103 ಎಕರೆ ಭೂ ಕಬಳಿಕೆಗೆ ʼಶುಭಂʼ ಹೇಳಿದ ಡಿಸಿ ಶುಭ ಕಲ್ಯಾಣ್
ಮರುಸ್ವಾಧೀನ ಮಾಡಿಕೊಳ್ಳುವಲ್ಲಿ ಯಶಸ್ಸು ಕಂಡರೆ ಇನ್ನೂ ಗ್ರೇಟ್ !!
99% ಲೋಕಲ್
ಕುಚ್ಚಂಗಿ ಪ್ರಸನ್ನ

ತುಮಕೂರು: ನಗರಕ್ಕೆ ಸಮೀಪದಲ್ಲಿರುವ 103 ಎಕರೆಯಷ್ಟು ಬೃಹತ್ ಸರ್ಕಾರಿ ಭೂಮಿಯನ್ನು ಸರ್ಕಾರಕ್ಖೇ ಉಳಿಸಿಕೊಡುವ ಮಹತ್ವದ ದಿಟ್ಟ ನಿರ್ಧಾರವನ್ನು ತುಮಕೂರು ಡಿಸಿ ಶುಭ ಕಲ್ಯಾಣ್ ಕೈಗೊಂಡಿದ್ದಾರೆ. 25 ವರ್ಷಗಳಿಂದ ಡಿಸಿ ಕೋರ್ಟಿನಲ್ಲಿ ಇತ್ಯರ್ಥವಾಗದೇ ಉಳಿದಿದ್ದ ಈ ಪ್ರಕರಣವನ್ನು ಡಿಸಿ ಶುಭ ಕಲ್ಯಾಣ್ ಇದೇ ಏಪ್ರಿಲ್ 24 ರಂದು ತೀರ್ಪು ನೀಡಿ ಮುಕ್ತಾಯಗೊಳಿಸಿರುವುದಲ್ಲದೇ ಈ ಭೂಮಿ ಮುಂದೆಯೂ ಅನ್ಯರ ಪಾಲಾಗದಂತೆ ನೋಡಿಕೊಳ್ಳುವಲ್ಲೂ ಅವರು ಮುತುವರ್ಜಿ ವಹಿಸಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಗೂಳೂರು ಹೋಬಳಿ ಕಲ್ಲುಮಠ ಹಾಗೂ ಕೊಂಡಾಪುರಕ್ಕೆ ಸೇರಿದ ವಿವಿಧ ಸರ್ವೆ ನಂ.ಗಳಲ್ಲಿನ ಒಟ್ಟು 103 ಎಕರೆ 9 ಗುಂಟೆ “ದೇವಾದಾಯ ಇನಾಮತಿ” ಜಮೀನಾಗಿದ್ದರೂ 42ಕ್ಕೂ ಹೆಚ್ಚು ಜನರ ಹೆಸರುಗಳಲ್ಲಿ ದಾಖಲಾಗುತ್ತ ಬಂದಿದ್ದ ಪಹಣಿಗಳಲ್ಲಿ “ಸಾರ್ವಜನಿಕ ಸ್ವತ್ತು “ ಎಂದು ನಮೂದಿಸುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ. ಆದರೆ ವಾಸ್ತವದಲ್ಲಿ ಈ ಬೃಹತ್ ಭೂಮಿಯನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ಸು ಕಾಣಲಿದೆಯೇ ಎಂಬ ಪ್ರಶ್ನೆ ಎಲ್ಲರ ಮುಂದಿದೆ.
ಸುಮಾರು ಅರ್ಧ ಶತಮಾನದ ಇತಿಹಾಸವಿರುವ ಈ ಭೂ ಕಬಳಿಕೆ ಪ್ರಯತ್ನದ ಪ್ರಕರಣದ ಹಿನ್ನೆಲೆ ಹೀಗಿದೆ. ತುಮಕೂರು ನಗರಕ್ಕೆ ಕೇವಲ ಏಳು ಕಿ.ಮೀ ಸಮೀಪವಿರುವ ಗೂಳೂರಿನ ದೊಡ್ಡ ಗಣೇಶ, ವಿಶ್ವ ವಿಖ್ಯಾತ ಶಿಲ್ಪ ಕಲೆಗೆ ಹೆಸರಾದ ಕೈದಾಳ, ಜನಪ್ರಿಯ ಹೆತ್ತೇನಹಳ್ಳಿ ಮಾರಮ್ಮ ಹಾಗೂ ಶೂಲದ ಆಂಜನೇಯ ದೇವಾಲಯಗಳ ನಡುವೆ ಇರುವ ಹೌಸಿಂಗ್ ಬೋರ್ಡ್ ಬಡಾವಣೆ ಹಿಂಭಾಗ ಇರುವ ಕಲ್ಲುಮಠ ಹಾಗೂ ಕೊಂಡಾಪುರದ ಗೂಳೂರು ಛತ್ರ / ಮುಜಾಫರ್ ( ಮುಸಾಫಿರ್ )ಖಾನ ನಿರ್ವಹಣೆಗೆ ಮೀಸಲಾಗಿ ಕಾಯ್ದಿರಿಸಿರುವ ಒಟ್ಟು 103 ಎಕರೆ 9 ಗುಂಟೆ ದೇವದಾಯ ಇನಾಮತಿ ಜಮೀನೇ ಈ ಭೂ ಹಗರಣದ ಕೇಂದ್ರ ಬಿಂದು.
ಗೂಳೂರಿನ ದಿವಂಗತ ಸಿ.ಗೋವಿಂದರಾವ್ ಹಾಗೂ ಅದೇ ಊರಿನ ಇನ್ನಿತರರು 1974ರಲ್ಲಿ ತುಮಕೂರು ತಾಲ್ಲೂಕು, ಗೂಳೂರು ಹೋಬಳಿ, ಕೊಂಡಾಪುರ ಗ್ರಾಮದ ಸ.ನಂ. 3 ಮತ್ತು ಕಲ್ಲುಮಠ ಸ.ನಂ. 13, 17 ಹಾಗೂ 20 ರಲ್ಲಿ ಜಮೀನಿನ ಹಕ್ಕುದಾರಿಕೆ ಕೋರಿ ಭೂಸುಧಾರಣಾ ಕಾಯ್ದೆ 1961ರ ಕಲಂ 48ಎ(1) ರ ಅಡಿಯಲ್ಲಿ ಗೇಣಿ ಅರ್ಜಿಗಳನ್ನು ನಮೂನೆ-7 ರಲ್ಲಿ ತುಮಕೂರು ತಾಲೂಕಿನ ಸೆಕ್ರೆಟರಿ ಮತ್ತು ಸ್ಪೆಷಲ್ ತಹಶೀಲ್ದಾರ್ ಭೂ ಸುಧಾರಣಾ ನ್ಯಾಯಮಂಡಳಿ ಇವರಿಗೆ ಸಲ್ಲಿಸಿ, ಸದರಿ ಜಮೀನುಗಳನ್ನು ತಮಗೆ ಮಂಜೂರು ಮಾಡಬೇಕೆಂದು ಕೋರುತ್ತಾರೆ.

ಹೀಗೆ ಸ್ವೀಕೃತವಾದ ಗೇಣಿ ಅರ್ಜಿಗಳ ಸಂಬಂಧ ಇಂಡೆಕ್ಸ್ ಆಫ್ ಲ್ಯಾಂಡ್ ದಾಖಲೆಗಳನ್ನು ಪರಿಶೀಲಿಸಿದಾಗ ಸದರಿ ಜಮೀನುಗಳು ಕಂದಾಯ ಇಲಾಖಾ ವರ್ಗೀಕರಣದ ಪ್ರಕಾರ “ದೇವದಾಯ ಇನಾಂತಿ" ಜಮೀನಾಗಿದ್ದು ಈ ಜಮೀನುಗಳಿಗೆ ಭೂಸುಧಾರಣಾ ನಿಯಮಗಳು ಅನ್ವಯಿಸುವುದಿಲ್ಲ ಎಂಬುದಾಗಿ ಈ ಎಲ್ಲ ಅರ್ಜಿದಾರರಿಗೆ ತುಮಕೂರು ತಾಲೂಕಿನ ಭೂ ಸುಧಾರಣಾ ನ್ಯಾಯಮಂಡಳಿಯ ಸ್ಪೆಷಲ್ ತಹಸೀಲ್ದಾರ್ ಹಾಗೂ ಸೆಕ್ರೆಟರಿ ಅವರು ದಿನಾಂಕ:06-10-1975ರಂದೇ ಹಿಂಬರಹ ನೀಡಿದ್ದಾರೆ.
ಗೇಣಿ ಅರ್ಜಿದಾರರು ತಮಗೆ ನೀಡಲಾದ ಹಿಂಬರಹಗಳನ್ನು ವಿಶೇಷ ಜಿಲ್ಲಾಧಿಕಾರಿಗಳು ಇನಾಂ ಆಬಾಲಿಷನ್, ಬೆಂಗಳೂರು ಡಿವಿಜನ್, ಬೆಂಗಳೂರು ಇವರಲ್ಲಿ ಮೇಲ್ಮನವಿ ಸಲ್ಲಿಸುತ್ತಾರೆ. ಇವರ ಮೇಲ್ಮನವಿಯ ಪ್ರಕರಣ ಸಂಖ್ಯೆ:INA 03 /MIT 25,26,27/74-75ರಂತೆ ದಾಖಲಿಸಿಕೊಂಡು ದಿನಾಂಕ: 29-06-1976 ರಂದು ಗೇಣಿ ಅರ್ಜಿಗಳ ಬಗ್ಗೆ ನೀಡಲಾದ ಆದೇಶವನ್ನು ಕರ್ನಾಟಕ ಆಡಳಿತ ನ್ಯಾಯಾಧೀಕರಣ, ಬೆಂಗಳೂರು ರವರಲ್ಲಿ ಪ್ರಶ್ನಿಸಿದ್ದು ಪ್ರಕರಣ ಸಂ: ಅಪೀಲು ನಂ 1346/76(IAT) ದಾಖಲಾಗಿರುತ್ತದೆ. ಕರ್ನಾಟಕ ಆಡಳಿತ ನ್ಯಾಯಾಧೀಕರಣವು ದಿನಾಂಕ:08-12-1976 ರಂದು ಆದೇಶ ನೀಡಿ ಸದರಿ ಮನವಿಗಳನ್ನು ಮರು ಪರಿಶೀಲಿಸುವಂತೆ ತುಮಕೂರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುತ್ತದೆ.
ಕರ್ನಾಟಕ ಆಡಳಿತ ನ್ಯಾಯಾಧೀಕರಣದ ಸೂಚನೆ ಮೇರೆಗೆ ತುಮಕೂರು ಜಿಲ್ಲೆಯ ಇನಾಮತಿ ನಿಷೇಧಕ್ಕೆ ಸಂಬಂಧಿಸಿದ ವಿಶೇಷ ಜಿಲ್ಲಾಧಿಕಾರಿ ಪ್ರಕರಣ ಸಂಖ್ಯೆ: QLRM:292,290 ಮತ್ತು 15,77 ಇತ್ಯಾದಿ /79-80 ರಂತೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಕ್ರಮ ಜರುಗಿಸಿ ದಿನಾಂಕ:11-6-1982ರಂದು ಆದೇಶ ಹೊರಡಿಸಿ ಈ ಅರ್ಜಿದಾರರು ಸದರಿ ಭೂಮಿಯ ಸ್ವಾಧೀನದಲ್ಲಿದ್ದಾರೆಯೇ ಇಲ್ಲವೇ ಎಂಬ ಕುರಿತು ಪರಿಶೀಲಿಸುವಂತೆ ಸೂಚಿಸುತ್ತದೆ.

ದಿನಾಂಕ:11-6-1982ರ ಮೇಲ್ಕಂಡ ಆದೇಶವನ್ನು ಪ್ರಶ್ನಿಸಿ (1)ಶ್ರೀ ಸಿ.ಗೋವಿಂದರಾವ್ ಬಿನ್ ಜಿ. ಕೃಷ್ಣರಾವ್ ಮತ್ತು ವಾರಸುದಾರರು,(2) ಶ್ರೀ ಎಸ್. ಬಿ. ಸೇನ್ ಬಿನ್ ಸಿ.ಎಸ್.ಗಿರಿ ಮತ್ತು (3) ಶ್ರೀ ಸಿ.ಪಿ. ಜಯಕೃಷ್ಣ ಬಿನ್ ಪ್ರಹಲ್ಲಾದ ರಾವ್ ಇವರುಗಳು ಘನ ಉಚ್ಚ ನ್ಯಾಯಾಲಯದಲ್ಲಿ ರಿಟ್ ಪಿಟಿಷನ್ ಸಂಖ್ಯೆ:25684/1992ರಂತೆ ಪ್ರಕರಣ ದಾಖಲಿಸಿರುತ್ತಾರೆ. ಸದರಿ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ದಿನಾಂಕ:2-6-1999ರಂದು ತೀರ್ಪು ನೀಡಿ ಅರ್ಜಿದಾರರ ಕೋರಿಕೆಯನ್ನು ವಜಾ ಮಾಡುತ್ತದಲ್ಲದೇ ಕಾನೂನು ಪ್ರಕಾರ ಪ್ರಕರಣವನ್ನು ಇತ್ಯರ್ಥ ಪಡಿಸುವಂತೆ ತುಮಕೂರು ಜಿಲ್ಲೆಯ ಡಿಸಿಗೆ ಸೂಚನೆ ನೀಡುತ್ತದೆ.
ಹೈಕೋರ್ಟಿನ ತೀರ್ಪಿನ ಸುಸಂಬದ್ಧ ಉಧೃತ ಭಾಗ ಕೆಳಗಿನಂತಿದೆ:-
“ xxx three lands are admittedly inam lands coming within the ambit of the Mysore (Religious and Charitable) Inams Abolition Act of 1955, the Land Tribunal could have no jurisdiction to examine the claim by virtue of the decision reported in ILR 1992 KR.1827 Consequently, it is the Special Deputy Commissioner, Tumkur who is the authority who has to examine the claims made by these persons in accordance with law. The order of land tribunal is set aside and the matter is remitted to the Deputy Commissioner, Tumkur for disposal in accordance with law and in the light of the directions contained herein. 20 F .”
ಹೈಕೋರ್ಟಿನ ಮೇಲ್ಕಂಡ ನಿರ್ದೇಶನದಂತೆ ತುಮಕೂರು ಜಿಲ್ಲೆಯ ಡಿಸಿಯವರು ಪ್ರಕರಣ ಸಂಖ್ಯೆ: ಐಎನ್ಎಎ(ಅ)26/1999-2000ರಲ್ಲಿ ದಿನಾಂಕ:29.03.2000 ರಿಂದ ವಿಚಾರಣೆಯನ್ನು ಪ್ರಾರಂಭಿಸಿ ಎಲ್ಲ 42 ಅರ್ಜಿದಾರರಿಗೆ ನೋಟಿಸ್ ಜಾರಿ ಮಾಡುತ್ತಾರೆ. ಕಳೆದ 25 ವರ್ಷಗಳಲ್ಲಿ ವಿವಿಧ ದಿನಾಂಕಗಳಲ್ಲಿ ವಿಚಾರಣೇ ನಡೆದು ಅಂತಿಮವಾಗಿ ದಿನಾಂಕ:02.02.2026ರಂದು ಅಂತಿಮ ಆದೇಶಕ್ಕಾಗಿ ಕಡತ ಕಾಯ್ದಿರಿಸಲಾಗುತ್ತದೆ.
ಇಡೀ ವಿಚಾರಣೆ ಅವಧಿಯಲ್ಲಿ ಭೂಮಿ ಮಂಜೂರು ಮಾಡುವಂತೆ ಕೋರಿದ ಅರ್ಜಿದಾರರು ಹಾಗೂ ಮೃತ ಅರ್ಜಿದಾರರ ಕಾನೂನು ಬದ್ದ ವಾರಸುದಾರರು ಹಾಗೂ ಅರ್ಜಿದಾರರ ಪರ ವಕೀಲರು ವಿಚಾರಣೆಗೆ ಹಾಜರಾಗಿರುತ್ತಾರೆ. ವಿಶೇಷವೆಂದರೆ ಈ ಪ್ರಕರಣದಲ್ಲಿನ ಅರ್ಜಿದಾರರ ಪೈಕಿ 31 ಅರ್ಜಿದಾರರು ಮೃತರಾಗಿದ್ದು ಇವರ ಕಾನೂನು ಬದ್ದ ವಾರಸುದಾರರು ಭೂಮಿ ಪಡೆಯಲು ತಮಗೆ ಆಸಕ್ತಿ ಇಲ್ಲವೆಂದು ಪ್ರಮಾಣ ಪತ್ರ ಸಲ್ಲಿಸಿ ಪ್ರಕರಣದಿಂದ ಹಿಂದೆ ಸರಿಯುತ್ತಾರೆ.
ಕ್ರಮಸಂಖ್ಯೆ:5,7,8,9,10,12,13,14,15,16,17,18,19,20,21,22,23,24,25,26,27,28,29,30,31,32,33, 34,36,37,38 ವಾರಸುದಾರರು “ಸದರಿ ಸರ್ವೆ ನಂಬರ್‌ಗಳ ಜಮೀನುಗಳಲ್ಲಿ ನಮ್ಮಗಳ ಪೂರ್ವಜರು ನಮೂನೆ-7ರಲ್ಲಿ ಗೇಣಿ ಅರ್ಜಿ ಸಲ್ಲಿಸಿದ್ದಾರಾದರೂ ನಮಗೆ ತಿಳುವಳಿಕೆ ಬಂದಾಗಿನಿಂದಲೂ ನಾವಾಗಲೀ ಅಥವಾ ನಮ್ಮ ಕುಟುಂಬದ ಇತರೆ ಸದಸ್ಯರಾಗಲೀ, ಪೂರ್ವಜರು(ಗೇಣಿದಾರರು) ಪ್ರಕರಣದಲ್ಲಿನ ಸರ್ವೆ ನಂಬರ್ಗಳಲ್ಲಿ ಯಾವತ್ತೂ ಉಳುಮೆ ಮಾಡಿ ಬೆಳೆ ಇಟ್ಟಿರುವುದಿಲ್ಲ ಹಾಗೂ ಯಾವತ್ತೂ ಉಲ್ಲೇಖಿತ ಜಮೀನುಗಳು ನಮ್ಮ ಸ್ವಾಧೀನದಲ್ಲಿ ಇರುವುದಿಲ್ಲ . ಗೇಣಿ ಅರ್ಜಿ ಸಲ್ಲಿಸಿದ ನಮ್ಮ ಹಿರಿಯರು ಗ್ರಾಮದಲ್ಲಿ ಬೇರೆಯವರ ಮಾತು ಕೇಳಿಕೊಂಡು ತಮಗೆ ಯಾವುದೇ ಹಕ್ಕು ಇಲ್ಲದಿದ್ದರೂ ಗೇಣಿ ಅರ್ಜಿಯನ್ನು ಹಾಕಿರುವುದರಿಂದ ಗೇಣಿ ಅರ್ಜಿಯನ್ನು ಮುಂದುವರಿಸಲು ಸಿದ್ಧರಿರುವುದಿಲ್ಲ ಆದಾಗಿ ಅರ್ಜಿಯನ್ನು ವಜಾ ಮಾಡಬೇಕೆಂದು' ಕೋರಿ ಲಿಖಿತ ಮನವಿಗಳನ್ನು ವಿಚಾರಣೆ ವೇಳೆ ಸಲ್ಲಿಸಿರುತ್ತಾರೆ.
ಹೈಕೋರ‍್ಟಿನಲ್ಲಿ ರಿಟ್ ಅರ್ಜಿ ದಾಖಲಿಸಿದ್ದ ಮೃತ ಸಿ.ಗೋವಿಂದರಾವ್ ಬಿನ್ ಜಿ ಕೃಷ್ಣರಾವ್ ಮತ್ತು ಅವರ ವಾರಸುದಾರರಾದ ಸಿ.ಜಿ.ನಾಗಭೂಷಣ್ ಹಾಗೂ ಸಿ.ಜಿ.ಶಾರದಮ್ಮ ಹಾಗೂ ಎಸ್. ಬಿ. ಸೇನ್ ಬಿನ್ ಸಿ.ಎಸ್.ಗಿರಿ ಮತ್ತು ಸಿ.ಪಿ. ಜಯಕೃಷ್ಣ ಬಿನ್ ಪ್ರಹಲ್ಲಾದ ರಾವ್ ಅವರ ವಾರಸುದಾರರು ವಿಚಾರಣೆಯಲ್ಲಿ ಪ್ರತಿನಿಧಿಸಿರುತ್ತಾರಾದರೂ ಇವರು ಮೇಲ್ಕಂಡ ಗ್ರಾಮಗಳ ಸರ್ವೆ ನಂಬರ್ಗಳಲ್ಲಿ ದಿನಾಂಕ:1-3-1974ರಿಂದ ಈವರೆವಿಗೂ ಜಮೀನಿನ ಸ್ವಾಧೀನಾನುಭವ ಹೊಂದಿರುವ ಬಗ್ಗೆ ಪೂರಕ ದಾಖಲೆ ಅಥವಾ ಮತ್ತು ಪುರಾವೆಗಳನ್ನು ವಿಚಾರಣೆಯಲ್ಲಿ ಡಿಸಿ ನ್ಯಾಯಾಲಯದ ಸಮಕ್ಷಮ ಹಾಜರುಪಡಿಸಿರುವುದಿಲ್ಲ. ಅಲ್ಲದೇ ದಿ: 11-6-1982ರ ಅದೇಶದಲ್ಲಿ ಸಹ ಪ್ರಕರಣದ ಸದರಿ ಸರ್ವೆ ನಂಬರ್ ಗಳ ಜಮೀನುಗಳನ್ನು ಇವರು ಸ್ವಾಧೀನಾನುಭವ ಹೊಂದಿಲ್ಲದ ಕಾರಣ ಇವರುಗಳ ಅರ್ಜಿಗಳನ್ನು ವಿಲೇಗೊಳಿಸಿರುವುದನ್ನೂ ಡಿಸಿ ನ್ಯಾಯಾಲಯ ಗಮನಿಸುತ್ತದೆ.
"ದೇವಾದಾಯ ಇನಾಂತಿ" ಜಮೀನುಗಳನ್ನು ಭೂ ಸುಧಾರಣಾ ನಿಯಮಗಳ ಪ್ರಕಾರ ಯಾರಿಗೂ ಮಂಜೂರು ಮಾಡಲು ಕಾನೂನಿನಲ್ಲಿ ಅವಕಾಶವಿರುವುದಿಲ್ಲವಾಗಿ , ಜೊತೆಗೆ ತುಮಕೂರು ತಾಲ್ಲೂಕಿನ "Index to the Inam Register and Quit rent register " ದಾಖಲೆಗಳನ್ನು ಪರಿಶೀಲಿಸಲಾಗಿ ಕೊಂಡಾಪುರ ಗ್ರಾಮದ ಸ.ನಂ. 3 ಮತ್ತು ಕಲ್ಲು ಮಠ ಗ್ರಾಮದ ಸ.ನಂ. 13 ಕ್ಕೆ ಸಂಬಂಧಿಸಿದ ದಾಖಲೆಗಳಂತೆ ಎರಡು ಸ.ನಂ. ಗಳು ಧರ್ಮದಾಯ ಇನಾಂ ಜಮೀನುಗಳಾಗಿದ್ದು ಗೂಳೂರಿನಲ್ಲಿ ಛತ್ರ ನಿರ್ಮಾಣಕ್ಕಾಗಿ ಸೀನಪ್ಪ ಮತ್ತು ಕೃಷ್ಣಪ್ಪ ಇವರ ಹೆಸರುಗಳಿಗೆ ಇನಾಂ ನೀಡಿರುವುದುInam Register and Quit rent register ದಾಖಲೆಗಳ ಪರಿಶೀಲನೆಯಿಂದ ಕಂಡುಬಂದಿರುತ್ತದೆ. ಇವು ಸಾಮುದಾಯಿಕ ಭೂಮಿಗಳಾಗಿರುತ್ತವೆ. ಗೇಣಿ ಅರ್ಜಿ ನಮೂನೆ-7ರಲ್ಲಿ ಸಲ್ಲಿಸಿಕೊಂಡಿರುವ ಗೇಣಿ ಅರ್ಜಿಗಳನ್ನು ದೇವದಾಯ ಇನಾಂತಿ ಜಮೀನುಗಳಲ್ಲಿ ಅಧಿಭೋಗದಾರಿಕೆ ಹಕ್ಕುಗಳನ್ನು ಭೂಸುಧಾರಣಾ ಕಾಯ್ದೆಯಲ್ಲಿ ನೀಡಲು ಅವಕಾಶ ಇರುವುದಿಲ್ಲ.
ಅಲ್ಲದೇ , ಸೆಕ್ರಟರಿ ಮತ್ತು ಸ್ಪೆಷಲ್ ತಹಶೀಲ್ದಾರ್ ಭೂ ಸುಧಾರಣಾ ನ್ಯಾಯಮಂಡಳಿ ತುಮಕೂರು ತಾಲ್ಲೂಕು ಇವರು ದಿನಾಂಕ:6-10-1975ರಂದು ನೀಡಿರುವ ಹಿಂಬರಹದಂತೆ ಸ.ನಂ. 17 ದೇವದಾಯ ಇನಾಂತಿ ಜಮೀನಾಗಿದ್ದು ದಿನಾಂಕ: 11-6-1982 ರ ಆದೇಶದಲ್ಲಿ ಗೇಣಿದಾರರಿಗೆ ಹಕ್ಕು ಅಧಿಭೋಗದಾರಿಕೆ ನೀಡಿ ಆದೇಶಿಸಿರುವುದನ್ನು ಘನ ಉಚ್ಚ ನ್ಯಾಯಾಲಯದ ರಿಟ್ ಪಿಟಿಷನ್ ಸಂಖ್ಯೆ: 25684/1992 ದಿನಾಂಕ:2-6-1999 ರ ಆದೇಶದಲ್ಲಿ ವಜಾ ಮಾಡಲಾಗಿದ್ದು ಹಾಗೂ ಈ ಪ್ರಾಧಿಕಾರದಲ್ಲಿ ವಿಚಾರಣೆ ನಡೆಯುವ ಅವಧಿಯಲ್ಲಿ ಅಕ್ರಮವಾಗಿ ಕಂದಾಯ ದಾಖಲೆಗಳನ್ನು ಸೃಷ್ಟಿಸಿಕೊಂಡು, ಕ್ರಯ, ಅಡಮಾನ ಇತರೆ ವಹಿವಾಟುಗಳು ನಡೆದಿರುವುದು ದಾಖಲೆಗಳ ಪರಿಶೀಲನೆಯಿಂದ ತುಮಕೂರು ಡಿಸಿ ಅವರಿಗೆ ಕಂಡುಬಂದಿರುತ್ತದೆ. ಹಾಗಾಗಿ ಈ ಎಲ್ಲ ವಹಿವಾಟುಗಳನ್ನು ಡಿಸಿ ಅವರು ಅಕ್ರಮ ಎಂದು ಪರಿಗಣಿಸಿ, ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ರ ಕಲಂ 82 ಮತ್ತು 83ರಂತೆ ಈ ಅಕ್ರಮ ವಹಿವಾಟುಗಳನ್ನು ಅರ್ನೂಜಿತಗೊಳಿಸಿ, ಸರ್ಕಾರದ ವಶಕ್ಕೆ ಪಡೆದುಕೊಳ್ಳುವ ಬಗ್ಗೆ ನಿರ್ದೇಶನಗಳನ್ನು ನೀಡಿದ್ದಾರೆ.
ಮೈಸೂರು (ವೈಯಕ್ತಿಕ ಮತ್ತು ಇತರ) ಇನಾಮುಗಳ ನಿರ್ಮೂಲನೆ ಅಧಿನಿಯಮ, 1954ರ ಕಲಂ 700ರಂತೆ ಪ್ರಕರಣದ ಉಲ್ಲೇಖಿತ ಸರ್ವೆ ನಂಬರ್ ಸಾಮುದಾಯಿಕ ಜಮೀನುಗಳಾಗಿರುವುದರಿಂದ ಇವುಗಳನ್ನು ಇನಾಮುದಾರರಿಗೆ/ಗೇಣಿದಾರರಿಗೆ ಮಂಜೂರು/ಹಕ್ಕು ಅಧಿಭೋಗದಾರಿಕೆ ನೀಡಲು ಅವಕಾಶ ಇರುವುದಿಲ್ಲ . ಹಾಗೂ ಇಂಥ ಇನಾಮತಿ ಜಮೀನುಗಳ ಹಕ್ಕುಗಳು, ಅಧಿಕಾರ ಮತ್ತು ಹಿತಾಸಕ್ತಿ ಮೈಸೂರು (ಧಾರ್ಮಿಕ ಮತ್ತು ಧರ್ಮಾರ್ಥ) ಇನಾಮುಗಳ ನಿರ್ಮೂಲನೆ ಅಧಿನಿಯಮ, 1955ರ ಕಲಂ 3(ಬಿ)ರಂತೆ ಋಣಭಾರಗಳಿಂದ ಮುಕ್ತವಾಗಿ ಸರ್ಕಾರಕ್ಕೆ ನಿಹಿತವಾಗತಕ್ಕದ್ದು ಎಂಬ ನಿರ್ದೇಶನಗಳಿದ್ದು ಅದರಂತೆ ತುಮಕೂರು ಡಿಸಿ ಅವರು ದಿನಾಂಕ 24.04.2026ರಂದು ಅಂತಿಮ ಆದೇಶ ಹೊರಡಿಸಿ, ಸದರಿ ಸರ್ವೆ ನಂಬರ್ಗಳ ಪಹಣಿ ಹಾಗೂ ಇತರ ಹಕ್ಕು ದಾಖಲೆಗಳಲ್ಲಿ "ಗೂಳೂರು ಛತ್ರ/ ಮುಜಾಫರ್ ಖಾನ ನಿರ್ವಹಣೆ ಉದ್ದೇಶಕ್ಕಾಗಿ ಮೀಸಲೀಡಲಾದ ಸಾರ್ವಜನಿಕ ಸ್ವತ್ತು" ಎಂದು ನಮೂದಿಸುವಂತೆ ತುಮಕೂರು ತಹಸೀಲ್ದಾರ್ ಅವರಿಗೆ ನಿರ್ದೇಶನ ನೀಡಿದ್ದಾರೆ. ತಹಸೀಲ್ದಾರ್ ಅವರು ಅದರಂತೆ ಕ್ರಮ ವಹಿಸಿದ್ದಾರೆ. ಡಿಸಿ ಶುಭ ಕಲ್ಯಾಣ್ ಅವರ ಆದೇಶ ಕೆಳಗಿನಂತಿದೆ.
ಆದೇಶ
“ ಮೇಲ್ಕಂಡ ಎಲ್ಲಾ ಅಂಶಗಳಂತೆ ಪ್ರಕರಣದ ವಿಚಾರಣಾ ವೇಳೆ ಗೇಣಿದಾರರ ವಾರಸುದಾರರು ಸಲ್ಲಿಸಲಾದ ಲಿಖಿತ ಮನವಿಯಲ್ಲಿನ ಅಂಶಗಳು ಹಾಗೂ ಸೆಕ್ರಟರಿ ಮತ್ತು ಸ್ಪೆಷಲ್ ತಹಶೀಲ್ದಾರ್ ಭೂ ಸುಧಾರಣಾ ನ್ಯಾಯಾಮಂಡಳಿ ತುಮಕೂರು ತಾಲ್ಲೂಕು ರವರು ನೀಡಿರುವ ಹಿಂಬರಹ ದಾಖಲೆ ಮತ್ತು ಕ್ವಿಟ್ ರೆಂಟ್ ವಹಿಯ ದಾಖಲೆಗಳಂತೆ ಸದರಿ ಸರ್ವೆ ನಂಗಳು ದೇವದಾಯ ಇನಾಂತಿ ಜಮೀನುಗಳಾಗಿದ್ದು ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿಟ್ಟಿರುವ ಜಮೀನುಗಳಾಗಿರುವುದರಿಂದ ಸದರಿ ಸನಂಗಳ ಜಮೀನುಗಳಲ್ಲಿ ಅಧಿಭೋಗದ ಹಕ್ಕು ನಿರ್ಣಯಿಸಲು ಕೋರಿ ಸಲ್ಲಿಕೆಯಾಗಿರುವ ನಮೂನೆ 7ರ ಗೇಣಿ ಅರ್ಜಿಗಳನ್ನು ಪರಿಗಣಿಸಲು ರಹ ಇರುವುದಿಲ್ಲ ಎಂದು ಅಭಿಪ್ರಾಯಿಸಿ ಪ್ರಕರಣದ ಸ.ನಂ ಗಳ ಹಕ್ಕು ದಾಖಲೆಗಳಲ್ಲಿ "ಗೂಳೂರು ಛತ್ರ/ ಮುಜಾಫರ್ ಖಾನ ನಿರ್ವಹಣೆ ಉದ್ದೇಶಕ್ಕಾಗಿ ಮೀಸಲೀಡಲಾದ ಸಾರ್ವಜನಿಕ ಸ್ವತ್ತು" ಎಂದು ನಮೂದಿಸಲು ತಹಶೀಲ್ದಾರ್, ತುಮಕೂರು ತಾಲ್ಲೂಕು ರವರಿಗೆ ನಿಯಮಾನುಸಾರ ದಾಖಲಿಸುವ ಕ್ರಮಕ್ಕಾಗಿ ನಿರ್ದೇಶಿಸಿದೆ.”
ಮೇಲಿನಂತೆ ತೀರ್ಪು ನೀಡಿದ ತುಮಕೂರು ಡಿಸಿ ಶುಭ ಕಲ್ಯಾಣ್ ಅವರು ಇಷ್ಟಕ್ಕೇ ಸುಮ್ಮನಾಗದೇ, ಅವರು ಮಾಡಿರುವ ತೀರ್ಪಿನ ವಿರುದ್ದ ಅರ್ಜಿದಾರರು ನ್ಯಾಯಾಲಯದಲ್ಲಿ ತಡೆಯಾಜ್ಞೆ ತರುವ ಸಾಧ್ಯತೆಗಳಿರುವುದರಿಂದ ಈ ಕುರಿತಂತೆ ಕೇವಿಯಟ್ ಸಲ್ಲಿಸುವಂತೆ ಹಾಗೂ ಪ್ರಕರಣದ ವ್ಯಾಜ್ಯ ನಿರ್ವಹಣಾಧಿಕಾರಿ ಹಾಗೂ ಶಪಥಾಧಿಕಾರಿಯನ್ನಾಗಿ ತುಮಕೂರು ತಹಸೀಲ್ದಾರ್ ರಾಜೇಶ್ವರಿ ಅವರನ್ನು ನೇಮಿಸುವಂತೆ ಸರ್ಕಾರವನ್ನು ಕಂದಾಯ ಇಲಾಖೆಯ ಹಂತದಲ್ಲಿ ಕೋರುತ್ತಾರೆ. ( ಈ ಕುರಿತಂತೆ ದಿ ಫೈಲ್. ಇನ್ ವೆಬ್ ಪೋರ್ಟಲ್ ವರದಿ ಪ್ರಕಟಿಸಿದ್ದು ಈ 103 ಎಕರೆಯಷ್ಟು ಬೃಹತ್ ಭೂಮಿಯನ್ನು ಉಳಿಸಿಕೊಳ್ಳುವಲ್ಲಿ ಸರ್ಕಾರ ಯಶಸ್ಸು ಕಾಣಲಿದೆಯೇ ಎಂದು ಪ್ರಶ್ನಿಸಿದೆ.)
ಡಿಸಿ ಅವರೇ ಪ್ರಕರಣದ ತೀರ್ಪಿನಲ್ಲಿ ಉಲ್ಲೇಖಿಸಿರುವಂತೆ ಪ್ರಕರಣದ ಕೆಲವು ಅರ್ಜಿದಾರರು ಹುಸಿ ದಾಖಲೆಗಳ ಆಧಾರದ ಮೇಲೆ ಅಕ್ರಮ ಪರಬಾರೆ ಹಾಗೂ ಇನ್ನಿತರ ವಹಿವಾಟುಗಳನ್ನು ನಡೆಸಿರುವುದು ಖಚಿತವಾಗಿರುವುದರಿಂದ ಮತ್ತು ಈ ಎಲ್ಲ ವಹಿವಾಟುಗಳನ್ನು ಅಕ್ರಮ ಎಂದು ಪರಿಗಣಿಸಿ ಅನೂರ್ಜಿತಗೊಳಿಸಲಾಗಿದೆ ಎಂದು ಆದೇಶಿಸಿರುವ ಹಿನ್ನೆಲೆಯಲ್ಲಿ ಪಟ್ಟಭದ್ರರ ಕೈ ವಶದಿಂದ ಈ ಭೂಮಿಯನ್ನು ಬಿಡಿಸಿಕೊಂಡು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳುವಲ್ಲಿ ಜಿಲ್ಲಾಡಳಿತ ಯಶಸ್ಸು ಕಾಣಲಿದೆಯೇ ಎಂದು ಕಾದು ನೋಡಬೇಕಾಗಿದೆ. ವಿಶೇಷವಾಗಿ ತುಮಕೂರು ಜಿಲ್ಲೆಯಿಂದ ಉಪಮುಖ್ಯಮಂತ್ರಿಯಾಗಿ ಹೊರಹೊಮ್ಮಿರುವ ಡಾ. ಜಿ.ಪರಮೇಶ್ವರ ಅವರೇ ಸ್ವತಃ ಕಂದಾಯ ಖಾತೆಯನ್ನೂ ಹೊಂದಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತಕ್ಕೆ ಈ ಪ್ರಕರಣ ಒಂದು ಸವಾಲು ಕೂಡಾ ಆಗಿದೆ.
****
bevarahani1