ಕಳಚುತ್ತಿರುವ ಕೃಷಿ ಸಂಸ್ಕೃತಿಯ ಕೊಂಡಿ -2

ಕಳಚುತ್ತಿರುವ ಕೃಷಿ ಸಂಸ್ಕೃತಿಯ ಕೊಂಡಿ -2

ಅಕ್ಕಡಿ ಬೇಸಾಯ

ಮಲ್ಲಿಕಾರ್ಜುನ ಹೊಸಪಾಳ್ಯ

(ಹಿಂದಿನ ಸಂಚಿಕೆ-1ರಿಂದ ಮುಂದುವರೆದಿದೆ)

ಕರ್ನಾಟಕದಲ್ಲಿ ಅಕ್ಕಡಿ ಬೇಸಾಯ


ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಅಕ್ಕಡಿ ಬೇಸಾಯ ಎಂಬ ವಿಶಿಷ್ಟ ಹೆಸರಿನಿಂದ ಕರೆಸಿಕೊಳ್ಳುವ ಪದ್ಧತಿ ವಿಭಿನ್ನವಾದುದು. ಆಂಧ್ರಪ್ರದೇಶ ಮತ್ತು ತಮಿಳುನಾಡುಗಳ ಕೆಲವು ಭಾಗಗಳಲ್ಲಿಯೂ ಕರ್ನಾಟಕದಲ್ಲಿರುವಂತೆಯೇ ಅಕ್ಕಡಿ ಬೇಸಾಯ ಪದ್ಧತಿ ಚಾಲ್ತಿಯಲ್ಲಿದೆ. ಕರ್ನಾಟಕದಲ್ಲಿ ಅಕ್ಕಡಿ ಪದ್ಧತಿಗೆ ಕಡ ಬಿಡುವುದು, ಸಾಲು ಬೆಳೆ ಇತ್ಯಾದಿ ಹೆಸರುಗಳೂ ಇವೆ. 

ರಾಜ್ಯದ ದಕ್ಷಿಣ ಭಾಗದಲ್ಲಿರಾಗಿ ಮತ್ತು ಶೇಂಗಾ ಮುಖ್ಯ ಬೆಳೆಗಳಾಗಿ ಅಕ್ಕಡಿ ಪದ್ಧತಿ ಚಾಲ್ತಿಯಲ್ಲಿದ್ದರೆ, ಉತ್ತರ ಕರ್ನಾಟಕದಲ್ಲಿ ಜೋಳ, ತೊಗರಿ, ಶೇಂಗಾ, ಹೆಸರು, ಸಾವೆ ಮುಖ್ಯ ಬೆಳೆಗಳಾಗಿ ಅಕ್ಕಡಿ ಬೆಳೆ ಪದ್ಧತಿಯನ್ನುಕಾಣಬಹುದು. ಮಲೆನಾಡು ಮತ್ತು ಕರಾವಳಿಯಲ್ಲಿ ಮಾತ್ರ ಅಕ್ಕಡಿ ಬೇಸಾಯ ಕಂಡು ಬರುವುದಿಲ್ಲ. 

ಕರ್ನಾಟಕದ ಅಕ್ಕಡಿ ಪದ್ಧತಿ ಒಂದು ಅತ್ಯುತ್ತಮ ಬೆಳೆ ಸಂಯೋಜನೆ. ಇಲ್ಲಿ ಏಕದಳ, ದ್ವಿದಳ, ಎಣ್ಣೆ ಕಾಳು ಮತ್ತುತರಕಾರಿ ಬೆಳೆಗಳ ಅಪರೂಪದ ಸಮ್ಮಿಶ್ರಣವಿದೆ. ಹಿಮಾಲಯದ ಬಾರಾನಾಜ್ ಹೊರತುಪಡಿಸಿದರೆ ದೇಶದಇನ್ನಾವುದೇ ಮಿಶ್ರ ಬೆಳೆಯು ನಮ್ಮರಾಜ್ಯದಷ್ಟು ಪಕ್ಕಾ ಆಗಿಲ್ಲ. ಬೆಳೆದು ನಿಂತಅಕ್ಕಡಿ ತಾಕುಗಳನ್ನು ಗಮನಿಸಿದರೆ ಅವುತಮ್ಮಕ್ರಮಬದ್ಧತೆಯಿಂದಲೇ ಗಮನಸೆಳೆಯುತ್ತವೆ. ಅಲ್ಲಿ ಸಾಧಾರಣಎತ್ತರದ ಮುಖ್ಯ ಬೆಳೆ, ಅದಕ್ಕಿಂತತುಸುಎತ್ತರ ಬೆಳೆದ ಅಕ್ಕಡಿ ಸಾಲುಗಳು, ಅಕ್ಕಡಿಗೆ ಹಬ್ಬಿದ ಬಳ್ಳಿಗಳು, ಹಳದಿ ಬಣ್ಣದ ಹೂವುಗಳ ಅಂಚಿನ ಬೆಳೆಗಳು, ಹೊಲದಾದ್ಯಂತ ಹರಡಿಕೊಂಡು ಹಳದಿ ಹೂಬಿಟ್ಟ ಬೆಳೆಗಳನ್ನು ಕಾಣಬಹುದು.ಇಡೀ ಹೊಲವೇ ಬರೆದಿಟ್ಟ ಚಿತ್ರದಂತೆ ಕಾಣುತ್ತದೆ. 

ಅಕ್ಕಡಿ ಬೇಸಾಯವು ರಾಜ್ಯದ ಮಳೆ ಆಶ್ರಿತ ಪ್ರದೇಶದಲ್ಲಿ ಹೆಚ್ಚು ಪ್ರಚಲಿತವಾಗಿದೆ. ಸಾಮಾನ್ಯವಾಗಿ ಸಣ್ಣ ಮತ್ತು ಮಧ್ಯಮ ರೈತರು ಈ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಅಕ್ಕಡಿ ಪದ್ಧತಿಯಲ್ಲಿ ಕಳೆ ನಾಶಕ, ಕೀಟ-ರೋಗ ನಾಶಕಗಳಂತಹ ರಸವಿಷಗಳ ಅತಿಯಾದ ಬಳಕೆಯಿಲ್ಲ. ಮಣ್ಣು ಮತ್ತು ನೀರಿನ ಮಾಲಿನ್ಯಕ್ಕೆ ಈ ಪದ್ಧತಿಯ ಕೊಡುಗೆ ತುಂಬಾ ಕಡಿಮೆ. ಬೃಹತ್ ಕಂಪನಿ ಒಳಸುರಿಗಳ ಅವಲಂಬನೆಯೂ ಈ ಪದ್ಧತಿಯಲ್ಲಿ ನಗಣ್ಯ ಎನ್ನುವಷ್ಟಿದೆ. ಭತ್ತಹೊರತುಪಡಿಸಿದರೆ ಬಹುತೇಕ ಆಹಾರ ಧಾನ್ಯಗಳು ಒಣಭೂಮಿ ಪ್ರದೇಶದಿಂದಲೇ ಬೆಳೆಯಲ್ಪಡುತ್ತವೆ. 

ದಕ್ಷಿಣಕರ್ನಾಟಕದಲ್ಲಿ ಶೇಂಗಾದೊಂದಿಗೆ ಹಾಕಲ್ಪಡುವ ಅಕ್ಕಡಿ ಬೆಳೆಗಳೆಂದರೆ ಅವರೆ, ತೊಗರಿ, ಹುರುಳಿ, ಜೋಳ, ಹೆಸರು, ಸಜ್ಜೆ, ನವಣೆ, ಹರಳು ಮತ್ತು ಅಲಸಂದೆ. ಇವುಗಳಲ್ಲಿ ಒಂದೆರಡು ಬೆಳೆಗಳು ಸೇರಿಕೊಳ್ಳಬಹುದುಅಥವಾಕೈಬಿಡಬಹುದು. ಹರಳು ಹಾಗೂ ಹುರುಳಿ ಬೆಳೆಗಳು ಬಹುತೇಕ ಅಂಚು ಬೆಳೆ ಅಥವಾ ಬಲಿ ಬೆಳೆಗಳಾಗಿರುತ್ತವೆ. ಶೇಂಗಾ ಸಾಲಿನಿಂದ ಸಾಲಿಗೆ ಒಂದರಿಂದ ಒಂದೂವರೆ ಅಡಿ ಅಂತರವಿರುತ್ತದೆ. 8ರಿಂದ 15 ಸಾಲುಗಳ ನಂತರ ಒಂದು ಸಾಲು ಅಕ್ಕಡಿ ಹಾಕುವುದು ರೂಢಿ.

ಕೆಲವು ಭಾಗದ ರೈತರು ಬದುವಿನ ಪಕ್ಕ 3ರಿಂದ 4 ಸಾಲು ಅಂಚು ಬೆಳೆ ಹಾಕುತ್ತಾರೆ. ಮೊದಲು ಹರಳು ನಂತರ ಹುರುಳಿ ಅಥವಾ ಹುಚ್ಚಳ್ಳು ಅಥವಾಯಾವುದಾದರೂ ಸಿರಿಧಾನ್ಯವನ್ನು 2-3 ಸಾಲು ಬಿತ್ತುವುದು ಪದ್ಧತಿ.ಇನ್ನು ಕೆಲವು ಭಾಗಗಳಲ್ಲಿ ಶೇಂಗಾ ಜೊತೆನವಣೆ ಮತ್ತುಹರಳನ್ನು ಮಿಶ್ರ ಮಾಡಿಬಿತ್ತುತ್ತಾರೆ. ಕೆಲವು ರೈತರು ಶೇಂಗಾ ಜೊತೆ ಮೂಲಂಗಿ, ದಂಟಿನ ಸೊಪ್ಪುಇತ್ಯಾದಿ ತರಕಾರಿಗಳನ್ನೂ ಮಿಶ್ರ ಮಾಡಿ ಬಿತ್ತುತ್ತಾರೆ.

ಉತ್ತರಕರ್ನಾಟಕದಲ್ಲಿ ಶೇಂಗಾ ಜೊತೆಗೆ ಬಿತ್ತುವ ಮಿಶ್ರ ಬೆಳೆಗಳಲ್ಲಿ ಸ್ವಲ್ಪ ವ್ಯತ್ಯಾಸವಾಗುತ್ತದೆ. ಅಲ್ಲಿ ಶೇಂಗಾ ಮುಖ್ಯ ಬೆಳೆಯಾಗಿ ಅದರಜತೆ ಅಲಸಂದೆ, ನವಣೆ, ಅಳಿವಿ, ಹೆಸರು, ಉದ್ದು ಬೆಳೆಗಳನ್ನು ಸಾಲುಗಳಲ್ಲಿ ಬಿತ್ತಲಾಗುತ್ತದೆ. ಹೊಲದಅಂಚಿನಲ್ಲಿ ಮರಹರಳು, ಗುರೆಳ್ಳು, ಸಾಸಿವೆ ಹಾಕುತ್ತಾರೆ. 

ರಾಗಿಮತ್ತುಅಕ್ಕಡಿ ಬೇಸಾಯ


ರಾಗಿ ಮತ್ತು ಅಕ್ಕಡಿ ಬೆಳೆಗಳ ಸಂಯೋಜನೆ ಬಹು ವ್ಯಾಪಕವಾಗಿ ಇರುವಂತಹುದು. ರಾಗಿಯೊಂದಿಗೆ ಸಾಸಿವೆಯನ್ನು ಮಿಶ್ರ ಮಾಡುವುದು ಸಾಮಾನ್ಯ ಪದ್ಧತಿ. ಕನಕಪುರ ಭಾಗದಲ್ಲಿರಾಗಿ ಕೈ ಚೆಲ್ಲನೆ ಮಾಡಿದ ನಂತರ ಇಡೀ ಹೊಲಕ್ಕೆ ಕತ್ತರಿ ಯಾಕಾರದಲ್ಲಿ (ಇಂಗ್ಲೀಷಿನ ಎಕ್ಸ್ಆಕಾರ) ಎರಡುಅಡ್ಡ ಸಾಲುಗಳನ್ನು ಹೊಡೆದು ಅದರಲ್ಲಿ ಹುಚ್ಚಳ್ಳು ಬಿತ್ತುವ ಪದ್ಧತಿ ಇತ್ತು. ಜೊತೆಗೆ ಸಾಲುಗಳಲ್ಲಿ ಇತರೆ ಅಕ್ಕಡಿ ಬೆಳೆಗಳನ್ನೂ ಹಾಕುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಹೀಗೆ ಕತ್ತರಿ ಸಾಲು ಹೊಡೆದು ಹುಚ್ಚೆಳ್ಳು ಬಿತ್ತುವುದು ಬಹುತೇಕ ಕಡಿಮೆಯಾಗಿದೆ.

ಸಾಲುಗಳಲ್ಲಿ ರಾಗಿ ಮತ್ತುಅಕ್ಕಡಿ ಬಿತ್ತುವವರು ಸೆಡ್ಡೆ ಬಳಸುತ್ತಾರೆ. ಗಂಡಸರು ಎತ್ತುಗಳನ್ನು ಹೂಡಿದ ನೇಗಿಲಿನಿಂದ ಸಾಲು ಹೊಡೆದರೆ, ಹೆಣ್ಣುಮಕ್ಕಳು ಉಡಿಯಲ್ಲಿಅಥವಾ ಮಡಿಲಲ್ಲಿ ವಿವಿಧ ಪದರಗಳಲ್ಲಿ ರಾಗಿ ಮತ್ತುಅಕ್ಕಡಿ ಕಾಳುಗಳನ್ನು ಕಟ್ಟಿಕೊಂಡು ಸಾಲು ಬಿಡುತ್ತಾರೆ. ಅಪಾರ ತಾಳ್ಮೆ, ಎತ್ತುಗಳ ವೇಗಕ್ಕೆ ನಡೆಯಬೇಕಾದಚುರುಕುತನ, ಸಾಮರ್ಥ್ಯ, ಸೆಡ್ಡೆ ಮೂಲಕ ಸಮನಾಗಿ ಬೀಜಗಳನ್ನು ಉದುರಿಸುವ ಕಲೆ, ಇಂತಿಷ್ಟು ಸಾಲು ರಾಗಿಯ ನಂತರಅಕ್ಕಡಿ ಬಿತ್ತಬೇಕೆನ್ನುವಜ್ನಾನಅಗತ್ಯವಾಗಿ ಬೇಕಾಗುತ್ತದೆ. ಇದನ್ನು ನಮ್ಮ ಹೆಣ್ಣುಮಕ್ಕಳು ಸಮರ್ಥವಾಗಿ ನಿಭಾಯಿಸುತ್ತಾರೆ. 

ಹತ್ತಿ ಮತ್ತು ಅಕ್ಕಡಿ ಬೆಳೆ


ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಮುಖ್ಯ ವಾಣಿಜ್ಯ ಬೆಳೆಯಾಗಿರುವ ಹತ್ತಿಯಲ್ಲಿಯೂ ಸಾಲು ಬೆಳೆ ಹಾಕುವ ಪದ್ಧತಿಯನ್ನು ಕಾಣಬಹುದು. ಮೇಲ್ನೋಟಕ್ಕೆ ಹತ್ತಿ ಹೊಲದತಾಕು ಏಕ ಬೆಳೆಯಂತೆ ಭಾಸವಾದರೂ ಒಳಹೊಕ್ಕು ನೋಡಿದಾಗ ತರಹೇವಾರಿ ಮಿಶ್ರ ಬೆಳೆ ಹಾಗೂ ಸಾಲು ಬೆಳೆಗಳು ಕಾಣುತ್ತವೆ. 

ಚಾಮರಾಜನಗರ ಭಾಗದಲ್ಲಿ ಹತ್ತಿಯಜೊತೆ 2 ಸಾಲು ತೊಗರಿ ಹಾಕುತ್ತಾರೆ. ಅಂದರೆ 8-10 ಸಾಲು ಹತ್ತಿ ನಂತರ ಒಂದು ಸಾಲು ತೊಗರಿ. ಅಲ್ಲದೆ ಹತ್ತಿ ಬೀಜ ಹುಟ್ಟದಿರುವ ಗುಣಿಗಳಿಗೆ ಅಲಸಂದೆಅಥವಾತಡಗುಣಿಊರುತ್ತಾರೆ. ಹತ್ತಿ ಹೊಲದ ಬದುಗಳ/ತೆವರಿಗಳ ಪಕ್ಕ ಹರಳು ಬಿತ್ತುವುದುರೂಢಿ. 

ಸಾಂಪ್ರದಾಯಿಕವಾಗಿ ಹತ್ತಿ ಬೆಳೆಯುವ ಹಾವೇರಿ ಭಾಗದಲ್ಲಿ 8-10 ಸಾಲು ಹತ್ತಿ ನಂತರ ಒಂದು ಸಾಲು ತೊಗರಿ ಹಾಕುವ ಪದ್ಧತಿಯೇಚಾಲ್ತಿಯಲ್ಲಿದೆ. ಸ್ಥಳಾವಕಾಶ ನೋಡಿಕೊಂಡು ಅಲ್ಲಲ್ಲಿ ಬದನೆ, ಚೌಳಿ ಇತ್ಯಾದಿ ತರಕಾರಿ ಬಿತ್ತನೆ ಮಾಡುವುದುರೂಢಿ.

ಈ ರೀತಿ ಸಾಂಪ್ರದಾಯಿಕ ಬೆಳೆಗಳ ವ್ಯಾಪ್ತಿ ಕುಂಠಿತಗೊAಡು ಹೊಸ ಬೆಳೆಗಳ ಆಗಮನವಾದಾಗ ಅವುಗಳ ನಡುವೆಯೂ ಅಕ್ಕಡಿ ಬೆಳೆ ಹಾಕುವ ಜಾಣ್ಮೆ ನಮ್ಮ ರೈತರದು. ದೇಸಿ ಬಿತ್ತನೆ ಬೀಜಗಳು ಮತ್ತು ತಳಿಗಳು ಕಣ್ಮರೆಯಾದರೂ ಸುಧಾರಿತ ತಳಿಗಳನ್ನೇ ಅಕ್ಕಡಿ ವ್ಯವಸ್ಥೆಗೆ ಪಳಗಿಸಿದ, ಆ ಮೂಲಕ ಅಕ್ಕಡಿ ಪದ್ಧತಿ ಪರಂಪರೆಯನ್ನು ಈಗಲೂ ಜೀವಂತವಾಗಿಟ್ಟಿರುವ ಶ್ರೇಯಸ್ಸು ರಾಜ್ಯದ ರೈತರಿಗೆ ಸಲ್ಲಬೇಕು.

ಅಕ್ಕಡಿ ಬೇಸಾಯದ ಅನುಕೂಲಗಳು


ಈ ಪದ್ಧತಿಯು ನೂರಾರು ವರ್ಷಗಳಿಂದ ಬಳಕೆಯಲ್ಲಿರುವ ಹಾಗೂ ಕಾಲಾನುಕ್ರಮದಲ್ಲಿ ರೈತರ ಹೊಲಗಳಲ್ಲಿಯೇ ಅಭಿವೃದ್ಧಿ ಹೊಂದುತ್ತಾ, ಮಾರ್ಪಡಾಗುತ್ತಾ ಬಂದಿರುವ ವಿಧಾನ. ರೈತರೇ ಇದರ ಅನ್ವೇಷಕರು. ಈ ಪದ್ಧತಿಯ ಅನುಕೂಲಗಳೆಂದರೆ;

ಕುಟುಂಬದ ಪೌಷ್ಟಿಕ ಆಹಾರ ಭದ್ರತೆ


ಒಂದು ಅಕ್ಕಡಿ ತಾಕಿನ ಎದುರು ನಿಂತು ನೋಡಿದರೆ ಅಲ್ಲಿ ಒಂದು ಕುಟುಂಬದ ಹೊಟ್ಟೆ ತುಂಬಿಸಲು ಅಗತ್ಯವಾದ ಬಹುತೇಕ ಆಹಾರ ಧಾನ್ಯಗಳು ಕಾಣಿಸುತ್ತವೆ. ಪೌಷ್ಟಿಕ ಆಹಾರ ಕಣಜವೇ ಅಲ್ಲಿರುತ್ತದೆ. ರಾಗಿ, ಜೋಳ, ಸಜ್ಜೆ, ನವಣೆ, ಸಾಮೆ ಮುಂತಾದ ಏಕದಳ ಬೆಳೆಗಳು, ಅವರೆ, ತೊಗರಿ, ಉದ್ದು, ಹೆಸರು, ಅಲಸಂದೆ, ಹುರುಳಿ ಮುಂತಾದ ದ್ವಿದಳ ಧಾನ್ಯ ಬೆಳೆಗಳು, ಶೇಂಗಾ, ಕುಸುಬೆ, ಹರಳು, ಸಾಸಿವೆ, ಎಳ್ಳು, ಹುಚ್ಚೆಳ್ಳು ಇತ್ಯಾದಿ ಎಣ್ಣೆ ಕಾಳುಗಳು, ರಾಜಗೀರ, ಮೂಲಂಗಿ, ಪುಂಡಿ ಮುಂತಾದ ತರಕಾರಿಗಳು ಅಕ್ಕಡಿ ಸಾಲುಗಳಲ್ಲಿ ಸಮ್ಮಿಳಿತಗೊಂಡಿದ್ದು ಇವೆಲ್ಲವೂ ಕುಟುಂಬದ ದೈನಂದಿನ ಆಹಾರ ಪೂರೈಕೆ ಮಾಡುತ್ತವೆ. ಅಲ್ಲದೆ ಅಕ್ಕಡಿ ಹೊಲಗಳಲ್ಲಿ ಹಲವಾರು ಬೆರಕೆ ಸೊಪ್ಪುಗಳು ಕಳೆ ರೂಪದಲ್ಲಿ ಹುಟ್ಟಿ ಅವೂ ಸಹ ಅಡುಗೆ ಮನೆಗೆ ಅಗತ್ಯವಾಗಿ ಬೇಕಾದ ತರಕಾರಿಗಳೇ ಆvರುತ್ತವೆ. 

ಮನುಷ್ಯನ ಬೌದ್ಧಿಕ ಮತ್ತು ದೈಹಿಕ ಬೆಳವಣಿಗೆಗೆ ಬೇಕಾದ ಸಮತೋಲಿತ ಆಹಾರ ಎಲ್ಲವೂ ಇಲ್ಲಿ ಲಭ್ಯ. ಹಸಿ ಕಾಳು, ತರಕಾರಿ ಮತ್ತು ಸೊಪ್ಪುಗಳು ಅಕ್ಕಡಿ ಬೆಳೆಗಳು ಕಟಾವಾಗುವವರೆಗೂ ದೈನಂದಿನ ಅಗತ್ಯವನ್ನು ಪೂರೈಸಿದರೆ, ಕಟಾವಾದ ನಂತರ ಒಣಕಾಳುಗಳು, ಬೇಳೆ, ಎಣ್ಣೆ ಹಾಗೂ ಏಕದಳ ಧಾನ್ಯಗಳು ಇಡೀ ವರ್ಷ ಮನೆಯವರ ಹೊಟ್ಟೆ ತುಂಬಿಸುತ್ತವೆ. ಕೇವಲ ಒಂದು ಎಕರೆ ಜಮೀನು ಉಳ್ಳವರೂ ಸಹ ಅಕ್ಕಡಿ ಬೆಳೆಗಳ ವ್ಯವಸ್ಥಿತ ಸಂಯೋಜನೆಯಿಂದ ಆಹಾರ ಭದ್ರತೆ ಸಾಧಿಸಬಹುದು.

ಜಾನುವಾರುಗಳ ಮೇವು ಪೂರೈಕೆ


ಮನುಷ್ಯ ಹಿಂದಿನ ಕಾಲದಲ್ಲಿ ವ್ಯವಸಾಯಕ್ಕೆ, ಕರಾವಿಗೆ, ಮನೆ ಬಳಕೆಗೆ ಹತ್ತಾರು ಎತ್ತು, ಹಸು, ಎಮ್ಮೆ, ಕುರಿ-ಮೇಕೆ, ಕೋಳಿಗಳನ್ನು ಸಾಕುತ್ತಿದ್ದ. ಅವುಗಳಿಗೆ ಮೇವು ಒದಗಿಸಲು ಅಕ್ಕಡಿ ಬೆಳೆಗಳ ಮೊರೆ ಹೋಗಿರುವುದು ಸಹಜವೇ ಆಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಅಕ್ಕಡಿಯಲ್ಲಿ ಹಾಕುವ ಜೋಳದ ತಳಿಯೊಂದಕ್ಕೆ ಎತ್ತಿನ ಜೋಳ/ಮೇವಿನ ಜೋಳ ಎಂಬ ಹೆಸರೇ ಇದೆ. ಬೆಳೆಗಳು ಕಟಾವಾಗುವ ಮುನ್ನ ಹಸಿ ಜೋಳದ ಕಡ್ಡಿ ಅಥವಾ ಸೆಪ್ಪೆ, ಅವರೆ, ಅಲಸಂದೆ ಕುಡಿಗಳು, ಜೋಳ ಮತ್ತು ಹುರುಳಿ ಮಿಶ್ರಣವನ್ನು ಕತ್ತರಿಸಿ ತಂದು ಜಾನುವಾರುಗಳಿಗೆ ಹಾಕುತ್ತಾರೆ. ಕುರಿ-ಮೇಕೆ ಮರಿಗಳಿಗೆ ಜೋಳದ ಗರಿ, ಹಸಿ ಸೊಪ್ಪು, ಕೊರಲೆ ಹುಲ್ಲು ಇತ್ಯಾದಿಗಳನ್ನು ಮುರಿದು ತಂದು ಕಟ್ಟುತ್ತಾರೆ. ಎಳೆ ಮರಿಗಳ ಬೆಳವಣಿಗೆಗೆ ಈ ಮೇವು ಮಿಶ್ರಣ ಅತ್ಯಂತ ಸೂಕ್ತವಾದುದು. 

ಮಣ್ಣಿನ ಫಲವತ್ತತೆ


ಮಣಿನ ಫಲವತ್ತತೆ ಹೆಚ್ಚಿಸುವಲ್ಲಿ ಅಕ್ಕಡಿ ಬೇಸಾಯದಷ್ಟು ಸರಳ ಮತ್ತು ಸುಲಭ ವಿಧಾನ ಮತ್ತೊಂದಿಲ್ಲ. ಇತರೆ ಬೆಳೆ ವಿಧಾನಗಳಲ್ಲಿ ಬೆಳೆ ಕಟಾವಾದ ನಂತರ ಮಣ್ಣಿನ ಫಲವತ್ತತೆ ಕುಂಠಿತವಾಗಿದ್ದರೆ ಅಕ್ಕಡಿ ಪದ್ಧತಿಯಲ್ಲಿ ಅದು ವೃದ್ಧಿಸಿರುತ್ತದೆ. ಇದಕ್ಕೆ ಕಾರಣ ವೈವಿಧ್ಯಮಯ ಬೆಳೆಗಳ ಎಲೆಗಳು, ಗರಿಗಳು, ಬೇರುಗಳು, ಕಾಂಡಗಳು, ದಂಟುಗಳು, ಹೂವುಗಳು ಮಣ್ಣಿಗೆ ಬಿದ್ದು ಅಲ್ಲಿ ಗೆದ್ದಲುಗಳಿಂದ ಅಥವಾ ಸಹಜವಾಗಿ ಕಳಿತು ಗೊಬ್ಬರವಾಗಿ ಮಾರ್ಪಡುತ್ತವೆ. ದ್ವಿದಳ ಧಾನ್ಯಗಳ ಗಂಟು ಬೇರುಗಳು ಮಣ್ಣಿನಲ್ಲಿ ಸಾರಜನಕ ಸ್ಥಿರೀಕರಿಸುತ್ತವೆ. ಸಾರವಿಲ್ಲದ ಭೂಮಿಯಲ್ಲಿ ಸತತ 3-4 ವರ್ಷ ಅಕ್ಕಡಿ ಬೆಳೆ ಇಟ್ಟರೆ ಸಹಜವಾಗಿಯೇ ಮಣ್ಣಿನ ರಚನೆ ಬದಲಾಗುತ್ತದೆ ಹಾಗೂ ಫಲವತ್ತಾಗುತ್ತದೆ.

ಜೀವಂತ ಮುಚ್ಚಿಗೆ


ಅಕ್ಕಡಿ ಬೆಳೆಗಳು ಇಡೀ ಹೊಲವನ್ನು ಮುಚ್ಚಿಕೊಂಡಿರುತ್ತವೆ. ಹಾಗಾಗಿ ಮಣ್ಣಿನಲ್ಲಿ ತೇವಾಂಶವು ಹೆಚ್ಚು ಕಾಲ ಇರುತ್ತದೆ. ಮಳೆ ತಡವಾದರೂ ಬೆಳೆಗಳು ತಡೆದುಕೊಳ್ಳುವ ಶಕ್ತಿ ಇರುತ್ತದೆ. ಕಳೆಬೆಳೆಯಲು ಹೆಚ್ಚು ಅವಕಾಶ ಇರುವುದಿಲ್ಲ. ಅಲ್ಲದೆ ಅಕ್ಕಡಿ ಬೆಳೆಗಳ ಉಳಿಕೆಗಳು ನೆಲಕ್ಕೆ ಬಿದ್ದು ಅವೂ ಸಹ ಮುಚ್ಚಿಗೆಯಂತೆ ಕಾರ್ಯನಿರ್ವಹಿಸುತ್ತವೆ. 

ನಿರಂತರ ಉದ್ಯೋಗ ಲಭ್ಯತೆ


ಅಕ್ಕಡಿ ಬೇಸಾಯವೆಂದರೆ ನಿರಂತರವಾಗಿ ಹೊಲದಲ್ಲಿರುವುದು. ಬಿತ್ತನೆಯಿಂದ ಮೊದಲುಗೊಂಡು ಕಟಾವಿನವರೆಗೂ ಇಡೀ ಕುಟುಂಬಕ್ಕೆ ಕೆಲಸ ಇದ್ದೇ ಇರುತ್ತದೆ. ಏಕ ಬೆಳೆ ಪದ್ಧತಿಯಲ್ಲಿ ಒಂದು ಸಲ ಬೆಳೆ ಕಟಾವಾದರೆ ಮತ್ತೆ ಹೊಲದಲ್ಲಿ ಕೆಲಸ ಇರುವುದಿಲ್ಲ. ಆದರೆ ಅಕ್ಕಡಿ ಬೆಳೆಗಳಿದ್ದರೆ ಸತತ ಮೂರು ತಿಂಗಳು ಕಟಾವಿನ ಕೆಲಸ ಇರುತ್ತದೆ. ಉದಾಹರಣೆಗೆ ರಾಗಿ ಮತ್ತು ಅಕ್ಕಡಿ ತಾಕಿನಲ್ಲಿ ಮೊದಲು ಸಾಸಿವೆ ಕಟಾವಿಗೆ ಬರುತ್ತದೆ. ನಂತರ ರಾಗಿ ಮತ್ತು ಸಿರಿಧಾನ್ಯಗಳು, ಅದಾದ ನಂತರ ಅಕ್ಕಡಿ ಬೆಳೆಗಳು ಒಂದೊಂದಾಗಿ ಕಟಾವಾಗುತ್ತಲೇ ಇರುತ್ತವೆ. ಅವರೆ, ಅಲಸಂದೆ, ಹೆಸರು, ಹರಳು ಮತ್ತು ಉದ್ದಿನ ಬೆಳೆಗಳನ್ನು ಹಲವು ಸಲ ಕಟಾವು ಮಾಡಬೇಕಾಗುತ್ತದೆ. ಹುರುಳಿ, ತೊಗರಿ ಮಾತ್ರ ಒಂದೇ ಸಲ ಕಟಾವಾಗುತ್ತವೆ. ಹರಳು ಗಿಡಗಳ ಗೊನೆಗಳನ್ನು ವಾರಕ್ಕೊಮ್ಮೆಯಂತೆ ಮುರಿಯುತ್ತಲೇ ಇರಬೇಕು. 

ಮುಖ್ಯ ಬೆಳೆಯ ಕಟಾವು, ಒಕ್ಕಣೆ, ಅಕ್ಕಡಿ ಬೆಳೆಗಳಲ್ಲಿ ಹಸಿ ಕಾಯಿ ಬಿಡಿಸುವುದು, ತೆನೆ ಎತ್ತುವುದು, ಒಣ ಕಾಯಿ ಬಿಡಿಸುವುದು, ಒಣಗಿಸುವುದು, ಬಡಿಯುವುದು, ಬೀಜ ಮಾಡುವುದು, ಮಣ್ಣು ಕಟ್ಟುವುದು, ಬೇಳೆ ಒಡೆಯುವುದು, ಬಣವೆ ಹಾಕುವುದು . .ಹೀಗೆ ಅಕ್ಕಡಿ ಹೊಲವೆಂಬುದು ನಿರಂತರ ಉದ್ಯೋಗ ತಾಣ.

(ಮುಂದುವರೆಯುವುದು)