ಹೆಡ್‌ ಬುಷ್‌ ನಂತೆ ʼಕಾಂತಾರʼ ಕ್ಕೂ ಮರು ಚಿಂತನೆಗೆ ಕರೆ ಕೊಡುತ್ತೀರಾ ಸುನಿಲ್‌ ಕುಮಾರ್‌

ದಿನೇಶ್ ಅಮಿನ್ ಮಟ್ಟು

ಹೆಡ್‌ ಬುಷ್‌ ನಂತೆ ʼಕಾಂತಾರʼ ಕ್ಕೂ ಮರು ಚಿಂತನೆಗೆ  ಕರೆ ಕೊಡುತ್ತೀರಾ  ಸುನಿಲ್‌ ಕುಮಾರ್‌

ಹೆಡ್‌ ಬುಷ್‌ ನಂತೆ ʼಕಾಂತಾರʼ ಕ್ಕೂ ಮರು ಚಿಂತನೆಗೆ

ಕರೆ ಕೊಡುತ್ತೀರಾ ಸುನಿಲ್‌ ಕುಮಾರ್‌

-ದಿನೇಶ್ ಅಮಿನ್ ಮಟ್ಟು

ಹಿರಿಯ ಪತ್ರಕರ್ತರು

ʼಹೆಡ್ ಬುಷ್ʼ ಸಿನಿಮಾದಲ್ಲಿ  ನಮ್ಮ ಜನಪದ ಕಲೆಯಾದ ವೀರಗಾಸೆಗೆ ಅಪಮಾನವಾಗಿದೆ ಎಂಬ ಆರೋಪದ ಬಗ್ಗೆ ನಮ್ಮ   ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್ ಅವರು ವ್ಯಕ್ತಪಡಿಸಿದ ಕಾಳಜಿ ಅಭಿನಂದನಾರ್ಹ.

ಸಚಿವರ ಟ್ವೀಟ್ ನೋಡಿ ಸಿನೆಮಾವನ್ನು ಸಿನೆಮಾವಾಗಿಯೇ ನೋಡಬೇಕು‌ ಎನ್ನುವ ನನ್ನ ಅಭಿಪ್ರಾಯವನ್ನು‌ ಪುನರ್ ಪರಿಶೀಲನೆಗೆ ಒಡ್ಡಿದ್ದೇನೆ.

  'ಕಾಂತಾರ' ಚಿತ್ರ ನೋಡಿದ ಮುಂಬೈನ ನನ್ನ ಗೆಳೆಯನೊಬ್ಬ ಇತ್ತೀಚೆಗೆ ತನ್ನ ಮನಸ್ಸಲ್ಲಿ ಮೂಡಿರುವ ಪ್ರಶ್ನೆಗಳನ್ನು ನನ್ನಲ್ಲಿ ಹಂಚಿಕೊಂಡಿದ್ದ. ನನ್ನ ಅರಿವಿನ ಮಿತಿಯಲ್ಲಿ ಆ ಪ್ರಶ್ನೆಗಳಿಗೆ ನಾನು ಉತ್ತರಿಸಿದ್ದೆ.

ಆ ಪ್ರಶ್ನೋತ್ತರ ಇಲ್ಲಿದೆ:

ಪಂಜುರ್ಲಿ-ಗುಳಿಗ ಭೂತಗಳು ಮನುಷ್ಯನ ಜೀವ ತೆಗೆಯುವಷ್ಟು ವಯಲೆಂಟ್ ಭೂತವೇ? ಎನ್ನುವುದು ಗೆಳೆಯನ ಮೊದಲ ಪ್ರಶ್ನೆ.

“  ಉಗ್ರ ಸ್ವರೂಪದ ಭೂತಗಳು ಇರುವುದು‌ ನಿಜ. ಆದರೆ  ನನಗೆ ತಿಳಿದ ಹಾಗೆ ದೈವ ಮೈಮೇಲೆ ಬಂದ ನಂತರ ಜೀವ ತೆಗೆದ ಉದಾಹರಣೆಗಳಿಲ್ಲ ಇಲ್ಲ ಎಂದೆ. ತಪ್ಪು ಮಾಡಿದವರು ಭೂತಗಳ ಭಯದಿಂದ ಸತ್ತ ಉದಾಹರಣೆಗಳಿವೆ.  ಪಂಜುರ್ಲಿ-ಗುಳಿಗ ಮಾತ್ರವಲ್ಲ ಸಾವಿರಕ್ಕೂ ಮಿಕ್ಕಿ ಭೂತಗಳಿವೆಯಲ್ಲಾ, ಅವು ಯಾವುದೂ ಕೂಡಾ ಭೂತದ ವೇಷದಲ್ಲಿದ್ದಾಗ ಮನುಷ್ಯನ ಕಿರುಬೆರಳಿಗೆ ಕೂಡಾ ಬೇನೆ ಮಾಡಿಲ್ಲ. ಪಾಡ್ದನಗಳಲ್ಲಿ ಹೇಳುವಂತೆ ಅದು ತಾಯಿ ರೀತಿ ಸಾಕುತ್ತಾ, ಮಾವನಂತೆ ರಕ್ಷಿಸುತ್ತಾ ಬಂದಿವೆಯೇ ಹೊರತು ಯಾರನ್ನೂ ಸಾಯಿಸಿಲ್ಲ” ಎಂದೆ.

ಹಾಗಿದ್ದರೆ ಕಾಂತಾರ ಚಿತ್ರದಲ್ಲಿ ತೋರಿಸಿರುವುದು ದೈವಕ್ಕೆ ಮಾಡಿದ ಅಪಚಾರವಲ್ಲವೇ? ಎಂದು ಆತ ಕೇಳಿದ.

"ಭೂತ-ದೈವಗಳು ಕಟ್ಟು-ಕ್ರಮ ಇಲ್ಲದೆ ಇದ್ದಕ್ಕಿದ್ದ ಹಾಗೆ ಯಾರ ಮೈಮೇಲೆ ಆವಾಹನೆ ಬರುತ್ತಾ? ಎನ್ನುವುದು ಗೆಳೆಯನ ಎರಡನೇ ಪ್ರಶ್ನೆ.

 

“ ಹಾಗೆಲ್ಲ ಎಲ್ಲರೂ ಭೂತ-ದೈವಗಳ ಪಾತ್ರಿಗಳಾಗಲು ಸಾಧ್ಯವಿಲ್ಲ. ಅವರಿಗೆ ಅಧಿಕೃತವಾಗಿ ಊರ ಸಮಸ್ತರು ಸೇರಿ ಎಣ್ಣೆಬೂಳ್ಯ ಕೊಡಬೇಕು. ಅದರ ನಂತರ ಅವನು ಕೋಲದ ಚಪ್ಪರದಡಿ ನಿಂತಾಗ ಮಧ್ಯಸ್ತಗಾರರು ದೈವದ ಇತಿಹಾಸವನ್ನು ಹೇಳಿ ಪಾತ್ರಿಯ ಮೈಮೇಲೆ ದೈವ ಬರುವಂತೆ ಎಲ್ಲರ ಜೊತೆ ಪ್ರಾರ್ಥಿಸುತ್ತಾರೆ. ಹಾಗೆ ಹೀಗೆ ಯಾರೋ ಬಿದ್ದಲ್ಲಿಂದ ಎದ್ದು ಭೂತ ಮೈಮೇಲೆ ಬಂದಿದೆ ಎಂದು ಹೇಳುವುದು ಸಂಪ್ರದಾಯಕ್ಕೆ ವಿರುದ್ದವಾಗಿರುವುದು. ಹಾಗೆ ಸಿಕ್ಕಸಿಕ್ಕವರ ಮೈಮೇಲೆ ಬರುವುದು ಸತ್ತು ಹೋದ ಸಂಬಂಧಿಕರ ಕುಲೆಗಳು ಮಾತ್ರ” ಎಂದೆ.

ಹಾಗಿದ್ದರೆ   ಗಾಯಗೊಂಡು ಬಿದ್ದಿರುವ ಶಿವನ ಮೈಮೇಲೆ ಗುಳಿಗ ಬಂದಿರುವುದು ಅಪಚಾರ ಅಲ್ವಾ ಎಂದು ಗೆಳೆಯ ಕೇಳಿದ.

 ‘” ಭೂತ ಕಟ್ಟುವವರು ಎಂದಾದರೂ ವೇಷ ಹಾಕಿದ ನಂತರ ಸ್ವಾರ್ಥಿಗಳಾಗಿ ನಡೆದುಕೊಂಡದ್ದು, ಜನರ ನಂಬಿಕೆಯನ್ನು ದುರುಪಯೋಗ ಮಾಡಿಕೊಂಡಿದ್ದು ಇದೆಯೇ? ಎನ್ನುವುದು ಆತನ ಇನ್ನೊಂದು ಪ್ರಶ್ನೆ.

 “ಭೂತಗಳ ಕತೆಯಲ್ಲಿ ಇಂತಹ ಸೇಡು ತೀರಿಸಿಕೊಳ್ಳುವ ಘಟನಾವಳಿಗಳು ಇವೆ. ಆದರೆ ವೇಷ ಹಾಕುವ ನಲಿಕೆಯವರು, ಪಂಬದರು, ಪಾಣಾರ್ ಗಳು ತಮ್ಮ ಸ್ವಾರ್ಥಕ್ಕಾಗಿ ಭೂತಗಳನ್ನು ದುರುಪಯೋಗ ಮಾಡಿಕೊಂಡ ಉದಾಹರಣೆಗಳು ಕಡಿಮೆ,‌ ಆ ರೀತಿ ನಡೆದುಕೊಂಡವರಿಗೆ ಶಿಕ್ಷೆಯಾಗುತ್ತದೆ ಎಂಬ ನಂಬಿಕೆ ಇದೆ. ಅವರು ವೇಷ ಹಾಕಿದ ನಂತರ ದೈವಗಳಾಗಿ ನಡೆದುಕೊಳ್ಳುತ್ತಾರೆಯೇ ಹೊರತು ಪಾತ್ರಿಗಳಾಗಿ ಅಲ್ಲ” ಎಂದೆ.

 ಆದರೆ ಕಾಂತಾರ ಚಿತ್ರದಲ್ಲಿ ದೈವ ನರ್ತಕ ತಮ್ಮ ಪರಿವಾರದ ಭೂಮಿಯ ರಕ್ಷಣೆಗಾಗಿ ಗುಳಿಗ ಭೂತದ ಆವಾಹನೆಯಲ್ಲಿ ಸೇಡು ತೀರಿಸಿಕೊಳ್ಳುವ ಘಟನೆ ಇದೆ ಇದು ಕೂಡಾ ಜನಾಂಗಕ್ಕೆ ಮಾಡಿರುವ ಅಪಚಾರ ಅಲ್ಲವೇ” ಎಂದು ನನ್ನ ಗೆಳೆಯ ಪ್ರಶ್ನಿಸಿದ.

ಆತನೇ ಮುಂದುವರಿದು  “ ಕಂಬಳವನ್ನು ಜಂಟಲ್ ಮೆನ್ ಗೇಮ್ ಎನ್ನುತ್ತೀರಾ? ಕಾಂತಾರ ಚಿತ್ರದಲ್ಲಿ ವಂಚನೆ, ಹೊಡೆದಾಟ ಇದೆಯಲ್ಲ ಎಂದು ನಾಲ್ಕನೆಯ ಪ್ರಶ್ನೆ ಹಾಕಿದ.

 

“ ಕಂಬಳದ ಜೊತೆ ಕೆಲವೊಂದು ಮೂಡನಂಬಿಕೆಗಳು ಥಳಕು ಹಾಕಿರುವುದು ಮತ್ತು ಅದು ಜಾತಿ ವ್ಯವಸ್ಥೆಯನ್ನು ಪೋಷಿಸುತ್ತಿರುವುದು ನಿಜವಾದರೂ ಅದು ಈಗಲೂ ಜಂಟಲ್ ಮೆನ್ ಗೇಮ್. ಈಗಿನ ರೀತಿಯಲ್ಲಿ ಓಟದ ಸಮಯ ಅಳೆಯಲು ವೈಜ್ಞಾನಿಕವಾದ ವ್ಯವಸ್ಥೆ ಇಲ್ಲದಿದ್ದಾಗಲೂ ಮೋಸ-ವಂಚನೆಗಳು ನಡೆದಿರುವುದು ಮತ್ತು ಅದಕ್ಕಾಗಿ ಹೊಡೆದಾಟಗಳು ನಡೆದದ್ದು ಕಡಿಮೆ. ಇತ್ತೀಚಿನ ವರ್ಷಗಳಲ್ಲಿ ಇಲ್ಲವೇ ಇಲ್ಲ ಎಂದು ಹೇಳಬಹುದು”’ ಎಂದೆ.

 ಹಾಗಿದ್ದರೆ ಇದು ಕಂಬಳ ಕ್ರೀಡೆಯಲ್ಲಿನ ಜಗಳ/ಹೊಡೆದಾಟವೆಲ್ಲ  ಅಪಚಾರ ಅಲ್ಲವೇ?”” ಎಂದು ಗೆಳೆಯ ಕೇಳಿದ.

 ಭೂ ಸುಧಾರಣೆಯ ಫಲಾನುಭವಿಯೂ ಆಗಿರುವ ಗೆಳೆಯ ಕೇಳಿದ   ಕೊನೆಯ ಪ್ರಶ್ನೆ ಜೊತೆ ಉತ್ತರವನ್ನೂ ಹೇಳಿದ್ದ:

“  ನೋಡು ಮಾರಾಯ ನೀನು ಏನೇ ಹೇಳು, ನಮ್ಮೂರಿನ ಭೂಮಾಲೀಕರು, ಉತ್ತರಪ್ರದೇಶ-ಬಿಹಾರದವರ ರೀತಿ ಗುಡಿಸಲುಗಳ ಮುಂದೆ ಕಾಲು ಮೇಲೆ ಕಾವಲು ಹಾಕಿ ಒಕ್ಕಲಿನ ಮನೆಗಳಿಗೆ ಬೆಂಕಿ ಹಚ್ಚುವವರಲ್ಲ, ಅದೂ ಒಂದು ಮಗುವಿಗೂ ಬಂದೂಕಿನಿಂದ ಗುಂಡು ಹಾರಿಸಿ ಕೊಲ್ಲುವಷ್ಟು ನಿರ್ದಯರಲ್ಲವಲ್ಲಾ’ ಎಂದು ಹೇಳಿದ.

 “” ಹೌದು,  ಜಮೀನಿಗೆ ಸಿಕ್ಕಾಪಟ್ಟೆ ಬೆಲೆ ಬಂದಿರುವ ಈ ಕಾಲದಲ್ಲಿ ಭೂಸುಧಾರಣೆ ಜಾರಿಗೆ ತಂದಿದ್ದರೆ ಸ್ವಲ್ಪ ರಕ್ತಪಾತವಾಗುತ್ತಿತ್ತೋ ಏನೋ? ಆ ಕಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶೇಕಡಾ 90ರಷ್ಟು ಧಣಿಗಳು ಬೇರೆ ಜಿಲ್ಲೆಗಳ ಧಣಿಗಳಂತೆ ಭೂ ಸುಧಾರಣೆ ಕಾಯ್ದೆಯ ಕಣ್ಣಿಗೆ ಮಣ್ಣೆರೆಚಿ ನೂರಾರು ಎಕರೆ ಭೂಮಿ ಉಳಿಸಿಕೊಂಡವರಲ್ಲ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಕಡಾ 70-80ರಷ್ಟು ಭೂ ಸುಧಾರಣೆ ಜಾರಿಗೆ ಬಂದಿದೆ. ಭೂಮಾಲೀಕರು ಒಂದು ಹಸುಳೆಯನ್ನು ಕೊಲ್ಲುವಷ್ಟು ಕ್ರೂರಿಗಳಾಗಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ.

ಚಿತ್ರದಲ್ಲಿ ಧಣಿಗಳ ಜಾತಿಯನ್ನು ನೇರವಾಗಿ ಹೇಳದೆ ಇದ್ದರೂ ಆ ಧಣಿ ಬಂಟ ಸಮುದಾಯದವರು ಎಂದು ಊಹಿಸಿಕೊಳ್ಳಬಹುದು. ದಕ್ಷಿಣ ಕನ್ನಡದ ಬಹುತೇಕ ಜಮೀನ್ದಾರರು ಬಂಟ,ಬ್ರಾಹ್ಮಣ ಮತ್ತು ಜೈನರು. ಇವರಲ್ಲಿ ಬಂಟರು ಮಾತ್ರ ಮಾಂಸಹಾರಿಗಳು. ಚಿತ್ರದ ಧಣಿ ಕೋಳಿ-ಹಂದಿಪ್ರಿಯನಾದ ಕಾರಣ ಆತ ಬಂಟ ಜಾತಿಯವನೆಂದು ಹೇಳಬಹುದು ಎಂದು ಹೇಳಿದೆ.

(ಹಾಗಿದ್ದರೆ ಇದು ಬಂಟ ಸಮಾಜಕ್ಕೆ ಮಾಡಿರುವ ಅಪಚಾರ ಅಲ್ವೇ? ಎನ್ನುವುದು ನನ್ನ ಗೆಳೆಯನ ಪ್ರಶ್ನೆ.

ಈ  ಪ್ರಶ್ನೆಗಳಿಗೆ  ತಿಳಿದಮಟ್ಟಿಗೆ ನಾನು ಉತ್ತರಿಸಿದ್ದೇನೆ. ಉಳಿದಂತೆ ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ಉತ್ತರಿಸಬೇಕು.

ಹೆಡ್ ಬುಷ್ ನಲ್ಲಿನ ವೀರಗಾಸೆಯ ಬಗೆಗಿನ ವಿವಾದಕ್ಕೆ ಪ್ರತಿಕ್ರಿಯಿಸುತ್ತಾ ಚಲನಚಿತ್ರವೂ ಸೇರಿದಂತೆ ಯಾವುದೇ ಮನೋರಂಜನಾ ಮಾಧ್ಯಮದಿಂದ ಜಾನಪದ ಸಂಸ್ಕೃತಿಗೆ ಅವಮಾನವಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿರುವ ಸುನೀಲ್ ಕುಮಾರ್ ಅವರೇ, ಕಾಂತಾರ ಚಿತ್ರದಲ್ಲಿಯೂ ತುಳುನಾಡಿನ ಜಾನಪದಕ್ಕೆ ಮಾತ್ರವಲ್ಲ ದೈವಗಳಿಗೂ ಅವಮಾನವಾಗಿದೆ ಎಂಬ ಆರೋಪಗಳಿವೆ. ಈ ಬಗ್ಗೆ ʼ ಕಾಂತಾರಾʼ ಸಿನಿಮಾ ನಿರ್ಮಾಪಕ-ನಿರ್ದೇಶಕರಿಗೂ ಮರು ಚಿಂತನೆ ನಡೆಸಲು ಕರೆ ನೀಡುತ್ತೀರಾ?