇ?” ಎಂದು ಬರೆದು ಪ್ರಕಟಿಸುತ್ತಿದ್ದರು. ಪ್ರಿಂಟ್ ಬಿಟ್ಟು ಇನ್ನಾವ ಮಾಧ್ಯಮಗಳೂ ಇಲ್ಲದ ಆ ಕಾಲದಲ್ಲಿ ಗುಂಡೂರಾಯರ ಈ “ ಇದು ನಿಜವೇ?” ಎಂಬ ಸುದ್ದಿಯೇ ಹೆಚ್ಚು ಪರಿಣಾಮ ಬೀರುತ್ತಿತ್ತು ಎನ್ನುವುದೂ ನಿಜ.

******


     ಜನರನ್ನು ಹೆದರಿಸುವುದು ಈತನಿಗೆ ಇಷ್ಟ : ಮೋದಿಯ ಬಲಗೈ ಆಗಿರುವ ಈ ಮನುಷ್ಯ ದೇಶವನ್ನು ನಡೆಸುತ್ತಿರುವುದು ಹೇಗೆ ? ಎಂಬರ್ಥ ಬರುವ ಹೆಡ್‌ಲೈನ್‌ನೊಂದಿಗೆ ಸುದೀರ್ಘ ಬರಹವೊಂದು ದಿ ಗಾರ್ಡಿಯನ್ ಪತ್ರಿಕೆಯಲ್ಲಿ ಎರಡು ದಿನಗಳ ಹಿಂದೆ ಪ್ರಕಟವಾಗಿದೆ. ಬ್ರಿಟನ್ ಮೂಲದ ದಿ ಗಾರ್ಡಿಯನ್ ಎರಡು ಶತಮಾನಗಳಷ್ಟು ಹಿರಿಯ ಪತ್ರಿಕೆ. ಭಾರತ ಸರ್ಕಾರದ ಗೃಹ ಮಂತ್ರಿ ಅಮಿತ್ ಶಾ ಕುರಿತ ಈ ಲೇಖನವನ್ನು ದಿಲ್ಲಿ ಮೂಲದ ನ್ಯೂಯಾರ್ಕ್ನ ಕೊಲಂಬಿಯಾ ವಿವಿಯ ಜರ್ನಲಿಸಂ ಸ್ಕೂಲ್‌ನ ಫೆಲೋ ಆಗಿರುವ ಅತುಲ್ ದೇವ್ ಬರೆದಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಡೆ ನುಡಿಗಳತ್ತ ತೀವ್ರ ಗಮನ ಇಟ್ಟಿರುವ ಅತುಲ್ ದೇವ್ ಮೊದಲು ಕ್ಯಾರವಾನ್ ಮಾಗಜೀನ್‌ನಲ್ಲೂ ಈ ಕುರಿತು ಬರೆಯುತ್ತಿದ್ದರು.
40 ವರ್ಷಗಳಿಂದ ನರೇಂದ್ರ ಮೋದಿಯ ನಂಬುಗೆಯ ಭಂಟನಂತಿರುವ ಅಮಿತ್ ಶಾ ಕೃತ್ಯಗಳ ಕುರಿತ ವಿವರವಾದ ಮಾಹಿತಿ ಈ ಬರಹದಲ್ಲಿದೆ. ಅಮಿತ್ ಶಾ ಇವತ್ತು ಪ್ರಧಾನಿ ನಂತರ ಇಂಡಿಯಾದ ಎರಡನೇ ಅತಿ ಶಕ್ತಿಶಾಲಿ ಮನುಷ್ಯ, ಮೋದಿ ಮೊದಲ ಸಲ ಪ್ರಧಾನಿಯಾದಾಗ ಅಮಿತ್ ಶಾ ಮಂತ್ರಿಯೇನೂ ಆಗಿರಲಿಲ್ಲ, ಬಿಜೆಪಿ ಅಧ್ಯಕ್ಷರಾಗಿದ್ದರು, ಆದರೆ ಫೋನಿನಲ್ಲಿ ಅಮಿತ್ ಶಾ ಕರೆ ಬಂತೆಂದರೆ ಸಾಕು ಮೋದಿ ಸಂಪುಟದ ಮಂತ್ರಿಗಳು ಅದುರಿಬಿದ್ದವರಂತೆ ಠಕ್ಕೆಂದು ಎದ್ದು ನಿಂತು ಬಡಬಡಿಸುತ್ತಿದ್ದರು ಎಂದು ಹೇಳುವ ಮೂಲಕ ಅಮಿತ್ ಶಾ ಎಷ್ಟು ಪವರ್‌ಫುಲ್ ಎಂಬುದನ್ನು ಅತುಲ್ ದೇವೆ ಬಣ್ಣಿಸುತ್ತಾರೆ.


    1971ರಿಂದ ಆರ್‌ಎಸ್‌ಎಸ್‌ನ ಪೂರ್ಣಾವಧಿ ಕಾರ್ಯಕರ್ತರಾಗಿ, ಆನಂತರ 1985ರಲ್ಲಿ ಬಿಜೆಪಿಗೆ ನಿಯುಕ್ತಿಗೊಂಡಿದ್ದ ನರೇಂದ್ರಮೋದಿ ಎಲ್ಲರಂತೆ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗಿ ಗೆದ್ದು, ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಬಳಿಕ ಮುಖ್ಯಮಂತ್ರಿಯಾದವರಲ್ಲ, ಬದಲಿಗೆ ಗುಜರಾತ್ ಮುಖ್ಯಮಂತ್ರಿ ಕೇಶುಬಾಯಿ ಪಟೇಲ್ ಅನಾರೋಗ್ಯ ಹಾಗೂ ಕಳಪೆ ಆಡಳಿತದ ನೆಪದಲ್ಲಿ 2001ರ ಅಕ್ಟೋಬರ್ ಏಳರಂದು ಗುಜರಾತಿನ ಮುಖ್ಯಮಂತ್ರಿಯಾಗಿ ಏಕಾಏಕಿ ನೇಮಕಗೊಂಡವರು. ಮೋದಿಯವರು ಆರ್‌ಎಸ್‌ಎಸ್‌ನಿಂದ ಬಿಜೆಪಿ ಸೇವೆಗೆ ನಿಯೋಜಿತರಾದ ಬಳಿಕ ಅವರ ಸಂಪರ್ಕಕ್ಕೆ ಬಂದವರೇ ಈ ಅಮಿತ್ ಶಾ. 


      ನರೇಂದ್ರಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿ ನೇಮಕಗೊಂಡ ಮರು ವರ್ಷ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಸರ್ಕೇಜ್ ಕ್ಷೇತ್ರದಿಂದ ಅತಿ ಹೆಚ್ಚು ಎಂದರೆ ಒಂದೂವರೆ ಲಕ್ಷಕ್ಕೂ ಹೆಚ್ಚು ಲೀಡಿಂಗ್‌ನಲ್ಲಿ ಗೆದ್ದ ಅಮಿತ್ ಶಾಗೆ ಗೃಹ ಖಾತೆಯ ಜೊತೆಗೆ ಕಾನೂನು, ನ್ಯಾಯ, ಬಂದೀಖಾನೆ, ಗಡಿ ಸುರಕ್ಷತೆ, ನಾಗರಿಕ ರಕ್ಷಣೆ, ಅಬಕಾರಿ, ಗೃಹ ರಕ್ಷಕ ದಳ, ಸಾರಿಗೆ, ಮದ್ಯ ನಿಷೇಧ, ಗ್ರಾಮ ರಕ್ಷಕ ದಳ, ಪೊಲೀಸ್ ವಸತಿ, ಸಂದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಹೀಗೆ ಹನ್ನೆರಡು ಖಾತೆಗಳನ್ನು ದಯಪಾಲಿಸುತ್ತಾರೆ. 


      ಅಮಿತ್ ಶಾ ವಯಸ್ಸಿನಲ್ಲಿ ನರೇಂದ್ರ ಮೋದಿಗಿಂತ 15 ವರ್ಷ ಚಿಕ್ಕವರು. ಗುಜರಾತಿನ ಗೃಹ ಮಂತ್ರಿಯಾದ ಮೂರು ವರ್ಷದ ಬಳಿಕ ನಡೆವ ಕೊಲೆ ಪ್ರಕರಣದಲ್ಲಿ ಅಮಿತ್ ಶಾ ಸಿಲುಕಿಕೊಳ್ಳುತ್ತಾರೆ. ಗುಜರಾತಿನ ಆರ್‌ಎಸ್‌ಎಸ್ ನಿಷ್ಟ ರಾಜಕಾರಣಿ ಹರೇನ್ ಪಾಂಡ್ಯ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿ ನೇಮಕಗೊಳ್ಳುವ ಮೊದಲು ಮುಖ್ಯಮಂತ್ರಿ ಕೇಶುಬಾಯಿ ಪಟೇಲ್ ಸಂಪುಟದಲ್ಲಿ ಗೃಹ ಮಂತ್ರಿಯಾಗಿರುತ್ತಾರೆ. ಮೋದಿ ಹರೇನ್ ಪಾಂಡ್ಯ ಅವರನ್ನು ಗೃಹ ಖಾತೆಯಿಂದ ತೆಗೆದು ಕಂದಾಯ ಮಂತ್ರಿಯನ್ನಾಗಿ ಮಾಡುತ್ತಾರೆ. 


      2002ರ ಫೆಬ್ರವರಿಯಲ್ಲಿ ಗುಜರಾತಿನ ಗೋಧ್ರಾ ರೈಲ್ವೆ ನಿಲ್ದಾಣದಲ್ಲಿ ಕರಸೇವಕರಿದ್ದ ಬೋಗಿಗೆ ಬೆಂಕಿ ಹಚ್ಚಿ ಸುಟ್ಟು ಕೊಂದ ಪ್ರಕರಣದಲ್ಲಿ ಮುಖ್ಯಮಂತ್ರಿ ಮೋದಿ ಮುಸ್ಲಿಮರ ವಿರುದ್ಧದ ಕೊಲೆ, ಸುಲಿಗೆ, ಹಿಂಸಾಚಾರವನ್ನು ನಿಯಂತ್ರಿಸುವ ಬದಲು ಭದ್ರತಾ ಪಡೆಗಳಿಗೆ ಮೂರು ದಿನ ಸುಮ್ಮನಿರುವಂತೆ ಸೂಚಿಸಿದರು ಎಂಬ ಕುರಿತು ಹರೇನ್ ಪಾಂಡ್ಯ ಮಾಧ್ಯಮಗಳ ಮುಂದೆ ಮಾತನಾಡುವ ಮೂಲಕ ಹಾಗೂ ಸಂಪುಟ ಸಭೆಯಲ್ಲಿ ವಿರೋಧ ವ್ಯಕ್ತಪಡಿಸಿದ್ದನ್ನೂ ಬಹಿರಂಗ ಪಡಿಸುವ ಮೂಲಕ ಮೋದಿಯ ವಿರೋಧಿಯಾಗಿ ಗುರುತಿಸಿಕೊಳ್ಳುತ್ತಾರೆ. ಮತ್ತು ಆಗಸ್ಟ್ ತಿಂಗಳಲ್ಲಿ ಮಂತ್ರಿ ಪದವಿಯನ್ನೂ ತೊರೆದುಬಿಡುತ್ತಾರೆ. ಈ ಎಲ್ಲ ನಡೆಗಳಿಗೆ ಇಂಬು ಕೊಡುವಂತೆ, ಕೆಲವೇ ತಿಂಗಳಲ್ಲಿ 2003ರ ಮಾರ್ಚಿ 26ರ ಮುಂಜಾನೆ 7.45ರ ಸುಮಾರಿಗೆ ಅಹಮದಾಬಾದ್‌ನ ಲೀಗಲ್ ಗಾರ್ಡ್ನ್ ಹೊರಗೆ ಬೆಳಗಿನ ವಾಕ್ ಮುಗಿಸಿಬಂದು ತಮ್ಮ ಮಾರುತಿ 800 ಕಾರಿನಲ್ಲಿ ಕೂತಿದ್ದ ಹರೇನ್ ಪಾಂಡ್ಯ ಹಣೆಗೆ ಇಬ್ಬರು ಗುರುತು ಸಿಗದ ಹಂತಕರು ಐದು ಗುಂಡುಗಳನ್ನು ಹಾರಿಸಿ ಕೊಲ್ಲುತ್ತಾರೆ. ಈ ಕೊಲೆಯನ್ನು ಪಾಂಡ್ಯ ಪತ್ನಿʼ ರಾಜಕೀಯ ಕೊಲೆʼ ಎಂದೇ ಬಣ್ಣಿಸಿದ್ದು, ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಕೈವಾಡವಿದೆ ಎಂದು ಆಪಾದಿಸುತ್ತಾರೆ.


      ಹರೇನ್ ಪಾಂಡ್ಯ ಅವರನ್ನು ಕೊಲ್ಲಲು ಸುಪಾರಿ ಪಡೆದುಕೊಂಡಿದ್ದ ಗ್ಯಾಂಗ್‌ಸ್ಟರ್ ಸೊಹ್ರಾಬುದ್ದೀನ್ ಶೇಕ್ ಎಂಬಾತನನ್ನು ಗುಜರಾತ್ ಪೊಲೀಸರು ಅಪಹರಿಸಿ, ಇಸ್ಲಾಮಿಕ್ ಮೂಲಭೂತವಾದಿ ಭಯೋತ್ಪಾದಕ ಎಂಬ ಹೆಸರಿನಲ್ಲಿ 2005ರ ನವೆಂಬರ್ 26ರಂದು ಹುಸಿ ಎನ್‌ಕೌಂಟರ್‌ನಲ್ಲಿ ಕೊಲ್ಲುತ್ತಾರೆ. ಈತನನ್ನು ಅಪಹರಿಸುವಾಗ ಪ್ರತ್ಯಕ್ಷದರ್ಶಿಯಾಗಿದ್ದಳು ಎಂಬ ಕಾರಣಕ್ಕೆ ಶೇಖ್‌ನ ಪತ್ನಿ ಕೌಸರ್‌ಳನ್ನೂ ಪ್ರತ್ಯೇಕವಾಗಿ ಕೊಂದು, ಸುಟ್ಟು ಹಾಕುತ್ತಾರೆ ಎಂದು ಸಿಬಿಐ ತನಿಖೆ ಮಾಡಿ 2010ರಲ್ಲಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸುತ್ತದೆ. ಈ ಎರಡೂ ಕೊಲೆಗಳು ನಡೆಯುವಾಗ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು ಹಾಗೂ ಗೃಹ ಮಂತ್ರಿ ಅಮಿತ್ ಶಾ ನಡುವೆ ದೂರವಾಣಿ ಕರೆ ಸಂವಾದಗಳು ನಡೆದಿದ್ದವು ಎಂಬ ಆಧಾರದ ಮೇಲೆ ಅಮಿತ್ ಶಾ ಬಂಧನಕ್ಕೊಳಗಾಗುತ್ತಾರೆ. ಮೂರು ತಿಂಗಳು ಜೈಲಿನಲ್ಲಿರುತ್ತಾರೆ. ಇವರಿಗೆ ಜಾಮೀನು ಕೊಡುವಾಗ ನ್ಯಾಯಾಲಯವು ಸಾಕ್ಷಿಗಳನ್ನು ನಾಶ ಪಡಿಸದಂತೆ ಇರುವ ಸಲುವಾಗಿ ಗುಜರಾತಿಗೆ ಹೋಗುವಂತಿಲ್ಲ ಎಂದು ಆದೇಶಿಸುತ್ತದೆ. ಹೀಗಾಗಿ ಅಮಿತ್ ಶಾ ದಿಲ್ಲಿಯಲ್ಲಿ ನೆಲೆಸುತ್ತಾರೆ. 2014ರ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದು ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗುತ್ತಿದ್ದಂತೆ ಸಿಬಿಐ ಹೂಡಿದ್ದ ಪ್ರಕರಣದಲ್ಲಿ ನ್ಯಾಯಾಲಯ ಅಮಿತ್ ಶಾ ಅವರನ್ನು 2014ರ ಡಿಸೆಂಬರ್‌ನಲ್ಲಿ ದೋಷಮುಕ್ತಗೊಳಿಸಿಬಿಡುತ್ತದೆ. ಈ ಎಲ್ಲ ಅಂಶಗಳನ್ನು ದಿ ಗಾರ್ಡಿಯನ್ ವಿಷದವಾಗಿ ವಿವರಿಸಿದೆ. ಗುಜರಾತ್‌ನಂಥ ಒಂದು ರಾಜ್ಯದ ಗೃಹ ಮಂತ್ರಿಯಾಗಿದ್ದ ಅಮಿತ್ ಶಾ ಇವತ್ತು ಇಡೀ ಇಂಡಿಯಾದ ಗೃಹ ಮಂತ್ರಿಯಾಗಿ ಬಿಜೆಪಿಯ ಮಾತೃ ಸಂಸ್ಥೆ ಆರ್‌ಎಸ್‌ಎಸ್‌ನ ಎಲ್ಲ ಗುಪ್ತ ಕಾರ್ಯಸೂಚಿಗಳನ್ನು ಅನುಷ್ಟಾನಕ್ಕೆ ತರುವ ಸಾಧನವಾಗಿಬಿಟ್ಟಿದ್ದಾರೆ.


      ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಮಾಡುವ ಪ್ರಸ್ತಾವನೆಯನ್ನು ಪಾರ್ಲಿಮೆಂಟಿನಲ್ಲಿ ಅಮಿತ್ ಶಾ ಮಂಡಿಸುವ ಎರಡು ಗಂಟೆ ಮೊದಲು ಕೂಡಾ ವಿದೇಶಾಂಗ ಸಚಿವ ಜೈಶಂಕರ್ ಸೇರಿದಂತೆ ಮೋದಿ ಸಂಪುಟದ ಯಾವ ಮಂತ್ರಿಗೂ ಮಾಹಿತಿ ಇರಲಿಲ್ಲವೆಂಬುದು ಈ ಮಾತನ್ನು ಪುಷ್ಟೀಕರಿಸುತ್ತದೆ. ನೆಹರೂ- ಇಂದಿರಾ-ರಾಜೀವ್- ರಾಹುಲ್ ಗಾಂಧಿಗಳ ವಂಶಾಡಳಿತವನ್ನು ವೇದಿಕೆಯ ಮೇಲೆ ಅತ್ಯಂತ ಕಟುವಾಗಿ ಟೀಕಿಸುವ ಅಮಿತ್ ಶಾ ಅವರ ಏಕೈಕ ಪುತ್ರ ಜಯ್ ಶಾ ಇವತ್ತು ಅತಿ ಹೆಚ್ಚು ಹಣಕಾಸಿನ ವಹಿವಾಟು ಹೊಂದಿರುವ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಿಸಿಐ ಅಧ್ಯಕ್ಷ ಹಾಗೂ ಸರ್ಕಾರದಲ್ಲಿ ಅಮಿತ್ ಶಾ ನಂತರದ ಅತಿ ಹೆಚ್ಚು ಪವರ್‌ಫುಲ್ ವ್ಯಕ್ತಿಯಾಗಿದ್ದಾರೆ.


      ಇವತ್ತು ಇಂಡಿಯಾದ ಸಾಮಾಜಿಕ ರಾಜಕೀಯ ಸನ್ನಿವೇಶದಲ್ಲಿ ಸೃಷ್ಟಿಯಾಗಿರುವ ಉಸಿರುಕಟ್ಟಿಸುವ ವಾತಾವರಣದ ಹಿಂದೆ ಅಮಿತ್ ಶಾ ಇದ್ದಾರೆ. ಗುಜರಾತಿನಲ್ಲಿರುವಾಗಲೇ ಬಿಜೆಪಿಯೊಳಗಿನ ಹಾಗೂ ಅನ್ಯ ಪಕ್ಷಗಳ ರಾಜಕೀಯ ವಿರೋಧಿಗಳನ್ನು ನಿರ್ನಾಮಗೊಳಿಸುವ ಕೃತ್ಯದಲ್ಲಿ ಪರಿಣಿತಿ ಹೊಂದಿದ ಅಮಿತ್ ಶಾ ರಾಷ್ಟ್ರ ರಾಜಕಾರಣದಲ್ಲೂ ಇದೇ ಕಾರ್ಯತಂತ್ರ ಬಳಸುವಲ್ಲಿ ಯಶಸ್ವಿಯಾಗಿದ್ದಾರೆ. 


     ಚುನಾವಣೆ ಘೋಷಣೆಯಾಗಿರುವಾಗಲೇ ದಿಲ್ಲಿ ಸರ್ಕಾರದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನುಎರಡು ವರ್ಷದಷ್ಟು ಹಳೆಯ ಕೇಸಿನಲ್ಲಿ ಬಂಧಿಸಿದ ಪ್ರಕರಣವನ್ನೇ ಗಮನಿಸಿ. ಚುನಾವಣೆಯಲ್ಲಿ ಪ್ರಚಾರ ಮಾಡುವ ಸಲುವಾಗಿ ಸುಪ್ರೀಂ ಕೋರ್ಟ್ ನೀಡಿದ ಮಧ್ಯಂತರ ಜಾಮೀನನ್ನೂ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಸಾರ್ವಜನಿಕವಾಗಿ ಪ್ರಶ್ನಿಸುವಷ್ಟು ತಾಖತ್ ಅಮಿತ್ ಶಾ ಅವರಿಗಿದೆ.


      ಈ ಹಿನ್ನೆಲೆಯಲ್ಲೇ ಕೇಜ್ರಿವಾಲ್ ಜೈಲಿನಿಂದ ಹೊರ ಬಂದ ಬಳಿಕ ಮಾಡುತ್ತಿರುವ ಚುನಾವಣಾ ಪ್ರಚಾರ ಭಾಷಣಗಳಲ್ಲಿ 75 ವಯೋಮಾನದ ಮಿತಿಯ ಕಾರಣವಾಗಿ ಚುನಾವಣಾ ಫಲಿತಾಂಶದ ಬಳಿಕ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗುವುದಿಲ್ಲ. ಮೋದಿ ಈಗ ಪ್ರಚಾರ ಮಾಡುತ್ತಿರುವುದೇ ಅಮಿತ್ ಶಾ ಅವರನ್ನು ಪ್ರಧಾನಿ ಮಾಡಲು ಎಂದು ಪದೇ ಪದೇ ಹೇಳುತ್ತಿರುವುದು. ಮತ್ತು ನನ್ನ ಈ ಹೇಳಿಕೆಯನ್ನು ಅಮಿತ್ ಶಾ ಮತ್ತು ಬಿಜೆಪಿಯ ಇತರ ನಾಯಕರು ನಿರಾಕರಿಸಿ ಪ್ರತಿ ಹೇಳಿಕೆ ನೀಡುತ್ತಿದ್ದಾರೆಯೇ ಹೊರತು ಖುದ್ದು ನರೇಂದ್ರ ಮೋದಿಯವರು ನಿರಾಕರಿಸುತ್ತಿಲ್ಲ ಎನ್ನುವುದರಲ್ಲೇ ಸತ್ಯ ಅಡಗಿದೆ ಎನ್ನುತ್ತಿದ್ದಾರೆ ಕೇಜ್ರಿವಾಲ್. ಹೌದಾ , ಅಮಿತ್ ಶಾ ಮುಂದಿನ ಪ್ರಧಾನ ಮಂತ್ರಿಯಾಗುತ್ತಾರಾ? ಕಾದು ನೋಡಿ.