ತುಪ್ಪದಕೋಣ ಗ್ರಾಮಸ್ಥರ ಮೇಲೆ ಶಿರಾ ಪೊಲೀಸರ ದೌರ್ಜನ್ಯ 3 ತಿಂಗಳಾದರೂ ಮುಗಿಯದ ಪಿಐ ಎಸ್ .ಮಂಜೇಗೌಡರ ಸೇಡಿನ ಕತೆಯ ಅನಾವರಣ!
ಬ್ರಿಟಿಷ್ ಪೊಲೀಸರು ಹಾಗೂ ಸೈನಿಕರು ಭಾರತೀಯ ಅಧೀನ ಸಿಬ್ಭಂದಿಯನ್ನು ಬಳಸಿ ಭಾರತೀಯರ ಮೇಲೇ ಹಿಂಸಾಚಾರ ಮಾಡುತ್ತಿದ್ದರು ಎಂಬುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಬ್ರಿಟಿಷರು ಮರ್ಯಾದೆಯಾಗಿ ಈ ನೆಲವನ್ನು ಬಿಟ್ಟು ಹೋಗಿ ಮುಕ್ಕಾಲು ಶತಮಾನ ಕಳೆದಿದೆ. ಇಲ್ಲೇ ಇದೇ ನೆಲದಲ್ಲಿ ಹುಟ್ಟಿ ಬೆಳೆದವರೇ ಹೊಟ್ಟೆಪಾಡಿಗಾಗಿ ಪೊಲೀಸ್ ಎಂಬ ಸರ್ಕಾರಿ ನೌಕರಿ ಪಡೆದು ಹೀಗೆ ತಮ್ಮದೇ ಅಣ್ಣ, ತಮ್ಮಂದಿರು, ಅಕ್ಕಂದಿರನ್ನು ಇಷ್ಟು ಕ್ರೂರ ಹಿಂಸೆಗೆ ಒಳಪಡಿಸುತ್ತಾರೆ ಎಂದರೆ ನಾವು ನಾಗರಿಕರಂತೆ ಬಾಳಲು ಇನ್ನೂ ಎಷ್ಟು ಶತಮಾನ ಕಳೆಯಬೇಕೋ ಗೊತ್ತಿಲ್ಲ.

ʼಬೆವರ ಹನಿʼ ವಿಶೇಷ
ಕುಚ್ಚಂಗಿ ಪ್ರಸನ್ನ
ತುಮಕೂರು: ಯೂನಿಫಾರಂ ಧರಿಸದೇ, ಪೊಲೀಸ್ ಜೀಪ್ ಅಥವಾ ವ್ಯಾನಿನಲ್ಲೂ ಬರದೇ, ಸಾಮಾನ್ಯರಂತೆ ಬಂದು , ದಾರಿಗಡ್ಡ ನಿಂತವರು ಬಾಯಿಗೆ ಬಂದಂತೆ ಬೈದರೆಂದು ವಾಗ್ವಾದಕ್ಕಿಳಿದ ಘಟನೆಯೇ ನೆಪವಾಗಿ ಶಿರಾ ತಾಲೂಕಿನ ತುಪ್ಪದಕೋಣ, ಸಾಕ್ಷಿಹಳ್ಳಿ ಗ್ರಾಮಸ್ಥರು ಶಿರಾ ಟೌನ್ ಪಿಐ ಮಂಜೇಗೌಡ ಹಾಗೂ ಸಿಬ್ಬಂದಿಯ ದೈಹಿಕ, ಮಾನಸಿಕ ದೌರ್ಜನ್ಯದ ಗುರಿಯಾಗಿದ್ದಾರೆ.
ಶಿರಾ ಪೊಲೀಸರು ಹಾಕಿರುವ ಸುಳ್ಳು ಕೇಸುಗಳನ್ನು ಎದುರಿಸುತ್ತ , ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ದೊರಕುವವರೆಗೆ ಒಂದೂವರೆ ತಿಂಗಳು ಊರು ತೊರೆದು, ನ್ಯಾಯಾಲಯದ ಜಾಮೀನು ಷರತ್ತಿನಂತೆ ಠಾಣೆಯಲ್ಲಿ ಹಾಜರಿ ಹಾಕಲು ಹೋದ ತುಪ್ಪದ ಕೋಣ ಗ್ರಾಮದ 12 ಮಂದಿಯ ಮೇಲೆ ಶಿರಾ ಟೌನ್ ಪೊಲೀಸ್ ಇನ್ಸ್ಪೆಕ್ಟರ್ ಮಂಜೇಗೌಡ ಮತ್ತು ಆತನ ಸಹಚರರು ಅತ್ಯಂತ ಹೊಲಸು ಹಾಗೂ ಅಶ್ಲೀಲ ಶಬ್ದಗಳಿಂದ ನಿಂದಿಸಿ, ಬೂಟುಗಾಲಿನಿಂದ ಮರ್ಮಾಂಗವೂ ಸೇರಿ ದೇಹದ ಸಿಕ್ಕ ಸಿಕ್ಕ ಭಾಗಗಳಿಗೆಲ್ಲ ಒದ್ದು, ಲಾಠಿಗಳಿಂದ ಹೊಡೆದು ಕಳಿಸಿದ ಹೇಯ ಕೃತ್ಯ ಇದೇ ಜುಲೈ 10ರಂದು ನಡೆದಿದೆ.
ಶಿರಾ ಪಿಐ ಮಂಜೇಗೌಡ ಮತ್ತು ಇತರ ಪೊಲೀಸರು ತುಪ್ಪದ ಕೋಣ ಊರಿನ ಜನರನ್ನು ಬಾಯಿಗೆ ಬಂದಂತೆ ಬೈಯುತ್ತ ಹೊಡೆಯುವ ಸಂದರ್ಭದ ಆಡಿಯೋ ವೈರಲ್ ಆಗಿದೆ. ಶಿರಾ ಡಿವೈಎಸ್ಪಿ ಹಾಗೂ ತುಮಕೂರು ಎಸ್ಪಿ ಅವರ ಗಮನಕ್ಕೆ ಇಡೀ ಪ್ರಕರಣದ ಮಾಹಿತಿ ಇದ್ದರೂ ಅಮಾನವೀಯ ಮೃಗೀಯ ವರ್ತನೆ ತೋರಿದ ಪಿಐ ಮಂಜೇಗೌಡ ಮತ್ತು ಅವರ ಸಿಬ್ಬಂದಿ ವಿರುದ್ದ ಯಾವುದೇ ಶಿಸ್ತು ಕ್ರಮ ಕೈಗೊಂಡಿರುವ ಕುರಿತ ಮಾಹಿತಿ ಇಲ್ಲ. ಮೇಲಧಿಕಾರಿಗಳ ಗಮನ ಸೆಳೆದು ದೂರು ನೀಡಿದರು ಎಂಬ ಕಾರಣಕ್ಕೇ ಗ್ರಾಮಸ್ಥರ ಮೇಲೆ ಹಲ್ಲೆ ಮಾಡಿದ್ದಾಗಿ ಸದರಿ ಮಂಜೇಗೌಡ ಹೇಳಿರುವುದು ಆಡಿಯೋದಲ್ಲಿ ದಾಖಲಾಗಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೂ ನೊಂದ ಯುವಕ ದೂರು ಸಲ್ಲಿಸಿದ್ದಾನೆ.
ಮೂರು ತಿಂಗಳ ಹಿಂದೆ ನಡೆದಿರುವ ಘಟನೆ ಇದು, ಹಾಗೇ ಯಾರ ಗಮನಕ್ಕೂ ಬಾರದೇ ಮುಚ್ಚಿ ಹೋಗಲಿದ್ದ ಘಟನೆಯ ವಿವರಗಳನ್ನು ಕೇಳಲು ಪಿಐ ಮಂಜೇಗೌಡರ ಮೊಬೈಲ್ ದೂರವಾಣಿಗೆ ಮಾಡಿದ ಕರೆಗಳನ್ನು ಅವರು ಶುಕ್ರವಾರ ಸ್ವೀಕರಿಸದೇ ಹೋದರು. ಶಿರಾ ಡಿವೈಎಸ್ಪಿ ಅವರು ಪತ್ರಿಕೆಯ ದೂರವಾಣಿ ಕರೆ ಸ್ವೀಕರಿಸಿದರಾದರೂ, ಮೇಲಧಿಕಾರಿಗಳ ಹೊರತು ತಾವು ಮಾಧ್ಯಮಗಳಿಗೆ ಮಾಹಿತಿ ನೀಡುವಂತಿಲ್ಲ ಎಂದು ವಿವರ ನೀಡಲು ನಿರಾಕರಿಸಿದರು.
ಇಂದಿಗೆ ಸರಿ ಸುಮಾರು ಮೂರು ತಿಂಗಳ ಹಿಂದೆ, ಶಿರಾ ಪಟ್ಟಣಕ್ಕೆ ಸುಮಾರು 25 ಕಿಲೋಮೀಟರ್ ದೂರದಲ್ಲಿ ಬುಕ್ಕಾಪಟ್ಟಣ ರಸ್ತೆಯಲ್ಲಿ ಮಂಚಲದೊರೆಗೆ ಸಾಗುವ ಹಾದಿಯಲ್ಲಿ ಸಾಕ್ಷಿ ಹಾಗೂ ತುಪ್ಪದ ಕೋಣ ಗ್ರಾಮಗಳಿವೆ. ಈ ಊರುಗಳ ನಡುವೆ ಮಣ್ಣಮ್ಮ ದೇವಿ ದೇವಸ್ಥಾನವಿದೆ. ಅವತ್ತು ಏಪ್ರಿಲ್ 23ರ ಬುಧವಾರ ಆಸುಪಾಸಿನ ಏಳು ಹಳ್ಳಿಗಳ ಜನರು ಸೇರಿ ಮಣ್ಣಮ್ಮ ದೇವಿ ಜಾತ್ರೆ ನಡೆಸುತ್ತಿದ್ದರು. ಊರ ದೇವಿಯ ಜಾತ್ರೆಗಳೆಂದರೆ ಮಾಂಸಾಹಾರ ಕಡ್ಡಾಯ. ಬೆಳಗಿನಿಂದ ಚಿಕನ್, ಮಟನ್ ಹಸಿಗೆ ಮಾಡಿದ ತುಪ್ಪದ ಕೋಣ ಗ್ರಾಮದ ಜಯಂತ್ ಎಂಬ ಯುವಕ ಹಾಗೇ ಈಜಾಡಿಕೊಂಡು ಬರುವುದಾಗಿ ಹೇಳಿ ಮನೆಯಿಂದ ಹೊರಟಿದ್ದಾನೆ. ಆತನಿಗೆ ಬೆಂಗಳೂರಿನಿಂದ ಹಬ್ಬಕ್ಕೆಂದು ಬಂದ ತುಪ್ಪದ ಕೋಣದ ಕಿರಣ್ ಹಾಗೂ ಸಾಕ್ಷಿ ಹಳ್ಳಿಯ ಲಿಂಗರಾಜು ಜೊತೆಯಾಗಿದ್ದಾರೆ. ಮೂವರೂ ಕಿರಿದಾದ ಊರಿನ ರಸ್ತೆಯಲ್ಲಿ ಕಾರನ್ನು ನಿಲ್ಲಿಸಿ ನಿಂತು ಮಾತುಕತೆ ಮಾಡುತ್ತಿರುವಾಗ ಕೆಎ 28 ಸಿ 9640 ನೊಂದಣಿ ಸಂಖ್ಯೆಯ ಚಿಕ್ಕ ಸರಕು ಟೆಂಪೋ ಬಂದಿದೆ. ಟೆಂಪೋದಲ್ಲಿ ಚಾಲಕ ಮತ್ತು ಆತನ ಪಕ್ಕ ಒಬ್ಬ ವ್ಯಕ್ತಿ ಹಾಗೂ ಟಾರ್ಪಾಲ್ ಮುಚ್ಚಿರುವ ಸರಕು ತುಂಬುವ ಹಿಂಭಾಗದಲ್ಲಿ ಕೆಲವು ಮಧ್ಯಮ ವಯಸ್ಸಿನ ಗಂಡಸರು ನಿಂತಿರುವುದು ಕಂಡಿದೆ. ರಸ್ತೆ ಚಿಕ್ಕದು , ಕಾರನ್ನು ತೀರಾ ಪಕ್ಕಕ್ಕೆ ಹಾಕದೇ ಹೋದರೆ, ಟೆಂಪೋ ಮುಂದೆ ಹೋಗುವುದಿಲ್ಲ ಎಂಬ ಪರಿಸ್ಥಿತಿ. ಅಷ್ಟು ಹೊತ್ತಿಗೇ ಟೆಂಪೋದಲ್ಲಿದ್ದವರು ಕಾರಿನ ಯುವಕರನ್ನು ಬಾಯಿಗೆ ಬಂದಂತೆ ಕೆಟ್ಟ ಹಾಗೂ ಅಶ್ಲೀಲ ಪದಗಳನ್ನು ಬಳಸಿ ಎತ್ತರದ ದನಿಯಲ್ಲಿ ಬೈಯುತ್ತಾ ದಾರಿ ಬಿಡುವಂತೆ ಸೂಚಿಸಿದ್ದಾರೆ. ಅವರ ಗಾಡಿ ಮುಂದೆ ಹೋದ ಮೇಲೆ, ಇದ್ಯಾರೋ ಜಾತ್ರೆಗೆ ಬಂದಿರುವವರು ಇರಬೇಕು, ಇದೇ ಊರಿನವರಾದ ನಮ್ಮ ಮೇಲೆ ಇಷ್ಟೊಂದು ದಬ್ಬಾಳಿಕೆ ಮಾಡುತ್ತಾರಲ್ಲ ಎಂದು ಜಯಂತ್ , ಕಿರಣ್ ಹಾಗೂ ಲಿಂಗರಾಜು ಕಾರಿನಲ್ಲಿ ಟೆಂಪೋ ಹಿಂಬಾಲಿಸಿ ಹೋಗಿ ಅಡ್ಡಗಟ್ಟುತ್ತಾರೆ. ಟೆಂಪೋ ಚಾಲಕನ ಪಕ್ಕದಲ್ಲಿ ಕೂತಿದ್ದ ಯುವಕ ಹಾಗೂ ಹಿಂಭಾಗ ನಿಂತಿದ್ದವರು ಹಾಗೂ ಈ ಯುವಕರ ನಡುವೆ ವಾಗ್ವಾದ ಹಾಗೂ ಮಾರಾಮಾರಿ ನಡೆದಿದೆ. ಆ ಮೂವರೂ ಯುವಕರನ್ನು ಹಿಡಿದು ಟೆಂಪೋದಲ್ಲಿ ಹಾಕಿಕೊಂಡು ತುಪ್ಪದ ಕೋಣಕ್ಕೆ ಬರುತ್ತಾರೆ ಆ ವ್ಯಕ್ತಿಗಳು.
ಟೆಂಪೋದಲ್ಲಿ ಮುಖವೆಲ್ಲ ಕೆಂಪಾಗಿ ತರಚು ಗಾಯಗಳಾಗಿ ಬಟ್ಟೆ , ಕೂದಲು ಅಸ್ತವ್ಯಸ್ತವಾದ ಸ್ಥಿತಿಯಲ್ಲಿ ತಮ್ಮ ಊರಿನ ಮೂವರು ಯುವಕರನ್ನು ಅಪರಿಚಿತ ಗಂಡಸರ ನಡುವೆ ನಿಂತಿರುವುದನ್ನು ಕಂಡು ಊರ ನಡುವಿದ್ದ ಜನರು ಟೆಂಪೋ ಅನ್ನು ಅಡ್ಡಗಟ್ಟುತ್ತಾರೆ. ಅವರ ಊರಿನ ಯುವಕರನ್ನು ಕೆಳಗಿಳಿಸಿಕೊಳ್ಳುತ್ತಾರೆ. ಯಾಕೆ ಇವರನ್ನು ಹೊಡೆದಿರಿ ಎಂದು ಟೆಂಪೋದಲ್ಲಿ ಬಂದ ಆಗುಂತಕರನ್ನು ತಲಾ ಪ್ರಶ್ನಿಸುತ್ತಾರೆ. ಟೆಂಪೋ ಚಾಲಕನ ಪಕ್ಕ ಕೂತಿದ್ದ ಮಿಲಿಟರಿ ಕಟಿಂಗ್ ಆಗಿದ್ದ ತೆಳು ಹಳದಿ ಟೀ ಶರ್ಟ್ ಧರಿಸಿದ್ದ ಯುವಕ ಕೆಳಗಿಳಿದಾಗ ಆತ ಧರಿಸಿದ್ದ ಖಾಕಿ ಪ್ಯಾಂಟಿನ ಕಡೆ ಜನರ ಗುಂಪಿನಲ್ಲಿದ್ದ ಬೆಂಗಳೂರಿನಲ್ಲಿ ವಾಸವಿದ್ದು , ಆಗುಂತಕರಿಂದ ಏಟು ತಿಂದ ಜಯಂತ್ ಅಣ್ಣನ ಗಮನ ಹರಿದು ಓ ಅವರು ಪೊಲೀಸ್ ಎಂದು ಅರಿವಾಗುತ್ತದೆ. ಯಾಕೆ, ಏನಾಯಿತು ಎಂದು ವಿಚಾರಿಸಲು ಮುಂದಾಗುತ್ತಾನೆ. ಅದೇ ಊರಿನ ಒಬ್ಬ ಹಿರಿಯರು ಆ ಟೆಂಪೋದಲ್ಲಿದ್ದ ರಂಗನಾಥ್ ಎಂಬ ವ್ಯಕ್ತಿಯನ್ನು ಗುರುತಿಸಿ ಈತ ಪೊಲೀಸ್ ರಂಗನಾಥ್ ಕಣ್ರೋ ಅಂತ ಗುಂಪಿಗೆ ಕೂಗಿ ಹೇಳುತ್ತಾರೆ. ಅಷ್ಟೊತ್ತಿಗೆ ಕೆಲ ಮಹಿಳೆಯರೂ ಸೇರಿದಂತೆ ಊರಿನ ಒಂದಷ್ಟು ಜನರು ಗುಂಪು ಸೇರಿ ಇನ್ಸ್ಪೆಕ್ಟರ್ ಮಂಜೇಗೌಡನನ್ನು ಸುತ್ತುವರಿದು ಹೊಡೆದದ್ದು ಯಾಕೆ ಅಂತ ಗಟ್ಟಿಯಾಗಿ ಪ್ರಶ್ನಿಸತೊಡಗುತ್ತಾರೆ. ಆ ಜನರಿಂದ ಬಿಡಿಸಿಕೊಂಡು ಆ ಪೊಲೀಸರೆಲ್ಲ ಅದೇ ಟೆಂಪೋದಲ್ಲಿ ಹೊರಟು ಬಿಡುತ್ತಾರೆ. ಮತ್ತು ಆ ಊರಿನ 12 ಜನರ ವಿರುದ್ದ ಕರ್ತವ್ಯ ನಿರತ ಪೊಲೀಸ್ ಮೇಲೆ ಹಲ್ಲೆ ಮಾಡಿದ, ಕೊಲೆ ಪ್ರಯತ್ನ ಮಾಡಿದ ಆಪಾದನೆ ಮೇಲೆ ಕೇಸು ದಾಖಲಿಸುತ್ತಾರೆ.
ತಮ್ಮ ವಿರುದ್ದ ಕೇಸು ದಾಖಲಾಗಿದೆ ಅಂತ ತಿಳಿದ ಕೂಡಲೇ ಅಷ್ಟೂ ಜನ ಊರಿನಿಂದ ನಾಪತ್ತೆಯಾಗಿ, ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿಕೊಳ್ಳುತ್ತಾರೆ. ಒಂದೂವರೆ ತಿಂಗಳ ಬಳಿಕ ಜಾಮೀನು ಮಂಜೂರಾಗುತ್ತದೆ. ಇವರಿಗೆ ಜಾಮೀನು ಮಂಜೂರಾದ ಸುದ್ದಿ ತಿಳಿದು ಕೆಂಡಾಮಂಡಲನಾಗುವ ಪಿಐ ಮಂಜೇಗೌಡ, ಮತ್ತೆ ನ್ಯಾಯಾಲಯದಲ್ಲಿ ಮೆಮೋ ಹಾಕಿ ಈ ಆಪಾದಿತರ ಮೇಲೆ 307 ಸೆಕ್ಷನ್ ಅನ್ವಯ ಗುಂಪುಗೂಡಿ ಕೊಲ್ಲುವ ಪ್ರಯತ್ನ ನಡೆಸಿದ ಆಪಾದನೆ ಹೊರೆಸುತ್ತಾನೆ. ಈ ಜನರು ಆ ಕೇಸಿನಲ್ಲೂ ಜಾಮೀನು ಪಡೆದುಕೊಳ್ಳುತ್ತಾರೆ. ಆದರೆ ನ್ಯಾಯಾಲಯವು ತನ್ನ ಎರಡನೇ ಜಾಮೀನು ಆದೇಶದಲ್ಲಿ “ ಪ್ರಕರಣದ ಅಷ್ಟೂ ಅಪಾದಿತರು ಮೂರು ವಾರಕ್ಕೊಮ್ಮೆ ಪಕ್ಕದ ಗುಬ್ಬಿ ಠಾಣೆಗೆ ಹೋಗಿ ಹಾಜರಾತಿ ಹಾಕಬೇಕೆಂಬ ಷರತ್ತನ್ನು ವಿಧಿಸಿದ್ದು, ಅದರಂತೆ ಅವರೆಲ್ಲ ಗುಬ್ಬಿಗೆ ಹೊರಡುವ ಹೊತ್ತಿನಲ್ಲಿ ಬಲವಂತವಾಗಿ ಅವರೆಲ್ಲರನ್ನು ಶಿರಾ ಠಾಣೆಗೇ ಪಿಐ ಮಂಜೇಗೌಡ ಕರೆಸಿಕೊಂಡು ಅಲ್ಲಿಗೇ ಗುಬ್ಬಿ ಠಾಣೆ ಸಿಬ್ಬಂದಿಯಿಂದ ರಿಜಿಸ್ಟರ್ ತರಿಸಿ ಹಾಜರಾತಿ ಹಾಕಿಸುತ್ತಾರೆ. ಹಾಗೂ ಆ ಎಲ್ಲರನ್ನೂ ವಯಸ್ಸಿಗೂ ಬೆಲೆ ಕೊಡದೇ 65ರ ವೃದ್ದನನ್ನೂ ಸೇರಿಸಿ ಬಾಯಿಗೆ ಬಂದಂತೆ ಬೈದು, ಅಶ್ಲೀಲ ಪದಗಳಿಂದ ನಿಂದಿಸಿ, ಬೂಟುಗಾಲು ಹಾಗೂ ಲಾಠಿಗಳಲ್ಲಿ ಹೊಡೆಯುತ್ತಾರೆ. ಅವರೆಲ್ಲ ಆಡಿದ ಸುಸಂಸ್ಕೃತ ಪದಾವಳಿಗಳನ್ನು ಅದು ಯಾರೋ ಅದು ಹೇಗೋ ಆಡಿಯೋ ಮಾಡಿಕೊಂಡಿದ್ದು ಅವೆಲ್ಲ ಈಗ ವೈರಲ್ ಆಗಿ, ಕೇಳಿದವರೆಲ್ಲ ಕಿವಿ ಮುಚ್ಚಿಕೊಂಡು ಬಿಡುತ್ತಿದ್ದಾರೆ.
ಕೇಸಿನಲ್ಲಿ ಆಪಾದಿತನಾಗಿರುವ ಮನು ಎಂಬಾತ ಏಪ್ರಿಲ್ 23ರಂದೇ ನಡೆದ ಘಟನೆಯನ್ನು ವಿವರಿಸಿ ಇಮೇಲ್ ಮುಖಾಂತರ ತುಮಕೂರು ಎಸ್ಪಿ ಹಾಗೂ ಮಾನವ ಹಕ್ಕು ಆಯೋಗಗಳಿಗೆ ದೂರು ಸಲ್ಲಿಸಿದ್ದಾನೆ. ಈತನ ತಮ್ಮ ಎ3 ಜಯಂತ್ ಮತ್ತು ಇವರಿಬ್ಬರ ತಂದೆಯನ್ನೂ ಕೇಸಿನಲ್ಲಿ ಸೇರಿಸಿದ್ದಲ್ಲದೇ 65 ವರ್ಷದ ಇವರ ಮೇಲೂ ಹಲ್ಲೆ ಮಾಡಿದ್ದಾರೆ ಪೊಲೀಸರು. ಪೊಲೀಸರಾದ ರಂಗನಾಥ್ ಹಾಗೂ ಸಿದ್ದೇಶ ಅವರಿಗೆ ಮೈನರ್ ಗಾಯಗಳಾಗಿರುವುದಾಗಿಯೂ ಎಫ್ಐಆರ್ ನಲ್ಲಿ ದಾಖಲಾಗಿದೆ. ಜೊತೆಗೆ ಮನು ಎಂಬಾತನಿಗೂ ಅದೇ ರೀತಿ ಗಾಯಗಳಾಗಿವೆ ಎಂದು ದಾಖಲಿಸಲಾಗಿದೆ.
ಇದಿಷ್ಟು ನಡೆದ ಸಂಗತಿ. ಪ್ರತ್ಯಕ್ಷದರ್ಶಿಗಳು ಹಾಗೂ ಲಭ್ಯ ವಿಡಿಯೋ ಹಾಗೂ ಆಡಿಯೋಗಳನ್ನು ಆಧರಿಸಿದ ವಾಸ್ತವಾಂಶದ ವರದಿ ಇದು. ಬ್ರಿಟಿಷ್ ಪೊಲೀಸರು ಹಾಗೂ ಸೈನಿಕರು ಭಾರತೀಯ ಅಧೀನ ಸಿಬ್ಭಂದಿಯನ್ನು ಬಳಸಿ ಭಾರತೀಯರ ಮೇಲೇ ಹಿಂಸಾಚಾರ ಮಾಡುತ್ತಿದ್ದರು ಎಂಬುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಬ್ರಿಟಿಷರು ಮರ್ಯಾದೆಯಾಗಿ ಈ ನೆಲವನ್ನು ಬಿಟ್ಟು ಹೋಗಿ ಮುಕ್ಕಾಲು ಶತಮಾನ ಕಳೆದಿದೆ. ಇಲ್ಲೇ ಇದೇ ನೆಲದಲ್ಲಿ ಹುಟ್ಟಿ ಬೆಳೆದವರೇ ಹೊಟ್ಟೆಪಾಡಿಗಾಗಿ ಪೊಲೀಸ್ ಎಂಬ ಸರ್ಕಾರಿ ನೌಕರಿ ಪಡೆದು ಹೀಗೆ ತಮ್ಮದೇ ಅಣ್ಣ, ತಮ್ಮಂದಿರು, ಅಕ್ಕಂದಿರನ್ನು ಇಷ್ಟು ಕ್ರೂರ ಹಿಂಸೆಗೆ ಒಳಪಡಿಸುತ್ತಾರೆ ಎಂದರೆ ನಾವು ನಾಗರಿಕರಂತೆ ಬಾಳಲು ಇನ್ನೂ ಎಷ್ಟು ಶತಮಾನ ಕಳೆಯಬೇಕೋ ಗೊತ್ತಿಲ್ಲ.
ಗೃಹ ಸಚಿವ ಹಾಗೂ ಈ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಡಾ.ಜಿ.ಪರಮೇಶ್ವರ ಅವರ ತವರು ಜಿಲ್ಲೆಯಲ್ಲೇ ಇಂತ ದೌರ್ಜನ್ಯಗಳು ನಡೆಯುತ್ತಿವೆ ಎಂದು ಇತರ ಪತ್ರಿಕೆಗಳು ಹಾಗೂ ಮಾಧ್ಯಮಗಳು ಮಾಡುವ ಆರೋಪವನ್ನು ʼ ಬೆವರ ಹನಿʼ ಪ್ರಾದೇಶಿಕ ದಿನಪತ್ರಿಕೆ ಮಾಡಲು ಹೋಗುವುದಿಲ್ಲ. ಜವಾಬ್ದಾರಿ ಇರುವ ಯಾವುದೇ ಪೊಲೀಸ್ ಅಧಿಕಾರಿ ಇಂತದ್ದೆನ್ನಲ್ಲ ಸನ್ಮಾನ್ಯ ಗೃಹ ಸಚಿವರ ಗಮನಕ್ಕೆ ತಂದಿರುವುದಿಲ್ಲ ಎಂಬುದು ನಮ್ಮ ತಿಳುವಳಿಕೆ. ಅಧೀನ ಪೊಲೀಸ್ ಅಧಿಕಾರಿಗಳು ಮಾಡುವ ಇಂತ ಹೀನ ಕೃತ್ಯಗಳನ್ನು ವರಿಷ್ಟ ಅಧಿಕಾರಿಗಳು ಕಂಡೂ ಕಾಣದಂತೆ ಇರಬಾರದು, ಸೂಕ್ತ ತನಿಖೆ ಮಾಡಿ, ತಪ್ಪಿತಸ್ಥ ಅಧೀನ ಸಿಬ್ಬಂದಿ ವಿರುದ್ದ ಸೂಕ್ತ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಒಂದು ವೇಳೆ ತುಪ್ಪದಕೋಣ ಗ್ರಾಮದ ಜನರು ಉದ್ದೇಶಪೂರ್ವಕವಾಗೇ ಕಾನೂನು ಕೈಗೆ ತೆಗೆದುಕೊಂಡಿದ್ದರೆ ನ್ಯಾಯಾಲಯ ವಿಚಾರಣೆಯಲ್ಲಿ ತೀರ್ಮಾನ ಮಾಡೇ ಮಾಡುತ್ತದೆ. ಆದರೆ ಹೀಗೆ ನಿಂದನೆ, ಹಲ್ಲೆ, ದೌರ್ಜನ್ಯ ಮಾಡುವ ಅಗತ್ಯ, ಅನಿವಾರ್ಯತೆ ಇರಲಿಲ್ಲ. ರಂಗನಾಥ್ ಎಂಬ ಪೊಲಿಸ್ ಮುಖಾಂತರ ದಾಖಲಿಸಿರುವ ಹುಸಿ ದೂರು ರದ್ದಾಗಬೇಕಿದೆ. ವಾಸ್ತವ ಅಂಶಗಳನ್ನು ಆಧರಿಸಿ ಕ್ರಮ ಜರುಗಿಸಬೇಕಿದೆ.
ಪೊಲೀಸರ ಸುಳ್ಳು ದೂರಿನಲ್ಲೇನಿದೆ ನೋಡಿ
ಏಪ್ರಿಲ್ 23ರ ಸಂಜೆ ಶಿರಾ ಠಾಣೆಯ ರಂಗನಾಥ್ ಎಂಬ ಪೊಲೀಸ್ ಸಿಬ್ಬಂದಿ ನೀಡಿದ ದೂರಿನ ಆಧಾರದ ಮೇಲೆ ಆ ಊರಿನ ಮೂವರು ಮಹಿಳೆಯರೂ ಸೇರಿ, ಒಟ್ಟು ಹನ್ನೊಂದು ಜನರನ್ನು ಹೆಸರಿಸಿ ಹಾಗೂ ಮತ್ತೊಬ್ಬರ ಹೆಸರನ್ನು ದಾಖಲಿಸದೇ ಅಪರಾಧ ಸಂಖ್ಯೆ 0201/2025ರಲ್ಲಿ ಎಫ್ಐಆರ್ ದಾಖಲಾಗುತ್ತದೆ. ತುಪ್ಪದ ಕೋಣ ಗ್ರಾಮದ ಕಿರಣ್ (ಎ1) ನಂತರ ಸಾಕ್ಷಿ ಹಳ್ಳಿಯ ಲಿಂಗರಾಜು (ಎ2), ಉಳಿದಂತೆ ತುಪ್ಪದ ಕೋಣದ ಜಯಂತ್, ತಿಮ್ಮರಾಜು, ಯಲ್ಲಪ್ಪ, ಕೃಷ್ಣಮೂರ್ತಿ, ಮನು, ಪವಿತ್ರ ಕುಮಾರ್, ರೂಪ, ಮಮತ, ಮಮತ ಹಾಗೂ ಹೆಸರಿಸದ ಮತ್ತೊಬ್ಬರು ಆಪಾದಿತರ ಪಟ್ಟಿಯಲ್ಲಿ ಸೇರುತ್ತಾರೆ.
ಪೊಲೀಸ್ ರಂಗನಾಥ್ ನೀಡಿದ ದೂರಿನಲ್ಲಿ ಹೇಳುವ ಕತೆಯೇ ಬೇರೆ ಇದೆ. ಏ.23ರಂದು ಮಧ್ಯಾಹ್ನ 1 ಗಂಟೆ ಸುಮಾರಿನಲ್ಲಿ ಶಿರಾ ತಾಲೂಕ್ ಕರೇ ಮಾದೇನಹಳ್ಳಿ ಯಲ್ಲಿ ಜೂಜಾಟ ನಡೆದಿದೆ ಎಂಬ ಖಚಿತ ಮಾಹಿತಿ ಪಿಐ ಸಾಹೇಬರಿಗೆ ಬರಲಾಗಿ, ಅವರು ಪಿಎಸ್ಐ ಮಹಾಲಿಂಗಯ್ಯ, ಹೆಚ್ಸಿ ನಾಗರಾಜ, ಮತ್ತೊಬ್ಬ ಹೆಚ್ ಸಿ ನಾಗರಾಜ, ಪಿಸಿಗಳಾದ ಮಣಿಕಂಠ, ಸಿದ್ದೇಶ, ಉಮೇಶ ನಾಯ್ಕ, ರೇವಣಸಿದ್ದಪ್ಪ ಅವರನ್ನು ಠಾಣೆಗೆ ಕರೆಸಿಕೊಂಡು ನನ್ನನ್ನೂ ಸೇರಿಸಿಕೊಂಡು ಮಫ್ತಿಯಲ್ಲಿದ್ದ ನಮ್ಮನ್ನು ಕೆಎ 28 ಸಿ 9640 ಟೆಂಪೋದಲ್ಲಿ ಕೂರಿಸಿಕೊಂಡರಂತೆ (ಲಗೇಜು ಸಾಗಿಸುವ ವಾಹನದಲ್ಲಿ ಚಾಲಕನನ್ನು ಬಿಟ್ಟಿರೆ ಉಳಿದವರು ಕೂರಲು ಸೀಟುಗಳಿದ್ದವೇ ಎಂದು ಕೇಳಬೇಡಿ) ನಂತರ ಪಿಐ ಎಸ್. ಮಂಜೇಗೌಡರು,ಇಲಾಖೆಯ ವಾಹನ ಕೆಎ06 ಜಿ1424ನಲ್ಲಿ ಪಿಎಸ್ಐ ಮಹಲಿಂಗಯ್ಯನವರನ್ನು ಕೂರಿಸಿಕೊಂಡು ಟೆಂಪೋ ಅನ್ನು ಹಿಂಬಾಲಿಸಿದರಂತೆ. (ಆದರೆ ಈಗಾಗಲೇ ವೈರಲ್ ಆಗಿರುವ ವಿಡಿಯೋಗಳಲ್ಲಿ ಎಲ್ಲೂ ರಂಗನಾಥ್ ದೂರಿನಲ್ಲಿ ಹೇಳಿರುವ ಇಲಾಖಾ ವಾಹನ ಇಲ್ಲವೇ ಇಲ್ಲ ಹಾಗೂ ಸನ್ಮಾನ್ಯ ಪಿಐ ಎಸ್ . ಮಂಜೇಗೌಡರು ಅದೇ ಟೆಂಪೋದಲ್ಲಿ ಮಫ್ತಿಯಲ್ಲಿ ಚಾಲಕನ ಪಕ್ಕವೇ ಕುಳಿತು ತುಪ್ಪದ ಕೋಣ ಊರೊಳಕ್ಕೆ ಬಂದದ್ದೂ ಅದೇ ಟೆಂಪೋದಿಂದ ಕೆಳಗಿಳಿದು ಜನರೊಂದಿಗೆ ವಾಗ್ವಾದ ಮಾಡಿದ್ದೂ ಮತ್ತೆ ಅದೇ ಟೆಂಪೋ ಹತ್ತಿ ಅಲ್ಲಿಂದ ಹೊರಟ ವಿಡಿಯೋಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಇರಲಿ ಮುಂದೆ ಓದಿ).
ಮ.2 ಗಂಟೆಗೆ ಶಿರಾದಿಂದ ಹೊರಟ ಟೆಂಪೋ ಅನ್ನು ಚೆನ್ನನಕುಂಟೆಯ ಶರತ್ ಕುಮಾರ್ ಚಾಲನೆ ಮಾಡುತ್ತಿದ್ದರಂತೆ. ಆ ಟೆಂಪೋ ಮಧ್ಯಾಹ್ನ 3.00 ಗಂಟೆ ಸಮಯಕ್ಕೆ ತುಪ್ಪದ ಕೋಣದ ಬಳಿ ಹೋದಾಗ, ಅವರ ಮುಂದೆ ಕೆಎ03 ಎಎಲ್ 7830 ನೊಂದಣಿ ಸಂಖ್ಯೆಯ ಬಿಳಿ ಬಣ್ಣದ ಕಾರು ಹೋಗುತ್ತಿದ್ದು ಸದರಿ ಕಾರಿನ ಚಾಲಕ ನಾವು ಮುಂದೆ ಹೋಗದಂತೆ ಕಾರನ್ನು ಅಡ್ಡ ನಿಲ್ಲಿಸಿದ್ದು , ರಂಗನಾಥ್ ಮತ್ತು ಸಿದ್ದೇಶ್ ಟೆಂಪೋದಿAದ ಇಳಿದು ಕಾರನ್ನು ಪಕ್ಕಕ್ಕೆ ಹಾಕುವಂತೆ ತಿಳಿಸಿದಾಗ ಕಾರಿನ ಚಾಲಕ ಅವರನ್ನು ಏಕವಚನದಲ್ಲಿ ಮಾತನಾಡಿಸಿದನಂತೆ, ಅವರು ತಾವು ಪೊಲೀಸ್ ಅಂತ ತಿಳಿಸಿದರೂಕೇಳದೇ ಅವರನ್ನೇ ಬೈದು, ನಿಧಾನವಾಗಿ ತುಪ್ಪದ ಕೋಣದವರೆಗೆ ಹೋಗಿ ಸುಮಾರು ನೂರು ಜನರನ್ನು ಗುಂಪು ಸೇರಿಸಿ, ನಾವೆಲ್ಲ ಅನ್ಯಕರ್ತವ್ಯದಲ್ಲಿರುವ ಪೊಲೀಸರೂ ಅಂತ ಹೇಳಿದರೂ ಕೇಳದೇ ಹಲ್ಲೆ ಮಾಡಿದರು ಎಂದು ದೂರಿನಲ್ಲಿ ವಿವರಿಸಲಾಗಿದೆ. ಹಲ್ಲೆ ಹೇಗೆ ನಡೆಯಿತು, ಅವರಲ್ಲಿ ಮೂರು ಮಹಿಳೆಯರೂ ಇದ್ದರು. ಗುಂಪಿನಲ್ಲಿದ್ದ ಒಬ್ಬ ವ್ಯಕ್ತಿ ದೂರುದಾರ ಪೊಲೀಸ್ ರಂಗನಾಥ್ ಗೆ ಹೊಡೆಯಲು ಬಂದ ಕಲ್ಲು ಅದೇ ಊರಿನ ಮನು ಎಂಬಾತನಿಗೆ ಬಿತ್ತಂತೆ. ಹೀಗೇ ವಿವರಗಳಿದ್ದು ಕಡೆಗೆ ಪೊಲೀಸ್ ಇನ್ಸ್ಪೆಕ್ಟರ್ ಎಸ್ . ಮಂಜೇಗೌಡರು ತಮ್ಮ ಮೇಲೆ ಹೇಳಿದ ಎಲ್ಲ ಗಾಯಗೊಂಡಿದ್ದ ಸಿಬ್ಬಂದಿಯನ್ನು ಅದೇ ಟೆಂಪೊದಲ್ಲಿ ಕರೆದುಕೊಂಡು ಬಂದು ಶಿರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರಂತೆ. ( ನೋಡಿ, ದೂರಿನ ಆರಂಭದಲ್ಲಿ ಪಿಐ ತಮ್ಮ ಇಲಾಖಾ ವಾಹನದಲ್ಲಿ ನಮ್ಮನ್ನು ಹಿಂಬಾಲಿಸಿ ಬಂದರು ಅಂತ ಹೇಳುತ್ತಾರೆ, ಆದರೆ, ತುಪ್ಪದ ಕೋಣ ಊರಿಗೆ ಆ ಇಲಾಖಾ ವಾಹನ ಬಂದೇ ಇಲ್ಲ, ಮತ್ತು ಆ ಪಿಐ ಎಸ್. ಮಂಜೇಗೌಡ ಕೂಡಾ ಅದೇ ಟೆಂಪೋದಲ್ಲಿ ಮಫ್ತಿಯಲ್ಲಿ ಟೆಂಪೋ ಚಾಲಕನ ಪಕ್ಕ ಕೂತುಬಂದಿದ್ದು ಅದೇ ವಾಹನದಲ್ಲಿ ಶಿರಾ ಹಿಂದಿರುಗಿದರು ಎಂಬುದು ಗ್ರಾಮಸ್ಥರಲ್ಲಿ ಯಾರೋ ಅವರ ಮೊಬೈಲ್ ಗಳಿಂದ ತೆಗೆದಿರುವ ವಿಡಿಯೋಗಳಲ್ಲಿ ಖಚಿತವಾಗಿದೆ. ಸುಳ್ಳು ಹೇಳಿದರೂ ನಿಜದ ತಲೆ ಮೇಲೆ ಹೊಡೆದಂತ ಸುಳ್ಳು ದೂರನ್ನು ದಾಖಲಿಸಲು ಬರದ, ಎಲ್ಲೋ ಹಳ್ಳಿಯೊಂದರಲ್ಲಿ ಜೂಜಾಟ ನಡೆಯುತ್ತಿದೆ ಎಂದರೆ ಊರ ದೇವಿ ಜಾತ್ರೆಯ ಮಟನ್ ಊಟಕ್ಕೆ ಹೊರಟವರಂತೆ ಪಿಐ ಮಂಜೇಗೌಡ ಸೇರಿ ಒಂಬತ್ತು ಪೊಲೀಸರು ಟೆಂಪೋದಲ್ಲಿ ಹೋಗುತ್ತಾರೆ ಎಂದರೆ, ಅವರ ಒಟ್ಟಾರೆ ಉದ್ದೇಶ ಏನಿತ್ತು ಎಂಬುದನ್ನು ಅರ್ಥ ಮಾಡಿಕೊಳ್ಳಿ.