ಸಿ ಎಂ ಕುರ್ಚಿಗೆ ಮತ್ತೆ ಘನತೆ?
ಸಿ.ರುದ್ರಪ್ಪ
ಕರ್ನಾಟಕದ ಮುಖ್ಯಮಂತ್ರಿ ಸ್ಥಾನ ಅತ್ಯಂತ ಘನತೆಯಿಂದ ಕೂಡಿರುವಂಥದ್ದು. ಅನೇಕ ಮಹನೀಯರು ಈ ಸ್ಥಾನವನ್ನು ಅಲಂಕರಿಸಿದ್ದಾರೆ.ಕೆಂಗಲ್ ಹನುಮಂತಯ್ಯ,ಎಸ್.ನಿಜಲಿಂಗಪ್ಪ,ವೀರೇಂದ್ರ ಪಾಟೀಲ್,ದೇವರಾಜ ಅರಸು,ರಾಮಕೃಷ್ಣ ಹೆಗಡೆ,ಎಸ್.ಬಂಗಾರಪ್ಪ,ಎಚ್.ಡಿ.ದೇವೇ ಗೌಡ,ಜೆ.ಎಚ್.ಪಟೇಲ್,ಎಸ್.ಎಂ.ಕೃಷ್ಣ ಮತ್ತು ಸಿದ್ದರಾಮಯ್ಯ ಅವರುಗಳು ತಮ್ಮ ವ್ಯಕ್ತಿತ್ವದ ಬಲದಿಂದ ಮುಖ್ಯಮಂತ್ರಿ ಸ್ಥಾನದ ಘನತೆಯನ್ನು ಹೆಚ್ಚಿಸಿದ್ದರೆ, ಆರ್.ಗುಂಡೂರಾವ್,ವೀರಪ್ಪ ಮೊಯಿಲಿ,ಧರ್ಮ ಸಿಂಗ್,ಎಚ್.ಡಿ.ಕುಮಾರಸ್ವಾಮಿ,ಸದಾನಂದ ಗೌಡ ,ಜಗದೀಶ್ ಶೆಟ್ಟರ್ ಮತ್ತು ಬಸವರಾಜ ಬೊಮ್ಮಾಯಿ ತಾವು ಮುಖ್ಯಮಂತ್ರಿಗಳಾದ ನಂತರ ಆ ಸ್ಥಾನದ ಬಲದಿಂದ ತಮ್ಮ ವ್ಯಕ್ತಿತ್ವಕ್ಕೆ ಮೆರಗು ತಂದುಕೊಂಡಿದ್ದಾರೆ.
ಮುಖ್ಯಮಂತ್ರಿಯನ್ನು ಸಾಮಾನ್ಯ ಜನರು "ನಾಡಿನ ದೊರೆ"ಎಂದು ಇನ್ನೂ ಪರಿಭಾವಿಸಿದರೆ, ಕೆಲವರು ಆ ಖುರ್ಚಿಯನ್ನು ಕರ್ನಾಟಕ ರಮಾರಮಣ ಶ್ರೀ ಕೃಷ್ಣದೇವರಾಯನ ಸಿಂಹಾಸನ ಎಂದೂ ಕಲ್ಪಿಸಿಕೊಂಡು ಪುಳಕಗೊಳ್ಳುತ್ತಾರೆ.
ಮುಖ್ಯಮಂತ್ರಿ ಖುರ್ಚಿ ನಾಡಿನ ಧೀಶಕ್ತಿಯ ಪ್ರತೀಕ .ಅದರ ಮೇಲೆ ಯಾರೇ ಕುಳಿತರೂ ಅವರಲ್ಲಿ ಪ್ರಚಂಡ ಶಕ್ತಿ ಸಂಚಯವಾಗುತ್ತದೆ. ಎಂತಹ ಕಠಿಣ ಸವಾಲುಗಳನ್ನೂ ಲೀಲಾಜಾಲವಾಗಿ ಎದುರಿಸುತ್ತಾರೆ.ಪ್ರಜೆಗಳ ಕಲ್ಯಾಣವನ್ನು ಸಾಧಿಸುವ ಅತ್ಯುತ್ತಮ ಯೋಜನೆಗಳನ್ನು ರೂಪಿಸುತ್ತಾರೆ.
ಕಡಿದಾಳ್ ಮಂಜಪ್ಪನವರು ಕೇವಲ ಎರಡು ತಿಂಗಳು 13 ದಿನ ಮುಖ್ಯಮಂತ್ರಿಯಾಗಿದ್ದರೂ ಆದರ್ಶಪ್ರಾಯವಾದ ನಡವಳಿಕೆಗೆ ಇಂದಿಗೂ ಒಂದು ಅತ್ಯುತ್ತಮ ನಿದರ್ಶನವಾಗಿ ಉಳಿದಿದ್ದಾರೆ.ಲಕ್ಷಾಂತರ ರೈತರಿಗೆ ಭೂ ಒಡೆತನವನ್ನು ದಯಪಾಲಿಸಿದ್ದ ಸಾಮಾಜಿಕ ಕ್ರಾಂತಿಯ ಹರಿಕಾರ ದೇವರಾಜ ಅರಸು ನಿಜವಾದ ಅರ್ಥದಲ್ಲಿ ಒಬ್ಬ ದೊರೆಯೇ ಆಗಿದ್ದರು.ತಮ್ಮ ಮುಖ್ಯಮಂತ್ರಿ ಖುರ್ಚಿಯನ್ನೇ ಪಣಕ್ಕಿಟ್ಟು "ಕಾವೇರಿ ಸುಗ್ರೀವಾಜ್ಞೆ"ಯನ್ನು ತಂದಿದ್ದ ಎಸ್ .ಬಂಗಾರಪ್ಪನವರು ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ .ಇಡೀ ದೇಶಕ್ಕೇ ಮಾದರಿಯಾಗಿದ್ದ ಸಿ .ಇ .ಟಿ ವ್ಯವಸ್ಥೆ ಮೂಲಕ ವೀರಪ್ಪ ಮೊಯ್ಲಿ ಯವರು ಬಡ ವಿದ್ಯಾರ್ಥಿಗಳೂ ಡಾಕ್ಟರು ಮತ್ತು ಇಂಜಿನಿಯರ್ ಗಳು ಆಗುವ ಕನಸು ಕಾಣುವಂತೆ ಮಾಡಿದ್ದರು.ಸಿದ್ದರಾಮಯ್ಯನವರ ಅನ್ನಭಾಗ್ಯ ಕೋಟ್ಯಂತರ ಕಡು ಬಡವರಿಗೆ ಆಹಾರ ಭದ್ರತೆಯನ್ನು ನೀಡಿದ ಕ್ರಾಂತಿಕಾರಿ ಕಾರ್ಯಕ್ರಮ."ದೆಹಲಿಯ ತಬ್ಲೀಕ್ ಜಮಾತೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕೊರೋನಾ ವೈರಸ್ ಹರಡಲು ಮುಸ್ಲಿಮರೇ ಕಾರಣ ಎಂದು ಯಾರಾದರೂ ಅಪಪ್ರಚಾರ ಮಾಡಿದರೆ ಅಂತವರ ವಿರುದ್ಧ ಕಠಿಣ ಕ್ರಮ ಜರುಗಿಸುತ್ತೇನೆ “ಎಂದು ಎಚ್ಚರಿಸುವ ಮೂಲಕ ಮುಖ್ಯಮಂತ್ರಿ ಬಿ. ಎಸ್ .ಯಡಿಯೂರಪ್ಪ ರಾಜಧರ್ಮ ವನ್ನು ಪಾಲಿಸಿದ್ದರು .
ಹೀಗೆ ಅನೇಕ ಮಹನೀಯರು ಜನಪರ ನಿರ್ಧಾರಗಳು ಮತ್ತು ಧೀರೋದಾತ್ತ ನಡವಳಿಕೆಗಳ ಮೂಲಕ ಮುಖ್ಯಮಂತ್ರಿ ಸ್ಥಾನದ ಘನತೆಯನ್ನು ಎತ್ತಿ ಹಿಡಿದಿದ್ದಾರೆ.
ಇನ್ನು ಕೆಲವರು ತಮ್ಮ ವಿರುದ್ಧ ವ್ಯಕ್ತಿಗತ ದಾಳಿ ತೀವ್ರವಾದಾಗ ರಕ್ಷಣೆಗೆ ಮುಖ್ಯಮಂತ್ರಿ ಸ್ಥಾನದ ಮೊರೆ ಹೋಗಿದ್ದೂ ಉಂಟು.ಉದಾಹರಣೆಗೆ ಬಿ .ಎಸ್ .ಯಡಿಯೂರಪ್ಪ 2012 ರಲ್ಲಿ ಕೆ. ಜೆ. ಪಿ. ಪಕ್ಷ ಸ್ಥಾಪಿಸಿದ ಬಳಿಕ ಆಗಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಿರುದ್ಧ ತೀವ್ರ ದಾಳಿ ಆರಂಭಿಸಿದ್ದರು.ಆಗ ಬಿಜೆಪಿ ನಾಯಕರು"ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನದ ಘನತೆಗೆ ಕುಂದು ತರುವ ರೀತಿಯಲ್ಲಿ ಜಗದೀಶ್ ಶೆಟ್ಟರ್ ವಿರುದ್ಧ ಮಾತನಾಡಬಾರದು"ಎಂದು ಎಚ್ಚರಿಸಿದ್ದರು.
ಮಾಜಿ ಪ್ರಧಾನಿ ದೇವೇಗೌಡರು ಕೆಲವು ವರ್ಷ ಗಳ ಹಿಂದೆ ನೈಸ್ ರಸ್ತೆ ಕಾಮಗಾರಿಯಿಂದ ತೊಂದರೆಗೊಳಗಾದ ಗ್ರಾಮಗಳಿಗೆ ಭೇಟಿ ನೀಡಿದ್ದರು.ಆಗ ಅವರು ಯಡಿಯೂರಪ್ಪನವರನ್ನು ಏಕ ವಚನದಿಂದ ಅಸಭ್ಯ ಭಾಷೆಯಿಂದ ನಿಂದಿಸಿದ್ದರು.ಯಡಿಯೂರಪ್ಪ ಆಗ ಮುಖ್ಯಮಂತ್ರಿಯಾಗಿದ್ದರು.ಮುಖ್ಯಮಂತ್ರಿ ಸ್ಥಾನದ ಘನತೆಯನ್ನು ಕಾಪಾಡುವ ದೃಷ್ಟಿಯಿಂದಾದರೂ ದೇವೇ ಗೌಡರು
ತಮ್ಮ ಮಾತಿನಲ್ಲಿ ಸ್ವಲ್ಪ ಸಂಯಮ ವಹಿಸಬೇಕಿತ್ತು ಎಂಬುದು ಕೆಲವು ಪ್ರಜ್ಞಾವಂತರ ಭಾವನೆಯಾಗಿತ್ತು .ಸುಧೀರ್ಘ ಹೋರಾಟಗಳ ಹಿನ್ನೆಲೆಯ ನಾಯಕರೂ ಕೂಡ ಕೆಲವೊಮ್ಮೆಮುಖ್ಯಮಂತ್ರಿ ಸ್ಥಾನದ ಘನತೆಯನ್ನು ಕಾಪಾಡುವಲ್ಲಿ ವಿಫಲರಾಗಿದ್ದಾರೆ. "ನೀವೇ ಮುಖ್ಯಮಂತ್ರಿ.ನಿಮ್ಮ ವಿರುದ್ಧ ಅರೆಸ್ಟ್ ವಾರೆಂಟ್ ಯಾರು ಹೊರಡಿಸುತ್ತಾರೆ?".ಈ ಶೀರ್ಷಿಕೆ 2021 ರ ಜನವರಿ 28 ರಂದು ರಾಷ್ಟ್ರೀಯ ವೃತ್ತ ಪತ್ರಿಕೆಗಳ ಮುಖ ಪುಟಗಳಲ್ಲಿ ಪ್ರಕಟವಾಗಿತ್ತು .ಈ ಪ್ರಶ್ನೆಯನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್. ಎ .ಬೋಬಡೆಯವರು ಮುಖ್ಯಮಂತ್ರಿ ಬಿ .ಎಸ್ .ಯಡಿಯೂರಪ್ಪನವರ ವಕೀಲರಾದ ಮುಕುಲ್ ರೋಹಟಗಿ ಮತ್ತು ಕೆ. ವಿ .ವಿಶ್ವನಾಥನ್ ಅವರ ಮುಂದೆ ಇಟ್ಟಿದ್ದರು .ತಮ್ಮ ವಿರುದ್ಧದ ಭೂ ಹಗರಣವನ್ನು ಬೆಂಗಳೂರಿನಲ್ಲಿ ನ್ಯಾಯಾಲಯವೊಂದು ವಿಚಾರಣೆಗೆ ಕೈಗೆತ್ತಿಕೊಂಡಿದ್ದು ತಮಗೆ ಬಂಧನದ ಭೀತಿಯಿದ್ದು ಅದರಿಂದ ರಕ್ಷಣೆ ನೀಡಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪನವರು ವಕೀಲರ ಮೂಲಕ ಸುಪ್ರೀಂ ಕೋರ್ಟಿನ ಮೊರೆ ಹೋಗಿದ್ದರು.ಆಗ ಸುಪ್ರೀಂ ಕೋರ್ಟ್ ಅವರ ವಕೀಲರಿಗೆ ಈ ಪ್ರಶ್ನೆಯನ್ನು ಕೇಳಿತ್ತು.ಮತ್ತು ನಂತರ ಯಡಿಯೂರಪ್ಪನವರ ಬಂಧನಕ್ಕೆ ತಡೆ ನೀಡಿತ್ತು.ಒಂದು ವೇಳೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿರದೆ ಇದ್ದಿದ್ದರೆ ಬಂಧನಕ್ಕೆ ಈ ರೀತಿ ತಡೆ ಸಿಗುತ್ತಿತ್ತೇ?.ಎಂಬ ಪ್ರಶ್ನೆ ಸಹಜ .ಮುಖ್ಯಮಂತ್ರಿಯಾದವರೊಬ್ಬರು ಬಂಧನವಾಗದಂತೆ ಮುಖ್ಯಮಂತ್ರಿ ಸ್ಥಾನವೇ ಅವರ ರಕ್ಷಣೆಗೆ ಧಾವಿಸಿದ ಒಂದು ಅತ್ಯಂತ ಅಪರೂಪದ ಪ್ರಕರಣವಿದು.ಅಂದರೆ ಆ ಕ್ಷಣದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸ್ಥಾನದ ಮಾನ ರಾಷ್ಟ್ರಮಟ್ಟದಲ್ಲಿ ಹರಾಜಾಗಿತ್ತು ಎಂದು ವ್ಯಾಖ್ಯಾನಿಸಬಹುದು.
ಬಸವರಾಜ ಬೊಮ್ಮಾಯಿ ಕಾಲದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಘನತೆ ಇತ್ತೇ ?ಎಂಬ ಪ್ರಶ್ನೆಯೇ ಅಪ್ರಸ್ತುತ .ಏಕೆಂದರೆ ಬೊಮ್ಮಾಯಿಯವರು ಮುಖ್ಯಮಂತ್ರಿ ಖುರ್ಚಿಯ ಮೇಲೆ ಭದ್ರವಾಗಿ ಕುಳಿತು ರಾಜ್ಯಭಾರ ಮಾಡುತ್ತಿದ್ದಾರೆ ಎಂಬ ಭಾವನೆ ಜನರಿಗೆ ಬರಲೇ ಇಲ್ಲ ಎಂದು ಯಾರಾದರೂ ಹೇಳಿದರೆ ಅದರಲ್ಲಿ ಆಶ್ಚರ್ಯ ಪಡುವಂತಹದ್ದು ಏನೂ ಇಲ್ಲ.
ಸಿದ್ದರಾಮಯ್ಯನವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಅರ್ಕಾವತಿ ರೀಡೂ ,ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಿದ್ದು,ಹೂಬ್ಲೊ ವಾಚು ಪ್ರಕರಣ ,ಕೆ. ಪಿ .ಎಸ್ .ಸಿ .ಗೆ ಕಳಂಕಿತ ಅಧಿಕಾರಿ ನೇಮಕ ಮುಂತಾದ ವಿವಾದಗಳು ಸದ್ದು ಮಾಡಿದ್ದವು.ಆದರೆ ಈ ಬಾರಿ ಅವರು ಎಚ್ಚರಿಕೆಯ ಹೆಜ್ಜೆಗಳನ್ನು ಇಡುವ ಮುನ್ಸೂಚನೆ ನೀಡಿದ್ದಾರೆ.ಭಾರೀ ಜನಾಭಿಪ್ರಾಯದ ನಡುವಿನಿಂದ ಒಡಮೂಡಿರುವ ಸಿದ್ದರಾಮಯ್ಯ ನವರ ಆಡಳಿತ ಸದ್ಯಕ್ಕಂತೂ ಒಂದಿಷ್ಟು ಗಾಂಭೀರ್ಯದಿಂದ ಕೂಡಿರುವುದನ್ನು ಗಮನಿಸಬಹುದು.ಅವರು ಇತ್ತೀಚಿಗೆ ಒಂದು ಟ್ವೀಟ್ ನಲ್ಲಿ "ಜನರ ಬಗ್ಗೆ ಕಾಳಜಿ ,ನಡತೆಯಲ್ಲಿ ಪ್ರಾಮಾಣಿಕತೆ ,ಕರ್ತವ್ಯದಲ್ಲಿ ನಿಷ್ಠೆ ನಮ್ಮೊಳಗಿದ್ದರೆ ಉಳಿದ ವಿಚಾರಗಳೆಲ್ಲವೂ ನಗಣ್ಯ "ಎಂದು ಹೇಳಿಕೊಂಡಿರುವುದು ಗಮನಾರ್ಹ. ಅವರು ನೈತಿಕ ಎಚ್ಚರವನ್ನು ಕಾಯ್ದುಕೊಳ್ಳುತ್ತಿದ್ದಾರೇನೋ ಅನ್ನಿಸುವುದಕ್ಕೆ ಇದು ಒಂದು ನಿದರ್ಶನ. ಹಾಗಾಗೇ ಮುಖ್ಯಮಂತ್ರಿ ಹುದ್ದೆಗೆ ಘನತೆ ಮರಳಿ ಬರುತ್ತಿದೆಯೇನೋ ಅನ್ನುವ ನಿರೀಕ್ಷೆಯೂ ಹುಟ್ಟಿದೆ. ಮುಂದೇನಾಗುತ್ತದೆ ಅನ್ನುವುದು ಬಹುಶಃ ರಾಜಕೀಯದ ಪಲ್ಲಟಗಳನ್ನು ಮತ್ತು ಅವರ ಕಾರ್ಯ ವೈಖರಿಯನ್ನು ಅವಲಂಬಿಸಿರುವಂಥದ್ದು.