ನಿಂತೂ ನಿಲ್ಲದ ಬಯಲ ಜೋಗಿ

ಬಾನಿಗೆ ಕೈಚಾಚಿನಿಂತ ಬೆಟ್ಟಗುಡ್ಡಗಳ ಸಾಲು, ಹಸಿರು ಮೈದುಂಬಿನಿಂತ ಹೊಲ, ತೋಟ, ಗದ್ದೆ ಬಯಲು; ತುಂಬಿ ತುಳುಕುವ ಕೆರೆಕಟ್ಟೆ, ಜುಳುಜುಳು ಹರಿವ ಹಳ್ಳ, ನದಿ

ನಿಂತೂ ನಿಲ್ಲದ ಬಯಲ ಜೋಗಿ

ಓದಿನ ಪ್ರೀತಿಗಾಗಿ

ಆಲೂರು ದೊಡ್ಡನಿಂಗಪ್ಪ

 

 

ನಿಂತೂ ನಿಲ್ಲದ ಬಯಲ ಜೋಗಿ

 

ಡಾ. ಸಿದ್ದಗಂಗಯ್ಯ ಮಾಸ್ತರರು ನನಗೆ ಮೂವತ್ತು ವರ್ಷಗಳ ಹಿಂದಿನ ಪರಿಚಯ.

ಆಗಿನಿಂದಲೂ ಇವರ ಬರವಣಿಗೆಗಳನ್ನು ಓದುತ್ತಾ ಬಂದಿದ್ದೇನೆ. ನಿಸರ್ಗದ ಬಗೆಗಿನ ಅವರ ಕುತೂಹಲ ಇನ್ನೂ ಹಾಗೆಯೇ ಉಳಿದುಬಂದಿದೆ. ನಿಸರ್ಗ ನಿಯಮಗಳ ಚೌಕಟ್ಟನ್ನು ಮೀರಿ ಅನೈಸರ್ಗಿಕವಾದ ಮಾರ್ಗಗಳ ಮೂಲಕ ತಿನ್ನುವ ಆಹಾರವನ್ನ ಉತ್ಪಾದಿಸುತ್ತಿರುವ ಇಂದು ಇಡೀ ಮನುಷ್ಯ ಸಂಕುಲ ಸಂಕಷ್ಟಕ್ಕೆ ಸಿಲುಕಿರುವುದನ್ನು ಕಂಡು ಮಮ್ಮಲ ಮರುಗುತ್ತಾರೆ. ಆ ನಿಟ್ಟಿನಲ್ಲಿ ರೈತ ಬಂಧುಗಳು ತಾವು ಮತ್ತೆ ವಿಷಮುಕ್ತ ಆಹಾರವನ್ನ ಉತ್ಪಾದಿಸುವತ್ತ ಪ್ರಯತ್ನ ಮಾಡಲಿ ಎನ್ನುವ ಕಾಳಜಿಯಿಂದ ಊರೂರು ಅಲೆದು ‘ಒಳನಾಡಿನ ಒಡನಾಟ’ ಪುಸ್ತಕವನ್ನ ಹೊರತಂದಿದ್ದಾರೆ. ಇದೇ ರೀತಿಯ ಪ್ರಯತ್ನವನ್ನು ಚಿನ್ನಸ್ವಾಮಿ ವಡ್ಡಗೆರೆ, ಅಂಶಿ ಪ್ರಸನ್ನ ಕುಮಾರ್, ಆರ್. ಸ್ವಾಮಿ ಆನಂದ್, ಬಾಳೆಕಾಯಿ ಶಿವನಂಜಯ್ಯ ಮುಂತಾದವರು ಮಾಡುವ ಮೂಲಕ ಸಮಾಜವನ್ನು ಎಚ್ಚರಿಸುತ್ತಾ ಬಂದಿದ್ದಾರೆ.

ಈಗಿನ ಅವರ ‘ಒಳನಾಡಿನ ಒಡನಾಟ’ ಓದಿದ ನನಗೆ ಇಲ್ಲಿ ಬೌಗೋಳಿಕ ನೈಜ ಚರಿತ್ರೆಯೊಂದನ್ನು ಓದುಗನಿಗೆ ಕೇಳಿಸುತ್ತಿರುವಂತೆ ಅನ್ನಿಸುತ್ತದೆ. ಮಣ್ಣಿನ ಸಾವಿರಾರು ದಳಗಳ  ಗಮಲನ್ನು ಸದಾ ಆಸ್ವಾದಿಸುತ್ತಾ ಬರವಣಿಗೆಯಲ್ಲಿ ತೊಡಗುವ ಇವರು ದೃಶ್ಯಕಾವ್ಯವೊಂದನ್ನು ಕಣ್ಣಮುಂದೆ ತಂದು ನಿಲ್ಲಿಸುತ್ತಾರೆ. ಬಾನಿಗೆ ಕೈಚಾಚಿನಿಂತ ಬೆಟ್ಟಗುಡ್ಡಗಳ ಸಾಲು, ಹಸಿರು ಮೈದುಂಬಿನಿಂತ ಹೊಲ, ತೋಟ, ಗದ್ದೆ ಬಯಲು; ತುಂಬಿ ತುಳುಕುವ ಕೆರೆಕಟ್ಟೆ, ಜುಳುಜುಳು ಹರಿವ ಹಳ್ಳ, ನದಿ; ರೈತನ ಬದುಕಿನ ಅವಿಭಾಜ್ಯ ಅಂಗಗಳಾದ ಹೈನುಗಾರಿಕೆ, ತೋಟಗಾರಿಕೆ, ಕುರಿಕೋಳಿ ಸಾಕಾಣಿಕೆ, ಕೈ ಕಸುಬು ಹೀಗೆ ಕೃಷಿ ನಂಬಿ ಬದುಕುತ್ತಿರುವ ರೈತರ ಚಿತ್ರಣಗಳು ನಮ್ಮ ಮುಂದೆ ಹಾದುಹೋಗಿ ಮರು ಚಿಂತನೆಗೆ ಹಚ್ಚುವಂತೆ ಮಾಡುತ್ತವೆ.

ಈ ಶ್ರಮಜೀವಿಗಳ ಶ್ರಮವನ್ನು ಸಾರ್ಥಕಗೊಳಿಸುವ ನಿಟ್ಟಿನಲ್ಲಿ ಯಶಸ್ಸುಕಂಡ ಅನೇಕ ರೈತರನ್ನು ಇಲ್ಲಿ ಸಂದರ್ಶಿಸಿದ್ದಾರೆ. ಅಲ್ಲಿ ಬೆಳೆದ ಬೆಳೆಗಳು, ಅವರು ಅನುಸರಿಸಿದ ನೈಸರ್ಗಿಕ ವಿಧಾನದ ಉಳುಮೆ, ಬಿತ್ತನೆ, ಬಳಸುವ ತಿಪ್ಪೆ ಗೊಬ್ಬರ, ಬೀಜ ಮುಂತಾದವುಗಳ ಮಾಹಿತಿಯನ್ನು ನಮಗೆ ಒದಗಿಸುತ್ತಾರೆ. ಹೀಗೆ ಬೆಳೆದ ಆಹಾರ ಪದಾರ್ಥಗಳ ಸೇವನೆಯಿಂದ ರೋಗಮುಕ್ತ ಸಮಾಜವನ್ನು ನಿರ್ಮಾಣ ಮಾಡಬಹುದೆಂಬ ಸದಾಶಯವನ್ನು ನಮ್ಮೆದೆಗಳಲ್ಲಿ ಬಿತ್ತುವಲ್ಲಿ ಯಶಸ್ವಿಯಾಗುತ್ತಾರೆ. ಅವರ ಈ ಸಾಧನೆಯ ಹಿಂದೆ ಅವರಿಗಿರುವ ಜೀವಪರ ಕಾಳಜಿ ಎದ್ದುಕಾಣುತ್ತದೆ. ಹೀಗೆ ಒಮ್ಮೆ ನೈಸರ್ಗಿಕ ಆಹಾರ ಬೆಳೆಗಾರರಾದ ಶಿವನಂಜಯ್ಯ ಬಾಳೆಕಾಯಿರವರನ್ನು ಭೇಟಿಯಾಗುತ್ತಾರೆ. ಆ ವೇಳೆ ಬೇಳೆ, ಕಡಲೆ ಬೀಜ, ಹೆಸರುಕಾಳು ಹೀಗೆ ಎಲ್ಲ ವಿಧದ ದ್ವಿದಳ ಧಾನ್ಯ ಸಾಕಷ್ಟು ಬಳಸಲು ಹಾಗೂ ಏಕದಳ ಧಾನ್ಯವನ್ನು ಕಡಿಮೆ ಮಾಡಿ, ಫ್ಯಾಟ್ಸ್ ಹೆಚ್ಚು ಸೇವಿಸುವ ಮೂಲಕ ರೋಗಮುಕ್ತರಾಗಿ ಹೆಚ್ಚು ಕಾಲ ಬದುಕಿ ಎಂದು ಹೇಳುವ ಅವರ ಮಾತುಗಳನ್ನು ಇಲ್ಲಿ ದಾಖಲಿಸುತ್ತಾರೆ. ಹಾಗೆ ಮತ್ತೊಮ್ಮೆ ರಾಜೇಗೌಡರ ತೋಟಕ್ಕೆ ಭೇಟಿ ನೀಡಿದ ಲೇಖಕರು ಅಲ್ಲಿ ಬೆಳೆದಿರುವ ಗಿಡಮೂಲಿಕೆ ಸಂಪತನ್ನು ನೋಡುತ್ತಾರೆ. ಅವುಗಳ ಉಪಯೋಗ, ಬಳಸುವ ವಿಧಾನವನ್ನು ಮುಂದಿನ ತಲೆಮಾರಿಗೆ ತಿಳಿಸುವ ಕಾಳಜಿಯಿಂದ ಅಲ್ಲಿ ಅವರು ಕಂಡ ಚಂದ್ರಮುನಿ, ಕೃಷ್ಣಲಕ್ಕಿ, ಗರಗರ ಸೊಪ್ಪು, ಅಮೃತಬಳ್ಳಿ, ಆಶ್ವಗಂಧ, ಹೊನ್ನಗೊನೆ, ಸೀತಾಫಲ, ಪುನರ್‌ನಟ್, ಅಚ್ಚೇಗಿಡ, ಶರಪುಂಕ, ವಿಷ್ಣುಕಾಂತಿ, ಒಂದೆಲಗ, ಮಧುನಾಶಿನಿ, ಪಾರಿಜಾತ, ಮಧುಮಾಲಿನಿ, ನಿಂಬೆ, ಕರಿಬೇವು, ನಸುಗುನ್ನಿ – ಮುಂತಾದ ಅಪರೂಪದ ಸಸ್ಯಗಳ ಔಷಧೀಯ ಬಳಕೆ ಹೇಗೆ ಎಂಬುದನ್ನು ತಿಳಿಸಿಕೊಡುತ್ತಾರೆ.

ಮನುಷ್ಯ ನಿರ್ಮಿತ ಜೈವಿಕ ವಿಕೃತಿಗಳು ಮನುಷ್ಯನ ಮೇಲೆ ಉಂಟುಮಾಡುವ ದುಃಷ್ಪರಿಣಾಮಗಳಿಂದ ಆಗಬಹುದಾದ ದೈಹಿಕ ಅನಾಹುತಗಳನ್ನು ಕುರಿತು ಹೇಳುವ ಅವರು ನಮ್ಮನ್ನು ಸಹಜ ಕೃತಿಯತ್ತ ಗಂಭೀರವಾಗಿ ಚಿಂತಿಸುವಂತೆ ಮಾಡುತ್ತಾರೆ. ಪ್ರಕೃತಿಯ ಒಂದು ಭಾಗವಾದ ಮಾನವನಿಗೆ ಪ್ರಕೃತಿಯೇ ಒದಗಿಸಿದ ಈ ಔಷಧ ಮೂಲಿಕೆಗಳ ಮಹತ್ವವನ್ನ ಮತ್ತಷ್ಟು ತಿಳಿಸಿಕೊಡುವ ಕುತೂಹಲದಿಂದ ರಸಾಯನಿಕ ಗೊಬ್ಬರ ಬಳಸದೆ ಬೆಳೆದ ಅರುಣಳ ತೋಟಕ್ಕೆ ಒಮ್ಮೆ ಭೇಟಿಕೊಡುತ್ತಾರೆ.

ಆ ಸಹಜ ಕೃಷಿಯ ಹಚ್ಚಹಸಿರ ನಡುವೆ ಸ್ವಚ್ಚಂದವಾಗಿ ಮೇಯ್ವ ಹಸು-ಕೋಳಿ; ಬೆಳೆದು ನಿಂತ ಸೇಬು, ಡ್ರಾಗನ್‌ ಫ್ರೂಟ್ಸ್ ಗಳ ಹುಲುಸಾದ ಬೆಳೆಯನ್ನು ಲೇಖಕರು ನೋಡುತ್ತಾರೆ. ರಸಾಯನಿಕ ಗೊಬ್ಬರ ಬಳಸಿ ಹಾಳುಮಾಡಿದ್ದ ಭೂಮಿಯನ್ನು ಸಹಜ ಕೃಷಿಯ ಬೇಸಾಯಪದ್ಧತಿಗೆ ಒಳಪಡಿಸಿ ಅಭಿವೃದ್ಧಿ ಪಡಿಸಿರುವ ಅರುಣಳ ತೋಟ ಕಂಡ ಲೇಖಕರು ನಮಗೆ ಅನುಸರಣೀಯ ಎನ್ನುವಂತೆ ತಿಳಿ ಹೇಳುತ್ತಾರೆ. ಹೀಗೆ ನಿಂತೂ ನಿಲ್ಲದ ಬಯಲ ಜೋಗಿ ತಾವಾಗಿ ನೇಗಿಲ ಯೋಗಿಯ ಕಥೆ ಕಟ್ಟಿಕೊಡುವ ಡಾ. ಸಿದ್ದಗಂಗಯ್ಯರವರು ಹಸಿರ ಕಡಲ ತಡಿಯ ಸುತ್ತೊಂದು ದರುಶನವ ಮಾಡಿಸುತ್ತಾರೆ. ಮಲೆಯ ನಾಡಿನ ಮಾವು, ಹಲಸು, ತೆಂಗು, ಅಡಿಕೆ ಎಲೆಗಳ ಮೇಲೆ ಲಾಸ್ಯವಾಡುವ ಪಡುವಣ ಮುಗಿಲು ಕೆಂಪೇರಿದ ದೃಶ್ಯಾವಳಿಗೆ ಮೈಮರೆತು ಮನಸೋತ ಲೇಖಕರು ೪೦ ವರ್ಷಗಳ ಹರೆಯಕ್ಕೆ ಸರಿದು ಅಂದಿನ ಪ್ರಾಕೃತಿಕ ಸಸ್ಯ ವೈಭವವನ್ನು ನೆನೆದು ಮತ್ತಷ್ಟು ಪುಳಕಿತರಾಗುತ್ತಾರೆ. ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಜೀವಂತವಾದ ಹಸಿರು ವನಸಿರಿಯ ಸಂಬಂಧವನ್ನು ಬೆಸೆಯುವ ಅವರ ಕನಸು ಈ ಕೃತಿಯಲ್ಲಿ ಎದ್ದು ಕಾಣುತ್ತದೆ. ಜನರನ್ನು ಲೇಖಕರು ಮುಖಾಮುಖಿಯಾಗುವ ರೀತಿಯೊಳಗೆ ಒಬ್ಬ ಕಥೆಗಾರ ಸಿಕ್ಕಿದಂತಾಗಿ ಇದೊಂದು ದೃಶ್ಯಕಾವ್ಯ ಎಂಬಂತೆ ಅನ್ನಿಸಿಬಿಡುತ್ತದೆ.

(ಸಂಪಾದಕನ ಟಿಪ್ಪಣಿ: ತುಮಕೂರಿನ ಯಲ್ಲಾಪುರದಲ್ಲಿ ನೆಲೆಸಿ, ಕೊರಟಗೆರೆ ತಾಲೂಕಿನ ಹೊಲತಾಳು ಗ್ರಾಮದಲ್ಲಿ ಕೃಷಿಯೊಂದಿಗೆ ಅನುಸಂಧಾನ ಮಾಡುತ್ತಿರುವ ಸಿದ್ದಗಂಗಯ್ಯ ಹೊಲತಾಳು ಇಂಗ್ಲಿಷ್ ಅಧ್ಯಾಪಕರಾಗಿ ತಿಪಟೂರಿನಲ್ಲಿ ಪಾಠ ಮಾಡಿದವರು, ಅವರ ಹೊಸ ಪುಸ್ತಕ ಒಳನಾಡಿನ ಒಡನಾಟ’ವನ್ನು ಈಗ ಮೈಸೂರಿನಲ್ಲಿ ನೆಲೆಸಿರುವ ತಿಪಟೂರು ತಾಲೂಕಿನ ಆಲೂರು ದೊಡ್ಡನಿಂಗಪ್ಪ ಮಾಡಿಕೊಟ್ಟಿದ್ದಾರೆ. ಸೋಜುಗಾದ ಸೂಜಿ ಮಲ್ಲಿಗೆಯಂಥ ದೊಡ್ಡನಿಂಗಪ್ಪ ಸ್ವತಃ ಕವಿ, ಕತೆ, ಕಾದಂಬರಿಕಾರರೂ ಹೌದು)