ಚುನಾವಣಾ ಪ್ರಣಾಳಿಕೆಗಳಂತಾಗುತ್ತಿರುವ ಮುಂಗಡ ಪತ್ರಗಳು
ಸರ್ಕಾರಗಳ ವಾರ್ಷಿಕ ಮುಂಗಡ ಪತ್ರಗಳು ಕ್ರಮೇಣ ತಮ್ಮ ಪಾರದರ್ಶಕತೆಯನ್ನು ಕಳೆದುಕೊಳ್ಳುತ್ತಿವೆ
ಚುನಾವಣಾ ಪ್ರಣಾಳಿಕೆಗಳಂತಾಗುತ್ತಿರುವ ಮುಂಗಡ ಪತ್ರಗಳು
ಸರ್ಕಾರಗಳ ವಾರ್ಷಿಕ ಮುಂಗಡ ಪತ್ರಗಳು ಕ್ರಮೇಣ ತಮ್ಮ ಪಾರದರ್ಶಕತೆಯನ್ನು ಕಳೆದುಕೊಳ್ಳುತ್ತಿವೆ
ಅರ್ಥವ್ಯವಸ್ಥೆಯ ನಿರ್ವಹಣೆಯಲ್ಲಿ ಒಂದು ಹಣಕಾಸು ವರ್ಷದಲ್ಲಿ ಸರ್ಕಾರವು ತನ್ನ ಖರ್ಚುವೆಚ್ಚಗಳನ್ನು ಸರಿದೂಗಿಸುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಯೋಜನೆಗಳು ಮತ್ತು ಕಾರ್ಯಗತಗೊಳಿಸಬಹುದಾದ ಕಾರ್ಯಕ್ರಮಗಳನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಸರ್ಕಾರವು ತನ್ನ ಆದಾಯವನ್ನು ಹೇಗೆ ಗಳಿಸುತ್ತದೆ ಮತ್ತು ಸಾಮಾನ್ಯವಾಗಿ ಆದಾಯವನ್ನೂ ಮೀರಿದ ವೆಚ್ಚವನ್ನು ಸರಿದೂಗಿಸಲು ಯಾವ ಮಾರ್ಗಗಳನ್ನು ಅನುಸರಿಸುತ್ತದೆ ಹಾಗೂ ಈ ಮೊತ್ತವನ್ನು ಹೇಗೆ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ ವಿನಿಯೋಗ ಮಾಡುತ್ತದೆ ಎಂದು ಸ್ಥೂಲವಾಗಿ ಜನಸಾಮಾನ್ಯರ ಮುಂದಿಡುವ ಒಂದು ದಸ್ತಾವೇಜು ʼ ವಾರ್ಷಿಕ ಮುಂಗಡಪತ್ರ ಅಥವಾ ಬಜೆಟ್ ʼ. ಇದನ್ನು ಖರ್ಚು ವೆಚ್ಚಗಳ ಪಟ್ಟಿ ಎಂದರೂ ಸರಿಯೇ. ಜನಸಾಮಾನ್ಯರಿಂದ ವಸೂಲಿ ಮಾಡುವ ತೆರಿಗೆಯನ್ನು ಸರ್ಕಾರ ಹೇಗೆ ಜನರ ಏಳಿಗೆಗಾಗಿಯೇ ಬಳಸುತ್ತದೆ ಎನ್ನುವುದು ಬಜೆಟ್‌ಗಳಿಂದ ಸ್ಪಷ್ಟವಾಗುವುದಾದರೂ, ಇದು ಸರ್ಕಾರ ಅನುಸರಿಸುವ ಬೃಹದಾರ್ಥಿಕ ನೀತಿಗಳಿಗೆ ಮಂಜಿನ ಪರದೆಯಂತೆ ಕಾರ್ಯನಿರ್ವಹಿಸುತ್ತದೆ. ಬಜೆಟ್ ಮಂಡನೆಗೂ ಮುನ್ನ ಹಣಕಾಸು ಸಚಿವಾಲಯ ಸಲ್ಲಿಸುವ ಆರ್ಥಿಕ ಸಮೀಕ್ಷೆಯಲ್ಲಿ ಸರ್ಕಾರದ ದೀರ್ಘಕಾಲಿಕ ಯೋಜನೆಗಳನ್ನು ಸ್ಪಷ್ಟೀಕರಿಸುತ್ತದೆ. ಇವೆರಡರ ನಡುವೆ ಇರುವ ಸೂಕ್ಷ್ಮ ವ್ಯತ್ಯಾಸಗಳನ್ನು ಗ್ರಹಿಸದೆ ಹೋದರೆ, ಬಹುಶಃ ಬಜೆಟ್ ಎನ್ನುವುದು ಕೇವಲ ಒಂದು ಪ್ರಹಸನವಾಗಿಬಿಡುತ್ತದೆ.
ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಮಂಡಿಸಿರುವ 2023-24ರ ಮುಂಗಡ ಪತ್ರ, ಸಕಾರಾತ್ಮಕವಾಗಿ ಅಲ್ಲವಾದರೂ, ಹಲವು ಕಾರಣಗಳಿಗಾಗಿ ವಿಶಿಷ್ಟ ಎನಿಸುತ್ತವೆ. 2014ರ ನಂತರದಲ್ಲಿ ದೇಶದ ಆಡಳಿತ ವ್ಯವಸ್ಥೆ ಹೆಚ್ಚು ಹೆಚ್ಚು ಕೇಂದ್ರೀಕೃತವಾಗುತ್ತಿರುವುದು ಸ್ಪಷ್ಟವಾದರೂ, ಈ ವರ್ಷದ ಬಜೆಟ್ ಇದನ್ನು ದೃಢೀಕರಿಸಿದಂತೆ ತೋರುತ್ತದೆ. ದೇಶದ ಆರ್ಥಿಕತೆಯ ನಿರ್ವಹಣೆಯಲ್ಲಿ ರಾಜ್ಯಗಳ ಪಾತ್ರವನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ ಜಿಎಸ್‌ಟಿ ಪ್ರಧಾನ ಅಸ್ತ್ರವಾಗಿದ್ದರೆ, ವಾರ್ಷಿಕ ಬಜೆಟ್‌ಗಳು ನಿರಂತರವಾಗಿ ಬಳಸುವ ಮಾರ್ಗಗಳಾಗಿ ಕಾಣುತ್ತಿವೆ. ರಾಜ್ಯ ಸರ್ಕಾರಗಳಿಗೆ ತಮ್ಮ ಬಂಡವಾಳದ ವೆಚ್ಚವನ್ನು ಸರಿದೂಗಿಸಲು ಕೇಂದ್ರ ಸರ್ಕಾರದಿಂದ ನೀಡಲಾಗುವ ಹಣಕಾಸು ಅನುದಾನವನ್ನು ವರ್ಷದಿಂದ ವರ್ಷಕ್ಕೆ ಕಡಿಮೆ ಮಾಡುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಜಿಎಸ್‌ಟಿ ತೆರಿಗೆ ಸಂಗ್ರಹದಲ್ಲಿ ರಾಜ್ಯದ ಪಾಲನ್ನು ನೀಡಲು ವಿಳಂಬ ಮಾಡುವುದು ಸಹ ರಾಜ್ಯಗಳ ಆರ್ಥಿಕತೆಗೆ ಮಾರಕವಾಗಿ ಪರಿಣಮಿಸುವ ಸಾಧ್ಯತೆಗಳಿರುತ್ತವೆ.
ಕಾರ್ಪೋರೇಟ್ ಮಾರುಕಟ್ಟೆ ಕೇಂದ್ರಿತ ನವ ಉದಾರವಾದಿ ಆರ್ಥಿಕ ನೀತಿಗಳನ್ನು ಯಾವುದೇ ರಾಜಕೀಯ ಪ್ರತಿರೋಧ ಇಲ್ಲದೆ (ಎಡಪಕ್ಷಗಳನ್ನು ಹೊರತುಪಡಿಸಿ) ಜಾರಿಗೊಳಿಸುತ್ತಿರುವ ಕೇಂದ್ರ ಸರ್ಕಾರ ಸ್ವಾತಂತ್ರ್ಯೋತ್ತರ ಭಾರತದ ಜನಕಲ್ಯಾಣ ಪ್ರಭುತ್ವದ ಪರಿಕಲ್ಪನೆಯನ್ನೇ ಕ್ರಮೇಣ ನಿರ್ಲಕ್ಷಿಸುತ್ತಿದೆ. ಸಾಮಾನ್ಯವಾಗಿ ಬಜೆಟ್ ಮಂಡನೆಯಾಗುವ ಸಂದರ್ಭದಲ್ಲಿ ಜನಸಾಮಾನ್ಯರು, ಬಡ ವರ್ಗಗಳು, ದುಡಿಯುವ ವರ್ಗಗಳು, ಕಾರ್ಮಿಕ ವಲಯ, ರೈತ ಸಮುದಾಯ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ಹಾತೊರೆಯುವ ಜನಸಮೂಹಗಳು ಕೇಂದ್ರ ಸರ್ಕಾರದ ಬಜೆಟ್ ಮೂಲಕ ಕೆಲವು ಅನುಕೂಲತೆಗಳನ್ನು ನಿರೀಕ್ಷಿಸುತ್ತಿರುತ್ತವೆ. ಜನತೆಯ ನಿತ್ಯ ಜೀವನೋಪಾಯದ ಮಾರ್ಗಗಳನ್ನು ಸುಸ್ಥಿರಗೊಳಿಸುವುದರೊಂದಿಗೇ, ಸಾಮಾನ್ಯ ಜನತೆಗೆ ತಮ್ಮ ಜೀವನ ನಿರ್ವಹಣೆಗೆ ತಗಲುವ ವೆಚ್ಚವನ್ನು ಭರಿಸುವಷ್ಟು ಮಟ್ಟಿಗಾದರೂ ಜೋಲಿ ತುಂಬಿಸುವುದು ಸರ್ಕಾರಗಳ ಆದ್ಯತೆಯಾಗಬೇಕು. ನಿತ್ಯ ಮಾರುಕಟ್ಟೆಯ ಭಾಗಿದಾರರಾದ ಜನಸಾಮಾನ್ಯರ ಖರ್ಚು ಮಾಡುವ ಸಾಮರ್ಥ್ಯ ಹೆಚ್ಚಾಗುವುದರ ಮೂಲಕವೇ ಆರ್ಥಿಕತೆಯೂ ಸಹ ಹೆಚ್ಚು ಚಲನಶೀಲವಾಗಲು ಸಾಧ್ಯ ಎನ್ನುವುದನ್ನೂ ಸರ್ಕಾರಗಳು ಮನಗಾಣಬೇಕು.
ಮಾರುಕಟ್ಟೆ ಆರ್ಥಿಕತೆಯ ಹಿಡಿತ
ಆದರೆ ನವ ಉದಾರವಾದದ ಮಾರುಕಟ್ಟೆ ಅರ್ಥವ್ಯವಸ್ಥೆಯಲ್ಲಿ ಸರ್ಕಾರಗಳ ಆದ್ಯತೆಗಳು ಬದಲಾಗಿವೆ. ಈ ಬದಲಾದ ಆದ್ಯತೆಗಳನ್ನು ಸಾಕಾರಗೊಳಿಸಲೆಂದೇ ನೀತಿ ಆಯೋಗ, ಹಣಕಾಸು ಆಯೋಗ ಮತ್ತು ವಿತ್ತ ಸಚಿವಾಲಯದ ಸ್ವರೂಪಗಳೂ ಬದಲಾಗುತ್ತಿವೆ. ಹಣಕಾಸು ಆಯೋಗದ ಶಿಫಾರಸುಗಳು ಮೇಲ್ನೋಟಕ್ಕೆ ರಾಜ್ಯಗಳ ಪರ ಅಥವಾ ಜನಕಲ್ಯಾಣ ನೀತಿಗಳ ಪರ ಎಂದು ತೋರಿದರೂ, ಆಳದಲ್ಲಿ ಕಾರ್ಪೋರೇಟ್ ಮಾರುಕಟ್ಟೆಯನ್ನು ಪೋಷಿಸುವುದನ್ನೇ ಆದ್ಯತೆಯಾಗಿರಿಸಿಕೊಳ್ಳುವ ಸರ್ಕಾರಗಳು ಈ ಶಿಫಾರಸುಗಳನ್ನು ಉಲ್ಲಂಘಿಸಿಯೇ ವಾರ್ಷಿಕ ಮುಂಗಡ ಪತ್ರಗಳನ್ನು ರೂಪಿಸುತ್ತವೆ. ಉದಾಹರಣೆಗೆ 2021-26ರ ಹಣಕಾಸು ಆಯೋಗದ ವರದಿಯ ಅನುಸಾರ ಕೇಂದ್ರದ ತೆರಿಗೆ ಆದಾಯದಲ್ಲಿ ರಾಜ್ಯಗಳ ಪಾಲು ಶೇ 41ರಷ್ಟಿರಬೇಕಿತ್ತು. ಆದರೆ ಪ್ರಸಕ್ತ ಮುಂಗಡ ಪತ್ರದಲ್ಲಿ ಇದು ಕೇವಲ ಶೇ 30.4ರಷ್ಟಿದೆ. ಈ ತಾರತಮ್ಯದ ವಿರುದ್ಧ ವಿರೋಧ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳು ಮಾತ್ರವೇ ದನಿ ಎತ್ತುತ್ತವೆ. ಆಡಳಿತಾರೂಢ ಪಕ್ಷದ ಸರ್ಕಾರಳಿಗೆ ಜನಕಲ್ಯಾಣಕ್ಕಿಂತಲೂ ತಮ್ಮ ರಾಜಕೀಯ ಭವಿಷ್ಯ ಮತ್ತು ಅಸ್ತಿತ್ವ ಪ್ರಧಾನ ಆದ್ಯತೆಯಾಗಿರುತ್ತದೆ.
ರಾಜ್ಯಗಳು ತಮ್ಮ ಬಜೆಟ್‌ಗಳಲ್ಲಿ ಆರೋಗ್ಯ ಕ್ಷೇತ್ರದ ವೆಚ್ಚವನ್ನು ಒಟ್ಟು ಮೊತ್ತದ ಶೇ8ರಷ್ಟು ವ್ಯಯಿಸಬೇಕು ಎಂದು ಹಣಕಾಸು ಆಯೋಗ ಶಿಫಾರಸು ಮಾಡುತ್ತದೆ. ಆದರೆ ಕಳೆದ ವರ್ಷದ ರಾಜ್ಯ ಬಜೆಟ್‌ನಲ್ಲಿ ಶೇ 5ರಷ್ಟು ಮಾತ್ರ ಆರೋಗ್ಯ ಕ್ಷೇತ್ರಕ್ಕೆ ನೀಡಲಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ಈ ಬಾರಿ ಹೆಚ್ಚಿನ ಉತ್ತೇಜನ ನೀಡಲಾಗಿದ್ದರೂ, ಒಟ್ಟಾರೆ ಜಿಡಿಪಿ ಅನುಪಾತದಲ್ಲಿ ನೋಡಿದಾಗ, ಜಿಡಿಪಿಯ ಶೇ 2.9ರಷ್ಟು ಮಾತ್ರ ಶಿಕ್ಷಣಕ್ಕೆ ನೀಡಲಾಗಿದೆ. ಜಾಗತಿಕವಾಗಿ ಯಾವುದೇ ದೇಶದಲ್ಲಿ ಜಿಡಿಪಿಯ ಶೇ 6ರಷ್ಟನ್ನು ಶಿಕ್ಷಣ ಕ್ಷೇತ್ರಕ್ಕೆ ವ್ಯಯಿಸಿದರೆ ಮಾತ್ರವೇ ಅಲ್ಲಿ ಸಮಸ್ತ ಜನತೆಗೂ ಶೈಕ್ಷಣಿಕ ಸೌಲಭ್ಯಗಳು ಪೂರ್ಣಪ್ರಮಾಣದಲ್ಲಿ ಲಭ್ಯವಾಗಲು ಸಾಧ್ಯ ಎಂದು ಹೇಳಲಾಗುತ್ತದೆ. ಆದರೆ ಭಾರತದಲ್ಲಿ ಈವರೆಗೂ ಇದು ಶೇ 3ನ್ನು ದಾಟಿಲ್ಲ. ಈ ವರ್ಷ ಶಿಕ್ಷಣದ ಬಜೆಟ್ ಪ್ರಮಾಣವನ್ನು ಶೇ 8ರಷ್ಟು ಹೆಚ್ಚಿಸಿದ್ದರೂ, ಅದು ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ಮುನ್ನಡೆಗೆ ಪೂರಕವಾಗಿರುವುದಿಲ್ಲ. ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಈ ಮೂರೂ ಕ್ಷೇತ್ರಗಳಲ್ಲಿ ತಳಮಟ್ಟದ ಜನತೆಗೆ ಸುಲಭವಾಗಿ ಎಟುಕುವಂತಹ ಸೇವಾ ಸೌಲಭ್ಯಗಳನ್ನು ಒದಗಿಸುವುದರಿಂದಲೇ ಸುಸ್ಥಿರ ಅಭಿವೃದ್ಧಿಯನ್ನೂ ಕಾಣಲು ಸಾಧ್ಯ. ಆದರೆ ನವ ಉದಾರವಾದಿ ಆರ್ಥಿಕ ನೀತಿಯಲ್ಲಿ ಸುಸ್ಥಿರತೆಯನ್ನು ಮಾರುಕಟ್ಟೆಯ ಚೌಕಟ್ಟಿನಲ್ಲಿ ನಿಷ್ಕರ್ಷೆ ಮಾಡುವುದರಿಂದ, ಈ ಮೂರೂ ಕ್ಷೇತ್ರಗಳು ಹೆಚ್ಚಿನ ಆದ್ಯತೆಗೆ ಅರ್ಹವಾಗುವುದಿಲ್ಲ.
ಇತ್ತೀಚೆಗೆ ಬಿಡುಗಡೆಯಾದ ಆಕ್ಸ್‌ಫಾಮ್ ವರದಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಭಾರತದಲ್ಲಿ ಬಡತನ ಹೆಚ್ಚಳಕ್ಕೆ ಮೂಲ ಕಾರಣವನ್ನು ಗುರುತಿಸಬಹುದು. ನಿರುದ್ಯೋಗ, ಹಳ್ಳಿಗಾಡುಗಳ ಮಕ್ಕಳಲ್ಲಿ ಹೆಚ್ಚಾಗುತ್ತಿರುವ ಅಪೌಷ್ಟಿಕತೆ, ಪ್ರಾಥಮಿಕ ಆರೋಗ್ಯ ಸೇವೆಯ ಕೊರತೆ, ಎಳೆ ಮಕ್ಕಳಲ್ಲಿ ಬೆಳವಣಿಗೆಯ ಕೊರತೆ ಮತ್ತು ಹಸಿವೆಯ ಪ್ರಮಾಣ ಇವೆಲ್ಲವೂ ಹೆಚ್ಚಾಗಿರುವುದು, ಪ್ರಾಥಮಿಕ ಶಿಕ್ಷಣದ ಪ್ರವೇಶಾತಿ ಪರಿಣಾಮದ ಮೇಲೆ ಸಹ ಪರಿಣಾಮ ಬೀರುತ್ತವೆ. ಹಾಗಾಗಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳನ್ನು ಉತ್ತೇಜಿಸುವ ನೀತಿಗಳು ಪರಸ್ಪರ ಪೂರಕವಾಗಿರಬೇಕಾಗುತ್ತದೆ. ಆರೋಗ್ಯ ಕ್ಷೇತ್ರಕ್ಕೆ ಈ ಬಜೆಟ್‌ನಲ್ಲಿ ಶೇ 3.43ರಷ್ಟು ಹೆಚ್ಚು ಮೊತ್ತವನ್ನು ನಿಯೋಜಿಸಿದ್ದರೂ, ಭಾರತದ ಆರೋಗ್ಯ ಕ್ಷೇತ್ರದ ವೆಚ್ಚ ವಿಶ್ವದಲ್ಲೇ ಕನಿಷ್ಟ ಮಟ್ಟದಲ್ಲಿರುವುದು ವಾಸ್ತವ. ಜಿಡಿಪಿಯ ಶೇಕಡಾವಾರು ಪ್ರಮಾಣದಲ್ಲಿ ನೋಡಿದಾಗ ಭಾರತದಲ್ಲಿ ಅತಿ ಕಡಿಮೆ ವೆಚ್ಚವನ್ನು ಕಾಣಬಹುದು.
ಜನಕಲ್ಯಾಣ ಪ್ರಭುತ್ವದ ನೀತಿಗಳಿಗೆ ವಿದಾಯ ಹೇಳಿ, ಮಾರುಕಟ್ಟೆ ನೀತಿಗಳನ್ನೇ ಪ್ರಧಾನವಾಗಿ ಆಲಂಗಿಸಿರುವ ಕೇಂದ್ರ ಸರ್ಕಾರ, ಈಗ ಜಾರಿಯಲ್ಲಿರುವ ಹಲವಾರು ಜನಕಲ್ಯಾಣ ಯೋಜನೆಗಳಿಗೆ ನೀಡಲಾಗುವ ಅನುದಾನಗಳಲ್ಲೂ ಕಡಿತ ಮಾಡುತ್ತಲೇ ಬಂದಿದ್ದು, ಪ್ರಸಕ್ತ ಬಜೆಟ್‌ನಲ್ಲಿ ಇದು ನಿಚ್ಚಳವಾಗಿ ಗೋಚರಿಸುತ್ತದೆ. 81 ಕೋಟಿ ಜನತೆಗೆ ಇನ್ನೂ ಒಂದು ವರ್ಷದ ಕಾಲ ಉಚಿತ ಪಡಿತರವನ್ನು ನೀಡುವುದಾಗಿ ಸರ್ಕಾರವು ಇತ್ತೀಚೆಗೆ ಘೋಷಿಸಿರುವುದೇ ಭಾರತದಲ್ಲಿರುವ ಬಡತನ ಮತ್ತು ಹಸಿವಿನ ಸೂಚಿಯಾಗಿ ಕಾಣುತ್ತದೆ. ಅದರೂ ಈ ವರ್ಷದ ಮುಂಗಡಪತ್ರದಲ್ಲಿ ಆಹಾರ ಪೂರೈಕೆಗೆ ನೀಡುವ ಸಬ್ಸಿಡಿಯಲ್ಲಿ 80 ಕೋಟಿ ರೂಗಳನ್ನು ಕಡಿತಗೊಳಿಸಲಾಗಿದೆ. ಹಸಿವಿನ ಜಾಗತಿಕ ಸೂಚ್ಯಂಕದಲ್ಲಿ ಭಾರತ ತೀವ್ರ ಕುಸಿದ ಕಂಡಿರುವುದರ ಹಿನ್ನೆಲೆಯಲ್ಲಿ ಈ ಮೊತ್ತವನ್ನು ಹೆಚ್ಚಿಸಬೇಕಿತ್ತು. 2014ರಲ್ಲಿ ಅಧಿಕಾರಕ್ಕೆ ಬಂದ ನಂತರ ಯುಪಿಎ ಸರ್ಕಾರದ ಮಹತ್ವಾಕಾಂಕ್ಷಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಸೃಷ್ಟಿ ಯೋಜನೆ ಅಥವಾ ನರೇಗಾ ಯೋಜನೆಯನ್ನು ಲೇವಡಿ ಮಾಡುತ್ತಿದ್ದ ಕೇಂದ್ರ ಸರ್ಕಾರಕ್ಕೆ ಕೋವಿದ್ ಸಂದರ್ಭದಲ್ಲಿ ನೆರವಿಗೆ ಬಂದಿದ್ದು ಇದೇ ಯೋಜನೆಯೇ. ದೇಶದ ಕೋಟ್ಯಂತರ ಕಾರ್ಮಿಕರು ಲಾಕ್‌ಡೌನ್ ಪರಿಣಾಮದಿಂದ ದುಸ್ಥಿತಿಯಲ್ಲಿದ್ದಾಗ, ಈ ಯೋಜನೆಯೇ ಗುಟುಕು ಜೀವ ಒದಗಿಸಿದ್ದನ್ನು ಸ್ಮರಿಸಬಹುದು. ಆದರೆ ಕಳೆದ ಎಂಟು ವರ್ಷಗಳಿಂದಲೂ ಈ ಯೋಜನೆಗೆ ಮೀಸಲಿಡುವ ಹಣದಲ್ಲಿ ಕೇಂದ್ರ ಸರ್ಕಾರ ಕಡಿತ ಮಾಡುತ್ತಲೇ ಬರುತ್ತಿದೆ. ಈ ವರ್ಷದ ಬಜೆಟ್‌ನಲ್ಲೂ ಮನರೇಗಾ ಯೋಜನೆಗೆ ಮೀಸಲಿಡುವ ಅನುದಾನವನ್ನು 89000 ಕೋಟಿ ರೂಗಳಿಂದ 60000 ಕೋಟಿ ರೂಗಳಿಗೆ ಇಳಿಸಲಾಗಿದೆ.
ಭಾರತದ ಗ್ರಾಮೀಣ ಉದ್ಯೋಗ ವಲಯದಲ್ಲಿ ಪ್ರತಿ ಕುಟುಂಬಕ್ಕೆ ಕನಿಷ್ಠ ನೂರು ದಿನಗಳ ಉದ್ಯೋಗ ಕಲ್ಪಿಸಲು ಸುಮಾರು 1.8ಲಕ್ಷ ಕೋಟಿ ರೂಗಳು ಬೇಕಾಗುತ್ತದೆ. ಅಂದರೆ ಸರ್ಕಾರ ನಿಯೋಜಿಸಿರುವ ಮೊತ್ತದಲ್ಲಿ ಪ್ರತಿ ಕುಟುಂಬಕ್ಕೆ ಕೇವಲ 48 ರಿಂದ 50 ದಿನಗಳಷ್ಟು ಉದ್ಯೋಗ ಕಲ್ಪಿಸಲು ಸಾಧ್ಯವಾಗುತ್ತದೆ. ಇದು ಗ್ರಾಮೀಣ ಬಡತನದ ಮೇಲಷ್ಟೇ ಅಲ್ಲದೆ, ಹಸಿವಿನಿಂದ ಸಂಭವಿಸುವ ಸಾವುಗಳು, ರೈತರ ಆತ್ಮಹತ್ಯೆ, ಅಪೌಷ್ಟಿಕತೆಯಿಂದ ಸಾಯುವ ಎಳೆ ಮಕ್ಕಳು ಮತ್ತು ತಾಯಂದಿರ ಪ್ರಮಾಣದ ಮೇಲೆ ಸಹ ಪರಿಣಾಮ ಬೀರುತ್ತದೆ. ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ರೈತರಿಗೆ ನೀಡುವ ವಾರ್ಷಿಕ ಮೊತ್ತವನ್ನು 6000 ದಿಂದ 8000ಕ್ಕೆ ಹೆಚ್ಚಿಸಲಾಗಿದ್ದರೂ, ಹಣದುಬ್ಬರದ ಪ್ರಭಾವವನ್ನು ಪರಿಗಣಿಸಿದಾಗ ಈ ಹೆಚ್ಚಳ ಸೀಮಿತವಾಗುತ್ತದೆ. ಮೇಲಾಗಿ ಈ ಯೋಜನೆಗೆ ಬಜೆಟ್‌ನಲ್ಲಿ ಮೀಸಲಿಡುವ ಹಣದ ಮೊತ್ತವನ್ನು ಕಳೆದ ವರ್ಷದ 68 ಸಾವಿರ ಕೋಟಿಗಳಿಂದ 60 ಸಾವಿರ ಕೋಟಿ ರೂಗಳಿಗೆ ಇಳಿಸಲಾಗಿದೆ. ಒಟ್ಟಾರೆ ಕೃಷಿ ಮತ್ತು ಪೂರಕ ವಲಯಗಳ ವೆಚ್ಚವನ್ನು ಶೇ 5ರಷ್ಟು ಕಡಿಮೆ ಮಾಡಲಾಗಿದೆ. ಬೆಂಬಲ ಬೆಲೆ ಮತ್ತು ಮಾರುಕಟ್ಟೆ ಮಧ್ಯಸ್ತಿಕೆಯ ಯೋಜನೆಗೆ ಕಳೆದ ವರ್ಷ ನೀಡಲಾಗಿದ್ದ 1500 ಕೋಟಿ ರೂಗಳು ಈ ಬಜೆಟ್‌ನಲ್ಲಿ ಬಹುಮಟ್ಟಿಗೆ ಇಲ್ಲವಾಗಿದೆ ಎಂದೇ ಹೇಳಬಹುದು.
ಖಾಲಿ ಜೇಬುಗಳ ಗ್ರಾಹಕರ ನಡುವೆ
ಭಾರತವು ಇಂದು ಎದುರಿಸುತ್ತಿರುವ ಆರ್ಥಿಕ ಹಿನ್ನಡೆಯನ್ನು ಗಮನಿಸಿದಾಗ ಜನಸಾಮಾನ್ಯರಲ್ಲಿ ಕೊಳ್ಳುವ ಶಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆರ್ಥಿಕ ನೀತಿಗಳನ್ನು ಮತ್ತು ವಾರ್ಷಿಕ ಬಜೆಟ್‌ಗಳನ್ನು ರೂಪಿಸಬೇಕಾಗುತ್ತದೆ. ಉತ್ಪಾದನೆಯನ್ನು ಹೆಚ್ಚಿಸಬೇಕಾದರೆ, ಉತ್ಪಾದಿತ ಸರಕುಗಳನ್ನು ಕೊಳ್ಳುವ ಜನಸಂಖ್ಯೆಯೂ ಹೆಚ್ಚಾಗಬೇಕು. ಇಲ್ಲವಾದಲ್ಲಿ ಉತ್ಪಾದನೆ ಸ್ಥಗಿತಗೊಳುತ್ತದೆ. ಈಗಾಗಲೇ ಮಾರುಕಟ್ಟೆಯಲ್ಲಿ ಇದರ ಪರಿಣಾಮವನ್ನು ಗುರುತಿಸಲಾಗುತ್ತಿದೆ. ಹಾಗಾಗಿ ಉತ್ಪಾದನೆಯ ಹೆಚ್ಚಳ ಮತ್ತು ಗ್ರಾಹಕ ಬೇಡಿಕೆಯ ಹೆಚ್ಚಳದ ದೃಷ್ಟಿಯಿಂದ ಸರ್ಕಾರವು ಈಗಾಗಲೇ ಜಾರಿಯಲ್ಲಿರುವ ಜನಕಲ್ಯಾಣ ಯೋಜನೆಗಳಿಗೆ ಹೆಚ್ಚಿನ ಹಣವನ್ನು ವಿನಿಯೋಗಿಸಬೇಕಿತ್ತು. ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸುವುದು ಮತ್ತು ತನ್ಮೂಲಕ ಬಂಡವಾಳ ವೆಚ್ಚವನ್ನು ಹೆಚ್ಚಿಸುವುದರಿಂದಲೇ ದೇಶದ ಆರ್ಥಿಕ ಪ್ರಗತಿ ಸಾಧ್ಯ ಎನ್ನುವ ನವ ಉದಾರವಾದಿ ಆರ್ಥಿಕ ಚಿಂತಕರ ವಾದ ಅತಾರ್ಕಿಕ ಎನ್ನುವುದು ಈಗಾಗಲೇ ಹಲವು ದೇಶಗಳಲ್ಲಿ ಸಾಬೀತಾಗಿದೆ. ಇದು ಮಾರುಕಟ್ಟೆ ಸೂಚ್ಯಂಕಗಳಲ್ಲಿ, ಜಿಡಿಪಿ ಬೆಳವಣಿಗೆಯಲ್ಲಿ ಗೋಚರಿಸುವ ತೆಳು ಪರದೆಗಳ ಹಿಂದೆ, ಅಸಮಾನತೆ, ಹಸಿವು, ಬಡತನ ಮತ್ತು ದಾರಿದ್ರ್ಯ ಹೆಚ್ಚಾಗುತ್ತಲೇ ಇರುವುದನ್ನು ಗಮನಿಸಬೇಕಿದೆ.
ಸಾಮಾಜಿಕ ವಲಯದಲ್ಲಿ ಬಂಡವಾಳ ಹೂಡಿಕೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲೇ ಸರ್ಕಾರದ ಬಜೆಟ್‌ಗಳಲ್ಲಿ ಈ ವಲಯಗಳ ವೆಚ್ಚದ ಪ್ರಮಾಣವನ್ನೂ ಕಡಿಮೆ ಮಾಡುವುದರಿಂದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಬಡತನದ ಪ್ರಮಾಣ ಹೆಚ್ಚಾಗುತ್ತಲೇ ಹೋಗುತ್ತದೆ. ಉದ್ಯೋಗ ಖಾತರಿ ಯೋಜನೆ, ಪಿಂಚಣಿ ಯೋಜನೆಗಳು, ಆಹಾರ ಸಬ್ಸಿಡಿ ಮುಂತಾದ ಸಾಮಾಜಿಕ ವಲಯದ ವೆಚ್ಚಗಳನ್ನು ಕಡಿತ ಮಾಡಿದಷ್ಟೂ ಅವಕಾಶವಂಚಿತರ ಜನಸಂಖ್ಯೆ ಹೆಚ್ಚಾಗುತ್ತಲೇ ಹೋಗುತ್ತದೆ. ಬಂಡವಾಳ ವೆಚ್ಚದ ಹೆಚ್ಚಳ ಈ ನಿಟ್ಟಿನಲ್ಲಿ ಯಾವ ರೀತಿಯಲ್ಲೂ ಉಪಯುಕ್ತವಾಗುವುದಿಲ್ಲ. ಬಂಡವಾಳ ವೆಚ್ಚದ ಹೆಚ್ಚಳವು ಮೂಲತಃ ಹೆದ್ದಾರಿ, ವಿಮಾನಯಾನ, ರೈಲ್ವೆ ಮುಂತಾದ ಕ್ಷೇತ್ರಗಳಲ್ಲಿ ಕಂಡುಬಂದರೂ, ಈ ವಲಯಗಳಲ್ಲಿ ಶ್ರಮತೀವ್ರತೆಗಿಂತಲೂ ಬಂಡವಾಳ ತೀವ್ರತೆಯ ಯೋಜನೆಗಳೇ ಹೆಚ್ಚಾಗಿರುವುದರಿಂದ, ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾಗುವ ಸಾಧ್ಯತೆಗಳು ಕಡಿಮೆ ಇರುತ್ತದೆ. ತಂತ್ರಜ್ಞಾನದ ಬಳಕೆಯೇ ಅಧಿಕವಾಗಿರುವುದರಿಂದ ಮಾನವ ಶ್ರಮದ ಅವಶ್ಯಕತೆಯೂ ಕಡಿಮೆ ಇರುತ್ತದೆ. ಹಾಗಾಗಿ ಬಂಡವಾಳವೆಚ್ಚದ ಹೆಚ್ಚಳದಿಂದಲೇ ದೇಶದ ಆರ್ಥಿಕ ಪ್ರಗತಿಯ ವೇಗ ಹೆಚ್ಚುತ್ತದೆ ಎಂದು ಭಾವಿಸುವುದು, ಬಹುಸಂಖ್ಯೆಯ ಜನತೆಯ ಪಾಲಿಗೆ ಅರ್ಧಸತ್ಯವಾಗಿಯೇ ಕಾಣುತ್ತದೆ.
ಅಮೃತ ಕಾಲದತ್ತ ಸಾಗುತ್ತಿರುವ ಭಾರತ ಮಾರುಕಟ್ಟೆ ಆರ್ಥಿಕತೆಯ ನೀತಿಗಳನ್ನೇ ಅನುಸರಿಸಿ ಜಗತ್ತಿನ ಅತಿದೊಡ್ಡ ಮಾರುಕಟ್ಟೆಯಾಗಿ ಅಥವಾ ಅರ್ಥವ್ಯವಸ್ಥೆಯಾಗಿ ರೂಪುಗೊಂಡರೂ, ಶೇ 50ಕ್ಕಿಂತಲೂ ಹೆಚ್ಚು ಜನಸಂಖ್ಯೆ ಪ್ರಾಥಮಿಕ ಶಿಕ್ಷಣ, ಮೂಲ ಆರೋಗ್ಯ ಸೇವೆ, ಪೌಷ್ಟಿಕತೆ ಮತ್ತು ಸಾಮಾಜಿಕ ಭದ್ರತೆಗಳಿಂದ ವಂಚಿತರಾಗಿಯೇ ಉಳಿದಿರುತ್ತಾರೆ. ಏತನ್ಮಧ್ಯೆ ದೇಶದ ಬೃಹದಾರ್ಥಿಕ ನೀತಿಗಳ ಮೂಲಕ ಸಾರ್ವಜನಿಕ ಸಂಪತ್ತು, ಸಂಪನ್ಮೂಲ ಮತ್ತು ಉದ್ಯಮಗಳನ್ನು, ಶಿಕ್ಷಣ-ಆರೋಗ್ಯ ಮುಂತಾದ ಆದ್ಯತೆಯ ವಲಯಗಳನ್ನು ಪೂರ್ಣ ಖಾಸಗೀಕರಣಗೊಳಿಸಿ, ಕಾರ್ಪೋರೇಟ್ ಮಾರುಕಟ್ಟೆಗೆ ಒಪ್ಪಿಸುವ ಕ್ರಮ ಅವ್ಯಾಹತವಾಗಿ ಮುಂದುವರೆಯುತ್ತದೆ. ಈ ದೀರ್ಘಕಾಲಿಕ ದೃಷ್ಟಿಯಿಂದ ನೋಡಿದಾಗ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಂಡಿಸುವ ವಾರ್ಷಿಕ ಮುಂಗಡ ಪತ್ರಗಳು, ಮುಂಬರುವ ಚುನಾವಣೆಗಳನ್ನು ಮತದಾರರನ್ನು ಸೆಳೆಯುವ ಆರ್ಥಿಕ ಅಸ್ತ್ರಗಳಾಗಿ ಮಾತ್ರವೇ ಕಾಣುತ್ತದೆ. ಜನತೆಯ ಮೂಗಿಗೆ ಹಚ್ಚುವ ತುಪ್ಪ ಬಡತನದ ಬೇಗೆಯಲ್ಲಿ ಕರಗಿ ನೀರಾಗುವುದಷ್ಟೇ ಅಲ್ಲದೆ, ಹಸಿವು ಬಡತನ ಮತ್ತು ದಾರಿದ್ರ್ಯದ ಕಂಬನಿಗಳೊಂದಿಗೆ ಬೆರೆತು ಅವರೊಂದಿಗೇ ಮಣ್ಣುಪಾಲಾಗುತ್ತದೆ. ನವ ಉದಾರವಾದ ಮತ್ತು ಕಾರ್ಪೋರೇಟ್ ಮಾರುಕಟ್ಟೆ ಅರ್ಥವ್ಯವಸ್ಥೆಯ ಈ ಒಳಸುಳಿಗಳನ್ನು ಅರ್ಥಮಾಡಿಕೊಳ್ಳುವುದು ಪ್ರಜ್ಞಾವಂತ ಪ್ರಜೆಗಳ ಆದ್ಯತೆಯಾದಾಗ ಮಾತ್ರವೇ ಸರ್ಕಾರದ ಆದ್ಯತೆಗಳೂ ಬದಲಾಗುವುದು ಸಾಧ್ಯ.
( ಸಂಪಾದಕನ ಟಿಪ್ಪಣಿ: ಮೈಸೂರಿನಲ್ಲಿ ನೆಲೆಸಿರುವ ಕಡು ಜನಪರ ಕಾಳಜಿಯ ನಾ.ದಿವಾಕರ ಕೋಲಾರ ಜಿಲ್ಲೆಯಲ್ಲಿ ಹುಟ್ಟಿ ಬೆಳೆದವರು, ಬ್ಯಾಂಕ್ ಅಧಿಕಾರಿಯಾಗಿ ಹಣಕಾಸಿನ ಒಳಹೊರಗನ್ನು ಚೆನ್ನಾಗಿ ಬಲ್ಲವರು, ಮೊನ್ನೆ ನಮ್ಮ ಅರ್ಥ ಮಂತ್ರಿ ನಿರ್ಮಲಾ ಸೀತಾರಾಮನ್ ಮಂಡಿಸಿದ ಭಾರತ ಸರ್ಕಾರದ ಬಜೆಟ್ ಕುರಿತು ಒಳ ನೋಟ ಬೀರಿದ್ದಾರೆ.)
-೦-೦-೦-೦-