ರಾಜ್ಯದಲ್ಲೂ ಮಹಾ ಪಂಚಾಯತ್‌ಗಳು: ರೈತ ಸಂಘ ನ.28ರಿಂದ ಹೆದ್ದಾರಿ ಬಂದ್-ಪ್ರತಿಭಟನೆ

ರಾಜ್ಯದಲ್ಲೂ ಮಹಾ ಪಂಚಾಯತ್‌ಗಳು: ರೈತ ಸಂಘ  ನ.28ರಿಂದ ಹೆದ್ದಾರಿ ಬಂದ್-ಪ್ರತಿಭಟನೆ

ರಾಜ್ಯದಲ್ಲೂ ಮಹಾ ಪಂಚಾಯತ್‌ಗಳು: ರೈತ ಸಂಘ

ನ.28ರಿಂದ ಹೆದ್ದಾರಿ ಬಂದ್-ಪ್ರತಿಭಟನೆ


ತುಮಕೂರು: ಕರಾಳ ಕೃಷಿ ಕಾನೂನುಗಳ ವಿರುದ್ಧ ದಿಲ್ಲಿಯ ಗಡಿಗಳಲ್ಲಿ ಒಂದು ವರ್ಷದಿಂದ ರೈತರು ನಡೆಸುತ್ತಿರುವ ಸತ್ಯಾಗ್ರಹ ಬೆಂಬಲಿಸಿ, ಇದೇ ನವೆಂಬರ್ 26ರ ನಂತರ ರಾಜ್ಯದ ಹತ್ತು ಕಡೆ ಮಹಾಪಂಚಾಯತ್ ಹಮ್ಮಿಕೊಂಡು ಈ ಕಾಯ್ದೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಿ, ಬಜೆಟ್ ಮಂಡನೆಗೆ ಮೊದಲು ಜನಾಧಿವೇಶನವನ್ನು ಹಮ್ಮಿಕೊಂಡು ನಿರ್ಣಯ ಕೈಗೊಳ್ಳಲಾಗುವುದು, ನ.28ರಿಂದ ಕೇಂದ್ರ ಸಚಿವರ ವಿರುದ್ಧ  ಕಪ್ಪು ಬಾವುಟ ಪ್ರದರ್ಶನ ಮಾಡಲಿದ್ದೇವೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಘೋಷಿಸಿದರು.


ಕೇಂದ್ರ ಸರ್ಕಾರ ಮೂರು ಕರಾಳ ಕೃಷಿ ಕಾನೂನುಗಳನ್ನು ತಡೆಹಿಡಿದ್ದರೆ, ರಾಜ್ಯ ಸರ್ಕಾರ ಅವನ್ನು ಜಾರಿಗೆ ತಂದಿವೆ, ಎಪಿಎಂಸಿಗಳ ಬಳಿ ದುಡ್ಡಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ, ಶಿವಮೊಗ್ಗದಂತಹ ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ವಹಿವಾಟು ಶೇ.18ಕ್ಕೆ ಇಳಿದಿದೆ, ಮುಂದಿನ ದಿನಗಳಲ್ಲಿ ಎಪಿಎಂಸಿಗಳು ಅದಾನಿ, ಅಂಬಾನಿಗಳ ಸಂತತಿ ಪಾಲಾಗಾಲಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು ಕಾರ್ಮಿಕ, ದಲಿತ, ರೈತ ಸಂಯುಕ್ತ ಹೋರಾಟ ಸಮಿತಿ ಎತ್ತು, ಎಮ್ಮೆ, ಕೋಳಿ, ಎತ್ತಿನಗಾಡಿ, ಟ್ರ‍್ಯಾಕ್ಟರ್‌ನೊಂದಿಗೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಿದ್ದೇವೆ ಎಂದು ಪ್ರಕಟಿಸಿದರು.


ನಗರದ ವಿಜ್ಞಾನ ಭವನದಲ್ಲಿ ಶುಕ್ರವಾರ ರೈತ ಸಂಘಟನೆಯ ಬೆಂಗಳೂರು ವಿಭಾಗೀಯ ಪದಾಧಿಕಾರಿಗಳ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂ ಸುಧಾರಣೆ ಕಾಯ್ದೆ ಹೆಸರಿನಲ್ಲಿ ಜಾರಿಗೆ ಬಂದ ನಂತರ ನೋಂದಣಿ ಶುಲ್ಕ ಹೆಚ್ಚಳವಾಗಿದೆ, ಕೃಷಿ ಭೂಮಿ ಕೃಷಿಯೇತರ ಚಟುವಟಿಕೆಗಳಿಗೆ ಸುಲಭವಾಗಿ ದೊರಕುವಂತಾಗಿದೆ ಎಂದ ಅವರು ಐ.ಟಿ, ಬಿ.ಟಿಯವರು ಕೃಷಿಯಲ್ಲಿ ಪಾಲ್ಗೊಳ್ಳುತ್ತಾರೆ ಎನ್ನುವುದರ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಒತ್ತಾಯಿಸಿದರು.


ಸರ್ಕಾರ ಪಶು ಆಹಾರವನ್ನು ರಿಯಾಯಿತಿ ದರದಲ್ಲಿ ನೀಡಬೇಕು ಎಂದ ಅವರು ರಾಜ್ಯದ  12 ಜಿಲ್ಲೆಗಳಲ್ಲಿ ಬೆಳೆಯುವ ಮುಸುಕಿನಜೋಳವನ್ನು ಸರ್ಕಾರ ಖರೀದಿಸಿ ಪಶು ಆಹಾರವನ್ನಾಗಿ ಮಾರ್ಪಡಿಸಬೇಕು ಇದರಿಂದ ಉದ್ಯೋಗ ಹೆಚ್ಚಳವಾಗಲಿದೆ, ಹಾಲಿನ ಉತ್ಪಾದನಾ ವೆಚ್ಚ ಹೆಚ್ಚಳವಾಗಿದೆ, ಸರ್ಕಾರ ನೀಡುವ ಸಬ್ಸಿಡಿ ದೊರಕದಂತಾಗಿದೆ ಎಂದರು.
ಬರಪೀಡಿತ ಪ್ರದೇಶವಾದ ಚಿತ್ರದುರ್ಗದಲ್ಲಿ ಮಳೆಯಿಂದಾಗಿ ಈರುಳ್ಳಿ, ಶೇಂಗಾ ಬೆಳೆ ನಾಶವಾಗಿದೆ ಸರ್ಕಾರ ರೈತರ ನೆರವಿಗೆ ನಿಲ್ಲಬೇಕು, ಪೂರ್ಣ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದ ಅವರು, ಫಸಲ್ ಬೀಮಾ ಯೋಜನೆ ರೈತರ ಪರವಾಗಿಲ್ಲ ಅದು ವಿಮಾಸಂಸ್ಥೆಗಳ ಪರವಾಗಿದೆ ಎಂದು ದೂರಿದರು.


ನರೇಂದ್ರ ಮೋದಿ ಅವರ ಸ್ವಂತ ರಾಜ್ಯ ಗುಜರಾತ್ ನಲ್ಲಿ ಈ ಯೋಜನೆಯನ್ನು ಜಾರಿಗೊಳಿಸಿಲ್ಲ, ಮೇಲ್ನೋಟಕ್ಕೆ ರೈತ ಪರವಾದ ಯೋಜನೆಗಳು ಕಾರ್ಪೋರೇಟ್ ಸಂಸ್ಥೆಗಳ ಪರವಾಗಿದೆ, ಖಾಸಗಿ ಸಂಸ್ಥೆಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶ ಹೊಂದಿದೆ ಎಂದು ಆರೋಪಿಸಿದರು.


ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಅವರು ಮಾತನಾಡಿ ನ.26ರಂದು ಹೆದ್ದಾರಿ ಬಂದ್ ಮಾಡಲಿದ್ದೇವೆ, ಜಿಲ್ಲೆಯಲ್ಲಿ ಶೇಂಗಾ, ರಾಗಿ ನಾಶವಾಗಿವೆ, ಮಳೆಯಿಂದಾಗಿ ಬಾಳೆ ಬೆಲೆ ಕುಸಿದಿದೆ, ನೀರಾವರಿ ಯೋಜನೆ ಅನುಷ್ಠಾನ ಮತ್ತು ರೈತರ ನಷ್ಟ ತುಂಬಿಕೊಡುವAತೆ ಒತ್ತಾಯಿಸಿ, ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವುದಾಗಿ ತಿಳಿಸಿದರು.


ತುಮಕೂರು, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳನ್ನು ಒಳಗೊಂಡಂತೆ ಡಿಸೆಂಬರ್ ನಲ್ಲಿ ಮಹಾ ಪಂಚಾಯತ್ ಹಮ್ಮಿಕೊಳ್ಳಲಾಗುವುದು ಎಂದ ಅವರು ಸಂಯುಕ್ತ ಹೋರಾಟ ಸಮಿತಿಯ ಮುಖಂಡರು, ಕಾರ್ಯಕರ್ತರು ಸೇರಿ ಹತ್ತು ಸಾವಿರಕ್ಕೂ ಹೆಚ್ಚು ಜನರನ್ನು ಒಳಗೊಂಡ ಮಹಾ ಪಂಚಾಯತಿ ನಡೆಯಲಿದೆ ಎಂದು ತಿಳಿಸಿದರು.


ರೈತಸಂಘದ ರಾಜ್ಯ ಉಪಾಧ್ಯಕ್ಷ ಟಿ.ನುಲೇನೂರು ಶಂಕರಪ್ಪ, ವಿಭಾಗೀಯ ಕಾರ್ಯದರ್ಶಿ ಡಾ.ಚೌಕೀಮಠ್, ವಿಭಾಗೀಯ ಕಾರ್ಯದರ್ಶಿ ವಿ.ಗೋಪಾಲ್, ಸುರೇಶ್ ಬಾಬು, ಸಂಘಟನಾ ಕಾರ್ಯದರ್ಶಿ ರಾಜು, ಚಂದ್ರಶೇಖರ್, ಅನುಸೂಯಮ್ಮ ಜೆ.ಸಿ.ಶಂಕರಪ್ಪ, ಕೆ.ಮಲ್ಲಯ್ಯ ಇತರರಿದ್ದರು.