ಮೀಸಲಾತಿ ವಿರೋಧಿ ಹೋರಾಟ- ಒಂದು ಚಿಂತನೆ 

ಎಲ್ಲರೂ ಒಂದೇ ಅನ್ನುವುದಾದರೆ, ಈ ಜಾತಿ ದೌರ್ಜನ್ಯ ಏಕೆ? ಮರ್ಯಾದಾ ಹತ್ಯೆಗಳೇಕೆ? ಲಿಂಗಾಯಿತ, ಗೌಡ, ಇತರೆ ಮುಂದುವರಿದ ಜಾತಿ ಜಾತಿಗಳ ಮಧ್ಯೆ ಮದುವೆಗಳಾದಾಗ ನಡೆಯದ ಮರ್ಯಾದಾ ಹತ್ಯೆಗಳು ಬರೀ ದಲಿತ ಹುಡುಗಿ ಅಥವಾ ಹುಡುಗ ನನ್ನ ಮದುವೆಯಾದಾಗ ಮಾತ್ರ ಹತ್ಯೆ ಮಾಡಲಾಗುತ್ತದೆ.

ಮೀಸಲಾತಿ ವಿರೋಧಿ ಹೋರಾಟ- ಒಂದು ಚಿಂತನೆ 

ಕೆ.ಬಿ.ನೇತ್ರಾವತಿ

 


   ಇಂಡಿಯಾಗೆ ಸ್ವಾತಂತ್ರ‍್ಯವೇನೋ ಸಿಕ್ಕಿತು, ಆದರೆ ದಲಿತರಿಗೆ ಸ್ವಾತಂತ್ರ‍್ಯ ಸಿಕ್ಕಿಲ್ಲ. ಹೀಗಂದರೆ ಹಲವರಿಗೆ ಇದು ಸವಕಲು ನುಡಿ ಅನ್ನಿಸಬಹುದು. ಆದರೆ ಇದು ವಾಸ್ತವ. 


    ಭಾರತದ ಜನ ಇಂದಿಗೂ ತಮ್ಮ ಮನುಸ್ಮೃತಿ ಮನೋಭಾವದಿಂದ ಹೊರಬಂದೇ ಇಲ್ಲ. ಹಾಗಾದರೆ ಎಲ್ಲಾ ಭಾರತೀಯರು ಇದಕ್ಕೆ ಸೇರುತ್ತಾರಾ? ಹೌದು ದಲಿತರನ್ನು ಅದರಲ್ಲೂ ಎಡಗೈ ಸಮುದಾಯದವರನ್ನು ಹೊರತುಪಡಿಸಿ ಎಲ್ಲರೂ ಈ ದೌರ್ಜನ್ಯ ಎಸಗುವ ಮನೋಭಾವ ದಬ್ಬಾಳಿಕೆ ಮನೋಭಾವದಿಂದ ಇಂದಿಗೂ ಹೊರ ಬಂದಿಲ್ಲ. ಇದಕ್ಕೆ ತಾಜಾ ಉದಾಹರಣೆ ದೆಹಲಿಯಲ್ಲಿ ಆರ್.ಎಸ್.ಎಸ್, ಬಿಜೆಪಿಗೆ ಸೇರಿದ ಗುಂಪು ನಡೆಸುತ್ತಿರುವ ಮೀಸಲಾತಿ ವಿರೋಧಿ ಚಳುವಳಿ.


   ಆ ಯುವಜನರು ಎಸ್ಸಿ/ಎಸ್ಟಿ ಗಳಿಗೆ ಮೀಸಲಾತಿ ನೀಡಲಾಗಿದೆ ಎಂಬ ಅರಿವೇ ಇಲ್ಲದ ಮೂಢರು ಅಥವಾ ಗೊತ್ತಿದ್ದೂ ಮನು ಸ್ಮೃತಿ ಮನಸ್ಥಿತಿಯವರು. ಹಾಗಾದರೆ ದೇಶದಲ್ಲಿ ಇರುವ ಕಾನೂನು? ಇದು ಪುಸ್ತಕ ಮತ್ತು ಸಂವಿಧಾನದಲ್ಲಿ ಮಾತ್ರವೇ, ಈ ಕಾನೂನುಗಳಿಂದ ಪ್ರಯೋಜನವಾಗಿಲ್ಲವೆ ಆಗಿದೆ. ಬೆರಳೆಣಿಕೆಯಷ್ಟು ಘಟನೆಗಳಲ್ಲಿ ಮಿಕ್ಕಂತೆ ಅವು ರಾಜಿ ಮುಖಾಂತರ ಇತ್ಯರ್ಥ ಗೊಳ್ಳುತ್ತವೆ. ತಾರ್ಕಿಕ ಅಂತ್ಯ ಕಾಣುವುದು ಕೆಲವು ಮಾತ್ರ.


   ಅಂಬೇಡ್ಕರ್ ಕೇಳಿದ್ದು ಪ್ರತ್ಯೇಕ ಚುನಾವಣಾ ಮತಕ್ಷೇತ್ರಗಳನ್ನು , ಆದರೆ ಗಾಂಧೀಜಿಯ ಉಪವಾಸದಿಂದಾಗಿ ಮಾಡಿಕೊಳ್ಳಲಾದ ಪೂನಾ ಒಪ್ಪಂದದ ಪ್ರಕಾರ ರಾಜಕೀಯ, ಶಿಕ್ಷಣ ಹಾಗೂ ಉದ್ಯೋಗದಲ್ಲಿ 18% ಮೀಸಲಾತಿಯನ್ನು ಸಾಮಾಜಿಕವಾಗಿ ಹಿಂದುಳಿದ ಪಟ್ಟಿಮಾಡಲಾದ ಜಾತಿ ಹಾಗೂ ಪಂಗಡಗಳಿಗೆ ನೀಡಲಾಯಿತು. ಅಂದಿನ ಸಂಸತ್ ಅಸ್ಪೃಷ್ಯತೆಯನ್ನು ಹತ್ತು ವರ‍್ಷಗಳಲ್ಲಿ ಹೋಗಲಾಡಿಸಬಹುದು ಎನ್ನುವ ಲೆಕ್ಕದಲ್ಲಿ ಮೀಸಲಾತಿಯನ್ನು ಮೊದಲ ಹತ್ತು ವರ್ಷಗಳಿಗೆ ಸೀಮಿತಗೊಳಿಸಿ ಜಾರಿ ಮಾಡಲಾಯಿತು. ಹತ್ತು ವರ‍್ಷಗಳ ನಂತರವೂ ಅಸ್ಪೃಷ್ಯತೆ ಅಳಿದಿಲ್ಲ ಎಂದು ಕಾಲಾನುಕ್ರಮದಲ್ಲಿ ಮೀಸಲಾತಿಯನ್ನು ತಿದ್ದುಪಡಿ ಗಳ ಮೂಲಕ ಮುಂದುವರಿಸಿಕೊಂಡು ಬರಲಾಗಿದೆ. ಜಸ್ಟ್ ಲೈಕ್ ಡಿಲಿಮಿಟೇಷನ್ ಬಿಲ್. ಹಾಗಾದರೆ ಈ ಸೌಲಭ್ಯವನ್ನು ಸರ್ಕಾರ ಇಚ್ಚಿಸಿದರೆ ಮುಂದುವರಿಸಬಹುದು, ಇಲ್ಲವಾದಲ್ಲಿ ಡಿಲಿಮಿಟೇಷನ್ ಬಿಲ್ ಥರ ಅನೂರ್ಜಿತಗೊಳಿಸಿ ಹೊಸದನ್ನು ಜಾರಿ ಮಾಡಬಹುದು.


    ಹಾಗಾದರೆ ಸಾಮಾಜಿಕ ನ್ಯಾಯ ದೊರಕಿಲ್ಲದ ಸಮುದಾಯಕ್ಕೆ ಮಾತ್ರ ಅಂತ ನೀಡಿದ ಮೀಸಲಾತಿ ಸೌಲಭ್ಯವನ್ನು ಡೈಲೂಟ್ ಮಾಡಿದ್ದು ನಮ್ಮ ರಾಜಕೀಯ ಪಕ್ಷಗಳು. ಹಿಂದುಳಿದ ವರ್ಗ ಒಬಿಸಿಗಳು ಕೂಡ ಮುಂದುವರಿದ ಜಾತಿಯವರೊಂದಿಗೆ ಕಾಂಪಿಟ್ ಮಾಡಲಾಗುವುದಿಲ್ಲ ಎಂದು ಅವರಿಗೂ ಮೀಸಲಾತಿ ನೀಡಲಾಯಿತು. ಅದು ಮುಂದುವರಿದು ಕರ್ನಾಟಕದಲ್ಲಿ ಪ್ರವರ್ಗ ಎ ಬಿ ಗಳಲ್ಲಿ ಎಕನಾಮಿಕಲಿ ವೀಕರ್ ಬ್ರಾಹ್ಮಣ, ಲಿಂಗಾಯಿತ ಗೌಡರು ಎಲ್ಲರೂ ಮೀಸಲಾತಿ ಪಡೆದರು. 


   ಇದರಿಂದ ಎಸ್ಸಿ ಎಸ್ಟಿ ಗಳಿಗೆ ಮೀಸಲಾತಿ ನೀಡಿದ್ದು ಸಾಮಾಜಿಕವಾಗಿ ದೌರ್ಜನ್ಯಕ್ಕೆ ಒಳಗಾದ, ಸಾಮಾಜಿಕವಾಗಿ ನಿರಂತರ ಶೋಷಣೆಗೊಳಗಾದ ಅಸ್ಪೃಶ್ಯತೆಯ ಶೋಷಣೆಗೆ ಒಳಗಾಗುವ ಜನರು ವಿದ್ಯೆಯಿಂದ ವಂಚಿತ ಜನರು ಮುಂದುವರಿದ ಜಾತಿ ಮುಂದುವರಿದ ಆರ್ಥಿಕ ಜನರೊಂದಿಗೆ ವಿದ್ಯೆ ಮತ್ತು ಕೆಲಸ ಪಡೆಯಲು ಸಾಧ್ಯವಿಲ್ಲದ ಕಾರಣ ನೀಡಿದ ಸೌಲಭ್ಯವನ್ನು ಡೈಲೂಟ್ ಮಾಡಿ ಎಕನಾಮಿಕಲಿ ವೀಕರ್ ಸೆಕ್ಷನ್ ಅಂತ ಒಂದು ವರ್ಗ ಸೃಷ್ಟಿಸಿ ಬಡವರಿಗೂ ಮೀಸಲಾತಿ ಬೇಕು ಅಂತ ನೀಡಲಾಗಿದೆ. ಈಗ ಇಡಬ್ಲ್ಯುಎಸ್‌ಗೆ ಶೇ.10 ಮೀಸಲಾತಿಯಲ್ಲಿ ಮೀಸಲಾತಿ ಪಡೆಯದೆ ಇದ್ದ ಮುಂದುವರಿದ ಜಾತಿ ಸಮುದಾಯಗಳು ಕೂಡ ಇದರ ಲಾಭ ಪಡೆಯಲಾಯಿತು. ಈಗ ಎಲ್ಲರ ಜಾತಿ/ವರ್ಗಗಳನ್ನು ಒಂದೇ ಮಾಡಿ ಆರ್ಥಿಕತೆಯನ್ನು ಮಾತ್ರ ಮಾನದಂಡವಾಗಿ ಬಳಸುವಂತೆ ಒತ್ತಾಯಿಸುವ ಈ ಹೋರಾಟ ಮುನ್ನೆಲೆಗೆ ಬಂದಿದೆ. 


   ಹಾಗಾದರೆ ಎಲ್ಲರೂ ಒಂದೇ ಅನ್ನುವುದಾದರೆ, ಈ ಜಾತಿ ದೌರ್ಜನ್ಯ ಏಕೆ? ಮರ್ಯಾದಾ ಹತ್ಯೆಗಳೇಕೆ? ಲಿಂಗಾಯಿತ, ಗೌಡ, ಇತರೆ ಮುಂದುವರಿದ ಜಾತಿ ಜಾತಿಗಳ ಮಧ್ಯೆ ಮದುವೆಗಳಾದಾಗ ನಡೆಯದ ಮರ್ಯಾದಾ ಹತ್ಯೆಗಳು ಬರೀ ದಲಿತ ಹುಡುಗಿ ಅಥವಾ ಹುಡುಗ ನನ್ನ ಮದುವೆಯಾದಾಗ ಮಾತ್ರ ಹತ್ಯೆ ಮಾಡಲಾಗುತ್ತದೆ. ಅಂದರೆ ಈ ಮೀಸಲಾತಿ ಬೇಡ ಅನ್ನುವವರು ಎಲ್ಲರೂ ಒಂದೇ ಎನ್ನುವವರು ಇನ್ನು ಮುಂದೆ ಮರ್ಯಾದಾ ಹತ್ಯೆಗಳನ್ನು ಮಾಡುವಂತಿಲ್ಲ. ಅಥವಾ ಕಸ ಗುಡಿಸುವ ಟಾಲ್ಯೆಟ್ ಶುಚಿಗೊಳಿಸುವ ಕೆಲಸ ದಲಿತರದ್ದು ಮಾತ್ರವೇ ಎಂದು ಶೇ.100 ಮೀಸಲಾತಿ ಇರುವ ಹುದ್ದೆಗಳನ್ನು ಮೇಲ್ಜಾತಿ ಯವರು ಕೂಡ ಮಾಡಬೇಕಾಗುತ್ತದೆ.


ಅವರಿಂದ ಇದು ಸಾಧ್ಯವೇ ? ಖಂಡಿತಾ ಇಲ್ಲ.


    ಕಾರಣ : ಮನುಸೃತಿಯ ಕಾಲದಿಂದಲೂ ಊರನ್ನ ಶುಚಿಗೊಳಿಸುವ ಕೆಲಸ ಶೂದ್ರನದ್ದು ಅಂತ ಫಿಕ್ಸ್ ಆಗಿದೆ. ಅದೇ ರೀತಿ ಕೊಳೆ ಮಾಡುವ /ಕಸ ಮಾಡುವುದು ನಮ್ಮ ಜನ್ಮ ಸಿದ್ಧ ಹಕ್ಕು ಅಂತ ಭಾವಿಸಿ ಅದನ್ನು ಶುಚಿಗೊಳಿಸುವ ಕಾರ್ಯ ಎಡಗೈ ಸಮುದಾಯದ್ದು ಅಂತ ಭಾವಿಸಿ ಅಂದಿನಿಂದ ಇಂದಿನವರೆಗೂ ಆ ಮನಸ್ಥಿತಿಯಿಂದ ಈ ಜನ ಹೊರಬಂದಿಲ್ಲ.


     ಅದಕ್ಕೇ ನಮ್ಮ ದೇಶದ ಈ ಜನ ವಿದೇಶದಲ್ಲಿ ನೆಲೆಸಿದ್ದರೂ ಕೂಡ ತಮ್ಮ ಪರಿಸರವನ್ನು ಕೊಳಕು ಮಾಡದಿರುವುದೇ ಇಲ್ಲ. ಹಾಗೇ ಪರಿಸರ ನಮ್ಮದು ಅದನ್ನು ಕೊಳಕು ಮಾಡಬಾರದು ಅನ್ನುವ ವಿವೇಚನೆ ವಿವೇಕ ಈ ಜನರಲ್ಲಿ ಇಂದಿಗೂ ಮೂಡಿಲ್ಲ, ಹಲವು ಬಾರಿ ಅಲ್ಲಿನ ಸರ್ಕಾರಗಳು ಈ ಭಾರತೀಯರು ತಮ್ಮ ಮನೆ ಕಸ ತೆಗೆದುಕೊಂಡು ಹೋಗಿ ಪಾರ್ಕಿನ ಮೂಲೆಯಲ್ಲಿ, ನದಿಗಳಲ್ಲಿ , ಕಾಡಿನಲ್ಲಿ, ಸುರಿಯುವಾಗ ಸಿಕ್ಕಿ ಹಾಕಿಕೊಂಡು ದಂಡ ಹಾಕಿಸಿಕೊಂಡಿದ್ದಾರೆ. ಹಾಗೇ ಇಂಡಿಯನ್ಸ್ ಅಂದರೆ ಸಿವಿಕ್ ಸೆನ್ಸ್ ಇಲ್ಲದ ಡಿಸಿಪ್ಲಿನ್ ಇಲ್ಲದ ಜನ ಅನ್ನುವ ಭಾವನೆ ಮೂಡಿಸಿ ಸಾಮಾಜಿಕ ಜಾಲತಾಣಗಳಿಗೆ ಆಹಾರವಾಗುತ್ತಿದ್ದಾರೆ ಇದೇ ಕಾರಣದಿಂದಲೇ ಭಾರತೀಯರ ಮೇಲೆ ಅಸಹನೆ ಜಾಸ್ತಿ ಆಗುತ್ತಿದೆ. ಒಂದುಈ ಸಿವಿಕ್ ಸೆನ್ಸ್ ಇಲ್ಲದು ಕಾರಣ ಆದರೆ ಮತ್ತೊಂದು ನಮ್ಮ ಹಿಂದೂಯಿಸಂ ಗ್ರೇಟ್ ಅಂತ ಅಲ್ಲಿ ಕೂಡ ದೇವರ ಉತ್ಸವ, ಹಬ್ಬಗಳ ನೆಪದಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಮೆರವಣಿಗೆ ಮಾಡುವುದು, ಬೀದಿಯಲ್ಲಿಯೇ ಎಲ್ಲೆಂದರಲ್ಲಿ ಡ್ಯಾನ್ಸ್ ಮಾಡುವುದು, ರಸ್ತೆಗಳಲ್ಲೇ ಹಪ್ಪಳ ಒಣಗಿಸುವುದು, ಅಕ್ಕ ಪಕ್ಕದವರಿಗೆ ತೊಂದರೆ ಕೊಡುವುದು ಅವರೊಂದಿಗೆ ಬೆರೆಯದೇ ಇರುವುದು ಇವೆಲ್ಲ ಕಾರಣ ಇದೆ. ಇಷ್ಟು ವರ್ಷದ ಇಲ್ಲದ ಈ ಜನರು ಹಿಂದೂಯಿಸಂ ಗ್ರೇಟ್ ಅನ್ನುವುದು ಇತ್ತೀಚಿನ ದಿನಗಳಲ್ಲಿ ಜಾಸ್ತಿಯಾಗಿದೆ. ಈ ನಡವಳಿಕೆ ಉತ್ತರ ಭಾರತದಿಂದ ವಲಸೆ ಹೋದವರಿಂದಲೇ ಜಾಸ್ತಿ. ಅದರ ಬದಲಿಗೆ ಹಬ್ಬ ಹರಿದಿನಗಳನ್ನ ಬೀದಿಯಲ್ಲಿ ಆಚರಿಸದೆ ಅದಕ್ಕೆಂದೇ ಇರುವ ಹಾಲ್ ಗಳಲ್ಲಿ ದೇವಸ್ಥಾನಗಳಲ್ಲಿ ನಡೆಸಿ ಆ ಸ್ಥಳಗಳನ್ನ ಪೂಜೆ ನಂತರ ಕಸ ಎತ್ತಿಹಾಕಿ ಶುಚಿಗೊಳಿಸಿದರೆ ಯಾರಿಗೂ ಬೇಸರವಿಲ್ಲ. ಆದರೆ ಕೊಳಕು ಹರಡಿ ಇಂಡಿಯಾದ ಥರ ಅಲ್ಲಿನ ಜನ ಅದನ್ನ ಕ್ಲೀನ್ ಮಾಡುತ್ತಾರೆ ಅಂತ ಭಾವಿಸುವುದು ಮೂರ್ಖತನ ಕಾರಣ ವಿದೇಶಗಳಲ್ಲಿ ಕ್ಲೀನ್ ಮಾಡಲೆಂದೇ ಯಾವ ಜಾತಿಯನ್ನು ನಿಗದಿಗೊಳಿಸಿಲ್ಲ, ಅದೇ ರೀತಿ ಕೊಳಕು ಹರಡುವುದು ನಮ್ಮ ಜನ್ಮ ಸಿದ್ದ ಹಕ್ಕು ಎಂದು ಅಲ್ಲಿ ಯಾರೂ ಭಾವಿಸಿಲ್ಲ. ಅದನ್ನು ಸಿವಿಕ್ ಸೆನ್ಸ್ ಅಂತ ಭಾವಿಸಲಾಗಿದೆ. ಅದು ನಮ್ಮ ಭಾರತೀಯರಲ್ಲಿ ಇಲ್ಲ.


    ನೀವೇ ಯೋಚಿಸಿ, ಯಾತ್ರೆ ಹೋಗುವ ಜನ ದಾರಿ ಇಕ್ಕೆಲಗಳಲ್ಲಿ ಬಿಸ್ಟೆಟ್ ಕವರ್, ಪ್ಳಾಟ್ಸಿಕ್ ಕವರ್, ಖಾಲಿ ನೀರಿನ ಬಾಟಲ್, ಉಳಿದ ಊಟ ತಿಂಡಿ ಎಲ್ಲ ಅಲ್ಲೇ ಬಿಸಾಡಿ ಮುಂದೆ ಸಾಗುತ್ತಾರೆ ಹಾಗಾದರೆ ಅದನ್ನು ಯಾರು ಕ್ಲೀನ್ ಮಾಡಬೇಕು,? ದಲಿತರು! ಹಾಗಾದರೆ ಒಂದು ಸಿಟಿಯ ಒಂದು ರಸ್ತೆ, ಒಂದು ಬಸ್ ನಿಲ್ದಾಣ, ಟ್ರೈನ್ ಸ್ಟೇಷನ್, ಮೆಟ್ರೋ ಸ್ಟೇಷನ್, ಪರ‍್ಕು , ಕಾಡು ಹೀಗೆ ಎಲ್ಲ ಕಡೆ ನಮ್ಮ ದಲಿತರೇ ಶುಚಿಗೊಳಿಸಬೇಕೆ?


    ಇದನ್ನು ಬೇರೆ ಬೇರೆ ಮಾಡಿ ಮನೆಮನೆಗೆ ಬರುವ ಕಸದ ಗಾಡಿಗೆ ನೀಡಬಾರದೇಕೆ? ನೀವು ನಮ್ಮ ಜವಾಬ್ದಾರಿ ಅಲ್ಲ ಅಂತ ಅಲ್ಲೇ ಚರಂಡಿಗೆ ಸುರಿವ ಕಸ, ಮನೆ ಮುಂದೆ ಬಿಸಾಡುವ ಗುಡಿಸುವ ಕಸ ಕೊನೆಗೆ ರಾಜ ಕಾಲುವೆ ಮುಖಾಂತರ ನದಿ ಸಮುದ್ರ ಸೇರುತ್ತೆ. ಇದು ಪರಿಸರ ಕಾಳಜಿಯೆ?. ಚರಂಡಿಗಳು ಮಳೆಗಾಲದಲ್ಲಿ ಕಟ್ಟಿಕೊಂಡು ಓವರ್ ಫ್ಲೋ ಆಗಲು ಇಂತಹ ಟ್ರಾಷ್ ಕಾರಣ. ಈ ನಮ್ಮ ಜನ ಏನೆಲ್ಲಾ ವಸ್ತುಗಳನ್ನು ಈ ಚರಂಡಿಗೆ ಎಸೆಯುತ್ತಾರೆ ಅಂದರೆ ಊಹಿಸಲೂ ಸಾಧ್ಯವಿಲ್ಲ. ಅವರಿಗೆ ಬೇಡದ ವಸ್ತು ಅವರ ಮನೆಯಲ್ಲಿ ಇರಬಾರದು ಅಷ್ಟೆ ಅದು ಪಕ್ಕದ ಖಾಲಿ ಸೈಟ್, ಮನೆ ಮುಂದಿನ ಚರಂಡಿ, ಪೊದೆ, ರಾಜ ಕಾಲುವೆ ಇಲ್ಲೆಲ್ಲ ಬಿಸಾಡಿ ತಮ್ಮ ಮನೆ ಸುಂದರವಾಗಿಟ್ಟುಕೊಳ್ಳುತ್ತಾರೆ. ಹಾಗಾದರೆ ನಿಮ್ಮ ಮನೆ ಚೆನ್ನಾಗಿ ಇದ್ದರೆ ಸಾಕೆ? ನಿಮ್ಮ ನೆರೆಹೊರೆ, ನಿಮ್ಮ ರಸ್ತೆ, ನಿಮ್ಮ ಏರಿಯಾದ ಪಾರ್ಕ, ಕೆರೆ, ನದಿಗಳು ನಿಮಗೆ ಸೇರಿದ್ದು ಅಲ್ಲವಾ ಅದನ್ನು ಕೂಡ ಮನೆಯಂತೆಯೇ ಶುಚಿಯಾಗಿಟ್ಟುಕೊಳ್ಳಬಾಕಾದ್ದು ದಲಿತರ ಕೆಲಸ ಮಾತ್ರವಲ್ಲ ಅದು ನಿಮ್ಮೆಲ್ಲರ ಕೆಲಸ ಅಂತ ನಿಮಗೆ ಅರ್ಥವಾಗಲು ಎಷ್ಟು ಸಹಸ್ರ ವರ್ಷಗಳು ಬೇಕು. ಈ ಶುಚಿಗೊಳಿಸುವ ಕೆಲಸ ಮಾಡುವವರನ್ನ ಮುಟ್ಟಿಸಿಕೊಳ್ಳದೆ ಮನೆ ಒಳಗೆ ಸೇರಿಸದೆ ಎಷ್ಟು ವರ್ಷಗಳು ಬದುಕುತ್ತೀರಿ. ಅವರ ಮಕ್ಕಳನ್ನ ಮದುವೆಯಾದರೆ ಮರ್ಯಾದಾ ಹತ್ಯೆ ಏಕೆ ಮಾಡುತ್ತೀರಿ. ಆರ್ಥಿಕವಾಗಿ ಸಬಲರಾದ ದಲಿತರನ್ನ ಕೂಡ ನಿಮಗೆ ಸಮಾನಾಂತರವಾಗಿ ಓದಿರುವ ಮನೆ ಕಟ್ಟಿಸಿರುವ ಬುದ್ದೀವಂತ ದಲಿತರನ್ನ ಕೂಡ ತಮ್ಮ ಮನೆ ಒಳಗೆ ಸೇರಿಸುವುದಿಲ್ಲ ಏಕೆ? ದೇವಸ್ಥಾನಕ್ಕೆ ಸೇರಿಸುವುದಿಲ್ಲ ಏಕೆ? ಮನೆ ಬಾಡಿಗೆಗೆ ಕೊಡುವಾಗ ಜಾತಿ ಯಾಕೆ ಕೇಳುತ್ತೀರಿ? ಖರ್ಗೆ ಭಾಷಣ ಮಾಡಿದ ವೇದಿಕೆ ಶುಚಿಗೊಳಿಸುವುದಾದರೆ, ಅಂದರೆ ಇದೆಲ್ಲಾ ಸಮಾಜದಲ್ಲಿ ನಿಮಗೆ ಬೇಕು ಅನ್ನುವುದಾದರೆ ಮೀಸಲಾತಿ ಕೂಡ ಬೇಕಲ್ಲವೇ? 


   ಈ ಮನುವಾದಿಗಳು/ ಆರ್‌ಎಸ್‌ಎಸ್-ಬಿಜೆಪಿಯವರಿಗೆ ಬೇಜಾರು ಏನೆಂದರೆ ಭಾರತಕ್ಕ ಸ್ವಾತಂತ್ರ‍್ಯ ಬಂದಾಗಲೇ ಇವರ ಕೈಗೆ ಆಡಳಿತ ಸಿಕ್ಕಿದ್ದರೆ, ಸಂವಿಧಾನದ ಬದಲಿಗೆ ಮನುಸೃತಿಯನ್ನ, ದಲಿತರಿಗೆ ʼವಿದ್ಯೆ -ಮೀಸಲಾತಿ ಇಲ್ಲದಂತೆʼ ತಮಗಿಷ್ಟ ಬಂದ ಹಾಗೇ ಬರೀ ಮೇಲ್ಜಾತಿ ಜನರಿಗೆ ಎಲ್ಲಾ ಸವಲತ್ತು ಸಿಗುವಂತೆ ಮಾಡಬಹುದಿತ್ತಲ್ಲ ಅನ್ನುವ ಕೊರಗು ಇರಬಹುದು. ಆವಾಗ ಇಷ್ಟು ಬ್ರೈನ್ ಮಾಡುವ ಸಾಹಸ ಇರಲಿಲ್ಲ (ವಾಟ್ಸಪ್ ಯೂನಿವರ್ಸಿಟಿ ಮುಖಾಂತರ).


    ಅಷ್ಟಕ್ಕೂ ಸಾವಿರಾರು ವರ್ಷಗಳಿಂದ ಮನುಸೃತಿಯ ಕಾಲದಿಂದ ದಲಿತರದ್ದು ಊರನ್ನು ಸ್ವಚ್ಛಗೊಳಿಸುವ ಕೆಲಸ ಸತ್ತ ಪ್ರಾಣಿಗಳನ್ನು ಎತ್ತಿಹಾಕುವ ಕೆಲಸ, ಒಟ್ಟಿನಲ್ಲಿ ಎಲ್ಲಾ ಮೇಲ್ಜಾತಿಯವರು ಕೀಳು ಅಂದುಕೊಂಡ , ತಮಗೆ ಮಾಡಲು ಅಸಹ್ಯ ಎನಿಸುವ ಕೆಲಸಗಳನ್ನು ಇವರು ಮಾಡಬೇಕು, ಇವರಿಗೆ ಎಲ್ಲಾ ಸೌಲಭ್ಯಗಳನ್ನು ವಂಚಿಸಲಾಗಿದೆ. ಆ ಮನಸ್ಥಿತಿಯಿಂದ ಭಾರತ ಇಂದಿಗೂ ಹೊರಬಂದಿಲ್ಲ.


    ಎಲ್ಲಾ ದೇಶಗಳು ತಮ್ಮ ಪರಿಸರ ತಮ್ಮ ನೆರೆಹೊರೆ ತಮ್ಮ ಪ್ರಕೃತಿಗಳನ್ನು ಸ್ವಚ್ಛವಾಗಿಟ್ಟುಕೊಂಡಿರುವಾಗ ನಮ್ಮ ದೇಶದ ಜನ ತಮ್ಮ ಮನೆ ಮುಂದಿನ ರಸ್ತೆ, ಪಾರ್ಕ, ಮೆಟ್ರೋ, ಆಸ್ಪತ್ರೆ, ಕಛೇರಿಗಳು ಬಸ್, ಬಸ್ ನಿಲ್ದಾಣ , ನದಿಗಳು, ಸಮುದ್ರಗಳು, ನೆರೆಹೊರೆ, ಪ್ರಕೃತಿ ಹೀಗೆ ಪಟ್ಟಿ ಬೆಳೆಯುವಷ್ಟು ಜಾಗಗಳನ್ನು ಸ್ವಚ್ಛ ವಾಗಿಟ್ಟುಕೊಳ್ಳುವ ಮನಸ್ಥಿತಿ ಇಲ್ಲದೆ, ಬೇಸಿಕ್ ಸಿವಿಕ್ ಸೆನ್ಸ್ ಇಲ್ಲದೆ, ಇನ್ನಷ್ಟು ಹಿಂದಿನ ದಿನಗಳತ್ತ ಸಾಗುತ್ತಿದೆ.


    ಎಲ್ಲೆಂದರಲ್ಲಿ ಕಸ ಬಿಸಾಡುವುದು, ತಿಂದಲ್ಲೆ ಬಿಸ್ಕೆಟ್ ಕವರ್, ಟೆಟ್ರಾ ಪ್ಯಾಕ್, ಪಾಸ್ರೆಲ್ ಪಾಕೆಟ್ ಗಳನ್ನು ಬಿಸಾಡುವುದು, ಬಸ್ ನಿಂದ ಇಳಿದ ತಕ್ಷಣ ಟಿಕೆಟ್ ಬಿಸಾಡುವುದು, ಆ ಟಿಕೆಟ್ ನ್ನ ಮೆಟ್ರೋ ಎಸ್ಕಲೇಟರ ಮೇಲೆಯೇ ಎಸೆಯುವುದು, ಮನೆ ಮುಂದಿನ ಕಸವನ್ನ ಎತ್ತಿ ಕಸದ ಬುಟ್ಟಿಗೆ ಹಾಕಿ ಹಸಿ ಕಸ ಒಣ ಕಸ ಬಂದಾಗ ನೀಡದೆ ಮುಂದಿನ ಚರಂಡಿ ಒಳಕ್ಕೆ ತಳ್ಳುವುದು, ಅಂಗಡಿಯವರು ಕೂಡ ಕಸ ಎತ್ತಿ ಕಸದ ಬುಟ್ಟಿಗೆ ಹಾಕದೆ, ಅಂಗಡಿ ಮುಂದಿನ ಚರಂಡಿಗೆ ತಳ್ಳುವುದು. ಇದರಿಂದ ಮಳೆ ಬಂದಾಗ ಆ ಕಸ ಕಟ್ಟಿಕೊಂಡು ಚರಂಡಿ ನೀರು ರಸ್ತೆಗೆ ನುಗ್ಗಿದರೆ ಸರ್ಕಾರವನ್ನು ಬೈಯುವುದು. ಸರ್ಕಾರದ ಜೊತೆಗೆ ತಮ್ಮ ಕರ್ತವ್ಯ ವನ್ನು ಸರಿಯಾಗಿ ನಿಭಾಯಿಸದೇ ಇರುವುದು .


    ನಮ್ಮ ಜನಕ್ಕೆ ಇಂದಿಗೂ ತಾವು ತಮ್ಮ ಮನೆ ಒಳಗಿನ ಆವರಣ ಮಾತ್ರ ಸ್ವಚ್ಛ ಮಾಡಿಕೊಳ್ಳುವುದಷ್ಟೇ ನಮ್ಮ ಕೆಲಸ, ಹೊರಗಡೆಯದ್ದು ಕ್ಲೀನ್ ಮಾಡುವ ಕೆಲಸ ದಲಿತರದ್ದು ಎನ್ನುವ ಮನೋಭಾವನೆ ಹೋಗಬೇಕು. ನಮ್ಮ ನೆರೆಹೊರೆ, ಮನೆ ಹೊರಗಡೆ, ಪಾರ್ಕ ನದಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಸಿವಿಕ್ ಸೆನ್ಸ್ , ಡಿಸಿಪ್ಲಿನ್ ಅನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕಿದೆ. ಇದು ಹೆಚ್ಚಾಗಿ ನಡೆಯುವುದು ಓದಿದ ನಾಗರಿಕ ಜನರಿಂದಲೇ ಬಸ್ ನಿಂದ ಇಳಿದ ಮಹಿಳೆಯರು ತಮ್ಮ ಬಸ್ ಟಿಕೆಟ್ ಗಳನ್ನು ಅಲ್ಲೇ ದಾರಿ ಪಕ್ಕ ಮರದ ಪಕ್ಕ ಕಡೆಗೆ ಮೆಟ್ರೋ ಎಸ್ಕಲೇಟರ ಮೇಲೆ ಬಿಸಾಡಿ ಮುಂದೆ ಹೋಗುತ್ತಾರೆ. ಅಂದರೆ ಅವರ ಮನಸ್ಥಿತಿ ಏನು? ಅದನ್ನು ಕ್ಲೀನ್ ಮಾಡಲು ಸ್ವೀಪರ್‌ಗಳಿದ್ದಾರೆ ಅಂತಲೇ? ಆ ಟಿಕೆಟ್‌ನ ಕಸದ ಬುಟ್ಟಿಯಲ್ಲಿ ಹಾಕುವುದು ತಮ್ಮ ಕೆಲಸವಲ್ಲ ಅಂತಲೇ? ಅಥವಾ ಅದನ್ನು ಬ್ಯಾಗ್ ನಲ್ಲಿ ಇಟ್ಟುಕೊಂಡು ಹೋಗಿ ಮನೆಯ ಕಸದ ಬುಟ್ಟಿಯಲ್ಲಿ ಹಾಕಬಹುದಲ್ಲವಾ ಅಂದರೆ ಅದ್ಯಾವುದೂ ತಮಗೆ ಸೇರದ ಕೆಲಸ ತಾವು ಇರುವುದು ಲಿಟ್ಟರ್ ಮಾಡಲೆಂದೇ? ಹಾಗಾದರೆ ಇನ್ನು ಎಷ್ಟು ವರ್ಷ ಇದೇ ಮನೋಭಾವದಿಂದ ಬದುಕುತ್ತೀರಿ. ನೀವು ಎಸೆದ ಕಸಗಳು ಗಾಳಿಗೆ ಎಲ್ಲೆಲ್ಲೋ ಹಾರಿ ಹೋಗುತ್ತದೆ ಅದನ್ನೆಲ್ಲಾ ಕಸ ಗುಡಿಸುವ ಜಾಡಮಾಲಿಗಳು ಹುಡುಕಿಕೊಂಡು ಹೋಗಿ ಎತ್ತಿ ತರಲು ಸಾಧ್ಯವೇ? ಮಳೆ ನೀರಿನಿಂದ ಇಂತಹ ವಸ್ತುಗಳು ಕಡೆಗೆ ಸೇರುವುದು ಚರಂಡಿ, ನದಿ ಸಮದ್ರ. ಇದನ್ನು ಇಲ್ಲಿಗೇ ತಡಯದಿದ್ದರೆ ಪ್ರಪಂಚದ ಎದುರಿಗೆ ಭಾರತದವರು ಈಗಾಗಲೇ ಬ್ರಾಂಡ್ ಆಗಿರುವಂತೆ ಸಿವಿಕ್ ಸೆನ್ಸ್ ಡಿಸಿಪ್ಲಿನ್ ಇಲ್ಲದ ಜನ ಎನ್ನುವುದು ಇನ್ನಷ್ಟು ತೀವ್ರವಾಗುತ್ತದೆ. 


    ಈಗಾಗಲೇ ಕೆಲವು ದೇಶದ ಜನ ಗೂಗಲ್ ನಲ್ಲಿ ಒಂದು ಗೇಮ್ ಬಿಟ್ಟಿದ್ದಾರೆ. ʼಪಿಂಡಿಯಾ ಛಾಲೆಂಜ್ʼ ( https://x.com/Basedgoy...) ) ಎಂದು. ಈ ಗೇಮ್ ನಲ್ಲಿ ಗೂಗಲ್ ಸ್ಟ್ರೀಟ್ ವೀವ್ ನಲ್ಲಿ ಇಂಡಿಯಾ ಮೇಲೆ ಪಿನ್ ಮಾಡುವುದು. ಇಂಡಿಯಾ ಮ್ಯಾಪ್ ಮೇಲೆ ಲಿಟ್ಟರ್, ಕಸ, ಡೆಬ್ರಿಸ್ ಇಲ್ಲದ ಜಾಗ ಹುಡುಕುವ ಗೇಮ್ ಇದು. ಇತರ ದೇಶಗಳನ್ನು ಬಿಡಿ, ಇಂಡಿಯಾದಲ್ಲಿ ಅಂತಹ ಒಂದೇ ಒಂದು ರಸ್ತೆ, ಜಾಗ ಸಿಕ್ಕಿಲ್ಲ ಗೊತ್ತಾ?!ಯಾಕಂದ್ರೆ ಇದು ಇಂಡಿಯಾ ಗೊತ್ತಾ!! 
-------------------------------