ಪದ್ಮಶ್ರೀ, ನಾಡೋಜ, ಪಂಡಿತ್  ರಾಜೀವ ತಾರಾನಾಥ ಸೂಕ್ಷ್ಮ ಸಂವೇದನೆಯ ಸಂಗೀತ ಚೇತನ

ಜೂನ್ 11ರಂದು ತಮ್ಮ 92ನೆಯ ವಯಸ್ಸಿನಲ್ಲಿ ರಾಗಲೋಕಕ್ಕೆ ವಿದಾಯ ಹೇಳಿ ಇಹಲೋಕದ ಪಯಣ ಮುಗಿಸಿದ ಪಂಡಿತ್ ರಾಜೀವ್ ತಾರಾನಾಥ್ ವಿಶಿಷ್ಟ ವ್ಯಕ್ತಿತ್ವದ ಕಲೋಪಾಸಕರು. ಸಂಗೀತ ಮತ್ತು ಬದುಕು ಇವೆರಡರ ನಡುವೆ ಅಂತರವೇ ಇಲ್ಲದೆ ತಮ್ಮ ಸರೋದ್ ವಾದನದೊಂದಿಗೆ ಏಳು ದಶಕಗಳ ಕಾಲ ಸಂಗೀತ ಪ್ರಿಯರನ್ನು ರಂಜಿಸಿದ ತಾರಾನಾಥ್, ತಮ್ಮ ಜೀವಪಯಣದ ಸ್ವರಸಂಗಾತಿ ಸರೋದ್ ಎಂಬ ವಾದ್ಯದ ತಂತಿಗಳಿಂದ ಹೊರಡುವ ಸ್ವರಗಳಲ್ಲೇ ಸಮಾಜದ ಅಂತರ್ ತುಡಿತವನ್ನೂ ಗ್ರಹಿಸಬಲ್ಲ ಸೂಕ್ಷ್ಮಗ್ರಾಹಿ ಕಲಾವಿದರಾಗಿದ್ದರು.

ಪದ್ಮಶ್ರೀ, ನಾಡೋಜ, ಪಂಡಿತ್  ರಾಜೀವ ತಾರಾನಾಥ ಸೂಕ್ಷ್ಮ ಸಂವೇದನೆಯ ಸಂಗೀತ ಚೇತನ

ನಾ ದಿವಾಕರ


       ಶಾಸ್ತ್ರೀಯ ಸಂಗೀತ ಒಂದು ಮೌನ ಕಲೆ. ಅಂದರೆ ತಲ್ಲೀನತೆಯೊಂದಿಗೆ ಭಾವಜಗತ್ತಿನಲ್ಲಿ ಕಳೆದುಹೋಗುವ ಅವಕಾಶಗಳನ್ನು ಕಲ್ಪಿಸುವ ಒಂದು ಕಲಾ ಪ್ರಕಾರ. ಹೊರಗಿನ ಜಗತ್ತು ಇರಲಿ ತಮ್ಮ ಆಸುಪಾಸಿನ ಸಣ್ಣ ಪ್ರಪಂಚವನ್ನೂ ಗಮನಿಸದೆ ತಾವಾಯಿತು, ತಮ್ಮ ಸ್ವರ-ರಾಗ-ತಾಳ-ಲಯದ ಪರಿಸರವಾಯಿತು ಎಂದು ಜೀವನವಿಡೀ ತಮ್ಮದೇ ಆದ ಕೋಶದೊಳಗೆ ಹುದುಗಿಹೋಗುವ ಅವಕಾಶವನ್ನೂ, ಮನಸ್ಥಿತಿಯನ್ನೂ ಸೃಷ್ಟಿಸುವ ಒಂದು ಕಲೆ ಸಂಗೀತ. ಸಮಾಜದೊಡಗಿನ ಒಡನಾಟ ಎಂದರೆ ಕೇಳುಗರಾಗಿ, ಪ್ರೇಕ್ಷಕರಾಗಿ ಅಥವಾ ವಿಮರ್ಶಕರಾಗಿ ಮಾತ್ರವೇ ಜನರ ನಡುವೆ ಬೆರೆಯುವ ಒಂದು ಮನಸ್ಥಿತಿಯನ್ನೂ ರೂಢಿಸಿಕೊಳ್ಳುವಂತೆ ಈ ಕಲೆ ಪ್ರಚೋದಿಸುತ್ತದೆ. ಭಾರತ ಕಂಡ ನೂರಾರು ಶಾಸ್ತ್ರೀಯ ಸಂಗೀತಗಾರರನ್ನು ಸೂಕ್ಷ್ಮವಾಗಿ ಗಮನಿಸಿದಾಗ ಈ ಪ್ರಭೇದವೇ ಪ್ರಧಾನವಾಗಿ ಕಾಣುತ್ತದೆ. ಬೆರಳೆಣಿಕೆಯಷ್ಟು ಕಲಾವಿದರು ಮಾತ್ರ ತಮ್ಮ ಸಾಧನೆಯ ಶಿಖರದ ಮೇಲೆ ಕುಳಿತಿದ್ದರೂ ರಾಗಲಯದ ಆವರಣದಿಂದ ಹೊರಬಂದು ಸಮಾಜದ ಕಡೆಗೆ ಗಮನ ಹರಿಸುವುದನ್ನು ಗುರುತಿಸಬಹುದು. ಅಂತಹ ಮಹಾನ್ ಚೇತನಗಳ ಪೈಕಿ ಇತ್ತೀಚೆಗೆ ನಮ್ಮನ್ನಗಲಿದ ರಾಜೀವ್ ತಾರಾನಾಥ್ ಪ್ರಮುಖರು.


     ಜೂನ್ 11ರಂದು ತಮ್ಮ 92ನೆಯ ವಯಸ್ಸಿನಲ್ಲಿ ರಾಗಲೋಕಕ್ಕೆ ವಿದಾಯ ಹೇಳಿ ಇಹಲೋಕದ ಪಯಣ ಮುಗಿಸಿದ ಪಂಡಿತ್ ರಾಜೀವ್ ತಾರಾನಾಥ್ ವಿಶಿಷ್ಟ ವ್ಯಕ್ತಿತ್ವದ ಕಲೋಪಾಸಕರು. ಸಂಗೀತ ಮತ್ತು ಬದುಕು ಇವೆರಡರ ನಡುವೆ ಅಂತರವೇ ಇಲ್ಲದೆ ತಮ್ಮ ಸರೋದ್ ವಾದನದೊಂದಿಗೆ ಏಳು ದಶಕಗಳ ಕಾಲ ಸಂಗೀತ ಪ್ರಿಯರನ್ನು ರಂಜಿಸಿದ ತಾರಾನಾಥ್, ತಮ್ಮ ಜೀವಪಯಣದ ಸ್ವರಸಂಗಾತಿ ಸರೋದ್ ಎಂಬ ವಾದ್ಯದ ತಂತಿಗಳಿAದ ಹೊರಡುವ ಸ್ವರಗಳಲ್ಲೇ ಸಮಾಜದ ಅಂತರ್ ತುಡಿತವನ್ನೂ ಗ್ರಹಿಸಬಲ್ಲ ಸೂಕ್ಷ್ಮಗ್ರಾಹಿ ಕಲಾವಿದರಾಗಿದ್ದರು. ಬಾಹ್ಯ ಸಮಾಜದ ನಿತ್ಯ ತಲ್ಲಣಗಳಿಗೆ, ಲೌಕಿಕ ಬದುಕಿನ ನೆಲೆಗಳನ್ನು ಭಂಗಗೊಳಿಸುವ ತುಮುಲಗಳಿಗೆ, ಬಾಹ್ಯ ಸಮಾಜದ ಸ್ವಾಸ್ಥ್ಯವನ್ನು ಹದಗೆಡಿಸುವ ಘಾತುಕ ವಿದ್ಯಮಾನಗಳಿಗೆ ತಮ್ಮದೇ ಆದ ರೀತಿಯಲ್ಲಿ ಸ್ಪಂದಿಸುತ್ತಲೇ ಇದ್ದ ತಾರಾನಾಥ್ ನಿರ್ಭಿಡೆಯಿಂದ ತಮ್ಮ ಅಭಿವ್ಯಕ್ತಿಯನ್ನು ದಾಖಲಿಸುತ್ತಿದ್ದುದು ಆದರ್ಶಪ್ರಾಯ ನಡೆ.


      ಅರಸಿ ಬಂದ ಪ್ರಶಸ್ತಿ ಸಮ್ಮಾನಗಳನ್ನು ನಿಸ್ಪೃಹತೆಯಿಂದ ಸ್ವೀಕರಿಸುತ್ತಲೇ ಸ್ಥಾಪಿತ ವ್ಯವಸ್ಥೆಯ ನಿರೂಪಣೆಗಳನ್ನು ಸಮಯೋಚಿತವಾಗಿ ನಿರಾಕರಿಸುತ್ತಾ ಬಂದ ತಾರಾನಾಥ್ ಯಾವುದೇ ಹಂತದಲ್ಲೂ ಆಳ್ವಿಕೆಯ ವಾರಸುದಾರರ ಮುಂದೆ ಬಾಗಿದವರಲ್ಲ. ತಾವು ನಂಬಿ ಬದುಕಿದ ಗಾಯನಲೋಕದ ಗಾನಸರಸ್ವತಿಗೆ ಗೌರವ ತೋರುತ್ತಲೇ ತಮ್ಮ ಸುತ್ತಲಿನ ಲೋಕದ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬಂದಿದ್ದ ತಾರಾನಾಥ್ ಸಾಮಾಜಿಕ ವೇದಿಕೆಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದಿದ್ದರೂ, ಅನ್ಯಾಯ, ಅಮಾನುಷತೆ, ಶೋಷಣೆ, ದೌರ್ಜನ್ಯ ಮತ್ತು ದಬ್ಬಾಳಿಕೆಗಳ ವಿರುದ್ಧ ತಮ್ಮ ಧ್ವನಿಯನ್ನು ದಾಖಲಿಸುತ್ತಿದ್ದರು. ಅವರ ಸಾಮಾಜಿಕ ಕಳಕಳಿ, ಕಾಳಜಿಗಳು ವ್ಯಕ್ತಿಗತ ನೆಲೆಯಲ್ಲಿ, ಸಾತ್ವಿಕ ಸಿಟ್ಟಿನೊಂದಿಗೆ, ಅಕ್ಷರ ರೂಪದಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಕಳೆದ ಹತ್ತು ವರ್ಷಗಳ ಸಾಂಸ್ಕೃತಿಕ ವಾತಾವರಣದಲ್ಲಿ ಹಿಂದುತ್ವ-ಮತೀಯವಾದದ ವಿರುದ್ಧ ಪ್ರತಿರೋಧಗಳಿಗೆ ದನಿಗೂಡಿಸಿದ ಕೆಲವೇ ಕಲಾವಿದರ ಪೈಕಿ ತಾರಾನಾಥ್ ಸಹ ಒಬ್ಬರು. 


ಸಂಗೀತಮಯ ಜೀವನಪಯಣ


      ಬಾಲ್ಯದಿಂದಲೇ ತಮ್ಮ ತಂದೆ ಪಂಡಿತ್ ತಾರಾನಾಥ್ ಅವರಿಂದ ಪ್ರೇರಿತರಾಗಿ ಸಮನ್ವಯದ ಬದುಕಿನ ಹಾದಿ ಆಯ್ದುಕೊಂಡಿದ್ದ ತಾರಾನಾಥರಿಗೆ ಸಂಗೀತ ಮತ್ತು ಬದುಕು ಪ್ರತ್ಯೇಕವಾಗಿರಲಿಲ್ಲ. ಹಾಗೆಯೇ ಅವರ ವ್ಯಕ್ತಿಗತ ಬದುಕು ಮತ್ತು ಸಮಾಜವೂ ಬೇರೆಯಾಗಿರಲಿಲ್ಲ. 20ನೆಯ ಶತಮಾನದ ಆರಂಭದಲ್ಲೇ ಅಂತರ್ಜಾತಿ ವಿವಾಹವಾಗುವ ಮೂಲಕ ಒಂದು ಔದಾತ್ಯಪೂರ್ಣ ಬದುಕನ್ನು ರೂಪಿಸಿಕೊಂಡಿದ್ದ ತಂದೆ ಪಂಡಿತ್ ತಾರಾನಾಥ್ ಅವರಿಂದಲೇ ಸಂಗೀತ ಪಾಠಗಳನ್ನು ಕಲಿಯಲಾರಂಭಿಸಿದ ರಾಜೀವ್ ತಾರಾನಾಥ್ ಅವರಿಗೆ ಸಾಂಸ್ಕೃತಿಕವಾಗಿ ಮಾರ್ಗದರ್ಶಿಯಾಗಿದ್ದು ಅವರ ತಾಯಿ ಸುಮಿತ್ರಾ ಬಾಯಿ. ತಮ್ಮ ಒಂಬತ್ತನೆ ವಯಸ್ಸಿನಲ್ಲೇ ಮೊದಲ ಸಂಗೀತ ಕಚೇರಿಯನ್ನು ನಡೆಸಿದ್ದ ರಾಜೀವ್ ತಾರಾನಾಥ್ ಎಂಟು ದಶಕಗಳ ಕಾಲ ರಾಗ-ತಾಳ-ಲಯದ ಪ್ರಪಂಚದಲ್ಲೇ ಬದುಕಿನ ಏಳುಬೀಳುಗಳನ್ನು ಕಂಡ ಮಹಾನ್ ಕಲಾವಿದ. 


     ಸಾಹಿತ್ಯದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದರೂ ತಾರಾನಾಥ್ ಅವರನ್ನು ಆಕರ್ಷಿಸಿದ್ದು ಸಂಗೀತದ ಪ್ರಪಂಚ. ಖ್ಯಾತ ಹಿಂದುಸ್ತಾನಿ ಸಂಗೀತಗಾರ ಅಲಿ ಅಕ್ಬರ್ ಖಾನ್ ಅವರ ಶಿಷ್ಯರಾಗಿ ತಮ್ಮ ರಾಗಪಯಣವನ್ನು ಆರಂಭಿಸಿದ ರಾಜೀವ್ ತಾರಾನಾಥ್ 2009ರಲ್ಲಿ ತಮ್ಮ ಗುರುವಿನ ಅಂತಿಮ ಗಳಿಗೆಯವರೆಗೂ ಅವರ ಶಿಷ್ಯರಾಗಿಯೇ ಮುಂದುವರೆದಿದ್ದರು. ಪಂಡಿತ್ ರವಿಶಂಕರ್, ಅನ್ನಪೂರ್ಣಾ ದೇವಿ, ಪಂಡಿತ್ ನಿಖಿಲ್ ಬ್ಯಾನರ್ಜಿ ಹಾಗೂ ಉಸ್ತಾದ್ ಆಶೀಶ್ ಖಾನ್ ಅವರ ಮಾರ್ಗದರ್ಶನದಲ್ಲಿ ಬೆಳೆದುಬಂದ ರಾಜೀವ್ ಸರೋದ್ ಎಂಬ ವಾದ್ಯವನ್ನು ವಿಶ್ವಮಟ್ಟದಲ್ಲಿ ಕೊಂಡೊಯ್ದಿದ್ದೇ ಅಲ್ಲದೆ, ಪ್ರಧಾನವಾಗಿ ಉತ್ತರ ಭಾರತದೊಡನೆ ಗುರುತಿಸಲ್ಪಡುವ ಹಿಂದುಸ್ತಾನಿ ಸಂಗೀತ ಪರಂಪರೆಯನ್ನು ಕರ್ನಾಟಕದ ನೆಲದಿಂದ ಬೆಳೆಸಿದವರು. ಹಾಗೆಯೇ ವೀಣೆ, ಸಿತಾರ್, ಸಾರಂಗಿ ಮೊದಲಾದ ತಂತಿ ವಾದ್ಯಗಳಿಂದ ಭಿನ್ನವಾದ ಅಪರೂಪದ ಸರೋದ್ ವಾದ್ಯವನ್ನು ತಳಮಟ್ಟದ ಸಂಗೀತಪ್ರಿಯರ ನಡುವೆ ಜನಪ್ರಿಯಗೊಳಿಸಿದ ಕೀರ್ತಿ ರಾಜೀವ್ ತಾರಾನಾಥ್ ಅವರಿಗೆ ಸಲ್ಲುತ್ತದೆ. 

ಸಂವೇದನಾಶೀಲ ವ್ಯಕ್ತಿತ್ವ


     ಕಲೆಗಾಗಿ ಕಲೆ ಎಂಬ ಆತ್ಮರತಿಯ ಕೋಶದಿಂದ ಮುಕ್ತವಾಗಿ ತಮ್ಮ ಸಾಮಾಜಿಕ ಅಭಿವ್ಯಕ್ತಿಯನ್ನು ವ್ಯಕ್ತಪಡಿಸುತ್ತಿದ್ದ ರಾಜೀವ್ ತಾರಾನಾಥ್ ಅವರಿಗೆ ಬಾಲ್ಯ ಬದುಕಿನ ವೈಚಾರಿಕತೆಯ ಪರಿಸರವೇ ಸಾಂಸ್ಕೃತಿಕ ಬುನಾದಿಯಾಗಿತ್ತು. ಹಾಗಾಗಿಯೇ ಜಾತಿ ದೌರ್ಜನ್ಯಗಳು, ಅಲ್ಪಸಂಖ್ಯಾತರ ಮೇಲೆ ವಿಶೇಷವಾಗಿ ಮುಸ್ಲಿಂ ಸಮುದಾಯದ ಮೇಲೆ ನಡೆಯುತ್ತಿದ್ದ ಹಲ್ಲೆಗಳು, ದಲಿತರ ಮೇಲೆ ನಡೆಯುತ್ತಿದ್ದ ದೌರ್ಜನ್ಯಗಳು, ಅಸ್ಪೃಶ್ಯತೆ, ಕೋಮು ಗಲಭೆಗಳು ಇವೆಲ್ಲವೂ ಈ ಸಂಗೀತೋಪಾಸಕನ ಮನಸ್ಸನ್ನು ವಿಚಲಿತಗೊಳಿಸುತ್ತಿತ್ತು. ಮುಕ್ತ ಆಲೋಚನೆ ಹಾಗೂ ಸಮ ಸಮಾಜದ ಕಲ್ಪನೆಗಳನ್ನು ಪದೇ ಪದೇ ಘಾಸಿಗೊಳಿಸುತ್ತಲೇ ಇದ್ದ ಫ್ಯಾಸಿಸ್ಟ್ ಆಕ್ರಮಣಗಳ ವಿರುದ್ಧ ತಾರಾನಾಥ್ ನಿಷ್ಠುರವಾಗಿಯೇ ಮಾತನಾಡುತ್ತಿದ್ದುದುಂಟು. 


     ತಮ್ಮ ನಿಷ್ಠುರ ನುಡಿಗಳನ್ನು ಸಾರ್ವಜನಿಕವಾಗಿ ಹೇಳಲೂ ಎಂದೂ ಹಿಂಜರಿಯದಿದ್ದ ರಾಜೀವ್ ತಾರಾನಾಥ್ ಹಲವು ಸಂದರ್ಭಗಳಲ್ಲಿ ಬ್ರಾಹ್ಮಣದ್ವೇಷಿ ಎಂಬ ಆರೋಪಕ್ಕೂ ತುತ್ತಾಗಿದ್ದರು. ತಾನು ಬ್ರಾಹ್ಮಣ್ಯ ಮತ್ತು ಸನಾತನ ಧರ್ಮವನ್ನು ಟೀಕಿಸುತ್ತೇನೆಯೇ ಹೊರತು ಬ್ರಾಹ್ಮಣರನ್ನಲ್ಲ ಎಂದು ಹೇಳುತ್ತಿದ್ದ ತಾರಾನಾಥ್ ಭಾರತದ ಬಹುಸಂಸ್ಕೃತಿಯನ್ನು ಎತ್ತಿಹಿಡಿಯಲು ಬಯಸಿದವರು. ಬಹುತ್ವ ಭಾರತೀಯ ಸಮಾಜ ಮತ್ತು ಸಂಸ್ಕೃತಿಯ ಜೀವಾಳ ಎಂದೇ ಭಾವಿಸಿದ್ದ ತಾರಾನಾಥ್ ಒಂದು ದೇಶ-ಒಂದು ಧರ್ಮ ಎಂಬ ಸೂತ್ರವನ್ನು ಖಂಡಿಸುತ್ತಿದ್ದರು. ಈ ಕಾರಣಕ್ಕಾಗಿ ಸಾಂಪ್ರದಾಯಿಕ ಶಕ್ತಿಗಳಿಂದ ನಿಂದನೆಗೊಳಗಾಗಿದ್ದೂ ಉಂಟು. ಕೆಲವು ವರ್ಷಗಳ ಹಿಂದೆ ಪ್ರತಿರೋಧದ ಧ್ವನಿಗಳೆಲ್ಲವನ್ನೂ ʼ ಅರ್ಬನ್ ನಕ್ಸಲ್ ʼ ಎಂಬ ಪದದ ಮೂಲಕ ವಿವೇಚಿಸುವ ಬಿಜೆಪಿಯ ಹಿಂದುತ್ವ ರಾಜಕಾರಣವು ತಾರಾನಾಥ್ ಅವರನ್ನೂ ವಿಚಲಿತಗೊಳಿಸಿತ್ತು. ಸಾರ್ವಜನಿಕವಾಗಿ ನಿಂತು ನಾನೂ ಅರ್ಬಲ್ ನಕ್ಸಲ್ ಎಂದು ಘೋಷಿಸದಿದ್ದರೂ, ತಮ್ಮೊಳಗಿನ ಆಕ್ರೋಶವನ್ನು ಕೆಲವು ಸಂದರ್ಶನಗಳಲ್ಲಿ ಹೊರಹಾಕಿದ್ದರು.


     ಗೋದ್ರಾ ಘಟನೆ, ಅನಂತರ ನಡೆದ ಸಾಮೂಹಿಕ ಹತ್ಯಾಕಾಂಡ ಅದರಲ್ಲಿ ನಡೆದಂತಹ ಭೀಕರ ಕೊಲೆಗಳು, ಅತ್ಯಾಚಾರಗಳು ರಾಜೀವ್ ತಾರಾನಾಥ್ ಅವರನ್ನು ಬಹಳವಾಗಿ ಕಾಡಿತ್ತು. ಅಷ್ಟೇ ಪ್ರಖರವಾಗಿ ಈ ಘಟನೆಗಳನ್ನು ಖಂಡಿಸಿದ್ದ ಈ ಕಲಾವಿದರು, ಈ ಘಟನೆಗಳಿಂದ ಹಿಂದೂಗಳಿಗೇ ಕಳಂಕ ಅಂಟಿಕೊಂಡಿತು ಎಂದು ವಿಷಾಧಿಸಿದ್ದರು. ಕೇಂದ್ರ ಬಿಜೆಪಿ ಸರ್ಕಾರ ಅರ್ಬನ್ ನಕ್ಸಲರ ಆರೋಪ ಹೊರಿಸಿ ಹಲವರನ್ನು ಬಂಧಿಸಿದಾಗ ತಾರಾನಾಥ್ “ ಅರ್ಬನ್ ನಕ್ಸಲರು ಇದೊಂದು ಕಾರಣವೋ ? ನೆಪವೋ ? ಕೋರ್ಟು ಕೇಳಿತು ನೀವು ಯಾವ ಕಾರಣಕ್ಕಾಗಿ ಬಂಧಿಸಿದಿರಿ ಅಂತ. ಕಾರಣವೇ ಇರಲಿಲ್ಲ. ಜೈಲಿಗೆ ಹಾಕಬೇಡಿ ಮನೆಯಲ್ಲೇ ಇಡಿ ಎಂದು ಕೋರ್ಟ್ ಹೇಳಿತು. ನಮ್ಮಲ್ಲಿ ಇಲ್ಲಿಯವರೆಗೆ ನ್ಯಾಯಸ್ಥಾನಗಳು ಕೊಳೆಯಾಗಿಲ್ಲ ಅನ್ನೋದೇ ಸಮಾಧಾನ. ತಮ್ಮ ವಿವೇಚನೆಯನ್ನು ಉಪಯೋಗಿಸ್ತವೆ. ಈ ಜನರ ದಸ್ತಗಿರಿ, ಬಂಧನ ನೋಡಿ ನನಗೇನೂ ಆಶ್ಚರ್ಯವಾಗಿಲ್ಲ. ಈಗ ದೇಶವನ್ನು ಆಳ್ತಾ ಇರೋದು ತರಹೇವಾರಿ ದ್ವೇಷ, ಪ್ರತಿಯೊಂದು ಮಟ್ಟದಲ್ಲೂ ದ್ವೇಷ, ಕ್ರೌರ್ಯ, ಸಾಂಘಿಕ ಕ್ರೌರ್ಯ ” ಎಂದು ತಮ್ಮ ಆಕ್ರೋಶವನ್ನು ಹೊರಗೆಡಹಿದ್ದರು. ಇದನ್ನು ಲೇಖಕಿ ಸುಮಂಗಲ ಅವರು ತಮ್ಮ ಬರಹದಲ್ಲಿ ದಾಖಲಿಸುತ್ತಾರೆ. ( ಸುಮಂಗಲ ; ಪ್ರಜಾವಾಣಿ 12 ಜೂನ್ 2024) 

ಪರಂಪರೆಯ ಹಾದಿಯಲ್ಲಿ


      ಸಂಗೀತ ಕ್ಷೇತ್ರದಲ್ಲಿ ಸಹಜವಾಗಿಯೇ ರೂಢಿಗತವಾಗಿ ಬಂದಿರುವ ಗುರು-ಶಿಷ್ಯ ಪರಂಪರೆಗೆ ಕೊನೆಯವರೆಗೂ ಬದ್ಧರಾಗಿದ್ದ ರಾಜೀವ್ ತಾರಾನಾಥ್ ತಮ್ಮ ಗುರುಗಳನ್ನು ಗೌರವಿಸುತ್ತಾ ಪೂಜ್ಯ ಭಾವದಿಂದ ಕಾಣುತ್ತಿದ್ದ ಹಾಗೆಯೇ ಕಿರಿಯ ಕಲಾವಿದರನ್ನು, ಶಿಷ್ಯ ವೃಂದವನ್ನೂ ಪೋಷಿಸುತ್ತಿದ್ದರು. ಇದು ಯಾವುದೇ ಮಹಾನ್ ಕಲಾಕಾರನಲ್ಲಿರಬೇಕಾದ ಸದ್ಗುಣ. ರಾಜೀವ್ ತಾರಾನಾಥ್ ಇದನ್ನು ಕೊನೆಯವರೆಗೂ ಪಾಲಿಸಿಕೊಂಡುಬಂದಿದ್ದರು. ಹಾಗೆಯೇ ಸ್ವರ-ಸಂಗೀತ ಮತ್ತು ಭಾಷೆಯ ನಡುವಿನ ಅವಿನಾಭಾವ ಸಂಬಂಧದ ಬಗ್ಗೆಯೂ ಅಭಿಮಾನದಿಂದ ಮಾತನಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ಬಳಸಲಾಗುತ್ತಿರುವ ಭಾಷಾ ವೈಖರಿಯ ಬಗ್ಗೆಯೂ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದರು. 1940ರ ದಶಕದ ಹಿಂದಿ ಚಿತ್ರರಂಗದ ಮೇರು ಕಲಾವಿದರಾದ ಕುಂದನ್ ಲಾಲ್ ಸೈಗಲ್, ಮೊಹಮ್ಮದ್ ಅವರ ಅಭಿಮಾನಿಯಾಗಿದ್ದ ತಾರಾನಾಥ್ ಅಂತಿಮವಾಗಿ ಆಶ್ರಯಿಸಿದ್ದು ಹಿಂದುಸ್ತಾನಿ ಸಂಗೀತವನ್ನು. ಅದರಲ್ಲೂ ವಿಶೇಷವಾಗಿದ್ದ ಸರೋದ್ ವಾದನವನ್ನು.


    ಪ್ಯಾರಿಸ್, ಸಿಡ್ನಿ, ಜರ್ಮನಿ, ಕೆನಡಾ, ಯೂರೋಪ್, ಕ್ಯಾಲಿಫೋರ್ನಿಯಾ, ಆಸ್ಟ್ರೇಲಿಯಾ, ಅಮೆರಿಕಾ ಮೊದಲಾದ ಹಲವಾರು ಹೊರದೇಶಗಳಲ್ಲಿ ತಮ್ಮ ಕಚೇರಿಗಳನ್ನು ನೀಡುವ ಮೂಲಕ ಸರೋದ್ ವಾದನವನ್ನು ಜಗದ್ವಿಖ್ಯಾತಗೊಳಿಸಿದ್ದ ರಾಜೀವ್ ತಾರಾನಾಥ್ ಅವರಿಗೆ ಅಮೆರಿಕದಲ್ಲಿ ಬಹುದೊಡ್ಡ ಶಿಷ್ಯವೃಂದವೇ ಇದೆ. ಸಂಗೀತದಲ್ಲಿ ಒಂದೇ ವಾದ್ಯವನ್ನು ಆಶ್ರಯಿಸಿದರೂ ರಾಜೀವ್ ತಾರಾನಾಥ್ ಭಾಷೆಯ ನೆಲೆಯಲ್ಲಿ ಬಹುಭಾಷಾ ಪ್ರವೀಣರಾಗಿದ್ದರು. ಸಂಸ್ಕೃತ, ಉರ್ದು, ಹಿಂದಿ, ಕನ್ನಡ, ಕೊಂಕಣಿ, ತಮಿಳು, ಬಂಗಾಳಿ, ತೆಲುಗು, ಇಂಗ್ಲಿಷ್ ಹೀಗೆ ಹಲವು ಭಾಷೆಗಳಲ್ಲಿ ಸಂವಹಿಸುತ್ತಿದ್ದ ರಾಜೀವ್ ತಾರಾನಾಥ್ ಹೆಚ್ಚಾಗಿ ಮಾತನಾಡುತ್ತಿದ್ದುದು ತಮ್ಮ ಸರೋದ್ ತಂತಿಗಳ ಮುಖಾಂತರವೇ. ಸಾಹಿತ್ಯದಲ್ಲೂ ಅಗಾಧ ಪಾಂಡಿತ್ಯ ಹೊಂದಿದ್ದ ತಾರಾನಾಥ್ ಗಂಭೀರ ಸಾಹಿತ್ಯ ಓದುಗರೂ ಆಗಿದ್ದರು. ಭಾರತದ ಪುರಾಣ ದರ್ಶನಗಳಷ್ಟೇ ಅಲ್ಲದೆ ಷೇಕ್ಸ್ಪಿಯರ್, ಎಲಿಯಟ್, ಬರ್ಟ್ರಾಂಡ್ ರಸೆಲ್ ಮುಂತಾದ ಜಗದ್ವಿಖ್ಯಾತ ಸಾಹಿತಿಗಳನ್ನು ತಾರಾನಾಥ್ ಅಧ್ಯಯನ ಮಾಡಿದ್ದರು.


       ಕನ್ನಡ ಚಿತ್ರರಂಗದಲ್ಲೂ ತಮ್ಮ ಛಾಪು ಮೂಡಿಸಿದ್ದ ತಾರಾನಾಥ್ ಸಂಸ್ಕಾರ, ಪಲ್ಲವಿ, ಖಂಡವಿದೆಕೋ ಮಾಂಸವಿದೆಕೋ, ಅನುರೂಪ ಮುಂತಾದ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದರು. ಮಳಯಾಳಿ ಭಾಷೆಯ ಕಾಂಚನ ಸೀತಾ ಚಿತ್ರಕ್ಕೂ ಸಂಗೀತ ನೀಡಿದ್ದರು.ಕಲೆ-ಸಂಗೀತ-ಸಾಹಿತ್ಯದೊಡನೆ ಅವಿನಾಭಾವ ಸಂಬಂಧ ಹೊಂದಿರುವ ರಂಗಭೂಮಿಯೂ ತಾರಾನಾಥ್ ಅವರನ್ನು ಆಕರ್ಷಿಸಿತ್ತು. ಕೆಲವು ನಾಟಕಗಳಿಗೂ ಸಂಗೀತ ನೀಡಿದ್ದರು. ಸಾಹಿತ್ಯ-ಸಂಗೀತ-ರಂಗಭೂಮಿ ಈ ಮೂರೂ ವಲಯಗಳಲ್ಲಿ ತಮ್ಮ ಪ್ರಭಾವವನ್ನು ವಿಸ್ತರಿಸಿದ್ದ ರಾಜೀವ್ ತಾರಾನಾಥ್ , ಜನಸಾಮಾನ್ಯರ ನಡುವೆ ಅಷ್ಟೇನೂ ಪ್ರಚಲಿತವಾಗಿಲ್ಲದ ಸರೋದ್ ಎಂಬ ವಾದ್ಯವನ್ನು ಜಗದ್ವಿಖ್ಯಾತಗೊಳಿಸಿದ್ದು, ಅದಕ್ಕೆ ಕರ್ನಾಟಕವನ್ನು ಕರ್ಮಭೂಮಿಯನ್ನಾಗಿ ಆಯ್ದುಕೊಂಡಿದ್ದು ಕನ್ನಡಿಗರ ಸೌಭಾಗ್ಯ ಎಂದೇ ಹೇಳಬಹುದು.