ನನ್ನ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಅಲ್ಲಿ ಸಿಕ್ ಬಿಡ್ತಾ ಇತ್ತು.

ಇವತ್ತಿನ ಸಂಕೀರ್ಣ ಸಮಯದಲ್ಲಿ ಸಾಹಿತಿಗಳ ಮೇಲೆ ತುಂಬಾ ದೊಡ್ಡ ಜವಾಬ್ದಾರಿ ಇದೆ. ನನ್ನ ತಿಳುವಳಿಕೆಯಂತೆ ಸಾಹಿತಿಗಳಿಗೆ ಬಹುಮುಖ್ಯವಾಗಿ ಇರಬೇಕಾದದ್ದು ಸಹಜೀವಿಗಳೆಡೆಗೆ ಮಾನವೀಯತೆ ಮತ್ತು ಸಾಮಾಜಿಕ ಪ್ರಜ್ಞೆ ಎಂಬುದು ನನ್ನ ಬಲವಾದ ನಂಬಿಕೆ.

ನನ್ನ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಅಲ್ಲಿ ಸಿಕ್ ಬಿಡ್ತಾ ಇತ್ತು.

 


ಎಲ್ಲರಿಗೂ ನಮಸ್ಕಾರ…


ಚಿಕ್ಕವಳಿದ್ದಾಗ ನನಗೆ ಏನಾದ್ರೂ ಬೇಜಾರ್ ಆದ್ರೆ, ಮನಸ್ಸಿಗೆ ಏನಾದರೂ ನೋವಾದರೆ ಅಥವಾ ಯಾವುದಾದರೂ ಗೊಂದಲ ಆದರೆ, ತೋಟದಲ್ಲಿ ಕೆಲಸ ಮಾಡುತ್ತಿದ್ದ ನನ್ನ ಅಪ್ಪನತ್ರ ಹೋಗ್ತಾ ಇದ್ದೆ, ನಮ್ಮಪ್ಪ ಅಲ್ಲೆಲ್ಲೋ ಸೊಸಿಗೆ ಒಟ್ಟಲು ಕಟ್ತಾನೋ ದಿಂಡ್ ಕಟ್ತಾನೋ, ಗುದ್ದಲಿನೋ ಹಾರೆನೋ ಹಿಡ್ಕೊಂಡು ಕೆಲಸ ಮಾಡ್ತಾ ಇರ್ತಿದ್ರು. ಹಂಗೆ ನಾನು ಹತ್ತಿರ ಹೋದರೆ ಅಂದ್ರೆ ನಮ್ಮಪ್ಪನಿಗೆ ಗೊತ್ತಾಗ್ತಿತ್ತು. ಇವಳೇನೋ ತಲೆನೋವು ತಂದಿದ್ದಾಳೆ ಇಲ್ಲಾ ತಲೆನೋವು ತಗೊಂಡಿದ್ದಾಳೆ ಅಂತ.


‘ಬಾರ್ಲಾ ಇಲ್ಲಿ’ ಅಂತ ಕರಿಯೋರು. ಹತ್ರ ಕೂರುಸ್ಕೊಂಡು ನನ್ನ ಕೈಹಿಡ್ಕೊಳೊರು. ಕೈಹಿಡ್ಕೊಂಡು ಅವರೇನೂ ಹೆಚ್ಚಿಗೆ ಮಾತಾಡುತ್ತಿರಲಿಲ್ಲ. ಕೆಲಸದಿಂದ ಒಡೆದು ಚಿದ್ರವಾದ, ಉರುಟು ಉರುಟಾದ ಆ ದಪ್ಪನೆಯ ಬೆರಳುಗಳಲ್ಲಿ ನನ್ನ ಕೈ ಹಿಡ್ಕೊಂಡು ಅವರು ಸವರುತ್ತಾ ಇದ್ದರೆ, ನನ್ನ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಅಲ್ಲಿ ಸಿಕ್ ಬಿಡ್ತಾ ಇತ್ತು.


ಇವತ್ತು ಈ ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿಯನ್ನು ಕೈಯಲ್ಲಿ ಹಿಡ್ಕೊಂಡಾಗ ತೇಟ್ ಅದೇ ತರಹದ ಒಂದು ಭಾವ ನನ್ನ ಮನಸಲ್ಲಿ ಬಂದೋಯ್ತು. ಅದಕ್ಕೆ ಕಾರಣ ನನ್ನ ಅಪ್ಪನ ಹೆಸರೂ ‘ರಾಮಣ್ಣ’. ಅವರನ್ನ ‘ಅಣ್ಣಾ’ ಅಂತಾನೇ ಕರಿತಿದ್ದಿದ್ದು ನಾವು. ಆ ನನ್ನ ಅಣ್ಣ ಇವತ್ತು ನಂಜೊತೆ ಇದ್ದರು. ಈ ಕ್ಷಣದಲ್ಲಿ ಇನ್ನೊಬ್ಬ ಅಣ್ಣನೊಂದಿಗೆ. ಬೆಸಗರಹಳ್ಳಿ ರಾಮಣ್ಣ ಮತ್ತು ಗಂಗನಘಟ್ಟದ ರಾಮಣ್ಣ ಇಬ್ಬರೂ ಜೊತೆಯಾದ ಈ ಭಾವವನ್ನ ಹೇಗೆ ವ್ಯಕ್ತ ಪಡಿಸಬೇಕು ನನಗೀಗ ಗೊತ್ತಾಗ್ತಿಲ್ಲ….


ಉಪ್ಪುಚ್ಚಿ ಮುಳ್ಳು ಕೃತಿ ನನ್ನೊಳಗೆ ಬಹಳ ಕಾಲದಿಂದ ನೀರು ಗೊಬ್ಬರಗಳನ್ನು ಇಟ್ಕೊಂಡು ಒಳಗೇ ಅವುಸ್ಕೊಂಡು ಇದ್ದಂತ ಒಂದು ಬೀಜ. ಅದು ಮೊಳಕೆ ಆಗಕ್ಕೆ ಅಥವಾ ಸಸಿಯಾಗಕ್ಕೆ ತುಂಬಾ ದಿನಗಳನ್ನು ತಗೊಳ್ತು. ಹಾಗೆ ಒಂದು ಗಜಗರ್ಭದಲ್ಲಿ ಉಳಿದಿದ್ದಕ್ಕೇನೆ ಇವತ್ತು ಇಷ್ಟೆಲ್ಲಾ ಒಳ್ಳೆ ಮಾತುಗಳನ್ನು ಕೇಳುತ್ತಾ ಇದ್ದೀನೆನೋ ಅನ್ನೋ ಖುಷಿ ನನಗಿದೆ. 


ಮೊಟ್ಟ ಮೊದಲಿಗೆ, ನನ್ನ ಕೃತಿಯನ್ನು ಅದರ ಭಾಷೆಯನ್ನು ಗೌರವಿಸಿದಂತ, ಅದಕ್ಕೊಂದು ವೇದಿಕೆಯನ್ನು ಕೊಟ್ಟು ಇಲ್ಲಿ ನನ್ನನ್ನ ನಿಲ್ಲಿಸಿದಂತಹ ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನಕ್ಕೆ ಕೃತಜ್ಞತೆಯನ್ನು ಅರ್ಪಿಸುತ್ತೇನೆ.


ಎರಡನೇದಾಗಿ (ಎರಡು ಮೂರು ಅಂತ ಇಲ್ಲ ಅದು), ಉಪ್ಪುಚ್ಚಿಮುಳ್ಳು ಕೃತಿಗೆ ತನ್ನ ಸೊಗಡು ಮತ್ತು ಬನಿಯನ್ನು ಕೊಟ್ಟು ಒಂದು ವಿಶೇಷತೆಯನ್ನು ಒದಗಿಸಿದಂತಹ ನನ್ನ ಗ್ರಾಮೀಣ ಭಾಷೆಗೆ ನಾನು ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಗ್ರಾಮೀಣ ಭಾಷೆಯು ನನಗೆ ಯಾವತ್ತೂ ಹೆಮ್ಮೆಯನ್ನ ತಂದಿದೆ. ನಾನು ಎಲ್ಲೇ ಮಾತಾಡಬೇಕಾದರೂ ನನ್ನ ಮಾತುಗಳನ್ನ ಪಾಲಿಷ್ ಮಾಡಿ ಆಡುವುದಿಲ್ಲ. ಅವು ದೇಸಿಯಾಗೇ ಇರುತ್ತವೆ. ನಾನು ಗಂಗನಘಟ್ಟ ಎಂಬ ಹಳ್ಳಿಯವಳು ಆದ್ರೂ, ನಾನು ಬೆಳೆದದ್ದು, ಓದಿದ್ದೇಲ್ಲಾ ಮೈಸೂರಲ್ಲಿ. ಆದರೂ ನನ್ನ ಊರ ಭಾಷೆಯ ಮೂಲದ ಕೆಲವು ಪದಗಳು ನನ್ನ ಮಾತಿನಲ್ಲಿ ತೂರಿ ಬರುತ್ತವೆ. ಆಗಾಗ ಹಾಗೆ ಗ್ರಾಮ್ಯ ಪದಗಳು ನುಸುಳಿದರೆ, ನನಗೆ ನಾನು ಬೇರೇನೆ ಮಾತಾಡ್ತಾಯಿದ್ದೀನಿ, ಅದೇನೋ ಖುಷಿಯಿಂದ ಮಾತಾಡ್ತಾ ಇದ್ದೀನಿ ಅಥವಾ ನನ್ನತನವನ್ನು ಗುರ್ತಿಸಿಕೊಳ್ತಾಯಿದ್ದೀನಿ ಅನ್ನೋ ಹೆಮ್ಮೆ ಮುಡಿದೆಯೇ ಹೊರತು, ಯಾವತ್ತು ಆ ಭಾಷೆ ನನಗೆ ಒಂದು ಕೀಳರಿಮೆಯನ್ನ ಮೂಡಿಸಿಲ್ಲ. ಇದು ನನಗೆ ಯಾವತ್ತೂ ಕನ್ನಡ ಅದರಲ್ಲೂ ನನ್ನ ಗ್ರಾಮೀಣ ಭಾಷೆ ಕೊಟ್ಟಿರುವಂತಹ ಒಂದು ಬೇರೆಯದೇ ಆದ ಆತ್ಮವಿಶ್ವಾಸ. ಅದು ನನ್ನ ಉಪ್ಪುಚ್ಚಿಮುಳ್ಳು ಕೃತಿನಲ್ಲಿ ಸಹ ಬೆನ್ನೆಲುಬಾಗಿ ನಿಂತಿದೆ ಅಂತ ಹೇಳಬಹುದು. 


ಮೂರನೆಯದಾಗಿ ಹೇಳಬೇಕಂದ್ರೆ, ಈ ಕೃತಿಯನ್ನು ನಾನು ಬರೀಬಹುದು ಅಥವಾ ಬರೆದದ್ದು ಪುಸ್ತಕವಾಗಬಹುದು ಅನ್ನೋದಕ್ಕೆ ಒಂದು ಧೈರ್ಯವನ್ನು ಕೊಟ್ಟದ್ದು ಹಾಡ್ಲಹಳ್ಳಿ ಪ್ರಕಾಶನ. ಹಾಡ್ಲಹಳ್ಳಿ ಪ್ರಕಾಶನದ ಚಲಂ ಹಾಡ್ಲಹಳ್ಳಿ. ನಾನು ನನ್ನ ಜೀವನದಲ್ಲಿ ನೆನೆಯಬಹುದಾದ ಕೆಲವು ಸಾಹಿತಿಗಳಿದ್ದಾರೆ. ಗ್ರಾಮೀಣ ಮೂಲ ಸೊಗಡನ್ನ, ಒಂದು ಪ್ರದೇಶದ ಜೀವನ ಸಂಸ್ಕೃತಿಯನ್ನ ಅಥವಾ ಒಂದು ಪ್ರದೇಶದ ಜನರ ನಡಾವಳಿಯನ್ನು ಕಟ್ಟಿ ಕೊಟ್ಟಂತಹ ಕೆಲವು ಕೃತಿಗಳಿವೆ. ನಾನು ಗುರುತಿಸುವಂತೆ ಅದರಲ್ಲಿ ಒಂದು ಗ್ರಾಮಾಯಣ, ಇನ್ನೊಂದು ದೊಡ್ಡಮನೆ, ಬೆಸಗರಹಳ್ಳಿ ರಾಮಣ್ಣನವರ ಹಲವು ಸಣ್ಣ ಕಥೆಗಳು ಮತ್ತು ಹಾಡ್ಲಹಳ್ಳಿ ನಾಗರಾಜ್ ರವರ ಮಲೆನಾಡಿನ ಭಾಗದ ಕೃತಿಗಳು. ಇವು ನನ್ನ ಮೇಲೆ ಸಾಕಷ್ಟು ಪ್ರಭಾವ ಬೀರಿದಾವೆ. ಹಾಡ್ಲಹಳ್ಳಿ ಪ್ರಕಾಶನದಿಂದ ನನ್ನ ಕೃತಿ ಬಂದಿರುವುದಕ್ಕೆ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಇನ್ನೊಂದು ಬಹುಮುಖ್ಯವಾಗಿ ಇಲ್ಲಿ ನಾನು ನಿಂತಿದ್ದೀನಿ ಅಂದ್ರೆ ಅದಕ್ಕೆ ನನ್ನ ದೊಡ್ಡ ಬೆನ್ನೆಲುಬು ನನ್ನ ತಾಯಿ.


ಅವರು ಬಾಲ್ಯದಿಂದಲೂ, ಇವತ್ತಿಗೂ, ಈ ಕ್ಷಣಕ್ಕೂ ನನ್ಜೊತೆನೆ ನಿಂತಿದ್ದಾರೆ. ನನ್ನ ಕುಟುಂಬ, ನನ್ನ ತಮ್ಮ, ತಂಗಿ, ತಮ್ಮನ ಹೆಂಡತಿ, ನನ್ನ ಮುದ್ದು ಮಗ, ಕುಟುಂಬದಲ್ಲಿ ಯರ‍್ಯಾರು ನಂಜೊತೆ ಇದ್ದಾರೆ ಅವರೆಲ್ಲರೂ, ನಾನು ಏನೇ ಮಾಡಿದ್ರೂ ನಂಜೊತೆ ನಿಂತಿದ್ದಾರೆ., ಅದು ಯಾವುದೇ ಹೆಣ್ಣು ಮಕ್ಕಳು ಹಿಂಜರಿಯುವAತಹಾ ಪ್ರಸಂಗವೇ ಇದ್ರೂ, ‘ನೀ ಮಾಡು ನಿಂಜೊತೆ ನಾವಿದಿವಿ’ ಅಂತ ಹೇಳುವಂತ ಒಂದು ಕುಟುಂಬದ ಬೆಂಬಲ ನನಗಿದೆ. ಅದಕ್ಕೆ ನಾನು ಋಣಿ. 


ರವಿಕಾಂತೇಗೌಡ ಸರ್ ನನ್ನನ್ನು ಪರಿಚಯಿಸುತ್ತಾ ಇವರು ಇಲ್ಲೇ ಪಕ್ಕದ ತುಮಕೂರು ಜಿಲ್ಲೆಯ ಹೆಣ್ಣುಮಗಳು ಅಂದ್ರು. ನಿಜ. ನಾನೂ ಒಂದು ವಿಷಯ ಹೇಳಕ್ಕೆ ಇಷ್ಟ ಪಡ್ತೀನಿ. ನಾನು ಮಂಡ್ಯ ಜಿಲ್ಲೆಯ ಸೊಸೆಯೂ ಕೂಡ. ಮಂಡ್ಯ ಜಿಲ್ಲೆಯಲ್ಲಿ ಸೊಸೆ ಅನ್ನುವ ಪದವನ್ನು ಬಳಸುವಾಗ ನಂಗೆ ಒಂದು ಹೆಮ್ಮೆ. ಯಾಕಂದ್ರೆ ಮಂಡ್ಯ ಜಿಲ್ಲೆಯಲ್ಲಿ ಹೆಣ್ಣುಮಗಳು ಅಥವಾ ನಲವತ್ತು-ಐವತ್ತು ವಯಸ್ಸು ದಾಟಿದ ಹಿರಿಯ ಮಹಿಳೆಗೆ ಸಿಗುವ ಗೌರವಕ್ಕಿಂತ ಇಲ್ಲಿ ಒಬ್ಬಳು ಸೊಸೆ ಇಂತಹಾ ಗೌರವವನ್ನ ಪಡೆಯುವುದು ಬಹಳ ವಿಶೇಷ ವಾದದ್ದು. ಹಾಗಾಗಿ ಮಂಡ್ಯ ಜಿಲ್ಲೆಯ ಸೊಸೆ ಅನ್ನೋದು ಸ್ವಲ್ಪ ವಿಶೇಷವಾದ್ದೇ. ಜಿಲ್ಲೆಯ ಹಲವು ಸೊಸೆಯರಿಗೆ ಈ ತರದ ಒಂದು ಸ್ವಾತಂತ್ರ‍್ಯ ಮತ್ತು ಅವಕಾಶಗಳು ಸಿಗಲಿ ಅಂತ ಈ ಸಂದರ್ಭದಲ್ಲಿ ಹೇಳಲು ಇಷ್ಟಪಡುತ್ತೇನೆ. 


ಉಳಿದಂತೆ ನಾನು ನನ್ನ ಕೃತಿಯನ್ನು ಕುರಿತು ಹೆಚ್ಚು ಮಾತಾಡ್ಲಿಕ್ ಇಷ್ಟ ಪಡಲ್ಲ. ಯಾಕೆಂದರೆ ಅದು ಈಗಾಗಲೇ ಮಾತಾಡ್ತಿದೆ. ಲೇಖಕಿಯಾಗಿ ನಾನೇನಾದ್ರೂ ಹೇಳಬೇಕೆಂದರೆ ನಾನು ಯಾಕೆ ಬರೆದೆ? ನನ್ನ ಕತೆಗಳನ್ನ ಯಾರಾದರೂ ಯಾಕೆ ಓದಬೇಕು ಅನ್ನೋ ಪ್ರಶ್ನೆ ಅಥವಾ ಯಾರದ್ದಾದರೂ ಕೃತಿಯನ್ನ ನಾವ್ಯಾಕೆ ಓದಬೇಕು ಅನ್ನೋ ಪ್ರಶ್ನೆಗಳು ನನ್ನನ್ನ ಯಾವಾಗ್ಲೂ ಕಾಡುತ್ತವೆ. ಆಗ ನಾನು ಯೋಚನೆ ಮಾಡೋದು, ಈ ಸಮಾಜದ ಭಾಗವಾಗಿ ಬದುಕುತ್ತಿರುವ, ಈ ವ್ಯವಸ್ಥೆಯ ಒಂದು ಪ್ರತಿನಿಧಿಯಾಗಿ ಕೆಲಸ ಮಾಡುತ್ತಿರುವ ಯಾರೇ ಆದರೂ ಅದರ ಆಗುಹೋಗುಗಳನ್ನು ಕುರಿತು ಯೋಚಿಸಲೇ ಬೇಕು. ಅದರಲ್ಲೂ ಲೇಖಕರಿಗೆ ಅಕ್ಷರದ ಮೂಲಕ ಸಮಾಜದ ಆಗುಹೋಗುಗಳ ಹುಳುಕನ್ನಾಗಲಿ, ಮೇಲ್ಮೆಯನ್ನಾಗಲಿ ಜಗತ್ತಿಗೆ ಕಾಣುವಂತೆ ಮಾಡುವ ಮತ್ತು ತಿದ್ದಿಕೊಳ್ಳುವಂತೆ ಮಾಡಲು ಸಾಧ್ಯ. ಹಾಗಾಗಿ ಅಕ್ಷರ ಬಲ ತುಂಬಾ ಗಟ್ಟಿಯಾಗಿರುತ್ತದೆ ಎಂಬ ನಂಬಿಕೆ ನನ್ನದು. 


ಇವತ್ತಿನ ಸಂಕೀರ್ಣ ಸಮಯದಲ್ಲಿ ಸಾಹಿತಿಗಳ ಮೇಲೆ ತುಂಬಾ ದೊಡ್ಡ ಜವಾಬ್ದಾರಿ ಇದೆ. ನನ್ನ ತಿಳುವಳಿಕೆಯಂತೆ ಸಾಹಿತಿಗಳಿಗೆ ಬಹುಮುಖ್ಯವಾಗಿ ಇರಬೇಕಾದದ್ದು ಸಹಜೀವಿಗಳೆಡೆಗೆ ಮಾನವೀಯತೆ ಮತ್ತು ಸಾಮಾಜಿಕ ಪ್ರಜ್ಞೆ ಎಂಬುದು ನನ್ನ ಬಲವಾದ ನಂಬಿಕೆ. ಉಪ್ಪುಚ್ಚಿಮುಳ್ಳು ಕೃತಿಯಲ್ಲಿ ಬರುವಂತಹ ಪಾತ್ರಗಳು ನನ್ನ ಸುತ್ತಮುತ್ತ ಬದುಕಿ ಹೋದಂತಹ, ನನ್ನ ಸುತ್ತ ಇದ್ದುಕೊಂಡು ನನಗೆ ಶಕ್ತಿಯನ್ನು ಕೊಡುತ್ತಿರುವ ಹೆಣ್ಣುಮಕ್ಕಳನ್ನು ಕುರಿತು ಹೆಚ್ಚು ಇದೆ. ಆ ಹೆಣ್ಣುಮಕ್ಕಳ ಜೀವನದಲ್ಲಿ ನನ್ನಿಂದ ಯಾವುದೇ ಬದಲಾವಣೆಗಳನ್ನು ತರಲಿಕ್ಕೆ ಸಾಧ್ಯವಿಲ್ಲದೇ ಇರಬಹುದು ಆದರೆ ಅವರ ಒಳಗಿದ್ದ ಸಂಕಟವನ್ನು ಈ ಕೃತಿಯ ಮೂಲಕ ನಾನು ಹೊರಪ್ರಪಂಚಕ್ಕೆ ದಾಟಿಸಿದ್ದೇನೆ ಅನ್ನುವಂತಹ ಒಂದು ಕನಿಷ್ಠ ಸಮಾಧಾನ ನನಗಿದೆ. ಈ ಕಾರಣದಿಂದಾಗಿ ಈ ಈ ವೇದಿಕೆಯಲ್ಲಿ ಇಷ್ಟು ದೈರ್ಯವಾಗಿ ಅಥವಾ ಇಷ್ಟು ಹೆಮ್ಮೆಯಿಂದ ನಿಂತು ಮಾತಾಡ್ತಿದ್ದೀನಿ ಅನ್ನಿಸುತ್ತದೆ.


ಇಂತಹ ಒಂದು ಸುಸಂದರ್ಭವನ್ನು ಒದಗಿಸಿದ್ದಕ್ಕಾಗಿ, ಇಂಥದೊಂದು ಆನಂದವನ್ನು ನನ್ನಲ್ಲಿ ಮೂಡಿಸಿದ್ದಕ್ಕಾಗಿ ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ಮತ್ತು ಅದರ ಭಾಗವಾಗಿ ಹಲವು ಸಾಮಾಜಿಕ ಕಳಕಳಿಯ ಕಾರ್ಯಗಳನ್ನು ಮಾಡುತ್ತಿರುವಂತಹ ಎಲ್ಲರಿಗೂ ನಾನು ವಂದನೆಗಳನ್ನು ಸಲ್ಲಿಸುತ್ತೇನೆ. ಧನ್ಯವಾದಗಳು.


( ಮಂಡ್ಯದಲ್ಲಿ ಕಳೆದ ವಾರ ಡಾ.ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿಯನ್ನು ಸ್ವೀಕರಿಸಿದ ಕತೆಗಾತಿ ದಯಾ ಗಂಗನಘಟ್ಟ ಆ ಸಮಾರಂಭದಲ್ಲಿ ಆಡಿದ ಹೃದಯಸ್ಪರ್ಶಿ ಮಾತುಗಳಿವು)