ಪಿಯ ತು ಅಬ್ ತೊ ಆಜಾ..! 

" ನಮ್ಮಂಥ ನೃತ್ಯಗಾರ್ತಿಯರನ್ನು, ನಮ್ಮ  ನೃತ್ಯವನ್ನು ಐಟಂ ಗರ್ಲ್ಸ್, ಐಟಂ ಸಾಂಗ್ಸ್ ಎಂದು ಕರೆಯಬೇಡಿ. ನಾವು ನಮ್ಮ ನೃತ್ಯ ನಿಮಗೆ ಮುದ ಕೊಡುವ ಸಂಗತಿಗಳಾಗಿವೆ. ಖುಷಿ ಕೊಡುವ ಸಂಗತಿಗಳನ್ನು ತಿರಸ್ಕಾರದಿಂದ ನೋಡಬೇಡಿ..." ಎಂದು ಹೆಲೆನ್ ಇತ್ತೀಚೆಗೆ ಹೇಳಿರುವ ಮಾತುಗಳು ದಶಕಗಳ ಕಾಲ ಆಕೆಯ ಹೃದಯದಲ್ಲಿ ಹೆಪ್ಪುಗಟ್ಟಿದ ನೋವನ್ನು ಬಿಂಬಿಸುತ್ತವೆ"- ಕೇಶವರೆಡ್ಡಿ ಹಂದ್ರಾಳ

ಪಿಯ ತು ಅಬ್ ತೊ ಆಜಾ..! 


 ಗೋಲ್ಕೊಂಡ ಮತ್ತು ಸಾಲಾರ್ ಜಂಗ್ ಮ್ಯೂಸಿಯಂ ಸುತ್ತಿಕೊಂಡು ಬಂದಿದ್ದರೂ ಥಂಡಿ ವಾತಾವರಣವಿದ್ದುದ್ದರಿಂದ ಅಷ್ಟೇನೂ ಆಯಾಸವೆನಿಸಿರಲಿಲ್ಲ. ಆದರೂ ಮನದಲ್ಲಿ ಒಂದು ರೀತಿಯ ಮಬ್ಬು ಮಬ್ಬು ವಾತಾವರಣ ಮುಸುಕಿಕೊಂಡಿತ್ತು. ನಾಲ್ಕು ತಿಂಗಳ ಹಿಂದೆ ಸತ್ತ ನನ್ನ ಹೆಂಡತಿ ಚಂದ್ರಮ ನನ್ನ ಬದುಕಲ್ಲಿ ಒಂದು ರೀತಿಯ vaccum ಮತ್ತು darkness ತುಂಬಿಬಿಟ್ಟಿದ್ದಾಳೆ. ಆ vaccumನ್ನು ಡೆಸ್ಟಾಯ್ ಮಾಡಲು ಅವಳಿಷ್ಟದ ಊರುಗಳಲ್ಲಿ ಅವಳ ಅನುಪಸ್ಥಿತಿಯಲ್ಲಿ ತಿರುಗುತ್ತಿದ್ದೇನೆ. ಗೋಲ್ಕೊಂಡದ ಕೋಟೆಯ ಬಾಗಿಲಲ್ಲಿರುವ ಇನ್ನೂರ ನಲವತ್ತು ಕೇಜಿಯ ಸೀಸಿದ ಗುಂಡನ್ನು ಸುಮಾರು ಹದಿನೈದು ವರ್ಷಗಳ ಹಿಂದೆ ಐದಾರು ಇಂಚಿನಷ್ಟು ಎತ್ತರಕ್ಕೆ ಎತ್ತಿದಾಗ ( ನನ್ನ ಯಾವ ಸ್ನೇಹಿತರೂ ಅದನ್ನು ಅಲುಗಾಡಿಸಲೂ ಆಗಲಿಲ್ಲ) ತನ್ನ ಸ್ನೇಹಿತೆಯರ ಮತ್ತು ಅವರ ಗಂಡಂದಿರ ಎದುರು ಖುಷಿ ಮತ್ತು ಜಂಭದಿಂದ ನನ್ನ ಬೆನ್ನು ಹತ್ತಿ ಕೂಸಿಮರಿ ಬಿದ್ದಿದ್ದಳು. " ನೋಡ್ರೊ ಅಪ್ಪ ಎಷ್ಟು ಸ್ಟ್ರಾಂಗ್..." ಎಂದು ಮಕ್ಕಳೊಂದಿಗೆ ಖುಷಿ ಹಂಚಿಕೊಂಡಿದ್ದಳು. ಇನ್ನು ಸಾಲಾರ್ ಜಂಗ್ ಮ್ಯೂಸಿಯಂ ನೋಡಲು ಒಂದು ದಿನಪೂರಾ ತೆಗೆದುಕೊಂಡಿದ್ದಳು. ಅವಳ ನೆನಪಿನಿಂದಾಗಿಯೇ ಹೀಗೆ ಹೈದರಾಬಾದಿಗೆ ಫ್ಲೈಟ್ ಹತ್ತಿ ಬಂದು ಬಿಟ್ಟಿದ್ದೆ. ಏಕೆ ಇವಳು ಹೀಗೆ ಕಾಡುತ್ತಿದ್ದಾಳೆಂದು ಒಮ್ಮೊಮ್ಮೆ ಅನ್ನಿಸುತ್ತದೆ. ಇವಳ ನೆನಪನ್ನು ಹೃದಯ ಮತ್ತು ಮನಸ್ಸುಗಳಿಂದ ಹೇಗೆ ಕಿತ್ತು ಬಿಸಾಡುವುದೆಂದು ಕಂಗಾಲಾಗಿ ಕುಳಿತಿದ್ದೇನೆ. ಅವಳ ಚೆಲುವು, ಅವಳ ಮಾತು, ಅವಳ ಹಾಸ್ಯ, ಅವಳ ಭಾಷೆ, ಅವಳ ಬುದ್ದಿವಂತಿಕೆ, ಅವಳ ಕರುಣೆ, ಅವಳ ಸಂಯಮ, ಅವಳ ನಿರಾಕರಣಾ ಶಕ್ತಿ...ಎಷ್ಟೊಂದು ಗುಣಗಳನ್ನು ಅವಳಲ್ಲಿ ಸೃಷ್ಟಿಕರ್ತ ಹೇಗೆ ತುಂಬಿದ್ದನೋ ? ಒಟ್ಟಾರೆ ನನ್ನ ಬದುಕಿನ ಭಾಷೆಯ ವ್ಯಾಕರಣವೇ ಆಗಿದ್ದವಳು ನನ್ನ ಅಂದಾಲ ರಾಕ್ಷಸಿ. ಅಂಥವಳನ್ನು ನನ್ನಿಂದ ಇಷ್ಟು ಬೇಗ ಏಕೆ ಬೇರ್ಪಡಿಸಿದನೋ ಕಳ್ಳ ಲಯಕರ್ತ ಶಿವ ! ಜಗತ್ತಿನಲ್ಲಿ ಪ್ರತಿಯೊಂದು ವಸ್ತು, ಸಂಗತಿ, ಸಂಬಂಧ, ಸ್ನೇಹ, ಪ್ರೀತಿ- ಪ್ರೇಮ, ಕಾಮ, ಸಂವೇದನೆಗಳಿಗೆ ಖಂಡಿತವಾಗಿಯೂ substitute ಇದ್ದೇ ಇರುತ್ತದೆಂದು ಸ್ನೇಹಿತರು ಸಂತೈಸುತ್ತಿದ್ದರೂ ನಾನಿನ್ನೂ ಗೊಂದಲದಲ್ಲೇ ಬಿದ್ದಿದ್ದೇನೆ. ಯಾರು ಏನೇ ಹೇಳಿದರೂ ಜಗತ್ತು ನಿರಂತರವಾಗಿ ತನ್ನ ಪಾಡಿಗೆ ತಾನು ಚಲಿಸುತ್ತಲೇ ಇರುತ್ತದೆ. ಮತ್ತು ಜೀವಜಗತ್ತಿನಲ್ಲಿ ಪ್ರತಿಯೊಂದು ಜೀವಿಯೂ ಒಂದೊಂದು ಸಪರೇಟ್ entityಯೇ ಆಗಿರುತ್ತವೆ. ಒಂದೇ ದೇಹದಲ್ಲಿ ಎರಡೆರಡು ಆತ್ಮಗಳನ್ನು, ಎರಡೆರಡು ಹೃದಯಗಳನ್ನು, ಎರಡೆರಡು ಕರುಳುಗಳನ್ನು ಸೃಷ್ಟಿಸದೆ ಸೃಷ್ಟಿಕರ್ತ ಬ್ರಹ್ಮ ಎಷ್ಟೊಂದು ಒಳ್ಳೆಯ ಕೆಲಸ ಮಾಡಿದ್ದಾನೆ. ಹಾಗಾಗಿಯೇ ಪ್ರತಿಯೊಬ್ಬ ವ್ಯಕ್ತಿಯೂ ತನಗಿಷ್ಟ ಬಂದಾಗ, ತನ್ನ ಸರದಿ ಬಂದಾಗ departureಗೆ ರೆಡಿಯಾಗುವುದು. ಮತ್ತು ಸಮಯಕ್ಕೆ ಹೊಂದಿಕೊಳ್ಳುವುದು. ಮನದ ಹೊಯ್ದಾಟಗಳು ಮುಖದಲ್ಲಿ ಪ್ರತಿಬಿಂಬಿಸುತ್ತಿರುವಾಗ ಮಗ ಸಿರಿವೆನ್ನೆಲ ನನ್ನ ಬಳಿ ಬಂದು ಭುಜದ ಮೇಲೆ ಕೈ ಇಟ್ಟಿದ್ದ. " ಏನಣ್ಣ .." ಎಂದಿದ್ದೆ. " ರೆಡಿ ಆಗಪ್ಪ, ಯಾವುದೋ ಡ್ಯಾನ್ಸ್ ಬಾರ್ ಅಂತೆ. ಒಂದೆರಡು ಗಂಟೆ ಟೈಮ್ ಸ್ಪೆಂಡ್ ಮಾಡಿ ಬಾ. ಫಿಶ್ ಐಟಮ್ಸ್ ಚನ್ನಾಗಿರ್ತವಂತೆ. ಅಮ್ಮನಿಗೆ ಫಿಶ್ ಅಂದ್ರೆ ತುಂಬಾ ಇಷ್ಟ ಅಲ್ವಾ. ಒಂದೆರಡು ಮಗ್ ಬಿಯರ್ ಕುಡ್ಕೊಂಡು ಡ್ಯಾನ್ಸ್ ನೋಡ್ಕೊಂಡ್ ಬಾ. ಕಾರ್ ಅರೆಂಜ್ ಮಾಡಿದ್ದೀನಿ. ನೀನು ಅಲ್ಲಿ ಇರೋವರ್ಗು ಇದ್ದು ಕರ್ಕೊಂಡು ಬರ್ತಾನೆ " ಎಂದಿದ್ದ. ನನ್ನ ಇಬ್ಬರು ಮಕ್ಕಳೂ ನನಗೆ ಸ್ನೇಹಿತರೇ. ಹಿಂದೆ ನನ್ನ ಹೆಂಡತಿಗೆ ಹೇಳದಂತೆ ಐದಾರು ಸಾರಿ ಡ್ಯಾನ್ಸ್ ಕ್ಲಬ್ಬುಗಳಿಗೆ ಬೆಂಗಳೂರು ಮತ್ತು ಮಂಗಳೂರುಗಳಲ್ಲಿ ಹೋಗಿದ್ದುಂಟು. ನಂತರ ಹೆಂಡತಿಗೆ ಹೇಳಿ " ಬಲು ಪಾಕ್ಡನಪ್ಪ ನೀನು..." ಎಂದು ಉಗಿಸಿಕೊಂಡಿದ್ದೂ ಉಂಟು.


 ನಾನು ಜ್ಯೂಬಿಲಿ ಹಿಲ್ಸ್ ನ ಆ ಡ್ಯಾನ್ಸ್ ಬಾರ್ ಪ್ರವೇಶಿಸಿದಾಗ ಎಂಟು ಗಂಟೆಯಾಗಿತ್ತು. ಬಿಯರ್ ಗೆ ಫಿಶ್ ತವ್ವಾ ಹೇಳಿದ್ದೆ. ಎಂಟೂವರೆಗೆ ಮಂದ ಬೆಳಕಿನ ಸ್ಟೇಜ್ ಮೇಲೆ ಏಳೆಂಟು ಜನ ಹುಡುಗಿಯರು ಡ್ಯಾನ್ಸ್ ಪ್ರಾರಂಭಿಸಿದ್ದರು. ಮೊದಲ ಹಾಡು ' ಪಿಯ ತು ಅಬ್ ತೊ ಆಜಾ...' ಆಗಿತ್ತು. ಹಾಡಿಗೆ ತಕ್ಕಂತೆ ಬಳಕುತ್ತಾ ಮಾಡುತ್ತಿದ್ದ ಅವರ ಮಾದಕ ನೃತ್ಯದಲ್ಲಿ ನನ್ನ ಹೆಂಡತಿ ಚಂದ್ರಮನ ನೆನಪು ಹೇಗೆ ಕರಗಿಹೋಯಿತೋ !.


1976 ರಲ್ಲಿ ನಾನು ಆನಂದರಾವ್ ಸರ್ಕಲ್ ನಲ್ಲಿರುವ ರೇಣುಕಾಚಾರ್ಯ ಕಾಲೇಜಿನಲ್ಲಿ ಎರಡನೆಯ ಪಿಯುಸಿ ಓದುತ್ತಿದ್ದೆ. ಒಂದು ದಿನ ನನ್ನ ಹೈಸ್ಕೂಲು ಕ್ಲಾಸ್ಮೇಟೂ ಆಗಿದ್ದ ಮತ್ತಾಗ ಪಿಯುಸಿಯಲ್ಲಿ ಕೂಡಾ ಕ್ಲಾಸ್ಮೇಟ್ ಆಗಿ ಆತ್ಮೀಯ ಗೆಳೆಯನಾಗಿದ್ದ ನಾಗನಾಥ ಸಂಗಮ್ ಥಿಯೇಟರಿನಲ್ಲಿ ಒಳ್ಳೆಯ ಹಿಂದಿ ಸಿನಿಮಾ ಹಾಕಿದ್ದಾರೆಂದು ಮಾರ್ನಿಂಗ್ ಶೋ ಗೆ ಕರೆದಿದ್ದ. ಈಗಾಗಲೇ ಹಿಂದಿ ವಿರೋಧಿ ಚಳವಳಿಗಳಲ್ಲಿ ಭಾಗವಹಿಸಿದ್ದ ನಾನು ಹಿಂದಿ ಸಿನಿಮಾಗಳಿಗೆ ಹೋಗುತ್ತಿರಲಿಲ್ಲ. " ಬಾರೊಲೋ ಭಾಷೆ ಯಾವುದಾದರೇನಂತೆ ಸಿನಿಮಾ ಇಂಪಾಟೆಂಟ್ ಅಲ್ವೇನೋ " ಎಂದು ಬುದ್ದಿವಾದ ಹೇಳಿ (ನಾನು ಅಮಿತಾಬ್ ಬಚ್ಚನ್ ಅಭಿಮಾನಿಯಾಗಲು ಈ ನಾಗನಾಥನೇ ಕಾರಣ) ಬಿಡದೆ ಕರೆದುಕೊಂಡು ಹೋಗಿದ್ದ. ಸಿನಿಮಾ ಹೆಸರು ಕಾರವಾನ್ ( caravan) ಅಂತ. ನಾಗನಾಥ ಮರಾಠಿಯಾಗಿದ್ದರಿಂದ ಅಲ್ಲಲ್ಲಿ ಹಿಂದಿ ಭಾಷೆಯನ್ನು ಕನ್ನಡಕ್ಕೆ ಅನುವಾದಿಸಿ ಡೈಲಾಗುಗಳ ಅರ್ಥ ಹೇಳುತ್ತಿದ್ದ. ಸಿನಿಮಾ ಸುಮಾರಾಗಿ ಅರ್ಥವಾಗುತ್ತಿತ್ತು. ಸಿನಿಮಾದ ಇಬ್ಬರು ಹಿರೋಯಿನ್ ಗಳಾದ ಅರುಣಾ ಇರಾನಿ ಮತ್ತು ಆಶಾ ಪರೇಖ್ ತುಂಬಾ ಸುಂದರವಾಗಿದ್ದರು. " ಹೆಲೆನ್ ಕ್ಲಬ್ ಡ್ಯಾನ್ಸ್ ಬರ್ತದೆ ನೋಡಲೋ ಈಗ ಎಷ್ಟು ಸಖತ್ತಾಗಿದೆ ಅಂತ " ಎಂದು ಕುತೂಹಲ ಮೂಡಿಸಿದ್ದ ಅವನು. ಈ ಮೊದಲೇ ಅವನು ಸಿನಿಮಾ ನೋಡಿದ್ದನೇನೋ. ಹಾಗೆ ಅವನು ಹೇಳಿದ ಹತ್ತು ನಿಮಿಷದಲ್ಲೇ ಕ್ಲಬ್ ಡ್ಯಾನ್ಸ್ ಪ್ರಾರಂಭವಾಗಿತ್ತು. ಹೆಲೆನ್ ಎಂಬ ಕ್ಲಬ್ ಡ್ಯಾನ್ಸರನ್ನು ಅದೇ ಮೊದಲು ನೋಡುತ್ತಿದ್ದದ್ದು. " ಪಿಯ ತು ಅಬ್ ತೊ ಆಜಾ.." ಎಂದು ಹೆಲೆನ್ ಬಳ್ಳಿಯಂತೆ ಬಳಕುತ್ತಾ ನೃತ್ಯ ಮಾಡುತ್ತಿದ್ದರೆ ಇಡೀ ಥಿಯೇಟರ್ ನಿಶ್ಯಬ್ದದ ಮಡಿಲಲ್ಲಿ ಮಲಗಿತ್ತು. ಮದ್ಯದ ಗ್ಲಾಸನ್ನು ತನ್ನ ಹಣೆಯ ಮೇಲಿರಿಸಿಕೊಂಡು ಹಿಂದಕ್ಕೆ ಬಾಗುತ್ತಾ ಹೆಲೆನ್ ನೃತ್ಯ ಮಾಡುತ್ತಿದ್ದ ಪರಿಗೆ ಯಾವುದೋ ಮಾಯಾ ಜಗತ್ತಿಗೆ ಜಾರಿಬಿದ್ದವನಂತೆ ಬೆಕ್ಕಸಬೆರಗಾಗಿದ್ದೆ ನಾನು. ಸಿನಿಮಾ ಮುಗಿದು ಥಿಯೇಟರ್ ನಿಂದ ಹೊರಗೆ ಬಂದಿದ್ದರೂ ಹೆಲೆನಳ ನೃತ್ಯ ಮತ್ತು ಮಾದಕ ಸಂಗೀತ ಹಾಗೂ ಧ್ವನಿ ಹೊತ್ತ ' ಪಿಯ ತು ಅಬ್ ತೊ ಆಜಾ..' ಹಾಡು ನನ್ನ ಮನಸ್ಸು ಮತ್ತು ಶರೀರವನ್ನು ಅಲ್ಲಾಡಿಸುತ್ತಲೇ ಇತ್ತು. ಮಾರನೆಯ ದಿನ ನಾಗನಾಥನಿಗೆ ಹೇಳದೆ ಛಿಚಿಡಿಚಿvಚಿಟಿ ಸಿನಿಮಾಕ್ಕೆ ಮತ್ತೆ ಮಾರ್ನಿಂಗ್ ಶೋಗೆ ಹೋಗಿದ್ದೆ. ಆವಾಗಿನಿಂದ ಹೆಲೆನ್ ಇರುತ್ತಿದ್ದ ಸಿನಿಮಾಗಳಿಗೆ ಕರೆದುಕೊಂಡು ಹೋಗೆಂದು ನಾಗನಾಥನಿಗೆ ತಾಕೀತು ಮಾಡಿದ್ದೆ. ಅಲ್ಲಿಂದ ಶೋಲೆ ಸಿನಿಮಾದ ಮೆಹಬೂಬ ಮೆಹಬೂಬ ಎಂಬ ಹಾಡಿನವರೆಗೂ ನಾಗನಾಥ ಖುದ್ದು ಜೊತೆಯಲ್ಲಿದ್ದು ಹೆಲೆನಳ ನೃತ್ಯವನ್ನು ಕಣ್ತುಂಬಿಸಿದ್ದ.


 ' ಅಣು ' ಕಾದಂಬರಿಯನ್ನು ಬರೆಯವುದಕ್ಕೆ ಎರಡು ವರ್ಷಗಳ ಮೊದಲು ಧಾರಾವಿ ಮತ್ತು ಕಾಮಾಟಿಪುರಗಳಿಗೆ ಭೇಟಿ ನೀಡಲು ಮುಂಬಯಿಗೆ ಹೋಗಿದ್ದಾಗಿನ ಸಂದರ್ಭದ ಒಂದು ಘಟನೆಯನ್ನಿಲ್ಲಿ ಹೇಳುತ್ತೇನೆ. ಆತ, ಅಂದರೆ ನನಗೆ ಆ ಎರಡೂ ಏರಿಯಾಗಳನ್ನು ತೋರಿಸಲು ನಿಗದಿಪಡಿಸಿದಂಥ ವ್ಯಕ್ತಿ ನನ್ನನ್ನು ನಾಗ್ಪಾಡ್ ನ ಒಂದು ಹಳೆಯ ಕಟ್ಟಡಕ್ಕೆ ಕರೆದುಕೊಂಡು ಹೋಗಿದ್ದ. ಅದು ಒಂದು ಕೋಣೆಯ ಸಣ್ಣ ಚಾಲ್ ಆಗಿತ್ತು. ಎಪ್ಪತ್ತು, ಎಂಬತ್ತರ ದಶಕದಲ್ಲಿ ಮುಂಯಿಯ ಪ್ರಮುಖ ಡ್ಯಾನ್ಸ್ ಬಾರ್ ಗಳಲ್ಲಿ ನರ್ತಕಿಯಾಗಿದ್ದರಂತೆ ಆಕೆ. ಬೆಳಿಗ್ಗೆ ಹತ್ತು ಗಂಟೆಗೆ ನಾವು ಹೋದಾಗ ಬಿಸಿ ಬಿಸಿ ಪೂರಿ, ಆಲುಬಾಜಿ ಮಾಡುತ್ತಿದ್ದರು. ತಿಂಡಿಯಾಗಿದೆಯೆಂದರೂ ಬಿಡದೆ ನಮಗೂ ಒಂದೊಂದು ಪೂರಿ ಆಲೂಬಾಜಿ ಹಾಕಿಕೊಟ್ಟದ್ದರು. ರುಚಿ ಅದ್ಬುತವಾಗಿತ್ತು. ಆಕೆಯ ಮಾತುಗಳಲ್ಲೆ ಆಕೆಯ ಕಥೆಯನ್ನು ಕೆಲವೇ ಕೆಲವು ಪದಗಳಲ್ಲಿ ಹೇಳಿಬಿಡುತ್ತೇನೆ ಕೇಳಿ.


 " ನನ್ನ ಹೆಸರು ಚಾಂದನಿ. ಔರಂಗಾಬಾದ್ ಬಳಿಯ ಸಣ್ಣ ಹಳ್ಳಿಯವಳು. ಪಿ ಯು ಸಿ ಪಾಸಾಗಿ ಔರಂಗಾಬಾದಿನ ಫಸ್ಟ್ ಗ್ರೇಡ್ ಕಾಲೇಜಿನಲ್ಲಿ ಫಸ್ಟ್ ಇಯರ್ ಡಿಗ್ರಿಗೆ ಸೇರಿದ್ದೆ. ಹಿಂದಿ ತಾರೆ ಮಧುಬಾಲಳಂತಿರುವೆನೆAದು ಕಾಲೇಜಿನಲ್ಲೇ ಅಲ್ಲದೆ ಇಡೀ ಔರಂಗಬಾದಿನಲ್ಲೆ ಜನರು ಮಾತನಾಡಿಕೊಳ್ಳುತ್ತಿದ್ದರು. ಮತ್ತು ನನ್ನ ಧ್ವನಿ ಅತ್ಯಂತ ಮಧುರವಾಗಿತ್ತು. ಹೈಸ್ಕೂಲಿನಿಂದಲೇ ಹಾಡುಗಾರಿಕೆಯ ನೂರಾರು ಸ್ಪರ್ಧೆಗಳಲ್ಲಿ ಮೊದಲನೇ ಬಹುಮಾನ ಗಳಿಸಿ ಖ್ಯಾತಳಾಗಿದ್ದೆ. ಜೊತೆಗೆ ಸಿನಿಮಾ ಹಾಡುಗಳಿಗೆ ನೃತ್ಯವನ್ನು ಕೂಡಾ ಮಾಡುತ್ತಿದ್ದೆ. " ಥೇಟ್ ನೀನು ಹೆಲೆನ್‌ಳಂತೆ ಡ್ಯಾನ್ಸ್ ಮಾಡ್ತೀಯ. ನೀನು ಬಾಂಬೆ ಸೇರಿದರೆ ನಟನೆ ಮತ್ತು ನೃತ್ಯದಲ್ಲಿ ಖ್ಯಾತಿ ಗಳಿಸಿ ಕೈತುಂಬಾ ಹಣ ಸಂಪಾದಿಸಬಹುದೆಂದು ಎಲ್ಲರೂ ಹೇಳುತ್ತಿದ್ದ ಮಾತುಗಳು ಹೇಳದೆ ಕೇಳದೆ ನನ್ನೆದೆಗೆ ಇಳಿದುಬಿಟ್ಟಿದ್ದವು... ಅಂಥ ಚಿಗುರು ಕನಸು ಅರಳುತ್ತಿರುವಾಗಲೇ ಬಾಂಬೆಯಿಂದ ನನ್ನ ದೊಡ್ಡಪ್ಪನ ಮಗ ಬಂದಿದ್ದ. ತಾನೇ ನನ್ನನ್ನು ಬಾಂಬೆಯಲ್ಲಿ ಓದಿಸುತ್ತೇನೆಂದಾಗ ಅಮ್ಮನ ಜೊತೆ ನಾನೂ ಸಂಭ್ರಮಿಸಿ ರೈಲು ಹತ್ತಿದ್ದೆ. ನಾನು ಬಾಂಬೆಯ ಆತನ ಸಣ್ಣ ಚಾಲ್‌ನಲ್ಲಿ ಕಾಲಿಟ್ಟಾಗ ಆತನ ಹೆಂಡತಿ ಹೆರಿಗೆಗೆಂದು ವಾರದ ಹಿಂದೆ ತಾನೇ ತೌರಿಗೆ ಹೋಗಿರುವುದು ತಿಳಿಯಿತು. ಅಷ್ಟೆ, ನಾನು ತುಂಬಾ ವಿವರಿಸಿ ಹೇಳುವುದಿಲ್ಲ. ಒಂಬತ್ತು ತಿಂಗಳಲ್ಲಿ ಮೂರು ಬಾರಿ ಅಭಾರ್ಶನ್ ಮಾಡಿಸಿದ್ದ. ಯಾರದೋ ನೆರವಿನಿಂದ ಹೆಲೆನ್ ಜೊತೆ ಸಿನಿಮಾ ನೃತ್ಯದಲ್ಲಿ ನೃತ್ಯ ಮಾಡುವ ಚಾನ್ಸ್ ಕೊಡಿಸಿದ್ದ. ನನಗೆ ಅಂಥ ಚಾನ್ಸ್ಗಳು ಪದೇ ಪದೇ ಸಿಗತೊಡಗಿದವು. ಹೆಂಡತಿಯನ್ನು ಕರೆತರುವುದಾಗಿ ಹೋದ ಆತ ವಾಪಸ್ಸು ಬರಲಿಲ್ಲ. ಬೈಕ್ ಆಕ್ಸಿಡೆಂಟ್‌ನಲ್ಲಿ ಸತ್ತು ಹೋಗಿದ್ದ. ನಾನು ನಾಗ್ಪಾಡ್ ಸೇರಿದ್ದೆ. ಡ್ಯಾನ್ಸ್ ಬಾರ್‌ಗಳಲ್ಲಿ ನರ್ತಕಿಯಾದೆ. ಕಾರವಾನ್ ಚಿತ್ರದ ' ಪಿಯ ತು ಅಬ್ ತೊ ಆಜಾ..' ಹಾಡಿಗೆ ಅದೆಷ್ಟು ಸಾವಿರ ಸಾರಿ ಡ್ಯಾನ್ಸ್ ಮಾಡಿರುವೆನೋ. ಅದರಿಂದ ದುಡಿದ ಹಣದಿಂದಲೇ ಈ ಚಾಲ್ ಕೊಂಡೆ. ಜೊತೆಗೆ ಇಪ್ಪತ್ತು ಸಾವಿರ ಬಡ್ಡಿ ಬರುವಷ್ಟು ಠೇವಣಿ ಬ್ಯಾಂಕಿನಲ್ಲಿ ಇಟ್ಟಿದ್ದೇನೆ. ಈ ವಯಸ್ಸಿನಲ್ಲೂ ಡ್ಯಾನ್ಸ್ ಬಾರ್‌ಗಳಲ್ಲಿ ಆ ಹಾಡಿಗೆ ನಾನು ಮಾಡುವ ನೃತ್ಯಕ್ಕೆ ಜನ ಹುಚ್ಚೆದ್ದು ಕುಣಿಯುತ್ತಾರೆ. ಏನಿಲ್ಲವೆಂದರೂ ಈಗಲೂ ವಾರಕ್ಕೊಮ್ಮೆ ಹೋಗಿ ಡ್ಯಾನ್ಸ್ ಮಾಡುತ್ತೇನೆ. ತಿಂಗಳಿಗೆ ಹದಿನೈದಿಪ್ಪತ್ತು ಸಾವಿರ ದುಡಿಯುತ್ತೇನೆ. ನನ್ನಂತೆ ಅನೇಕ ಡ್ಯಾನ್ಸ್ ಹುಡುಗಿಯರು ಇವೊತ್ತಿಗೂ ಈ ಹಾಡಿನಿಂದ ಬದುಕು ಸಾಗಿಸುತ್ತಿದ್ದಾರೆ. ಆದರೆ ಸಿನಿಮಾ ಜಗತ್ತಿನಲ್ಲಿ ಹೆಣ್ಣಿಗೆ ಬೆಲೆ ಇರೋದು ಯೌವನ ಮತ್ತು ಸೌಂದರ್ಯ ಎರಡೂ ಇದ್ದಷ್ಟು ದಿನ ಮಾತ್ರ..."


 ಅರವತ್ತು, ಎಪ್ಪತ್ತು, ಎಂಬತ್ತರ ದಶಕಗಳಲ್ಲಿ ಹಿಂದಿ ಸಿನಿಮಾ ತೆರೆಯ ಮೇಲೆ ಹೆಲೆನ್ ವಿಜೃಂಭಿಸಿದಂತೆ ಬೇರೆ ಯಾವ ನಟನಟಿಯರೂ ವಿಜೃಂಭಿಸಲಿಲ್ಲ. ಕೆಲವು ನಿರ್ಮಾಪಕರು ಒಂದೇ ಸಿನಿಮಾದಲ್ಲಿ ಹೆಲೆನಳ ಮೂರ್ನಾಲ್ಕು ಕ್ಲಬ್ ಡ್ಯಾನ್ಸುಗಳನ್ನು ಇಡುತ್ತಿದ್ದರು. ಹೆಲೆನ್ ಡ್ಯಾನ್ಸ್ ಇದ್ದರೆ ಮಾತ್ರ ಸಿನಿಮಾಗಳಿಗೆ ಹೋಗುತ್ತಿದ್ದ ಒಂದು ವರ್ಗವೇ ಆ ದಿನಮಾನಗಳಲ್ಲಿ ಇತ್ತು. ಹೀರೋಯಿನ್‌ಗಳಿಗಿಂತಲೂ ಹೆಲೆನಳಿಗೆ ಹೆಚ್ಚು ಬೇಡಿಕೆಯಿತ್ತು. ಹಾಗಾಗಿಯೇ ಹೆಲೆನ್ ತನ್ನ ವೃತ್ತಿ ಕಾಲದಲ್ಲಿ 700 ಕ್ಕಿಂತಲೂ ಹೆಚ್ಚು ಸಿನಿಮಾಗಳಲ್ಲಿ ನಟಿಸಲು ಸಾಧ್ಯವಾಯಿತು. ಹೆಲೆನ್ ರಬ್ಬರ್ ಬ್ಯಾಂಡ್‌ನಂತೆ ತನ್ನ ದೇಹವನ್ನು ಬಗ್ಗಿಸುತ್ತಿದ್ದ ಪರಿಗೆ ಡೈರೆಕ್ಟರ್, ಕ್ಯಾಮರಾಮನ್‌ಗಳು ಬೆಕ್ಕಸಬೆರಗಾಗುತ್ತಿದ್ದರಂತೆ. ಹೆಲೆನ್ ಕೇವಲ ಕ್ಲಬ್ ಡ್ಯಾನ್ಸ್ ಗಳಲ್ಲಿ ಮಾತ್ರ ನೃತ್ಯ ಮಾಡಲಿಲ್ಲ ಬದಲಾಗಿ ಸಹನಾಯಕಿ ಮತ್ತು ಖಳನಾಯಕಿಯ ಪಾತ್ರಗಳಲ್ಲೂ ತಮ್ಮ ಪ್ರತಿಭೆಯನ್ನು ತೋರಿದವರು. ಆ ದಿನಗಳಲ್ಲಿ ಆಶಾಬೋನ್ಸಲೆಯವರ ಧ್ವನಿ ಮತ್ತು ಹೆಲೆನರ ನೃತ್ಯ ಒಂದರಲ್ಲೊಂದು ಸಂಯೋಜನೆಗೊಂಡು ಒಂದು ವಿಚಿತ್ರ ಮಾದಕ ಲೋಕವನ್ನೇ ಸೃಷ್ಟಿಸಿ ಲಕ್ಷಾಂತರ ಗಂಡಸರ ಹೃದಯಗಳನ್ನು ಚುಪ್ಪಾಚೂರು ಮಾಡುತ್ತಿದ್ದವು. ಹೆಲೆನ್ ರವರ ಹಾವಭಾವ ಮತ್ತು ಅಪ್ಪಿಯರೆನ್ಸ್ ಪಾಶ್ಚಿಮಾತ್ಯದ ರೀತಿಯಲ್ಲಿರಲು ಕಾರಣ ಆಕೆಯ ತವರು ಲಂಡನ್ ಆಗಿದ್ದುದ್ದೇ ಕಾರಣ. ಎರಡನೆಯ ಮಹಾಯುದ್ಧದ ಸಮಯದಲ್ಲಿ ಅಪ್ಪ ಸತ್ತ ನಂತರ ನರ್ಸ್ ಆಗಿದ್ದ ತಾಯಿಯೊಂದಿಗೆ ಹೆಲೆನ್ ಇಂಗ್ಲೆಂಡ್ ತೊರೆದು ಮುಂಬಯಿ ಸೇರುತ್ತಾರೆ. ಕುಟುಂಬ ಸ್ನೇಹಿತೆಯಾಗಿದ್ದ ಕುಕೂ ಎಂಬ ಡ್ಯಾನ್ಸರ್ ಮತ್ತು ನಟಿ ಹೆಲೆನಳನ್ನು ತನ್ನ ಸಹನರ್ತಕಿಯ ತಂಡಕ್ಕೆ ಸೇರಿಸಿಕೊಂಡು ಸಿನಿಮಾ ರಂಗಕ್ಕೆ ಪರಿಚಯಿಸುತ್ತಾಳೆ. ಅಷ್ಟೇ, ಹೆಲೆನ್ ಹಿಂತಿರುಗಿ ನೋಡಲಾರದ ಮಟ್ಟಕ್ಕೆ ಬೆಳೆಯುತ್ತಾಳೆ. ಕಡೆಗೆ ಕುಕೂ ಹೆಲೆನ್ ಳ ಸಹನರ್ತಕಿಯಾಗಿ ಅನೇಕ ಸಿನಿಮಾಗಳಲ್ಲಿ ನೃತ್ಯ ಮಾಡುತ್ತಾಳೆ ! ಹಿಂದಿ ಸಿನಿಮಾ ಜಗತ್ತು ಹೆಲೆನಳನ್ನು ಹೆವೆನ್ಲಿ ಅಂಡ್ ಲೆಜೆಂಡರಿ ನರ್ತಕಿಯೆಂದು ಕೊಂಡಾಡುತ್ತದೆ. ಎಂಬತ್ತಮೂರು ವರ್ಷ ವಯಸ್ಸಿನ ಹೆಲೆನ್ ಸದ್ಯಕ್ಕೆ ಮುಂಬಯಿಯ ಬಾಂದ್ರಾದ ಬ್ಯಾಂಡ್ ಸ್ಟ್ಯಾಂಡ್ ಏರಿಯಾದಲ್ಲಿ ವಾಸಿಸುತ್ತಿದ್ದಾರೆ. ಆರು ವರ್ಷಗಳ ಹಿಂದೆ ನಾನು ಮುಂಬಯಿ ಕರ್ನಾಟಕ ಸಂಘದ ಆಹ್ವಾನದ ಮೇರೆಗೆ ಕಾರ್ಯಕ್ರಮವೊಂದಕ್ಕೆ ಮುಂಬಯಿಗೆ ಹೋದಾಗ ನನ್ನ ಮುವತ್ತು ವರ್ಷಗಳ ಕಥಾನಕದ ಅಭಿಮಾನಿಯೂ, ಕನ್ನಡ ಸಂಘದ ಸೆಕ್ರೆಟರಿಯೂ ಆಗಿರುವ ಓಂದಾಸ್ ಕಣ್ಣಂಗಾರ್ ಗೆ ಹೆಲೆನ್‌ಳನ್ನು ನೋಡಬೇಕೆಂಬ ಬಯಕೆಯನ್ನು ತಿಳಿಸಿದ್ದೆ. ಅವರು ಖುಷಿಯಿಂದಲೇ ಹೆಲೆನ್ ವಾಸವಿರುವ ಅಪಾರ್ಟ್ಮೆಂಟ್‌ಗೆ ಕರೆದುಕೊಂಡು ಹೋಗಿದ್ದರು. ಆದರೆ ಆ ಸಮಯದಲ್ಲಿ ಹೆಲೆನ್ ಲಂಡನ್‌ನಲ್ಲಿದ್ದರಂತೆ. ಓಂದಾಸ್ " ಸರ್ ಒಳ್ಳೆಯದೇ ಆಯ್ತು ನಡಿರಿ, ಈ ವಯಸ್ಸಿನಲ್ಲಿ ಹೆಲೆನರನ್ನು ಮುಖತಃ ನೋಡಿದ್ದಿದ್ದರೆ ಬೇಸರಪಡುತ್ತಿದ್ದಿರೋ ಏನೋ. ನಿಮ್ಮ ಮನದಲ್ಲಿ ಅರವತ್ತು, ಎಪ್ಪತ್ತರ ದಶಕದ ಹೆಲೆನ್‌ರವರೇ ನೃತ್ಯ ಮಾಡುತ್ತಿರಲಿ..." ಎಂದು ತಮಾಷೆ ಮಾಡುತ್ತಾ ವಾಪಸ್ಸು ಕನ್ನಡ ಸಂಘಕ್ಕೆ ಕರೆದುಕೊಂಡು ಬಂದಿದ್ದರು. ಮುಂಬಯಿಯ ಎಷ್ಟೊಂದು ಡ್ಯಾನ್ಸ್ ಬಾರ್ ಹುಡುಗಿಯರಿಗೆ ಹೆಲೆನ್‌ಳ ನೃತ್ಯಗಳು ಬದುಕನ್ನು, ಆತ್ಮಸ್ಥೈರ್ಯವನ್ನು ಕೊಟ್ಟಿರುವವೋ.. 


" ನಮ್ಮಂಥ ನೃತ್ಯಗಾರ್ತಿಯರನ್ನು, ನಮ್ಮ  ನೃತ್ಯವನ್ನು ಐಟಂ ಗರ್ಲ್ಸ್, ಐಟಂ ಸಾಂಗ್ಸ್ ಎಂದು ಕರೆಯಬೇಡಿ. ನಾವು ನಮ್ಮ ನೃತ್ಯ ನಿಮಗೆ ಮುದ ಕೊಡುವ ಸಂಗತಿಗಳಾಗಿವೆ. ಖುಷಿ ಕೊಡುವ ಸಂಗತಿಗಳನ್ನು ತಿರಸ್ಕಾರದಿಂದ ನೋಡಬೇಡಿ..." ಎಂದು ಹೆಲೆನ್ ಇತ್ತೀಚೆಗೆ ಹೇಳಿರುವ ಮಾತುಗಳು ದಶಕಗಳ ಕಾಲ ಆಕೆಯ ಹೃದಯದಲ್ಲಿ ಹೆಪ್ಪುಗಟ್ಟಿದ ನೋವನ್ನು ಬಿಂಬಿಸುತ್ತವೆ. ಇಂಥ ಥಂಡಿ ವಾತಾವರಣದಲ್ಲಿ ನನ್ನ ಹೆಂಡತಿ ಚಂದ್ರಮಳ ನೆನಪು ಮತ್ತು ಹೆಲೆನಳ ನೃತ್ಯಗಳ ನೆನಪು ಲೌಕಿಕ ಮತ್ತು ಅಲೌಕಿಕ ಜಗತ್ತಿಗೆ ಒಟ್ಟಿಗೇ ಕೊಂಡೊಯ್ಯುತ್ತಿರುವುದು ನನ್ನೆದೆಯಲ್ಲಿ ಮತ್ಯಾರೋ ಕುಳಿತುಕೊಳ್ಳುತ್ತಿದ್ದಾರೆಂಬ ಭಾವ ಮತ್ತು ಗೊಂದಲ ಹುಟ್ಟಿಕೊಳ್ಳುತ್ತಿವೆ. ಕಾಲ ಎಲ್ಲಿಗೆ ಎಳೆದೊಯ್ಯುತ್ತದೋ ಕಂಡವರಾರು ? ಕಾಲಾಯೇ ತಸ್ಮೈ ನಮಃ....