ಸಂಪಾದಕೀಯ

newspapers are not for sale

ಸಂಪಾದಕೀಯ

 

ಪತ್ರಿಕೆಗಳು ಮಾರುಕಟ್ಟೆ ಸರಕುಗಳಲ್ಲ


     ಜಾಗತಿಕ ಪತ್ರಿಕಾ ಸ್ವಾತಂತ್ರ‍್ಯ ಸೂಚಿಯಲ್ಲಿ 2020ರಲ್ಲಿ ವಿಶ್ವದ 180 ರಾಷ್ಟ್ರಗಳ ಪೈಕಿ 142ನೆಯ ಸ್ಥಾನದಲ್ಲಿದ್ದ ಭಾರತ 2022ರಲ್ಲಿ ಮತ್ತಷ್ಟು ಕುಸಿದಿದ್ದು 150ನೆಯ ಸ್ಥಾನ ತಲುಪಿದೆ. ಪತ್ರಿಕಾ ಸ್ವಾತಂತ್ರ‍್ಯ ಎಂದರೆ ಪತ್ರಿಕಾ ಸಂಪಾದಕ ಮಂಡಲಿಯ ಅಥವಾ ಸಮೂಹದ ಸ್ವೇಚ್ಚಾಚಾರ ಎಂಬ ಪರಿಜ್ಞಾನವನ್ನು ಉಳಿಸಿಕೊಂಡೇ ಯೋಚಿಸಿದರೂ ಸಹ ಈ ಸೂಚ್ಯಂಕದ ಫಲಿತಾಂಶವನ್ನು ಸಂಪೂರ‍್ಣವಾಗಿ ನಿರಾಕರಿಸಲಾಗುವುದಿಲ್ಲ. ಕೇಂದ್ರ ಬಿಜೆಪಿ ಸರ‍್ಕಾರ ಈ ವರದಿಯನ್ನು ಒಪ್ಪಲಾಗುವುದಿಲ್ಲ ಎಂದು ಹೇಳಿದ್ದರೂ, ಕಳೆದ ಏಳೆಂಟು ವರ‍್ಷಗಳಲ್ಲಿ ಪತ್ರಿಕಾ ಸಮೂಹಗಳ ಮೇಲೆ ನಡೆದಿರುವ ಹಲವು ರೀತಿಯ ದಾಳಿಗಳು ಬೇರೆಯೇ ಕತೆಯನ್ನು ಹೇಳುತ್ತವೆ.  ತಾತ್ವಿಕ ನೆಲೆಯಲ್ಲಿ ಯೋಚಿಸಿದಾಗ, ಪತ್ರಿಕೆಯ ಸಂಪಾದಕೀಯ ಸ್ವಾತಂತ್ರ‍್ಯದ ಮೇಲೆ ಭಾರತದ ಪ್ರಭುತ್ವ ಯಾವುದೇ ರೀತಿಯ ನಿರ‍್ಬಂಧಗಳನ್ನು ಈವರೆಗೂ ವಿಧಿಸಿಲ್ಲ. ಹಾಗೆಯೇ ಮೇಲ್ನೋಟಕ್ಕೆ ಕಾಣುವಂತೆ, ಪತ್ರಿಕಾ ಸಮೂಹಗಳ ಮೇಲೆ ತನ್ನ ನೇರ ನಿಯಂತ್ರಣವನ್ನು ಸಾಧಿಸುವಂತಹ ಕ್ರಮಗಳನ್ನೂ  ಕೈಗೊಂಡಿಲ್ಲ.


     ಆದರೆ ಸರ‍್ಕಾರದ ಆಡಳಿತ ನೀತಿಗಳನ್ನು ಟೀಕಿಸುವ, ಖಂಡಿಸುವ ಮತ್ತು ಆಡಳಿತಾರೂಢ ಪಕ್ಷದ ಸುಳ್ಳುಗಳನ್ನು ಬಯಲಿಗೆಳೆಯುವ ಪತ್ರಿಕಾ ಸಮೂಹಗಳ ಪ್ರಯತ್ನಗಳನ್ನು ಹತ್ತಿಕ್ಕಲು ಹಲವು ಮಾರ‍್ಗಗಳನ್ನು ಬಳಸಿರುವುದು ಗುಟ್ಟಿನ ಮಾತೇನಲ್ಲ. ಕೇಂದ್ರ ಸರ‍್ಕಾರವು ಸಾಂವಿಧಾನಿಕ ಸಂಸ್ಥೆಗಳನ್ನೇ ಬಳಸಿಕೊಂಡು ಪತ್ರಿಕಾ ಸಮೂಹಗಳ ಮೇಲೆ ದಾಳಿ ನಡೆಸಿರುವ ಹಲವು ಪ್ರಸಂಗಗಳು ನಮ್ಮೆದುರು ಢಾಳಾಗಿ ಕಾಣುತ್ತಿವೆ. ಕೋವಿದ್19 ಸಂದರ‍್ಭದಲ್ಲಿ ಸರ‍್ಕಾರದ ವೈಫಲ್ಯವನ್ನು ಪ್ರತ್ಯಕ್ಷದರ‍್ಶಿಗಳೊಂದಿಗೆ ವರದಿ ಮಾಡಿದ ದೈನಿಕ್‌ ಭಾಸ್ಕರ್‌ ಪತ್ರಿಕಾ ಸಮೂಹದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಉತ್ತರ ಪ್ರದೇಶ ಸರ‍್ಕಾರದ ಆಡಳಿತ ನೀತಿಗಳನ್ನು ಟೀಕಿಸುತ್ತಿದ್ದ ಭಾರತ್ ಸಮಾಚರ‍್ ಪತ್ರಿಕೆಯೂ ಐಟಿ ದಾಳಿಗೊಳಗಾಗಿತ್ತು.  ಇತ್ತೀಚೆಗಷ್ಟೇ ದ ಕ್ವಿಂಟ್ ಮತ್ತು ನ್ಯೂಸ್ ಕ್ಲಿಕ್ ಮಾಧ್ಯಮ ಸಮೂಹಗಳ ಮೇಲೆ ಜಾರಿ ನಿರ‍್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದರು.  2020ರಲ್ಲಿ ಕಾಶ್ಮೀರದಾದ್ಯಂತ 10ಕ್ಕೂ ಹೆಚ್ಚು ಪತ್ರಿಕಾ/ಮಾಧ್ಯಮ ಸಮೂಹಗಳ ಮೇಲೆ ದಾಳಿ ನಡೆಸಲಾಗಿದ್ದು, ಗ್ರೇಟರ್‌ ಕಾಶ್ಮೀರ್ ಪತ್ರಿಕೆಯ ಮೇಲೆ ಎನ್ಐಎ ದಾಳಿ ನಡೆಸಿತ್ತು.


     ಇತ್ತೀಚೆಗೆ ಪತ್ರರ‍್ತರೊಡನೆ ಸಂವಾದ ಮಾಡುತ್ತಾ ಮೈಸೂರು-ಕೊಡಗು  ಕ್ಷೇತ್ರದ ಬಿಜೆಪಿ ಸಂಸದ ಪ್ರತಾಪ್‌ ಸಿಂಹ ಕರ‍್ನಾಟಕದ ಪ್ರತಿಷ್ಠಿತ ದಿನಪತ್ರಿಕೆಗಳಲ್ಲೊಂದಾದ ವಾರ‍್ತಾಭಾರತಿಯ ಹೆಸರನ್ನು ಉಲ್ಲೇಖಿಸಿದ್ದು, ಪೂರ‍್ವಗ್ರಹ ಪೀಡಿತ ಬರಹಗಳನ್ನೇ ಪ್ರಕಟಿಸುವ ಈ ಪತ್ರಿಕೆಯನ್ನು ತಾವು    ಖರೀದಿಸಿ ಸರಿಪಡಿಸುವುದಾಗಿ ” ಹೇಳಿರುವುದು, ಮಾಧ್ಯಮ/ಪತ್ರಿಕಾ ಸ್ವಾತಂತ್ರ‍್ಯವು ಎದುರಿಸುತ್ತಿರುವ ಅಪಾಯಗಳಿಗೆ ಸಾಕ್ಷಿಯೂ ಆಗಿದೆ, ಮುಂಬರುವ ಅಪಾಯಗಳ ಮುನ್ಸೂಚನೆಯಾಗಿಯೂ ಕಾಣುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದಲೇ ಚುನಾಯಿತರಾದ ಸಂಸದರೊಬ್ಬರು , ಪ್ರಜಾತಂತ್ರದ ನಾಲ್ಕನೆಯ ಸ್ತಂಭ ಎನ್ನಲಾಗುವ ಮಾಧ್ಯಮದ ಒಂದು ಅಂಗವನ್ನು “ ಖರೀದಿಸಿ ಸರಿಪಡಿಸುವುದಾಗಿ ” ಹೇಳುವುದು ಪ್ರಜಾಸತ್ತೆಯ ಅಣಕ ಎಂದೇ ಹೇಳಬಹುದು. ಈಗಾಗಲೇ ಭಾರತದ ಬಹುತೇಕ ವಿದ್ಯುನ್ಮಾನ ಮಾಧ್ಯಮಗಳನ್ನು ಕಾರ‍್ಪೋರೇಟ್ ಉದ್ಯಮಿಗಳು ತಮ್ಮ ಒಡೆತನದಲ್ಲಿರಿಸಿಕೊಂಡಿದ್ದು, ಆಡಳಿತಾರೂಢ ಪಕ್ಷಗಳ ಪರವಾಗಿಯೇ ಕಾರ‍್ಯ ನಿರ‍್ವಹಿಸುತ್ತಿವೆ. ಈ ಸಮೂಹಗಳಲ್ಲಿ ಕಾರ‍್ಯ ನಿರ‍್ವಹಿಸುವ ಸಂಪಾದಕರೂ ಸಂಪೂರ‍್ಣ ಸ್ವತಂತ್ರರಾಗಿ  ಸರ‍್ಕಾರದ ಆಡಳಿತ ನೀತಿಗಳ ವಿರುದ್ಧ ದನಿ ಎತ್ತಲಾಗುತ್ತಿಲ್ಲ. ಪ್ರಭುತ್ವ ಮಾಧ್ಯಮ ಸಮೂಹಗಳ ಮೇಲೆ ನೇರ ನಿಯಂತ್ರಣ ಸಾಧಿಸುವುದಕ್ಕೂ ಮಾರುಕಟ್ಟೆ ಶಕ್ತಿಗಳ ಒಡೆತನಕ್ಕೊಪ್ಪಿಸಿ ಮಣಿಸುವುದಕ್ಕೂ ಕೂದಲೆಳೆಯಷ್ಟು ಅಂತರ ಮಾತ್ರ ಕಾಣಬಹುದು. ಮಾನ್ಯ ಸಂಸದ ಪ್ರತಾಪ್ ಸಿಂಹ ಒಂದು ಜನಪ್ರಿಯ ಪತ್ರಿಕೆಯನ್ನು “ ಖರೀದಿಸಿ ಸರಿಪಡಿಸುವ ” ಹೇಳಿಕೆ ನೀಡುವುದು, ಮಾಧ್ಯಮಗಳನ್ನು ಸಂತೆಯಲ್ಲಿನ ಬಿಕರಿ ಸರಕುಗಳಂತೆ ಪರಿಗಣಿಸುವಂತೆಯೇ ಕಾಣುತ್ತದೆ. 


ಮಾಧ್ಯಮಗಳು ಎಷ್ಟೇ ಒತ್ತಡದಲ್ಲಿ ಕಾರ‍್ಯ ನಿರ‍್ವಹಿಸುತ್ತಿದ್ದರೂ, ಭಾರತದಲ್ಲಿ ಪ್ರಜಾತಂತ್ರವನ್ನು ಉಳಿಸುವ ನಿಟ್ಟಿನಲ್ಲಿ ತಮ್ಮ ಮಹತ್ತರ ಪಾತ್ರವನ್ನು ಮರೆತಿಲ್ಲ ಹಾಗೂ ಯಾವುದೇ ಪತ್ರಿಕೆಯೂ ಬಿಕರಿಯ ಸರಕು ಅಲ್ಲ ಎನ್ನುವುದನ್ನು ಮಾನ್ಯ ಸಂಸದರು ಅರಿತಿದ್ದರೆ ಒಳಿತು.