ಬಂದಿದ್ದೂ ನೀನೊಬ್ಬನೇ, ಹೋಗೋದೂ ಕೂಡಾ ನೀ ಒಬ್ಬನೇ !!? 

ದಲಿತ ಮುಖಂಡರು ಆಗ್ರಹ ಪಡಿಸುತ್ತಿರುವಂತೆ ಉಳಿದ ಕೊಲೆಗಾರರನ್ನೂ ಬಂಧಿಸಿ ಜೈಲಿಗೆ ಅಟ್ಟಬೇಕಿದೆ. 

ಬಂದಿದ್ದೂ ನೀನೊಬ್ಬನೇ, ಹೋಗೋದೂ ಕೂಡಾ ನೀ ಒಬ್ಬನೇ !!? 

99% ಲೋಕಲ್ 


ಕುಚ್ಚಂಗಿ ಪ್ರಸನ್ನ



“ಯಾವೋನ್ಗೂ ಕಾಯಬೇಡ, ಯಾವೋಳ್ಗೂ ಸಾಯಬೇಡ
ನಿಂಗೋಸ್ಕರ ನೀ ಬದ್ಕೊದೇ ಕರೆಕ್ಟು

ಕಾಸಿದ್ದಾಗ ಜನ ಇರ್ತಾರೆ ಜೊತೆ
ಕಷ್ಟ ಬಂದಾಗಲೇ ಎಲ್ಲಾರೂ ನಾಪತ್ತೆ
ಯಾರೂ ಇಲ್ಲದಾಗ ಯಾರಿಲ್ಲ ಅನ್ಸುತ್ತೆ
ಎಲ್ರೂ ಇದ್ದಾಗ ಅನ್ಸುತ್ತೆ ಬದುಕಿದ್ದೂ ಸತ್ತೆ 

ಬಂದಿದ್ದು ನೀನೊಬ್ಬನೇ
ಹೋಗೋದು ಕೂಡಾ ನೀ ಒಬ್ಬನೇ”


     ರಾಹುಲ್ ಎಂಬ ಯುವ ಗಾಯಕನ ಕನ್ನಡ ವಿಡಿಯೋ ರಾಪ್ ಸಾಂಗ್‌ನ ಲಿರಿಕ್‌ನ ಕೆಲವು ಸಾಲುಗಳಿವು. ಹೋದ ಭಾನುವಾರ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕಸಾಪುರ ಗ್ರಾಮದಲ್ಲಿ ಕೊಲೆಯಾಗಿ ಸತ್ತ ಹದಿನೇಳರ ಎಳೆ ಯುವಕ ಸಿಂಹಾದ್ರಿಯ ಜೊತೆಯಲ್ಲೇ ಇದ್ದ , ಮಟ ಮಟ ಮಧ್ಯಾಹ್ನ ಮೂರು ಗಂಟೆಯಲ್ಲಿ ನಡೆದ ಆ ಹತ್ಯೆಯ ಏಕೈಕ ಪ್ರತ್ಯಕ್ಷ ಸಾಕ್ಷಿ ಅಂತ ಪೊಲೀಸರು ಗುರುತಿಸಿಕೊಂಡಿರುವ ದರ್ಶನ್ ತನ್ನ ಮೊಬೈಲ್‌ಗೆ ಹಾಕಿಕೊಂಡಿರುವ ಕಾಲರ್ ಟ್ಯೂನ್ ಇದು !


    ಅವತ್ತು ಕಸಾಪುರದಲ್ಲಿ ಸಿಂಹಾದ್ರಿಯ ಕೊಲೆಯನ್ನು ಕಣ್ಣಾರೆ ಕಂಡವನು ಈತ, ಈತನ ಜೊತೆ ಮತ್ತೊಬ್ಬ ತೇಜ ಅಂತಲೂ ಇದ್ದ. ಇವರಿಬ್ಬರ ಜೊತೆ ಮೃತ ಸಿಂಹಾದ್ರಿಯೂ ಸೇರಿ ಒಟ್ಟು ಮೂವರನ್ನು ಊರ ಜನ ಪಾಂಡಿ ಅಂತ ಕರೆಯುವ ಪಾಂಡುರಂಗಯ್ಯ ಹಾಗೂ ಸಿಂಹಾದ್ರಿಯ ಕೊಲೆ ಆರೋಪಿ ಕೆ.ಎನ್.ಮಾರುತೇಶ್ ಅಲಿಯಾಸ್ ಬಂಡೆ ಗುಂಡ ಅವತ್ತು ಫೋನ್ ಮಾಡಿ ಕರೆಸಿಕೊಂಡಿದ್ದರು.

ಇದ್ದೊಬ್ಬ ಮಗನನ್ನು ಕಳೆದುಕೊಂಡು ಮನೆಯ ಮುಂದೆ ನಿಟ್ಟುಸಿರು ಬಿಡುತ್ತಾ ಕೂತ ಕುಟುಂಬ


    ಕಸಾಪುರದವರೇ ಆದ , ಈ ಊರಿನವರೇ ಆದ ಮಧುಗಿರಿಯ ಮಾಜಿ ಪುರಸಭಾಧ್ಯಕ್ಷ ತಿಮ್ಮರಾಜು(ತಿಮ್ಮರಾಯಪ್ಪ) ಅವರ ತೋಟದ ಕೆಲಸಕ್ಕೆ ಇವರನ್ನು ಪಾಂಡಿ ಕರೆದುಕೊಳ್ಳುತ್ತಿದ್ದ. ಕಸಾಪುರದಲ್ಲಿ ಸುಮಾರು ನೂರಕ್ಕೂ ಹೆಚ್ಚು ಮಾದಿಗ ಸಮುದಾಯದ ಕುಟುಂಬಗಳು ವಾಸವಿದ್ದರೂ ಅವರಲ್ಲಿ ಈ ದರ್ಶನ್, ತೇಜ ಹಾಗೂ ಸಿಂಹಾದ್ರಿ ಮಾತ್ರವೇ ಊರಿನ ಮುಂದುವರೆದ ಜಾತಿಗಳಾದ ನಾಯಕರು ಹಾಗೂ ಕುಂಚಿಟಿಗರ ಜೊತೆ ಒಡನಾಟ ಇಟ್ಟಿಕೊಂಡಿರುವುದು ಎನ್ನುತ್ತಾರೆ ಮಾದಿಗ ಸಮುದಾಯದ ಮುಖಂಡ ರಾಮಚಂದ್ರಪ್ಪ.


ಕಸಾಪುರದ ಸಿಂಹಾದ್ರಿ ಕೊಲೆ ಕುರಿತಂತೆ ಹೆಚ್ಚು ಜನರನ್ನು ತಲುಪಿರುವ ಸುದ್ದಿ ಕೆಳಗಿನಂತಿದೆ:


      “ ಸೆಪ್ಟೆಂಬರ್ 20, 2026 ರಂದು ಭಾನುವಾರ ಮಧ್ಯಾಹ್ನ 3.20ರ ಸುಮಾರಿಗೆ ಕಸಾಪುರ ಗ್ರಾಮದ , ಮಾರಮ್ಮ ದೇವಸ್ಥಾನದ ಬಳಿ ಗಣೇಶ ವಿಸರ್ಜನಾ ಮೆರವಣಿಗೆಯ ಸಂದರ್ಭದಲ್ಲಿ ಡ್ಯಾನ್ಸ್ ಮಾಡುವ ವಿಚಾರವಾಗಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು. ಮೆರವಣಿಗೆಯ ವೇಳೆ ಮಾದಿಗ ಸಮುದಾಯಕ್ಕೆ ಸೇರಿದ ಅಪ್ರಾಪ್ತ ಯುವಕ ಸಿಂಹಾದ್ರಿಗೆ, ನಾಯಕ ಸಮುದಾಯದ ಮಾರುತೇಶ್ (24) ಎಂಬಾತ ಜಾತಿ ನಿಂದನೆ ಮಾಡಿ, ಕಲ್ಲಿನಿಂದ ಎದೆಗೆ ಹೊಡೆದು ಭೀಕರವಾಗಿ ಕೊಲೆ ಮಾಡಿದ್ದಾನೆ ಎಂದು ಮೃತನ ತಾಯಿ ಅನ್ನಪೂರ್ಣ ನೀಡಿದ ದೂರಿನ ಮೇರೆಗೆ ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆರೋಪಿ ಮಾರುತೇಶ್ ಅಲಿಯಾಸ್ ಬಂಡೆ ಗುಂಡ ಎಂಬಾತ ಈಗಾಗಲೇ ಪೊಲೀಸರ ವಶದಲ್ಲಿದ್ದಾನೆ” 


    ಕೊಲೆಯಾದ ಭಾನುವಾರ ರಾತ್ರಿ ಮಿಡಿಗೇಶಿ ಠಾಣೆ ಮುಂಭಾಗ ದಲಿತ ಮುಖಂಡರು ಕಸಾಪುರ ಗ್ರಾಮದ ಮಾದಿಗ ಸಮುದಾಯದ ಜನರ ಜೊತೆ ಧರಣಿ ಕೂತು ಪ್ರತಿಭಟನೆ ನಡೆಸಿದರು. ಮರು ದಿನ ಸೋಮವಾರ ಕೂಡಾ ಮಧುಗಿರಿ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮಾದಿಗ ಮಹಾ ಸಭಾದ ತುಮಕೂರು ಜಿಲ್ಲಾಧ್ಯಕ್ಷ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವೈ.ಹೆಚ್. ಹುಚ್ಚಯ್ಯ, ಮಧುಗಿರಿ ವಿಧಾನ ಸಭಾ ಕ್ಷೇತ್ರದ 1978 ಹಾಗೂ 1994 ಈ ಎರಡು ಅವಧಿಯ ಶಾಸಕರಾಗಿ ಚುನಾಯಿತರಾಗಿ ಸೇವೆ ಸಲ್ಲಿಸಿರುವ ಮತ್ತು ಇದೇ ಮಾದಿಗ ಮಹಾಸಭಾ ಗೌರವಾಧ್ಯಕ್ಷರೂ ಆಗಿರುವ ಗಂಗಹನುಮಯ್ಯನವರು ಪ್ರತಿಭಟನೆ ನೇತೃತ್ವ ವಹಿಸಿಕೊಂಡಿದ್ದರು. ಕ್ಷೇತ್ರದ ಜನಪ್ರಿಯ ಶಾಸಕ ಹಾಗೂ ಮಾಜಿ ಸಚಿವ ಕೆ.ಎನ್.ರಾಜಣ್ಣನವರ ಮಗ ಎಂಎಲ್‌ಸಿ ರಾಜೇಂದ್ರ ಅವರೂ ಪ್ರತಿಭಟನಾಕಾರರ ಜೊತೆ ನಿಂತು ಮಾತನಾಡಿ ಸಾಂತ್ವನ ಹೇಳಿದ್ದರು.


   ಮೃತನ ಸಾವಿಗೆ ವಿಷಾದ ವ್ಯಕ್ತಪಡಿಸಿದ್ದ ರಾಜೇಂದ್ರ ಅವರು,ಮೃತನ ತಾಯಿಗೆ ಯಾವುದಾದರೂ ಉದ್ಯೋಗ ಹಾಗೂ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸಲು ಕ್ರಮ ವಹಿಸುವ ಭರವಸೆಯನ್ನೂ ನೀಡಿದ್ದಾರೆ. 


   ಇದ್ದೊಬ್ಬ ಮಗನನ್ನು ಏಕಾಏಕಿ ಕಳೆದುಕೊಂಡ ಆಘಾತದಲ್ಲಿ ಮೃತ ಸಿಂಹಾದ್ರಿ ತಾಯಿ ಅನ್ನಪೂರ್ಣಮ್ಮ ಅವರಿಗೆ ಲೋ ಬಿಪಿ ಆಗಿ ಅವರನ್ನು ಸೋಮವಾರ ತುಮಕೂರು ಜಿಲ್ಲಾಸ್ಪತ್ರೆಗೆ ಕರೆತಂದು ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ಜೊತೆಗೆ ಸಿಂಹಾದ್ರಿಯ ಶವವನ್ನೂ ಮರಣೋತ್ತರ ಪರೀಕ್ಷೆಗಾಗಿ ತುಮಕೂರು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ತರಲಾಗಿತ್ತು. 


   ನ್ಯಾಯ ಸಿಗುವವರೆಗೂ ಸಿಂಹಾದ್ರಿಯ ಶವ ಪಡೆಯಲ್ಲ, ಅಂತ್ಯಸಂಸ್ಕಾರ ಮಾಡಲ್ಲ ಎಂದು ಕುಟುಂಬದವರು ಮತ್ತು ಸಂಘಟನೆಯವರು ಹಿಡಿದಿದ್ದ ಪಟ್ಟು ಅದು ಯಾವಾಗ ಸಡಿಲವಾಯ್ತೋ ಗೊತ್ತಿಲ್ಲ. ರಾತ್ರಿ ಒಂಬತ್ತೂವರೆ ಹೊತ್ತಿಗೆ ಸಿಂಹಾದ್ರಿ ಶವದ ಪರೀಕ್ಷೆ ನಡೆಯಿತು. ಶವವನ್ನು ರಾತ್ರೋ ರಾತ್ರಿಯೇ ಕಸಾಪುರಕ್ಕೆ ತರಲಾಯಿತು, ಮಧ್ಯ ರಾತ್ರಿ 12ರಿಂದ 12.30ರೊಳಗೆ ಅಡಿಶನಲ್ ಎಸ್‌ಪಿ ಗೋಪಾಲ್ ಅವರ ಉಸ್ತುವಾರಿಯಲ್ಲಿ ಬಿಗಿ ಪೊಲೀಸ್ ಪಹರೆಯಲ್ಲಿ ಮಣ್ಣು ಮಾಡಲಾಯಿತು. 


       “ ಸಿಂಹಾದ್ರಿ ಸತ್ತು ಮೂರು ದಿನ ಆಗಿತ್ತು ನೋಡಿ, ಮರು ದಿನ ಮಂಗಳವಾರ ಬೇರೆ, ಅದಕ್ಕೇ ರಾತ್ರೀನೇ ಅಂತ್ಯ ಸಂಸ್ಕಾರ ಮಾಡ್ತೀವಿ ಅಂತ ಮನೆಯವರು ಹೇಳಿದರು. ಅವರು ಹೇಳಿದಂತೆಯೇ ಅಂತ್ಯಸಂಸ್ಕಾರಕ್ಕೆ ನೆರವು ನೀಡಲಾಯಿತು ಎಂದು ಪೊಲೀಸರು ಸಮಜಾಯಿಷಿ ನೀಡುತ್ತಾರೆ. ಒಪ್ಪುವುದು ಬಿಡುವುದು ನಿಮಗೆ ಸೇರಿದ್ದು.

ಸಿಂಹಾದ್ರಿಯ ಅಂತ್ಯಸಂಸ್ಕಾರ ಎಷ್ಟು ತರಾತುರಿಯಲ್ಲಿ ರಾತ್ರೋ ರಾತ್ರಿ ನಡೆಯಿತೆಂದರೆ ಸಮಾಧಿಯ ಮೇಲಿನ ದೀಪ ಹಚ್ಚಲೂ ಬಿಟ್ಟಿಲ್ಲ


     ಸಿಂಹಾದ್ರಿಯ ಅಪ್ಪ ಪಕ್ಕದ ಮಡಕಶಿರಾ ತಾಲೂಕಿನ ಹಳ್ಳಿಯೊಂದರ ವಾಸಿ ರಾಮಚಂದ್ರ ಕಸಾಪುರದ ಅಳಿಯ, ಸಿಂಹಾದ್ರಿ ತಾಯ ಹೊಟ್ಟೆಯಲ್ಲಿ ಏಳು ತಿಂಗಳ ಶಿಶುವಾಗಿದ್ದಾಗಲೇ ಆತನ ಮದ್ಯ ವ್ಯಸನಿ ತಂದೆ ಹೆಂಡತಿ ಊರಾದ ಕಸಾಪುರಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡು ಸತ್ತಿದ್ದಾನೆ. ಮಗು ಜನಿಸಿದ ಬಳಿಕ ಅಮ್ಮನ ಮನೆಯಲ್ಲೇ ನೆಲೆಯಾದ ಅನ್ನಪೂರ್ಣಮ್ಮ ಆತ ತುಸು ಬೆಳೆದು ದೊಡ್ಡವನಾದ ಬಳಿಕ ಬೆಂಗಳೂರಿನಲ್ಲಿ ಕೆಲಸ ಮಾಡುತ್ತ ವಾರಾಂತ್ಯದಲ್ಲಿ ಆಗಾಗ ಊರಿಗೆ ಬಂದು ಹೋಗುತ್ತ ಮಗನ ನಿಗಾ ಮಾಡುತ್ತಿದ್ದಾರೆ. ಅವತ್ತು ಸೆ.20ರ ಭಾನುವಾರ ಮಧ್ಯಾಹ್ನ ಸಿಂಹಾದ್ರಿ ಅಮ್ಮನಿಗೆ ಕರೆ ಮಾಡಿ ತನಗೆ ನೆಗಡಿ ಅಂತ ಹೇಳಿದನಂತೆ, ಜೊತೆಗೆ ತನ್ನ ಜೊತೆಗಾರರು ಮಾಡಿದ ತಪ್ಪಿಗೆ ತನ್ನನ್ನೂ ನಾಯಕರ ಹಟ್ಟಿಯಲ್ಲಿ ಕರೆಯುತ್ತಿದ್ದಾರೆ, ಹೋಗಲು ಇಷ್ಟವಿಲ್ಲ ಆದರೆ ಬಿಡಲ್ಲ ಅಂತ ದೂರಿದ, ಜ್ವಾಪಾನ ಕಣಪ್ಪಾ ಅಂತ ಹೇಳಿದೆ, ಅದಾದ ಅರ್ಧ ಗಂಟೆಗೇ ಆತನ ಸಾವಿನ ಸುದ್ದಿ ನಂಗೆ ಬಂತು” ಎಂದು ಹೇಳುತ್ತಾ ಅನ್ನಪೂರ್ಣಮ್ಮ ಬಿಕ್ಕಿ ಬಿಕ್ಕಿ ಅಳುತ್ತಾರೆ.


     ಸಿಂಹಾದ್ರಿಯ ತಾಯಿ ಹೀಗೆ ಹೇಳುವಾಗ ಅದೇ ಊರಿನ ಮಹಿಳೆಯ ಹೆಸರೊಂದನ್ನೂ ಉಲ್ಲೇಖಿಸುತ್ತಾರೆ. ಸಿಂಹಾದ್ರಿಯ ಜೊತೆಗಾರರು ಆ ಮಹಿಳೆಯನ್ನು ಕೆಣಕಿದ್ದರಿಂದ ಜೊತೆಯಲ್ಲಿದ್ದ ತನ್ನನ್ನೂ ಕರೆದಿದ್ದಾರೆ ಎಂಬುದು ಅವರ ಮಾತಿನ ವಿವರ. ಆ ಮಹಿಳೆ ವಿವಾಹಿತೆ ಹಾಗೂ ಒಂದು ಮಗು ಇದೆ, ಅವರ ತಂದೆ ಕಸಾಪುರದಲ್ಲಿ ಪುಟ್ಟದೊಂದು ಹೊಟೆಲ್ ನಡೆಸುತ್ತಿದ್ದಾರೆ. ಇದಿಷ್ಟು ಮಾಹಿತಿ. 


    ಆದರೆ ಕಸಾಪುರಕ್ಕೆ ಭೇಟಿ ನೀಡಿ ಸ್ಥಳೀಯ ನಿವಾಸಿಗಳೊಂದಿಗೆ ಮಾತನಾಡಿದಾಗ ಬಂದ ಇನ್ನೂ ಸ್ಪಷ್ಟ ಮಾಹಿತಿ ಏನೆಂದರೆ, ಪಾಂಡಿ ಎಂಬಾತನ ಸಂಬಂಧಿ ಯುವತಿಯನ್ನು ಸಿಂಹಾದ್ರಿಯ ಗೆಳೆಯ ಹಾಲಿ ಆತನ ಕೊಲೆಯನ್ನು ಕಣ್ಣಾರೆ ಕಂಡಿರುವ ದರ್ಶನ್ ಎಂಬಾತ ಪ್ರೀತಿಸುತ್ತಿದ್ದಾನಂತೆ. ಹುಡುಗ ಹುಡುಗಿಯ ಜಾತಿ ಬೇರೆ ಆಗಿರುವುದರಿಂದ ಪಾಂಡಿ ಇವರಿಗೆ ಒಂದಕ್ಕಿಂತ ಹೆಚ್ಚು ಸಲ ವಾರ್ನಿಂಗ್ ಕೊಟ್ಟಿದ್ದನಂತೆ. ಅವತ್ತು ಭಾನುವಾರವೂ ಅದೇ ವಾರ್ನಿಂಗ್ ಕೊಡಲೆಂದು ಕರೆಸಿಕೊಂಡಿದ್ದಾರೆ. ಅದೇ ಬೆಳಿಗ್ಗೆ ದರ್ಶನ್ ಮೇಲೆ ಅಟಾಕ್ ಮಾಡುವ ವಿಫಲ ಪ್ರಯತ್ನವೂ ನಡೆದಿದೆ, ಮೊದಲೇ ಹೇಳಿರುವಂತೆ ದರ್ಶನ್, ತೇಜ ಹಾಗೂ ಸಿಂಹಾದ್ರಿ ಒಂದು ಗೆಳೆಯರ ಆಪ್ತ ಗುಂಪಾಗಿರುವುದರಿಂದ ಈ ಪ್ರೇಮ ಪ್ರಕರಣದಲ್ಲಿ ಇವರ ಕುಮ್ಮಕ್ಕೂ ಇದೆ ಎಂದೇ ಪರಿಭಾವಿಸಿ ಅವರ ವಿರುದ್ದವೂ ಕಾರ್ಯಾಚಾರಣೆ ನಡೆದಿದೆ. ತೇಜ ಓಡಿ ಹೋಗಿ ನಾಪತ್ತೆಯಾಗಿದ್ದಾನೆ. ದರ್ಶನ್ ಬಚಾವಾಗಿದ್ದಾನೆ, ಪಾಪದ ಸಿಂಹಾದ್ರಿ ಪ್ರಾಣ ಕಳೆದುಕೊಂಡ ಎಂಬುದು ಘಟಿಸಿದ ವಾಸ್ತವ ಎಂದು ಹೇಳಲಾಗುತ್ತಿದೆ. 


    ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಇನ್ನೂ ಹೆಚ್ಚಿನ ವಾಸ್ತವ ಸಂಗತಿಗಳನ್ನು ಹೊರತೆಗೆದು ತಿಳಿಸುವ ನಿರೀಕ್ಷೆ ಇದೆ. ಆದರೆ ಸದ್ಯಕ್ಕಂತೂ ಊರಿನಿಂದ ಪರಾರಿ ಆಗಿರುವ ಗಂಡಸರು ವಾಪಸ್ ಬರುವ ತನಕ ತನಿಖಾ ತಂಡ ಕಾಯಬೇಕಿದೆ.




ಗಣೇಶ ವಿಸರ್ಜನಾ ಉತ್ಸವ ಎರಡು ದಿನ ಮೊದಲೇ ಏಕೆ?

ಮಾದಿಗ ಸಮುದಾಯದ ಗಣೇಶೋತ್ಸವದ ಫ್ಲೆಕ್ಸ್‌ ( 38 ನೇ ವರ್ಷ)

ಕಸಾಪುರದಲ್ಲಿ ಮಾರಮ್ಮ ದೇವಿ ಗುಡಿ ಹಿಂಭಾಗ ಮುಂದುವರೆದ ಜಾತಿಯವರ ಗಣೇಶ ಉತ್ಸವದ ಫ್ಲೆಕ್ಸ್‌ (11 ನೇ ವರ್ಷದ)


     ಮಿಡಿಗೇಶಿ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಕಸಾಪುರದಲ್ಲಿ ಗೌರಿ ಗಣೇಶನ ಹಬ್ಬದಲ್ಲಿ ಎರಡು ಕಡೆ ಗಣೇಶನ ವಿಗ್ರಹಗಳನ್ನು ಇಟ್ಟು ಪೂಜಿಸಲಾಗುತ್ತಿದೆ. ಕಸಾಪುರದ ಮಾದಿಗ ಸಮುದಾಯವು ಕನ್ನಡ ಜ್ಯೋತಿ ಯುವಕ ಸಂಘ(ರಿ) ಎಂಬ ನೊಂದಾಯಿತ ಸಂಘದಡಿ ಕಳೆದ 38 ವರ್ಷಗಳಿಂದ ನಿರಂತರ ಗಣೇಶನನ್ನು ಇಟ್ಟು ಪೂಜಿಸಿ ಸಾಂಸ್ಖೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿ ವಿಸರ್ಜನೆ ಮಾಡುತ್ತ ಬಂದಿದೆ. 


    ಇದೇ ಕಸಾಪುರದಲ್ಲಿ ಊರಿನ ಮುಂದುವರೆದ ಜಾತಿಗಳೆನೆಸಿಕೊಂಡಿರುವ ಕುಂಚಿಟಿಗರು ಹಾಗೂ ನಾಯಕರು ಕಳೆದ ಹತ್ತು ವರ್ಷಗಳಿಂದ ಮಾರಮ್ಮನ ಗುಡಿ ಹಿಂಭಾಗ ಮತ್ತೊಂದು ಗಣೇಶನನ್ನು ಕೂರಿಸಿ, ಕಾರ್ಯಕ್ರಮಗಳನ್ನು ನಡೆಸಿ ವಿಸರ್ಜನೆ ಮಾಡುತ್ತ ಬಂದಿದ್ದಾರೆ. 


     ಕಸಾಪುರಕ್ಕೆ ಮೂರು ಕಿಮೀ ನಷ್ಟು ಹತ್ತಿರದಲ್ಲಿರುವ ಮಿಡಿಗೇಶಿ ಕೆರೆಯಲ್ಲೇ ಈ ಊರಿನ ಎರಡೂ ಗಣೇಶ ವಿಗ್ರಹಗಳನ್ನು ವಿಸರ್ಜನೆ ಮಾಡುವುದು, ಸಮೀಪದ ಸತ್ತಿಗಾನಹಳ್ಳಿ, ಬೆನಕನಹಳ್ಳಿಗಳ ಗಣೇಶಗಳನ್ನೂ ಇದೇ ಕೆರೆಗೆ ತಂದು ವಿಸರ್ಜನೆ ಮಾಡುವುದು. 


    ಹೀಗೆ ಗಣೇಶನನ್ನು ಸಾರ್ವಜನಿಕವಾಗಿ ಇಡುವ ತಂಡಗಳು ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಆಯೋಜಕರ ಹೆಸರು ಬರೆಸಿ ಅನುಮತಿ ಪಡೆದುಕೊಳ್ಳಬೇಕು. ಕಸಾಪುರದವರೂ ಈ ವರ್ಷವೂ ಅನುಮತಿ ಪಡೆದುಕೊಂಡಿದ್ದಾರೆ. 


     ಕನ್ನಡ ಜ್ಯೋತಿ ಯುವಕ ಸಂಘದ ಗಣೇಶೋತ್ಸವವು 14.9.2026ರಿಂದ 21.09.2026ರವರೆಗೆ ಎಂಬ ಮಾಹಿತಿಯನ್ನು ಊರ ನಡುವೆ ರಸ್ತೆ ಬದಿ ನಿಲ್ಲಿಸಿರುವ ಫ್ಲೆಕ್ಸ್ನಲ್ಲಿ ನಮೂದಿಸಿದೆ. ಅದೇ ರೀತಿ ಊರೊಳಗೆ ಮಾರಮ್ಮ ಗುಡಿ ಹಿಂಭಾಗ ನಿಲ್ಲಿಸಿರುವ ಮತ್ತೊಂದು ಗಣೇಶೋತ್ಸವದ ಫ್ಲೆಕ್ಸ್ನಲ್ಲಿ 14.9.2026 ರಿಂದ 22.09.2026ರವರೆಗೆ ಎಂದು ನಮೂದಿಸಲಾಗಿದೆ. ಈ ಪ್ರಕಾರ ಮಾದಿಗ ಸಮುದಾಯದವರು ಸೆ.21ರ ಸೋಮವಾರ, ನಾಯಕರು, ಕುಂಚಿಟಿಗರು ಸೆ.22ರ ಮಂಗಳವಾರ ತಮ್ಮ ತಮ್ಮ ಗಣೇಶಗಳನ್ನು ವಿಸರ್ಜನೆ ಮಾಡಬೇಕಿತ್ತು. ಆದರೆ ಮಾರಮ್ಮನ ಗುಡಿ ಹಿಂಭಾಗ ಇರಿಸಿದ್ದ ಗಣೇಶನನ್ನು ಸೆ.20ರ ಭಾನುವಾರವೇ ವಿಸರ್ಜನೆ ಮಾಡಲು ಉತ್ಸವ ನಡೆಯುತ್ತಿತ್ತು, ಆಲ್ಲೇ ಆಗಲೇ ಸಿಂಹಾದ್ರಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆದದ್ದು ಎನ್ನುತ್ತಾರೆ ಪೊಲೀಸರು. 


     ಆದರೆ ಸೆ.22ರ ಮಂಗಳವಾರ ನಡೆಸಬೇಕಿದ್ದ ವಿಸರ್ಜನಾ ಉತ್ಸವವನ್ನು ಭಾನುವಾರವೇ ಮಾಡಿದ್ದೇಕೆ ಎಂಬ ಪ್ರಶ್ನೆಗೆ ಸಮರ್ಪಕ ಉತ್ತರ ಇನ್ನೂ ಸಿಕ್ಕಿಲ್ಲ. 

“ ಎರಡು ಗುಂಪುಗಳು ಕುಡಿದ ಅಮಲಿನಲ್ಲಿ  ಮಾಡಿದ ಜಗಳ”: ಎಸ್ ಪಿ. ಕೆ.ವಿ.ಅಶೋಕ್ 


    ಗಣೇಶ ವಿಸರ್ಜನೆ ಸಮಯದಲ್ಲಿ ಎರಡು ಗುಂಪುಗಳ ನಡುವಣ ಜಗಳ ಸಿಂಹಾದ್ರಿಯ ಕೊಲೆಯಲ್ಲಿ ಅಂತ್ಯವಾಯಿತು, ಅವರು ಮದ್ಯದ ಅಮಲಿನಲ್ಲಿದ್ದರು ಎಂದು ಎಸ್ ಪಿ ಕೆ.ವಿ.ಅಶೋಕ್ ಮಾಧ್ಯಮಗಳ ಎದುರು ನೀಡಿದ ಹೇಳಿಕೆ ಹೀಗಿದೆ: 


   “ ಘಟನಾ ಸ್ಥಳಕ್ಕೆ ಹೋಗಿ ನೋಡಿದಾಗ ನಮಗೆ ಕಂಡುಬಂದಿರೋದು ಏನಂದ್ರೆ ಸಿಂಹಾದ್ರಿ ಅನ್ನೋ ಒಬ್ಬ ವ್ಯಕ್ತಿಗೆ ಮತ್ತು ಮಾರುತೇಶ್ ಅನ್ನೋ ಒಬ್ಬ ಇನ್ನೊಬ್ಬ ವ್ಯಕ್ತಿಗೆ ಮಾತುಕತೆ ನಡೆದು ಜಗಳ ಆಗಿರುತ್ತೆ. ಆ ಜಗಳದಲ್ಲಿ ಈ ಮಾರುತೇಶ್ ಅನ್ನೋ ವ್ಯಕ್ತಿ ತಳ್ಳಿದಾಗ ಇವನು ಕೆಳಗೆ ಬಿದ್ದು ಪ್ರಜ್ಞೆ ಇಲ್ಲದೆ ಆಗ್ತಾನೆ. ಅದಾದ ಮೇಲೆ ಮೃತಪಟ್ಟಿರುವುದು ನಮಗೆ ಕಂಡುಬಂದಿದೆ.


    ಸೋ ಇಮ್ಮೀಡಿಯೇಟ್ ಆಗಿ ಸಿಂಹಾದ್ರಿ ಅವರ ತಾಯಿ ಅನ್ನಪೂರ್ಣ ಕೊಟ್ಟಿರುವ ಕಂಪ್ಲೇಂಟ್ ಮೇಲೆ ಮೇಲೆ ಆರೋಪಿ ಮಾರುತೇಶ್ ಎಂಬಾತನನ್ನು ಇವತ್ತು ಬೆಳಗ್ಗೆ ( ಸೆ.22) ಏಳು ಗಂಟೆಗೆ ಅರೆಸ್ಟ್ ಮಾಡಲಾಗಿದೆ.


    ಸೋ, ಘಟನಾಕ್ರಮ ಹಿನ್ನೆಲೆ ಏನಂದ್ರೆ , ಆ ದಿನ ಕಸಾಪುರ ಗ್ರಾಮದಲ್ಲಿ ಒಂದು ಗಣೇಶ ವಿಸರ್ಜನೆ ಇತ್ತು. ಆ ವಿಸರ್ಜನೆ ಸಲುವಾಗಿ ಆ ಊರು ಮಧ್ಯದಲ್ಲಿರುವ ಮಾರಮ್ಮ ಗುಡಿ ಹತ್ತಿರ ಗಣೇಶನನ್ನು ಇಟ್ಟು ಪೂಜೆ ಮಾಡ್ತಾ ಇರುತ್ತಾರೆ. ಅದೇ ಸಮಯದಲ್ಲಿ ಒಂದು ಡೋಲು ಕುಣಿತ ಇರುವಾಗ ಅದೇ ರಸ್ತೆಯಲ್ಲಿ ಈ ಸಿಂಹಾದ್ರಿ ಮತ್ತು ಅವರ ಫ್ರೆಂಡ್ಸ್ ಪಾಸ್ ಆಗ್ತಾ ಇರ್ತಾರೆ. ಆ ಪಾಸ್ ಆಗೋ ಸಮಯದಲ್ಲಿ ಇವರು ಮಾತುಕತೆ ಬೆಳೆದು ಒಬ್ಬರೊಬ್ಬರು ತಳ್ಳಾಟ ನೂಕಾಟ ಮಾಡ್ಕೊಂಡು ಈ ಘಟನೆ ನಡೆದಿರುವುದು ಅಂತ ನಮಗೆ ಅಲ್ಲಿರುವ ಐ ವಿಟ್ನೆಸ್ ಮೂಲಕ ಕಂಡುಬಂದಿದೆ. ಸೋ ಆರೆಸ್ಟ್ ಮಾಡಲಾಗಿದೆ, ಬಾಡಿ ಪೋಸ್ಟ್ ಮಾರ್ಟೆಮ್ ಮಾಡಿ ಅವರ ಜನಕ್ಕೆ ಕೊಡಲಾಗಿದೆ, ನಿನ್ನೆ ರಾತ್ರಿ ಕ್ರಿಮೇಶನ್ ಸಹ ಮುಗಿದಿದೆ. ಮುಂದಿನ ದಿನಗಳಲ್ಲಿ ನಾವು ಇನ್ವೆಸ್ಟಿಗೇಶನ್ ಮಾಡಿ ಆದಷ್ಟು ಬೇಗ ಚಾರ್ಜ್ ಶೀಟ್ ಮಾಡಲಾಗುತ್ತದೆ 


    ನಮಗೆ ಸದ್ಯಕ್ಕೆ ಐ ವಿಟ್ನೆಸ್ ಪ್ರಕಾರ ಇರೋದು ಏನಂದ್ರೆ ಅವರು ದಾರಿಯಲ್ಲಿ ಪಾಸ್ ಆಗ್ತಿದ್ರು. ಅಲ್ಲಿ ಅವರು ಕುಣಿಯಕ್ಕೆ ಅಂತೂ ಬಂದಿಲ್ಲ. ಯಾಕಂದ್ರೆ ಇವರು ಗಣೇಶಗಳು ಬೇರೆ ಬೇರೆ ಇಟ್ಕೊಂಡಿದ್ದಾರೆ. ಕಾಲೋನಿ ಅವರು ಬೇರೆ ಗಣೇಶ ಇಟ್ಕೊಂಡಿದ್ದಾರೆ. ಇವರು ಏನು ಮೃತಪಟ್ಟಿದ್ದಾರೆ ಇವರು ಇಟ್ಟಿರೋ ಗಣೇಶ ಮುಂದಿನ ದಿನ ವಿಸರ್ಜನೆ ಮಾಡಬೇಕಿತ್ತು. ಈ ನಡೆದಿರುವ ಘ ಪ್ರವೀಣ್ ಅನ್ನೋ ಒಬ್ಬ ವ್ಯಕ್ತಿ ಆರ್ಗನೈಸರ್ ಪರ್ಮಿಶನ್ ತಗೊಂಡಿದ್ದರು. 


   ಇದು ಇಬ್ಬರೂ ಕುಡಿದಿದ್ದರು. ಕುಡಿದು ಎದುರು ಬದುರು ಬಂದ ಟೈಮ್ನಲ್ಲಿ ನಡೆದಿರುವ ಘಟನೆ. ಈ ಹುಡುಗರ ಮಧ್ಯದಲ್ಲಿ ಏನಾದ್ರೂ ಜಗಳ ಇದೆಯಾ ಅನ್ನೋದನ್ನ ನಾವು ಮುಂದಿನ ದಿನಗಳಲ್ಲಿ ಚೆಕ್ ಮಾಡ್ತೀವಿ.”


   ಎರಡು ಗುಂಪುಗಳ ನಡುವೆ ನಡೆದ ಜಗಳ ಜೊತೆಗೆ ಇಬ್ಬರೂ ಕುಡಿದಿದ್ದರು ಅಂತ ಹೇಳುವ ಜೊತೆಗೆ ಆದರೆ ಕೆ.ಎನ್. ಮಾರುತೇಶ್ ಸಿಂಹಾದ್ರಿಯನ್ನು ಕೊಂದಿದ್ದಾನೆ ಅಂತ ಅವನೊಬ್ಬನನ್ನೇ ಅರೆಸ್ಟ್ ಮಾಡಲಾಗಿದೆ ಅಂತಲೂ ಹೇಳುತ್ತಾರೆ. 


ಕೃತ್ಯ ನಡೆದಿರುವುದು ಇಳಿ ಮಧ್ಯಾಹ್ನ , ಜಗಳ ಶುರುವಾಗಿರುವುದು ಎರಡು ಗುಂಪುಗಳ ನಡುವೆ, ಅದೂ ಇಬ್ಬರೂ ಕುಡಿದಿದ್ದರು ಎನ್ನುತ್ತಾರೆ, ಮಾರುತೇಶ ಒಬ್ಬನೇ ಸಿಂಹಾದ್ರಿಗೆ ಹೊಡೆದು ಕೊಂದಿದ್ದಾನೆ ಅಂತಲೂ ಪ್ರತ್ಯಕ್ಷ ದರ್ಶಿಯನ್ನು ಉಲ್ಲೇಖಿಸಿ ಎಸ್ ಪಿ ಹೇಳುತ್ತಾರೆ. ಎರಡು ಗುಂಪುಗಳ ನಡುವೆ ಜಗಳ ನಡೆಯುತ್ತಿರುವಾಗ ಸಿಂಹಾದ್ರಿ ಮೇಲೆ ಮಾರುತೇಶ ಅಲ್ಲದೇ ಇತರ ಯಾರೊಬ್ಬರೂ ಕೈ ಮಾಡಿರುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವೇ.


   ಗಣೇಶ ವಿಸರ್ಜನೆ ಅಂದ ಮೇಲೆ ಕುಡಿಯಲೇ ಬೇಕು ಎನ್ನುವುದು ನಮ್ಮ ದೇಶದ ಅಲಿಖಿತ ಸಂವಿಧಾನ, 2022ರ ಸೆಪ್ಟೆಂಬರ್ ತಿಂಗಳಲ್ಲಿ ತುಮಕೂರಿನ ಎಂಜಿ ರಸ್ತೆಯಲ್ಲಿ ಇಂತದ್ದೇ ಗಣೇಶ ವಿಸರ್ಜನೆ ಸಮಯದಲ್ಲಿ ಕುಡಿದಿದ್ದವನೊಬ್ಬ ಮಹಿಳಾ ಪಿಎಸ್‌ಐ ಮೇಲೆ ದುರ್ವರ್ತನೆ ತೋರಿದ್ದ ಘಟನೆಯೂ ನೆನಪಿರಬೇಕಲ್ಲವೇ. 


   ಎಸ್ ಪಿ ಅವರು ಹೆಚ್ಚಿನ ತನಿಖೆ ಮಾಡುವ ಭರವಸೆ ನೀಡಿರುವುದರಿಂದ ಸಿಂಹಾದ್ರಿ ಹತ್ಯೆಯಲ್ಲಿ ಇನ್ನೂ ಯಾರದಾದರೂ ಪಾತ್ರ ಇದೆಯೇ ಎಂಬುದನ್ನೂ ಪತ್ತೆ ಹಚ್ಚಿ , ದಲಿತ ಮುಖಂಡರು ಆಗ್ರಹ ಪಡಿಸುತ್ತಿರುವಂತೆ ಉಳಿದ ಕೊಲೆಗಾರರನ್ನೂ ಬಂಧಿಸಿ ಜೈಲಿಗೆ ಅಟ್ಟಬೇಕಿದೆ. 



ಅಕ್ರಮ ಮದ್ಯ ಮಾರಾಟ


    ಕಸಾಪುರದಲ್ಲಿ ಈ ಜಿಲ್ಲೆಯ ಇತರ ಊರುಗಳಂತೆ ಎರಡೋ ಮೂರೋ ಚಿಲ್ಲರೆ ಅಂಗಡಿಗಳಿವೆ. ಕಸಾಪುರದ ಮುಖ್ಯ ರಸ್ತೆಯಲ್ಲಿ ನಾಗರಾಜ ಹಾಗೂ ವಿಶ್ವನಾಥ ಎಂಬ ಅಪ್ಪ ಮಕ್ಕಳು ನಡೆಸುವ ತುಸು ದೊಡ್ಡದಾದ ಅಂಗಡಿಯೊಂದಿದೆ. ಅಲ್ಲಿ ನೀವು ಕೇಳುವ ಬಹುಪಾಲು ಎಲ್ಲ ದಿನಸಿ ಹಾಗೂ ದಿನಬಳಕೆ ಪದಾರ್ಥಗಳು ದೊರಕುತ್ತವೆ. ಜೊತೆಗೆ ಇವರು ಅಕ್ರಮವಾಗಿ ಮದ್ಯವನ್ನೂ ಮಾರಾಟ ಮಾಡುತ್ತಿದ್ದಾರೆ ಎಂದು ಊರಿನ ಜನ ಹೇಳುತ್ತಾರೆ. ಇವರು ಮದ್ಯ ವಿತರಣೆಗೆಂದೇ ಇವರ ಅಂಗಡಿ ಪಕ್ಕದಲ್ಲಿ ಹಿಂಭಾಗ ಒಂದು ತಗಡಿನ ಶೆಡ್ ನಿರ್ಮಿಸಿಕೊಂಡಿದ್ದಾರೆ. ಇಡೀ ದಿನ ಗಣೇಶ ವಿಸರ್ಜನೆಗೆ ಬಂದವರು ಇವರ ಅಂಗಡಿಯಲ್ಲೇ ಮದ್ಯ ಖರೀದಿಸಿ ಕುಡಿದಿದ್ದಾರೆ ಎಂಬ ಮಾಹಿತಿ ಇದೆ. ಕ್ರಮ ಜರುಗಿಸುವವರು ಯಾರು?