ನಮ್ಮ ಕಥೆ ಏನು?
ಎಸ್‌ಐಆರ್‌ನಿಂದಾಗಿ ಮತದಾರರ ಪಟ್ಟಿಯಿಂದ ಹೊರಗುಳಿಯುವ ದೇಶದ 13 ಕೋಟಿ ಜನರ ಪ್ರಶ್ನೆ

ನಾ ದಿವಾಕರ
ಭಾರತೀಯ ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮೂರು ಹಂತಗಳಲ್ಲಿ ಭಾರತದ ಬಹುತೇಕ ರಾಜ್ಯಗಳಲ್ಲಿ ತನ್ನ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದೆ. ಕೆಲವು ಸಣ್ಣ ರಾಜ್ಯಗಳನ್ನು ಹೊರತುಪಡಿಸಿ, ಉಳಿದಂತೆ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದೆ. ಸಾಮಾನ್ಯವಾಗಿ ಸಾಂವಿಧಾನಿಕ ಚೌಕಟ್ಟಿನಲ್ಲಿ ಯಾವುದೇ ಪ್ರಜಾಸತ್ತಾತ್ಮಕ ಸಂಸ್ಥೆ ನಡೆಸುವ ಕಾರ್ಯಾಚರಣೆಗಳು ಪಾರದರ್ಶಕವಾಗಿದ್ದು, ಜನಸಾಮಾನ್ಯರ ಜಿಜ್ಞಾಸೆ, ಗೊಂದಲಗಳಿಗೆ ಉತ್ತರ ನೀಡುವಂತಿರುತ್ತದೆ. ಬಹುಶಃ ಸ್ವತಂತ್ರ ಭಾರತದಲ್ಲಿ ಮೊಟ್ಟಮೊದಲ ಬಾರಿ ಈ ನಿರೀಕ್ಷೆ ಹುಸಿಯಾಗಿದೆ. ಚುನಾವಣಾ ಆಯೋಗದ ಎಸ್‌ಐಆರ್ ಪ್ರಕ್ರಿಯೆ ಇನ್ನೂ ಹೆಚ್ಚಿನ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕರಡು ಮತದಾರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಕಾಣದ ಭಾರತೀಯ ಪ್ರಜೆಗಳು ಈಗ ತಮ್ಮ ಪೌರತ್ವದ ಸಾಕ್ಷಿಗಾಗಿ ಹುಡುಕಾಡುವಂತಾಗಿದೆ.
ಉತ್ತರ ಕಾಣದ ಪ್ರಶ್ನೆಗಳು
ನಾವು ಇಷ್ಟು ವರ್ಷಗಳಿಂದ ಇಲ್ಲೇ ಬಾಳಿ ಬದುಕಿದ್ದೇವಲ್ಲವೇ ? ದಶಕಗಳಿಂದ ಮತದಾನದ ಸಾಂವಿಧಾನಿಕ ಹಕ್ಕನ್ನು ಬಳಸಿಕೊಂಡು ನಮಗೆ ಬೇಕಾದ ಪಕ್ಷಗಳನ್ನು ಚುನಾಯಿಸಿದ್ದೇವಲ್ಲವೇ ? ಆದರೆ ನೀವು ನಾಳೆಯಿಂದ ಈ ಮತದಾನದ ಹಕ್ಕನ್ನು ಚಲಾಯಿಸುವಂತಿಲ್ಲ ಎಂದು ಎಸ್ ಐ ಆರ್ ಹೇಳಿಬಿಟ್ಟರೆ ನಾವು ಎಲ್ಲಿಗೆ ಹೋಗುವುದು ?
ಸಾಂವಿಧಾನಿಕ ಪ್ರಕ್ರಿಯೆಯ ಸಿಕ್ಕುಗಳು
2025ರ ಬಿಹಾರ ವಿಧಾನಸಭಾ ಚುನಾವಣೆಗಳಿಗೂ ಮುನ್ನ ಅತಿ ಅವಸರದಲ್ಲಿ ಜಾರಿಗೊಳಿಸಲಾದ ಎಸ್‌ಐಆರ್ ಪ್ರಕ್ರಿಯೆ ಒಂದೇ ವರ್ಷದಲ್ಲಿ ಈ ಪ್ರಶ್ನೆಗಳ ಆಡುಂಬೊಲದಲ್ಲಿ ದಿಕ್ಕುತೋರದೆ ನಿಂತ ಒಂದು ಪ್ರತ್ಯೇಕ ಸಮಾಜವನ್ನೇ ಸೃಷ್ಟಿಸಿಬಿಟ್ಟಿದೆ. ದೇಶದ ಒಟ್ಟು ಜನಸಂಖ್ಯೆಯ ಶೇಕಡಾ 10ಕ್ಕಿಂತಲೂ ಹೆಚ್ಚು ಜನರು ಈ ʼ ಮತವಂಚಿತ ಸಮಾಜದ ʼ ಸದಸ್ಯರಾಗಿ ಯಾರ ಕಡೆ ನೋಡಬೇಕು ? ಯಾರಲ್ಲಿ ಮೊರೆ ಹೋಗಬೇಕು ? ಪವಿತ್ರ ಎನ್ನಲಾಗುವ ಸಂವಿಧಾನಕ್ಕೋ, ಚುನಾಯಿತ ಜನಪ್ರತಿನಿಧಿಗಳಿಗೋ , ಪ್ರಭುತ್ವದ ಕಾನೂನು ಗ್ರಂಥಗಳಿಗೋ ಅಥವಾ ಸದಾ ಆಸರೆಯ ತಾಣವಾಗಿದ್ದ ನ್ಯಾಯಾಂಗಕ್ಕೋ ?
1893ರ ತಮ್ಮ ಇತಿಹಾಸ ಪ್ರಸಿದ್ಧ ಉಪನ್ಯಾಸದಲ್ಲಿ ಸ್ವಾಮಿ ವಿವೇಕಾನಂದರು ಅಮೆರಿಕದ ನೆಲದಲ್ಲಿ ನಿಂತು “ಭ್ರಾತೃ ಭಗಿನಿಯರೇ” (ಸೋದರ ಸೋದರಿಯರೇ} ಎಂದು ಸಂಬೋಧಿಸಿದಾಗ ಇಡೀ ವಿಶ್ವವೇ ನಿಬ್ಬೆರಗಾಗಿ ನೋಡಿತ್ತು. 133 ವರ್ಷಗಳ ನಂತರ ಭಾರತದ ಸಾಂವಿಧಾನಿಕ ಪ್ರಜಾಪ್ರಭುತ್ವವನ್ನು ಸಂರಕ್ಷಿಸುವ ಜವಾಬ್ದಾರಿ ಹೊತ್ತಿರುವ ಮುಖ್ಯ ಚುನಾವಣಾ ಆಯುಕ್ತರು ಅಹಮದಾಬಾದ್ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್ ಆಯೋಜಿಸಿದ ಸಮಾವೇಶದಲ್ಲಿ, ಇದೇ ಪದವನ್ನು ಬಳಸಿರುವುದು ಅಷ್ಟೇ ಬೆರಗು ಮೂಡಿಸುತ್ತದೆ, ಆದರೆ ಬೇರೊಂದು ಅರ್ಥದಲ್ಲಿ. “ ಹಲವು ರಾಜ್ಯಗಳಲ್ಲಿ ಈಗಾಗಲೇ ಪೂರೈಸಲಾಗಿರುವ ಮತ್ತು ನಡೆಯುತ್ತಿರುವ ಎಸ್‌ಐಆರ್ ಸೋದರ ಸೋದರಿಯರಿಗೆ ಕೊಂಚ ಕಷ್ಟಕರವಾಗಿ ಕಾಣಬಹುದು ” ಎಂದು ಹೇಳಿರುವ ಆಯುಕ್ತರು ಅ ಕಷ್ಟ ಎಂತಹುದು ಎಂದಾದರೂ ಹೇಳಬಹುದಿತ್ತು. ನಿತ್ಯ ಬದುಕಿನ ಸಂಕಷ್ಟಗಳಿಂದಲೇ ಹೈರಾಣಾಗಿರುವ ತಳಸಮಾಜದ ಜನತೆಗೆ ಮತ್ತೊಂದು ಕಷ್ಟ ಎಂದರೆ ಗಾಬರಿಯಾಗುವುದು ಸಹಜವಲ್ಲವೇ ?
“ ಒಬ್ಬ ವ್ಯಕ್ತಿಯ ಪೌರತ್ವದ ಬಗ್ಗೆ ಸಂಶಯವಿದ್ದಲ್ಲಿ ಮತದಾರರ ಪಟ್ಟಿಯಿಂದ ಅವರ ಹೆಸರನ್ನು ತೆಗೆದುಹಾಕುವ ಸಾಂವಿಧಾನಿಕ ಅಧಿಕಾರ ಭಾರತೀಯ ಚುನಾವಣಾ ಆಯೋಗಕ್ಕೆ ಇದ್ದರೂ, ಪೌರತ್ವವನ್ನು ನಿರ್ಧರಿಸುವ ಅಧಿಕಾರ ಅದಕ್ಕಿಲ್ಲ ” ಎಂದು ಸುಪ್ರೀಂ ಕೋರ್ಟ್ ಜುಲೈ 18 ರ ತೀರ್ಪಿನಲ್ಲಿ ಸ್ಪಷ್ಟವಾಗಿ ಪುನರುಚ್ಚರಿಸಿದೆ. ಆದರೆ ಮುಖ್ಯ ಚುನಾವಣಾ ಆಯುಕ್ತರು ಪೌರತ್ವದ ಪ್ರಸ್ತಾಪ ಮಾಡುತ್ತಾರೆ. “ ಹಾಗಾದಲ್ಲಿ ಅಂತಿಮ ಮತದಾರ ಪಟ್ಟಿಯಲ್ಲಿ ತಮ್ಮ ಹೆಸರನ್ನು ದಾಖಲಿಸಲು ಸಾಧ್ಯವಾಗದ ʼಸೋದರ ಸೋದರಿಯರಿಗೆʼ ಅವರನ್ನು ಗಡೀಪಾರು ಮಾಡುವವರೆಗೆ, ಬಂಧನ ಶಿಬಿರಗಳ ಜೀವನ ಕಷ್ಟವಾಗಲಿದೆ ” ಎಂದು ಅರ್ಥೈಸಬಹುದೇ ಎಂದು ನಿವೃತ್ತ ಮೇಜರ್ ಜನರಲ್ ಒಬ್ಬರು ಆತಂಕ ವ್ಯಕ್ತಪಡಿಸುತ್ತಾರೆ.
ಸ್ವಾತಂತ್ರ್ಯದ ನಡಿಗೆಯ ವ್ಯತ್ಯಯ
ಸ್ವತಂತ್ರ ಭಾರತದ 80 ವರ್ಷಗಳ ಪ್ರಜಾಸತ್ತಾತ್ಮಕ ನಡಿಗೆಯಲ್ಲಿ ಪ್ರಪ್ರಥಮ ಬಾರಿಗೆ ದೇಶದ ಸಾರ್ವಭೌಮ ಪ್ರಜೆಗಳು ತಮ್ಮ ಪೌರತ್ವದ ಬಗ್ಗೆ ಚಿಂತಿತರಾಗುವ ದಿನಗಳು ಎದುರಾಗಿವೆ. 2025ರಲ್ಲಿ ನಡೆಸಲಾದ ಬಿಹಾರದ ಎಸ್‌ಐಆರ್ ಪ್ರಕ್ರಿಯೆಯಲ್ಲಿ 65 ಲಕ್ಷ ಮತದಾರರು ʼ ಮತವಂಚಿತರಾಗಿ ʼ ಗುರುತಿಸಲ್ಪಟ್ಟ ಸಂದರ್ಭದಲ್ಲಿ, ಯೋಗೇಂದ್ರ ಯಾದವ್, ರಾಹುಲ್ ಶಾಸ್ತ್ರಿ ಮತ್ತಿತರ ಜನಸಂಖ್ಯಾಶಾಸ್ತ್ರಜ್ಞರು , ದೇಶವ್ಯಾಪಿ ಎಸ್‌ಐಆರ್ ಪೂರ್ಣಗೊಳ್ಳುವ ವೇಳೆಗೆ ಕನಿಷ್ಠ 10 ಕೋಟಿ ಜನರ ಹೆಸರುಗಳು ಮತದಾರ ಪಟ್ಟಿಯಿಂದ ಹೊರಗುಳಿದಿರುತ್ತವೆ ಎಂಬ ಆತಂಕ ವ್ಯಕ್ತಪಡಿಸಿದ್ದರು.ಈಗ ಅಂತಿಮ ಕರಡು ಮತದಾರರ ಪಟ್ಟಿ ಸಿದ್ಧವಾಗಿದ್ದು ಈ ಆತಂಕ ನಿಜವಾಗಿದೆ.
ಕಳೆದ ವಾರ ಮುಖ್ಯ ಚುನಾವಣಾ ಆಯೋಗವು, ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಂಡಿರುವ ಎಲ್ಲ ಪ್ರಮುಖ ರಾಜ್ಯಗಳ ಕರಡು ಮತದಾರ ಪಟ್ಟಿಯನ್ನು ಸಾರ್ವಜನಿಕರ ಮುಂದೆ ಮಂಡಿಸಿದೆ. ನಾಗಾಲ್ಯಾಂಡ್ ಮತ್ತು ತ್ರಿಪುರಾದಲ್ಲಿ ಅಂತಿಮ ಪಟ್ಟಿ ಸಿದ್ಧವಾಗಬೇಕಿದೆ, ಹಿಮಾಚಲಪ್ರದೇಶ ಮತ್ತು ಜಮ್ಮು ಕಾಶ್ಮೀರದಲ್ಲಿ ಪ್ರಕ್ರಿಯೆ ಆರಂಭವಾಗಬೇಕಿದೆ. ಆದಾಗ್ಯೂ ಒಟ್ಟಾರೆ ಚಿತ್ರಣವನ್ನು ಗಮನಿಸಿದಾಗ ಕರಡು ಹಂತದಲ್ಲಿ ಮತದಾರ ಪಟ್ಟಿಯಿಂದ ಹೊರಗುಳಿದಿರುವವರ ಸಂಖ್ಯೆ 13 ಕೋಟಿ 37 ಲಕ್ಷ ಇದೆ. ಅಂತಿಮ ಪಟ್ಟಿಯ ವೇಳೆಗೆ ಈ ಸಂಖ್ಯೆ ಕಡಿಮೆಯಾಗಬಹುದು. ಹೇಗೇ ಆದರೂ ಅಂತಿಮವಾಗಿ 11.5 ಕೋಟಿ ಮತದಾರರು ಹೊರಗುಳಿಯಲಿದ್ದಾರೆ ಎಂದು ಜನಸಂಖ್ಯಾಶಾಸ್ತ್ರಜ್ಞ ಯೋಗೇಂದ್ರ ಯಾದವ್ ಅಂದಾಜು ಮಾಡುತ್ತಾರೆ.)
ಅಳಿಸುವಿಕೆಯ ಜಟಿಲ ಪ್ರಶ್ನೆಗಳು
ಆದರೆ ಮತದಾರ ಪಟ್ಟಿಯಿಂದ ಅಳಿಸಿಹಾಕಿರುವುದೆಲ್ಲವೂ ತಪ್ಪಾಗಿ ನಡೆದಿದೆ ಎಂದು ಹೇಳಲಾಗುವುದಿಲ್ಲ. ಹಾಲಿ ಜಾರಿಯಲ್ಲಿರುವ ಮತದಾರರ ಪಟ್ಟಿಯಲ್ಲಿ ಬಹಳ ವರ್ಷಗಳ ಸಂಚಿತ ದೋಷಗಳು ಹಾಗೂ ನಕಲಿ ಹೆಸರುಗಳು ಇರುವುದು ವಾಸ್ತವ. ಈ ದೃಷ್ಟಿಯಿಂದ ಮೂರನೆ ಒಂದರಷ್ಟು ಹೆಸರುಗಳನ್ನು ದೋಷಪೂರಿತ ಎಂದು ಭಾವಿಸಿದರೂ, ಮತದಾರ ಪಟ್ಟಿಯಲ್ಲಿ ಸ್ವೀಕಾರಾರ್ಹವಲ್ಲದ ತಿರುಚುವಿಕೆ ಇರುವುದನ್ನು ಅಲ್ಲಗಳೆಯಲಾಗುವುದಿಲ್ಲ..
ಮೂರನೆಯ ಹಂತ ಈಗ ಪೂರ್ಣವಾಗುತ್ತಿದ್ದು ದೇಶದ ಉಳಿದ ರಾಜ್ಯಗಳನ್ನು ಒಳಗೊಂಡಿದೆ. ಈ ಹಂತದಲ್ಲಿ ಕರಡು ಎಸ್‌ಐಆರ್ ಮತದಾರ ಪಟ್ಟಿಯಲ್ಲಿ ತೆಗೆದುಹಾಕಲ್ಪಟ್ಟವರ ಸಂಖ್ಯೆ ಶೇಕಡಾ 17ರಷ್ಟಿದೆ. ಹರಿಯಾಣ, ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ ಮತ್ತು ದೆಹಲಿಯಲ್ಲಿ ಅತಿಹೆಚ್ಚು ಮತದಾರರನ್ನು ತೆಗೆದುಹಾಕಲಾಗಿದೆ. ಮೂರೂ ಹಂತಗಳಲ್ಲಿ ತೆಗೆದುಹಾಕಲ್ಪಟ್ಟವರ ಪೈಕಿ ಸತ್ತುಹೋಗಿರುವವರ ಪ್ರಮಾಣ ಶೇಕಡಾ 3ರಷ್ಟೇ ಇದೆ. ಅತಿ ಹೆಚ್ಚು ಪ್ರಮಾಣದಲ್ಲಿ ವರ್ಗಾವಣೆಯಾದವರು ಮತ್ತು ಗೈರುಹಾಜರಾದವರು ಕಾಣುತ್ತಿದ್ದು ಈ ಎರಡೂ ಲಕ್ಷಣಗಳನ್ನು ಸ್ಪಷ್ಟವಾಗಿ ನಿರ್ವಚಿಸಲಾಗಿಲ್ಲ. ಸ್ಥಳೀಯ ಚುನಾವಣಾ ಅಧಿಕಾರಿಗಳು ತಮ್ಮ ವಿವೇಚನೆಗೆ ತಕ್ಕಂತೆ ವ್ಯಾಖ್ಯಾನಿಸುತ್ತಿದ್ದಾರೆ.
ನಿರ್ವಚಿಸಲಾಗದ ವ್ಯಾಖ್ಯಾನಗಳು
ಕರಡು ಮತದಾರರ ಪಟ್ಟಿಯಲ್ಲಿ ಶೇಕಡಾ 20ರಷ್ಟು ಮತದಾರರು ʼ ತಾರ್ಕಿಕ ವೈರುಧ್ಯದ ಕಾರಣದಿಂದ ಹೊರಗುಳಿದಿದ್ದಾರೆ. ತೆಲಂಗಾಣ, ಒಡಿಷಾ ಮತ್ತು ಜಾರ್ಖಂಡ್‌ನಲ್ಲಿ ಹೆಚ್ಚಿನ ಪ್ರಮಾಣದ ತಾರ್ಕಿಕ ವೈರುಧ್ಯಗಳನ್ನು ಗುರುತಿಸಲಾಗಿದ್ದು, ಇದನ್ನು ಹೇಗೆ ನಿರ್ವಹಿಸಬೇಕು ಎಂಬ ಸ್ಪಷ್ಟ ಕಾರ್ಯಾಚರಣೆಯ ಮಾನದಂಡಗಳನ್ನು ನಿಗದಿಪಡಿಸಲಾಗಿಲ್ಲ. ಮೂರನೆಯ ಹಂತದ ಪ್ರಕ್ರಿಯೆ ಆರಂಭವಾಗುವ ಮುನ್ನವೇ ಅಪಾರ ಸಂಖ್ಯೆಯ ಮತದಾರರನ್ನು ಅಳಿಸಿಹಾಕಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಈ ಮತದಾರರಿಗೆ ́ ಗಣತಿ ನಮೂನೆಗಳನ್ನೂ ʼ ಒದಗಿಸಲಾಗುವುದಿಲ್ಲ. ಇದು ಎಸ್‌ಐಆರ್ ಅಳಿಸುವಿಕೆ ಎಂದೂ ಪರಿಗಣಿಸಲ್ಪಡುವುದಿಲ್ಲ. ಇಂತಹ 14 ಲಕ್ಷ ಪ್ರಕರಣಗಳನ್ನು ಗುರುತಿಸಲಾಗಿದ್ದು ಮಹಾರಾಷ್ಟ್ರದಲ್ಲೇ 8 ಲಕ್ಷ ದಾಖಲಾಗಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ನಡೆದ ಚುನಾವಣೆಗಳ ನಂತರ ದೆಹಲಿಯಲ್ಲಿ 11 ಲಕ್ಷ ಮತದಾರರ ಹೆಸರನ್ನು ಅಳಿಸಿಹಾಕಲಾಗಿದ್ದು, 1.56 ಕೋಟಿ ಇದ್ದ ಒಟ್ಟು ಮತದಾರರ ಸಂಖ್ಯೆ ಎಸ್‌ಐಆರ್ ಕರಡು ಪಟ್ಟಿಯಲ್ಲಿ 98 ಲಕ್ಷಕ್ಕೆ ಕುಸಿದಿದೆ.
ಯಾವುದೇ ಆಳವಾದ ಸಂಶೋಧನೆಯ ಅಗತ್ಯವಿಲ್ಲದೆಯೇ ಹೇಳಬಹುದಾದ ವಾಸ್ತವ ಎಂದರೆ, ಹೀಗೆ ಮತದಾರ ಪಟ್ಟಿಯಿಂದ ಅಳಿಸಿಹಾಕಲ್ಪಟ್ಟ ʼಮತವಂಚಿತ ವರ್ಗ ʼದಲ್ಲಿ ಕಾಣುವುದು ಅಲ್ಪಸಂಖ್ಯಾತರು, ಆದಿವಾಸಿಗಳು, ಬುಡಕಟ್ಟು ಸಮುದಾಯಗಳು, ಗ್ರಾಮೀಣ ಜನರು, ಮಹಿಳೆಯರು ಹಾಗೂ ಚುನಾವಣಾ ಆಯೋಗ ಅಪೇಕ್ಷಿಸುವ ದಾಖಲೆಗಳನ್ನು ಒದಗಿಸಲು ಸಾಧ್ಯವೇ ಆಗದ ತಳಸ್ತರದ ದುಡಿಯುವ ಜನತೆ. ಈ ಜನರು ಯಾರು ? ಇವರ ಹೆಸರು-ಊರು ಇತ್ಯಾದಿ ಕನಿಷ್ಠ ವಿವರಗಳನ್ನಾದರೂ ಸಾರ್ವಜನಿಕವಾಗಿ ತಾಲ್ಲೂಕು, ಬ್ಲಾಕ್ ಮಟ್ಟದಲ್ಲಿ ಪ್ರಕಟಿಸಲು ಸಾಧ್ಯವೇ ? ಈ ಮತವಂಚಿತ ವರ್ಗದ ಸದಸ್ಯರಿಗೆ ಸುಲಭವಾಗಿ ಲಭ್ಯವಾಗುವಂತಹ ದಾಖಲೆಗಳನ್ನು ಸೂಚಿಸಿ ಇನ್ನೂ ಹೆಚ್ಚಿನ ಕಾಲಾವಕಾಶ ಒದಗಿಸಲು ಸಾಧ್ಯವೇ ?
ಉತ್ತರದಾಯಿತ್ವದ ಸಿಕ್ಕುಗಳ ನಡುವೆ
ಈ ಪ್ರಶ್ನೆಗಳಿಗೆ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರ ಉತ್ತರಿಸಬೇಕಾಗುತ್ತದೆ. ಇಲ್ಲವಾದರೆ ಭಾರತದ ಒಟ್ಟು ವಯಸ್ಕ ಜನಸಂಖ್ಯೆಯ ಶೇಕಡಾ 8ರಷ್ಟು ಜನರಾದರೂ ದಿಕ್ಕಿಲ್ಲದ ಅಬ್ಬೇಪಾರಿಗಳಾಗುತ್ತಾರೆ. ಇವರನ್ನು ಆಡಳಿತಾತ್ಮಕ ಪರಿಭಾಷೆಯಲ್ಲಿ ʼನಾಗರಿಕರಲ್ಲದವರುʼ (ʼಪೌರತ್ವ ಇಲ್ಲದವರುʼ) ಎಂದು ಕರೆಯಲಾಗುತ್ತದೆ. ಇಂತಹ ದಿಕ್ಕುಗಾಣದ ಜನತೆಯನ್ನು ಜೈಲು ಎಂಬ ಪದಕ್ಕೆ ಸಂವಾದಿಯಾಗಿ ಬಳಕೆಯಾಗುವ ʼ ಬಂಧನ ಶಿಬಿರಗಳಲ್ಲಿ ʼ ಕೂಡಿಹಾಕಲಾಗುವುದೇ ? ಒಂದು ವೇಳೆ ಹೀಗೆ ಅಳಿಸಿಹಾಕಲ್ಪಟ್ಟವರ ಪೈಕಿ ಭಾರತಲ್ಲೇ ಹುಟ್ಟಿ ಬೆಳೆದಿರುವವರೇ ಹೆಚ್ಚಿನ ಸಂಖ್ಯೆಯಲ್ಲಿದ್ದರೆ ಅವರಿಗೆ ʼ ಮತದಾನದ ಸಾಂವಿಧಾನಿಕ ಹಕ್ಕು ʼ ಅನ್ವಯಿಸುವುದಿಲ್ಲವೇ ? ಈ ಮತವಂಚಿತ ಸಮಾಜದ ಸದಸ್ಯರು ಇಷ್ಟು ವರ್ಷಗಳ ಕಾಲ ಚಲಾಯಿಸಿದ ʼ ಪವಿತ್ರ ಮತಗಳ ʼ ಸಾಂವಿಧಾನಿಕ ಔಚಿತ್ಯ, ಪ್ರಸ್ತುತತೆ ಮತ್ತು ಅನ್ವಯಿಕೆಯನ್ನು ಹೇಗೆ ನಿರ್ವಚಿಸುವುದು ?
ಪ್ರದರ್ಶನಗಳಿಂದಾಚೆಗೆ,,,,,,
ಆಡಳಿತ ವ್ಯವಸ್ಥೆಯ ದೃಷ್ಟಿಯಲ್ಲಿ ಈ ಜನದನಿ ಅರಣ್ಯ ರೋದನವಾಗಿ ಕಾಣುತ್ತದೆ. ಆದರೆ ನಾಗರಿಕ ಜಗತ್ತಿನ ಪ್ರಜ್ಞಾವಂತರಿಗೆ ಇದು ʼ ಇಂದಿನ ಬದುಕು ನಾಳೆಯ ಬೆಳಕಿನ ʼ ಪ್ರಶ್ನೆಯಾಗಿ ಕಾಡುತ್ತದೆ. ಈ ದುರ್ಭಾಗ್ಯ ಜನತೆಯನ್ನು ಸಂಪರ್ಕಿಸುವುದು ಹೇಗೆ ? ಇದಕ್ಕೆ ಬೇಕಾದ ಭೌತಿಕ-ಬೌದ್ಧಿಕ-ಆರ್ಥಿಕ ಸಂಪನ್ಮೂಲಗಳು ನಮ್ಮಲ್ಲಿ, ನಾಗರಿಕ ಸಮಾಜದಲ್ಲಿ, ಲಭ್ಯವಿದೆಯೇ ? ಇರುವುದೇ ಆದರೆ ಕಾರ್ಯಗತಗೊಳಿಸುವ ಜವಾಬ್ದಾರಿ ಹೊರುವವರು ಯಾರು ? ಪ್ರಜಾಪ್ರಭುತ್ವ-ಸಂವಿಧಾನ-ಅಂಬೇಡ್ಕರ್ ಜಪ ಮಾಡುವ ಸೆಕ್ಯುಲರ್ ರಾಜಕೀಯ ಪಕ್ಷಗಳು, ಜನಪ್ರತಿನಿಧಿಗಳು ಈ ನೊಗ ಹೊರಲು ಸಾಧ್ಯವೇ ? ದಾಖಲೆ ಸಮೇತ ಸಿಗುವ ಕಡಿಮೆ ಪ್ರಮಾಣದಲ್ಲಿರುವ ಹಾಗೂ ಸರ್ಕಾರಗಳು ಈವರೆಗೂ ಪಟ್ಟಿ ಮಾಡದೇ ಇರುವʼ ಅಕ್ರಮ ಬಾಂಗ್ಲಾ ವಲಸಿಗರನ್ನು ʼ ಹೊರತುಪಡಿಸಿ ಉಳಿದ ಬಹುಸಂಖ್ಯೆಯ ಮತದಾರ ಪಟ್ಟಿಯಲ್ಲಿ ಹೆಸರು ನಾಪತ್ತೆಯಾಗಿರುವ ಭಾರತೀಯರಿಗೆ ಭವಿಷ್ಯದ ಹಾದಿ ತೋರಲು ಏನು ಮಾಡಬೇಕು ?
ನಾಗರಿಕ ಜಗತ್ತನ್ನು ಗಾಢವಾಗಿ ಕಾಡಬೇಕಾದ ಪ್ರಶ್ನೆ ಇದು. ಹೋರಾಟ, ಜಾಥಾ, ಪ್ರತಿಭಟನೆ, ಸಮಾವೇಶ ಇತ್ಯಾದಿ ಪ್ರದರ್ಶನಗಳು ಉತ್ತರಿಸುವುದಿಲ್ಲ. ಇದು ಬೌದ್ಧಿಕ ಪ್ರಶ್ನೆಯಲ್ಲ ಭವಿಷ್ಯದ ಬದುಕಿನ ಭೌತಿಕ ಪ್ರಶ್ನೆ. ಉತ್ತರದಾಯಿತ್ವದ ಕಲ್ಪನೆಯೂ ಇಲ್ಲದ ಒಂದು ಪ್ರಜಾತಂತ್ರದಲ್ಲಿ ನಾವಿದ್ದೇವೆ. ಆದರೆ ಉತ್ತರದಾಯಿಗಳಾಗಿ ನಿಲ್ಲಬೇಕಾದವರು ನಮ್ಮಿಂದಲೇ ಚುನಾಯಿತರಾಗಿದ್ದಾರೆ. ಸಮಸ್ತ ನಾಗರಿಕರ ಶ್ರಮ ಮತ್ತು ತೆರಿಗೆ ಹಣದಿಂದಲೇ ಸುರಕ್ಷಿತವಾಗಿ, ಸುಭದ್ರವಾಗಿ ನೆಲೆಯೂರಿದ್ದಾರೆ. ಇವರ ನಡುವಿನಿಂದ ಒಂದು ಕ್ಷೀಣ ಸ್ವರವೂ ಹೊರಬರುತ್ತಿಲ್ಲ. ಇದು ವಿಕಸಿತ ಭಾರತದ ಅತಿದೊಡ್ಡ ದುರಂತ. ಯಾರು ಕಾರಣ ಎನ್ನುವುದಕ್ಕಿಂತಲೂ ಏಕೆ ಹೀಗಾಯ್ತು ಎಂಬ ಜಟಿಲ ಪ್ರಶ್ನೆಗೆ ಉತ್ತರ ಶೋಧಿಸಬೇಕಿದೆ.
ಇದು ನಾಗರಿಕರ ಜವಾಬ್ದಾರಿಯೇ ಹೌದಾದರೆ ನಾವು ಏನು ಮಾಡಬೇಕು, ಮಾಡಬಹುದು ? ಯೋಚಿಸಿ, ಕಾರ್ಯಾಚರಣೆಗೆ ಇಳಿಯೋಣ .
-೦-೦-೦-೦-
ಕನ್ನಡಕ್ಕೆ : ನಾ ದಿವಾಕರ
(ಮೂಲ : Written by:Rahul Shastri, Yogendra Yadav Draft SIR list shows statistical absurdities. Audit by an independent agency is needed ಇಂಡಿಯನ್ ಎಕ್ಸ್ ಪ್ರೆಸ್ )
bevarahani1