ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ: “ಹೈಕಮಾಂಡ್‌ ಸ್ಪಷ್ಟನೆ ಕೇಳಿದ್ದೇನೆ ಅಷ್ಟೇ”

ದಿಲ್ಲಿ ವರಿಷ್ಟರ ಭೇಟಿ ವಿವರಿಸಿದ ಸಚಿವ ಕೆ.ಎನ್.ರಾಜಣ್ಣ

ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ:  “ಹೈಕಮಾಂಡ್‌ ಸ್ಪಷ್ಟನೆ ಕೇಳಿದ್ದೇನೆ ಅಷ್ಟೇ”

 

     ಬೆಂಗಳೂರು: ಲೋಕಸಭೆ ಚುನಾವಣೆಯ ನಂತರ ಕರ್ನಾಟಕ  ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಮಾಡಲಾಗುವುದೆಂದು ಕಾಂಗ್ರೆಸ್‌ ಹೈಕಮಾಂಡ್‌ ಹೇಳಿದ್ದ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷರನ್ನು ಆಯ್ಕೆ ಮಾಡುವ ಕುರಿತಂತೆ ಪಕ್ಷದ ವರಿಷ್ಟರ ಗಮನ ಸೆಳೆಯಲಾಗಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಸ್ಪಷ್ಟಪಡಿಸಿದ್ದಾರೆ.

    ಮೂರು ದಿನಗಳ ದಿಲ್ಲಿ ವಾಸ್ತವ್ಯದ ಬಳಿಕ ನಗರಕ್ಕೆ ಹಿಂದಿರುಗಿರುವ ಸಚಿವ ರಾಜಣ್ಣನವರು ಶನಿವಾರ ಬೆಳಿಗ್ಗೆ ಅವರ ನಿವಾಸದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಯಾರು ಮುಖ್ಯಮಂತ್ರಿ ಆಗಬೇಕು, ಯಾರು ಉಪಮುಖ್ಯಮಂತ್ರಿಯಾಗಬೇಕು ಮತ್ತು ಕೆಪಿಸಿಸಿ ಅಧ್ಯಕ್ಷರಾಗಬೇಕು ಎಂಬ ಕುರಿತು 2023ರ ಮೇ 18ರಂದು ಎಐಸಿಸಿ ಹೊರಡಿಸಿರುವ ನೋಟಿಫಿಕೇಶನ್‌ ನಲ್ಲಿ ಪ್ರಸ್ತಾಪಿಸಲಾಗಿದೆ, ಇದೇ ಪ್ರಕಟಣೆಯಲ್ಲಿ ಲೋಕಸಭಾ ಚುನಾವಣೆ ಬಳಿಕ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರನ್ನು ಬದಲಿಸಲಾಗುವುದು ಎಂದೂ ಹೇಳಲಾಗಿತ್ತು. ಈ ಕುರಿತಂತೆ ಪಕ್ಷದ ವರಿಷ್ಟರ ಗಮನ ಸೆಳೆದಿದ್ದು ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಪಕ್ಷವು ಹೆಚ್ಚಿನ ಸಾಧನೆ ಮಾಡಬೇಕಾದರೆ ಪೂರ್ಣ  ಪ್ರಮಾಣದ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರ ಅವಶ್ಯಕತೆ ಇದೆ ಎಂಬುದು ತಮ್ಮ ಭಾವನೆ, ಈ ಭಾವನೆಯನ್ನು ಹೈಕಮಾಂಡ್‌ ಗಮನಕ್ಕೆ ತಂದಿದ್ದೇನೆ ಎಂದು ವಿವರಿಸಿದರು.

     ಈ ವಿಚಾರವಾಗಿ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ  ಸೇರಿದಂತೆ ಕಾಂಗ್ರೆಸ್ ಮುಖಂಡರ ಬಳಿ ಪ್ರಸ್ತಾಪಿಸಿದ್ದೇನೆ. ಅವರ ಪ್ರತಿಕ್ರಿಯೆಗಾಗಿ ನಾನು ಕಾಯುತ್ತಿದ್ದೇನೆ ಎಂದರು.

     ದೆಹಲಿಯಲ್ಲಿ ಹೈಕಮಾಂಡ್ ಜೊತೆ ಅನೇಕ ವಿಷಯಗಳನ್ನು ಪ್ರಸ್ತಾಪ ಮಾಡಿದ್ದೇನೆ. ಅದರಲ್ಲಿ ವಿಧಾನ ಪರಿಷತ್‌ ಗೆ ನಾಮಕರಣ ಸದಸ್ಯರ ನೇಮಕದಲ್ಲಿ ಇದುವರೆಗೂ ಅಧಿಕಾರ ವಂಚಿತ ಸಣ್ಣ ಜಾತಿಗಳನ್ನು , ಚುನಾವಣೆಗಳಲ್ಲಿ ಸ್ಪರ್ಧಿಸಿ ಗೆಲ್ಲಲಾಗದ ಸಮುದಾಯಗಳನ್ನು ಪರಿಗಣಿಸಬೇಕೆಂಬುದೂ ಸೇರಿದಂತೆ ಪಕ್ಷದ ಸಂಘಟನೆ ದೃಷ್ಟಿಯಿಂದ ಅಗತ್ಯವಿರುವ ಕ್ರಮಗಳ ಬಗ್ಗೆ ಮಾತನಾಡಿದ್ದೇನೆ" ಎಂದು ಹೇಳಿದರು.

      ಒಬ್ಬರಿಗೆ ಒಂದೇ ಹುದ್ದೆ ಎಂಬುದು ಪಕ್ಷದ ನೀತಿಯಾಗಿರುವುದರಿಂದ ನನಗೆ ಒಂದು ವೇಳೆ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನ ಕೊಡುವುದೇ ಆದಲ್ಲಿ ಆ ನೀತಿ ಪ್ರಕಾರವೇ ನಾನು ನನ್ನ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುವೆ ಎಂದಿದ್ದೇನೆ, ಜೊತೆಗೆ ತುಮಕೂರು ಜಿಲ್ಲೆಯಲ್ಲಿ 57 ಜಿಲ್ಲಾ ಪಂಚಾಯತ್‌ ಸ್ಥಾನಗಳಿದ್ದು ಪಕ್ಷದ ಗೆಲುವಿಗೆ ಸಂಘಟಿಸುವ ಹಾಗೂ ಶ್ರಮಿಸುವ ದೃಷ್ಟಿಯಿಂದ ನನ್ನನ್ನು ಹಾಸನ ಜಿಲ್ಲೆಯ ಉಸ್ತುವಾರಿ ಮಂತ್ರಿ ಹೊಣೆಯಿಂದ ಬಿಡುಗಡೆಗ ಮಾಡುವಂತೆಯೂ ಕೋರಿದ್ದೇನೆ ಎಂದರು ಕೆಎನ್‌ಆರ್.

     ಸದ್ಯ ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾರೆ ಅವರೇ ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿದ್ದಾರೆ ಮಾತ್ರವಲ್ಲ ಮುಂದಿನ ಅವಧಿಗೂ ರಾಜ್ಯದ ಜನತೆ ಅವರಿಗೆ ಮುಖ್ಯಮಂತ್ರಿ ಆಗಲು ಆಶೀರ್ವಾದ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

      ಈ ಹಿಂದೆ ರಾಜ್ಯದಲ್ಲಿ ದಲಿತರೊಬ್ಬರು ಮುಖ್ಯಮಂತ್ರಿ ಯಾಗುವ ಅವಕಾಶವಿತ್ತು ಮಲ್ಲಿಕಾರ್ಜುನ ಖರ್ಗೆ ಅವರು ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗುವ ಸಾಧ್ಯತೆ ಇತ್ತು ಆದರೆ ಇವರು ಮುಖ್ಯಮಂತ್ರಿಯಾದರೆ ಬೇಕೆನಿಸಿದಾಗ  ಬದಲಾಯಿಸಲು ಸಾಧ್ಯವಿಲ್ಲ ಎಂಬ ದೂರಾಲೋಚನೆ ಮಾಡಿದ ಮಾಜಿ ಪ್ರಧಾನಿ ದೇವೇಗೌಡ ಅವರು ಧರ‍್ಮಸಿಂಗ್ ಅವರನ್ನು ಮುಖ್ಯಮಂತ್ರಿ ಮಾಡಿ ಆನಂತರ ಬದಲಾಯಿಸಿದರು ಎಂದರು.

“ಸಚಿವ ಪರಮೇಶ್ವರ ಅವಹೇಳನ ಖಂಡಿಸುವೆ- ಸುರೇಶಗೌಡ ಕ್ಷಮೆ ಕೇಳಬೇಕು “

ಗ್ರಾಮಾಂತರದ ಹಾಲಿ-ಮಾಜಿ ಶಾಸಕರ ಜಗಳಕ್ಕೆ ಸಚಿವ ಕೆಎನ್ಆರ್ ಬ್ರೇಕ್

       ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶಗೌಡ,ಹಿರಿಯ,ಸಜ್ಜನ ಸಚಿವರಾದ ಡಾ.ಜಿ.ಪರಮೇಶ್ವರ್ ಅವರ ಬಗ್ಗೆ ತೀರಾ ಅವಹೇಳನಕಾರಿಯಾಗಿ ಮಾತನಾಡುವುದು ತರವಲ್ಲ. ಇದನ್ನು ನಾನು ಖಂಡಿಸುತ್ತೇನೆ. ತಮ್ಮ ಹೇಳಿಕೆ ಬಗ್ಗೆ ಕೊರಟಗೆರೆ ಮತ್ತು ತುಮಕೂರು ಗ್ರಾಮಾಂತರ ಕ್ಷೇತ್ರದ ಜನತೆಯ ಕ್ಷಮೆಯಾಚಿಸಬೇಕು ಎಂದು ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ ಸಲಹೆ ನೀಡಿದ್ದಾರೆ.

       ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಗೃಹ ಹಾಗು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಾ.ಜಿ.ಪರಮೇಶ್ವರ್ ಒಬ್ಬರ ಬಗ್ಗೆ ಅಸಮಾಧಾನ ಇದ್ದರೆ ಅದನ್ನು ಬಹಿರಂಗವಾಗಿ ಎಂದು ವ್ಯಕ್ತಪಡಿಸುವುದೇ ಆದಲ್ಲಿ ಅದಕ್ಕಾಗಿ ಸೂಕ್ತ ಭಾಷೆ ಇರುತ್ತದೆ, ಐದು ಬಾರಿ ಶಾಸಕರಾಗಿ ಮಂತ್ರಿಯಾಗಿ, ಡಿಸಿಎಂ ಆಗಿ ಕೆಲಸ ಮಾಡಿದ ಅಂತಹ ವ್ಯಕ್ತಿಯನ್ನು ಹೀಯಾಳಿಸುವಂತೆ ಮಾತನಾಡುವುದು ಸರಿಯಲ್ಲ. ಟೀಕೆಗಳು ಇರಲಿ ಅದು ವೈಯಕ್ತಿಕ ಮಟ್ಟಕ್ಕೆ ಇಳಿಯಬಾರದು. ಈ ನಿಟ್ಟಿನಲ್ಲಿ ಗ್ರಾಮಾಂತರ ಕ್ಷೇತ್ರದ ಹಾಲಿ ಮತ್ತು ಮಾಜಿ ಶಾಸಕರಿಬ್ಬರುವ ವೈಯುಕ್ತಿಕ ಮಟ್ಟದ ಆರೋಪ,ಪ್ರತ್ಯಾರೋಪ ಕೈಬಿಡಬೇಕು. ಟೀಕೆ ಸಂದರ್ಭದಲ್ಲಿ ಪದ ಬಳಕೆ ಇನ್ನೊಬ್ಬರಿಗೆ ನೋವಾಗದಂತೆ ಎಚ್ಚರ ವಹಿಸುವುದು ಸೂಕ್ತ ವೆಂದರು.

      ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ತನ್ನದೇ ಆದ ಘನತೆ ಗೌರವವಿದೆ.1962 ರಿಂದಲೂ ಹೆಬ್ಬೂರು ಕ್ಷೇತ್ರವಾಗಿ ಜನರಿಗೆ ಪರಿಚಯ.ಲಕ್ಕಪ್ಪನವರು ಶಾಸಕರಾಗಿ ಚುನಾಯಿತರಾಗಿದ್ದರು. ಆನಂತರ ಈ ಕ್ಷೇತ್ರ ಗೂಳೂರು ಮೀಸಲು ಕ್ಷೇತ್ರ ಎಂದಾದಾಗ  ಗಂಗಾಭೋವಿ ಆಯ್ಕೆಯಾಗಿದ್ದರು. ವೈ.ಕೆ.ರಾಮಯ್ಯ,ಮುದ್ದಹನುಮೇಗೌಡ, ಹೆಚ್.ನಿಂಗಪ್ಪ ಅವರಂತವರು ಶಾಸಕರಾಗಿ ಕೆಲಸ ಮಾಡಿದ್ದಾರೆ.ಇದುವರೆಗೂ ಕ್ಷೇತ್ರದಲ್ಲಿ ರಾಜಕೀಯ ಕಾರಣಗಳಿಗಾಗಿ ಒಂದೂ ಗಲಭೆ ನಡೆದಿಲ್ಲ.ಅಂತಹ ಮತದಾರರಿರುವ ಕ್ಷೇತ್ರ.ಪಕ್ಷದ ಜೊತೆಗೆ, ಜನಬೆಂಬಲದಿಂದಲೇ ಗೆಲ್ಲಬೇಕಿರುತ್ತದೆ. ಹಾಲಿ ಮತ್ತು ಮಾಜಿ ಶಾಸಕರಿಬ್ಬರಿಗೂ ಸಂದರ್ಭೋಚಿತ ಸಹಾಯ ಮಾಡಿದ್ದೇನೆ. ವೈಯಕ್ತಿಕ ಕಚ್ಚಾಟ ಬಿಡಿ,ಗೌರವದಿಂದ ನಡೆದುಕೊಳ್ಳಿ ಎಂದು ಇಬ್ಬರಿಗೂ ಕೆ. ಎನ್.ರಾಜಣ್ಣ ಸಲಹೆ ನೀಡಿದರು.

 

 ಹೇಮಾವತಿ ಲಿಂಕ್ ಕೆನಾಲ್ :

ಜಿಲ್ಲೆಯ ಎಲ್ಲರ ವಿರೋಧವಿದೆ

 

      ಹೇಮಾವತಿ ಎಕ್ಸ್‌ ಪ್ರೆಸ್‌  ಲಿಂಕ್ ಕೆನಾಲ್ ಕಾಮಗಾರಿಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್, ನಾನು ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರ ತೀವ್ರ ವಿರೋಧ ಇದೆ. ಸಂಪುಟ ಸಭೆಯಲ್ಲಿ ಚರ್ಚೆ ಮಾಡುವ ಸಂದರ್ಭದಲ್ಲೂ ಪರಮೇಶ್ವರ್ ಅವರು ಸಂಪೂರ್ಣ ವಿರೋಧ ವ್ಯಕ್ತಪಡಿಸಿದ್ದರು.ಆದರೆ ಡಾ. ಜಿ. ಪರಮೇಶ್ವರ್ ಅವರು ಉಪಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆಯನ್ನು ವಿರೋಧಿಸದೇ ಮಂಜೂರು ಮಾಡಿದ್ದರು. ನಂತರ ಯಡಿಯೂರಪ್ಪ ಸರಕಾರದ ಅವಧಿಯಲ್ಲಿ ಜೆ.ಸಿ.ಮಾಧುಸ್ವಾಮಿ ಕಾನೂನು ಸಚಿವರಾಗಿ ಈ ಯೋಜನೆಗೆ ತಡೆ ನೀಡಿದ್ದರು.   ಹಾಗಾಗಿ ಸಂಪುಟ ಸಭೆಯಲ್ಲಿ ಈ ವಿಚಾರ ಹೇಳಿ  ಪರಮೇಶ್ವರ್ ಅವರನ್ನು ಕಟ್ಟಿಹಾಕಲಾಯಿತು. ಆದರೂ ಈಗಲೂ ಪರಮೇಶ್ವರ್ ಆದಿಯಾಗಿ ಈ ಲಿಂಕ್ ಕೆನಾಲ್ ಕಾಮಗಾರಿಗೆ ವಿರೋಧ ಇದ್ದು,ಕಾಮಗಾರಿ ಅಷ್ಟು ಸುಲಭವಾಗಿ ಪೂರ್ಣಗೊಳ್ಳುವುದಿಲ್ಲ ಒಂದು ವೇಳೆ ಪೂರ್ಣಗೊಂಡರೂ ಆ ಕಾಲುವೆಯಲ್ಲಿ ಯಾವುದೇ ಕಾರಣಕ್ಕೂ ನೀರು ಹರಿಯಲು ಬಿಡುವುದಿಲ್ಲ ಎಂದರು.

 

ಏಪ್ರಿಲ್‌ ನಲ್ಲಿ ಶೋಷಿತರ ಸಮಾವೇಶ

     ರಾಜ್ಯದಲ್ಲಿ ಶೋಷಿತರ ಸಮಾವೇಶ ಮಾಡುವ ಸಂಬಂಧ ಈಗಾಗಲೇ ಪಕ್ಷದ ವರಿಷ್ಠರ ಗಮನಕ್ಕೂ ತರಲಾಗಿದೆ. ಹೆಚ್ಚು ಜನರು ಸೇರಲು ಅನುಕೂಲವಾಗುವಂತೆ ಸಮಾವೇಶವನ್ನು ಮೈಸೂರು ಭಾಗದ ಬದಲಾಗಿ ಚಿತ್ರದುರ್ಗ,ಹುಬ್ಬಳ್ಳಿ,ಧಾವಣಗೆರೆ ಭಾಗದಲ್ಲಿ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ಶೋಷಿತರ ಸಮಾವೇಶವನ್ನು ಲೋಕಸಭೆ ಅಧಿವೇಶನ ಹಾಗೂ ರಾಜ್ಯದ ಬಜೆಟ್ ಅಧಿವೇಶನದ ಬಳಿಕ ನಡೆಸುವ ಸಾಧ್ಯತೆ ಇದೆ. ಪಕ್ಷದ ಹೈಕಮಾಂಡ್ ಒಪ್ಪಿಗೆ ಮೇರೆಗೆ ಈ ಸಮಾವೇಶ ನಡೆಸಲಾಗುವುದು.ಇದು ದಲಿತ ಸಿಎಂಗಾಗಿ ಮಾಡುತ್ತಿರುವ ಸಮಾವೇಶ ಅಲ್ಲ, ಶೋಷಿತರ ಸಂವಿಧಾನ ಬದ್ಧ ಹಕ್ಕುಗಳನ್ನು ಪಡೆಯುವುದಾಗಿ ಅಷ್ಟೇ.ಈ ಸಮಾವೇಶ ಕಾಂಗ್ರೆಸ್ ಪಕ್ಷದ ಪ್ರಾಯೋಜಿತವಾಗಿದ್ದು,ಎಐಸಿಸಿ ಅಧ್ಯಕ್ಷರು,ರಾಹಲ್‌ಗಾಂಧಿ, ಕೆಪಿಸಿಸಿ ಅಧ್ಯಕ್ಷರು ಸೇರಿದಂತೆ ಪಕ್ಷದ ಎಲ್ಲ ನಾಯಕರುಗಳನ್ನು ಆಹ್ವಾನಿಸಲಾಗುವುದು. ಬೇರೆ ಪಕ್ಷದವರಿಗೆ ಆಹ್ವಾನ ಇಲ್ಲ ಎಂದು ಕೆ.ಎನ್.ರಾಜಣ್ಣ ಸ್ಪಷ್ಟಪಡಿಸಿದರು.

 

 ಮಾರ್ಚ್ 17ಕ್ಕೆ ಜಾತಿ ಗಣತಿ ವರದಿ

  

     ಚಾಮರಾಜನಗರದ ಮಲೆ ಮಾದೇಶ್ವರದಲ್ಲಿ  ಬರುವ ಮಾರ್ಚಿ 17 ರಂದು ನಡೆಯುವ ಸಚಿವ ಸಂಪುಟದ ಸಭೆಯಲ್ಲಿ ಜಾತಿ ಗಣತಿಯನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದ ರಾಜಣ್ಣನವರು, ಜಾತಿ ಗಣತಿಯ ಬಗ್ಗೆ ವಿಸ್ಕೃತವಾಗಿ ಚರ್ಚೆ ನಡೆಸಿ,ನ್ಯಾ.ನಾಗಮೋಹನ್ ದಾಸ್ ವರದಿಯನ್ನು ಆಧರಿಸಿ, ಯಾರಿಗೂ ಅನ್ಯಾಯವಾಗದ ರೀತಿಯಲ್ಲಿ ಒಳಮೀಸಲಾತಿ ಜಾರಿಗೆ ತರಲಿದ್ದೇವೆ. ಪಕ್ಷದ ಪ್ರಣಾಳಿಕೆಯಲ್ಲಿ ಒಪ್ಪಿಕೊಂಡಿರುವಂತೆ ಒಳ ಮೀಸಲಾತಿ ಜಾರಿಗೆ ತರಲು ಸಿದ್ದ ಎಂದರು.

ರಾಜ್ಯದ ರೈತರಿಗೆ ಹೊಡೆತ

      ನಬಾರ್ಡ್‌ ನೀಡುತಿದ್ದ ಕಡಿಮೆ ಬಡ್ಡಿ ಸಾಲದ ಅನುದಾನವನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿರುವ ಬಗ್ಗೆ ಕೇಂದ್ರ ಸಹಕಾರ ಸಚಿವರಾದ ಅಮಿತ್ ಷಾ ಮತ್ತು ಹಣಕಾಸು ಸಚಿವರಿಗೆ ಮನವಿ ಪತ್ರ ನೀಡಿದ್ದೇನೆ. ಕಳೆದ ಸಾಲಿಗೆ ಹೋಲಿಸಿದರೆ  ಶೇ58ರಷ್ಟು ಅನುದಾನ ಕಡಿತ ಮಾಡಲಾಗಿದೆ. ಇದರಿಂದ ರಾಜ್ಯದ ರೈತರ ಮೇಲೆ ದೊಡ್ಡ ಹೊಡೆತ ಬೀಳಲಿದೆ. ಮೊನ್ನೆ ಅಮಿತ್ ಶಾ ಅವರನ್ನು ಭೇಟಿ ಮಾಡಲು ಅವಕಾಶ ದೊರಕಲಿಲ್ಲ ಎಂದರು.

ಧನ್ಯವಾದ

     ಮಧುಗಿರಿ ವಿಧಾನ ಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ರಾಯದುರ್ಗ ರೈಲ್ವೆ ಕಾಮಗಾರಿಗೆ ಸಾಕಷ್ಟು ಅನುದಾನ ನೀಡಿದ್ದಕ್ಕಾಗಿ ಹಾಗೂ ರೈಲ್ವೆ ಮೇಲು ಸೇತುವೆ ಕಾಮಗಾರಿಗಳನ್ನು ಮಂಜೂರು ಮಾಡಿದ್ದಕ್ಕಾಗಿ ಜಿಲ್ಲೆಯ ಸಂಸದರೂ ಆಗಿರುವ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣನವರಿಗೆ ಕ್ಷೇತ್ರದ ಜನತೆಯ ಪರವಾಗಿ ರಾಜಣ್ಣನವರು ಧನ್ಯವಾದಗಳನ್ನು ಸಲ್ಲಿಸಿದರು.