ಆ ಕೆಂಬಣ್ಣದ ಸುಂದರ ಕಾಯುತ್ತಿದ್ದಾನೆ... , 

ಆ ಮೌನದ ಕಾಯುವಿಕೆಯಲ್ಲಿ; ನಿಶ್ಯಬ್ಧ ಧ್ಯಾನದಲ್ಲಿ; ಮನಸ್ಸು ನೂರಾರು ಕನಸುಗಳ ಹೆಣೆಯುತ್ತದೆ. ಪಕ್ಷಿಗಳು ತಾವಾಗಿಯೇ ಹಾರಿಬಂದು ಇಲ್ಲಿ ಈ ರೆಂಬೆ ಮೇಲೆ ಕೂತರೆ, ಅದಕ್ಕೆ ಹಸಿರಿನ ದಟ್ಟ ಈ ಹಿನ್ನೆಲೆ ಇದ್ದರೆ ಹೇಗಿರುತ್ತದೆ? ಎಂದು ನಾವು ಕಲ್ಪಿಸಿಕೊಳ್ಳುತ್ತೇವೆ. ನಿಜವಾಗಿಯೂ ಮನ ಅಂದುಕೊಂಡಂತೆ ನಮ್ಮೆದುರಿಗೆ ಪಕ್ಷಿ ಬಂದು ಕೂತೇ ಬಿಟ್ಟರೆ ಆಗ ಸಿಗುವ ಹರ್ಷದ ಸುಖವಿದೆಲ್ಲ! ಅದು ಸ್ವರ್ಗ ಸಮಾನ ಚಮತ್ಕಾರ. 

ಆ ಕೆಂಬಣ್ಣದ ಸುಂದರ ಕಾಯುತ್ತಿದ್ದಾನೆ... , 


ಕಿನ್ನರ ಲೋಕ

ಡಾ.ಖಲೀಮ್ ಉಲ್ಲಾ


ಒಮ್ಮೆ ದಾಂಡೇಲಿಯಲ್ಲಿ ಹಕ್ಕಿಗಳ ಫೋಟೋ ತೆಗೆಯುವಾಗ ಮುಂಬೈನ ಸ್ಮಿತಾಬೆಹೆರ ಎಂಬ ನಗುಮುಖದ ಹೆಣ್ಣುಮಗಳು ಪರಿಚಯವಾದರು. ಆಕೆ ಆಗಷ್ಟೇ ಹಿಮಾಲಯದಂಚಿನ ಸತ್ತಾಲ್, ನೈನಿತಾಲ್, ಭೀಮ್ ತಾಲ್ ಎಂಬ ಊರುಗಳ ಪ್ರವಾಸ ಪೂರೈಸಿ ಬಂದಿದ್ದರು. ಆತ್ಮೀಯ ಮಾತುಕತೆಗಳು ಮುಗಿದ ಮೇಲೆ ಕ್ಯಾಮೆರಾ ಪರದೆ ಮೇಲೆ ತಾನೇ ತೆಗೆದ ಅನೇಕ ಬಣ್ಣಬಣ್ಣದ ಹಕ್ಕಿಗಳನ್ನು ತೋರಿಸುತ್ತಾ ಹೋದರು. ಕೇವಲ ಕರ್ನಾಟಕದ ಹಕ್ಕಿಗಳನ್ನಷ್ಟೇ ನೋಡಿದ್ದ ನನಗೆ ಈ ಹೊಸ ವರ್ಣದ ಖಗಗಳ ಅಂದಚೆAದ ಬೆಕ್ಕಸ ಬೆರಗಾಗುವಂತೆ ಮಾಡಿದವು. ಹಕ್ಕಿ ಚಿತ್ರ ತೋರಿಸುತ್ತಿದ್ದವಳೂ ಅಪೂರ್ವ ಚೆಲುವೆಯಾದ ಕಾರಣ ಒಂಥರ ಸ್ಪೂರ್ತಿಯೂ ಸಿಕ್ಕಂತಾಯಿತು. ಅದರಲ್ಲೂ ಆಕೆ ವಿಶೇಷವಾಗಿ ಕಾಣಿಸಿದ ಸ್ಕೇರ್ಲೆಟ್ ಪಿಂಚ್ ಎಂಬ ಕೆಂಗುಲಾಬಿ ಬಣ್ಣದ ಪಕ್ಷಿ ಹುಚ್ಚು ಹಿಡಿಸುವಷ್ಟು ಸುಂದರವಾಗಿತ್ತು. ಹೀಗಾಗಿ ಉತ್ತರಖಂಡದ ಆ ಊರುಗಳಿಗೊಮ್ಮೆ ಹೋಗಿ ಬರೋಣ ಎಂದು ಪ್ಲಾನ್ ಮಾಡಿದ್ದು ಕೂಡಿ ಬಂದೇ ಬಿಟ್ಟಿತು.


ಜನವರಿ ತಿಂಗಳಲ್ಲಿ ಅಲ್ಲಿ ಬೀಕರ ಚಳಿ ಇರುತ್ತದೆ. ಈ ಋತುಮಾನದಲ್ಲಿ ಅನೇಕ ಬಗೆಯ ಹಕ್ಕಿಗಳು ವಲಸೆ ಬಂದು ಇಲ್ಲಿ ಮಾರ್ಚಿ ತನಕ ಠಿಕಾಣಿ ಹೂಡುತ್ತವೆ. ಬೆಟ್ಟಗಳ ನಡುವೆ ಹಾವಿನಂತೆ ಸುತ್ತು ಹೊಡೆದು ಸುಸ್ತು ಮಾಡುವ ಇಲ್ಲಿನ ರಸ್ತೆಗಳು ಹೊಯ್ದಾಟ ಹೆಚ್ಚಿಸಿ ಕರುಳನ್ನೇ ನುಲಿದು ಹಾಕುತ್ತವೆ. ಇಲ್ಲಿನ ಪ್ರಯಾಣ ತುಸು ಕಷ್ಟವೇನೆ. ಬರ್ಫ್ ಬಿದ್ದು ದಾರಿಗಳು ತುಂಬಾ ಜಖಂ ಆಗಿರುತ್ತವೆ. 


ಕುತೂಹಲ ಹುಟ್ಟಿಸಿದ್ದು ಇಲ್ಲಿನ ಸಾಕಷ್ಟು ಊರುಗಳ ಹೆಸರ ತುದಿಯಲ್ಲಿ ಕಡ್ಡಾಯವಾಗಿ ಅಂಟಿಕೊಂಡ ತಾಲ್ ಎಂಬ ಶಬ್ದ. ಭೀಮ್ ತಾಲ್, ನೈನಿತಾಲ್, ನೌಕುಚ್ ತಾಲ್, ಹೀಗೆನೆ. ವಿಚಾರಿಸಿದಾಗ ತಾಲ್ ಎಂದರೆ ಸರೋವರ ಎಂದು ತಿಳಿಯಿತು. ನಮ್ಮಲ್ಲಿ ಊರಿಗೆ ಹೆಸರು ಕೆರೆಗಳ ಮೂಲಕ ಬಂದಂತೆ ಇಲ್ಲಿ ತಾಲ್‌ಗಳು ತಳಕು ಹಾಕಿಕೊಂಡಿವೆ. ಸತ್ತಾಲ್ ಎಂಬ ಊರು ಕೂಡ ಏಳು ಸರೋವರಗಳಿಂದ ಆವೃತವಾದ ಪ್ರದೇಶ. ಬೆಟ್ಟಗಳ ನಡುನಡುವೆ ಅಲ್ಲಲ್ಲಿ ನೆಲೆ ನಿಂತ ನೀಲಿ ನೀರಿನ ಚೆಲುವಾದ ಸರೋವರದ ಮಡಿಲುಗಳ ನೋಡುವುದೇ ಕಣ್ಣಿಗೆ ಹಬ್ಬ. 


ಥಂಡಿ ಹೆಚ್ಚಿರುವ, ಮಂಜು ಬೀಳುವ ಇಂತಹ ಜಾಗಗಳಿಗೆ ಹೋದರೆ ನಮ್ಮ ಕ್ಯಾಮೆರಾಗಳಿಗೆ ಅಪಾಯ ಜಾಸ್ತಿ. ಆಗ ಅವುಗಳನ್ನು ಎಳೆ ಮಕ್ಕಳಂತೆ ಬೆಚ್ಚಗಿಟ್ಟು ಬಲು ಜಾಗ್ರತೆ ಮಾಡಿಕೊಳ್ಳಬೇಕು. ಸುರಿವ ಮಳೆಗೆ, ತಂಪು ಗಾಳಿಗೆ, ಕ್ಯಾಮೆರಾ ಮತ್ತು ಲೆನ್ಸ್  ಎರಡಕ್ಕೂ ಫಂಗಸ್ ರೋಗ ತಗಲುವ ರಿಸ್ಕ್ ಹೆಚ್ಚು. ಹೀಗಾಗಿ ದಿನಾ ರಾತ್ರಿ ಹೀಟರ್ ಹಾಕಿ ಅವುಗಳಿಗೂ ಚಳಿ ಕಾಯಿಸುತ್ತಿದ್ದೆವು. ಶೀತದ ಗಾಳಿ ರೂಮಿನೊಳಗೂ ನುಗ್ಗಿ ಬಂದು ನಿರಂತರ ಹಲ್ಲೆ ಮಾಡಿ ಬೆದರಿಸುತ್ತಿತ್ತು.


ಸೋಜಿಗವೆಂದರೆ ಇಲ್ಲಿ ಟೀ ಮಾರುವ ಅಂಗಡಿ ಹುಡುಗನೂ ವಲಸೆ ಬರುವ ಹಕ್ಕಿಗಳ ಹೆಸರುಗಳನ್ನು ಪಟಪಟನೆ ಮಗ್ಗಿಯಂತೆ ಹೇಳುತ್ತಿದ್ದ. ಸ್ಕೂಲಿಗೆ ಹೋಗುತ್ತಿದ್ದ ಒಬ್ಬ ಪೋರನ ಹಿಡಿದು ಸುಮ್ಮನೆ ಮಾತಾಡಿಸಿದೆ. “ನೀನು ಓದಿ ಮುಂದೇನಾಗುತ್ತೀಯಾ?” ಎಂದು ಮಾಮೂಲಿ ಪ್ರಶ್ನೆ ಕೇಳಿದೆ. ಅದಕ್ಕವನು ಕೊಂಚವೂ ತಡಬಡಿಸದೆ “ಬರ್ಡ್ ಗೈಡ್” ಆಗುತ್ತೀನಿ ಎಂದ. ರಸ್ತೆ ಬದಿ ಕಡ್ಲೆಕಾಯಿ ಮಾರುವ ಹುಡುಗನೂ “ನಾನು ದೊಡ್ಡವನಾಗಿ ದೊಡ್ಡ ನ್ಯಾಚುರಲಿಸ್ಟ್ ಆಗಿ ಕಾಸು ಮಾಡುತ್ತೇನೆ” ಎಂದು ನಕ್ಕ. ಒಂದರ್ಥದಲ್ಲಿ ಹಕ್ಕಿ ಫೋಟೋ ತೆಗೆಯಲು ನಮ್ಮಂಥ ತಿಕ್ಲುಗಳು ಬಂದು ಬಂದೂ ಇಲ್ಲಿನ ಜನರನ್ನೇ ಹಾಳು ಮಾಡಿದ್ದಾರಲ್ಲ ಎಂದೆನಿಸಿತು! ಮತ್ತೊಂದು ಕಡೆ ನಾವು ಉಚ್ಛರಿಸಲು ಹೆಣಗಾಡುವ ಪಕ್ಷಿಗಳ ಆಂಗ್ಲ ಹೆಸರುಗಳನ್ನು ಇಷ್ಟೊಂದು ಸುಲಲಿತವಾಗಿ ಹೇಳುವುದು ಅಚ್ಚರಿಯಾಗಿ ಕಾಣುತ್ತಿತ್ತು.


ಪ್ರವಾಸಿಗರು ಹೆಚ್ಚಾಗಿ ಹೋಗುವ ಊರುಗಳು ಒಂದು ಬಗೆಯಲಿ ಹೀಗೆ ನಾಶವೂ ಆಗಿಬಿಡುತ್ತವೆ. ತಮ್ಮ ಸ್ವಂತಿಕೆ ಕಳಕೊಂಡು ಬಂದವರ ಬೆನ್ನು ಕೆರೆದು ಹಣ ಸಂಪಾದಿಸುವ ಕೈಗಳಾಗಿ ಬದಲಾಗುತ್ತವೆ. ಹೊರಗಿನಿಂದ ಬಂದವರ ಬೇಕುಗಳ ಅರಿತು ಅದನ್ನು ಪೂರೈಸುವ ಕಾಯಕಗಳ ಜನ ರೂಪಿಸಿಕೊಳ್ಳುತ್ತಾರೆ. ಇದು ಅವರಿಗೆ ಅನಿವಾರ್ಯವೂ ಹೌದು. ಪ್ರವಾಸಿ ತಾಣಗಳ ಈ ರೂಪಾಂತರ ಸರಿಯೋ? ತಪ್ಪೋ? ಹೇಳುವುದು ಕಷ್ಟ. “ಒಂದು ದಿನ ಪಕ್ಷಿಗಳು ಇಲ್ಲಿಗೆ ವಲಸೆ ಬರುವುದೇ ನಿಲ್ಲಿಸಿದರೆ ಏನು ಗತಿ” ಎಂದು ನಮ್ಮ ಡ್ರೈವರನ್ನು ಪ್ರಶ್ನಿಸಿದೆ. ತಬ್ಬಿಬ್ಬಾದ ಅವನು ಹಣೆ ಚಚ್ಚಿಕೊಂಡು “ಥೂ ಬಿಡ್ತು ಅನ್ನಿ ಸರ್. ಎಂಥ ಅಪಶಕುನದ ಮಾತಾಡುತ್ತಿದ್ದೀರಿ” ಎಂದು ರೇಗಿದ. ಹಕ್ಕಿಗಳಿಲ್ಲದ ಸತ್ತಾಲನ್ನು ಕಲ್ಪಿಸಿಕೊಳ್ಳುವುದು ಕೂಡ ಅವರಿಗೆ ಕಷ್ಟ.


ಇಲ್ಲಿನ ಜನಕ್ಕೆ ಪುಕ್ಕಟ್ಟೆಯಾಗಿ ಗಾಂಜಾ ಸೊಪ್ಪು ಸಿಗುತ್ತದೆ. ಈ ಕಾರಣದಿಂದ ಇಲ್ಲಿನ ಮಕ್ಕಳಿಂದ ಹಿಡಿದು ವೃದ್ಧರ ತನಕದ ಹಲ್ಲುಗಳು ಕೂಡ ಕರಿ ಇದ್ದಿಲ ಚೂರುಗಳಾಗಿವೆ. ಹೆಚ್ಚು ಕೃಷಿ ಚಟುವಟಿಕೆಗಳೇ ಇಲ್ಲದ ಇಲ್ಲಿನ ಜನ ಪ್ರವಾಸಿಗರ ಆಸೆ ಆಕಾಂಕ್ಷೆಗಳ ಈಡೇರಿಸುವ ಸ್ವೆಟರ್ ಅಂಗಡಿಗಳು, ಬಾಡಿಗೆ ಕಾರುಗಳು, ಹೊಟೆಲ್ಲು, ಲಾಡ್ಜು, ಇತ್ಯಾದಿ ಮಾಡಿಕೊಂಡಿದ್ದಾರೆ. ಪಕ್ಷಿಗಳಿಗಾಗಿ ಕ್ಯಾಮೆರಾ ಹೊತ್ತು ವಿಚಿತ್ರ ಪೋಷಾಕಿನಲ್ಲಿ ಟಳಾಯಿಸುವ ನಮ್ಮಂಥವರ ದೇಖಾರೇಕಿ ಮಾಡುವ ನ್ಯಾಚುರಲಿಸ್ಟ್ ಉದ್ಯೋಗ ಹುಡುಕಿಕೊಂಡಿರುವ ಜನ ತುಸು ಹೆಚ್ಚೇ ಇದ್ದಾರೆ. 


ವಲಸೆ ಪಕ್ಷಿಗಳಿಂದ ಹಿಡಿದು ಸ್ಥಳೀಯ ಖಗಗಳ ತನಕದ ಜೀವನ ಪದ್ಧತಿ ಇವರಿಗೆ ಬಾಯಿಪಾಠ. ”ಹಮಾರ ರೋಟಿ ಔರ್ ಧೋತಿ ಇಸ್ ಚುಡಿಯೋಂಕಿ ಆಂಚಲ್‌ಮೆ ಹೈ ಸಾಬ್” (ನಮ್ಮ ರೊಟ್ಟಿ ಮತ್ತು ಬಟ್ಟೆ ಈ ಹಕ್ಕಿಗಳ ಮಡಿಲಲ್ಲಿ ಇದೆ ಸ್ವಾಮಿ) ಎಂದು ಒಂದೇ ಮಾತಿನಲ್ಲಿ ನಮ್ಮ ಬಾಯಿ ಕಟ್ಟಿಸುತ್ತಾರೆ. ಇವರ ಬದುಕನ್ನು ಪೊರೆಯುತ್ತಿರುವ ಪಕ್ಷಿಗಳ ಬಗ್ಗೆ ಇಲ್ಲಿನ ಜನರಿಗೆ ಗೌರವ ಮತ್ತು ಹೆಮ್ಮೆ ಇದೆ. ನಾವು ಹಕ್ಕಿ ಪಕ್ಷಿಗಳಿಗೆ ಕಾಳು ನೀರು ಕೊಟ್ಟು ಕಾಪಾಡಬೇಕು ಎಂದು ಶಂಖ ಊದುತ್ತೇವೆ. ಅವುಗಳ ರಕ್ಷಣೆ ನಮ್ಮ ಹೊಣೆ ಎನ್ನುತ್ತೇವೆ. ವಿಚಿತ್ರ ನೋಡಿ ಇಲ್ಲಿ ಸ್ವಯಂ ಪಕ್ಷಿ ಸಂಕುಲಗಳೇ ಇಲ್ಲಿನ ಜನರಿಗೆ ಅನ್ನ ನೀರು ಹಚ್ಚಡ ಕೊಟ್ಟು ಸಾಕುತ್ತಿವೆ. ಪುಟಾಣಿ ರೆಕ್ಕೆಗಳ, ಅಂಗೈ ಅಗಲದ ಗೂಡು ಕಟ್ಟುವ, ನಾಲ್ಕಾರು ಕಾಳು, ಒಂದಿಷ್ಟು ಹುಳಹುಪಟಿ ತಿನ್ನುವ ಮುದ್ದು ಹಕ್ಕಿಗಳೇ ಇಲ್ಲಿ ಮನುಷ್ಯರ ಕಾಪಾಡುತ್ತಿವೆ. ಈ ಊರಿನ ಜನರ ಜೀವನವನ್ನು ಜತನದಿಂದ ಸಾಕುವ ಅವ್ವ, ಅಪ್ಪ ಎಲ್ಲಾ ಆಗಿವೆ. 


ಸತ್ತಾಲಿಗೆ ಒಟ್ಟು ನಾವು ನಾಲ್ಕು ಜನ ಫೋಟೋಗ್ರಫಿಗಾಗಿ ಬಂದಿದ್ದೆವು. ಹೀಗೆ ಆಗಮಿಸಿದ ಒಬ್ಬರೂ ಶಿಸ್ತಿನ ಮನುಷ್ಯರೇ ಅಲ್ಲ ಎಂಬುದು ಗಮನಾರ್ಹ ಸಂಗತಿ. ಸೋಂಬೇರಿತನ ಮತ್ತು ಮೈಗಳ್ಳತನದಲ್ಲಿ ಒಬ್ಬರಿಗೊಬ್ಬರು ಪರಸ್ಪರ ಪೈಪೋಟಿ ಕೊಡಬಲ್ಲಷ್ಟು ಸದೃಢರಾಗಿದ್ದೆವು. ಒಬ್ಬರು ಮತ್ತೊಬ್ಬರಿಗೆ ಆಗಾಗ ಎಚ್ಚರಿಕೆ ಕೊಡುವುದರಲ್ಲಿ, ಬುದ್ದಿ ಹೇಳುವುದರಲ್ಲಿ, ರೂಲ್ಸ್ ಪ್ರೇಮು ಮಾಡುವುದರಲ್ಲಿ ಎಕ್ಸ್ಪರ್ಟ್ಗಳಾಗಿದ್ದೆವು. ಯಾವ ನಿಯಮವನ್ನು ಸ್ವಯಂ ಪಾಲಿಸಲು ಯಾರಿಗೆ ಸಾಧ್ಯವಿಲ್ಲವೋ; ಅದನ್ನವರು ಇತರರಿಗೆ ಅಚ್ಚುಕಟ್ಟಾಗಿ ಉಪದೇಶ ಮಾಡುತ್ತಿದ್ದರು. 


ಅದರಲ್ಲೂ ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ರೆಡಿಯಾಗುವ ಕೆಲಸ ಮಾತ್ರ ಒಂದು ದಿನವೂ ಪರಿಪಾಲನೆಯಾಗಲಿಲ್ಲ. ಫೋಟೋಗ್ರಫಿಯಲ್ಲಿ ಸಮಯ ಪಾಲನೆ, ಶಿಸ್ತು, ಪರಿಕರಗಳ ಪೂರ್ವ ಸಿದ್ದತೆ ಮುಖ್ಯವೆಂದು ತಾಕೀತು ಮಾಡುವ ಹೊರಗಿನವರು ನಮ್ಮ ಪಾಲಿಗೆ ಶತ್ರು ಸಮಾನರಿದ್ದಂತೆ! ಕೇವಲ ಇನ್ನೊಬ್ಬರ ತಪ್ಪುಗಳ ಕಂಡು ಎತ್ತಾಡುವುದರಲ್ಲಿ ಪ್ರವೀಣರಾಗಿದ್ದ ನಾವು ನಮ್ಮೊಳಗೆ ಎಂದೂ ಇಣುಕಿಯೂ ನೋಡಿದವರಲ್ಲ. 


ಆದರೆ ನಮಗೆ ನಿಗದಿಯಾಗಿದ್ದ ನ್ಯಾಚುರಲಿಸ್ಟ್ ಅಂಕಿತ್ ದಾಸ್ ಲೋಯಿವಾಲ್ ಎಂಬ ಸುಂದರ ತರುಣ ಪಕ್ಕಾ ಸಮಯ ಪಾಲನೆಯ ಹುಡುಗ. ಆತ ಯಾವತ್ತೂ ಬೆಳಿಗ್ಗೆ ಸಂಜೆ ತಡ ಮಾಡಿ ಬರಲಿಲ್ಲ. ಗಂಟೆ ಮುಳ್ಳಂತೆ ಬಂದು ನಿಂತು ರೂಮಿನ ಕದ ತಟ್ಟುತ್ತಿದ್ದ. ನಗುಮುಖದ ಆತ ಮಹಾಮೌನಿ ಕೂಡ. ಅಪರೂಪಕ್ಕೆ ಒಮ್ಮೊಮ್ಮೆ ಸಂಪೂರ್ಣವಾಗಿ ಮನಬಿಚ್ಚಿ ನಗುತ್ತಿದ್ದ. ಆಗ ಮಾತ್ರ ಗಾಂಜಾ ಸೇದಿಸೇದಿ ಕಪ್ಪಿಡಿದ ಅವನ ಹಲ್ಲುಗಳ ಪೂರಾ ನೋಡಬಹುದಿತ್ತು. 


ʻʻಈ ವಯಸ್ಸಿಗೇ ಈನಾಡಿ ಹಲ್ಲುಗಳ ತುಕ್ಕಿಡಿಸಿಕೊಂಡು ಕರಿಕಿಟ್ಟ ಮಾಡ್ಕೊಂಡಿದ್ದೀಯಲ್ಲ ಅಂಕಿತ್. ನಿಂಗೆ ಯಾರು ಮುಂದೆ ಹೆಣ್ಣು ಕೊಡುತ್ತಾರೋ” ಎಂದು ರೇಗಿಸುತ್ತಿದ್ದೆ. ಆಗವನು “ಇಲ್ಲಿನ ಹುಡ್ಗೀರು ಈ ಸ್ಟೈಲೇ ಇಷ್ಟಪಡುತ್ತಾರೆ ಸರ್” ಎಂದು ಬೊಗಳೆ ಹೊಡೆಯುತ್ತಿದ್ದ. ಅವನಿಗೆ ಸರಿಸಮನಾಗಿ ಎಲೆಯಡಿಕೆ ಜಗಿಯುತ್ತಿದ್ದ ನಾನು ಅವನಿಗೆ ಆಗಾಗ ಬುದ್ದಿಮಾತು ಹೇಳುತ್ತಿದ್ದದ್ದು ಹೆಚ್ಚು ತಮಾಷೆಯಾಗಿಯೂ ವಿಚಿತ್ರವಾಗಿಯೂ ಕಾಣುತ್ತಿತ್ತು. 


ಸ್ಮಿತಾ ಎಂಬ ಆ ಸುಂದರಿ ದಾಂಡೇಲಿಯಲ್ಲಿ ತೋರಿಸಿ ಹುಚ್ಚು ಹಚ್ಚಿದ್ದ ರಕ್ತಬಣ್ಣದ ಸ್ಕೇರ್ಲೆಟ್ ಪಿಂಚ್ ಎಂಬ ಬಣ್ಣದ ಪಕ್ಷಿಯನ್ನು “ಮೊದಲು ತೋರಿಸು ಮಾರಾಯ” ಎಂದು ಅಂಕಿತನ ಬೆನ್ನು ಬಿದ್ದಿದ್ದೆ. ಅವನು ಆಯಿತೆಂಬತೆ ನಕ್ಕು ಸುಮ್ಮನಾಗುತ್ತಿದ್ದ. ಎರಡು ದಿನ ಕಳೆಯುವುದರೊಳಗೆ ಮನುಷ್ಯ ನಿರ್ಮಿತ ಹೈಡುಗಳು (ಮರೆ ಮಾಡಿಕೊಂಡು ಪಕ್ಷಿಗಳ ಚಿತ್ರ ತೆಗೆಯುವ ಜಾಗೆಗಳು) ಯಾಕೋ ಬೋರು ಬರತೊಡಗಿದವು. ಹಾಸ್ಟೆಲ್ಲಿನ ಊಟದ ಬೆಲ್ಲು ಬಿದ್ದಾಗ ಮಕ್ಕಳು ಸಾಲಾಗಿ ತಟ್ಟೆ ಹಿಡಿದು ಹಣ್ಣು, ಕಾಳಿನಾಸೆಗೆ ಬಂದು ಹೋಗುವ ಹಕ್ಕಿಗಳ ಚಿತ್ರ ತೆಗೆಯುವುದು ಯಾಕೋ ಕೃತಕ ಎನಿಸಿತೊಡಗಿತು. ಸಾಕಷ್ಟು ಪಟಗಳ ತೆಗೆದವಾದರೂ ನಮ್ಮ ಆಸೆ, ಆಸಕ್ತಿಗಳು ಹಿಗ್ಗುವ ಬದಲು ಕುಗ್ಗತೊಡಗಿದವು.


ಒಂಚೂರು ನಯ, ನಾಚಿಕೆ ಇಲ್ಲದ, ಜನರ ಸಾಮಿಪ್ಯದ ಸಲಿಗೆ ಬೆಳೆಸಿಕೊಂಡ ಹಕ್ಕಿಗಳು ಅದೆಷ್ಟೇ ಚೆಂದವಿದ್ದರೂ, ಮೃಗಾಲಯದ ಫೀಲಿಂಗ್ ಕೊಟ್ಟು ಬಿಡುತ್ತವೆ. ನಮ್ಮ ಕಂಡು ಗಾಬರಿಗೊಳ್ಳುವ, ಸಿಗದೆ ಹಾರಿ ಹೋಗುವ, ಸುತ್ತಾಡಿಸಿ ಸತಾಯಿಸುವ, ಅನೇಕ ಹಾವಭಾವಗಳ ಪ್ರಕಟಿಸುವ, ಸಹಜ ವಾತಾವರಣದಲ್ಲಿ ಅಚಾನಕ್ಕಾಗಿ ಸಿಗುವ ಪಕ್ಷಿಗಳ ನೋಡುವುದೇ ನಿಜವಾದ ಆನಂದ. ಎದ್ದು ಬಿದ್ದು ಒದ್ದಾಡಿ ಫಜೀತಿಪಟ್ಟು ಹಕ್ಕಿ ಚಿತ್ರ ಸೆರೆ ಹಿಡಿಯುವ ಮಜವೇ ಬೇರೆ. 


ಹೀಗಾಗಿ ನಾನು ಅಂಕಿತನಿಗೆ “ಏಯ್ ಅಣ್ಣ ಈ ಹೈಡುಗಳು ಸಹವಾಸವೇ ಬೇಡ. ಹಳ್ಳ, ಕಾಡು ಕಣಿವೆ ತರಹದ ಜಾಗಗಳಿಗೆ ಕರ್ಕೊಂಡು ಹೋಗು. ನಾವು ಮಂಡಿ ಮುಸುಡಿ ಒಡಕೊಂಡು ಪಟ ತೆಗೆಯಬೇಕು. ನಡೆದು ನಡೆದೂ ಈ ನಿಸರ್ಗವ ಸವಿಯಬೇಕು. ಕಣ್ಣಿಗೆ ಕಾಣದೆ ಮರೆಯಲ್ಲಿದ್ದು ಕೂಗುವ ಹಕ್ಕಿ ದನಿಯ ಆಲಿಸಿ, ಹಿಂಬಾಲಿಸಿ ಚಿತ್ರ ತೆಗೆಯಬೇಕು” ಎಂದು ಭಾವಪೂರ್ಣವಾಗಿ ಹೇಳಿದೆ. ಅದಕ್ಕವನು ಖುಷಿಗೊಂಡು “ ಆಗಲಿ ನಾಳೆಯಿಂದ ಹಂಗೆ ಪ್ರೋಗ್ರಾಂ ಫಿಕ್ಸ್ ಮಾಡೋಣ ಸರ್” ಎಂದು ಒಪ್ಪಿಕೊಂಡ. ಒಂದಿಷ್ಟು ರಿಸ್ಕ್ ತೆಗೆದುಕೊಂಡು ನಮ್ಮ ಸಹನೆ, ಮತ್ತು ಸಾಹಸ ಪರೀಕ್ಷೆ ಮಾಡಿಕೊಳ್ಳುವ ಈ ರೋಮಾಂಚಕ ಸಮಯ ಬಿಡಬಾರದು. ಈ ರೀತಿಯ ಫೋಟೋಗ್ರಫಿಯಲ್ಲಿ ಮಾತ್ರ ಕಾತರ, ಕುತೂಹಲ, ಮತ್ತು ನಿರೀಕ್ಷೆಗಳು ಹೆಚ್ಚುತ್ತವೆ. ಪಟ ದಕ್ಕುವುದು ಸ್ವಲ್ಪವೇ ಆದರೂ ಈ ನಿಸರ್ಗದತ್ತ ನಡಿಗೆಯದಲ್ಲಿ ಖುಷಿ ತುಂಬಿರುತ್ತದೆ. 


ಬೇರೆಯವರಿಗೆ ಕೆಲಸವಿಲ್ಲದೆ ಕೂತು ಸಮಯ ವ್ಯರ್ಥ ಮಾಡುವ ದಂಡಪಿಂಡಗಳಂತೆ ನಾವು ಕಂಡರೂ ಚಿಂತೆಯಿಲ್ಲ. ಆ ಮೌನದ ಕಾಯುವಿಕೆಯಲ್ಲಿ; ನಿಶ್ಯಬ್ಧ ಧ್ಯಾನದಲ್ಲಿ; ಮನಸ್ಸು ನೂರಾರು ಕನಸುಗಳ ಹೆಣೆಯುತ್ತದೆ. ಪಕ್ಷಿಗಳು ತಾವಾಗಿಯೇ ಹಾರಿಬಂದು ಇಲ್ಲಿ ಈ ರೆಂಬೆ ಮೇಲೆ ಕೂತರೆ, ಅದಕ್ಕೆ ಹಸಿರಿನ ದಟ್ಟ ಈ ಹಿನ್ನೆಲೆ ಇದ್ದರೆ ಹೇಗಿರುತ್ತದೆ? ಎಂದು ನಾವು ಕಲ್ಪಿಸಿಕೊಳ್ಳುತ್ತೇವೆ. ನಿಜವಾಗಿಯೂ ಮನ ಅಂದುಕೊಂಡಂತೆ ನಮ್ಮೆದುರಿಗೆ ಪಕ್ಷಿ ಬಂದು ಕೂತೇ ಬಿಟ್ಟರೆ ಆಗ ಸಿಗುವ ಹರ್ಷದ ಸುಖವಿದೆಲ್ಲ! ಅದು ಸ್ವರ್ಗ ಸಮಾನ ಚಮತ್ಕಾರ. 


ಕಾಡಿನ ಅಸಡ ಬಸಡಾ ಜಾಗಗಳಲ್ಲಿ ಕೂರುವುದು ಪಟಗಾರರಿಗೆ ಭೂಷಣ. ಸದಾ ಮೆತ್ತಗಿನ ಸೋಪಾಗಳಲ್ಲಿ ಕೂತು ನಾಜೂಕಾದ ಕುಂಡೆಗಳ ನಿಜವಾದ ಹಣೇಬರ ಗೊತ್ತಾಗುವುದು ಆಗಲೆ. ನದಿ, ಹಳ್ಳಗಳ ಜಾರುಬಂಡೆಗಳ ಹಿಂದಡಗಿ, ಮರದ ಮರೆ ಬಳಸಿ, ಪೊದೆಯ ಆಸರೆ ಉಪಯೋಗಿಸಿ ಹಕ್ಕಿಗಳ ಫೋಟೋ ತೆಗೆಯುವುದೇ ನಿಜವಾದ ಸಡಗರ. ಕೆಸರು ಮೆತ್ತಿಕೊಂಡು, ಮುಳ್ಳು ಚುಚ್ಚಿಸಿಕೊಂಡು, ಅಲ್ಲಲ್ಲಿ ಪುಸಕ್ಕನೆ ಜಾರಿ ಬಿದ್ದು, ನೆಲದ ಮೇಲೆ ತೆವಳಿ ನಡೆಸುವ ಛಾಯಾಗ್ರಹಣ ಸಾಹಸಮಯ. ಸಹಜ ಫೋಟೋಗ್ರಫಿ ಮಾಡ ಬಯಸುವ ಅನೇಕರು ಇಂಥ ವಿಧಾನವನ್ನೇ ಹೆಚ್ಚಾಗಿ ಬಯಸುತ್ತಾರೆ. 


ಇದನ್ನು ದುಸ್ಸಾಹಸ ಅಂತ ಕೂಡ ಕರೆಯಬಹುದು. ಇಲ್ಲಿ ಪಕ್ಷಿಗಳು ಸಿಗುವುದಕ್ಕಿಂತ ತಪ್ಪಿಸಿಕೊಂಡು ಓಡಿ ಹೋಗುವುದೇ ಹೆಚ್ಚು. ಆದರೆ ಅನೇಕ ಹೊಸ ಹೊಸ ಅನುಭವಗಳನ್ನು ಕಟ್ಟಿಕೊಡುವ ಈ ವಿಧಾನ ಬದುಕಿನ ಆಸೆಗಳ ಇಮ್ಮಡಿಸುತ್ತದೆ. ನಮ್ಮ ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತದೆ. ಕಣ್ಣಿಗೆ ಕಂಡು ಕೈಗೆ ಸಿಗದೆ ಓಡಿಹೋಗುವ ಪಕ್ಷಿಗಳು ಮತ್ತದರ ನೆನಪುಗಳು ಮನದಲ್ಲಿ ಕಾಡುತ್ತವೆ. ಜೀವನದಲ್ಲಿ ಸಲೀಸಾಗಿ ಸಿಗುವ ಯಾವುದೂ ಕೂಡ ಮನುಷ್ಯನ ಅಂತರಾಳವನ್ನು ತಣಿಸುವುದಿಲ್ಲ. ಹುಡುಕಾಟ ತಡಕಾಟ, ಪರದಾಟ, ಹೋರಾಟಗಳಿಂದ ಸಿಗುವ ಆನಂದ ಮತ್ತು ಆಸಕ್ತಿಗಳೇ ನಮ್ಮನ್ನು ಸದಾ ಜೀವಂತವಾಗಿ ಇಡುತ್ತವೆ. ಕಷ್ಟಪಟ್ಟುಗಳಿಸಿದ್ದು ಯಾವತ್ತೂ ಮಹತ್ವದ್ದೇ ಆಗಿರುತ್ತದೆ. 


ಅಸಲಿಗೆ ನಾವು ಪಟ್ಟಿ ಮಾಡಿಟ್ಟುಕೊಂಡು ಹೋದ ಅನೇಕ ಪಕ್ಷಿಗಳು ಅಲ್ಲಿ ಸಿಗಲೇ ಇಲ್ಲ. ನನ್ನ ಕನವರಿಕೆಯ ಸ್ಕೇರ್ಲೆಟ್ ಪಿಂಚ್ ಹಕ್ಕಿಯ ದರ್ಶನವೂ ಆಗಲಿಲ್ಲ. “ಅದು ಚೋಪ್ತಾದಲ್ಲಿ ಸಿಗುತ್ತೆ. ನೀವು ಅದಕ್ಕಾಗಿ ನಾನೂರು ಮೈಲಿ ತಿರುವು ಮುರುವಾದ ಕಠಿಣ ರಸ್ತೆಯಲ್ಲಿ ಇಡೀ ಒಂದು ದಿನ ಪ್ರಯಾಣ ಮಾಡಬೇಕು. ಆದರೆ ಅಲ್ಲೀಗ ವಾತಾವರಣ ಏರುಪೇರಾಗಿ ಹಿಮಪಾತ ಶುರುವಾಗಿದೆ” ಎಂದು ಅಂಕಿತ್ ಹೆದರಿಸಿದ. ನಮ್ಮ ಐದು ದಿನಗಳ ಪ್ರವಾಸ ಆಗಲೇ ಮುಗಿಯಲು ಬಂದಿದ್ದು ನಾವು ಹೇಗೂ ತೊಲಗಿ ಹೋಗುವ ಗಿರಾಕಿಗಳು ಎಂಬುದು ಅವನಿಗೆ ಚೆನ್ನಾಗಿ ಗೊತ್ತಿತ್ತು. ಆಮೇಲೆ ಎಲ್ಲವೂ ಒಂದೇ ಸಲಕ್ಕೆ ತೋರಿಸಿಬಿಟ್ಟರೆ ಮತ್ತೆ ಇವರೆಲ್ಲಿ ಬರುತ್ತಾರೆ? ಮುಂದಿನ ವರ್ಷಕ್ಕಿಷ್ಟು ಬಾಕಿ ಉಳಿಸುವುದು ಸೂಕ್ತ ಎಂಬ ವ್ಯವಹಾರದ ದೂರದ ಫಾಯಿದೆಯನ್ನು ಆತ ಆಲೋಚಿಸಿರಬಹುದೆಂದು ನಾವು ತರ್ಕಿಸಿದೆವು. 


“ಸಾಬ್ಜೀ ಇಲ್ಲಿ ಇಷ್ಟಪಟ್ಟ ಹಕ್ಕಿಗಳ ನೋಡಲು ಜನ ತಿಂಗಳಾನುಗಟ್ಟಲೆ ಕಾಯ್ತಾರೆ. ಪಟ ಪ್ರೇಮಿಗಳು ದಿನ, ವಾರ ಎಲ್ಲಾ ಮರೆತು ಇಲ್ಲಿ ಹುಡುಕುತ್ತಲೇ ಇರುತ್ತಾರೆ. ವರ್ಷದ ಎಲ್ಲಾ ಋತುಗಳಲ್ಲಿಯೂ ಇಲ್ಲಿಗೆ ಬಂದು ಹೋಗುವ ಹಕ್ಕಿಗಳು ಬದಲಾಗುತ್ತವೆ. ನನ್ನ ಪ್ರಕಾರ ನೀವು ಇನ್ನೂ ಹತ್ತು ಸಲವಾದರೂ ಕನಿಷ್ಟ ಪಕ್ಷ ಬರಲೇಬೇಕು. ಒಂದೇ ಗುಕ್ಕಿಗೆ ಜೀವನದಲ್ಲಿ ಏನೂ ಸಿಗುವುದಿಲ್ಲ” ಎಂದು ಆತ ಚಾಲಾಕಿ ತತ್ವಜ್ಞಾನಿಯಾಗಿ ಮಾತಾಡಿದ. ನಾವು ನಮ್ಮೆಲ್ಲಾ ಆಸ್ತಿಪಾಸ್ತಿ ಮಾರಿಕೊಂಡು, ಹೆಂಡ್ತಿ ಮಕ್ಕಳು ಸಂಸಾರಗಳ ದಿವಾಳಿಯೆಬ್ಬಿಸಿ ಪೂರ್ಣಪ್ರಮಾಣದ ಅಲೆಮಾರಿಗಳಾಗಿ ಬಂದು ಇಲ್ಲೇ ಠಿಕಾಣಿ ಹೂಡಬೇಕು ಎನ್ನುವಂತಿತ್ತು ಅವನ ಮಾತಿನ ಧಾಟಿ. “ಮುಂದಿನ ಸಲ ಬನ್ನಿ ಸರ್. ಸ್ಕೇರ್ಲೆಟ್ ಪಿಂಚ್ ತೋರಿಸುತ್ತೇನೆ” ಎಂದ. ಅವನು ಹೇಳಿದ ಮತ್ತೊಂದು ಕಡುಕಷ್ಟದ ಪ್ರಯಾಣಕ್ಕೆ, ಹಿಮಪಾತದ ಮಂಡಲ್, ಚೋಪ್ತಾ ಎಂಬ ಕಡು ಶೀತದ ನಾಡಿಗೆ ಹೋಗುವ ಗಳಿಗೆ ಇನ್ನೂ ಕೂಡಿ ಬಂದಿಲ್ಲ. ಪುಟಾಣಿ ಗುಬ್ಬಿ ಗಾತ್ರದ ರಕ್ತವರ್ಣದ ಚಲುವಿನ ಸ್ಕೇರ್ಲೆಟ್ ಪಿಂಚ್ ಎಂಬ ಕೆಂಗನಸು ಈಗಲೂ ನನಗಾಗಿ ಅಲ್ಲಿ ಕಾಯುತಿದೆ.