ನಿರ್ಣಾಯಕ ಹಂತದಲ್ಲಿ ದುಡಿಯುವ ವರ್ಗಗಳ ಪಾತ್ರ
2024ರಲ್ಲಿ ಬಿಜೆಪಿಗೆ ಬಹುಮತ ಏಕೆ ಕೂಡದು, , ಈ ಚುನಾವಣೆಗಳು ಏಕೆ ನಿರ್ಣಾಯಕ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ. ಭಾರತದ ದುಡಿಯುವ ವರ್ಗಗಳ ಪ್ರಥಮ ಎದುರಾಳಿ ನವ ಉದಾರವಾದ ಮತ್ತು ಕಾರ್ಪೋರೇಟ್ ಮಾರುಕಟ್ಟೆ ಆರ್ಥಿಕತೆ. ಇದನ್ನು ಹಿಮ್ಮೆಟ್ಟಿಸಿದರೆ ಹಿಂದುತ್ವ ರಾಜಕಾರಣವೂ ಹಿಮ್ಮೆಟ್ಟುತ್ತದೆ. ಈ ನಿಟ್ಟಿನಲ್ಲಿ ಯಾವುದೇ ಬಂಡವಾಳಿಗಳಿಗೆ ಸ್ಪಷ್ಟ ನಿಲುವು ಇಲ್ಲದಿರುವುದರಿಂದ , ಒಂದು ಪರ್ಯಾಯದತ್ತ ಆಲೋಚನೆ ಮಾಡುವ ಜವಾಬ್ದಾರಿ ಎಡಪಕ್ಷಗಳು ಹಾಗೂ ಶೋಷಿತ ಸಮುದಾಯಗಳನ್ನು ಪ್ರತಿನಿಧಿಸುವ ಎಲ್ಲ ಜನಪರ ಸಂಘಟನೆಗಳು, ಮಹಿಳಾ ಸಂಘಟನೆಗಳ ಮೇಲಿದೆ. ಹಾಗಾಗಿಯೇ 2024ರ ಚುನಾವಣೆಗಳು ಶೋಷಿತ- ದುಡಿಯುವ ಜನತೆಯ ದೃಷ್ಟಿಯಿಂದ ನಿರ್ಣಾಯಕವೂ ಆಗುತ್ತದೆ.
ವಿಶ್ಲೇಷಣೆ
ನಾ ದಿವಾಕರ
ವೈವಿಧ್ಯಮಯ ಸಂಸ್ಕೃತಿ ಹಾಗೂ ಅಷ್ಟೇ ವೈವಿಧ್ಯತೆಯಿಂದ ಕೂಡಿದ ಬೌದ್ಧಿಕ ಚಿಂತನೆಗಳಿಂದ ಕೂಡಿದ ಭಾರತವನ್ನು ಏಕಮುಖಿ ರಾಷ್ಟ್ರವನ್ನಾಗಿಸುವ ಪ್ರಯತ್ನದಲ್ಲಿ ಬಿಜೆಪಿ 2024ರ ಚುನಾವಣೆಗಳಲ್ಲಿ ಮತ್ತೊಮ್ಮೆ ಸ್ಪಷ್ಟ ಬಹುಮತದೊಂದಿಗೆ ಆಯ್ಕೆಯಾಗಲು ಬಯಸುತ್ತಿದೆ. ಯಾವುದೇ ರಾಜಕೀಯ ಪಕ್ಷವಾದರೂ ಶಾಶ್ವತವಾಗಿ ಅಧಿಕಾರದಲ್ಲಿರಲು ಬಯಸುವುದು ಸಹಜವೇ. ಆದರೆ ಬಿಜೆಪಿಯ ಬಯಕೆ ಈ ಅಧಿಕಾರ ರಾಜಕಾರಣದಿಂದಾಚೆಗೂ ಕೆಲವು ನಿರ್ದಿಷ್ಟ ಕಾರ್ಯಸೂಚಿಗಳೊಂದಿಗೆ ಕಂಡುಬರುತ್ತದೆ. ಬಹುಸಂಖ್ಯಾವಾದವನ್ನು ಪುಷ್ಟೀಕರಿಸುವ ಹಿಂದುತ್ವ ರಾಜಕಾರಣದ ಆಶಯಗಳನ್ನು ಸಾಕಾರಗೊಳಿಸಲು ಸಂವಿಧಾನದ ಚೌಕಟ್ಟಿನ ಒಳಗೇ ಹಲವು ಕಾಯ್ದೆ ಕಾನೂನುಗಳನ್ನು ಜಾರಿಗೊಳಿಸುವ ಮೂಲಕ ಬಿಜೆಪಿ ತನ್ನ ಹತ್ತು ವರ್ಷಗಳ ಆಳ್ವಿಕೆಯಲ್ಲಿ, ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಬುನಾದಿಯನ್ನು ಶಿಥಿಲಗೊಳಿಸಿದೆ.
ಸಾಮಾಜಿಕ-ಆರ್ಥಿಕ ಸಮಾನತೆ, ಸಾಮುದಾಯಿಕ ಭ್ರಾತೃತ್ವ ಹಾಗೂ ಸಾಂಸ್ಕೃತಿಕ ಸಮನ್ವಯತೆ ಈ ಮೂರೂ ಉದಾತ್ತ ಧ್ಯೇಯಗಳು ಭಾರತೀಯ ಸಂವಿಧಾನದ ಅಂತಃಸತ್ವವಾಗಿದ್ದರೂ, ಈ ಮೂರೂ ನೆಲೆಗಳಲ್ಲಿ ಭಾರತೀಯ ಸಮಾಜ ವಿಘಟನೆಯಾಗುತ್ತಿರುವ ಹೊತ್ತಿನಲ್ಲಿ 2024ರ ಚುನಾವಣೆ ಎದುರಾಗಿದೆ. ಈ ವಿಘಟನೆಯೇ “ಸಂವಿಧಾನ ಅಪಾಯದಲ್ಲಿದೆ” ಎಂಬ ಆತಂಕದ ಕೂಗಿಗೂ ಕಾರಣವಾಗಿದೆ. ಮತ್ತೊಂದೆಡೆ ಬಿಜೆಪಿ-ಆರೆಸ್ಸೆಸ್‌ನ ಪ್ರಮುಖ ನಾಯಕರು ತಮ್ಮ ಸಂವಿಧಾನ ನಿಷ್ಠೆ ಮತ್ತು ಬದ್ಧತೆಯನ್ನು ಮತ್ತೆಮತ್ತೆ ಖಚಿತಪಡಿಸುತ್ತಿದ್ದರೂ, ಪಕ್ಷದ ಕೆಲವು ನಾಯಕರು, ಮುಂಬರುವ ಚುನಾವಣೆಗಳಲ್ಲಿ ಸಂವಿಧಾನ ಬದಲಾಯಿಸುವ ಸಲುವಾಗಿಯೇ ಬಿಜೆಪಿ 400 ಸ್ಥಾನಗಳನ್ನು ಪಡೆಯಬೇಕು ಎಂದು ಹಂಬಲಿಸುತ್ತಿದ್ದಾರೆ. ಈ ಕೂಗುಮಾರಿ ಘೋಷಣೆಗಳೇ ಚುನಾವಣಾ ಕಣದಲ್ಲಿ “ ಸಂವಿಧಾನ ಬದಲಾವಣೆ ” ಎಂಬ ಭೂತವನ್ನೂ ಸೃಷ್ಟಿಸಿದೆ.
ರಕ್ಷಣೆ-ಬದಲಾವಣೆಯ ಸಂಘರ್ಷ
ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಟೊಂಕಕಟ್ಟಿ ನಿಂತ ತಳಸಮುದಾಯದ ಕೋಟ್ಯಂತರ ಜನರು ಈ ಚುನಾವಣಾ ಭೂತವನ್ನೇ ಪ್ರಧಾನವಾಗಿ ಎದುರಿಸುತ್ತಾ, ಮುಂಬರುವ ಚುನಾವಣೆಗಳಲ್ಲಿ “ಸಂವಿಧಾನ ರಕ್ಷಣೆ” ಮಾಡುವ ಪಕ್ಷಗಳನ್ನು ಚುನಾಯಿಸುವಂತೆ ಕರೆ ನೀಡುತ್ತಿರುವುದು ಸಹಜ ಪ್ರಕ್ರಿಯೆಯೇ ಆಗಿದೆ. ತನ್ನ ಹಿಂದೂ ರಾಷ್ಟ್ರದ ಕಲ್ಪನೆಯನ್ನು ಸಾಕಾರಗೊಳಿಸಲು ಆರೆಸ್ಸೆಸ್ ಸಂವಿಧಾನವನ್ನು ಪಲ್ಲಟಗೊಳಿಸಲು ಉತ್ಸುಕವಾಗಿದ್ದರೂ, ಈ ಕಲ್ಪನೆಯ ಆಂತರ್ಯದಲ್ಲಿರುವ ಸಾಮಾಜಿಕ-ಸಾಂಸ್ಕೃತಿಕ ಭೂಮಿಕೆಗಳನ್ನು ವ್ಯವಸ್ಥಿತವಾಗಿ ಸಿದ್ಧಪಡಿಸಿ, ಪೋಷಿಸುವುದರಲ್ಲಿ ಹತ್ತು ವರ್ಷಗಳ ಬಿಜೆಪಿ ಆಳ್ವಿಕೆ ಯಶಸ್ವಿಯಾಗಿರುವುದನ್ನು ಇಲ್ಲಿ ಗಮನಿಸಬೇಕಿದೆ. ಅಲ್ಪಸಂಖ್ಯಾತ ಸಮುದಾಯಗಳ ಅವಗಣನೆ, ಆಹಾರ ರಾಜಕಾರಣ, ಮೇಲ್ಜಾತಿ-ಮೇಲ್ವರ್ಗದ ಸಾಮಾಜಿಕ ಯಜಮಾನಿಕೆ, ಜಾತಿ-ಮಹಿಳಾ ದೌರ್ಜನ್ಯಗಳ ಹೆಚ್ಚಳ, ಪುರುಷಾಧಿಪತ್ಯದ ಮೇಲರಿಮೆ , ಸಾಂಸ್ಕೃತಿಕ ವಲಯದ ವೈದಿಕೀಕರಣ ಇವೆಲ್ಲವೂ ಸಾಂಪ್ರದಾಯಿಕ ಹಿಂದೂ ರಾಷ್ಟ್ರ ಪರಿಕಲ್ಪನೆಯ ಬೌದ್ಧಿಕ ಪರಿಕರಗಳಾಗಿದ್ದು, ಸಂವಿಧಾನದ ಚೌಕಟ್ಟಿನಲ್ಲೇ ಇವೆಲ್ಲವನ್ನೂ ಬಹುಮಟ್ಟಿಗೆ ಸಾಧಿಸಲಾಗಿದೆ.
ಏಕೆಂದರೆ ಅಲ್ಪಸಂಖ್ಯಾತರು, ಆದಿವಾಸಿಗಳು ಹಾಗೂ ಅಲಕ್ಷಿತ ತಳಸಮುದಾಯಗಳ ಮೂಲಭೂತ ಮಾನವ ಹಕ್ಕುಗಳನ್ನು ಭಂಗಗೊಳಿಸುವ ಕಾನೂನುಗಳನ್ನು ಜಾರಿಗೊಳಿಸಲು ಸಂವಿಧಾನ ಅವಕಾಶ ನೀಡುತ್ತದೆ. ಹಾಗಾಗಿಯೇ ಬಿಜೆಪಿ ಸ್ಪಷ್ಟ ಬಹುಮತ ಪಡೆದ ರಾಜ್ಯಗಳಲ್ಲೆಲ್ಲಾ ಮತಾಂತರ ನಿಷೇಧ, ಗೋಹತ್ಯೆ ನಿಷೇಧ ಮುಂತಾದ ಕಾಯ್ದೆಗಳನ್ನು ಸುಲಭವಾಗಿ ಜಾರಿಗೊಳಿಸುತ್ತದೆ. ಮೀಸಲಾತಿ ಎಂಬ ಸಾಂವಿಧಾನಿಕ ಸವಲತ್ತಿನ ಮೂಲಕ ತಳಸಮುದಾಯದ ಶೋಷಿತರಿಗೆ ಸುಭದ್ರ ಭವಿಷ್ಯವನ್ನು ಕಲ್ಪಿಸುವ ಅವಕಾಶಗಳು ಮುಕ್ತವಾಗಿರುವಂತೆಯೇ, ಸರ್ಕಾರಿ ಉದ್ಯೋಗ ಅಥವಾ ಸಾರ್ವಜನಿಕ ಔದ್ಯೋಗಿಕ ಅವಕಾಶಗಳನ್ನು ಕಸಿದುಕೊಂಡು ಮೀಸಲಾತಿ ಪ್ರಕ್ರಿಯೆಯನ್ನೇ ಅಪ್ರಸ್ತುತಗೊಳಿಸುವ ಬೃಹದಾರ್ಥಿಕ ನೀತಿಗಳನ್ನು ಜಾರಿಗೊಳಿಸಲೂ ಸಂವಿಧಾನದಲ್ಲಿ ಅವಕಾಶವಿದೆ. ಕಾರ್ಮಿಕ ಸಂಹಿತೆಗಳು ಒಂದು ಸ್ಪಷ್ಟ ನಿದರ್ಶನ. ಮೂಲತಃ ಭಾರತೀಯ ಸಂವಿಧಾನದ ಆಶಯ ಸಮಾಜವಾದಿ ನೆಲೆಯಲ್ಲಿ ಕಂಡುಬಂದರೂ, ಬಂಡವಾಳಶಾಹಿಯನ್ನು ಪೋಷಿಸಿ ಸಲಹಲು ಯಾವುದೇ ಅಡ್ಡಿಆತಂಕಗಳು ಸಂವಿಧಾನದ ನೆಲೆಯಲ್ಲಿ ಕಾಣಲಾಗುವುದಿಲ್ಲ.
ಭಾರತೀಯ ಸಂವಿಧಾನದ ಈ ನಮ್ಯತೆ (Flexibility)ಯನ್ನು ಉಪಯೋಗಿಸಿಕೊಂಡು, ಸ್ಪಷ್ಟ ಬಹುಮತ ಪಡೆದ ಪಕ್ಷಗಳು ಹಲವು ಅಸಾಂವಿಧಾನಿಕ ಕಾಯ್ದೆಗಳನ್ನು ಜಾರಿಗೊಳಿಸುತ್ತಿರುವುದನ್ನು ಗಮನಿಸುತ್ತಲೇ ಬಂದಿದ್ದೇವೆ. ಹಾಗಾಗಿಯೇ ದೇಶದ ಸಾಮಾಜಿಕ ಪಿರಮಿಡ್ಡಿನ ತಳಮಟ್ಟದಲ್ಲಿರುವ ಬಹುಸಂಖ್ಯೆಯ ಶೋಷಿತರನ್ನು ಇನ್ನೂ ಹೆಚ್ಚು ಅಂಚಿಗೆ ತಳ್ಳುವಂತಹ ನವ ಉದಾರವಾದಿ-ಕಾರ್ಪೋರೇಟ್ ಮಾರುಕಟ್ಟೆ ಆರ್ಥಿಕತೆ, ಸಮಕಾಲೀನ ಭಾರತದ ಆಳುವ ವರ್ಗಗಳಿಗೆ ಅಪ್ಯಾಯಮಾನವಾಗಿದೆ. ಈ ಸಾಧ್ಯಾಸಾಧ್ಯತೆಗಳ ನಡುವೆಯೇ ಬಿಜೆಪಿ “ಸಂವಿಧಾನ ಬದಲಾವಣೆ/ತಿದ್ದುಪಡಿ” ಎಂಬ ಭೂತವನ್ನು ಸೃಷ್ಟಿಸಿದ್ದು, ವಿರೋಧಿ ಬಣಗಳನ್ನು ಇದರ ಸುತ್ತಲೂ ಗಿರಕಿ ಹೊಡೆಯುವಂತೆ ಮಾಡಿದೆ. ಸಾರ್ವಜನಿಕ ಸಂಕಥನಗಳಲ್ಲೂ “ಸಂವಿಧಾನ vs ಮನುವಾದ” ಪ್ರಧಾನವಾಗಿ ಕಾಣುತ್ತಿದ್ದು, ಒಂದು ವೇಳೆ ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೆ ಭಾರತದಲ್ಲಿ ಮನುವಾದ ಜಾರಿಯಾಗುವುದು ಖಚಿತ ಎಂದು ಬಿಂಬಿಸಲಾಗುತ್ತಿದೆ. ಇದು ಆರೆಸ್ಸೆಸ್ ಮತ್ತು ಸಹಸಂಘಟನೆಗಳ ದೀರ್ಘಕಾಲಿಕ ಕಾರ್ಯಸೂಚಿ ಎನ್ನುವುದು ದಿಟವೇ ಆದರೂ, ಭಾರತವನ್ನು ನವ ಉದಾರವಾದಿ ಆರ್ಥಿಕತೆಯ ಪ್ರಯೋಗಶಾಲೆಯಾಗಿ ಪರಿವರ್ತಿಸುತ್ತಾ ದೇಶವನ್ನು ಆರ್ಥಿಕವಾಗಿ ಮಾರುಕಟ್ಟೆ ಕೇಂದ್ರಿತ ಬಂಡವಾಳಶಾಹಿ ರಾಷ್ಟ್ರವನ್ನಾಗಿ ಮಾಡಲು ಉತ್ಸುಕವಾಗಿರುವ ಬಿಜೆಪಿ ಮತ್ತು ಬಲಪಂಥೀಯ ಮಿತ್ರಪಕ್ಷಗಳಿಗೆ, ಇಂದಿಗೂ ಸ್ಪಷ್ಟ ವ್ಯಾಖ್ಯಾನ ಅಥವಾ ನಿರ್ವಚನೆಗೊಳಪಡದ ಆದರೂ ಬಳಕೆಯಲ್ಲಿರುವ ʼ ಮನುವಾದ ʼ ಅತ್ಯವಶ್ಯವೇನೂ ಅಲ್ಲ.
ತಳಸಮಾಜದ ಶೋಷಿತ ನೆಲೆಗಳು
ಸಾಂಪ್ರದಾಯಿಕ ಭಾರತೀಯ ಸಮಾಜದ ಜಾತಿ ಶ್ರೇಣೀಕರಣ, ಪಿತೃಪ್ರಧಾನತೆ ಮತ್ತು ಊಳಿಗಮಾನ್ಯ ಲಕ್ಷಣಗಳನ್ನು ಯಥಾಸ್ಥಿತಿಯಲ್ಲಿರಿಸುವ ಮೂಲಕ ಈಗಾಗಲೇ ಬಿಜೆಪಿ ನವ ಬಂಡವಾಳಶಾಹಿಯನ್ನು ಆಲಂಗಿಸಿಕೊಂಡಿದ್ದು, 76 ವರ್ಷಗಳ ಸಾರ್ವಭೌಮ ಗಣತಂತ್ರವನ್ನು ಆರ್ಥಿಕವಾಗಿ ವಸಾಹತು ಕಾಲಕ್ಕೆ ಮರಳಿಸುತ್ತಿದೆ. ತನ್ನ ಏಳು ದಶಕಗಳ ಸಾರ್ವಭೌಮ ಅಸ್ಮಿತೆಯನ್ನು ಕಳೆದುಕೊಳ್ಳುತ್ತಿರುವ ಭಾರತ ಮರುವಸಾಹತೀಕರಣಕ್ಕೊಳಗಾಗುತ್ತಿದ್ದು, ಈ ದಶಕಗಳುದ್ದಕ್ಕೂ ದೇಶದ ಶ್ರಮಜೀವಿಗಳು ಕಟ್ಟಿ ಬೆಳೆಸಿದ ಸಾರ್ವಜನಿಕ ಆಸ್ತಿಯೆಲ್ಲವನ್ನೂ ಕಳೆದುಕೊಳ್ಳುತ್ತಿದೆ. ದೇಶದ ಶೇ. 40ರಷ್ಟು ಸಂಪತ್ತನ್ನು , ಒಟ್ಟು ಆದಾಯದ ಶೇ. 22ರಷ್ಟನ್ನು ಪಡೆದಿರುವ , ಮೇಲ್ಪದರದ ಶೇ. 1ರಷ್ಟು ಸಿರಿವಂತರ ಸಮಾಜವೊಂದು ಈ ಸಾರ್ವಜನಿಕ ಸಂಪತ್ತನ್ನು ತನ್ನದಾಗಿಸಿಕೊಳ್ಳುತ್ತಿದೆ. ಈ ಮೇಲ್ಪದರ ಸಮಾಜವೇ ಶಿಕ್ಷಣ, ಆರೋಗ್ಯ, ಮಾಧ್ಯಮ, ಸಾರ್ವಜನಿಕ ಅವಕಾಶಗಳೆಲ್ಲವನ್ನೂ ತನ್ನದಾಗಿಸಿಕೊಂಡಿದ್ದು, ನವ ಉದಾರವಾದಕ್ಕೆ ಬೇಕಾದಂತಹ ಕಾರ್ಪೋರೇಟ್ ಮಾರುಕಟ್ಟೆ ಆರ್ಥಿಕತೆಯನ್ನು ನಿರ್ದೇಶಿಸಲು ಅಗತ್ಯವಾದ ರಾಜಕೀಯ ಪ್ರಾಬಲ್ಯವನ್ನೂ ಗಳಿಸಿಕೊಂಡಿದೆ.
ವರ್ತಮಾನ ಭಾರತದ ವಸ್ತುಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಭಾರತದ ಶೋಷಿತ, ಶ್ರಮಿಕ ವರ್ಗಗಳನ್ನು ಕಾಡಬೇಕಿರುವುದು ಈ ಬಂಡವಾಳಾಹಿಯ ಭೂತ. ನವ ಉದಾರವಾದ ತಳಮಟ್ಟದ ಸಮಾಜದಲ್ಲಿ ಸೃಷ್ಟಿಸುವ ಒಳಬಿರುಕುಗಳನ್ನು ಮತ್ತಷ್ಟು ವಿಘಟನೆಗೊಳಪಡಿಸಿ, ಶಾಶ್ವತವಾದ ಅಸಮಾನತೆಯ ಕಂದರಗಳನ್ನು ನಿರ್ಮಿಸುವಲ್ಲಿ ಜಾತಿ, ಧರ್ಮ ಹಾಗೂ ಸಾಮುದಾಯಿಕ ಅಸ್ಮಿತೆಗಳು ಮಹತ್ತರ ಪಾತ್ರ ವಹಿಸುತ್ತವೆ. ಉದ್ಯೋಗವಂಚಿತ ಮಧ್ಯಮ ವರ್ಗದ ಜನಸಂಖ್ಯೆಗೆ ದುರ್ಲಭವಾಗುತ್ತಿರುವ ಮೀಸಲಾತಿ ಅವಕಾಶಗಳಷ್ಟೆ ಗೋಚರಿಸುತ್ತದೆ. ಆದರೆ ತಳಮಟ್ಟಕ್ಕೆ ಇಳಿದು ನೋಡಿದಾಗ ಅರೆ ಶಿಕ್ಷಿತ, ಅರೆ ಅಕ್ಷರಸ್ಥ, ಅನಕ್ಷರಸ್ಥ ಸಮಾಜದ ಕೋಟ್ಯಂತರ ಜನತೆ, ವಿಶೇಷವಾಗಿ ಗ್ರಾಮೀಣ ಬಡಜನತೆ ಹಾಗೂ ಮಹಿಳಾ ಸಮುದಾಯಗಳು ಹಾಗೂ ಆದಿವಾಸಿಗಳು, ಮೀಸಲಾತಿಯ ಸೌಲಭ್ಯದಿಂದಲೂ ಅವಕಾವಂಚಿತರಾಗುತ್ತಿರುವುದನ್ನು ಗಮನಿಸಬಹುದು.
2024ರ ಚುನಾವಣೆಗಳಲ್ಲಿ ನಮ್ಮ ಕಣ್ಣಿಗೆ ಮೂಲತಃ ಗೋಚರಿಸಬೇಕಿರುವುದು ಎರಡು ಸಮಾಜಗಳು. ಮೊದಲನೆಯದು ಭಾರತದ ಶ್ರಮಿಕ ವರ್ಗದ ಏಳು ದಶಕಗಳ ದುಡಿಮೆಯ ಫಲವನ್ನು ತನ್ನದಾಗಿಸಿಕೊಳ್ಳಲು ಸಜ್ಜಾಗುತ್ತಿರುವ ಕಾರ್ಪೋರೇಟ್ ಮಾರುಕಟ್ಟೆ ಮತ್ತು ಬಂಡವಾಳಶಾಹಿ, ಇದನ್ನು ಪೋಷಿಸುತ್ತಿರುವ ಭಾರತದ ಅಧಿಕಾರ ರಾಜಕಾರಣ. ಎರಡನೆಯದು ಈ ಆರ್ಥಿಕತೆಯ ಲಾಭ ದಾಹಕ್ಕೆ ನಿರಂತರವಾಗಿ ಬಲಿಯಾಗುತ್ತಿರುವ ಶೋಷಿತ ತಳಸಮುದಾಯಗಳ ಬೃಹತ್ ಜನಸಂಖ್ಯೆ. ಈ ಸುಡುವಾಸ್ತವಗಳಿಗೆ ಜನಸಾಮಾನ್ಯರು ವಿಮುಖವಾಗಲೆಂದೇ ಬಿಜೆಪಿ “ಸಂವಿಧಾನ ಬದಲಾವಣೆ/ತಿದ್ದುಪಡಿ” ಎಂಬ ಭೂತವನ್ನು ಸೃಷ್ಟಿಸುತ್ತಿದೆ. ವಿಪರ್ಯಾಸವೆಂದರೆ ಅಧಿಕಾರಕ್ಕಾಗಿ ಹಾತೊರೆಯುತ್ತಿರುವ ಬಂಡವಾಳಿಗ ಪಕ್ಷಗಳು ಎರಡೂ ಸಮಾಜಗಳನ್ನು ಸಮಾನಾಂತರವಾಗಿ ನೋಡುತ್ತಿಲ್ಲ. ದೇಶದ ಪ್ರಧಾನ ವಿರೋಧ ಪಕ್ಷ ಎನಿಸಿಕೊಂಡಿರುವ ಕಾಂಗ್ರೆಸ್ ಸೇರಿದಂತೆ, ಜಾತಿ/ವ್ಯಕ್ತಿ ಕೇಂದ್ರಿತ ರಾಜಕಾರಣದ ನೆಲೆಯಾಗಿರುವ ಜೆಡಿಎಸ್, ಜೆಡಿಯು, ಆರ್‌ಜೆಡಿ, ಬಿಆರ್‌ಎಸ್, ಎಸ್‌ಪಿ, ಪ್ರಾದೇಶಿಕವಾಗಿ ಬಲಾಢ್ಯವಾಗಿರುವ ಎನ್‌ಸಿಪಿ, ಶಿವಸೇನೆ ಮತ್ತು ದಲಿತರನ್ನೇ ಪ್ರಧಾನವಾಗಿ ಪ್ರತಿನಿಧಿಸುವ ಬಿಎಸ್‌ಪಿ, ರಿಪಬ್ಲಿಕನ್ ಪಕ್ಷ ಈ ಯಾವುದೇ ಪಕ್ಷಗಳಿಗೂ ನವ ಉದಾರವಾದ ಮತ್ತು ಬಂಡವಾಳಶಾಹಿ ಮಾರುಕಟ್ಟೆ ಆರ್ಥಿಕತೆಯ ಬಗ್ಗೆ ಸ್ಪಷ್ಟ ನಿಲುವು ಕಾಣುವುದೇ ಇಲ್ಲ. ಇದು ದೊಡ್ಡ ವಿಪರ್ಯಾಸ ಮತ್ತು ದುರಂತ.
ಕಾರ್ಪೋರೇಟ್ ಮಾರುಕಟ್ಟೆಯ ಆಧಿಪತ್ಯ
ಮೋದಿ ಸರ್ಕಾರದ ಹತ್ತು ವರ್ಷಗಳ ಮಹಾದ್ರೋಹ ಅಥವಾ ದುರಾಡಳಿತದ ಅಂಕಿಅಂಶಗಳನ್ನು ಎಳೆಎಳೆಯಾಗಿ ತೆರೆದಿಡುವಾಗೆಲ್ಲಾ ಅಲ್ಲಿ ನಮಗೆ ಕಾಣಬೇಕಿರುವುದು ಈ “ನವ ಉದಾರವಾದದ” ನೆರಳು ಮತ್ತು ನವ ವಸಾಹತುಶಾಹಿಯ ಬಂಡವಾಳಶಾಹಿ ಕಾರ್ಪೋರೇಟ್ ಮಾರುಕಟ್ಟೆ. ಈ ಮಾರುಕಟ್ಟೆಯ ಆಶ್ರಯದಲ್ಲೇ ಬಿಜೆಪಿ ತನ್ನ ಬಹುಸಂಖ್ಯಾವಾದದ ಹಿಂದುತ್ವ ಕಾರ್ಯಸೂಚಿಯನ್ನು ವ್ಯವಸ್ಥಿತವಾಗಿ ಜಾರಿಗೊಳಿಸುತ್ತಿರುವುದನ್ನು ತಾತ್ವಿಕ ನೆಲೆಯಲ್ಲಿ ವಿಶ್ಲೇಷಿಸಬೇಕಿದೆ. ಶಿಕ್ಷಣ, ಆರೋಗ್ಯ, ಸಾಹಿತ್ಯ-ಸಾಂಸ್ಕೃತಿಕ ವಲಯ, ಸಂವಹನ ಕ್ಷೇತ್ರ ಮತ್ತು ಕೊನೆಗೆ ಧಾರ್ಮಿಕ ನೆಲೆಗಳೂ ಸಹ ಕಾರ್ಪೋರೇಟೀಕರಣಕ್ಕೆ ಒಳಗಾಗುತ್ತಿರುವುದರಿಂದ, ಮರಳಿ ಅಧಿಕಾರಕ್ಕೆ ಬಂದರೂ ಬಿಜೆಪಿಗೆ ಸಂವಿಧಾನ ಬದಲಾಯಿಸದೆಯೇ, ಭಾರತದ ಸಾಂವಿಧಾನಿಕ ಆಶಯಗಳನ್ನು ಉಲ್ಲಂಘಿಸಿ, ತನ್ನ ಹಿಂದುತ್ವ ಕಾರ್ಯಸೂಚಿಯನ್ನು ಅನುಷ್ಟಾನಗೊಳಿಸುವ ಸಕಲ ಅವಕಾಶಗಳೂ ಇವೆ. ಇದಕ್ಕೆ ಕಾರಣ ಅಂಬೇಡ್ಕರ್ ಅನುಯಾಯಿಗಳೆಂದು ಎದೆತಟ್ಟಿಕೊಳ್ಳುವ ಅಂಬೇಡ್ಕರ್‌ವಾದಿ ಪಕ್ಷಗಳು, ಸಂಘಟನೆಗಳು ಹಾಗೂ ಇವುಗಳನ್ನು ಉತ್ತೇಜಿಸುವ ವಿಶಾಲ ಬೌದ್ಧಿಕ ವಲಯದ ಅವಕಾಶವಾದಿ ಧೋರಣೆ.
ಈ ಚುನಾವಣೆಗಳಲ್ಲೂ ಸಹ ಅಂಬೇಡ್ಕರ್‌ವಾದಿ ಸಂಘಟನೆಗಳು , ದಲಿತ ಚಳುವಳಿಗಳು ಬಿಜೆಪಿಯ ಬೆನ್ನೆಲುಬಾಗಿ ನಿಂತಿರುವುದನ್ನು ದೇಶಾದ್ಯಂತ ಗುರುತಿಸಬಹುದು. ಕರ್ನಾಟಕದಲ್ಲೇ ದಲಿತ ಸಂಘಟನೆಗಳು ಒಕ್ಕೊರಲಿನಿಂದ ಸಂವಿಧಾನ ರಕ್ಷಣೆಗಾಗಿ ಪಣತೊಟ್ಟು ಬಿಜೆಪಿಯನ್ನು ಸೋಲಿಸಲು ಕರೆ ನೀಡುತ್ತಿದ್ದರೂ, ದಲಿತ ಸಮುದಾಯದ ಒಂದು ವರ್ಗ ಬಿಜೆಪಿಯೊಡನೆ ನಿಂತಿದೆ. ಈ ತಾತ್ವಿಕ ಬೆಂಬಲ ಹಾಗೂ ಚುನಾವಣಾ ರಕ್ಷಾ ಕವಚ ಇರುವವರೆಗೂ ಬಿಜೆಪಿಗಾಗಲೀ, ಆರೆಸ್ಸೆಸ್‌ಗಾಗಲೀ ಸಂವಿಧಾನ ಬದಲಾಯಿಸುವ ಅಗತ್ಯತೆಯೇ ಕಾಣುವುದಿಲ್ಲ. ʼಶೋಷಿತರುʼ ಎಂಬ ದೊಡ್ಡ ಆವರಣದಲ್ಲಿ ಒಳಗೊಳ್ಳಬಹುದಾದ ಎಲ್ಲ ಸಮುದಾಯಗಳೂ ಕಳೆದ ಹತ್ತು ವರ್ಷಗಳ ಬಿಜೆಪಿ ಆಳ್ವಿಕೆಯಲ್ಲಿ ತಮ್ಮ ಬದುಕು ಕಟ್ಟಿಕೊಳ್ಳಲು ಹೆಣಗಾಡಿರುವುದನ್ನು ಗುರುತಿಸಬಹುದು. ಇದಕ್ಕೆ ಮೂಲ ಕಾರಣ ಭಾರತ ಅನುಸರಿಸುತ್ತಿರುವ ನವ ಉದಾರವಾದಿ ಮಾರುಕಟ್ಟೆ ಆರ್ಥಿಕ ನೀತಿಗಳು ಮತ್ತು ಕಾರ್ಪೋರೇಟ್ ಬಂಡವಾಳಶಾಹಿಯನ್ನು ಪೋಷಿಸುವಂತಹ ಬೃಹದಾರ್ಥಿಕ ಆಡಳಿತ ನೀತಿಗಳು. ಸಂವಿಧಾನವನ್ನು ರಕ್ಷಿಸುವ ವಾಗ್ದಾನ ನೀಡುವ ಬಂಡವಾಳಿಗ ಪಕ್ಷಗಳಾವುವೂ ಈ ಆರ್ಥಿಕತೆಯ ವಿರುದ್ಧ ಒಂದು ಸ್ಪಷ್ಟ ತಾತ್ವಿಕ ನಿಲುವು ವ್ಯಕ್ತಪಡಿಸುತ್ತಿಲ್ಲ.
ಮೇಲಾಗಿ ಭಾರತದ ಅಧಿಕಾರ ರಾಜಕಾರಣವನ್ನು ನಿರ್ದೇಶಿಸುತ್ತಿರುವ ಮಾರುಕಟ್ಟೆ ಆರ್ಥಿಕತೆಯು ಎಲ್ಲ ಬೂರ್ಷ್ವಾ (ಬಂಡವಾಳಿಗ) ಪಕ್ಷಗಳನ್ನೂ ಆವರಿಸಿಕೊಂಡಿರುವುದರಿಂದ, ರಾಜಕೀಯ ಪಕ್ಷಗಳ ಸಂವಿಧಾನ ಬದ್ಧತೆಯೇ ಪ್ರಶ್ನಾತೀತವಾಗುತ್ತಿದೆ. ತಮ್ಮದೇ ಆದ ಜಾತಿ ಕೂಟಗಳನ್ನು ಮತಬ್ಯಾಂಕುಗಳನ್ನಾಗಿ ಮಾಡಿಕೊಂಡಿರುವ ಹಲವು ಪ್ರಾದೇಶಿಕ ಪಕ್ಷಗಳು ಸಂವಿಧಾನ ಬದ್ಧತೆಯನ್ನು ಮೇಲ್ನೋಟಕ್ಕೆ ಪ್ರದರ್ಶಿಸಿದರೂ, ಸಂವಿಧಾನದ ಸಮಾನತೆಯ ಆಶಯಗಳನ್ನೇ ಮಣ್ಣುಗೂಡಿಸುವ ನವ ಉದಾರವಾದ ಮತ್ತು ಕಾರ್ಪೋರೇಟ್ ಮಾರುಕಟ್ಟೆ ಆರ್ಥಿಕತೆಯನ್ನು ಬೆಂಬಲಿಸಲು ಹಾತೊರೆಯುತ್ತವೆ. ಶೋಷಣೆಯ ಮೂಲವನ್ನು ಜಾತಿ ಚೌಕಟ್ಟುಗಳಿಂದಾಚೆಗೂ ನೋಡುವ ಕ್ಷಮತೆ, ವ್ಯವಧಾನವನ್ನು ಕಳೆದುಕೊಂಡಿರುವ ಅವಕಾಶವಾದಿ ಪಕ್ಷಗಳು, ರಾಜಕೀಯ ನಾಯಕರು ತಮ್ಮ ಸ್ವಾರ್ಥ ರಾಜಕಾರಣದಿಂದ ಅಸಂಖ್ಯಾತ ಶೋಷಿತರ ಹಿತಾಸಕ್ತಿಗಳನ್ನು ಬಲಿಕೊಡುತ್ತಿರುವುದನ್ನು ಪ್ರಸಕ್ತ ಚುನಾವಣೆಗಳಲ್ಲೇ ಗುರುತಿಸಬಹುದು.
ಭವಿಷ್ಯದ ಆಯ್ಕೆಗಳು
ಈ ಅವಕಾಶವಾದಿ ರಾಜಕಾರಣ, ಸೈದ್ಧಾಂತಿಕ ದಿವಾಳಿತನ ಹಾಗೂ ತಾತ್ವಿಕ ಇಬ್ಬಂದಿತನ ಪಕ್ಷಗಳಲ್ಲಿ ಜೀವಂತವಾಗಿರುವವರೆಗೂ ಬಿಜೆಪಿಗೆ ಸಂವಿಧಾನ ಬದಲಿಸುವ ಅಗತ್ಯತೆ ಕಾಣುವುದಿಲ್ಲ. ಇದೇ ಸಂವಿಧಾನದ ಚೌಕಟ್ಟಿನೊಳಗೇ ತನ್ನ ಹಿಂದುತ್ವ ರಾಜಕಾರಣದ ಕಾರ್ಯಸೂಚಿಯನ್ನು ಜಾರಿಗೊಳಿಸುತ್ತದೆ. ತನ್ಮೂಲಕ ಸಾಂವಿಧಾನಿಕ ಆಶಯಗಳನ್ನು ಮತ್ತಷ್ಟು ಶಿಥಿಲಗೊಳಿಸಲಾಗುತ್ತದೆ. ಪ್ರಜಾಪ್ರಭುತ್ವವೂ ದುರ್ಬಲವಾಗುತ್ತದೆ. ತಳಮಟ್ಟದಲ್ಲಿ ಸಂವಿಧಾನ ರಕ್ಷಣೆಗಾಗಿ ಹೋರಾಡುವುದು ನಮ್ಮ ಪ್ರಥಮ ಆದ್ಯತೆಯಾಗುವುದು ಹೌದು ಆದರೆ ಸಂವಿಧಾನಕ್ಕೆ ಭೌತಿಕವಾಗಿ ಚ್ಯುತಿ ಬಾರದಂತೆ ಸಾಂವಿಧಾನಿಕ ಮೌಲ್ಯಗಳನ್ನು ಶಿಥಿಲಗೊಳಿಸುವ ಆಳ್ವಿಕೆಯ ತಂತ್ರಗಾರಿಕೆಯನ್ನು ಸೋಲಿಸುವುದು ನಮ್ಮ ಪ್ರಥಮ ಆಯ್ಕೆಯಾಗಬೇಕಿದೆ. ಇಲ್ಲಿ ನವ ಉದಾರವಾದ ಮತ್ತು ಬಂಡವಾಳಶಾಹಿ ಮಾರುಕಟ್ಟೆ ಆರ್ಥಿಕತೆ ಶೋಷಿತ ಸಮುದಾಯಗಳ ಪ್ರಥಮ ಎದುರಾಳಿಯಾಗಿರುತ್ತದೆ.
ಪ್ರಜಾಪ್ರಭುತ್ವದ ರಕ್ಷಣೆ ಎಂದರೆ ಸಮತೆಯ ಸಮಾಜದ, ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ಸಮಾನತೆ ಮತ್ತು ಭ್ರಾತೃತ್ವದ, ಬಹುತ್ವದ ರಕ್ಷಣೆ. ಭಾರತದ ಸಂವಿಧಾನ ಇದಕ್ಕೆ ಅಡಿಪಾಯ. ಈ ತಳಪಾಯವನ್ನು ಅಲುಗಾಡಿಸುವ ಧಾರ್ಮಿಕ, ಮತೀಯ ಶಕ್ತಿಗಳನ್ನು ಸೋಲಿಸುವುದರೊಂದಿಗೇ, ಈ ಬುನಾದಿಯನ್ನು ಸಡಿಲಗೊಳಿಸುತ್ತಲೇ ಹಂತಹಂತವಾಗಿ ಶಿಥಿಲಗೊಳಿಸುವ ನವ ಉದಾರವಾದ ಮತ್ತು ಬಂಡವಾಳಶಾಹಿಯನ್ನೂ ಸೋಲಿಸುವುದು, ಪ್ರಜಾತಂತ್ರವಾದಿಗಳ ಆದ್ಯತೆಯಾಗಬೇಕು. ಶ್ರಮಿಕ ವರ್ಗಗಳ ದೃಷ್ಟಿಯಿಂದ ಶಿಥಿಲಾವಸ್ಥೆಯ ಸಂವಿಧಾನಕ್ಕೂ ಬದಲಾದ ಸಂವಿಧಾನಕ್ಕೂ ಇರುವ ಅಂತರ ಬಹಳ ಕಡಿಮೆ. ಹಾಗಾಗಿ ಸಂವಿಧಾನದ ತಾತ್ವಿಕ ಅಡಿಪಾಯವನ್ನು ಭವಿಷ್ಯದ ಪೀಳಿಗೆಗಾಗಿ ರಕ್ಷಿಸುವ ನಿಟ್ಟಿನಲ್ಲಿ, ಫಲಾನುಭವಿ ಜನಸಂಖ್ಯೆ ಶ್ರಮಿಸಬೇಕಿದೆ.
2024ರಲ್ಲಿ ಬಿಜೆಪಿಗೆ ಬಹುಮತ ಏಕೆ ಕೂಡದು, , ಈ ಚುನಾವಣೆಗಳು ಏಕೆ ನಿರ್ಣಾಯಕ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ. ಭಾರತದ ದುಡಿಯುವ ವರ್ಗಗಳ ಪ್ರಥಮ ಎದುರಾಳಿ ನವ ಉದಾರವಾದ ಮತ್ತು ಕಾರ್ಪೋರೇಟ್ ಮಾರುಕಟ್ಟೆ ಆರ್ಥಿಕತೆ. ಇದನ್ನು ಹಿಮ್ಮೆಟ್ಟಿಸಿದರೆ ಹಿಂದುತ್ವ ರಾಜಕಾರಣವೂ ಹಿಮ್ಮೆಟ್ಟುತ್ತದೆ. ಈ ನಿಟ್ಟಿನಲ್ಲಿ ಯಾವುದೇ ಬಂಡವಾಳಿಗಳಿಗೆ ಸ್ಪಷ್ಟ ನಿಲುವು ಇಲ್ಲದಿರುವುದರಿಂದ , ಒಂದು ಪರ್ಯಾಯದತ್ತ ಆಲೋಚನೆ ಮಾಡುವ ಜವಾಬ್ದಾರಿ ಎಡಪಕ್ಷಗಳು ಹಾಗೂ ಶೋಷಿತ ಸಮುದಾಯಗಳನ್ನು ಪ್ರತಿನಿಧಿಸುವ ಎಲ್ಲ ಜನಪರ ಸಂಘಟನೆಗಳು, ಮಹಿಳಾ ಸಂಘಟನೆಗಳ ಮೇಲಿದೆ. ಹಾಗಾಗಿಯೇ 2024ರ ಚುನಾವಣೆಗಳು ಶೋಷಿತ- ದುಡಿಯುವ ಜನತೆಯ ದೃಷ್ಟಿಯಿಂದ ನಿರ್ಣಾಯಕವೂ ಆಗುತ್ತದೆ.
-೦-೦-೦-