ಬಸವಣ್ಣನವರೇ ಲಿಂಗಾಯತ ಧರ್ಮ ಸ್ಥಾಪಕರು

lingayat-dharma-independent-dharma

ಬಸವಣ್ಣನವರೇ ಲಿಂಗಾಯತ ಧರ್ಮ ಸ್ಥಾಪಕರು

 

ಇಂದು ಬಸವ ಜಯಂತಿ, ಬಸವ, ಬಸವಣ್ಣ, ಭಕ್ತಿ ಭಂಡಾರಿ ಬಸವಣ್ಣ, ಜಗಜ್ಯೋತಿ ಬಸವೇಶ್ವರ, ಕ್ರಾಂತಿಯೋಗಿ ಬಸವಣ್ಣ ಹೀಗೆ ಹಲವು ವಿಶೇಷಣಗಳಿಂದ ಕರೆಯುವ ಬಸವಣ್ಣ ಸ್ಥಾಪಿಸಿದ ಲಿಂಗಾಯತ ಧರ್ಮ ಕನ್ನಡ ನೆಲದಲ್ಲಿ ಸ್ಥಾಪನೆಯಾದ ಮೊಟ್ಟ ಮೊದಲ ಸ್ವತಂತ್ರ ಧರ್ಮ, 800 ವರ್ಷಗಳ ಹಿಂದೆ ಶ್ರೇಣೀಕೃತ ಜಾತಿ ಪದ್ಧತಿಯ ನಿರ್ಮೂಲನೆಗೆ ಪ್ರಾಮಾಣಿಕ ಪ್ರಯತ್ನ ಆರಂಭಿಸಿದ ಬಸವಣ್ಣನವರು ಆಯಸ್ಸುಪೂರ್ತಿ ಜೀವಿಸಿದ್ದರೆ ಈ ನಾಡು ಇಡಿಯಾಗಿ ಈ ಧರ್ಮದ ನೆಲೆವೀಡಾಗುತ್ತಿತ್ತು ಎನ್ನುವುದರಲ್ಲಿ ಎರಡು ಮಾತಿಲ್ಲ. ಕ್ರಾಂತಿಪಾತವಾದ ಪರಿಣಾಮ ಈ ದೇಶದ ಜಾತಿ ವ್ಯವಸ್ಥೆ ಲಿಂಗಾಯತ ಧರ್ಮವನ್ನೂ ತನ್ನ ಕರಾಳ ತೆಕ್ಕೆಯೊಳಕ್ಕೆ ಸೆಳೆದು ಒಂದು ಜಡ್ಡುಗಟ್ಟಿದ ಜಾತಿಯನ್ನಾಗಿ ಮಾಡಿಬಿಟ್ಟಿದೆ. ಬಸವ ಮತ್ತು ಆತನ ಧರ್ಮ ಕುರಿತ ಲೇಖನ

ಸಾಂದರ್ಭಿಕ

ಡಾ. ಜೆ ಎಸ್ ಪಾಟೀಲ.

ಬಸವಣ್ಣನವರೇ ಲಿಂಗಾಯತ ಧರ್ಮ ಸ್ಥಾಪಕರು

ವಚನ ಚಳುವಳಿಯ ಫಲಶೃತಿಯಿಂದ ಮೈದಳೆದ ಲಿಂಗಾಯತ ಎಂಬ ವಿನೂತನˌ ಪ್ರಗತಿಪರ ಧರ್ಮವು ಕನ್ನಡಿಗರ ಮೊಟ್ಟ ಮೊದಲ ಧರ್ಮವೆಂದು ಪ್ರಾಜ್ಞರು ಗುರುತಿಸಿದ್ದಾರೆ. ಆದರೆ ಯಾವುದೊ ಕಾಲ್ಪನಿಕ ಪಾತ್ರಗಳನ್ನು ಜನಮನದಲ್ಲಿ ಬಿತ್ತಿ ಪುರೋಹಿತರು ಗೊಂದಲ ಸೃಷ್ಟಿಸಿದ್ದಾರೆ. ಬಸವಣ್ಣನವರೆ ಲಿಂಗಾಯತ ಧರ್ಮದ ಸಂಸ್ಥಾಪಕರು ಎನ್ನುವ ಕುರಿತು ಅವರ ಸಮಕಾಲಿನ ಶರಣರ ವಚನಗಳು ಮುಖ್ಯ ದಾಖಲೆಗಳಾಗಿವೆ. ಈ ಲೇಖನದಲ್ಲಿ ಬಸವಣ್ಣನವರು ಇಷ್ಟಲಿಂಗ ಪರಿಕಲ್ಪನೆಯನ್ನು ಶೋಧಿಸಿದ ಬಗೆ ಮತ್ತು ಅದಕ್ಕೆ ಪ್ರೇರಣೆಯಾದ ಅವರ ಅರಿವಿನ ಸಾಕ್ಷಾತ್ಕಾರದ ಕುರಿತು ಅವರ ಸಮಕಾಲಿನ ಶರಣರ ವಚನಗಳ ಮೂಲಕ ವಿವರಿಸುವ ಒಂದು ಚಿಕ್ಕ ಪ್ರಯತ್ನ ಮಾಡಿದ್ದೇನೆ.

ಇಷ್ಟಲಿಂಗವು ನೂತನ ಲಿಂಗಾಯತ ಧರ್ಮದ ದೇವರ “ಲಾಂಛನ”ವೆಂದುˌ ಅದು ಅರಿವಿನ ಕುರುಹು ಎಂದು ಪರಿಗಣಿಸಿ ಪೂಜೆ ಸಲ್ಲಿಸುವ ಪದ್ಧತಿ ಬಸವಣ್ಣನವರು ಆರಂಭಿಸಿದರು. ಆದ್ದರಿಂದ ಸಹಜವಾಗಿ ಅದನ್ನು ರೂಪಿಸಿದ ಬಸವಣ್ಣನವರೇ ಲಿಂಗಾಯತ ಧರ್ಮ ಸ್ಥಾಪಕರು ಎನ್ನುವುದು ಸ್ಪಷ್ಟವಾಗುತ್ತದೆ.

ಬಸವಯುಗದ ಪೂರ್ವದಲ್ಲಿ ದೇವರನ್ನು ಗುಡಿಯಲ್ಲಿರುವ ಸ್ಥಾವರ ಲಿಂಗಾಕಾರದ ಮೂರ್ತಿ ರೂಪದಲ್ಲಿˌಕಲ್ಲು ˌ ಮಣ್ಣು ˌˌ ಗಿಡಮರಗಳಲ್ಲಿ, ಪ್ರಾಣಿˌ ಪಕ್ಷಿಗಳಲ್ಲಿ ಪೂಜಿಸುತ್ತಿದ್ದದ್ದನ್ನು ನೋಡಬಹುದು. ವಿವಿಧ ಬಗೆಯ ಶೈವ ಪಂಥದವರು ತನ್ನ ಆರಾಧ್ಯ ದೈವ ಶಿವನನ್ನು ಚಿಕ್ಕ ಸ್ಥಾವರ ಲಿಂಗದ ರೂಪದಲ್ಲಿ ಪೂಜಿಸುತ್ತ ಅದನ್ನು ಹೋದಲ್ಲಿ ಬಂದಲ್ಲಿ ತಮ್ಮೊಂದಿಗೆ ತಮ್ಮ ಜಟೆˌ ತೋಳು ಅಥವ ಜೋಳಿಗೆಯಲ್ಲಿ ಒಯ್ಯುತ್ತಿದ್ದರಿಂದ ಅದನ್ನು ಚರಲಿಂಗ ಎಂದು ಕರೆಯುತ್ತಿದ್ದರು. ಗುಡಿಯಲ್ಲಿನ ದೊಡ್ಡ ಸ್ಥಾವರ ಲಿಂಗದ ಪ್ರತಿರೂಪವು ಪ್ರಯಾಣದಲ್ಲಿ ಅನುಕೂಲವಾಗಲಿ ಎಂದು ಹಾಗೆ ಮಾಡುತ್ತಿದ್ದರು. ಇಂದು ಅದನ್ನೇ ಕೆಲ ವಿತಂಡವಾದಿಗಳು ಇಷ್ಟಲಿಂಗ ಬಸವಪೂರ್ವದಲಿತ್ತು ಎಂದು ವಾದಿಸುತ್ತಾರೆ. ಆದರೆˌ ಅದು ಚರಲಿಂಗವೇ ಹೊರತು ಇಷ್ಟಲಿಂಗವಲ್ಲ. ಬಸವಣ್ಣನವರು ದೇವರು ಮತ್ತು ಭಕ್ತನ ನಡುವಿನ ದಲ್ಲಾಳಿಯನ್ನು ನಿರಾಕರಿಸಲೆಂದೆ ಇಷ್ಟಲಿಂಗದ ರೂಪದಲ್ಲಿ ದೇವನನ್ನು ಪೂಜಿಸುವ ಹೊಸ ಹಾಗು ಸಂಪೂರ್ಣ ವೈಜ್ಞಾನಿಕ ಬಗೆಯ ಪೂಜಾವಿಧಾನವೊಂದನ್ನು ಅವಿಷ್ಕರಿಸಿಕೊಟ್ಟರು. ಈ ವಿಷಯವು ಅವರ ಕೆಳಗಿನ ವಚನದಲ್ಲಿ ಸ್ಪಷ್ಟವಾಗಿ ವಿವರಿಸಲ್ಪಟಟಿರುವುದನ್ನು ಗಮನಿಸಬಹುದು:

“ಮುನ್ನಿನ ಜನ್ಮದಲ್ಲಿ ಗುರುಲಿಂಗಜಂಗಮವ ಪೂಜಿಸಲರಿಯದ ಕಾರಣ
ಬಹು ಜನ್ಮಕ್ಕೆ ತಂದು ಇಕ್ಕಿದೆಯಯ್ಯಾ ಎನ್ನನುˌ
ಎನಗೆ ಗುರು ಪಥವ ತೋರಿದವರಾರು?
ಲಿಂಗ ಪಥವ ತೋರಿದವರಾರುˌ
ಜಂಗಮ ಪಥವ ತೋರಿದವರಾರು?
ಪಾದೋದಕ ಪ್ರಸಾದ ಪಥವ ತೋರಿದವರಾರು?
ತೋರುವ ಮನವೆ ನೀವೆಂದರಿತೆˌ
ಎನ್ನಗಿನ್ನಾವ ಭವವಿಲ್ಲˌ
ಕೂಡಲಸಂಗಮದೇವಾ.”
(ಸ. ವ. ಸಂ. ೧ ವ. ಸಂ : ೮೩೩)

ಮೇಲಿನ ವಚನದಲ್ಲಿ ಬಸವಣ್ಣವರು ಸ್ಪಷ್ಟವಾಗಿ “ತೋರುವ ಮನವೆ” ಎಂದು ಉಲ್ಲೇಖಿಸಿರುವುದನ್ನು ಗಮನಿಸಿದರೆ ಅವರಿಗೆ ಅರಿವು ಮೂಡಿˌ ಜ್ಞಾನೋದಯವಾಯ್ತು ಅನ್ನುವ ಅರ್ಥಬರುತ್ತದಲ್ಲದೆ ಬಸವಣ್ಣನವರಿಗೆ ಬೇರೆ ಗುರುವಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇಷ್ಟಲಿಂಗವು ಬಸವಪೂರ್ವದಲ್ಲಿ ಪ್ರಚಲಿತದಲ್ಲಿದ್ದು ಅದು ಗುರುಮುಖೇನ ಬಸವಣ್ಣನವರು ಪಡೆದದ್ದಾಗಿದ್ದರೆ ಬಸವಣ್ಣನವರ ವಚನಗಳಲ್ಲಿ ಅವರ ಗುರುವಿನ ಕುರಿತು ಉಲ್ಲೇಖವಾಗಬೇಕಿತ್ತು.

ಬಸವಣ್ಣನವರ ಅನುಯಾಯಿಯಾದ ಮಡಿವಾಳ ಮಾಚಿತಂದೆಯವರು ತಮ್ಮ ವಚನವೊಂದರಲ್ಲಿ ಬಸವಣ್ಣನವರೇ ಸ್ವಯಂ ಗುರು ಎಂದು ಹೀಗೆ ಹೇಳುತ್ತಾರೆ:

“ಬಸವಣ್ಣ ಮಾಡಲಿಕ್ಕೆ ಗುರುವಾಯಿತ್ತು ˌ
ಬಸವಣ್ಣ ಮಾಡಲಿಕ್ಕೆ ಲಿಂಗವಾಯಿತ್ತು ˌ
ಬಸವಣ್ಣ ಮಾಡಲಿಕ್ಕೆ ಜಂಗಮವಾಯಿತ್ತು ˌ
ಬಸವಣ್ಣ ಮಾಡಲಿಕ್ಕೆ ಪ್ರಸಾದವಾಯಿತ್ತು ˌ
ಇರೇಳು ಲೋಕವಾಯಿತ್ತುˌ ಬಸವಣ್ಣನಿಂದ ಕಲಿದೇವಯ್ಯಾ.”

(ಸ.ವ.ಸ. ೮/೬೮೨, ವ. ಸಂ. ೨೪೫)

ಬಸವಣ್ಣನವರ ಅತ್ಯಂತ ನಿಕಟವರ್ತಿ ಶರಣ ಮಡಿವಾಳ ಮಾಚಿತಂದೆಯವರು ಮೇಲಿನ ವಚನದಲ್ಲಿ ಅಷ್ಟಾವರಣಗಳಲ್ಲಿ ಪ್ರಮುಖವಾದ ಗುರುˌ ಲಿಂಗˌ ಜಂಗಮˌ ಪ್ರಸಾದ ಬಸವಣ್ಣನವರ ಮೂಲಕ ರೂಪುಪಡೆದವು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಅದೇ ಮಡಿವಾಳ ಮಾಚಿತಂದೆಯವರ ಇನ್ನೊಂದು ವಚನವನ್ನು ಗಮನಿಸಬಹುದು:

“ಎತ್ತೆತ್ತ ನೋಡಿದಡತ್ತತ್ತ ಬಸವನೆಂಬ ಬಳ್ಳಿ ˌ
ಎತ್ತಿ ನೋಡಿದಡೆ ಲಿಂಗ ವೆಂಬ ಗೊಂಚಲುˌ
ಒತ್ತಿ ಹಿಂಡಿದಡೆ ಭಕ್ತಿಯೆಂಬ ರಸವಯ್ಯಾ ˌ
ಆಯತವು ಬಸವಣ್ಣನಿಂದˌ
ಸ್ವಾಯತವು ಬಸವಣ್ಣನಿಂದˌ
ಸನ್ನಿಹಿತವು ಬಸವಣ್ಣನಿಂದˌ
ಗುರು ಬಸವಣ್ಣನಿಂದˌ ಲಿಂಗ ಬಸವಣ್ಣನಿಂದˌ ಜಂಗಮ ಬಸವಣ್ಣನಿಂದˌ
ಪಾದೋದಕ ಬಸವಣ್ಣನಿಂದˌ
ಪ್ರಸಾದ ಬಸವಣ್ಣನಿಂದˌ
ಅತ್ತ ಬಲ್ಲಡೆ ನೀವು ಕೇಳಿರೇˌ ಇತ್ತ ಬಲ್ಲಡೆ ನೀವು ಕೇಳಿರೇˌ
ಬಸವ ಬಸವ ಬಸವಾ ಎಂದು ಮಜ್ಜನಕ್ಕೆರೆಯದವನ ಭಕ್ತಿ ಶೂನ್ಯ ಕಾಣಾ ಕಲಿದೇವರದೇವಾ.”

(ಸ.ವ.ಸ. ೮/೫೨೬).

ಬಸವಣ್ಣನವರ ಸೋದರಳಿಯ ಮತ್ತು ಚಿನ್ಮಯಜ್ಞಾನಿ ಚನ್ನಬಸವಣ್ಣನವರು ಬಸವಣ್ಣನವರೇ ಇಷ್ಟಲಿಂಗ ಜನಕರು ಎಂದು ಹೇಳಿರುವ ಈ ಕೆಳಗಿನ ವಚನವನ್ನು ಗಮನಿಸಿರಿ:

“ಆದಿ ಬಸವಣ್ಣ ಅನಾದಿ ಲಿಂಗವೆಂಬರುˌ
ಹುಸಿ ಹುಸಿ ಈ ನುಡಿಯ ಕೇಳಲಾಗದುˌ
ಆದಿ ಲಿಂಗˌ ಅನಾದಿ ಬಸವಣ್ಣನು.
ಲಿಂಗವು ಬಸವಣ್ಣನ ಉದರದಲ್ಲಿ ಹುಟ್ಟಿತ್ತುˌ
ಜಂಗಮವು ಬಸವಣ್ಣನ ಉದರದಲ್ಲಿ ಹುಟ್ಟಿತ್ತುˌ ಪ್ರಸಾದವು ಬಸವಣ್ಣನನುಕರಿಸಲಾಯಿತ್ತುˌ
ಇಂತೀ ತ್ರಿವಿಧಕ್ಕೆ ಬಸವಣ್ಣನೇ ಕಾರಣನೆಂದರಿದೆನಯ್ಯಾ ಕೂಡಲಚೆನ್ನ ಸಂಗಮದೇವಾ.”

(ಸ.ವ.ಸ. ೩/೫)

ಇಷ್ಟಲಿಂಗ ಪರಿಕಲ್ಪನೆಯು ಬಸವಪೂರ್ವದಲ್ಲಿ ಪ್ರಚಲಿತದಲ್ಲಿತ್ತು ಎಂದು ಹೇಳುವವರಿಗೆ ಚೆನ್ನಬಸವಣ್ಣವರು ಮೇಲಿನ ವಚನದಲ್ಲಿ ಈ ವಾದವು ಸುಳ್ಳು ಎಂದು ನಿರಾಕರಿಸಿ ಅದು ಬಸವಣ್ಣನವರ ಮೂಲಕ ಹುಟ್ಟಿಕೊಂಡ ಬಗೆಯನ್ನು ಮಾರ್ಮಿಕವಾಗಿ ವಿವರಿಸಿದ್ದಾರೆ.

ಬಸವಣ್ಣನವರ ಹಿರಿಯಕ್ಕ ಮತ್ತು ಶರಣ ಚನ್ನಬಸವಣ್ಣನವರ ತಾಯಿ ಶರಣೆ ನಾಗಲಾಂಬಿಕೆ ತನ್ನ ಈ ಕೆಳಗಿನ ವಚನದಲ್ಲಿ ಬಸವಣ್ಣನವರೇ ಇಷ್ಟಲಿಂಗ ಪರಿಕಲ್ಪನೆಯ ಜನಕರು ಎಂದು ಸ್ಪಷ್ಟವಾಗಿ ಹೇಳಿದ್ದನ್ನು ನೋಡಬಹುದು:

“ಬಸವ ಮಾಡಿದಡಾಯ್ತು ಭುವಿಗೆ ಭಕ್ತಿಯ ಬೆಳಕುˌ
ಬಸವ ಮಾಡಿದಡಾಯ್ತು ಗುರುಲಿಂಗಜಂಗಮ ಪೂಜೆˌ
ಬಸವ ಮಾಡಿದಡಾಯ್ತು ಲಿಂಗಾಂಗ ಸಾಮರಸ್ಯದ ಸುಧೆಯುˌ
ಬಸವ ಮಾಡಿದಡಾಯ್ತು ಭಕ್ತ ಭಕ್ತರಲಿ ಸಮಭಾವˌ
ಎನ್ನ ಕಂಗಳೊಳಗಿಂಬಾದ ಬಸವˌ
ಎನ್ನ ಮನ ಭಾವಂಗಳೊಳಗಾದ ಬಸವˌ
ಎನ್ನಂತರಂಗ ತುಂಬಿ ನಿಂದಾತ ಬಸವˌ
ಹೊರಗೆ ಗುರುಬಸವನ ಕೀರುತಿˌ
ಬಸವನ ಮಣಿಹವೇ ಎನ್ನ ಪ್ರಾಣವಿಂದಿಂಗೆˌ
ಬಸವಣ್ಣಪ್ರಿಯ ಚೆನ್ನಸಂಗಯ್ಯನ ಸಾಕ್ಷಿಯಾಗಿ
ಬಸವಾ ಬಸವಾ ಜಯತು
ಗುರು ಸಂಗನಬಸವಾ ಜಯತು.”

ಅನುಭವ ಮಂಟಪದ ಪ್ರಥಮ ಅಧ್ಯಕ್ಷರಾದ ಶರಣ ಅಲ್ಲಮರು ಬಸವಣ್ಣನವರೇ ಲಿಂಗಾಯತ ಧರ್ಮ ಸ್ಥಾಪಕರು ಮತ್ತು ಇಷ್ಟಲಿಂಗದ ಜನಕರು ಎಂದು ಹೇಳುವ ಕೆಳಗಿನ ವಚನಗಳನ್ನು ಗಮನಿಸಿರಿ:

“ಆಯತದಲ್ಲಿ ಪೂರ್ವಾಚಾರಿಯ ಕಂಡೆˌ
ಸ್ವಾಯತದಲ್ಲಿ ಪೂರ್ವಾಚಾರಿಯ ಕಂಡೆˌ
ಸನ್ನಹಿತದಲ್ಲಿ ಪೂರ್ವಾಚಾರಿಯ ಕಂಡೆˌ
ಗುಹೇಶ್ವರಲಿಂಗದಲ್ಲಿ ಪೂರ್ವಾಚಾರಿ ಸಂಗನಬಸವಣ್ಣನ
ಶ್ರೀಪಾದಕ್ಕೆ ನಮೋ ನಮೋ ಎಂಬೆನು.”

(ಸ.ವ.ಸ. -೯೦೪)

“ಆದಿಯಲ್ಲಿ ನೀನೆ ಗುರುವಾದ ಕಾರಣ ನಿನ್ನಿಂದ ಹುಟ್ಟಿತ್ತು ಲಿಂಗˌ
ಆದಿಯಲ್ಲಿ ನೀನೆ ಲಿಂಗವಾದ ಕಾರಣ ನಿನ್ನಿಂದ ಹುಟ್ಟಿತ್ತು ಜಂಗಮˌ
ಆದಿಯಲ್ಲಿ ನೀನೆ ಜಂಗಮವಾದ ಕಾರಣ ನಿನ್ನಿಂದ ಹುಟ್ಟಿತ್ತು ಪ್ರಸಾದˌ ಆದಿಯಲ್ಲಿ ನೀನೆ ಪ್ರಸಾದಿಯಾದ ಕಾರಣ ನಿನ್ನಿಂದ ಹುಟ್ಟಿತ್ತು ಪಾದೋದಕˌ
ಇಂತೀ ಗುರು ಲಿಂಗ ಜಂಗಮ ಪ್ರಸಾದ ಪಾದೋದಕ ಸ್ವರೂಪ
ನೀನೆಯಾದ ಕಾರಣ;
ಜಂಗಮ ಪ್ರಾಣಿಯಾಗಿ ಸದಾಚಾರಿಯಾದೆˌ
ಅದು ಕಾರಣ ನೀನೆ ಸರ್ವಾಚಾರಸಂಪನ್ನನಾಗಿˌ
ಪೂರ್ವಾಚಾರಿಯೂ ನೀನೆಯಾದೆˌ
ಅದು ಕಾರಣˌ ಗುಹೇಶ್ವರಲಿಂಗದಲ್ಲಿ ಚಂದಯ್ಯಂಗೆ
ಲಿಂಗದ ನಿಜವ ತಿಳುಹಾ ಸಂಗನಬಸವಣ್ಣಾ.”

(ಸ.ವ.ಸ.- 894)

ಲಿಂಗಾಯತರು ತಮ್ಮ ಧಾರ್ಮಿಕ ಆಚರಣೆಯಲ್ಲಿ ಅಂಗದ ಮೇಲೆ ಧರಿಸುವ ದೇವರ ಚುಳುಕು ರೂಪವಾದ ಇಷ್ಟಲಿಂಗದ ಆಯತˌ ಅದನ್ನು ಪ್ರಾಣದಲ್ಲಿ ಅಳವಡಿಸಿಕೊಳ್ಳಬಹುದಾದ ಅತ್ಮಲಿಂಗದ ಸ್ವಾಯತˌ ಭಾವದಲ್ಲಿ ಅನುಭವಿಸಿ ಹಿಗ್ಗುವ ಭಾವಲಿಂಗ ಸನ್ನಿಹಿತˌ ಇವುಗಳಿಗೆಲ್ಲ ಬಸವಣ್ಣನವರೇ ಪ್ರಥಮಗುರುವೆಂತಲೂˌ ಬಸವಣ್ಣನೇ ಪೂರ್ವಾಚಾರಿ ಆದ್ದರಿಂದ ಅವರ ಶ್ರೀ ಪಾದಕ್ಕೆ ನಮಿಸುತ್ತೇನೆಂತಲೂ ಅಲ್ಲಮರು ಮಾರ್ಮಿಕವಾಗಿ ವಿವರಿಸಿದ್ದಾರೆ.

ಮೇಲಿನ ಕೆಲವೇ ಕೆಲವು ಸಮಕಾಲಿನ ಶರಣರ ಆಯ್ದ ವಚನಗಳನ್ನು ಆಧಾರವಾಗಿಟ್ಟುಕೊಂಡು ಚಿಂತಿಸಿದಾಗ ಲಿಂಗಾಯತ ಧರ್ಮದ ಸಂಸ್ಥಾಪನೆ ಮತ್ತು ಇಷ್ಟಲಿಂಗ ಪೂಜಾ ವಿಧಾನದ ಅನ್ವೇಷಣೆ ಗುರುಬಸವಣ್ಣನವರಿಂದಲೇ ಆಗಿದ್ದು ಎಂದು ದೃಢವಾಗಿ ಹೇಳಬಹುದು. ಇದಕ್ಕಿಂತ ಹೆಚ್ಚಿನ ಸಂಶೋಧನೆಯ ಅಗತ್ಯವಿಲ್ಲ ಎಂದರಡ್ಡಿಯಿಲ್ಲ.