ದೇವಕನ್ನಿಕೆ ಶ್ರೀ ಬುಕ್ಕಪಟ್ಟಣದಮ್ಮನ ಅಧ್ಯಯನದ ಸುತ್ತಮುತ್ತ ಪುಸ್ತಕ ಪರಿಚಯ - ಎಂ.ಎಚ್. ನಾಗರಾಜು
ದೇವಕನ್ನಿಕೆ ಶ್ರೀ ಬುಕ್ಕಪಟ್ಟಣದಮ್ಮನ ಅಧ್ಯಯನದ ಸುತ್ತಮುತ್ತ ಪುಸ್ತಕ ಪರಿಚಯ - ಎಂ.ಎಚ್. ನಾಗರಾಜು
ದೇವಕನ್ನಿಕೆ ಶ್ರೀ ಬುಕ್ಕಪಟ್ಟಣದಮ್ಮನ ಅಧ್ಯಯನದ ಸುತ್ತಮುತ್ತ
ಪುಸ್ತಕ ಪರಿಚಯ - ಎಂ.ಎಚ್. ನಾಗರಾಜು
ಸುಮಾರು ಒಂದು ನೂರ ಐವತ್ತೆöÊದು ಪುಟಗಳಲ್ಲಿ ವಿಸ್ತೃತವಾಗಿ ಹರಡಿರುವ “ದೇವಕನ್ನಿಕೆ ಬುಕ್ಕಪಟ್ಟಣದ ಶ್ರೀ ದೊಡ್ಡಮ್ಮ” ಶೀರ್ಷಿಕೆಯ ಕೃತಿ ನನ್ನ ಮುಂದಿದೆ. ಈಗ್ಗೆ ಎರಡು-ಮೂರು ಬಾರಿ ನಾನು ಈ ಕೃತಿಯನ್ನು ಓದಿದ್ದೇನೆ, ಅವಲೋಕನ ಮಾಡಿದ್ದೇನೆ. ಇಲ್ಲಿನ ವಿವರಿಸಲ್ಪಟ್ಟಿರುವ ಸಾಮಾಜಿಕ ಸಂಗತಿಗಳೊAದಿಗೆ ಸಂವಾದ ಮಾಡಿದ್ದೇನೆ, ಒಡನಾಡಿದ್ದೇನೆ. ಈ ಕಾರಣದಿಂದ ಈ ಕೃತಿಯನ್ನು ಕುರಿತು ಕೆಲವು ಅನಿಸಿಕೆಯ ಸಾಲುಗಳನ್ನು ಇಲ್ಲಿ ಬರೆಯುವ ಮತ್ತು ದಾಖಲಿಸುವ ಪ್ರಯತ್ನ ಮಾಡುತ್ತಿದ್ದೇನೆ.
ಈ ಕೃತಿ ಗೆಳೆಯ, ಉಪನ್ಯಾಸಕ, ಲೇಖಕ ಜಿ.ಎನ್. ಕೆಂಪಯ್ಯ ಅವರು ಬರೆದಿರುವ ಒಂದು ಮಹತ್ವದ ಕೃತಿ. ತಮ್ಮ ಆಪ್ತ ವಲಯದಲ್ಲಿ `ಜಿಎನ್‌ಕೆ’ ಎಂದು ಪರಿಚಿತರಾಗಿರುವ ಅವರು ಈವರೆಗೆ ವಿದ್ಯಾರ್ಥಿಮುಖಿಯಾಗಿ ಶಿಕ್ಷಕಸ್ನೇಹಿಯಾಗಿ ಅಧ್ಯಯನ-ಅಧ್ಯಾಪನ-ಸಂಶೋಧನೆ-ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದವರು. ಹತ್ತಾರು ಅರ್ಥಶಾಸ್ತಿçÃಯ ಗ್ರಂಥಗಳನ್ನು ರಚಿಸಿದವರು. ಈ ಮೂಲಕ ಹಲವು ಸಾವಿರ ವಿದ್ಯಾರ್ಥಿಗಳು, ಹಲವು ನೂರು ಶಿಕ್ಷಕರುಗಳ ಹೃನ್ಮನವನ್ನು ಗೆದ್ದವರು. ಇದು ಅವರ ಬದುಕಿನ ಬಹುದೊಡ್ಡ ಸಾಧನೆ, ಗೆಲುವು. ಬಹುದೊಡ್ಡ ಕೊಡುಗೆ ಎಂದು ನಾನು ಬಗೆಯುತ್ತೇನೆ. ಅಲ್ಲದೆ ಇದು ಅವರಿಗೆ ಒಂದಷ್ಟು ತೃಪ್ತಿಯನ್ನು ತಂದುಕೊಟ್ಟಿರುವ ಕೆಲಸ. ಜೊತೆ ಜೊತೆಗೆ ಒಂದಿಷ್ಟು ದುಡ್ಡುಕಾಸು ಪ್ರಶಸ್ತಿ ಗೌರವ ತಂದುಕೊಟ್ಟಿರುವ ಸಾಧ್ಯತೆಯೂ ಇದೆ. ಹೀಗಾಗಿ ಲೇಖಕರಾಗಿ ಅವರು ಸಂತೃಪ್ತರು.
ಹೀಗೆ ಸಾಗಿ ಬಂದ ಈ ಲೇಖಕ ಗೆಳೆಯರು ಒಂದು ಹಂತದಲ್ಲಿ ಸ್ವಲ್ಪ ಭಿನ್ನ ದಾರಿ ತುಳಿದರು. ಸಮಾಜದ ಸಮುದಾಯದ ಒತ್ತಾಸೆ-ಬೇಡಿಕೆಗನುಗುಣವಾಗಿ ಸಮುದಾಯ ಚರಿತ್ರೆಯ ಅಧ್ಯಯನ ಮತ್ತು ರಚನಾಕಾರ್ಯಕ್ಕೆ ಕೈಹಾಕಿದರು. ಬೃಹತ್ ಒಕ್ಕಲಿಗ ಸಮುದಾಯದ ಒಂದು ಒಳ ಪ್ರಬೇಧವಾದ ಉಪ್ಪಿನಕೊಳಗ ಒಕ್ಕಲಿಗರನ್ನು ಕುರಿತು ವ್ಯಾಪಕವಾದ ಕ್ಷೇತ್ರಕಾರ್ಯ, ಸಂಶೋಧನೆ, ಅಧ್ಯಯನವನ್ನು ಮಾಡಿ ಒಂದು ಸಂಸ್ಕೃತಿ ಸಂಕಥನದ ಕೃತಿಯನ್ನು ರಚಿಸಿದರು. ಗೋಧೂಳಿ ಪ್ರಕಾಶನ ಪ್ರಕಟಿಸಿರುವ ಈ ಕೃತಿ ಪ್ರಕಟವಾದ ಒಂದೇ ವರ್ಷದಲ್ಲಿ ಎರಡು ಮುದ್ರಣಗಳನ್ನು ಕಂಡಿತು. ಈ ಕೃತಿಯೂ ಸಹ ಅವರ ಬರವಣಿಗೆಯ ದಾರಿಯಲ್ಲಿ ಒಂದು ಮಹತ್ವದ ಕೊಡುಗೆ ಎಂಬುದಾಗಿ ನಾನು ಪರಿಭಾವಿಸುತ್ತೇನೆ.
ಇದೀಗ, ಈ ಗೆಳೆಯರ ಸಂಶೋಧನೆಯ ಹಾದಿಯಲ್ಲಿ ಮಹತ್ವದ ಮೈಲಿಗಲ್ಲು ಎಂಬAತೆ ದೇವಕನ್ನಿಕೆ ಬುಕ್ಕಪಟ್ಟಣದ ಶ್ರೀ ದೊಡ್ಡಮ್ಮ ಕೃತಿ ರಚನೆಯಾಗಿದೆ. ಬಹುಶಿಸ್ತಿನಿಂದ, ಬಹುಶ್ರದ್ಧೆಯಿಂದ ಬಹುಶಾಸ್ತಿçÃಯವಾಗಿ ಈ ಕೃತಿ ರಚನೆಯಾಗಿದೆ ಎನ್ನುವುದು ಅದರ ಮೊದಲ ಓದಿನಲ್ಲಿಯೇ ಅರಿವಿಗೆ ಬರುತ್ತದೆ. ಹೀಗಾಗಿ ಇದೊಂದು ಪ್ರೌಢ ಅಧ್ಯಯನದ ಕಾರ್ಯ. ವ್ಯಾಪಕವಾದ, ತಲ ಸ್ಪರ್ಶಿಯಾದ ಕ್ಷೇತ್ರಕಾರ್ಯ, ಸಂಶೋಧನೆ, ಅಧ್ಯಯನದ ಭಾಗವಾಗಿ ಮೂಡಿಬಂದಿದೆ ಎಂದು ಓದುವ ಯಾರಿಗಾದರೂ ಅನ್ನಿಸದೆ ಇರಲಾರದು.
ಒಂದು ರೀತಿಯಲ್ಲಿ ಈಗಾಗಲೇ ಹೇಳಿದಂತೆ ಕೃತಿ ಬಹುಶಾಸ್ತಿçÃಯ-ಬಹುಶಿಸ್ತೀಯ ಅಧ್ಯಯನವಾಗಿದೆ. ಇಲ್ಲಿನ ಆಳ ಅಧ್ಯಯನದಲ್ಲಿ ಜಾನಪದ ಇದೆ, ಧಾರ್ಮಿಕ ವಿಚಾರ ಇದೆ, ಸ್ಥಳೀಯ ಸಾಮಾಜಿಕ ಅಧ್ಯಯನ ಇದೆ, ಪರಿಸರದ ಅಧ್ಯಯನ ಇದೆ, ಐತಿಹ್ಯ-ಪುರಾಣ-ಚರಿತ್ರೆಯ ಅಧ್ಯಯನ ಇದೆ. ಹೀಗೆ ಏಕಕಾಲಕ್ಕೆ ಹಲವಾರು ಆಯಾಮಗಳನ್ನು ಒಳಗೊಂಡAತೆ ಇಲ್ಲಿ ಅಧ್ಯಯನ ನಡೆದುಬಂದಿದೆ. ಸ್ಥಳೀಯ ಜನರು ಅವರ ನಂಬಿಕೆಗಳು, ಆಚಾರ-ವಿಚಾರ-ಸಂಸ್ಕೃತಿ-ಸAಕಥನಗಳು ಹೀಗೆ ಎಲ್ಲವನ್ನು ಇಲ್ಲಿ ಅಧ್ಯಯನದ ನಿಕಷಕ್ಕೆ ಒಡ್ಡಲಾಗಿದೆ.
ಇನ್ನೊಂದು ವಿಶೇಷ ಸಂಗತಿ ಎಂದರೆ ಇಲ್ಲಿಯವರೆಗೆ ಶ್ರೀ ದೊಡ್ಡಮ್ಮ ದೇವಿಯ ಸಂಕಥನ ಒಂದು ರೀತಿಯಲ್ಲಿ ಓರಲ್ ಟ್ರಡಿಷನ್‌ನಲ್ಲಿ ಇತ್ತು. ಅಂದರೆ ಮೌಖಿಕ ಸಂಪ್ರದಾಯದಲ್ಲಿತ್ತು. ಇದನ್ನು ದಾಖಲೀಕರಣ ಮಾಡಿರುವುದು ಲೇಖಕರ ಶ್ರಮ ಸಾಧನೆಯೇ ಸರಿ. ಆ ಕೆಲಸವನ್ನು ಅವರು ಸಮರ್ಥವಾಗಿ ಮಾಡಿದ್ದಾರೆ.
ಇಲ್ಲಿನ ಕ್ಷೇತ್ರಕಾರ್ಯ, ಸಂಶೋಧನೆ, ಅಧ್ಯಯನ, ಬರವಣಿಗೆ ಎಲ್ಲವೂ ಬಹಳ ವ್ಯಾಪಕವಾಗಿ ಉತ್ಕೃಷ್ಟವಾಗಿ ನಡೆದಿದೆ ಎಂಬುದು ನನ್ನ ಅಭಿಮತ. ಏಕೆಂದರೆ ಅವರಿಗೆ ಹೀಗೆ ಉತ್ಕೃಷ್ಟವಾಗಿ ಮಾಡುವÀ ಎಲ್ಲ ಅರ್ಹತೆ, ಅವಕಾಶ, ಪ್ರೌಢಿಮೆ ಇದೆ ಎನ್ನುವುದು ನನ್ನ ಗ್ರಹಿಕೆಯಾಗಿದೆ. ಮುಖ್ಯವಾಗಿ ಲೇಖಕರು ಶ್ರೀ ದೊಡ್ಡಮ್ಮದೇವಿ ನೆಲೆಸಿರುವ ನೆಲದ ಮಣ್ಣಿನ ಮಗ. ಅಲ್ಲಿನ ನೆಲ, ಜಲ, ಜನ, ಜೀವನ, ಆರಾಧ್ಯ ದೈವಗಳು, ಆಚಾರ ವಿಚಾರ ಸಂಗತಿ ಸಂಪ್ರದಾಯಗಳು ಎಲ್ಲವನ್ನೂ ಅವರು ಆಳವಾಗಿ ಬಲ್ಲವರು. ಬಾಲ್ಯದಿಂದಲೂ ಶ್ರೀ ದೊಡ್ಡಮ್ಮದೇವಿಯ ಭಕ್ತಿಯಲ್ಲಿ ಮಿಂದವರು, ಆರಾಧನೆಯಲ್ಲಿ, ಜಾತ್ರೆಯಲ್ಲಿ ಪಾಲ್ಗೊಂಡವರು. ಮೌಖಿಕ ಕತೆಗಳನ್ನು ಕೇಳಿದವರು, ಹಾಡುಗಳನ್ನು ಹಾಡಿದವರು. ಹೀಗೆ ಎಲ್ಲವನ್ನೂ ಬಲ್ಲವರು, ಎಲ್ಲವುಗಳೊಂದಿಗೆ ಅನುಸಂಧಾನ ಮಾಡಿದವರು.
ಹೀಗಾಗಿ ಲೇಖಕರಿಗೆ ಶ್ರೀ ದೊಡ್ಡಮ್ಮದೇವಿಯ ಸಂಪೂರ್ಣ ಚರಿತ್ರೆ, ಮೌಖಿಕ ವೃತ್ತಾಂತ ತಿಳಿದಿದೆ. ಅಲ್ಲಿನ ಎಲ್ಲ ಸಂಗತಿಗಳ, ಸೂಕ್ಷö್ಮ ರೀತಿ ರಿವಾಜುಗಳ ಅರಿವಿದೆ. ಆದ್ದರಿಂದ ಯಾವುದೇ ಪರಿಶ್ರಮ ಇಲ್ಲದೆ ಮೈನೋವು ಮಾಡಿಕೊಳ್ಳದೆ ಲೀಲಾಜಾಲವಾಗಿ ಮಾಹಿತಿ ಸಂಗ್ರಹ ಮಾಡಿದ್ದಾರೆ. ಹಾಗೆ ಸಂಗ್ರಹ ಮಾಡಿದ ಮಾಹಿತಿ ಇಟ್ಟುಕೊಂಡು ಆಕರಗಳನ್ನು ದುಡಿಸಿಕೊಂಡು ಈ ಕೃತಿ ರಚನೆಯ ಅಧ್ಯಯನ ಕಾರ್ಯ ಮಾಡಿರುವುದು ತಿಳಿದುಬರುತ್ತದೆ. ಈ ಮಹತ್ವದ ಅಧ್ಯಯನಕ್ಕಾಗಿ ಅವರನ್ನು ನಾನು ಅಭಿನಂದಿಸುತ್ತೇನೆ.
ಕೃತಿಯ ಒಳಹೊಕ್ಕು ಇನ್ನೊಂದಷ್ಟು ಮಾಹಿತಿಯನ್ನು ಹಂಚಿಕೊಳ್ಳುವುದಾದರೆ ದೇವಕನ್ನಿಕೆ ಬುಕ್ಕಪಟ್ಟಣದ ಶ್ರೀ ದೊಡ್ಡಮ್ಮದೇವಿ ಕೃತಿಯನ್ನು ಹನ್ನೆರಡು ಅಧ್ಯಾಯಗಳಾಗಿ ಮಾಡಿಕೊಂಡು ಅಧ್ಯಯನಕ್ಕೆ ಜೀವ ತುಂಬಲಾಗಿದೆ. ಕೃತಿಯ ಮೊದಲ ಅಧ್ಯಾಯವೇ ಗ್ರಂಥರಚನೆಯ ಆಧಾರಗಳು. ಇದು ತುಂಬ ಪುಟ್ಟದಾದ ಎರಡೇ ಪುಟಗಳಿಗೆ ಸೀಮಿತವಾಗಿದ್ದರೂ ಗ್ರಂಥರಚನೆಯ ದಿಸೆಯಲ್ಲಿ ನೆರವಾದ ಆಕರಗಳ, ಕುರಿತು ಪೂರ್ಣ ಮಾಹಿತಿ ನೀಡಿದ್ದಾರೆ. ಇಲ್ಲಿಯವರೆಗೆ ಶ್ರೀ ದೊಡ್ಡಮ್ಮದೇವಿ ಕುರಿತು ಬಂದಿರುವ ಉಲ್ಲೇಖಗಳನ್ನು, ಕೃತಿಗಳನ್ನು ಪ್ರಸ್ತಾಪಿಸಿದ್ದಾರೆ. ಜಾನಪದ ಆಚರಣೆಗಳನ್ನು, ಹಾಡುಗಳನ್ನು ಅಧ್ಯಯನ ಮಾಡಿದ್ದಾರೆ. ನಡೆದಾಡುವ ಇತಿಹಾಸಕಾರರಾದ ಹೆಳವರು ಹೇಳುವ ಕತೆಗಳನ್ನು ಅವಲೋಕಿಸಿದ್ದಾರೆ.
ಎರಡನೇ ಅಧ್ಯಾಯದ ಹೆಸರು ಭೌಗೋಳಿಕ ಪರಿಸರ. ಕೊರಟಗೆರೆ ತಾಲ್ಲೂಕು ಚನ್ನರಾಯನದುರ್ಗ ಹೋಬಳಿಯ ಸಿದ್ಧರಬೆಟ್ಟದ ಪರಿಸರ, ಬುಕ್ಕಪಟ್ಟಣ ಗ್ರಾಮ ಪಂಚಾಯ್ತಿ ಕೇಂದ್ರಿತ ನೈಸರ್ಗಿಕ ವಿವರಣೆಗಳನ್ನು ಗಿಡಮರ, ಸಸ್ಯ, ಕೆರೆ, ಕುಂಟೆ, ಜನ, ಜಾನುವಾರು ಇತ್ಯಾದಿ ಸಮಸ್ತ ಮಾಹಿತಿಯನ್ನು ದಾಖಲಿಸಿ ಸಂಸ್ಕೃತಿ ಚರಿತ್ರೆ ಹೇಳುವಲ್ಲಿ ಭೌಗೋಳಿಕ ಪರಿಸರದ ಮಹತ್ವ ಮತ್ತು ಭೂಮಿಕೆ ಏನು ಎನ್ನುವುದನ್ನು ವಿವರಿಸಿದ್ದಾರೆ.
ಹೆಸರೇ ಹೇಳುವಂತೆ ಶ್ರೀ ದೊಡ್ಡಮ್ಮದೇವಿ ಆರಾಧನೆ ಶಾಕ್ತಪಂಥಕ್ಕೆ ಹತ್ತಿರದ್ದು. ಆ ಶಕ್ತಿದೇವತೆಯೇ ಮಾತೃದೇವತಾರಾಧನೆಯ ಮೂಲ. ಪ್ರಾಚೀನ ನದಿಬಯಲುಗಳಲ್ಲಿ ನಾಗರೀಕತೆ ಆರಂಭವಾಗುವುದಕ್ಕೆ ಮೊದಲು ಮತ್ತು ಆನಂತರದಲ್ಲಿ ಈ ಮಾತೃದೇವತೆ ಆರಾಧನೆಯ ಪರಂಪರೆ ಹೇಗೆ ಆರಂಭವಾಯಿತು, ಹೇಗೆ ವಿಕಾಸವಾಯಿತು ಅನ್ನುವ ಹಲವು ವಿಚಾರಗಳನ್ನು ಅಂತರ್ಜಾಲದಲ್ಲಿ ಜಾಲಾಡಿಸಿ ಅಂತಿಮವಾಗಿ ಏಳುಮಂದಮ್ಮ, ಅಂದರೆ ಸಪ್ತಮಾತೃಕೆಯರ ವಿಚಾರಕ್ಕೆ ಬಂದು ನಿಲ್ಲುತ್ತಾರೆ. ಇದೆಲ್ಲ ಮಾಹಿತಿಯೂ ಅಧ್ಯಯನವೂ ಮೂರನೇ ಅಧ್ಯಾಯದಲ್ಲಿ ಸಾಂದ್ರವಾಗಿದೆ.
ನಾಲ್ಕನೇ ಅಧ್ಯಾಯದಲ್ಲಿ ಶಿಷ್ಠ ದೇವರುಗಳು ಮತ್ತು ಪರಿಶಿಷ್ಠ ದೇವರುಗಳ ಕುರಿತು ಚರ್ಚಿಸುತ್ತಾರೆ. ಈ ಪರಿಶಿಷ್ಠ ದೇವರುಗಳೇ ಜಾನಪದ ದೇವರುಗಳಾಗಿ, ಮಾಂಸಾಹಾರಿ ದೇವರುಗಳಾಗಿ ಮತ್ತು ಇದರಲ್ಲೆ ಕೆಲವು ದೇವತೆಗಳು ಶಾಖಾಹಾರಿ ದೇವರುಗಳಾಗಿ ಪರಿವರ್ತನೆಯಾದ ಬಗ್ಗೆ ಅಧ್ಯಯನ ನಡೆಸುತ್ತಾರೆ. ಕುತೂಹಲಕಾರಿ ಸಂಗತಿಗಳನ್ನು ಪೋಣಿಸುತ್ತಾ ಹೋಗುತ್ತಾರೆ.
ಕಾಪಾಡುವ ದೇವಿ, ಕಾಯುವ ದೇವತೆ ಕಾವಲೇಶ್ವರಿ, ಗುಪ್ಪಟ್ನದ ಅಮ್ಮ ಶ್ರೀ ದೊಡ್ಡಮ್ಮ ದೇವಿಯು ದೇವಲೋಕದಿಂದ ಭೂಲೋಕಕ್ಕೆ ಆಗಮಿಸಿದ್ದು ಸಿದ್ಧರಬೆಟ್ಟದ ಸಿದ್ಧೇಶ್ವರನಲ್ಲಿ ಸಹೋದರತ್ವ ಕಂಡು ನೆಲೆಯಾದದ್ದು, ಅಂತಿಮವಾಗಿ ದೇವಿ ನೆಲೆಸಿದ ಪರಿಸರ, ದೇವಾಲಯ, ಭಕ್ತರು, ಅವರ ನಂಬಿಕೆಗಳು, ಆಚರಣೆಗಳು ಇತ್ಯಾದಿ ಎಲ್ಲಾ ಮಾಹಿತಿಯನ್ನು ಐದನೇ ಅಧ್ಯಾಯದಲ್ಲಿ ಕಲೆಹಾಕಿದ್ದಾರೆ.
ಆರನೇ ಅಧ್ಯಾಯದಲ್ಲಿ ದೇವಕನ್ನಿಕೆಯರ ಸೃಷ್ಠಿ, ಹಿನ್ನೆಲೆ, ದೇವತೆಯಾಗಿ ಜನಸಾಮಾನ್ಯರ ಬದುಕಿನಲ್ಲಿ ನೆಲೆಯಾದದ್ದು, ಪವಾಡಗಳನ್ನು ಮೆರೆದಿದ್ದು, ಅಂತಿಮವಾಗಿ ಬೇಡನಾಯಕನಿಗೆ ಒಲಿದಿದ್ದು, ಅವನಿಂದ ದೇವಾಲಯ ಪ್ರತಿಷ್ಠಾಪನೆ ಮಾಡಿಸಿಕೊಂಡ ಸಂಗತಿಗಳನ್ನೆಲ್ಲಾ ಒಂದೆಡೆ ಯಾವುದೇ ವೈಭವೀಕರಣ ಇಲ್ಲದೆ ನೈಜ ಇತಿಹಾಸಕಾರನ ರೀತಿಯಲ್ಲಿ ದಾಖಲಿಸಿದ್ದಾರೆ.
ಏಳನೇ ಅಧ್ಯಾಯದಲ್ಲಿ ಶ್ರೀ ದೊಡ್ಡಮ್ಮದೇವಿ ತನ್ನ ಕಿರಿಯ ಆರುಜನ ಸಹೋದರಿಯರ ಜೊತೆ ಸಿದ್ಧಪುರುಷರ ತಪೋಭೂಮಿ ಸಿದ್ಧರಬೆಟ್ಟಕ್ಕೆ ಬಂದು ಕೆಲವು ಕಾಲ ತಂಗಿದ್ದು ನಂತರದಲ್ಲಿ ತಮ್ಮ ತಮ್ಮಲ್ಲಿಯೇ ತೀರ್ಮಾನಿಸಿದಂತೆ ಏಳು ಜನರು ಬೇರೆ ಬೇರೆ ಏಳು ಜಾಗದಲ್ಲಿ ನೆಲೆಸಿದ ವಿಚಾರ ತಿಳಿಸುತ್ತಾರೆ. ಸ್ಥಳೀಯ ಅರಸ ಕುರಂಗರಾಯನ ಆಳ್ವಿಕೆ, ಶ್ರೀ ದೊಡ್ಡಮ್ಮದೇವಿ ಸ್ಥಳೀಯರಾದ ಕಾಡುಗೊಲ್ಲರು, ಬೇಡರು, ಒಕ್ಕಲಿಗರಿಗೆ ಒಲಿದು ಬಂದದ್ದು, ಈ ಜನಸಮುದಾಯಗಳು ಭಿನ್ನ ಬೇಧವಿಲ್ಲದೆ ಅನನ್ಯ ಭಕ್ತರಾದುದ್ದು ಹೀಗೆ ಎಲ್ಲ ವಿಚಾರಗಳನ್ನು ಏಳನೇ ಅಧ್ಯಾಯದಲ್ಲಿ ಸಂಕಲಿಸಲಾಗಿದೆ.
ಹೀಗೆ ನೆಲೆಯಾದ ಪ್ರಭಾವಿ ಶ್ರೀ ದೊಡ್ಡಮ್ಮದೇವಿಯ ದೈನಂದಿನ ಪೂಜಾವಿಧಾನಗಳು, ಜಾತ್ರೆ ಉತ್ಸವಾದಿ ಆಚರಣೆಗಳು, ಸಂಪ್ರದಾಯಗಳು, ವಿಧಿ ವಿಧಾನಗಳು ಎಲ್ಲವೂ ನಂತರದ ಅಧ್ಯಾಯದಲ್ಲಿ ದಾಖಲಾಗಿದೆ. ಆಗಾಗ್ಗೆ ದೇವಿ ಸಿದ್ಧರಬೆಟ್ಟಕ್ಕೆಹೋಗುವುದು, ಪೂಜೆಗೊಳ್ಳುವುದು, ದೇವಾಲಯದ ಆಡಳಿತಕ್ಕೆ ಸಂಬAಧಿಸಿದAತೆ ಯಜಮಾನರು-ಪೂಜಾರರು-ಪಟ್ಟದರೆಯವರು-ಮಡಿವಾಳರು ಪಟ್ಟದವರು-ತಳವಾರರು-ಬಡಗಿಗಳು ಹೀಗೆ ಎಲ್ಲರನ್ನು ಒಳಗೊಂಡ ಶ್ರೀ ದೇವಿಯ ಸೇವಾನಿರತ ಕುಟುಂಬಗಳ ಪರಿಪೂರ್ಣ ಜವಾಬ್ದಾರಿ, ಕರ್ತವ್ಯಗಳು ಏನು ಎನ್ನುವುದನ್ನು ದಾಖಲಿಸಿ ಅಂತಿಮವಾಗಿ ವಿವಿಧ ಮೂಲಗಳಿಂದ, ಹಾಡುಗಾರರಿಂದ, ವಕ್ತೃಗಳಿಂದ ಸಂಗ್ರಹಿಸಿದ ಜನಪದ ಹಾಡುಗಳನ್ನು ನೀಡಿದ್ದಾರೆ.
ಒಂದೆರಡು ವರ್ಷಗಳ ಹಿಂದೆ ಹಿರಿಯ ಲೇಖಕರಾದ ಶ್ರೀ ಸಿದ್ಧಗಂಗಯ್ಯ ಹೊಲತಾಳು ಅವರು ಸಿದ್ಧರಬೆಟ್ಟ ಆಸುಪಾಸಿನ 80 ಹಳ್ಳಿಗಳ ಪರ್ಯಟನೆ ಮಾಡಿ ಅನುಭವಕಥನ ಸುವರ್ಣಮುಖಿಯನ್ನು ಬರೆದಿರುವುದು ಸರಿಯಷ್ಟೆ. ಈ ಸುವರ್ಣಮುಖಿ ಒಂದು ರೀತಿಯಲ್ಲಿ ಈ ಭಾಗದ ಮ್ಯಾಕ್ರೋ ಅಧ್ಯಯನವಾದರೆ ಜಿಎನ್‌ಕೆ ಅವರ ಈ ಕೃತಿ ಮತ್ತೊಂದು ರೀತಿಯಲ್ಲಿ ಅದೇ ಪರಿಸರದ ಮೈಕ್ರೋ ಅಧ್ಯಯನವಾಗಿದೆ.
ಹೀಗಾಗಿ ಶ್ರೀ ದೊಡ್ಡಮ್ಮ ದೇವಿಯ ಕಥಾನಕ ತಳಸ್ಪರ್ಷಿಯಾಗಿ, ಯಾವುದನ್ನೂ ಬಿಡದೆ ಪರಿಪೂರ್ಣವಾಗಿ ನಡೆದಿರುವ ಅಧ್ಯಯನವಾಗಿದೆ. ಲೇಖಕರು ಕೃತಿಯ ಅಧ್ಯಯನದಲ್ಲಿ ಎಲ್ಲಾ ರೀತಿಯ ಆಕರಗಳನ್ನು ಪ್ರಾಮಾಣಿಕವಾಗಿ ದುಡಿಸಿಕೊಂಡಿದ್ದಾರೆ. ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ, ವಿಶ್ಲೇಷಿಸಿದ್ದಾರೆ. ಅಗತ್ಯ, ಉಪಯುಕ್ತ ಅನ್ನುವಂತಹ ಸಂಗತಿಗಳನ್ನು ಇಟ್ಟುಕೊಂಡು ಈ ಮಹತ್ವದ ಕೃತಿ ರಚನೆ ಮಾಡಿದ್ದಾರೆ. ಒಂದು, ಅವರಲ್ಲಿ ಪರಿಪೂರ್ಣವಾದ ಜ್ಞಾನ ಇತ್ತು. ಎರಡನೆಯದು, ಇನ್ನಿತರೆ ಆಕರಗಳನ್ನು ಸಂಪೂರ್ಣವಾಗಿ ದುಡಿಸಿಕೊಂಡರು. ಹೀಗಾಗಿ ಈ ಕೃತಿ ತುಂಬ ಶ್ರೀಮಂತವಾಗಿ ಮೈದುಂಬಿ ಬಂದಿದೆ.
ಇAತಹ ಒಂದು ಪ್ರೌಢವಾದ ಅಧ್ಯಯನ ನಡೆಸಿ, ತುಂಬ ಶಾಸ್ತಿçÃಯವಾಗಿ ಕೃತಿ ರಚನೆ ಮಾಡಿ, ಸ್ಥಳೀಯ ಸಂಸ್ಕೃತಿಯ ದಾಖಲೀಕರಣವಾದಂತಹ ಮಹತ್ವದ ಕೆಲಸ ಮಾಡಿರುವ ಗೆಳೆಯ ಜಿಎನ್‌ಕೆ ಅವರನ್ನು ಅಭಿನಂದಿಸುತ್ತೇನೆ. ಅವರಿಂದ ಮತ್ತಷ್ಟು ಅಧ್ಯಯನಗಳಾಗಬೇಕು, ಸಂಶೋಧನೆಗಳಾಗಬೇಕು, ಬರಹಗಳು ಮೂಡಿಬರಬೇಕು. ಇದು ನನ್ನ ಹಕ್ಕೊತ್ತಾಯ.