ತಳ ಸಮುದಾಯಗಳು ಮಾತನಾಡುತ್ತಿವೆ
The subaltern speaks The Telegraph 27 th may 2023
ಬದಲಾದ ರಾಜಕೀಯ ಸನ್ನಿವೇಶದಲ್ಲಿ ಲೋಹಿಯಾವಾದದ ಪುನರ್ ಪ್ರವೇಶ
ಮೂಲ : ಅಸೀಂ ಅಲಿ
The subaltern speaks The Telegraph 27 th may 2023
ಅನುವಾದ : ಡಾ. ಲಕ್ಷ್ಮಿನಾರಾಯಣ್
ನಾ ದಿವಾಕರ
ವಿ.ಡಿ. ಸಾವರ್ಕರ್ ನಿಸ್ಸಂದೇಹವಾಗಿ ಹಿಂದೂ ಬಲಪಂಥೀಯರ ಅತ್ಯಂತ ಪ್ರಭಾವಶಾಲಿ ರಾಜಕೀಯ ಚಿಂತಕ. ರೂಸೋ ಅವರನ್ನು ಕ್ರಾಂತಿಯ ನಂತರದ ಫ್ರಾನ್ಸ್ನ ತಾತ್ವಿಕ ಸಂಸ್ಥಾಪಕ ಎಂದು ಪರಿಗಣಿಸಿದರೆ, ಸಾವರ್ಕರ್ ಈಗ 'ನವ ಭಾರತ' ಗಣರಾಜ್ಯದಲ್ಲಿ ಆ ಸ್ಥಾನಮಾನವನ್ನು ಪಡೆದುಕೊಂಡಿದ್ದಾರೆ. ಅವರ ಜನ್ಮದಿನದಂದು ಉದ್ಘಾಟನೆಯಾಗಲಿರುವ ಹೊಸ ಸಂಸತ್ತಿನ ಸ್ಫೂರ್ತಿಗೆ ಮಾರ್ಗದರ್ಶಕರಾಗಿ ಸಾವರ್ಕರ್ ಪರಿಗಣಿಸಲ್ಪಡುತ್ತಾರೆ.
ಆದರೆ ವಿರೋಧ ಪಕ್ಷದ ಕಡೆಯಿಂದ ಅತ್ಯಂತ ಪ್ರಭಾವಶಾಲಿ ರಾಜಕೀಯ ಸಿದ್ಧಾಂತಿ ಯಾರು? ನಿಸ್ಸಂಶಯವಾಗಿ, ಆ ಜಾಗವು ರಾಮ್ ಮನೋಹರ್ ಲೋಹಿಯಾ ಅಥವಾ ಹೆಚ್ಚು ನಿಖರವಾಗಿ ಹೇಳುವುದಾದರೆ ಲೋಹಿಯಾ ಸಮಾಜವಾದಿ ರಾಜಕಾರಣಕ್ಕೆ ಸೇರಿದೆ. ಭಾರತೀಯ ಜನತಾ ಪಕ್ಷದ ಮೇಲ್ಜಾತಿ ನೇತೃತ್ವದ ಮತ್ತು ಮಧ್ಯಮ ವರ್ಗದ ಪ್ರಾಬಲ್ಯದ ವಿರುದ್ಧ ಹಿಂದುಳಿದ ಜಾತಿ-ವರ್ಗದ ಮೈತ್ರಿಕೂಟದ ಹೆಚ್ಚುತ್ತಿರುವ ರಾಜಕೀಯ ಕಾರ್ಯಸಾಧ್ಯತೆಯ ದೃಷ್ಟಿಯಿಂದ ನಾವು ಲೋಹಿಯಾ ರಾಜಕೀಯವನ್ನು ವಿಶಾಲವಾಗಿ, ಗಣನೀಯ ರೀತಿಯಲ್ಲಿ ವ್ಯಾಖ್ಯಾನಿಸಬೇಕಾಗಿದೆ . 50 ವರ್ಷಗಳ ಹಿಂದಿನ ವ್ಯತ್ಯಾಸವೇನೆಂದರೆ, ಲೋಹಿಯಾ ಅವರ ಮಾತಿನಲ್ಲೇ ಹೇಳುವುದಾದರೆ ನೆಹರೂ ಪ್ರಣೀತ "ಪಟ್ಟಭದ್ರ ಸಮಾಜವಾದ" ಹಿಂದೂ ರಾಷ್ಟ್ರೀಯವಾದಿ ʼ ಆಪ್ತ ಬಂಡವಾಳಶಾಹಿ 'ಗೆ ಎಡೆಮಾಡಿಕೊಟ್ಟಿದೆ. ತತ್ಪರಿಣಾಮವಾಗಿ ವಿಭಿನ್ನ ನೆಲೆಗಳ ರಾಜಕೀಯ ನಾಯಕರು ಹೊರಗುಳಿಯಲ್ಲಟ್ಟವರ ಪ್ರತಿ-ಮೈತ್ರಿಕೂಟದ ಕಡೆಗೆ ಹೊರಳುವಂತೆ ಮಾಡಿದೆ.
ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವಿಜಯವನ್ನು ಹಿಂದಿ ಬೆಲ್ಟ್ ಎನ್ನಲಾಗುವ ಉತ್ತರದ ರಾಜ್ಯಗಳ ನೆಲೆಯಲ್ಲಿ ಪಾರಂಪರಿಕ ಲೋಹಿಯಾವಾದಿಗಳ ಮೈತ್ರಿಯ ವಿಜಯ ಎಂದು ಕರೆಯಬಹುದು. ಕಾಂಗ್ರೆಸ್ನ ಚುನಾವಣಾ ಜನಾದೇಶದಲ್ಲಿ ಗಮನಾರ್ಹವಾಗಿ ಕಾಣುವುದೆಂದರೆ ಜಾತಿ-ವರ್ಗಗಳ ಸಮ್ಮಿಲನ. ಹಿಂದುಳಿದ ಅಹಿಂದ ಸಮುದಾಯಗಳು ಮತ್ತು ಕಡಿಮೆ ವಿದ್ಯಾಭ್ಯಾಸ ಹೊಂದಿರುವ ಬಡಜನತೆಯ ಧೃವೀಕರಣವು ಪರಸ್ಪರ ಮೇಳೈಸಿರುವುದನ್ನು ಗುರುತಿಸಬಹುದು.
ಸಹಜವಾಗಿಯೇ.ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ನ ಜನಾದೇಶವು ರಾಜ್ಯ ರಾಜಕಾರಣದ ಪ್ರಗತಿಪರ ಬೇರುಗಳನ್ನು, ವಿಶೇಷವಾಗಿ ಡಿ.ದೇವರಾಜ ಅರಸು ಅವರ ರಾಜಕೀಯ ಪರಂಪರೆಯನ್ನು ಆಧರಿಸಿಯೇ ಮುನ್ನಡೆದಿರುವುದನ್ನು ಸೂಚಿಸುತ್ತದೆ. ಸಾರ್ವಜನಿಕ ವಲಯದಲ್ಲಿ ಹಿಂದೂ ರಾಷ್ಟ್ರೀಯತೆಯು ಸಾಮಾನ್ಯವಾಗಿ ಪ್ರಾಬಲ್ಯವನ್ನು ಹೊಂದಿರುವ ಹಿಂದಿ ವಲಯದಲ್ಲಿ ಇಂತಹ ಪ್ರಗತಿಪರ ಮೈತ್ರಿಕೂಟವನ್ನು ಖಂಡಿತವಾಗಿಯೂ ಊಹಿಸಲು ಸಾಧ್ಯವಿಲ್ಲ.
ಆದರೆ ಅಂತಹ ಅನುಮಾನಗಳು ಆಧಾರರಹಿತವಾಗಲಾರದು ಎನ್ನುವುದು ಒಪ್ಪತಕ್ಕ ವಿಷಯ. 1970ರ ದಶಕದ ಆರಂಭದ ವೇಳೆಗೆ ಲೋಹಿಯಾವಾದಿ ಸಮಾಜವಾದದ ಒಂದು ಸಮಗ್ರ ಚೌಕಟ್ಟಿನ ನೆಲೆಯು ಹಿಂದಿ ವಲಯದಲ್ಲಿ ಕ್ಷೀಣಿಸತೊಡಗಿತ್ತು. 1970ರ ದಶಕದ ಮಧ್ಯಭಾಗದಲ್ಲಿ ಉತ್ತರ ಪ್ರದೇಶದ ಚರಣ್ ಸಿಂಗ್ ಮತ್ತು ಹರ್ಯಾಣದಲ್ಲಿ ದೇವಿಲಾಲ್ ಅವರಂತಹ ನಾಯಕರ ನೇತೃತ್ವದ ಲೋಕದಳ ಪಕ್ಷವು ಪ್ರತಿನಿಧಿಸುತ್ತಿದ್ದ ರೈತ ರಾಜಕಾರಣದ ಪ್ರಬಲ ಪ್ರವಾಹದಲ್ಲಿ ಈ ಕ್ಷೀಣಿಸುತ್ತಿದ್ದ ಸಮಾಜವಾದಿ ಪಾಳಯವನ್ನು ಅಧೀನಗೊಳಿಸಲಾಯಿತು ಅಥವಾ ವಿಲೀನಗೊಳಿಸಲಾಯಿತು. ಈ ಜಾತಿ-ಅಜ್ಞೇಯವಾದಿ ರೈತ ರಾಜಕಾರಣವು ಜಾಟ್ ಮತ್ತು ಯಾದವರ ಪ್ರತಿಸ್ಪರ್ಧಿಯಾದ ಮೇಲ್ಜಾತಿಗಳ ರಾಜಕೀಯವಾಗಿತ್ತು, ಇದರಲ್ಲಿ ಮೇಲ್ಮುಖವಾಗಿ ಚಲಿಸುವ ರೈತರು ಕೇವಲ ಹಳೆಯ ಮೇಲ್ಜಾತಿಯ ಗಣ್ಯರ ಪ್ರಾಬಲ್ಯವನ್ನು ಪಡೆಯಲು ಪ್ರಯತ್ನಿಸಿದರು. 1990ರ ದಶಕದಲ್ಲಿ ಮಂಡಲ್ ನಂತರದ ಹಂತದಲ್ಲಿ ಸಂಕುಚಿತ ಯಾದವ-ಕುರ್ಮಿ ನೇತೃತ್ವದ ಜಾತಿ ಮೈತ್ರಿಕೂಟಗಳಲ್ಲಿ ಸಮಾಜವಾದಿ ಜಾಗ ಮತ್ತಷ್ಟು ಕುಗ್ಗಿ ಹೋಯಿತು.
ಕೇರಳ ಮತ್ತು ತಮಿಳುನಾಡಿನಲ್ಲಿ ಹಿಂದುಳಿದ ವರ್ಗಗಳ ವಿಶಾಲ ಒಕ್ಕೂಟಗಳು ಅಧಿಕಾರವನ್ನು ವಶಪಡಿಸಿಕೊಳ್ಳುವುದು ಮಾತ್ರವಲ್ಲದೆ ರಾಜಕೀಯ ಆರ್ಥಿಕತೆಯನ್ನು ತಮ್ಮ ಘಟಕಗಳ ಪರವಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿರುವಾಗ ಲೋಹಿಯಾ ಅವರ ಸಂಘಟಿತ ಹಿಂದುಳಿದ ವರ್ಗ ರಾಜಕಾರಣವು ಯುಪಿಯಲ್ಲಿ ಏಕೆ ವಿಫಲವಾಯಿತು?
ಮೊದಲನೆಯದಾಗಿ, ಸಾಂಸ್ಕೃತಿಕ ನಿರ್ಬಂಧವಿತ್ತು. ರಾಜಕೀಯ ಶಾಸ್ತ್ರಜ್ಞರಾದ ಪ್ರೇರಣಾ ಸಿಂಗ್ ಅವರು ಉಪರಾಷ್ಟ್ರವಾದದಲ್ಲಿ ಉತ್ತರವನ್ನು ಕಂಡುಕೊಂಡಿದ್ದರು, ಇದು ಪ್ರಗತಿಪರ, ಸ್ಥಳೀಯ ಕ್ಷೇತ್ರವು ಪ್ರತಿಸ್ಪರ್ಧಿ ಮೇಲ್ವರ್ಗದವರಿಗೆ (ಕೇರಳದ ನಾಯರ್‌ಗಳು ಮತ್ತು ಈಳವರು, ಮತ್ತು ತಮಿಳುನಾಡಿನ ಚೆಟ್ಟಿಯಾರ್‌ಗಳು ಮತ್ತು ವೆಲ್ಲಾಲರ್‌ಗಳು) 'ಹೊರಗಿನ' ಮೇಲ್ವರ್ಗದ ಬ್ರಾಹ್ಮಣರ ವಿರುದ್ಧ ಅಂಚಿನಲ್ಲಿರುವವರ ಐಕ್ಯತೆಯ ಒಕ್ಕೂಟಗಳನ್ನು ರಚಿಸಲು ಅವಕಾಶ ಮಾಡಿಕೊಟ್ಟಿತು ಎಂದು ಪ್ರೇರಣಾ ಸಿಂಗ್ ಹೇಳುತ್ತಾರೆ. ಲೋಹಿಯಾ ತಳಸಮುದಾಯಗಳ 'ಹಿಂದಿ' ಮತ್ತು ಮೇಲ್ವರ್ಗಗಳ 'ಇಂಗ್ಲಿಷ್' ನಡುವೆ ಇದೇ ರೀತಿಯ ವಿರೋಧವನ್ನು ವ್ಯಕ್ತಪಡಿಸಲು ಪ್ರಯತ್ನಿಸಿದರೂ, ಮೇಲ್ಜಾತಿ ನೇತೃತ್ವದ ಹಿಂದಿ ಸಾರ್ವಜನಿಕ ವಲಯವು ಹಿಂದೂ ರಾಷ್ಟ್ರೀಯತೆಯು ವಿಕಸನದ ಭೂಮಿಕೆಯಾಗಿ ಪರಿಣಮಿಸಿದ್ದರಿಂದ ಅದು ಅದೇ ರೀತಿಯ ಪರಿಣಾಮವನ್ನು ಬೀರಲಿಲ್ಲ..
ಎರಡನೆಯದಾಗಿ, ರಾಜಕೀಯ ಅರ್ಥಶಾಸ್ತ್ರದ ನಿರ್ಬಂಧಗಳೂ ಇದ್ದವು. ದಕ್ಷಿಣ ಭಾರತದಲ್ಲಿ ಪ್ರತಿಸ್ಪರ್ಧಿಗಳಾಗಿ ಹೊರಹೊಮ್ಮಿದ ಮೇಲ್ವರ್ಗದವರು, ಅಂದರೆ ಮಧ್ಯಮ ರೈತ ಜಾತಿಗಳು, ಸ್ವಾತಂತ್ರ್ಯ ಗಳಿಸುವ ವೇಳೆಗೇ ಕೊಂಚಮಟ್ಟಿಗೆ ಆರ್ಥಿಕ ಬಂಡವಾಳವನ್ನು ಪಡೆದುಕೊಂಡಿದ್ದವು. ಆದ್ದರಿಂದ, ಪ್ರತಿಸ್ಪರ್ಧಿ ಮೇಲ್ವರ್ಗಗಳು ಮಧ್ಯಮ ಜಾತಿಗಳ ಮೇಲ್ವರ್ಗಗಳೊಂದಿಗೆ ವಿಶಾಲವಾದ, ಅಭಿವೃದ್ಧಿ ಪರ ಮೈತ್ರಿಕೂಟಗಳನ್ನು ರಚಿಸಲು ಪ್ರಯತ್ನಿಸಿದರು, ನಗರ ವೃತ್ತಿಪರ ಮತ್ತು ಉದ್ಯಮಶೀಲ ನೆಲೆಯನ್ನು ತುಂಬಲು ಪ್ರಯತ್ನಿಸಿದರು. ಆದರೆ ಬಡಜನತೆ ಸಾಮಾಜಿಕ ಕಲ್ಯಾಣದ ಭೂಮಿಕೆಯಲ್ಲಿ ಸಂಘಟಿತರಾಗಿದ್ದರು. ಉತ್ತರ ಭಾರತದಲ್ಲಿ, ನಗರ ಕೆಂದ್ರಿತ ವೃತ್ತಿಪರ, ಉದ್ಯಮಶೀಲತೆಯ ಚೌಕಟ್ಟುಗಳು ಸಂಖ್ಯೆಯಲ್ಲಿ ಪ್ರಧಾನವಾಗಿರುವ ಮೇಲ್ಜಾತಿಗಳ ಏಕಸ್ವಾಮ್ಯಕ್ಕೆ ಒಳಪಟ್ಟವು ಮೇಲ್ಜಾತಿಗಳ ಪ್ರಾಬಲ್ಯಕ್ಕೆ ನೇರ ಸವಾಲನ್ನು ಒಡ್ಡುವುದಕ್ಕಿಂತ ಕೆಳಜಾತಿಗಳ ಬಡಜನತೆಯ ಮೇಲೆ ಪ್ರಾಬಲ್ಯವನ್ನು ಸ್ಥಾಪಿಸುವುದು ಹೆಚ್ಚು ಪ್ರಯೋಜನಕಾರಿ ಎಂದು ಶ್ರೀಮಂತಿಕೆಯನ್ನು ಗಳಿಸಿದ್ದ ಜಾಟ್ ಮತ್ತು ಯಾದವರ ಮಧ್ಯಮ ಜಾತಿಗಳು ಕಂಡುಕೊಂಡವು.
ಲೋಹಿಯಾ ರಾಜಕಾರಣವು ತಡವಾಗಿ ಪುನರುತ್ಥಾನಗೊಳ್ಳುತ್ತಿದ್ದರೆ, ಬದಲಾದ ರಾಜಕೀಯ ಅರ್ಥವ್ಯವಸ್ಥೆಯು ಪ್ರಬಲ ಮತ್ತು ಪ್ರಬಲವಲ್ಲದ ಹಿಂದುಳಿದ ಮತ್ತು ಅಂಚಿನಲ್ಲಿರುವ ಜಾತಿಗಳ ಆರ್ಥಿಕ ಭವಿಷ್ಯವನ್ನು ಹತ್ತಿಕ್ಕುತ್ತಿದೆ. ಈ ಪ್ರಕ್ರಿಯೆಯು ಕಾರ್ಯಸೂಚಿಯ ರೂಪದಲ್ಲಿ ಕಾಣದೆ ಹೋದರೂ ಅಸಮಾಧಾನಕ್ಕೆ ಎಡೆಮಾಡಿಕೊಟ್ಟಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
ವಾಸ್ತವವಾಗಿ, ಇಂದಿನ ಕಾಂಗ್ರೆಸ್ ಪಕ್ಷವು ನವ-ಲೋಹಿಯಾವಾದಿ ರಚನೆಯಾಗಿ ಪುನರುಜ್ಜೀವನಗೊಂಡಂತೆ ತೋರುತ್ತದೆ. ನಾಲ್ವರು ಕಾಂಗ್ರೆಸ್ ಮುಖ್ಯಮಂತ್ರಿಗಳಲ್ಲಿ ಮೂವರು ಒಬಿಸಿ ಜಾತಿಗೆ ಸೇರಿದವರು, ನಾಲ್ಕನೆಯವರು ಹಾಲು ಮಾರುವವರಾಗಿ ಬಡತನದ ಹಿನ್ನೆಲೆಯಿಂದ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಜಾತಿ ಗಣತಿಗೆ ಒತ್ತಾಯಿಸುವಲ್ಲಿ ಕಾಂಗ್ರೆಸ್ ಮಂಡಲ್ ಪಕ್ಷಗಳೊಂದಿಗೆ ಮುಂಚೂಣಿಯಲ್ಲಿ ನಿಲ್ಲುತ್ತದೆ ಮತ್ತು ಜನಸಂಖ್ಯೆಯ ಪಾಲಿಗೆ ಅನುಗುಣವಾಗಿ ಸಮುದಾಯಗಳ ನಡುವೆ ಆರ್ಥಿಕ ಸಂಪನ್ಮೂಲಗಳ ನ್ಯಾಯೋಚಿತ ವಿಭಜನೆಯ ತತ್ವವನ್ನು ಅನುಮೋದಿಸುತ್ತದೆ. ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಪಕ್ಷದ ಮೂರನೇ ದಲಿತ ಅಧ್ಯಕ್ಷರಾಗಿದ್ದಾರೆ. ಆರ್ಥಿಕ ಅಭಿವೃದ್ಧಿಯ 'ಅದಾನಿ-ಮೋದಿ' ಮಾದರಿಯ ಪರಿಣಾಮವಾಗಿ ಹೊರಗುಳಿಯಲ್ಪಟ್ಟವರ ಆಕ್ರೋಶವು ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಸ್ಪಷ್ಟವಾಗಿ ಗೋಚರಿಸುವಂತಿತ್ತು.
ಆದರೆ ಈ ಸಾಮಾಜಿಕ-ಆರ್ಥಿಕ ಸಂದೇಶವು ರಾಷ್ಟ್ರೀಯವ ಮಟ್ಟದಲ್ಲಿ ಉಪಯುಕ್ತವಾಗುವುದೇ ? ಈ ವಾರದ ಸಿಎಸ್‌ಡಿಎಸ್-ಲೋಕನೀತಿ ರಾಷ್ಟ್ರೀಯ ಸಮೀಕ್ಷೆಯು ಸೂಕ್ಷ್ಮವಾದ ಕೆಲವು ಪ್ರಾಥಮಿಕ ಅಂಶಗಳನ್ನು ಒದಗಿಸುತ್ತದೆ: 41% ಜನರು ರಾಹುಲ್ ಗಾಂಧಿಯನ್ನು ಇಷ್ಟಪಡುತ್ತಾರೆ ಎಂದು ಹೇಳಿಕೊಳ್ಳುತ್ತಾರೆ, ಅದರಲ್ಲಿ 15% ಜನರು ಭಾರತ್ ಜೋಡೋ ಯಾತ್ರೆಯಿಂದಾಗಿ ಈ ಸಂಬಂಧವನ್ನು ಬೆಳೆಸಿಕೊಂಡಿದ್ದಾರೆ ಎಂದು ಹೇಳುತ್ತಾರೆ. ಶೇ.34ರಷ್ಟು ಮಂದಿ ರಾಹುಲ್ ಗಾಂಧಿ ಅವರನ್ನು ಮೋದಿಗೆ ರಾಷ್ಟ್ರೀಯ ಪ್ರತಿಸ್ಪರ್ಧಿ ಎಂದು ಆಯ್ಕೆ ಮಾಡಿದ್ದಾರೆ. ಕಾಂಗ್ರೆಸ್ ಶೇ.29ರಷ್ಟು ಮತಗಳನ್ನು (2014ಕ್ಕೆ ಹೋಲಿಸಿದರೆ ಶೇ.10ರಷ್ಟು ಹೆಚ್ಚುವರಿ) ಪಡೆದಿದ್ದರೆ, ಬಿಜೆಪಿಯ ಮತ ಹಂಚಿಕೆ ಶೇ.39ರಷ್ಟಿದೆ. ಈ ಮತಗಳಲ್ಲಿ ಕೆಲವು ಬಹುಶಃ ಬಹುಜನ ಸಮಾಜ ಪಕ್ಷ ಮತ್ತು ಜನತಾದಳ (ಸೆಕ್ಯುಲರ್) ನಂತಹ ಶಿಥಿಲವಾಗುತ್ತಿರುವ ಪಕ್ಷಗಳಿಂದ ಬಂದಿವೆ; ಇದು ಕಾಂಗ್ರೆಸ್ ಪಕ್ಷದ ಅವಕಾಶಗಳಲ್ಲಿ ಕಂಡುಬರುವ ಅಪರೂಪದ ಚೇತರಿಕೆಯಾಗಿ ಕಾಣುತ್ತದೆ.
ಸಮಾಜಶಾಸ್ತ್ರಜ್ಞ ಸತೇಂದ್ರ ಕುಮಾರ್ ಹೇಳುವಂತೆ, 2021-2022ರ ಬೃಹತ್ ರೈತರ ಆಂದೋಲನವು "ವರ್ಗ, ಜಾತಿ, ಲಿಂಗ, ಧರ್ಮ ಮತ್ತು ಪ್ರದೇಶಗಳ ನಡುವೆ ಹೊಸ ಐಕಮತ್ಯವನ್ನು" ರೂಪಿಸುವ ಮೂಲಕ ಬದಲಾವಣೆಯನ್ನು ಸೂಚಿಸಿತು. ಈ ಆಂದೋಲನವು ಹಿಂದಿ ಬೆಲ್ಟ್ ರಾಜ್ಯಗಳ ಮಧ್ಯಮ ಜಾತಿಯ ರೈತ ಜಾತಿಗಳನ್ನು ದಾಟಿ ದಲಿತ ಶ್ರಮಿಕರತ್ತ ಗಮನಹರಿಸುವಂತೆ ಮಾಡಿತ್ತು. ಮೇಲಾಗಿ ಪ್ರಬಲ ಜಾತಿಗಳ ರೈತಾಪಿಯು ಸುಮಾರು ಒಂದು ದಶಕದಿಂದ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದೆ. ಭಾರತೀಯ ಮಾನವ ಅಭಿವೃದ್ಧಿ ಸಮೀಕ್ಷೆಯ (2012) ದತ್ತಾಂಶವನ್ನು ಬಳಸಿಕೊಂಡು ಕ್ರಿಸ್ಟೋಫ್ ಜಾಫ್ರೆಲೋಟ್ ತೋರಿಸಿರುವಂತೆ, ಜಾಟರು, ಪಟೇಲರು ಮತ್ತು ಮರಾಠರಲ್ಲಿ ಕೆಳಸ್ತರದ ಶೇ 60ರಷ್ಟು ಜನರ ಆದಾಯವು ಕ್ರಮವಾಗಿ ಮೂರು ರಾಜ್ಯಗಳಲ್ಲಿ ಅಷ್ಟೇನೂ ಪ್ರಾಬಲ್ಯ ಇಲ್ಲದ ಒಬಿಸಿಗಳ ಸರಾಸರಿ ಆದಾಯಕ್ಕಿಂತ ತುಂಬಾ ಕಡಿಮೆಯಾಗಿದೆ ಮತ್ತು ಹರಿಯಾಣದ ಜಾಟ್ಗಳನ್ನು ಹೊರತುಪಡಿಸಿದರೆ ದಲಿತರಿಗಿಂತ ಗಣನೀಯವಾಗಿ ಕಡಿಮೆಯಾಗಿದೆ.
ಇದಕ್ಕಿಂತ ಗಮನಾರ್ಹ ಸಂಗತಿಯೆಂದರೆ, ಒಬಿಸಿಗಳು ಮತ್ತು ದಲಿತರು ಶಿಕ್ಷಣ ಮತ್ತು ವೆತನಸಹಿತ ಉದ್ಯೋಗಗಳಲ್ಲಿ ಅವರಿಗೆ ಹೋಲಿಸಿದರೆ ತ್ವರಿತ ಲಾಭಗಳನ್ನು ಗಳಿಸಿದ್ದಾರೆ. ಮೋದಿ ಆಳ್ವಿಕೆಯ ಅವಧಿಯಲ್ಲಿ ಈ ಬಿಕ್ಕಟ್ಟು ಮತ್ತಷ್ಟು ತೀವ್ರತೆ ಪಡೆದುಕೊಂಡಿದ್ದು ಇದನ್ನು ಹೊಸ ಮೀಸಲಾತಿ ಬೇಡಿಕೆಗಳು ಮತ್ತು ಹರಿಯಾಣ ಮತ್ತು ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ಪ್ರಬಲ ಜಾತಿಗಳ ವಿರೋಧದಲ್ಲಿ ಗುರುತಿಸಬಹುದು. ಏತನ್ಮಧ್ಯೆ ಯುಪಿಎ ಆಳ್ವಿಕೆಯ ಅವಧಿಯಲ್ಲಿ ಕಂಡುಬಂದ ಗ್ರಾಮೀಣ ವೇತನ ಬೆಳವಣಿಗೆಯ ಉತ್ಕರ್ಷವು ವಾಸ್ತವಿಕವಾಗಿ ಸ್ಥಗಿತಗೊಂಡಿದೆ. ಜೀನ್ ಡ್ರೇಜ್ ದಾಖಲಿಸಿರುವಂತೆ, 2014-15 ಮತ್ತು 2021-22ರ ನಡುವೆ ನೈಜ ವೇತನದ ಬೆಳವಣಿಗೆಯ ದರವು ಕೃಷಿ ಮತ್ತು ಕೃಷಿಯೇತರ ಕಾರ್ಮಿಕರಿಗೆ ವರ್ಷಕ್ಕೆ ಶೇ 1 ಕ್ಕಿಂತ ಕಡಿಮೆಯಾಗಿದೆ. ಆದ್ದರಿಂದ, ವಿವಿಧ ಒಬಿಸಿ ಗುಂಪುಗಳ ವರ್ಗ ಹಿತಾಸಕ್ತಿಗಳು ನಿಧಾನವಾಗಿ ಒಂದಾಗಬಹುದು, ಇದು ಉತ್ತರ ಪ್ರದೇಶದ ಸಮಾಜವಾದಿ ಪಕ್ಷ-ರಾಷ್ಟ್ರೀಯ ಲೋಕದಳ ಮೈತ್ರಿಕೂಟ ಮತ್ತು ಬಿಹಾರದ ಮಹಾ ಮೈತ್ರಿಕೂಟದಲ್ಲಿ ಕಂಡುಬರುತ್ತದೆ.
ಸಿಎಸ್‌ಡಿಎಸ್ ಸಮೀಕ್ಷೆಯಲ್ಲಿ 2024 ರ ಚುನಾವಣೆ ಇನ್ನೂ ಹೆಚ್ಚು ಸ್ಪರ್ಧಾತ್ಮಕವಾಗಿರುವುದನ್ನು ಸೂಚಿಸುತ್ತದೆ. ಶೇ 43 ರಷ್ಟು ಜನರು ಮೋದಿ ಸರ್ಕಾರಕ್ಕೆ ಮೂರನೇ ಅವಕಾಶವನ್ನು ಬೆಂಬಲಿಸಿದ್ದಾರೆ ಶೇ 38ರಷ್ಟು ಜನರು ವಿರೋಧಿಸಿದ್ದಾರೆ. ಆದರೆ ಈ 38% ಜನರು ಯಾರು ಮತ್ತು ಈ ಅತೃಪ್ತ ಮತದಾರರನ್ನು ಯಾವ ಭೂಮಿಕೆಯಲ್ಲಿ ಒಗ್ಗೂಡಿಸಬಹುದು ಎಂಬ ಪ್ರಶ್ನೆ ಜಟಿಲವಾಗಿದೆ.
ಅದೇ ಸಮೀಕ್ಷೆಯಿಂದ ಇನ್ನೂ ಕೆಲವು ಅಂಕಿಅಂಶಗಳನ್ನು ಪರಿಗಣಿಸುವುದಾದರೆ, ಮೊದಲನೆಯದಾಗಿ, ಕಳೆದ ನಾಲ್ಕು ವರ್ಷಗಳಲ್ಲಿ ತಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿದೆ ಎಂದು ಕೇವಲ ಶೇ 35 ರಷ್ಟು ಜನರು ಹೇಳಿದ್ದಾರೆ. ಎರಡನೆಯದಾಗಿ, 2014 ರಲ್ಲಿ ಲೋಕನೀತಿ ಸಮೀಕ್ಷೆಯಲ್ಲಿ ಕಂಡುಬಂದಂತೆ ಸಂಪನ್ಮೂಲ ಮರುಹಂಚಿಕೆಗಿಂತಲೂ ಬೆಳವಣಿಗೆಯನ್ನು ಬೆಂಬಲಿಸುವ ಮಹತ್ವಾಕಾಂಕ್ಷೆಯ ನವ-ಮಧ್ಯಮ ವರ್ಗದ ಮತದಾರರ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿ, ಇಂದು ಶೇ 57ರಷ್ಟು ಜನರು ಸಬ್ಸಿಡಿಗಳು ಬಡಜನತೆಗೆ ಅತ್ಯಗತ್ಯವೆಂದು ಬೆಂಬಲಿಸುತ್ತಾರೆ. ಮೂರನೆಯದಾಗಿ, ರೈತರ ಸಮಸ್ಯೆಗಳ ಬಗ್ಗೆ ಸರ್ಕಾರ ವಿಫಲವಾಗಿದೆ ಎಂದು ಶೇ 46ರಷ್ಟು ಜನರು ನಂಬುತ್ತಾರೆ, ಶೇ 45ರಷ್ಟು ಜನರು ಭ್ರಷ್ಟಾಚಾರದ ಬಗ್ಗೆ, ಶೇ 57ರಷ್ಟು ಜನರು ಬೆಲೆ ಏರಿಕೆಯ ಬಗ್ಗೆ, ಶೇ 36 ರಷ್ಟು ಜನರು ಸರ್ಕಾರದ ನೀತಿಗಳು ಶ್ರೀಮಂತರಿಗೆ ಮಾತ್ರ ಅನುಕೂಲಕರವಾಗಿದೆ ಎಂದು ನಂಬುತ್ತಾರೆ.
ತಳಮಟ್ಟದಲ್ಲಿ ಗುರುತಿಸಬಹುದಾದ ಅತೃಪ್ತಿಯ ನೆಲೆಯಲ್ಲಿ ಲೋಹಿಯಾವಾದದ ಭೂತವು ಮೋದಿ ಆಡಳಿತದ ಮೇಲೆ ತೂಗಾಡುತ್ತಿದೆ. ಇದನ್ನು ವಿಶ್ವಗುರು ಅಥವಾ ನವ ಭಾರತದ ಆತ್ಮರತಿಯ ನೆಲೆಯಲ್ಲಿ ನಿಂತು ಅಲಕ್ಷಿಸಲಾಗುವುದಿಲ್ಲ.
-೦-೦-೦-