ತುಮಕೂರು ಜಿಲ್ಲಾ ಪತ್ರಕರ್ತರ ಸಂಘದ  ಅಧ್ಯಕ್ಷರಾಗಿ ʼಸ್ನೇಹ ಜೀವಿʼ ಯೋಗೇಶ್‌

ʼಸಮಾನ ಮನಸ್ಕರ ತಂಡʼವನ್ನು ಹರಸಿದ ಜಿಲ್ಲೆಯ ಪತ್ರಕರ್ತರು

ತುಮಕೂರು ಜಿಲ್ಲಾ ಪತ್ರಕರ್ತರ ಸಂಘದ  ಅಧ್ಯಕ್ಷರಾಗಿ ʼಸ್ನೇಹ ಜೀವಿʼ ಯೋಗೇಶ್‌

    ತುಮಕೂರು: ಕೆಯುಡಬ್ಲ್ಯುಜೆ ಎಂದು ಸಂಕ್ಷಿಪ್ತವಾಗಿ ಕರೆಯಲಾಗುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತುಮಕೂರು ಜಿಲ್ಲಾ ಘಟಕದ ಆಡಳಿತ ಮಂಡಳಿಗೆ ಮುಂದಿನ ಮೂರು ವರ್ಷಗಳ ಅವಧಿಗೆ ಚುನಾವಣೆ ಭಾನುವಾರ ನಡೆದಿದ್ದು “ಸಮಾನ ಮನಸ್ಕ ಪತ್ರಕರ್ತರ ತಂಡ”ವು ಅಧ್ಯಕ್ಷ ಸ್ಥಾನದ ಜೊತೆಗೆ ಐದು ಪದಾಧಿಕಾರಿ ಹಾಗೂ ಹತ್ತು ನಿರ್ದೇಶಕ ಸ್ಥಾನಗಳನ್ನು ಗೆಲ್ಲುವ  ಮೂಲಕ ಸಂಘವನ್ನು ತನ್ನ ಕೈವಶ ಮಾಡಿಕೊಂಡಿದೆ.

   ಕಳೆದ ಆರು ವರ್ಷ ನಿರಂತರ ಆಡಳಿತ ನಡೆಸಿದ  ʼಕುಟುಂಬʼ  ತಂಡದ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಹಾಗೂ ಖಜಾಂಚಿ ಅಭ್ಯರ್ಥಿಗಳೆಲ್ಲರೂ ಸೋಲಿಗೆ ಶರಣಾಗಿದ್ದು, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನ ಸೇರಿದಂತೆ ಆರು ಮಂದಿ  ಹಾಗೂ ʼ ಸ್ವಾಭಿಮಾನಿʼ ತಂಡದಿಂದ ಪ್ರಧಾನ ಕಾರ್ಯದರ್ಶಿ ಸೇರಿ ಮೂರು ಮಂದಿ ಮಾತ್ರ ಗೆಲ್ಲಲು ಸಾಧ್ಯವಾಗಿದೆ.

   ನವೆಂಬರ್‌ 9ರ ಬೆಳಿಗ್ಗೆ 9ರಿಂದ ಮಧ್ಯಾಹ್ನ 3 ಗಂಟೆವರೆಗೆ ತುಮಕೂರಿನ ಬಾಳನಕಟ್ಟೆಯಲ್ಲಿರುವ ಪತ್ರಿಕಾಭವನದಲ್ಲಿ ಓಟಿಂಗ್‌ ನಡೆಯಿತು. ಅರ್ಹ 374 ಓಟುದಾರ ಸದಸ್ಯರಲ್ಲಿ 370 ಸದಸ್ಯರು ಓಟು ಮಾಡಿ, ದಾಖಲೆ ನಿರ್ಮಿಸಿದರು. ಸಂಜೆ 4ರಿಂದ 10ರವರೆಗೆ  ಕೌಂಟಿಂಗ್‌ ನಡೆಯಿತು. ಚುನಾವಣಾಧಿಕಾರಿಯಾಗಿ ಕರ್ನಾಟಕ ಸರ್ಕಾರದ ವಿಶ್ರಾಂತ ಜಂಟಿ ಕಾರ್ಯದರ್ಶಿ ಕಾಂತರಾಜು ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ವಿಶ್ರಾಂತ ಕಂದಾಯ ಇಲಾಖೆ ಅಧಿಕಾರಿ ಗೋವಿಂದ ರೆಡ್ಡಿ ಶಾಂತಿಯುತ ಹಾಗೂ ಶಿಸ್ತಿನಿಂದ ಚುನಾವಣೆ ನಡೆಸಿ ಎಲ್ಲರ ಮನ ಗೆದ್ದರು. ಹಿಂದಿನ ಚುನಾವಣೆಗೆ ಹೋಲಿಸಿದರೆ ಈ ಸಲ ಬಹಳ ಕಡಿಮೆ ಬ್ಯಾಲೆಟ್‌ ಪತ್ರಗಳು ತಿರಸ್ಖೃತಗೊಂಡವು( 06)

    ಕಾರ್ಯನಿರತ ಪತ್ರಕರ್ತರ ಸಂಘದ ತುಮಕೂರು ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ʼ ಸಮಾನ ಮನಸ್ಕ ಪತ್ರಕರ್ತʼರ ತಂಡದ ʼ ಸ್ನೇಹ ಜೀವಿʼ ಯೋಗೇಶ್‌ ( ಸುವರ್ಣ ನ್ಯೂಸ್‌ನ ವಿಡಿಯೋ ಜರ್ನಲಿಸ್ಟ್‌ ) ʼಕುಟುಂಬʼ ತಂಡದ ಹರೀಶ್‌ ಆಚಾರ್ಯ ಅವರ ವಿರುದ್ದ 60 ಮತಗಳ ಭಾರೀ ಅಂತರದಿಂದ ಗೆದ್ದಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಒಟ್ಟು ನಾಲ್ವರು ಉಮೇದುವಾರರು ಕಣದಲ್ಲಿದ್ದು,  ಯೋಗೇಶ್‌ 155 ಓಟು ಗಳಿಸಿ ಗೆಲುವು ಸಾಧಿಸಿದರೆ ಅವರ ಎದುರು ʼ ಕುಟುಂಬʼ ತಂಡದ ಎಸ್.ಹರೀಶ್‌ ಆಚಾರ್ಯ ಮೂರಂಕಿ ತಲುಪಲೂ ಸಾಧ್ಯವಾಗದೇ ಹೀನಾಯ ಸೋಲು ಕಂಡಿದ್ದಾರೆ. ಹರೀಶ್‌ ಆಚಾರ್ಯ ಗಳಿಸಿದ್ದು ಕೇವಲ 95 ಓಟುಗಳು ಮಾತ್ರ. ಇದೇ ಸ್ಥಾನಕ್ಕಾಗಿ ಸೆಣೆಸಾಟ ನಡೆಸಿದ್ದ ʼ ಸ್ವಾಭಿಮಾನಿʼ ತಂಡದ ಕರ್ನಾಟಕ ರಾಜ್ಯ ಸಂಪಾದಕರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಟಿ.ಎಸ್.ಕೃಷ್ಣಮೂರ್ತಿ 78 ಓಟುಗಳನ್ನು ಹಾಗೂ ಮತ್ತೊಬ್ಬ ಸ್ವತಂತ್ರ ಅಭ್ಯರ್ಥಿ ಪಿ.ಡಿ.ಈರಣ್ಣ ಅಲಿಯಾಸ್‌ ಸಣ್ಣಿ ಜಸ್ಟ್‌ 36 ಓಟುಗಳಿಗೆ ತೃಪ್ತರಾಗಿದ್ದಾರೆ.

 

   ಸಂಘಕ್ಕೆ ಮೂರು ಉಪಾಧ್ಯಕ್ಷ ಸ್ಥಾನಗಳಿದ್ದು ʼ ಸಮಾನ ಮನಸ್ಕ ಪತ್ರಕರ್ತʼರ ತಂಡದ ಇಬ್ಬರು ಗೆದ್ದಿದ್ದಾರೆ. ಇವರಲ್ಲಿ ಗುಬ್ಬಿಯ ವಿಜಯ ಕರ್ನಾಟಕ ವರದಿಗಾರ ಪ್ರಸನ್ನ ದೊಡ್ಡಗುಣಿ 190 ಓಟುಗಳನ್ನು ಗಳಿಸಿ ಹಾಗೂ ಶಿರಾದ ಸಂಯುಕ್ತ ಕರ್ನಾಟಕದ ವರದಿಗಾರ ದಶರಥ 131 ಓಟುಗಳನ್ನು ಗಳಿಸಿ ಜಯಶೀಲರಾಗಿದ್ದಾರೆ. ಇವರ ಜೊತೆಗೆ ಕುಟುಂಬ ತಂಡದ ಜಯಣ್ಣ ಸಿ ಜಯನುಡಿ ಇವರು 142 ಓಟು ಪಡೆದು ಗೆದ್ದಿದ್ದಾರೆ.

ಪ್ರಧಾನ ಕಾರ್ಯದರ್ಶಿ

    ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಈ ಹಿಂದಿನ ಮೂರು ವರ್ಷಗಳ ಅವಧಿಗೆ ಇದೇ ಹುದ್ದೆಯಲ್ಲಿದ್ದ ಟಿ.ಇ ರಘುರಾಮ್‌ 119 ಓಟುಗಳನ್ನು ಪಡೆದು ಗೆದ್ದಿದ್ದಾರೆ. ಇವರ ಸಮೀಪ ಪ್ರತಿಸ್ಪರ್ಧಿ ʼ ಸಮಾನ ಮನಸ್ಕ ಪತ್ರಕರ್ತʼರ ತಂಡದ ಹೆಚ್.ಎಸ್.‌ ಪರಮೇಶ್‌ ಸುವರ್ಣ ಪ್ರಗತಿ ಇವರು 16 ಓಟುಗಳ ಅಂತರದಲ್ಲಿ ಸೋಲಬೇಕಾಗಿ ಬಂದಿದೆ. ಇವರಿಬ್ಬರ ನಡುವೆ ಅಬ್ಬರದ ಪ್ರಚಾರದಲ್ಲಿದ್ದ ʼ ಕುಟುಂಬʼ ತಂಡದ ಅಭ್ಯರ್ಥಿ ಕೇವಲ 88 ಓಟು ಪಡೆದು ಮೂರನೇ ಸ್ಥಾನದಲ್ಲಿ ಸೋತಿದ್ದಾರೆ.

ಕಾರ್ಯದರ್ಶಿಗಳು

ಮೂರು ಕಾರ್ಯದರ್ಶಿ ಸ್ಥಾನಗಳನ್ನು ಮೂರೂ ತಂಡಗಳು ತಲಾ ಒಂದು ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ಸು ಕಂಡಿವೆ. ʼ ಸಮಾನ ಮನಸ್ಕರ ಪತ್ರಕರ್ತರ ತಂಡದಿಂದ ಕೊರಟಗೆರೆಯ ಯಶಸ್‌ ಕೆ. ಪದ್ಮನಾಭ್‌ 159 ಓಟು ಗಳಿಸಿ ಗೆದ್ದಿದ್ದಾರೆ. ಇವರ ಜೊತೆಗೆ ʼಕುಟುಂಬʼ ತಂಡದ ಕೊರಟಗೆರೆಯ ರಂಗಧಾಮಯ್ಯ 204 ಓಟು ಗಳಿಸಿ ಗೆದ್ದರೆ, ತುರುವೇಕೆರೆಯ ನಂದೀಶ್‌ ಬಿ.ಎಲ್‌ 155 ಓಟು ಗಳಿಸಿ ಗೆದ್ದಿದ್ದಾರೆ. ಇವರು ಸ್ವಾಭಿಮಾನಿ ತಂಡದಿಂದ ಕಣದಲ್ಲಿದ್ದರು.

ಖಜಾಂಚಿ

       ಉಳಿದಂತೆ ಖಜಾಂಚಿ ಸ್ಥಾನಕ್ಕೆ ಕಣದಲ್ಲಿದ್ದ ಮೂರೂ ತಂಡಗಳ ಅಭ್ಯರ್ಥಿಗಳ ಪೈಕಿ ʼ ಸಮಾನ ಮನಸ್ಕ ಪತ್ರಕರ್ತರʼ ತಂಡದ ಸತೀಶ್‌ ಹಾರೋಗೆರೆ 206 ಓಟು ಗಳಿಸಿ ಗೆದ್ದರೆ ಇವರ ಎದುರು ಸ್ವಾಭಿಮಾನಿ ತಂಡದ ಸಿ.ರಂಗನಾಥ್‌ ಪ್ರಜಾ ಸಮತ ಹಾಗೂ ಕುಟುಂಬ ತಂಡದ ಸಿಟಿಎಸ್‌ ಗೋವಿಂದಪ್ಪ  ಕ್ರಮವಾಗಿ 77 ಮತ್ತು 53 ಓಟುಗಳಿಗೆ ಸೀಮಿತಗೊಂಡಿದ್ದು ಹಾರೊಗೆರೆ ಸತೀಶ್‌ 129 ಓಟುಗಳ ಭಾರೀ ಅಂತರದಲ್ಲಿ ಗೆದ್ದಿದ್ದಾರೆ. ಈ ಸಲ ರಾಜ್ಯ ಕಾರ್ಯಕಾರಿ ಸಮಿತಿಗೆ ಆಯ್ಕೆಯಾಗಲು  ಈ ತಕ್ಷಣದ ಹಿಂದಿನ ಎರಡು ಅವಧಿಗೆ ಅಂದರೆ ಆರು ವರ್ಷ ಅಧ್ಯಕ್ಷರಾಗಿ ಆಡಳಿತ ನಡೆಸಿದ  ಚಿ.ನಿ. ಪುರುಷೋತ್ತಮ ಪಡೆದ ಒಟ್ಟು ಓಟು  ಸತೀಶ್‌ ಅವರ ಲೀಡಿಂಗ್‌ ಗಿಂತ ಎರಡು ಓಟು ಕಡಿಮೆ ಎಂದರೆ ಅಚ್ಚರಿ ಪಡಬೇಡಿ. ಚಿ.ನಿ.ಪುರುಷೋತ್ತಮ ಅವರ ನಾಯಕತ್ವದಲ್ಲಿ ಇತರ ಎರಡು ತಂಡಗಳಿಗಿಂತ ಮೊದಲೇ ಸಿಂಡಿಕೇಟ್‌ ರಚಿಸಿ ಪ್ರಚಾರ ಆರಂಭಿಸಿದ್ದ ʼ ಕುಟುಂಬ ತಂಡದಲ್ಲಿ ಸೋತ ಎಂಟು ನಿರ್ದೇಶಕ ಅಭ್ಯರ್ಥಿಗಳು ಇವರ ತಂಡದ ನಾಯಕ ಚಿನಿಗಿಂತ ಹೆಚ್ಚೂ ಕಮ್ಮಿ ಅಷ್ಟೇ ಓಟು ಗಳಿಸಿದ್ದಾರೆ.

 

ʼ ಸಮಾನ ಮನಸ್ಕ ಪತ್ರಕರ್ತʼರ

ತಂಡದಿಂದ ಹತ್ತು ನಿರ್ದೇಶಕರು

   ಇಡೀ ಸಂಘವನ್ನು ಅಡಳಿತಾತ್ಮಕವಾಗಿ ಹತೋಟಿಗೆ ತೆಗೆದುಕೊಂಡಿರುವ ʼ ಸಮಾನ ಮನಸ್ಕ ಪತ್ರಕರ್ತʼರ ತಂಡದಿಂದ ಜಿಲ್ಲಾ ಕಾರ್ಯಕಾರಿ ಸಮಿತಿ (ನಿರ್ದೇಶಕ) ಸ್ಥಾನದಿಂದ ಕಣಕ್ಕಿಳಿದಿದ್ದ ಹನ್ನೆರಡು ಅಭ್ಯರ್ಥಿಗಳ ಪೈಕಿ ಹತ್ತು ಮಂದಿ ಗೆಲುವಿನ ನಗೆ ಬೀರಿದ್ದಾರೆ.

 

  • ಕುಣಿಗಲ್‌ನ ಹೆಚ್‌.ಎಂ.ಅಶೋಕ್‌ ( 165 ಓಟುಗಳು),

  • ಮಧುಗಿರಿ ತಾಲೂಕಿನ ದೊಡ್ಡೇರಿಯ ಕಣಿಮಯ್ಯ ( 145 ಓಟುಗಳು),

 

  • ಜಗನ್ನಾಥ್‌ ಕಾಳೇನಹಳ್ಳಿ ವಿಜಯವಾಣಿ( 225 ಓಟುಗಳು ) ,

  • ಕೊರಟಗೆರೆಯ ಪುರುಷೋತ್ತಮ್‌ (190 ಓಟುಗಳು),

  • ಮಧು ಇಂಗಳದಾಳ್‌ ನ್ಯೂಸ್‌ ಫಸ್ಟ್‌( 180 ಓಟುಗಳು)

  • ಮಾರುತಿ ಗಂಗಹನುಮಯ್ಯ ಅಮೃತವಾಣಿ ದಿನಪತ್ರಿಕೆ( 180 ಓಟುಗಳು)

  • ಪ್ರಜಾ ಕಹಳೆ ದಿನಪತ್ರಿಕೆಯ ರಘು ಎ.ಎನ್.‌ (148 ಓಟುಗಳು)

  • ವಿಜಯ್‌ ( 143 ಓಟುಗಳು) , ಟಿವಿ 9 ನ ಹಿಂದಿನ ಕ್ಯಾಮೆರಾ ಮೆನ್‌

  • ತಿಪಟೂರಿನ ಹೆಚ್.ಬಿ.ಸುಪ್ರತೀಕ್‌ (153 ಓಟುಗಳು)

  • ಎಸ್.ಸುರೇಶ್‌ ವತ್ಸ ತುಮಕೂರು ವಾರ್ತೆ ಸಂಪಾದಕ (159 ಓಟುಗಳು)

 

   ಉಳಿದ ಐದು ಮಂದಿ ನಿರ್ದೇಶಕರಲ್ಲಿ  ತುಮಕೂರು ಮಿತ್ರ ಸಂಪಾದಕ ಮಂಜುನಾಥ್‌ ಪಿ.ಎನ್.‌ 197 ಓಟುಗಳನ್ನು, ಯೂ ಟ್ಯೂಬರ್‌ ಜಯಣ್ಣ ಬೆಳಗೆರೆ 174 ಓಟುಗಳನ್ನು, ಮಾರುತಿ ಪ್ರಸಾದ್‌ ( ಕೆಟಿಎಂ) 139 ಓಟುಗಳನ್ನು , ಗುಬ್ಬಿಯ ಯೋಗೀಶ್‌ ಮೆಳೆಕಲ್ಲಹಳ್ಳಿ 133 ಓಟುಗಳನ್ನು ಹಾಗೂ ಪ್ರಜಾಶಕ್ತಿ ಯೂಟ್ಯೂಬ್‌ ಚಾನೆಲ್‌ನ ಹೇಮಂತ್‌ .ಎನ್.‌ 155 ಓಟುಗಳನ್ನು ಪಡೆದು ಗೆದ್ದಿದ್ದಾರೆ. 

 

 

 

ಮರು ಆಯ್ಕೆಯಾದವರು

 

 

 

   ತುಮಕೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿಕಟ ಪೂರ್ವ ಪ್ರಧಾನ ಕಾರ್ಯದರ್ಶಿಯಾಗಿದ್ದ ಏಕೇಶ್‌ ಪತ್ರಿಕೆ ರಘುರಾಮ್‌ ಮತ್ತೆ ಅದೇ ಹುದ್ದೆಗೆ ಮರು ಆಯ್ಕೆಯಾಗಿದ್ದಾರೆ. ಆದರೆ ಹಿಂದಿನ ಸತತ ಆರು ವರ್ಷಗಳ ಅವಧಿಗೆ ಅಧ್ಯಕ್ಷರಾಗಿದ್ದ ಚಿ.ನಿ.ಪುರುಷೋತ್ತಮ್‌ ಮಾತ್ರ ರಾಜ್ಯ ಕಾರ್ಯಕಾರಿ ಸಮಿತಿ ಸ್ಥಾನಕ್ಕೆ ಚುನಾಯಿತರಾಗಿದ್ದಾರೆ.

    ಈ ಸ್ಥಾನಕ್ಕೆ ಒಟ್ಟು  ನಾಲ್ವರು ಕಣದಲ್ಲಿದ್ದು ಸ್ವಾಭಿಮಾನಿ ತಂಡದ ತಿಪಟೂರು ಕೃಷ್ಣ (87) , ಸಮಾನ ಮನಸ್ಕ ಪತ್ರಕರ್ತರ ತಂಡದ (79) ಹಾಗೂ ಸ್ವತಂತ್ರವಾಗಿ ಕಣಕ್ಕಿಳಿದಿದ್ದ ಹಾಲಿ ಸದಸ್ಯ ಕುಣಿಗಲ್‌ ನ ಸಿದ್ದಲಿಂಗಸ್ವಾಮಿ (76) ಓಟು ಗಳಿಸಿ ಸೋತರು.