ಕಚ್ಚಾ ತೈಲದ ಬೆಲೆ ತೀವ್ರ ಕುಸಿತ-  ಆದರೆ ಜನತೆಗಿಲ್ಲ ಇಳಿಕೆಯ ಲಾಭ ಎಸ್‌.ಆರ್‌.ವೆಂಕಟೇಶ್‌ ಪ್ರಸಾದ್

 2008ರಲ್ಲಿ ಕ್ರೂಡ್‌ ಆಯಿಲ್‌  ಬ್ಯಾರೆಲ್‌ಗೆ 147 ಡಾಲರ್‌ ಇದ್ದಾಗ ಪೆಟ್ರೋಲ್‌ ಲೀಟರಿಗೆ ಜಸ್ಟ್‌ ರೂ. 57.15  ಆಗಿತ್ತು. ಆದರೆ ಇವತ್ತು ಬ್ಯಾರೆಲ್‌ಗೆ 61.97 ಡಾಲರ್‌ ಆಗಿದ್ದರೂ ಲೀಟರಿಗೆ. ರೂ.102.92,ಯಾಕೆ ಹೀಗೆ, ತುಸು ಯೋಚಿಸಿ?

ಕಚ್ಚಾ ತೈಲದ ಬೆಲೆ ತೀವ್ರ ಕುಸಿತ-  ಆದರೆ ಜನತೆಗಿಲ್ಲ ಇಳಿಕೆಯ ಲಾಭ                                                                                                                      ಎಸ್‌.ಆರ್‌.ವೆಂಕಟೇಶ್‌ ಪ್ರಸಾದ್

 

ʼ ಬೆವರ ಹನಿʼ ವಿಶೇಷ

  ಎಸ್.ಆರ್.ವೆಂಕಟೇಶ ಪ್ರಸಾದ್

 

 

      ಭಾರತ, ವಿಶ್ವದ ಮೂರನೇ ಅತ್ಯಧಿಕ ತೈಲ ಬಳಕೆ ದೇಶ.ಶೇಕಡ 88 ರಷ್ಟು ಕಚ್ಚಾ ತೈಲ ವಿದೇಶಗಳಿಂದಲೇ ಆಮದಾಗಬೇಕು. ಕಳೆದ ಒಂದು ವರ್ಷದ ಅವಧಿಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಶೇಕಡ 22.5ರಷ್ಟು ಇಳಿಕೆಯಾಗಿದೆ. 2020 ರ ನಂತರದ ವಾರ್ಷಿಕ ಕುಸಿತದಲ್ಲಿ ಇದೇ ದೊಡ್ಡ ಪತನ.ಆದರೂ,ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆ ಆಗುತ್ತಿಲ್ಲ.

 

      2008ರ ಜುಲೈನಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಬ್ಯಾರೆಲ್ (1 ಬ್ಯಾರೆಲ್=158.98 ಲೀಟರ್)ಗೆ 140-147 ಡಾಲರ್ ಗೆ ಏರಿಕೆಯಾಗಿತ್ತು.ಆಗ,ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ₹57.15, ಡೀಸೆಲ್ ಲೀಟರ್ ಗೆ ₹39.15.ದೆಹಲಿಯಲ್ಲಿ ಪೆಟ್ರೋಲ್ ಲೀಟರ್ ಗೆ ₹51-52, ಡೀಸೆಲ್‌ ₹ 35-36 ಇತ್ತು.

 

      ಶನಿವಾರ (ಜ.10) ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬ್ಯಾರೆಲ್ ಗೆ 61.97  ಡಾಲರ್‌.ಇತ್ತೀಚಿನ ತಿಂಗಳುಗಳಲ್ಲಿ 60 ಡಾಲರ್ ಸುತ್ತ-ಮುತ್ತಲೇ ಇದೆ. ಆದರೆ,ಬೆಂಗಳೂರಿನಲ್ಲಿ ಪೆಟ್ರೋಲ್ ಲೀಟರ್ ಬೆಲೆ  ₹102.92, ಡೀಸೆಲ್ ಬೆಲೆ ₹90.99.ಭಾರತ, ರಷ್ಯಾದಿಂದ 2022-2025 ರ ವರೆಗೆ ಮಾರುಕಟ್ಟೆ ದರಕ್ಕಿಂತ ಶೇಕಡ 35-40 ರಷ್ಟು ರಿಯಾಯಿತಿ ದರದಲ್ಲಿ ಬಳಕೆಯ ಶೇಕಡ 35.1 ರಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿದೆ.ಆದರೂ,ಬೆಲೆ ಇಳಿಕೆ ಆಗುತ್ತಿಲ್ಲ.

 

     2008 ರಲ್ಲಿ ತೈಲ ಉತ್ಪನ್ನಗಳ ಬೆಲೆ ನಿಗದಿ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿ ಇತ್ತು. ಬೆಲೆ ನಿಯಂತ್ರಿಸಲು ಸರ್ಕಾರವೇ ನಷ್ಟವನ್ನು ಭರಿಸುತ್ತಿತ್ತು.ಇಲ್ಲವೇ, ಸಬ್ಸಿಡಿಯನ್ನು ಹೆಚ್ಚಿಸುತ್ತಿತ್ತು.

  

      ಈಗ, ತೈಲ ಬೆಲೆಯನ್ನು ಅಂತರರಾಷ್ಟ್ರೀಯ ದೈನಂದಿನ ಬೆಲೆಗಳಿಗೆ ಅನುಗುಣವಾಗಿ ನಿಗದಿ ಮಾಡುವ ಅಧಿಕಾರವನ್ನು ತೈಲ ಪೂರೈಕೆ  ಕಂಪೆನಿಗಳಿಗೆ ನೀಡಲಾಗಿದೆ. ತೈಲ ಕಂಪನಿಗಳು ಪ್ರತಿ ದಿನ ಆಮದು ದರಕ್ಕೆ ಅನುಗುಣವಾಗಿ ಬೆಲೆಗಳನ್ನು ನಿರ್ಧರಿಸುತ್ತವೆ.ಬೆಳಗ್ಗೆ ಆರು ಗಂಟೆಯ ವೇಳೆಗೆ ಅದನ್ನು ಪ್ರಕಟಿಸುತ್ತವೆ ಎಂದು ಕೇಂದ್ರ ಸರ್ಕಾರ ಹೇಳುತ್ತದೆಯಾದರೂ  ಆಮದು ದರ ಹೆಚ್ಚಿದಾಗ ನಮ್ಮ ತೈಲ ಕಂಪನಿಗಳು ಏರಿಕೆಯ  ಕೆಲಸ ಮಾಡುತ್ತವೆ. ಕುಸಿದಾಗ ಬೆಲೆ ಇಳಿಸುತ್ತಿಲ್ಲ. 2024ರ ಮಾರ್ಚ್ ನಲ್ಲಿ  ಮಾತ್ರ ಎರಡು  ರೂಪಾಯಿ ಇಳಿಕೆ ಮಾಡಿತ್ತು. ಅದಕ್ಕೂ ಮುನ್ನ 2022 ರ  ಮೇ ತಿಂಗಳಿನಿಂದ ಬೆಲೆ ಸ್ಥಿರವಾಗಿತ್ತು.

 

  ದುಬಾರಿ ತೆರಿಗೆ: ಕೇಂದ್ರ ಸರ್ಕಾರವು ಪೆಟ್ರೋಲ್ ಮೇಲೆ ಪ್ರತಿ ಲೀಟರ್ ಗೆ  ₹19.90, ಡೀಸೆಲ್ ಮೇಲೆ ಪ್ರತಿ ಲೀಟರ್ ಗೆ ಸುಮಾರು ₹15.80 ಅಬಕಾರಿ ತೆರಿಗೆ ವಿಧಿಸುತ್ತಿದೆ. ರಾಜ್ಯ ಸರ್ಕಾರ, ಪ್ರತಿ ಲೀಟರ್ ಪೆಟ್ರೋಲ್ ಮೇಲೆ ಶೇಕಡ 29.84, ಡೀಸೆಲ್ ಮೇಲೆ ಶೇಕಡ 21.17 ರಷ್ಟು ಮಾರಾಟ ತೆರಿಗೆ ಹೇರಿದೆ. ನಾವು ಪಾವತಿಸುವ ಹಣದಲ್ಲಿ ಶೇಕಡ 50-55 ರಷ್ಟು ತೆರಿಗೆ ರೂಪದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ  ಪಾಲಾಗುತ್ತಿದೆ. 

       ಅಂದರೆ, ಕಚ್ಚಾ ತೈಲ ಖರೀದಿ ಬೆಲೆ, ಸಂಸ್ಕರಣೆ, ಸಾಗಣೆ ವೆಚ್ಚ, ವಿಮೆ ಮತ್ತು ಡೀಲರ್ ಕಮಿಷನ್‌ ನ ಒಟ್ಟು ಮೊತ್ತಕ್ಕೆ  ಸಮನಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತೆರಿಗೆ ಇದೆ. ಇಂಧನ ತೆರಿಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಲಭವಾಗಿ ಬರುವ ತೆರಿಗೆ ಆದಾಯ. ಅದನ್ನು ಕಡಿಮೆ ಮಾಡಿಕೊಳ್ಳಲು ಒಪ್ಪರು ಇವರು.

 

      ಜಾಗತಿಕ ಕಚ್ಚಾ ತೈಲ ಬೆಲೆ ಕುಸಿದಾಗ ನಿಯಮದ ಪ್ರಕಾರ ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಬೇಕು.ಆದರೆ,ಆ ಅವಕಾಶವನ್ನು ಕೇಂದ್ರ ಸರ್ಕಾರ ಅಬಕಾರಿ ಸುಂಕ ಹೆಚ್ಚಳಕ್ಕೆ ಬಳಸಿಕೊಳ್ಳುತ್ತಿದೆ. ಸುಂಕವನ್ನು ಹಳೆಯ ಬೆಲೆಯ ಮಟ್ಟಕ್ಕೆ ಹೆಚ್ಚಿಸಿ ಹಳೆ ಬೆಲೆಯನ್ನೇ ಕಾಯ್ದುಕೊಳ್ಳುತ್ತಿದೆ. ಅಬಕಾರಿ ಸುಂಕ ಏರಿಕೆಯಿಂದ ಯಾವುದೇ ಹೆಚ್ಚಳದ ಹೊರೆ ಇಲ್ಲ ಎಂದು ಸಬೂಬು ಹೇಳುತ್ತಿದೆ. ಏರಿಕೆಯನ್ನು ತನ್ನ ಆದಾಯ ಹೆಚ್ಚಿಸಿಕೊಳ್ಳಲು ಅಥವಾ ಹಣಕಾಸಿನ ಕೊರತೆಯನ್ನು ನಿರ್ವಹಿಸಲು ಬಳಸಿಕೊಳ್ಳುತ್ತಿದೆ. ಇದರಿಂದ ಹೊರೆ ಇಳಿಕೆಯ ಲಾಭ ಸಾರ್ವಜನಿಕರಿಗೆ ವರ್ಗಾವಣೆಯಾಗದೆ ಹಾಗೆಯೇ ಭಾರದ ಹೊರೆ ಮುಂದುವರಿಯುತ್ತಿದೆ.  

 

     ರೂಪಾಯಿ ಅಪಮೌಲ್ಯದ ಬಿಸಿ: ಕಚ್ಚಾ ತೈಲವನ್ನು ಬಹುತೇಕ ಡಾಲರ್ ನೀಡಿಯೇ ಖರೀದಿಸಬೇಕು. ಡಾಲರ್ ಎದುರು ರೂಪಾಯಿ 90 ರ ಆಸುಪಾಸಿಗೆ ಅಪಮೌಲ್ಯಗೊಂಡಿರುವುದರಿಂದ ಡಾಲರ್ ಖರೀದಿಗೆ ಹೆಚ್ಚು ಮೌಲ್ಯದ ರೂಪಾಯಿಗಳನ್ನು ಬಳಸಬೇಕಿದೆ. ಪರಿಣಾಮ ಆಮದು ದುಬಾರಿಯಾಗುತ್ತಿದೆ. ಹಾಗಾಗಿ, ಕೇಂದ್ರ ಸರ್ಕಾರ ವ್ಯಾಪಾರ ಕೊರತೆ ಅಂತರವನ್ನು ಸುಧಾರಿಸಲು ಬೆಲೆ ಇಳಿಸದೆ ಯಥಾ ಸ್ಥಿತಿಯನ್ನು ಮುಂದುವರಿಸುತ್ತಿದೆ. 

 

  ತೈಲ ಕಂಪನಿಗಳ ಲಾಭ ಹೆಚ್ಚಳ: ಸಾರ್ವಜನಿಕ ವಲಯದ ಪ್ರಮುಖ ತೈಲ ಮಾರಾಟ ಕಂಪನಿಗಳು ಈಗಿನ ಇಳಿಕೆ ಸಂದರ್ಭವನ್ನು ಹಿಂದಿನ ನಷ್ಟ ಸರಿದೂಗಿಸಿಕೊಳ್ಳಲು ಮತ್ತು ಲಾಭವನ್ನು ಹೆಚ್ಚಿಸಿಕೊಳ್ಳಲು ಬಳಸಿಕೊಳ್ಳುತ್ತಿವೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್(ಐಓಸಿ) 2025-26 ನೇ ಸಾಲಿನ ಮೊದಲಾರ್ಧದಲ್ಲಿ ₹14, 999 ಕೋಟಿ  ನಿವ್ವಳ ಲಾಭ ಗಳಿಸಿದೆ. ಇದು ಕಳೆದ ವರ್ಷದ ಇದೇ ಅವಧಿಗಿಂತ ₹3,274 ಕೋಟಿಗೂ ಅಧಿಕ.

 

   ಭಾರತ್ ಪೆಟ್ರೋಲಿಯಂ (ಬಿಪಿಸಿಎಲ್) ₹6,443 ಕೋಟಿ ಲಾಭ ಗಳಿಸಿದೆ. ಇದು ಹಿಂದಿನ ವರ್ಷದ ಇದೇ ಅವಧಿಗಿಂತ ₹2,397 ಕೋಟಿಗೂ ಹೆಚ್ಚು. ಹಿಂದುಸ್ಥಾನ್ ಪೆಟ್ರೋಲಿಯಂ(ಎಚ್ ಪಿಸಿಎಲ್)ನ ಅರ್ಧ ವಾರ್ಷಿಕ ಲಾಭ ₹8,201 ಕೋಟಿ. ಇದು,ಕಳೆದ ವರ್ಷದ ಇದೇ ಅವಧಿಯ ಲಾಭಕ್ಕಿಂತ ಶೇಕಡ 731 ರಷ್ಟು ಅಧಿಕ.

 

 ತೈಲ ಪೂರೈಕೆ ದೇಶಗಳು:

ಭಾರತವು ತನ್ನ ತೈಲ ಅಗತ್ಯದ ಶೇಕಡ 88 ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ.ಅಂದರೆ, ಪ್ರತಿದಿನ  47-50 ಲಕ್ಷ ಬ್ಯಾರೆಲ್. 2021 ರವರೆಗೆ ಆಮದಿನಲ್ಲಿ ರಷ್ಯಾದ ಪಾಲು ಶೇಕಡ 1.7ರಷ್ಟು ಇತ್ತು. ಆದರೆ, ಉಕ್ರೇನ್ ಮೇಲೆ ಯುದ್ಧ ಆರಂಭಿಸಿದ  ಕಾರಣಕ್ಕೆ ರಷ್ಯಾ ಮೇಲೆ ಅಮೆರಿಕ, ಕೆನಡಾ ಮತ್ತು ಯುರೋಪ್ ರಾಷ್ಟ್ರಗಳು ನಿರ್ಬಂಧ ವಿಧಿಸಿದವು. ಹಾಗಾಗಿ,ರಷ್ಯಾ ರಿಯಾಯಿತಿ ದರದಲ್ಲಿ ತೈಲ ಮಾರಾಟ ಮಾಡಲು ಆರಂಭಿಸಿತು. ಅದನ್ನು ಬಳಸಿಕೊಂಡ ಭಾರತ 2022-2025 ರ ವರೆಗೆ ಶೇಕಡ 35-40 ರಷ್ಟು ರಿಯಾಯಿತಿ ದರದಲ್ಲಿ ಶೇಕಡ 35-40 ರಷ್ಟು ಕಚ್ಚಾ ತೈಲವನ್ನು ಖರೀದಿಸುತ್ತಿತ್ತು. ಈಗ,ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ಅತ್ಯಧಿಕ ಸುಂಕ ಹೇರಿಕೆಯ ಕಾರಣಕ್ಕಾಗಿ ಖರೀದಿಯನ್ನು ಕಡಿಮೆ ಮಾಡುತ್ತಿದೆ. ಉಳಿದಂತೆ,ಇರಾಕ್, ಯುಎಇ ಮತ್ತು ಅಮೆರಿಕದಿಂದ ಕಚ್ಚಾ ತೈಲ ಆಮದು ಆಗುತ್ತಿದೆ.

 

    ಯುರೋಪಿನ 'ಇಂಧನ ಮತ್ತು ಶುದ್ಧ ಗಾಳಿ ಕುರಿತ ಸಂಶೋಧನಾ ಕೇಂದ್ರ'(ಸಿಆರ್ ಇಎ)ದ ಅಂದಾಜಿನ ಪ್ರಕಾರ, ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ಆರಂಭವಾದ ನಂತರದಲ್ಲಿ ಭಾರತವು ರಷ್ಯಾದಿಂದ  ಸುಮಾರು ₹15.19 ಲಕ್ಷ ಕೋಟಿ ಮೌಲ್ಯದ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿದೆ.

 

       ವಿಶ್ವದ ಅತ್ಯಧಿಕ ತೈಲ ಉತ್ಪಾದನೆಯ ದೇಶ ವೆನೆಜುವೆಲಾ.ಆ ದೇಶದ ಮೇಲೆ ಅಮೆರಿಕ ದಾಳಿ ನಡೆಸಿ ಅದರ ಅಧ್ಯಕ್ಷರನ್ನು ತನ್ನ ದೇಶಕ್ಕೆ ಎಳೆದೊಯ್ದಿರುವ ಪರಿಣಾಮ ಅಲ್ಲಿನ ತೈಲ ಉದ್ಯಮ ಅಮೆರಿಕದ ಹಿಡಿತಕ್ಕೆ ಸಿಲುಕಿದೆ. ಭಾರತಕ್ಕೆ ಅದರಿಂದ ಲಾಭ ಆಗಲಿದೆ ಎಂದು ನಿರೀಕ್ಷಿಸಲಾಗಿದೆ.

 

    ಹಿಂದೆ, ಭಾರತವು, ವೆನೆಜುವೆಲಾದಿಂದ  ಪ್ರತಿ ನಿತ್ಯ ನಾಲ್ಕು ಲಕ್ಷ ಬ್ಯಾರೆಲ್ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿತ್ತು. ಅಮೆರಿಕವು ಆ ದೇಶದ  ಮೇಲೆ ನಿರ್ಬಂಧ ವಿಧಿಸಿದ ನಂತರ  2020 ರಿಂದ ಆಮದು ನಿಂತಿತು. 

  ವೆನೆಜುವೆಲಾ ದೇಶವು ಅಮೆರಿಕ ಮತ್ತು ಇತರ ದೇಶಗಳ ನೆರವಿನಿಂದ ಮತ್ತೆ ತೈಲ ಉತ್ಪಾದನೆಯನ್ನು ಆರಂಭಿಸಿದ ನಂತರದಲ್ಲಿ ಭಾರತವು ಪ್ರಮುಖ ಖರೀದಿದಾರ ದೇಶಗಳ ಪೈಕಿ ಒಂದಾಗಲಿದೆ ಎಂದು ಅಂದಾಜಿಸಲಾಗಿದೆ.

 

       ತೆರಿಗೆ ಪದ್ಧತಿ ಬದಲಾಗಬೇಕು: ದುಬಾರಿ ಇಂಧನ ಸಾಮಾನ್ಯ ಜನರ ಬದುಕಿನ ಮೇಲೆ ತೀವ್ರ ಸ್ವರೂಪದ ದುಷ್ಪರಿಣಾಮಗಳನ್ನು ಉಂಟುಮಾಡುತ್ತಿದೆ. ಡೀಸೆಲ್ ಬೆಲೆಯಂತೂ ಮೊದಲೇ ದುಬಾರಿ ಮತ್ತು ಅನಿಶ್ಚಿತತೆಯಿಂದ ಕೂಡಿರುವ ಕೃಷಿ ಚಟುವಟಿಕೆಗಳನ್ನು ಮತ್ತಷ್ಟು ತುಟ್ಟಿಯಾಗಿಸಿದೆ. ಸಾಗಣೆಯ ವೆಚ್ಚ  ಹೆಚ್ಚಿ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ದಾರಿ ಮಾಡಿಕೊಟ್ಟಿದೆ.

 

       ತೈಲ ಉತ್ಪನ್ನಗಳ ದರ ಕೈಗೆಟುಕುವಂತೆ ತೆರಿಗೆ ಪದ್ಧತಿ ಬದಲಾಗಬೇಕು. ಈಗಿನ ತೆರಿಗೆ ಪದ್ಧತಿಯ ಬದಲಿಗೆ  ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ)ಪದ್ಧತಿ ಅಡಿ ತೈಲ ಉತ್ಪನ್ನಗಳನ್ನು  ತರಬೇಕೆನ್ನುವ ಕೂಗು ಆಗಾಗ ಕೇಳಿ ಬರುತ್ತದೆ. ಕೇಂದ್ರ ಸರ್ಕಾರ, ಜಿಎಸ್ ಟಿಯ ಶೇಕಡ 18ರ ಸ್ಲ್ಯಾಬ್ ಗೆ  ತೈಲ ಉತ್ಪನ್ನವನ್ನು ಸೇರಿಸಿದರೆ ಆಗ ಭಾರಿ ಪ್ರಮಾಣದಲ್ಲಿ ತೆರಿಗೆ ಇಳಿಯುತ್ತದೆ.ಸರ್ಕಾರಗಳೇ ನಡೆಸುವ ಶೋಷಣೆ ನಿಲ್ಲುತ್ತದೆ. ಜನಾಭಿಪ್ರಾಯ ತೀವ್ರಗೊಂಡರಷ್ಟೇ ಇದು ಸಾಧ್ಯ.

  ಆ ಎರಡು ಘಟನೆಗಳು

    ಇದೇ ಸಂದರ್ಭದಲ್ಲಿ ಎರಡು ಘಟನೆಗಳನ್ನು ಹೇಳಬೇಕು.ಕಚ್ಚಾ ತೈಲ ಬ್ಯಾರಲ್ ಗೆ 140-147  ಡಾಲರ್ ಗೆ ತಲುಪಿದ ಸಂದರ್ಭದಲ್ಲಿ ರಾಜ್ಯದಲ್ಲಿ ಅಂದು ಅಧಿಕಾರದಲ್ಲಿದ್ದ ಬಿಜೆಪಿ ನೇತೃತ್ವದ ಸರ್ಕಾರ ಪೆಟ್ರೋಲ್ ಮೇಲಿನ ಮಾರಾಟ ತೆರಿಗೆಯನ್ನು  ಶೇಕಡ 28ರಿಂದ ಶೇಕಡ 25 ಕ್ಕೆ, ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಶೇಕಡ 20 ರಿಂದ ಶೇಕಡ 18ಕ್ಕೆ ಇಳಿಸಿತು. ಇದರಿಂದ ಪೆಟ್ರೋಲ್ ಬೆಲೆಯಲ್ಲಿ ₹1.74 ಇಳಿಕೆಯಾಗಿ ₹57.15 ಕ್ಕೆ, ಡೀಸೆಲ್ ಬೆಲೆಯಲ್ಲಿ 65 ಪೈಸೆ ಇಳಿಕೆಯಾಗಿ ಲೀಟರ್ ಗೆ ₹39.15 ಕ್ಕೆ ನಿಗದಿಗೊಂಡಿತ್ತು .

 

    2024ರ ಜೂನ್ 15ರಂದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬ್ಯಾರಲ್ ಗೆ 82.38 ಡಾಲರ್ ಇತ್ತು. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ ₹99.84, ಡೀಸೆಲ್‌ ಬೆಲೆ ಲೀಟರ್ ಗೆ ₹88.93 ಆಗಿತ್ತು. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷದ ನೇತೃತ್ವದ ಸರ್ಕಾರ ಮಾರಾಟ ತೆರಿಗೆಯನ್ನು ಪೆಟ್ರೋಲ್ ಗೆ ಶೇಕಡ 25.92 ರಿಂದ ಶೇಕಡ 29.84ಕ್ಕೆ, ಡೀಸೆಲ್ ಗೆ ಶೇಕಡ 14.3 ರಿಂದ ಶೇಕಡ 18.4 ಕ್ಕೆ  ಏರಿಕೆ ಮಾಡಿತು. ಇದರಿಂದ ಪೆಟ್ರೋಲ್ ಮತ್ತು ಡೀಸೆಲ್ ತಲಾ ₹3ರಷ್ಟು ದುಬಾರಿ ಆದವು.