ಧರ್ಮೇಂದ್ರ ಪ್ರಧಾನ್‌ ಎಂಬ ಒಂದು ಹುಳುಕಲ್ಲು ಕಿತ್ತರೆ ಸಾಕೇ?

ಯಾರೋ ಶಾಸಕರೊಬ್ಬರ ಮೇಲೆ ಜಸ್ಟ್‌ ಒಂದು ಕೋಳಿ ಮೊಟ್ಟೆ ಎಸೆದ ಕಾರಣಕ್ಕೆ ರಾಜ್ಯ ವ್ಯಾಪಿ ಪ್ರತಿಭಟನೆ ಮಾಡಿದ ಬಿಜೆಪಿಗರು ವಿದ್ಯಾರ್ಥಿ ಯುವಜನರನ್ನು ದೇಶ ದ್ರೋಹಿಗಳೆಂದು ಕರೆದ ಬಿಜೆಪಿಗರು ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ವಾಸ್ತವಕ್ಕೆ ಕಣ್ತೆರೆಯಬೇಕಿದೆ.

ಧರ್ಮೇಂದ್ರ ಪ್ರಧಾನ್‌ ಎಂಬ ಒಂದು ಹುಳುಕಲ್ಲು ಕಿತ್ತರೆ ಸಾಕೇ?

ಒಂದು ಗಳಿಗೆ

  ಕುಚ್ಚಂಗಿ ಪ್ರಸನ್ನ

 

 

    ಯುವ ಶಕ್ತಿಯ ಒತ್ತಡಕ್ಕೆ ಮಣಿದು ದೇಶದ ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್‌ ರಾಜಿನಾಮೆ ಸಲ್ಲಿಸಿದ್ದಾಗಿದೆ. ಇದು ಜೆನ್‌ ಜ಼ೀ ಎಂದು ಜನಪ್ರಿಯವಾಗಿರುವ ಯುವ ಪೀಳಿಗೆಯ ಮಣಿಯದ ಹೋರಾಟಕ್ಕೆ ಸಂದ ಮೊದಲ ಗೆಲುವು.

    ಈ ಮೂಲಕ ಜನವಿರೋಧಿ, ಸರ್ವಾಧಿಕಾರಿ ನಡೆಯ ದುಷ್ಟ ಸರ್ಕಾರದ ಮುಂದಿನ ಸಾಲಿನ ಒಂದು ಹುಳುಕು ಹಲ್ಲು ಕಿತ್ತದ್ದಾಗಿದೆ. ಇಡೀ ದೇಶದ ಜನರನ್ನು ಹೇಳದೇ ಕೇಳದೇ ತನ್ನ  ಮಕ್ಕಳ ಡಿಸ್ಟಿಲರಿಗಳಿಗೆ ನೆರವಾಗಲು ಪೆಟ್ರೋಲಿಗೆ ಮನಬಂದಷ್ಟು ಪ್ರಮಾಣದಲ್ಲಿ ಇಥೆನಾಲ್‌ ಕಲಬೆರಕೆ ಮಾಡಿ, ಅದರ ದುಷ್ಪರಿಣಾಮಗಳನ್ನು ಒಪ್ಪಿಕೊಳ್ಳದೇ ಭಂಡತನ ಮಾಡುತ್ತಿರುವ ಮಂತ್ರಿ ನಿತಿನ್‌ ಗಡ್ಕರಿಯನ್ನೂ ಇಳಿಸಲು ಜನರು ಹೋರಾಟಕ್ಕೆ ಮುಂದಾಗಬೇಕಿದೆ. ಕಚ್ಚಾ ತೈಲದ ಧಾರಣೆ ಕಡಿಮೆ ಇದ್ದಾಗಲೂ ನಾಲ್ಕು ಪಟ್ಟು ವಸೂಲು ಮಾಡುತ್ತಿರುವ ಎಪ್‌ಸ್ಟೀನ್‌ ಫೈಲ್‌ ಕುಖ್ಯಾತಿಯ ಪೆಟ್ರೋಲಿಯಂ ಮಂತ್ರಿ ಹರದೀಪ್‌ ಸಿಂಗ್‌ ಪುರಿಯನ್ನು ಇಳಿಸಬೇಕಿದೆ. ಇಂಥ ಇನ್ನಷ್ಟು ಹುಳುಕು ಹಲ್ಲುಗಳನ್ನು ಕೀಳುವುದು ಬಾಕಿ ಇದೆ. 

     “ ರಾಜಿನಾಮೆ ಕೊಡಲು ನಮ್ಮದು ಯುಪಿಎ ಸರ್ಕಾರ ಅಲ್ಲ. ಎನ್‌ಡಿಎ ಸರ್ಕಾರ ನೆನಪಿರಲಿ"”ಅಂತ ದೇಶದ ರಕ್ಷಣಾ ಮಂತ್ರಿ ರಾಜನಾಥ್‌ ಸಿಂಗ್‌ ವ್ಯಂಗ್ಯವಾಗಿ ಹೇಳಿದ್ದ ಮಾತನ್ನು ಈಗ ವಾಪಸ್‌ ತೆಗೆದುಕೊಳ್ಳಬೇಕಿದೆ.

    ಅಧಿಕಾರ , ಆ ಮೂಲಕ ಬರುವ ಮದ ಶಾಶ್ವತ ಅಲ್ಲ ಎಂಬುದನ್ನು ನಮ್ಮ ಯುವ ಜನತೆ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಈ ಮೊದಲು ಯಾವಾಗ ಸಾಬೀತು ಮಾಡಿದ್ದರು ಎಂಬುದು ನೆನಪಿದೆಯೇ.

    ಈಗ ಹನ್ನೆರಡು ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿರಲು ಕಾರಣವೇ 50 ವರ್ಷಗಳ ಹಿಂದೆ ದೇಶದಲ್ಲಿ ನಡೆದ ಯುವಜನರ ಹೋರಾಟ. ಅದು 1973 ರ ಡಿಸೆಂಬರ್‌ 20 , ಗುಜರಾತಿನ ಅಹಮದಾಬಾದ್‌ನ ಎಲ್‌ ಡಿ ಇಂಜಿನಿಯರಿಂಗ್‌ ಕಾಲೇಜು ಹಾಸ್ಟೆಲ್‌ನ ತಿಂಗಳ ಮೆಸ್‌ ಬಿಲ್‌ ಮೊತ್ತವನ್ನು 20% ಹೆಚ್ಚಿಸಿದ ವಿರುದ್ದ ವಿದ್ಯಾರ್ಥಿಗಳು ಮುಷ್ಕರ ಪ್ರಾರಂಭಿಸಿದ ದಿನ. ಆಹಾರ ಧಾನ್ಯಗಳ ಮೇಲಿನ ಸಬ್ಸಿಡಿಯನ್ನು ಸರ್ಕಾರ ವಾಪಸ್‌ ತೆಗೆದುಕೊಂಡಿದ್ದರಿಂದ ಹಾಸ್ಟೆಲ್‌ ಮೆಸ್‌ ಬಿಲ್‌ ಹೆಚ್ಚಿಸಲಾಗಿತ್ತು. ಆದರೆ ವಿದ್ಯಾರ್ಥಿಗಳ ಬಿಸಿ ರಕ್ತ ಅದನ್ನೆಲ್ಲ ಕೇಳುವ ಸ್ಥಿತಿಯಲ್ಲಿರಲಿಲ್ಲ .ಒಂದು ಕಾಲೇಜಿನಲ್ಲಿ ಆರಂಭವಾದ ವಿದ್ಯಾರ್ಥಿಗಳ ಪ್ರತಿಭಟನೆ ಇಡೀ ಗುಜರಾತಿಗೆ ಹರಡಿತು. ಇಡೀ ನಾಗರಿಕ ಸಮಾಜ ಬೀದಿಗೆ ಬಂದು ನಿಂತಿತು. ಅಂದಿನ ಗುಜರಾತ್‌ ಮುಖ್ಯಮಂತ್ರಿ ಚಿಮನ್‌ ಬಾಯಿ ಪಟೇಲ್‌ ಕೈಯಲ್ಲಿ ಹೋರಾಟವನ್ನು ನಿಗ್ರಹಿಸಲು ಆಗಲಿಲ್ಲ. ಅಸೆಂಬ್ಲಿ ವಿಸರ್ಜನೆ ಮಾಡಿ ಹೊಸದಾಗಿ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿ . ಸಂಸದ ಮೊರಾರ್ಜಿ ದೇಸಾಯಿ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿಯೇ ಬಿಟ್ಟರು.

    ಪರಿಣಾಮ ಗುಜರಾತ್‌ ವಿಧಾನ ಸಭೆ ವಿಸರ್ಜನೆಯಾಯಿತು,  1975ರ ಜೂನ್‌ 11ರಂದು ಮಧ್ಯಂತರ ಚುನಾವಣೆ ನಡೆಯಿತು. 12ರಂದು ಫಲಿತಾಂಶ ಹೊರಬಿತ್ತು. ಅಲ್ಲಿವರೆಗೆ ಆಡಳಿತದಲ್ಲಿದ್ದ ಕಾಂಗ್ರೆಸ್‌ 168 ಸೀಟುಗಳ ಪೈಕಿ 75 ಸೀಟುಗಳನ್ನು ಗೆದ್ದಿತಾದರೂ ಸರಳ ಬಹುಮತ ಬರಲಿಲ್ಲ .  ಮೊರಾರ್ಜಿ ಸ್ಥಾಪಿಸಿದ ಜನತಾ ರಂಗ ನಾಲ್ಕು ವಿರೋಧ ಪಕ್ಷಗಳು ಹಾಗೂ ಪಕ್ಷೇತರರನ್ನು ಸೇರಿಸಿಕೊಂಡು ಸರ್ಕಾರ ರಚಿಸಿತು. ಆಗ ಜನಸಂಘ 12 ಸೀಟುಗಳನ್ನು ಗೆದ್ದಿತ್ತು. ಬಾಬುಬಾಯಿ ದೇಸಾಯಿ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾದರು.  

     ಅದೇ  ಜೂನ್‌ 12ರಂದು ಅಲಹಾಬಾದ್‌ ಹೈಕೋರ್ಟ್‌ ತೀರ್ಪು ನೀಡಿ ಇಂದಿರಾ ಅವರ ಆಯ್ಕೆಯನ್ನು ಅನೂರ್ಜಿತಗೊಳಿಸಿತು. ಇಂದಿರಾ ಗಾಂಧಿ ರಾಜಿನಾಮೆ ನೀಡಬೇಕೆಂದು ಮೊರಾರ್ಜಿ ದೇಸಾಯಿ ಆಗ್ರಹಪಡಿಸಿದರು. ಅದೇ  ಜೂನ್‌ 26ರಂದು ಮೊರಾರ್ಜಿ ಅವರನ್ನು ಬಂಧಿಸಲಾಯಿತು . ಅದೇ ದಿನ ದೇಶದಲ್ಲಿ ತುರ್ತುಪರಿಸ್ಥಿತಿಯನ್ನು ಇಂದಿರಾಗಾಂಧಿ ಹೇರಿದರು. ಲೋಕಸಭೆಗೆ ಚುನಾವಣೆ ಘೋಷಿಸುವ ತುಸು ಮುನ್ನ 1977ರ ಜನವರಿ 18ರಂದು ಮೊರಾರ್ಜಿ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಯಿತು.   ಮಾರ್ಚಿಯಲ್ಲಿ ನಡೆದ ಮಹಾ ಚುನಾವಣೆಯಲ್ಲಿ ಮೊರಾರ್ಜಿ ಅವರ ಜನತಾ ಪಕ್ಷದ ನೇತೃತ್ವದಲ್ಲಿ ದೇಶದಲ್ಲಿ ಮೊಟ್ಟ ಮೊದಲ ಕಾಂಗ್ರೆಸ್ಸೇತರ ಸರ್ಕಾರ ಅಸ್ತಿತ್ವಕ್ಕೆ ಬಂತು. ಮಾರ್ಚಿ 24ರಂದು ಮೊರಾರ್ಜಿ ದೇಸಾಯಿ ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

 

(ಮೊರಾರ್ಜಿ ದೇಸಾಯಿ ಇಂದಿರಾ ಗಾಂಧಿಯ ಕಡುವಿರೋಧಿಯಾಗಲು ಒಂದು ಹಿನ್ನೆಲೆ ಇದೆ. . 1964ರಲ್ಲಿ ನೆಹರೂ ನಿಧನದ ಬಳಿಕ ಮೊರಾರ್ಜಿ ಕಾಂಗ್ರೆಸ್‌ ಅಧ್ಯಕ್ಷ ಗಾದಿಯ ಮೇಲೆ ಕಣ್ಣಿಡುತ್ತಾರೆ. ಆಗ ಪ್ರಧಾನಿಯಾದ ಲಾಲ್‌ ಬಹದ್ದೂರ್‌ ಶಾಸ್ತ್ರಿ ತಮ್ಮ ಸಂಪುಟದಲ್ಲಿ ಮಂತ್ರಿಯಾಗುವಂತೆ ಕರೆದರೂ  ಮೊರಾರ್ಜಿ ಒಪ್ಪದೇ ಹೊರ ನಿಲ್ಲುತ್ತಾರೆ. ಹದಿನೆಂಟೇ ತಿಂಗಳಲ್ಲಿ ಶಾಸ್ತ್ರಿ ಆಕಸ್ಮಿಕವಾಗಿ ತಾಷ್ಕೆಂಟ್‌ನಲ್ಲಿ ತೀರಿಹೋಗುತ್ತಾರೆ. ಆಗ ಪಕ್ಷದ  ಅತ್ಯುನ್ನತ ಪದವಿಯಾಗಿದ್ದ ಎಐಸಿಸಿ ಅಧ್ಯಕ್ಷರಾಗಲು  ಮೊರಾರ್ಜಿ ಬಯಸುತ್ತಾರೆ, ಆದರೆ ಇಂದಿರಾ ಅತಿ ಹೆಚ್ಚು ಓಟು ಪಡೆದು ಗೆದ್ದುಬಿಡುತ್ತಾರೆ. ಆದರೂ ಮೊರಾರ್ಜಿ ಅವರನ್ನು ಪ್ರಧಾನ ಮಂತ್ರಿ ಇಂದಿರಾಗಾಂಧಿ ತಮ್ಮ ಸಂಪುಟದಲ್ಲಿ ಹಣಕಾಸು ಖಾತೆ ಕೊಟ್ಟು ಉಪ ಪ್ರಧಾನ ಮಂತ್ರಿಯನ್ನಾಗಿ ಮಾಡಿಕೊಳ್ಳುತ್ತಾರೆ.  1969ರ ಜುಲೈನಲ್ಲಿ ಇಂದಿರಾ ಮೊರಾರ್ಜಿ ಅವರ ಹಣಕಾಸು ಖಾತೆಯನ್ನು ವಾಪಸ್‌ ಪಡೆದು, ಕೇವಲ ಉಪ ಪ್ರಧಾನಿಯಾಗಿರು ಎನ್ನುತ್ತಾರೆ. ಒಪ್ಪದ ಮೊರಾರ್ಜಿ ರಾಜಿನಾಮೆ ನೀಡಿ ಹೊರಬರುತ್ತಾರೆ.

   ಇಂದಿರಾ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಅನ್ನು ಒಡೆದು ಕಾಂಗ್ರೆಸ್‌ (ಆರ್)‌ ಮಾಡಿಕೊಳ್ಳುತ್ತಾರೆ. ಅವರೊಂದಿಗೆ ಹೋಗದ ಹಿರಿಯರು ಉಳಿದುಕೊಂಡ  ಬಣವೇ  ಕಾಂಗ್ರೆಸ್‌ ( ಒ) . ಮೊರಾರ್ಜಿ ದೇಸಾಯಿ ಸಹಜವಾಗೇ ಕಾಂಗ್ರೆಸ್‌ (ಒ) ನ ನಾಯಕತ್ವ ವಹಿಸಿಕೊಳ್ಳುತ್ತಾರೆ.  .ಹೀಗೆ  ಮೊರಾರ್ಜಿ ದೇಸಾಯಿ ಇಂದಿರಾ ಗಾಂಧಿ  ವಿರುದ್ದ ಸೇಡು ತೀರಿಸಿಕೊಳ್ಳಲು ನೆರವಾದದ್ದು ಗುಜರಾತಿನ ಅಹಮದಾಬಾದಿನಲ್ಲಿ ವಿದ್ಯಾರ್ಥಿಗಳು ಪ್ರಾರಂಭಿಸಿದ ಒಂದು ಪುಟ್ಟ ಪ್ರತಿಭಟನೆ . ಇದು ಬ್ಯಾಕ್‌ ಗ್ರೌಂಡ್‌)  

1974ರ ವಿದ್ಯಾರ್ಥಿ ನಾಯಕ ದಿ. ಅರುಣ್‌ ಜೇಟ್ಲಿ

    ಗುಜರಾತಿನ ಅಹಮದಾಬಾದ್‌ನಲ್ಲಿ ವಿದ್ಯಾರ್ಥಿಗಳು ಶುರು ಮಾಡಿದ ಬೆಲೆ ಹೆಚ್ಚಳದ ವಿರುದ್ದದ ಹೋರಾಟದ ಕಿಚ್ಚು ದೇಶ ಪೂರ್ತಿ ನಿಧಾನವಾಗಿ ವ್ಯಾಪಿಸಿತು. ಬಿಹಾರದಲ್ಲಿ ಛಾತ್ರ ಸಂಘರ್ಷ ಸಮಿತಿಯು ಭ್ರಷ್ಟಾಚಾರ, ನಿರುದ್ಯೋಗ ಹಾಗೂ ಬೆಲೆ ಏರಿಕೆ ವಿರುದ್ದ ಪ್ರತಿಭಟನೆ ಪ್ರಾರಂಭಿಸಿತು.    ಸಕ್ರಿಯ ರಾಜಕಾರಣದಿಂದ ನಿವೃತ್ತಿ ಹೊಂದಿದ್ದ ಜೆಪಿ ಎಂದೇ ಹೆಸರಾಗಿದ್ದ ಜಯಪ್ರಕಾಶ್‌ ನಾರಾಯಣ್‌ ಈ ಚಳವಳಿಯ ಮಾರ್ಗದರ್ಶಿ ನಾಯಕತ್ವ ವಹಿಸಿಕೊಂಡರು. ಬಿಹಾರ ಮಾತ್ರವಲ್ಲದೇ ಇಡೀ ದೇಶದಲ್ಲಿ ವಿದ್ಯಾರ್ಥಿಗಳನ್ನು ಹೋರಾಟಕ್ಕೆ ಸೆಳೆದರು.

     1974ರಲ್ಲಿ ದೆಹಲಿ ಯೂನಿವರ್ಸಿಟಿಯಲ್ಲಿ ಎರಡು ದಿನಗಳ ಇಡೀ ದೇಶದ ವಿದ್ಯಾರ್ಥಿ ನಾಯಕರ ಸಭೆಯನ್ನು ಕರೆಯಲಾಗುತ್ತದೆ. ಜೆಪಿ ಆ ಸಭೆಯಲ್ಲಿ ಮಾತನಾಡುತ್ತಾರೆ. ಆಗ ದೆಹಲಿ ವಿವಿಯ ಎಬಿವಿಪಿ ನಾಯಕ ದಿವಂಗತ ಅರುಣ್‌ ಜೇಟ್ಲಿ, ಇವರು ಎಲ್ಲೆಡೆ ವಿದ್ಯಾರ್ಥಿಗಳ ಹೋರಾಟ ಸಂಘಟಿಸುವಲ್ಲಿ ಮುಂದಾಳತ್ವ ವಹಿಸಿಕೊಳ್ಳುತ್ತಾರೆ. ಮುಂದೆ ಬಿಜೆಪಿ ಸರ್ಕಾರದಲ್ಲಿ ಪ್ರಭಾವಿ ಮಂತ್ರಿಯೂ ಆಗುತ್ತಾರೆ. ಜೊತೆಗೆ ಇವತ್ತು ನೀಟ್‌ ಪರೀಕ್ಷೆ ವೈಫಲ್ಯದ ನೈತಿಕ ಹೊಣೆ ಹೊತ್ತು ರಾಜಿನಾಮೆ ತೆತ್ತ ಧರ್ಮೇಂದ್ರ ಪ್ರಧಾನ್‌ ಕೂಡಾ ಒಡಿಶಾದಲ್ಲಿ ಒಂದು ಕಾಲಕ್ಕೆ ಬಿಜೆಪಿಯ ವಿದ್ಯಾರ್ಥಿ ವಿಭಾಗ ಎಬಿವಿಪಿಯ ನಾಯಕರಾಗಿದ್ದವರೇ.

 

     ಧರ್ಮೇಂದ್ರ ಪ್ರಧಾನ್‌ ತಂದೆ ವಾಜಪೇಯಿ ಸಂಪುಟದಲ್ಲಿ ಮಂತ್ರಿಯಾಗಿದ್ದವರು. ಧರ್ಮೇಂದ್ರ ಪ್ರಧಾನ್‌ ಅವರ ಜನಪ್ರಿಯ ಹೆಸರು ಮುಕು, ಇವರು 1997ರಲ್ಲಿ ಎಬಿವಿಪಿಯ  ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಆಗ ಒಡಿಶಾದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಸೋರಿಕೆಯಾಗಿದೆ ಎಂಬ ವದಂತಿ ಕೇಳಿ ಬರುತ್ತದೆ.  ನಿಜಕ್ಕೂ ಆಗಿದೆಯೋ ಇಲ್ಲವೋ ಎಂಬ ದಾಖಲೆ ಇರಲಿಲ್ಲ. ಆದರೆ ಈ ಮುಕು ಆಗ ಒಡಿಶಾ ಸರ್ಕಾರದ ವಿರುದ್ಧ ವಿದ್ಯಾರ್ಥಿ ಹೋರಾಟ ಹಮ್ಮಿಕೊಳ್ಳುತ್ತಾರೆ. ಅಲ್ಲಿನ ವಿಧಾನಸೌಧದ ಒಳಕ್ಕೆ  ಸಾವಿರಾರು ವಿದ್ಯಾರ್ಥಿಗಳನ್ನು ನುಗ್ಗಿಸಲು ನೋಡುತ್ತಾರೆ. ಈ ಸಮಯದಲ್ಲಿ ಪೊಲೀಸರು ಲಾಠಿ ಚಾರ್ಜ್ ಮಾಡಿ ಚದುರಿಸುತ್ತಾರೆ. ಆಗ ದೇವೇಗೌಡರು ದೇಶದ ಪ್ರಧಾನಿ, ಈಗಿನ ಎನ್ ಡಿಎ ಮಿತ್ರಪಕ್ಷವಾದ ಅವರ ಜನತಾದಳದ ಕಾರ್ಯಕರ್ತರು ಈಗ ಆರ್‌ ಎಸ್‌ ಎಸ್‌ ಗೂಂಡಾಗಳು ಸಿಜೆಪಿ ಕಾರ್ಯಕರ್ತರನ್ನು ಥಳಿಸಿದಂತೆ ಎಬಿವಿಪಿ ಪ್ರತಿಭಟನಾಕಾರರನ್ನು ಥಳಿಸುತ್ತಾರೆ. ಪ್ರಧಾನ್‌ ಅವರ ಮೂಳೆ ಮುರಿಯುತ್ತದೆ. ಕಾಕ್‌ರೋಚ್‌ ಜನತಾ ಪಾರ್ಟಿ ತಿಂಗಳಿಂದ ಜಂತರ್‌ಮಂತರ್‌ನಲ್ಲಿ ಅವರ ರಾಜಿನಾಮೆಗೆ ಪಟ್ಟು ಹಿಡಿದು ಸತ್ಯಾಗ್ರಹಕ್ಕೆ ಕೂತಾಗ, ರಾಜಿನಾಮೆ ಪತ್ರಕ್ಕೆ ಸಹಿ ಹಾಕುವಾಗ ಪ್ರಧಾನ್‌ ಅವರಿಗೆ ಈ ಹಿಂದಿನದೆಲ್ಲ ನೆನಪಿಗೆ ಬಂದಿರಲಿಕ್ಕೆ ಸಾಕು.  

 

     ಇಷ್ಟಾದರೂ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ದ ಎಬಿವಿಪಿ ನಾಯಕ ಧರ್ಮೇಂದ್ರ ಪ್ರಧಾನ್‌ ನೇತೃತ್ವದಲ್ಲಿ ಹೋರಾಟ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ಯಾರೂ ಕೂಡಾ 'ದೇಶದ್ರೋಹಿ' ಎಂದು ಕರೆಯಲಿಲ್ಲ. ಮೊನ್ನೆ ಶಿಕ್ಷಣ ಮಂತ್ರಿಯಾಗಿ ಇದೇ ಧರ್ಮೇಂದ್ರ ಪ್ರಧಾನ್‌ ವಿರೋಧ ಪಕ್ಷಗಳು ವಿದ್ಯಾರ್ಥಿಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿವೆ” ಎಂದು ಆಪಾದಿಸಿದಂತೆ ಅವತ್ತು ಯಾರೂ ಬಿಜೆಪಿ  ವಿದ್ಯಾರ್ಥಿಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ದೂರಲಿಲ್ಲ. ಹಾಗೂ ಇವತ್ತು ಆಡಳಿತದಲ್ಲಿರುವ ಅದೇ ಬಿಜೆಪಿ ನಾಯಕರು, “ಸಿಜೆಪಿ ಹೋರಾಟಗಾರರನ್ನು ದೇಶ ದ್ರೋಹಿಗಳು” ಎಂದು ಹಣೆಪಟ್ಟಿ ಕಟ್ಟಿದಂತೆ ಅವತ್ತಿನ ಸರ್ಕಾರದಲ್ಲಿದ್ದ ಯಾರೂ ಎಬಿವಿಪಿ ನೇತೃತ್ವದ ಹೋರಾಟಗಾರ ವಿದ್ಯಾರ್ಥಿಗಳನ್ನು ದೇಶ ದ್ರೋಹಿಗಳು, ಚೀನಾ , ಪಾಕ್‌ ಏಜೆಂಟರು ಅಂತ ಆಪಾದಿಸಲಿಲ್ಲ.  ಹೀಗೆ ಇದೆಲ್ಲ ಇತಿಹಾಸ ಗೊತ್ತಿಲ್ಲದೇ ಹೋದರೆ  ಯಾರು ಏನು ಹೇಳಿದರೂ ಅದನ್ನೇ ನಿಜ ಅಂತ ನಂಬಿಬಿಡುತ್ತೀರಿ.

 

     ಜನ ಚಳವಳಿಯ ಮುಖಾಂತರವೇ ಮುಖ್ಯವಾಹಿನಿ ರಾಜಕೀಯದಲ್ಲಿ ನೆಲೆ ಹಾಗೂ ಅಸ್ತಿತ್ವ ಕಂಡುಕೊಂಡ ಬಿಜೆಪಿಗೆ ಈಗ ತಾನು ಅಧಿಕಾರದಲ್ಲಿರುವಾಗ ಯಾವ ವಿರೋಧದ ಧ್ವನಿಗಳೂ, ವಿಮರ್ಶೆಗಳೂ, ಟೀಕೆಗಳೂ ರುಚಿಸುವುದಿಲ್ಲ. ಕಾಂಗ್ರೆಸ್‌ ಅಧಿಕಾರದಲ್ಲಿ ಇದ್ದಾಗಲೂ ಜನ ಹೋರಾಟಗಳನ್ನು ಹತ್ತಿಕ್ಕಿದೆ ಎನ್ನುವುದೂ ತಳ್ಳಿಹಾಕಲಾಗದ ವಾಸ್ತವ. ಅಧಿಕಾರದ ಮದವೇ ಹಾಗೆ, ಜನರಿಂದ ದೂರ , ಜನ ಒಂದು ವೇಳೆ ಹತ್ತಿರ ಬಂದರೆ ಪೊಲೀಸ್‌ ಹಾಗೂ ಇನ್ನಿತರ ಭದ್ರತಾ ಪಡೆಗಳನ್ನು ಬಳಸಿ ಹತ್ತಿಕ್ಕುವುದು ಗ್ಯಾರಂಟಿ.

 

     ಕಾಕ್‌ರೋಚ್‌ ಜನತಾ ಪಾರ್ಟಿಯ ಬೆನ್ನ ಹಿಂದೆ ಆಮ್‌ ಆದ್ಮಿ ಪಾರ್ಟಿ ಇದೆ, ಸೋನಮ್‌ ವಾಂಗ್‌ ಚುಕ್‌ ಬೆನ್ನಿಗೆ ಬಿಜೆಪಿ ಇದೆ ಎನ್ನುವುದೆಲ್ಲ ನಿಜ ಅಂತಲೇ ಇಟ್ಟುಕೊಳ್ಳಿ, ಸೋನಮ್‌ ವಾಂಗ್‌ ಚುಕ್‌ ಉಪವಾಸದ ನೆಪದಲ್ಲಿ ಸ್ವಘೋಷಿತ ವಿದ್ಯಾರ್ಥಿ ನಾಯಕರಾಗಲು ಹೊರಟಿದ್ದರು ಜೊತೆ ಜೊತೆಗೇ ಕಾಂಗೆಸ್‌ನ ಹೋರಾಟವನ್ನು ದುರ್ಬಲಗೊಳಿಸುವ ಹುನ್ನಾರ ಮಾಡಿದರು ಎಂಬುದೂ ನಿಜವೇ ಆಗಿರಲಿ. ವಾಂಗ್‌ ಚುಕ್‌ ಅವರನ್ನು ಬಂಧಿಸಿ ದೇಶ ದ್ರೋಹದ ಆಪಾದನೆ ಹೊರಿಸಿ ಜೋಧಪುರದ ಜೈಲಿನಲ್ಲಿ ಇರಿಸಿದ್ದಾಗ ಅವರಿಗೆ ಕಾನೂನು  ನೆರವು ನೀಡಿದ ಜಬಲ್‌ಪುರ್‌  ಕಾಂಗ್ರೆಸ್‌ ಸಂಸದ ಹಾಗೂ ಹಿರಿಯ ವಕೀಲ ವಿವೇಕ್‌ ತಂಕಾ ವಾಂಗ್‌ ಚುಕ್‌ ಪತ್ನಿ ಗೀತಾಂಜಲಿಗೆ ಕಿವಿಮಾತು ಹೇಳಿ ,    ಆ ಮೂಲಕ ವಾಂಗ್‌ ಚುಕ್‌ ಆಸ್ಪತ್ರೆಯಲ್ಲಿ ಬಿಜೆಪಿಯ ನಡ್ಡಾ ಎದುರು 28 ದಿನಗಳ ಉಪವಾಸ ತ್ಯಜಿಸಲು ಹಾಗೂ ಧರ್ಮೇಂದ್ರ ಪ್ರಧಾನ್‌ ರಾಜಿನಾಮೆ ಬೇಡಿಕೆಗೆ ಒತ್ತು ಕೊಡದೇ ಇರಲು ಕಾರಣ ಎನ್ನಲಾಗಿದೆ. ಅದೂ ನಿಜವೇ ಇರಲಿ, ಆದರೆ ಜಂತರ್‌ ಮಂತರ್‌ನಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಹದೋಪಾದಿಯಲ್ಲಿ ಸೇರಿದ್ದ ವಿದ್ಯಾರ್ಥಿ ಯುವಜನರು ಅದಾಗಲೇ ಸೋನಮ್‌ ವಾಂಗ್‌ ಚುಕ್‌ ಅವರನ್ನೂ ಒಂದು ಹಂತದಲ್ಲಿ ಸಿಜೆಪಿ ಸ್ಥಾಪಕ ಅಭಿಜೀತ್‌ ದೀಪ್ಕೆಯನ್ನೂ ಕೈ ಬಿಟ್ಟು ಹೋರಾಟದ ಹಾದಿಯಲ್ಲಿ ಬಹಳ ದೂರ ಹೋಗಿಯಾಗಿತ್ತು ಎನ್ನುವುದು ಗಮನಾರ್ಹ.

 

    ನದಿಯ ಪ್ರವಾಹವಾಗಲೀ ಜನ ಪ್ರವಾಹವಾಗಲೀ ವರ್ತಿಸುವುದೇ ಹಾಗೆ. ಶಕ್ತಿ ಹಾಗೂ ಸಂಖ್ಯೆ ಹೆಚ್ಚಾಗುತ್ತಾ ಹೋದಂತೆಲ್ಲ ಭೋರ್ಗೆರೆದು ಹರಿಯುತ್ತಾ ಎದುರು ಬರುವ ಎಲ್ಲವನ್ನೂ ಕೊಚ್ಚಿಕೊಂಡು ಮುಂದೆ ಸಾಗಿಬಿಡುತ್ತದೆ.

    ಆದರೆ, ಮೊನ್ನೆ ಜು.20ರ ಸೋಮವಾರದ ಹಿಂದಿನ ರಾತ್ರಿ ಮತ್ತು ಆನಂತರದ ದಿನಗಳಲ್ಲಿ ಪೊಲೀಸರು, ಆರ್‌ ಎ ಎಫ್‌ ದಳದವರು ಎಳೆಯ ಕಾಲೇಜು ಹುಡುಗ, ಹುಡುಗಿಯರ ಮೇಲೆ ಹೀಗೆ ಅಮಾನುಷವಾಗಿ ಎರಗಬಾರದಿತ್ತು. ಅವರ ಮೇಲೆ ಹಿಂಸಾಚಾರ ನಡೆಸಬಾರದಿತ್ತು. ಲಾಠಿಗಳನ್ನು ಬೀಸುತ್ತ ಕೈಕಾಲು ಕತ್ತುಗಳನ್ನು ಮುರಿಯಬಾರದಿತ್ತು. ಅವರ ರಕ್ತ ಹರಿಸಬಾರದಿತ್ತು. ಪೆಲಟ್‌ ಗನ್‌ಗಳನ್ನು ಬಳಸಿ ಅಂಧರಾಗುವಂತೆ ಗಾಯಗೊಳಿಸಬಾರದಿತ್ತು.  ಇಂಥ ಎಲ್ಲ ಕೃತ್ಯಗಳ ಮೂಲಕ ವಿದ್ಯಾರ್ಥಿ ಯುವಜನರ ನವಿರು ಮನಸ್ಸುಗಳನ್ನು ಘಾಸಿಗೊಳಿಸಬಾರದಿತ್ತು.

 

    ಒಂದು ಸಲ ಪೊಲೀಸ್‌ ಅಥವಾ ಸೇನೆಗೆ ಸೇರಿ ಯೂನಿಫಾರಂ ಧರಿಸಿದ ಮೇಲೆ, ಕೈಯಲ್ಲಿ ಲಾಠಿಯೋ, ಬಂದೂಕವನ್ನೋ ಹಿಡಿದ ಮೇಲೆ ಅವರ ಮನಸಾಕ್ಷಿಯನ್ನು ಮನೆಯಲ್ಲೇ ಬಿಟ್ಟು ಬರಬೇಕಾಗುತ್ತದೆ ಎಂಬುದೂ ನಿಜ. ಇಲ್ಲಿ ಪೊಲೀಸರು ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದ ಹೋರಾಟಗಾರರ ಮೇಲೆ  ತಂತಾನೇ ಲಾಠಿ ಚಾರ್ಜ್‌ ಮಾಡಿದರು ಅಂತ ಭಾವಿಸಿದರೆ ನಮ್ಮಂತ ಮೂರ್ಖರು ಯಾರೂ ಇರುವುದಿಲ್ಲ.

 

   ದಿಲ್ಲಿಯಲ್ಲಿ ಯಾವುದೇ ಚುನಾಯಿತ ಸರ್ಕಾರವಿದ್ದರೂ ಪೊಲೀಸರನ್ನು ನಿಯಂತ್ರಿಸುವುದು ಭಾರತ ಸರ್ಕಾರದ ಗೃಹ ಮಂತ್ರಿ. ಈ ಗೃಹ ಮಂತ್ರಿ ಯಾರು ಅಂತ ಹೇಳಬೇಕಿಲ್ಲ ಅಲ್ವಾ.

    ನೆಪ ಮಾತ್ರಕ್ಕೆ ಎನ್‌ಡಿಎ ಸರ್ಕಾರ, ಎಲ್ಲ ಹತೋಟಿ ಬಿಜೆಪಿ ಬಳಿಯಲ್ಲಿ. ಈ ಬಿಜೆಪಿ ಇರುವುದು ಈ ಗೃಹ ಮಂತ್ರಿ ಅಮಿತ್‌ ಶಾ ಬಿಗಿ ಮುಷ್ಟಿಯಲ್ಲಿ. ಪ್ರತಿಭಟನಾ ನಿರತ ವಿದ್ಯಾರ್ಥಿ ಯುವಜನರ ವಿರುದ್ದ ಪೊಲೀಸ್‌ ಕ್ರಮಕ್ಕೆ ಆದೇಶ ನೀಡುವುದೇ ಗೃಹ ಮಂತ್ರಿ ಎಂಬುದು ಎಲ್ಲರಿಗೂ ತಿಳಿದಿರಬೇಕಾದ ಸಂಗತಿ.

    ಇಂಥ ಒಂದು ದೊಡ್ಡ ಮಟ್ಟದ ಪೊಲೀಸ್‌ ಹಿಂಸಾಚಾರದಲ್ಲಿ ಪೊಲೀಸರಲ್ಲದೇ ಇರುವ ಗೂಂಡಾಗಳು ಇದ್ದರು ಎಂಬುದು ಹೋರಾಟಗಾರರ ಸೋಶಿಯಲ್‌ ಮೀಡಿಯಾ ವಿಡಿಯೋಗಳಲ್ಲಿ ದಾಖಲಾಗಿದೆ. ಈ ಗೂಂಡಾಗಳನ್ನು ಸುಮ್ಮನೆ ಬಿಡಬಾರದು. ಅವರನ್ನು ಪತ್ತೆ ಹಚ್ಚಿ ಒಂದು ವೇಳೆ ಅವರು ಸಾದಾ ಬಟ್ಟೆಯಲ್ಲಿದ್ದ ಭದ್ರತಾ ಪಡೆಗಳ ಅಧಿಕಾರಿ ಸಿಬ್ಬಂದಿಗಳಾಗಿದ್ದರು ಅಂತಾದರೂ ಸರಿಯೇ ಕಾನೂನು ಪ್ರಕಾರ ಅವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳುವಂತೆ ಹೋರಾಟಗಾರರು ಒತ್ತಾಯಿಸಬೇಕಿದೆ. ವಿದ್ಯಾರ್ಥಿ ಯುವಜನರ ಮೇಲೆ ಅತೀವ ಹಿಂಸಾಚಾರ ಎಸಗಿದ ಯೂನಿಫಾರಂ ಧರಿಸಿದ ಅಧಿಕಾರಿ ಸಿಬ್ಭಂದಿ ವಿರುದ್ದವೂ ಕ್ರಮ ಜರುಗಬೇಕಿದೆ.

    2012ರಲ್ಲಿ ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಇದೇ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ಮಾಡಿದ ಪಾರ್ಲಿಮೆಂಟಿಗೆ ನುಗ್ಗಲು ಯತ್ನಿಸಿದ ಸಾರ್ವಜನಿಕರ ವಿರುದ್ದ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಹೀಗೇ ಹಿಂಸಾಚಾರ ಮಾಡಿತ್ತು ಎಂಬ ವಿಡಿಯೋಗಳನ್ನು ಸೋಶಿಯಲ್‌ ಮೀಡಿಯಾಗಳಲ್ಲಿ ಹರಿಬಿಡುವ ಮೂಲಕ ಇವತ್ತಿನ ಬಿಜೆಪಿ ಹಿಂಸಾಚಾರವನ್ನು ಮುಚ್ಚಿಹಾಕಲು ಬಿಡಬಾರದು.

     ದಿಲ್ಲಿಯ ಜಂತರ್‌ಮಂತರ್‌ನಲ್ಲಿ ಸೇರಿದ್ದ ಎಲ್ಲ ಬಗೆಯ ಭದ್ರತಾ ಪಡೆಗಳು ಗೃಹ ಮಂತ್ರಿ ಅಮಿತ್‌ ಶಾ ಕೈವಶದಲ್ಲೇ ಇರುವುದು ಎಂಬುದೂ ಗಮನದಲ್ಲಿರಲಿ. ಹೀಗಾಗಿ ಗೃಹ ಮಂತ್ರಿ ಅಮಿತ್‌ ಶಾ ಪೊಲೀಸರ ಅಪ್ರಚೋದಿತ ಹಿಂಸಾಚಾರದ ಕುರಿತು ದೇಶಕ್ಕೆ ಅಥವಾ ಸದನಕ್ಕೆ ಸಮಜಾಯಿಷಿ ಕೊಡಬೇಕಿದೆ.

 

೧) ಇದೇ ಕಾರಣವಾಗಿ ಬಿಹಾರದಲ್ಲಿ ಪ್ರತಿಭಟನೆ ಮಾಡುತ್ತಿದ್ದ ಯುವಜನರ ಮೇಲೆ ಜಲ ಫಿರಂಗಿ( ವಾಟರ್‌ ಕ್ಯಾನನ್‌) ಗಳನ್ನು ಬಳಸಿ ಹಿಮ್ಮೆಟ್ಟಿಸಿದಂತೆ ದಿಲ್ಲಿಯಲ್ಲಿ ಏಕೆ ಹೋರಾಟಗಾರರ ಮೇಲೆ ಜಲ ಫಿರಂಗಿ ಬಳಸಲಿಲ್ಲ,

೨) ಕಾಶ್ಮೀರದಲ್ಲಿ ಬಳಸಿದಂತೆ ಇಲ್ಲೂ ವಿದ್ಯಾರ್ಥಿ ಯುವಜನರ ಮೇಲೆ ಮಾರಣಾಂತಿಕ ಪೆಲೆಟ್‌ ಗನ್‌ಗಳನ್ನು ಪ್ರಯೋಗಿಸುವಂತೆ ಆದೇಶ ನೀಡಿದವರು ಯಾರು?

 ೩) ಪ್ರತಿಭಟನೆಯಲ್ಲಿದ್ದ ಹೆಣ್ಣುಮಕ್ಕಳನ್ನು ನಿಯಂತ್ರಿಸಲು ಮಹಿಳಾ ಪೊಲೀಸರ ಬದಲು ಪುರುಷ ಪೊಲೀಸರನ್ನೇ ಮುಂದೆ ಬಿಟ್ಟಿದ್ದೇಕೆ, (ಪುರುಷ ಪೊಲೀಸರು ಹೇಗೆಲ್ಲ ಯುವತಿಯರನ್ನು ಕೆಟ್ಟದಾಗಿ ನಡೆಸಿಕೊಂಡರು ಎಂಬ ವಿಡಿಯೋಗಳನ್ನು ಗಮನಿಸಿ)

೪) ಯೂನಿಫಾರಂನಲ್ಲಿದ್ದ ಪೊಲೀಸರಾಗಲೀ ಇತರ ಭದ್ರತಾ ಪಡೆಗಳ ಸಿಬ್ಭಂದಿಯಾಗಲೀ ಅವರ ಎದೆಯ ಮೇಲೆ ಅವರ ಹೆಸರುಗಳನ್ನು ಹೊಂದಿರುವ ನೇಮ್‌ ಪ್ಲೇಟ್‌ ಗಳನ್ನುಯಾಕೆ ಧರಿಸಿರಲಿಲ್ಲ

೫) ಪೊಲೀಸ್‌ ಬ್ಯಾರಿಕೇಡ್‌ಗಳಿಗೆ ವಿದ್ಯುತ್‌ ಹರಿಸಿದವರು ಯಾರು?

     ಈ ಎಲ್ಲ ಆಪಾದನೆಗಳಿಗೆ ಗೃಹ ಸಚಿವಾಲಯ ಸೂಕ್ತ ಸಮರ್ಪಕ ಉತ್ತರ ನೀಡಬೇಕು ಹಾಗೂ ಗೃಹ ಸಚಿವಾಲಯದ ಸೂಚನೆ ಅಥವಾ ಆದೇಶ ಇಲ್ಲದೇ ಪೊಲೀಸರೇ ಸ್ಯಯಂ ಹಿಂಸಾಚಾರದಲ್ಲಿ ತೊಡಗಿದರು ಎಂದಾದಲ್ಲಿ ಅವರೆಲ್ಲ ವಿರುದ್ದ ಕೂಡಲೇ ಶಿಸ್ತು ಕ್ರಮ ಜರುಗಿಸಬೇಕಲ್ಲವೇ ?

 

    ಹೋರಾಟದ ಮುಂಚೂಣಿಯಲ್ಲಿರುವ ಸಿಜೆಪಿ ನಾಯಕರು ಶಿಕ್ಷಣ ಮಂತ್ರಿಯ ರಾಜಿನಾಮೆಗೆ ಸಂತೃಪ್ತರಾಗದೇ ಈ ಎಲ್ಲ ಅನ್ಯಾಯಗಳನ್ನು ಅಕ್ರಮಗಳನ್ನು ಪ್ರಶ್ನಿಸಿ ನ್ಯಾಯಕ್ಕಾಗಿ ಹೋರಾಟ ಮುಂದುವರೆಸಬೇಕಿದೆ. ಯಾರೋ ಶಾಸಕರೊಬ್ಬರ ಮೇಲೆ ಜಸ್ಟ್‌ ಒಂದು ಕೋಳಿ ಮೊಟ್ಟೆ ಎಸೆದ ಕಾರಣಕ್ಕೆ ರಾಜ್ಯ ವ್ಯಾಪಿ ಪ್ರತಿಭಟನೆ ಮಾಡಿದ ಬಿಜೆಪಿಗರು ವಿದ್ಯಾರ್ಥಿ ಯುವಜನರನ್ನು ದೇಶ ದ್ರೋಹಿಗಳೆಂದು ಕರೆದ ಬಿಜೆಪಿಗರು ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ವಾಸ್ತವಕ್ಕೆ ಕಣ್ತೆರೆಯಬೇಕಿದೆ.